ಈ ಹೊಸ ವರ್ಷದಲ್ಲಿ ಸಂಬಂಧಗಳನ್ನು ಉತ್ತಮಗೊಳಿಸಲು ನಿಮ್ಮ ಕೌಟುಂಬಿಕ ಮತ್ತು ಸಾಮಾಜಿಕ ಸಂಬಂಧಗಳಲ್ಲಿ ಮಾಧುರ್ಯ ತುಂಬಿ ಇನ್ನಷ್ಟು ಸುಖದಾಯಕವಾಗಿಸಿ.

ಕೌಟುಂಬಿಕ ಸಂಬಂಧಗಳು

ಎಲ್ಲಕ್ಕೂ ಮೊದಲು ವಂಶಪಾರಂಪರ್ಯವಾಗಿ ಸಿಕ್ಕಿರುವ ಕೌಟುಂಬಿಕ ಸಂಬಂಧಗಳು ಯಾವುದೇ ಬಂಡವಾಳಕ್ಕೆ ಕಡಿಮೆಯಲ್ಲ. ಆ ಸಂಬಂಧಗಳನ್ನು ಸದೃಢಗೊಳಿಸಲು 5 ವಿಧಾನಗಳನ್ನು ತಿಳಿಸುತ್ತಿದ್ದೇವೆ.

ಸೋಗನ್ನು ಬಿಡಿ : ಸೋಗು ಒಂದು ರೀತಿಯಲ್ಲಿ ಮಸಾಲೆಯುಕ್ತ ಶಬ್ದ. ಜನ ಇದನ್ನು ಚಪ್ಪರಿಸುತ್ತಾ ಉಪಯೋಗಿಸುತ್ತಾರೆ. ಉದಾಹರಣೆಗೆ ಸೊಸೆಯ ಅಣ್ಣ ಇಂಟರ್‌ ಕ್ಯಾಸ್ಟ್ ಮದುವೆ ಮಾಡಿಕೊಂಡಿದ್ದಕ್ಕೆ ಸೊಸೆಯ ತವರುಮನೆಯವರನ್ನು ಭೇಟಿಯಾಗುವುದು ಕಡಿಮೆಯಾಯಿತು. ಅತ್ತೆ ತನ್ನ ಮನೆಯ ಸಂಸ್ಕಾರಗಳ ಉದಾಹರಣೆ ಒಡ್ಡುತ್ತಾ ಸೊಸೆಯ ತವರುಮನೆಯವರನ್ನು ಆಡಿಕೊಳ್ಳುತ್ತಿರುತ್ತಾರೆ.

ಇದನ್ನು ಅಪಹಾಸ್ಯದ ವಸ್ತುವನ್ನಾಗಿ ಮಾಡುವ ಅಗತ್ಯವಿದೆಯೇ?

ಇಂಟರ್‌ ಕ್ಯಾಸ್ಟ್ ಮದುವೆ ಅಪರಾಧವೇನೂ ಅಲ್ಲ. ಸಮಾಜದವರಿಗೆ ಅದನ್ನು ಅರಗಿಸಿಕೊಳ್ಳಲಾಗುವುದಿಲ್ಲ ಎಂಬುದು ಬೇರೆಯೇ ವಿಚಾರ. ಆದರೆ ಸೊಸೆ ನಿಮ್ಮ ಮನೆಯವಳೇ. ಅವಳ ಸುಖದುಃಖಗಳಲ್ಲಿ ಭಾಗಿಯಾಗುವುದು ನಿಮ್ಮ ಕರ್ತವ್ಯ. ಇತರರೆದುರು ನಿಮ್ಮನ್ನು ದೊಡ್ಡವರೆಂದು ಬಿಂಬಿಸಿಕೊಳ್ಳುತ್ತೀರಿ ಮತ್ತು ಅವರನ್ನು ಕೆಳಗೆ ತಳ್ಳುತ್ತೀರಿ. ಅದರಿಂದ ನಿಮ್ಮ ಪ್ರತಿಷ್ಠೆಗೆ ಧಕ್ಕೆ ಬರುತ್ತದೆ. ನಿಮ್ಮದೇ ಕುಟುಂಬದ ಅಪಹಾಸ್ಯವಾಗುತ್ತದೆ. ಅದರಲ್ಲಿ ನೀವು ಭಾಗಿಯಾಗಿರುತ್ತೀರಿ.

ಆದ್ದರಿಂದ ಹೊಸ ವರ್ಷದಲ್ಲಿ ನಿಮ್ಮನ್ನು ನೀವು ಈ ಸ್ವಭಾವದಿಂದ ಮುಕ್ತಗೊಳಿಸಿ ಇತರರಿಗೂ ಸಲಹೆ ನೀಡಿ.

ನಿಮ್ಮ ಹೊಣೆಗಾರಿಕೆ ಅರಿಯಿರಿ : ಹೊಣೆಗಾರಿಕೆಯ ಅರ್ಥ ಬರೀ ಅಪ್ಪ ಅಮ್ಮನ ಸೇವೆ ಮಾಡುವುದಷ್ಟೇ ಅಲ್ಲ. ನಿಮ್ಮ ಮಕ್ಕಳ ಬಗ್ಗೆಯೂ ಕೆಲವು ಜವಾಬ್ದಾರಿಗಳಿವೆ. ಇಂದಿನ ಅಪ್ಪ ಅಮ್ಮ ಆಧುನಿಕತೆಯ ಹೊದಿಕೆಯಲ್ಲಿದ್ದಾರೆ. ಮಕ್ಕಳಿಗೆ ಜನ್ಮ ಕೊಡುವುದು ಮತ್ತು ಅವರಿಗೆ ಸುಖ ಸೌಲಭ್ಯಗಳನ್ನು ಕೊಡುವುದಷ್ಟೇ ತಮ್ಮ ಜವಾಬ್ದಾರಿ ಎಂದುಕೊಳ್ಳುತ್ತಾರೆ. ಅದಕ್ಕೂ ಹೆಚ್ಚಾಗಿ ಅವರು ತಮ್ಮ ಪರ್ಸನಲ್ ಲೈಫ್‌ಗೆ ಮಾತ್ರ ಮಹತ್ವ ಕೊಡುತ್ತಾರೆ. ಈ ಸ್ಥಿತಿಯಲ್ಲಿ ನೀವು ಆದರ್ಶ ತಾಯಿ ತಂದೆ ಅಲ್ಲ. ಆದರೆ ಈ ಹೊಸ ವರ್ಷದಲ್ಲಿ ನೀವು ಹೊಣೆಗಾರಿಕೆಗಳನ್ನು ಶಿಸ್ತಿನಿಂದ ನಿಭಾಯಿಸಿದರೆ ನಿಮಗೂ ಆದರ್ಶರಾಗುವ ಅವಕಾಶ ಸಿಗುತ್ತದೆ.

ಸುಳ್ಳಿನ ಆಸರೆ ಬೇಡ : ತಮ್ಮ ಹೊಣೆಗಾರಿಕೆಗಳಿಂದ ಜಾರಿಕೊಳ್ಳಲು, ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಅಥವಾ ತಮ್ಮ ತಪ್ಪು ಮುಚ್ಚಿಕೊಳ್ಳಲು ಜನ ಸುಳ್ಳಿನ ಆಶ್ರಯ ಪಡೆಯುತ್ತಾರೆ. ಒಟ್ಟು ಕುಟುಂಬದಲ್ಲಿ ಸುಳ್ಳಿನ ಹೆಚ್ಚು ಗೆರೆಗಳು ಕಂಡುಬರುತ್ತವೆ. ಏಕೆಂದರೆ ಪರಸ್ಪರರಲ್ಲಿ ತಮ್ಮನ್ನು ಉತ್ತಮರೆಂದು ಸಾಬೀತುಪಡಿಸುವ ಸ್ಪರ್ಧೆಯಲ್ಲಿ ಜನರಿಂದ ತಪ್ಪುಗಳಾಗುತ್ತವೆ. ಆದರೆ ಅವನ್ನು ನಕಾರಾತ್ಮಕ ದೃಷ್ಟಿಯಿಂದ ನೋಡುವ ಬದಲು ಸಕಾರಾತ್ಮಕ ರೂಪದಲ್ಲಿ ತೆಗೆದುಕೊಳ್ಳಬೇಕು. ಆಗ ನೀವು ಸುಳ್ಳು ಹೇಳುವ ಪ್ರಮೇಯವೇ ಬರುವುದಿಲ್ಲ. ಈ ವರ್ಷ ಸಕಾರಾತ್ಮಕ ಆಲೋಚನೆ ಇಟ್ಟುಕೊಂಡರೆ ಅದರಿಂದ ಕೌಟುಂಬಿಕ ಸಂಬಂಧಗಳು ಹಾಗೂ ನಿಮ್ಮ ವ್ಯಕ್ತಿತ್ವ ಸುಧಾರಿಸುತ್ತದೆ.

ಆರ್ಥಿಕ ಅಹಂಕಾರ ಬೇಡ : ಆಧುನಿಕತೆಯ ಈ ಕಾಲದಲ್ಲಿ ಜನ ಸಂಬಂಧಗಳನ್ನೂ ಹಣದಿಂದ ಅಳೆಯಲು ಶುರು ಮಾಡಿದ್ದಾರೆ. ಸಂಬಂಧಗಳಲ್ಲಿ ಆಗಾಗ್ಗೆ ಸಮಾರಂಭಗಳ ಹೆಸರಿನಲ್ಲಿ ಹಣ ಕೀಳುವ ಪದ್ಧತಿ ಇದೆ. ಮದುವೆ, ಮುಂಜಿಯಂತಹ ಸಮಾರಂಭಗಳನ್ನೇ ನೋಡಿ. ಶಾಸ್ತ್ರದ ಹೆಸರಿನಲ್ಲಿ ಕವರಿನಲ್ಲಿ ಕೊಡುವುದು ಪಡೆಯುವುದು, ಆ ಕವರ್‌ಗಳಲ್ಲಿ ಹಣ ಇಟ್ಟು ಸಂಬಂಧಿಕರಿಗೆ ಕೊಡಲಾಗುತ್ತದೆ. ಯಾರು ಎಷ್ಟು ಹಣ ಕೊಡುತ್ತಾರೋ ಅವರಿಗೂ ಅಷ್ಟೇ ಹಣ ವಾಪಸ್‌ಕೊಟ್ಟು ವ್ಯವಹಾರ ಮುಗಿಸಲಾಗುವುದು. ಆದರೆ ಇಂತಹ ಸಂಬಂಧಗಳಿಂದ ಯಾವುದೇ ಲಾಭವಿಲ್ಲ. ಏಕೆಂದರೆ ಅ ಹಣದ ಆಧಾರದ ಮೇಲೆ ನಿಲ್ಲುತ್ತವೆ. ಸಂಬಂಧಗಳಲ್ಲಿ ಆರ್ಥಿಕ ಅಹಂಕಾರ ಇಟ್ಟುಕೊಳ್ಳಬಾರದು. ಸಂಬಂಧಗಳ ಭಾವನೆಗಳನ್ನು ಸದೃಢಗೊಳಿಸುತ್ತೇವೆ ಎಂದು ಈ ವರ್ಷ ನಿರ್ಧರಿಸಿ.

ಅಭಿವ್ಯಕ್ತಿ ಸ್ವಾತಂತ್ರ್ಯ : ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನಮ್ಮ ದೇಶದ ಸಂವಿಧಾನದಲ್ಲೂ ಉಲ್ಲೇಖಿಸಲಾಗಿದೆ. ಆದರೆ ಕೌಟುಂಬಿಕ ಸಂವಿಧಾನದಲ್ಲಿ ಈ ಹಕ್ಕು ಕೆಲವೇ ಜನರಿಗೆ ಸಿಗುತ್ತದೆ. ಅದು ಬಹಳ ತಪ್ಪು. ತಮ್ಮ ಮಾತನ್ನು ಹೇಳುವ ಹಕ್ಕನ್ನು ಪ್ರತಿಯೊಬ್ಬರಿಗೂ ಕೊಡುವುದು ಅಗತ್ಯವಾಗಿದೆ. ಎಷ್ಟೋ ಬಾರಿ ನಾವು ಎದುರಿನವರ ಮಾತನ್ನು ಕೇಳುವುದಿಲ್ಲ. ಬದಲಾಗಿ ಅವರ ಮಾತನ್ನು ಹತ್ತಿಕ್ಕಲು ಪ್ರಯತ್ನಿಸುತ್ತೇವೆ. ತಮ್ಮ ಮುಗ್ಧತೆಯಿಂದಾಗಿ ಅವರೂ ಹತ್ತಿಕ್ಕಿಸಿಕೊಳ್ಳುತ್ತಾರೆ. ಆದರೆ ನಷ್ಟ ಯಾರಿಗೆ? ನಿಮಗೇ! ಹೇಗೆಂದರೆ ಒಂದು ವೇಳೆ ಅವರು ನಿಮಗೆ ಒಳ್ಳೆಯ ಸಲಹೆ ನೀಡುತ್ತಿರಬಹುದು. ನೀವು ಅದನ್ನು ಕೇಳಿಸಿಕೊಳ್ಳದೆ ನಿಮ್ಮದೇ ರಾಗ ಆಲಾಪಿಸುತ್ತಿರಬಹುದು. ಹೀಗಿರುವಾಗ ಒಳ್ಳೆಯದು ಹಾಗೂ ಕೆಟ್ಟದ್ದರ ಅಂತರವನ್ನು ನೀವು ಎಂದಿಗೂ ಅರ್ಥ ಮಾಡಿಕೊಳ್ಳುವುದಿಲ್ಲ. ಆದ್ದರಿಂದ ಈ ವರ್ಷ ಮನೆಯಲ್ಲಿ ಪುರುಷನಾಗಲಿ, ಮಹಿಳೆಯಾಗಲಿ, ಚಿಕ್ಕವರಾಗಲಿ, ದೊಡ್ಡವರಾಗಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಡುತ್ತೇವೆ ಎಂದು ನಿಶ್ಚಯಿಸಿ.

ಸಾಮಾಜಿಕ ಬಂಧನಗಳು

ಸಮತೋಲಿತ ಹಾಗೂ ಸುಖಮಯ ಬದುಕು ಸಾಗಿಸಲು ಕೌಟುಂಬಿಕ ಸಂಬಂಧಗಳ ಜೊತೆಗೆ ಸಾಮಾಜಿಕ ಸಂಬಂಧಗಳನ್ನೂ ಸದೃಢಗೊಳಿಸುವುದು ಅಗತ್ಯ. ಸಾಮಾಜಿಕ ಸಂಬಂಧಗಳನ್ನು ಉತ್ತಮಗೊಳಿಸುವ 5 ವಿಧಾನಗಳನ್ನು ನಿಮಗೆ ತಿಳಿಸುತ್ತಿದ್ದೇವೆ.

ಈಗೋ ಬಿಡಿ : ಈಗೋ ಎನ್ನುವುದು ಬಹಳ ಚಿಕ್ಕ ಪದವಾದರೂ ಬಹಳಷ್ಟು ಅಪಾಯಕಾರಿ ಪದ. ಎದುರಿಗಿರುವವರನ್ನು ಸ್ವಲ್ಪ ಅರ್ಥ ಮಾಡಿಕೊಳ್ಳಲು ಬಯಸದೆ ಅವರಿಗೆ ದುಃಖ ತರಿಸಲು ಇಚ್ಛಿಸಿದರೆ ಅಥವಾ ಅವರ ಆತ್ಮವಿಶ್ವಾಸ ಕಡಿಮೆಗೊಳಿಸಲು ಇಚ್ಛಿಸಿದರೆ ಆಗ ಅವರ ಈಗೋ ಪ್ರಕಟವಾಗುತ್ತದೆ. ಕಛೇರಿಗಳಲ್ಲಿ ಒಟ್ಟಿಗೆ ಕೆಲಸ ಮಾಡುವವರ ಮಧ್ಯೆಯೂ ಆಗಾಗ್ಗೆ ಈಗೋದ ಗೋಡೆ ಏಳುತ್ತಿರುತ್ತದೆ. ಆಗೆಲ್ಲಾ ಅವರು ತಮ್ಮ ವ್ಯಕಿತ್ವಕ್ಕೆ ಮಸಿ ಬಳಿದವರಿಗೆ ಸಾಕಷ್ಟು ಹಂತದವರೆಗೆ ತೊಂದರೆ ಕೊಡಲು ಪ್ರಯತ್ನಿಸುತ್ತಾರೆ. ಆದರೆ ಈಗೋ ಅವರನ್ನು ಯಾವುದೇ ಹಂತಕ್ಕಾದರೂ ಮೇಲೆತ್ತುವುದೇ? ಬಹುಶಃ ಇಲ್ಲ. ಅದು ಅವರಿಂದ ಯಾವಾಗಲೂ ತಪ್ಪು ಕೆಲಸಗಳನ್ನು ಮಾಡಿಸುತ್ತದೆ. ಅವರನ್ನು ಕೆಟ್ಟ ಮನುಷ್ಯರ ಸಾಲಿನಲ್ಲಿ ನಿಲ್ಲಿಸುತ್ತದೆ. ಲಾಭಕ್ಕಿಂತ ಹೆಚ್ಚಾಗಿ ನಷ್ಟ ತಂದುಕೊಡುವ ಈಗೋದಿಂದ ಏನು ಪ್ರಯೋಜನ? ಈ ವರ್ಷ ನಿಮ್ಮ ವ್ಯಕ್ತಿತ್ವದಿಂದ ಈಗೋ ತೆಗೆದುಹಾಕಿ. ಸಹಾಯ ಮಾಡಿ : ಮನುಷ್ಯ ಸಂಘಜೀವಿ. ಯಾವಾಗಲೂ ಗುಂಪಿನಲ್ಲಿರುತ್ತಾನೆ. ಆ ಗುಂಪಿನಲ್ಲಿ ಕೆಲವರು ಅವನಿಗೆ ಪರಿಚಿತರು, ಕೆಲವರು ಅಪರಿಚಿತರು. ಆದರೂ ಮನುಷ್ಯನನ್ನು ಇನ್ನೊಬ್ಬ ಮನುಷ್ಯನೊಂದಿಗೆ ಸೇರಿಸಲು ಸಹಾಯ ಉತ್ತಮ ಪ್ರಕ್ರಿಯೆಯಾಗಿರುತ್ತದೆ. ಒಬ್ಬರ ಕಷ್ಟದಲ್ಲಿ ಅವರಿಗೆ ಜೊತೆ ನೀಡುವುದು, ಅವರಿಗೆ ಸಹಾಯ ಮಾಡುವುದು ಮನುಷ್ಯನಾಗಿ ಅವರ ಕರ್ತವ್ಯವಾಗಿದೆ.

ಪುಣ್ಯವಲ್ಲ, ಕರ್ತವ್ಯವೆಂದು ತಿಳಿಯಿರಿ :  ಧರ್ಮಗ್ರಂಥಗಳಲ್ಲಿ ಪುಣ್ಯ ಸಂಪಾದಿಸಲು ದೊಡ್ಡ ದೊಡ್ಡ ವ್ಯಾಖ್ಯಾನಗಳಿವೆ. ಜನ ಒಬ್ಬರಿಗೆ  ಸಹಾಯ ಮಾಡಿದರೆ ಅದರ ಬದಲು ಪುಣ್ಯ ಸಂಪಾದಿಸುವ ಅವಕಾಶ ಸಿಗುತ್ತದೆ ಎಂಬ ಆಸೆಯಲ್ಲಿ ಮಾಡುತ್ತಾರೆ. ಒಂದುವೇಳೆ ಅವರಿಗೆ ಪುಣ್ಯ ಸಂಪಾದಿಸುವ ಮಾರ್ಗ ಕಂಡುಬಂದಿದ್ದರೆ ಒಂದು ಹುಲ್ಲುಕಡ್ಡಿಯನ್ನು ಕೊಡುವುದಿಲ್ಲ. ಹಸಿದವರಿಗೆ ಊಟ ಹಾಕಿಸಿದರೆ ಪುಣ್ಯವೆಂದು ಹೇಳುತ್ತಾರೆ. ಆ ಪುಣ್ಯ ಸಂಪಾದಿಸಲು ಲಕ್ಷಾಂತರ ರೂ. ಉಡಾಯಿಸಿ ಜನ ಭಂಡಾರಗಳನ್ನು ಆಯೋಜಿಸುತ್ತಾರೆ. ಆದರೆ ಇನ್ನೊಂದು ಕಡೆ ಇದೇ ಜನರು ದಾರಿಯಲ್ಲಿ ಸಿಕ್ಕ ಹಸಿದ ಬಡ ಮಕ್ಕಳಿಗೆ 2 ಚಪಾತಿ ಕೊಡಲು ತಿರಸ್ಕರಿಸುತ್ತಾರೆ. ಆದರೆ ಹಸಿದವರಿಗೆ ತಿನ್ನಿಸುವುದು ಪುಣ್ಯವಲ್ಲ. ನಿಮ್ಮ ಕರ್ತವ್ಯ. ಹೀಗೆ ಧರ್ಮದ ಹೆಸರಿನಲ್ಲಿ ಅಥವಾ ಅದನ್ನು ಆಧರಿಸಿ ಯಾವುದಾದರೂ ವಿಶೇಷ ದಿನಕ್ಕಾಗಿ ಕಾದು ಏನಾದರೂ ಸಹಾಯ ಮಾಡುವ ಬದಲು ಅಗತ್ಯವಿದ್ದವರನ್ನು ಕಂಡಕೂಡಲೇ ಅವರಿಗೆ ಸಹಾಯ ಮಾಡಿ. ಅದನ್ನು ನಿಮ್ಮ ಕರ್ತವ್ಯವೆಂದು ಮಾಡಿ. ಈ ವರ್ಷ ಇಂಥ ಕೆಲಸವನ್ನು ಪುಣ್ಯವೆಂದು ತಿಳಿಯದೆ ಕರ್ತವ್ಯವೆಂದು ತಿಳಿಯಿರಿ.

ಮುಕ್ತವಾಗಿ ಯೋಚಿಸಿ : ಈ ವರ್ಷ ನಿಮ್ಮ ಆಲೋಚನೆಯನ್ನು ವಿಸ್ತರಿಸಿಕೊಳ್ಳಿ. ಹಾಗೆ ಮಾಡುವುದರಿಂದ ನಿಮಗಿಂತ ಹೆಚ್ಚು ಸಂತುಷ್ಟರು ಹಾಗೂ ಚಿಂತಾಮುಕ್ತರು ಇನ್ನೊಬ್ಬರಿಲ್ಲ ಎನಿಸುವುದು. ಅಂತಹ ಬಹಳಷ್ಟು ಜನ ನಿಮ್ಮ ಅಕ್ಕಪಕ್ಕದಲ್ಲಿ ಸಿಗುತ್ತಾರೆ. ಅವರು ಬೇರೆಯವರ ಬಗ್ಗೆ ಯೋಚಿಸುವುದರಲ್ಲಿಯೇ ಸಮಯ ಕಳೆಯುತ್ತಾರೆ. ಅವರಿಗೆ ಪ್ರತಿಕ್ಷಣ ಯಾರಾದರೂ ತಮ್ಮ ಬಗ್ಗೆ ತಪ್ಪು ಮಾಡುತ್ತಿದ್ದಾರೆ ಅಥವಾ ತಪ್ಪು ಹೇಳುತ್ತಿದ್ದಾರೆ ಅನ್ನಿಸುತ್ತದೆ. ಆದರೆ ಕೊಂಚ ಯೋಚಿಸಿ. ಧಾವಂತದ ಈ ಜೀವನದಲ್ಲಿ  ಯಾರಿಗಾದರೂ ಇನ್ನೊಬ್ಬರ ಬಗ್ಗೆ ಯೋಚಿಸಲು ಸಮಯವಿದೆಯೇ? ಇಲ್ಲ. ಆದ್ದರಿಂದ ನೀವು ಸಹ ನಿಮ್ಮ ಬಗ್ಗೆ ಯೋಚಿಸಿ ಮತ್ತು ಯಾರಿಗೂ ತೊಂದರೆ ಕೊಡದೆ ನಿಮಗೆ ಲಾಭ ತರುವ ಕೆಲಸ ಮಾಡಿ.

ಗೌರವಿಸಿ ಮತ್ತು ಗೌರವ ಪಡೆಯಿರಿ : ಯಾರಾದರೂ ದೊಡ್ಡ ಮಟ್ಟಕ್ಕೆ ತಲುಪಿದ ನಂತರ ಅವರು ಯಾವಾಗಲೂ ತಮಗಿಂತ ಕೆಳ ಹಂತದಲ್ಲಿರುವವರನ್ನು ತಿರಸ್ಕಾರದ ದೃಷ್ಟಿಯಿಂದ ನೋಡುತ್ತಾರೆ. ಆಫೀಸುಗಳಲ್ಲಿ ತಮ್ಮನ್ನು ಸೀನಿಯರ್‌ ಎಂದು ತೋರಿಸಿಕೊಳ್ಳುವ ಹಟದಲ್ಲಿ ತಮಗಿಂತ ಕೆಳ ಹಂತದ ಉದ್ಯೋಗಿಗಳಿಗೆ ಶೋಷಣೆ ಮತ್ತು ಅವಮಾನ ಮಾಡಲು ಆರಂಭಿಸುತ್ತಾರೆ. ಆದರೆ ನೀವು ಈ ಗಾದೆಯನ್ನು ಕೇಳಿರಬಹುದು. ಕೊಚ್ಚೆಯ ಮೇಲೆ ಕಲ್ಲನ್ನು ಎಸೆದರೆ ನಿಮ್ಮ ಮೇಲೂ ಕೊಚ್ಚೆ ಎಗರುತ್ತದೆ. ಹಾಗೆಯೇ ಅವಮಾನ ಮಾಡುವವರಿಗೂ ಅವಮಾನವೇ ಸಿಗುತ್ತದೆ. ಆದ್ದರಿಂದ ನೀವು ಈ ಹೊಸ ವರ್ಷದಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಎಲ್ಲರನ್ನೂ ಗೌರವದಿಂದ ಕಾಣುವುದಾಗಿ ನಿಶ್ಚಯಿಸಿಕೊಳ್ಳಿ.

ಜಿ. ಅನುರಾಧಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ