ಮನುಷ್ಯನ ಜೀವನದಲ್ಲಿ ಹುಟ್ಟಿನಿಂದ ಹಿಡಿದು ಸಾವಿನವರೆಗೂ 16 ಸಂಸ್ಕಾರಗಳ ಬಗ್ಗೆ ಹೇಳಲಾಗುತ್ತದೆ. ಸಂಪ್ರದಾಯ ವಾದಿಗಳು ಶಾಸ್ತ್ರ ಸಮ್ಮತವಾಗಿ, ವಿಧಿವತ್ತಾಗಿ ಮದುವೆಯಾದರೆ ಮಾತ್ರ ದಾಂಪತ್ಯ ಯಾವುದೇ ಅಡ್ಡಿಯಿಲ್ಲದೆ ಮುನ್ನಡೆಯುತ್ತದೆ. ಇಲ್ಲದಿದ್ದರೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ. ಅವರ ಪ್ರಕಾರ ಮದುವೆ ಮೋಕ್ಷ ಪ್ರಾಪ್ತಿಯ ಸಾಧನವಾಗಿದೆ. ದಾಂಪತ್ಯದ ಅಡಿಪಾಯವನ್ನು ಧಾರ್ಮಿಕ ಮೂಢನಂಬಿಕೆಗಳ ಆಧಾರದ ಮೇಲೆ ಇಡಬೇಕು. ಏಕೆಂದರೆ ಯಾವುದೇ ಅನಿಷ್ಟದ ಭಯದಿಂದ ರಕ್ಷಿಸಿಕೊಳ್ಳುವಂತಿರಬೇಕು. ಮೂಢನಂಬಿಕೆ ಅಂದರೆ ಆಲೋಚಿಸದೆ ನಂಬಿದ್ದು ಅಥವಾ ಅಸಂಬದ್ಧ ವಿಷಯಗಳನ್ನು ಪಾರಂಪರಿಕ ಪದ್ಧತಿಗಳ ಹೆಸರಿನಲ್ಲಿ ಒಪ್ಪಿ ಸ್ವೀಕರಿಸಿದ್ದಾಗಿದೆ. ಅಜ್ಞಾನ, ಅವಿವೇಕ, ಮೂಢನಂಬಿಕೆಯಿಂದ ತುಂಬಿದ ನಂಬಿಕೆಗಳು ಅಲೌಕಿಕ ಶಕ್ತಿಗಳು ಕೋಪಗೊಳ್ಳುತ್ತವೆ ಎಂಬ ಭಯದಿಂದ ಸ್ವೀಕರಿಸಲ್ಪಟ್ಟಿವೆ. ಶತಮಾನಗಳಿಂದ ಜನರಿಂದ ಪೋಷಿಸಲ್ಪಟ್ಟ ಮೂಢನಂಬಿಕೆಗಳು ಮದುವೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.
ಎಲ್ಲಕ್ಕೂ ಮೊದಲು ಜ್ಯೋತಿಷಿಗಳು ವಧೂವರರ ಜಾತಕ ನೋಡುತ್ತಾರೆ ಹಾಗೂ ಅಷ್ಟಕೂಟ ಮಿಲನದ ಬಗ್ಗೆ, ಕುಜ ದೋಷ ಇತ್ಯಾದಿ ಯೋಗಗಳನ್ನು ವಿಶ್ಲೇಷಿಸಿ ಆ ವ್ಯಕ್ತಿಗೆ ಮದುವೆ ಮಾಡುವುದು ಒಳ್ಳೆಯದೇ ಅಲ್ಲವೇ ಎಂಬುದರ ಬಗ್ಗೆ ಹೇಳುತ್ತಾರೆ. ಅಷ್ಟಕೂಟಗಳಲ್ಲಿ ನಕ್ಷತ್ರ, ಶೀಕೂಟ, ಗಣ ಕೂಟ, ನಾಡಿ ಕೂಟ, ವರ್ಣ ಕೂಟ, ಯೋನಿ ಕೂಟ, ಗೃಹ ಕೂಟ ಇತ್ಯಾದಿ ಹೊಂದುತ್ತಿವೆಯೇ ಎಂದು ನೋಡಲಾಗುತ್ತದೆ. ಹೀಗೆಯೇ ಕುಜ ದೋಷದ ಬಗ್ಗೆಯೂ ಗಂಭೀರವಾಗಿ ವಿಚಾರ ಮಾಡಲಾಗುತ್ತದೆ.
ಮದುವೆಯಲ್ಲಿ ಕುಜನ ಮೂಲಕ ಅಮಂಗಳ
ಹಿಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಜ ಪ್ರಥಮ, ಚತುರ್ಥ, ಸಪ್ತಮಿ, ಅಷ್ಟಮಿ ಮತ್ತು ದ್ವಾದಶಿಗಳಲ್ಲಿರುವವರಿಗೆ ಕುಜ ದೋಷವೆಂದು ಹೇಳಲಾಗುತ್ತದೆ. ಯಾರಿಗಾದರೂ ಜಾತಕದಲ್ಲಿ ಈ ಯೋಗವಿದ್ದರೆ ಅವರನ್ನು ಮಂಗಲಿ ಅಥವಾ ಕುಜದೋಷಿಗಳು ಎನ್ನಲಾಗುತ್ತದೆ. ವಧೂವರರಲ್ಲಿ ಯಾರಾದರೂ ಒಬ್ಬರ ಜಾತಕದಲ್ಲಿ ಕುಜದೋಷವಿದ್ದು, ಇನ್ನೊಬ್ಬರ ಜಾತಕದಲ್ಲಿ ಕುಜದೋಷ ಇಲ್ಲದಿದ್ದರೆ ಅಂತಹ ಪರಿಸ್ಥಿತಿಯಲ್ಲಿ ವೈವಾಹಿಕ ಜೀವನಕ್ಕೆ ಅನಿಷ್ಟ ಎಂದು ಹೇಳಲಾಗುತ್ತದೆ. ಜ್ಯೋತಿಷಿ ಅವರಿಬ್ಬರ ವಿವಾಹ ನಡೆಯಕೂಡದು ಎನ್ನುತ್ತಾರೆ.
ಶುಭಾಶುಭದ ನಿಟ್ಟಿನಲ್ಲಿ
ಅನೇಕ ಬಾರಿ ಶುಭ ದಿನದ ಹೆಸರಿನಲ್ಲಿ ವ್ಯಕ್ತಿ ತಾನು ಬಹಳ ವ್ಯಸ್ತನಾಗಿರುವ ದಿನಗಳ ನಡುವೆಯೇ ಮದುವೆ ಮಾಡಿಕೊಳ್ಳ ಬೇಕಾಗುತ್ತದೆ. ಶುಭ ಮುಹೂರ್ತವನ್ನು ಕೈಯಾರೆ ಕಳೆದುಕೊಳ್ಳುವುದು ಅನಿಷ್ಠಕಾರಿ ಎನ್ನಲಾಗುತ್ತದೆ. ಇಡೀ ರಾತ್ರಿ ವೈಭವದೊಂದಿಗೆ ಮದುವೆ ಶಾಸ್ತ್ರಗಳು ನಡೆಯುತ್ತಿರುತ್ತವೆ. ವಧೂವರರಿಗೆ ಏನಾದರೂ ಕಾಯಿಲೆ ಇದ್ದರೆ ಅಥವಾ ಏನಾದರೂ ಸಮಸ್ಯೆ ಇದ್ದರೆ ಆಗಲೂ ಈ ಶಾಸ್ತ್ರಗಳು ಹಾಗೂ ಶ್ಲೋಕಗಳನ್ನು ಸಂಪೂರ್ಣ ಶ್ರದ್ಧೆಯೊಂದಿಗೆ ಕೂತು ಮುಗಿಸಲಾಗುತ್ತದೆ.
ಪುರೋಹಿತರ ಉದ್ದೇಶವೇನೆಂದರೆ ಅವರಿಗೆ ಕುಳಿತಲ್ಲಿಯೇ ಹಣ ಬರುವ ವ್ಯವಸ್ಥೆಯಾಗಬೇಕು. ಮದುವೆಯನ್ನಂತೂ ಪ್ರತಿಯೊಬ್ಬರೂ ಮಾಡಿಕೊಳ್ಳುತ್ತಾರೆ. ಹೀಗಾಗಿ ಪುರೋಹಿತರಿಗೆ ಕ್ಲೈಂಟ್‌ಗಳ ಸಂಖ್ಯೆ ಎಂದೂ ಕಡಿಮೆಯಾಗುವುದಿಲ್ಲ. ದಾಂಪತ್ಯದ ಅಡಿಪಾಯವನ್ನು ಧಾರ್ಮಿಕ ಮೂಢನಂಬಿಕೆಗಳ ಮೇಲೆ ಇಡಲಾಗುತ್ತದೆ ಹಾಗೂ ದಂಪತಿಗಳು ಜೀವನಪರ್ಯಂತ ಈ ಗೊಡ್ಡು ಸಂಪ್ರದಾಯಗಳನ್ನು ಮತ್ತು ಧಾರ್ಮಿಕ ಕಂದಾಚಾರಗಳನ್ನು ಹೊತ್ತುಕೊಂಡು ಜೀವಿಸಬೇಕಾಗುತ್ತದೆ.
ವಿಚಿತ್ರವೆದರೆ ನಾವು 21ನೇ ಶತಮಾನದಲ್ಲಿ ಜೀವಿಸುತ್ತಿದ್ದರೂ ನಮ್ಮ ಆಲೋಚನೆ ಪುರಾತನದ್ದೇ ಆಗಿದೆ. ನಾವು ಜಾತಕಗಳನ್ನು ಹೊಂದಿಸುತ್ತೇವೆ. ಆದರೆ ಹುಡುಗ ಹುಡುಗಿಯರ ಗುಣಗಳು, ಶಿಕ್ಷಣ, ಯೋಗ್ಯತೆ, ಇಷ್ಟಾನಿಷ್ಟಗಳು, ಜೀವನದ ಉದ್ದೇಶಗಳು ಇತ್ಯಾದಿಗಳನ್ನು ಹೊಂದಿಸುವುದಿಲ್ಲ.