ಉಪ್ಪಿನಕಾಯಿ ಒದಗಿಸುವ ಹೊಸ ರುಚಿ
ಜಾಡಿಯಲ್ಲಿ ಉಪ್ಪಿನಕಾಯಿ ಹೋಳು ಖಾಲಿಯಾಗಿ ಅದರ ಮಸಾಲೆ ಮಾತ್ರ ಉಳಿದಿದ್ದರೆ, ಅದರಿಂದ `ಪಿಕಲ್ ಮಸಾಲಾ ಆಲೂ’ ತಯಾರಿಸಿ. ಆಲೂ ಪಲ್ಯಕ್ಕೆ ಬೇಕಾದ ತಯಾರಿ ನಡೆಸಿ, ಖಾರಕ್ಕೆ ಇದನ್ನು ಬಳಸಿ ನೋಡಿ. ಚಪಾತಿ ರೊಟ್ಟಿ ಎಲ್ಲಕ್ಕೂ ಈ ಪಲ್ಯ ಹೊಂದುತ್ತದೆ.
ಉಪ್ಪಿನಕಾಯಿಯ ಉಳಿದ ಮಸಾಲೆಗೆ ಒಂದಿಷ್ಟು ಹೆಚ್ಚಿದ ಹಸಿ ತರಕಾರಿ ಸೇರಿಸಿ (ಬಟಾಣಿ. ಕ್ಯಾರೆಟ್, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಇತ್ಯಾದಿ) 1 ವಾರದ ಬಳಿಕ ಬಳಸಲಾರಂಭಿಸಿ, ಮಿಕ್ಸ್ಡ್ ವೆಜಿಟೆಬಲ್ ಪಿಕಲ್ ಬಲು ರುಚಿಕರ ಎನಿಸುತ್ತದೆ.
ಉಪ್ಪಿನಕಾಯಿ ಮೇಲುಭಾಗದಲ್ಲಿ ತೇಲುವ ಎಣ್ಣೆಯನ್ನು ತುಂಬು ಬದನೆ, ಹಾಗಲ, ಸ್ಟಫ್ಟ್ಡ್ ಬೆಂಡಿ ಇತ್ಯಾದಿ ತಯಾರಿಸಲು ಬಳಸಿ, ರುಚಿ ಹೆಚ್ಚುತ್ತದೆ.
ಉಪ್ಪಿಟ್ಟು ತಯಾರಿಸುವಾಗ ಇದನ್ನು ಜೊತೆಗೆ ಬೆರೆಸಿ ನೋಡಿ, ರುಚಿ ವಿಭಿನ್ನವಾಗಿರುತ್ತದೆ.
ರೀಫ್ರೆಶಿಂಗ್ ಸೂಪ್ ಸಲಾಡ್
ಸೂಪನ್ನು ಗಾಢಗೊಳಿಸಲು ಕಾರ್ನ್‌ಫ್ಲೋರ್ ಜೊತೆ ಒಂದು ಬ್ರೆಡ್ ಸ್ಲೈಸ್ ಕೂಡ ಹಾಕಿಡಿ.
ನೀವು ರೆಡಿಮೇಡ್ ಸೂಪ್ ಪೌಡರ್ ಕೊಳ್ಳುವಿರಾದರೆ, ಲೋ ಸೋಡಿಯಂವುಳ್ಳ ಪ್ಯಾಕ್ ಮಾತ್ರ ಕೊಳ್ಳಿರಿ.
ಸೂಪ್‌ಗೆ ಅಪ್ಪಿತಪ್ಪಿಯೂ ಅಚ್ಚಖಾರ ಬೆರೆಸಬಾರದು, ಕಾಳು ಮೆಣಸನ್ನು ಪುಡಿ ಮಾಡಿ ಬೆರೆಸಿ.
ಸೂಪ್‌ಗೆ ಬೆಣ್ಣೆ ಬೆರೆಸುವುದಿದ್ದರೆ, ಅದು ಫ್ಲೇವರ್‌ಗೆ ಮಾತ್ರ ಬೇಕಾಗುವಷ್ಟಿರಲಿ.
ಯಾವಾಗ ಸಲಾಡ್ ತಯಾರಿಸಿದರೂ, ಬಡಿಸುವ 2 ನಿಮಿಷ ಮೊದಲು ಮಾತ್ರ ಅದಕ್ಕೆ ಉಪ್ಪು, ನಿಂಬೆ ಮತ್ತು ಮೆಣಸು ಬೆರೆಸಬೇಕು. ಆಗ ಮಾತ್ರ ಸಲಾಡ್ ಫ್ರೆಶ್ ಎನಿಸುತ್ತದೆ.
ಸಲಾಡ್ ಯಾವುದೇ ಇರಲಿ (ಟೋಮೇಟೊ, ಕ್ಯಾರೆಟ್, ಬೀಟ್‌ರೂಟ್, ಸಲಾಡ್ ಎಲೆ ಇತ್ಯಾದಿ) ಹೆಚ್ಚಿದ ನಂತರ ಅದನ್ನು ಉಪ್ಪು ನೀರಲ್ಲಿ ತೊಳೆಯಲು ಮರೆಯದಿರಿ.
ಮಿಕ್ಸ್ ಪ್ರಾಡಕ್ಟ್ಸ್ ನಿಂದ ಬೊಂಬಾಟ್ ಮಾಡಿ
ಮನೆಯಲ್ಲಿ ಯಾವಾಗ ಪನೀರ್ ತಯಾರಿಸಿದರೂ ಹಾಲನ್ನು ಒಡೆಯಲು ವೈಟ್ ವಿನಿಗರ್‌ನ್ನೇ ಬಳಸಿ. ಆಗ ಪನೀರ್ ಸಾಕಷ್ಟು ಮೃದುವಾಗುತ್ತದೆ.
ಪನೀರ್ ತಯಾರಿಸಿದ ನಂತರ ಅದರ ನೀರಿಗೆ ತುಸು ಗಟ್ಟಿ ಮೊಸರು ಬೆರೆಸಿ ರಾತ್ರಿ ಪೂರ್ತಿ ಹಾಗೇ ಬಿಡಿ. ಮಾರನೇ ಬೆಳಗ್ಗೆ ಇದರಿಂದ ಮಜ್ಜಿಗೆ ಹುಳಿ ತಯಾರಿಸಿ, ಬಹಳ ಸೊಗಸಾಗಿರುತ್ತದೆ.
ಕಸ್ಟರ್ಡ್ ತಯಾರಿಸುವಾಗ ಎಂದೂ ಕುದಿಸಿದ ಹಾಲನ್ನು ಬಳಸಬೇಡಿ. ಆಗ ಕಸ್ಟರ್ಡ್ ರುಚಿಹೀನ ಎನಿಸುತ್ತದೆ.
ಕೇಕ್ ತಯಾರಿಸುವಾಗ ಅದರ ಮಿಶ್ರಣಕ್ಕೆ ತುಸು ಗ್ಲಿಸರಿನ್ ಬೆರೆಸಿಬಿಡಿ. ಆಗ ಕೇಕ್ ಹೆಚ್ಚು ಸಾಫ್ಟ್ ಸ್ಪಾಂಜಿ ಆಗುತ್ತದೆ.
ಐಸ್‌ಕ್ರೀಂ, ಖೀರನ್ನು ಬೇಗ ಗಾಢ ಮತ್ತು ಸ್ವಾದಿಷ್ಟ ಮಾಡಲು ಅದಕ್ಕೆ ಹಾಲಿನ ಜೊತೆ ಹಾಲಿನಪುಡಿ, ಮಿಲ್ಕ್ ಮೇಡ್ ಬೆರೆಸಿ ನೋಡಿ, ರುಚಿ ಬೊಂಬಾಟ್!
ಖೀರು ಹಲ್ವಾ ತಯಾರಿಸುವಾಗ
ಖೀರು ತಯಾರಿಸುವಾಗ ಅದಕ್ಕೆ ಧಾರಾಳವಾಗಿ ತುಪ್ಪ ಬೆರೆಸಿಕೊಳ್ಳಿ. ಆಗ ಅದರ ಅಡಿ ಭಾಗ ಮೆತ್ತಿಕೊಳ್ಳುವುದಿಲ್ಲ.
ಬೆಳ್ಳಿ ರೇಕಿ (ಸಿಲ್ವರ್ ಫಾಯಿಲ್)ನಿಂದ ಅಲಂಕರಿಸ ಬಯಸಿದರೆ, ಅದು ಪೂರ್ತಿ ಆರುವವರೆಗೂ ಕಾಯಬೇಕು. ಅದೇ ತರಹ ಕೇದಗೆ ಅಥವಾ ಗುಲಾಬಿ ಜಲ ಬೆರೆಸುವಾಗಲೂ ಸಹ.
ಹಲ್ವಾ, ಕೇಸರಿಭಾತ್ ಇತ್ಯಾದಿ ಮತ್ತೆ ಬಿಸಿ ಮಾಡುವಾಗ, ಅದಕ್ಕೆ ತುಸು ಹಾಲನ್ನು ಸಿಂಪಡಿಸಿ ಬಾಡಿಸಿ ಅಥವಾ 1-2 ಚಮಚ ತುಪ್ಪ ಬೆರೆಸಿ ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿ.
ಮೂಂಗ್ ದಾಲ್ ಹಲ್ವಾ (ಹೆಸರುಬೇಳೆಯ ಹಲ್ವಾ) ತಯಾರಿಸುವ ಮುನ್ನ, ಬಾಣಲೆಗೆ 1-2 ಚಮಚ ತುಪ್ಪದ ಜೊತೆ ಕಡಲೆಹಿಟ್ಟು ಹಾಕಿ ಹುರಿಯಿರಿ. ಆಗ ಈ ಮಿಶ್ರಣ ಅದಕ್ಕೆ ಮೆತ್ತಿಕೊಳ್ಳುವುದಿಲ್ಲ.
ಸ್ಮಾರ್ಟ್ ಟಿಪ್ಸ್ ನಿಂದ ಕುಕ್
ಕೇಕನ್ನು ಹೆಚ್ಚು ಕಾಲ ಬಾಳಿಕೆ ಬರುವಂತೆ ಸ್ಟೋರ್ ಮಾಡಲು, ಅದನ್ನು ಸಕ್ಕರೆ ಕ್ಯೂಬ್ಸ್ ಜೊತೆ ಏರ್‌ಟೈಟ್ ಕಂಟೇನರ್‌ಗಳಲ್ಲಿ ಹಾಕಿಡಿ.
ಕುಕಿಂಗ್‌ನಲ್ಲಿ ಐಸಿಂಗ್ ಮಾಡುವಾಗ, ಎಷ್ಟೋ ಸಲ ಅದರ ಮೇಲ್ಪದರದ ಬಿರುಕು ಕಾಣಿಸುತ್ತದೆ. ಆದ್ದರಿಂದ ಐಸಿಂಗ್‌ಗಾಗಿ ಬಟರ್ ಶುಗರ್ ಬೆರೆಸಿ ಬೀಟ್ ಮಾಡುವಾಗ. ಅದಕ್ಕೆ ಅಗತ್ಯವಾಗಿ ತುಸು ಬೇಕಿಂಗ್ ಪೌಡರ್‌ಬೆರೆಸಿಕೊಳ್ಳಿ. ಆಗ ಮೇಲ್ಪದರದಲ್ಲಿ ಬಿರುಕು ಮೂಡುವುದಿಲ್ಲ.
ಚನಾ ಭಠೂರ ತಯಾರಿಸುವಾಗ, ಪೂರಿ ತರಹದ ಈ ಭಠೂರ ಮಿಶ್ರಣ ಚೆನ್ನಾಗಿ ಬರಲು, ಅದಕ್ಕೆ ತುಸು ಡ್ರೈ ಬ್ರೆಡ್ ಸ್ಲೈಸ್‌ನ ತರಿಯಾದ ಪುಡಿ ಸೇರಿಸಿ, ಹುದುಗು ಚೆನ್ನಾಗಿ ಬರುತ್ತದೆ.
ಮೆಂತ್ಯೆ ಸೊಪ್ಪಿನ ಪರೋಟ ತಯಾರಿಸುವಾಗ, ಈ ಹಿಟ್ಟಿನ ಮಿಶ್ರಣಕ್ಕೆ ಧಾರಾಳ ಹುಳಿ ಮೊಸರು ಬೆರೆಸಿ ಕಲಸಿದರೆ ಪರೋಟ ಸ್ವಾದಿಷ್ಟವಾಗುತ್ತದೆ.
– ವಿ. ಸರಿತಾ