ಗಂಡ ಹೆಂಡತಿಯ ನಡುವೆ ಜಗಳ ಅವರ ದೈನಂದಿನ ಜೀವನದ ಒಂದು ಭಾಗವೇ ಆಗಿದೆ. ಅವರು ಯಾವುದನ್ನೂ ಯೋಚಿಸದೇ ಜಗಳವಾಡುತ್ತಾರೆ. ಅಂಥ ಸ್ಥಿತಿಯಲ್ಲಿ ಪ್ರೀತಿಯ ಒಂದು ಅಪ್ಪುಗೆ ಬಹುದೊಡ್ಡ ಚಮತ್ಕಾರವನ್ನೇ ಮಾಡುತ್ತದೆ. ಅದು ಚಿಕ್ಕಪುಟ್ಟ ಜಗಳಗಳು ದೊಡ್ಡ ರೂಪ ಪಡೆಯುವ ವೇಗಕ್ಕೆ ಬ್ರೇಕ್ ಹಾಕುತ್ತದೆ.
ಮನೋತಜ್ಞರು ಹೇಳುವುದೇನೆಂದರೆ, ನಾವು ಯಾರನ್ನಾದರೂ ಅಪ್ಪಿಕೊಂಡಾಗ ನಮ್ಮ ದೇಹದಿಂದ ಕೋಪ ಹೆಚ್ಚಿಸುವ ಹಾರ್ಮೋನುಗಳು ಸರಕ್ಕನೇ ಇಳಿಯಲಾರಂಭಿಸುತ್ತವೆ. ಎದುರಿಗಿನ ವ್ಯಕ್ತಿ ಕೋಪವನ್ನು ಮರೆತು ನಿಮ್ಮ ಪ್ರೀತಿಯ ಅನುಭೂತಿ ಮಾಡಿಕೊಳ್ಳುತ್ತಾರೆ. ಅಂದರೆ ನಿಮ್ಮ ಪ್ರೀತಿಯ ಅಪ್ಪುಗೆ ಕ್ಷಣಾರ್ಧದಲ್ಲಿಯೇ ಕೋಪವನ್ನು ದೂರಗೊಳಿಸುತ್ತದೆ ಹಾಗೂ ನಿಮ್ಮನ್ನು ಕ್ಷಮಿಸುತ್ತದೆ.
ಮೌನವಾಗಿಯೇ ಎಲ್ಲವನ್ನೂ ಹೇಳುತ್ತದೆ
ಗಂಡ ಹೆಂಡತಿಯ ನಡುವೆ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಪರಿಣಾಮಕಾರಿ ಉಪಾಯವೆಂದರೆ ಪ್ರೀತಿಯ ಅಪ್ಪುಗೆ. ಆ ಸ್ಥಿತಿಯಲ್ಲಿ ನೀವು ಯಾವೊಂದೂ ಶಬ್ದವನ್ನೂ ಉಚ್ಚರಿಸದೇ ನಿಮ್ಮ ಭಾವನೆಗಳನ್ನು ಪ್ರಕಟಪಡಿಸಬಹುದು. ಹೆಂಡತಿ ಒಳ್ಳೆಯ ಅಡುಗೆ ಮಾಡಿದ್ದರೆ ಅದನ್ನು ಪ್ರಶಂಸಿಸುವ ಉದ್ದೇಶದಿಂದ ಒಂದು ಅಪ್ಪುಗೆ ಹಾಗೂ ಗಂಡ ಯಾವುದಾದರೊಂದು ಒಳ್ಳೆಯ ಯೋಜನೆಯಲ್ಲಿ ಹಣ ತೊಡಗಿಸಿದ್ದರೆ ಆಗ ಹೆಂಡತಿ ಒಂದು ಅಪ್ಪುಗೆಯ ಪ್ರೀತಿ ತೋರಿಸಿದರೆ ಅದರ ಫಲಶ್ರುತಿಯೇ ಬೇರೆ ಆಗುತ್ತದೆ. ಗಂಡ ಹೆಂಡತಿಯ ನಡುವೆ ಹೆಲ್ದೀ ಮತ್ತು ಹ್ಯಾಪಿ ಮಾರೀಡ್ ಲೈಫ್‌ನ ಅತ್ಯಂತ ಪರಿಣಾಮಕಾರಿ ಉಪಾಯವೆಂದರೆ ಪ್ರೀತಿಯ ಅಪ್ಪುಗೆ. ಅದನ್ನು ಯಾವಾಗ, ಎಲ್ಲೆಂದರಲ್ಲಿ ಬೇಕಾದರೂ ಅನುಸರಿಸಬಹುದು.
ಗಂಡ ಹೆಂಡತಿ ಪರಸ್ಪರರ ಬಗ್ಗೆ ತೋರಿಸುವ ಪ್ರೀತಿಯ ಪ್ರತೀಕವೆಂದರೆ ಅದು ಪ್ರೀತಿಯ ಅಪ್ಪುಗೆ. ಇದರರ್ಥ ನೀನು ನನಗೆ ಎಲ್ಲಕ್ಕೂ ಪ್ರೀತಿಪಾತ್ರ ಎಂದು. ಪ್ರೀತಿಯ ಅಪ್ಪುಗೆ ಕೊಡುವ ಸಮಯದಲ್ಲಿ ನಾನು ಎಲ್ಲಿದ್ದೇನೆ, ಯಾರ ಎದುರು ಇದ್ದೇನೆ ಎಂದು ಯಾವುದೇ ಕಾರಣಕ್ಕೂ ಯೋಚಿಸಲು ಹೋಗಬೇಡಿ. ಸ್ನೇಹಿತರ ಎದುರು ನೀವು ನಿಮ್ಮ ಪ್ರೀತಿಯನ್ನು ಪ್ರದರ್ಶಿಸಲು ಪರಸ್ಪರರನ್ನು ತಬ್ಬಿಕೊಳ್ಳುತ್ತೀರೆಂದರೆ ಸ್ನೇಹಿತರ ಎದುರು ನಿಮ್ಮ ಗೌರವ ಹೆಚ್ಚುತ್ತದೆ. ನಿಮ್ಮಿಬ್ಬರ ನಡುವಿನ ನಿಕಟತೆ ಮತ್ತು ಪ್ರೀತಿ ಇನ್ನಷ್ಟು ಜಗಜ್ಜಾಹೀರಾಗುತ್ತದೆ.
ಸುಖ ದುಃಖದ ಸಂಗಾತಿ
ಕೇವಲ ಖುಷಿಯ ಸಂದರ್ಭದಲ್ಲಷ್ಟೇ ಪ್ರೀತಿಯ ಅಪ್ಪುಗೆ ಹಾಗೂ ನಿಕಟತೆ ಪ್ರಕಟಪಡಿಸುತ್ತಾರೆ ಎಂದುಕೊಳ್ಳಬೇಡಿ. ಅವರು ಕಷ್ಟದ ಸಂದರ್ಭ, ದುಃಖದ ಗಳಿಗೆಯಲ್ಲೂ ಕೂಡ ಪರಸ್ಪರರನ್ನು ತಬ್ಬಿಕೊಂಡು ಸಾಂತ್ವನ ಹೇಳುತ್ತಾರೆ.
ಆಸ್ಟ್ರೇಲಿಯಾದ ವಿಜ್ಞಾನಿಗಳು ಒಂದು ಸಂಶೋಧನೆಯಿಂದ ಕಂಡುಕೊಂಡ ಸಂಗತಿಯೆಂದರೆ, ನಾವು ದುಃಖ ಅಥವಾ ಕಷ್ಟದ ಸಂದರ್ಭದಲ್ಲಿ ಅಪ್ಪಿಕೊಂಡಾಗ ಅವರಲ್ಲಿ ನಿರಾಳತೆಯ ಭಾವನೆ ಮೂಡಿರುವುದು ಸ್ಪಷ್ಟವಾಗುತ್ತದೆ. ತಾಯಿ ಹಾಗೂ ಮಗುವೊಂದರ ಉದಾಹರಣೆಯನ್ನು ಸ್ಪಷ್ಟಪಡಿಸುತ್ತಾ ಮಗುವಿಗೆ ಏಟು ತಗುಲಿದ ಸಂದರ್ಭದಲ್ಲಿ ತಾಯಿ ಅದನ್ನು ಬಾಚಿ ತಬ್ಬಿಕೊಂಡರೆ, ಅದರ ನೋವು ಹಾಗೂ ದುಃಖ ಸಾಕಷ್ಟು ಮಟ್ಟಿಗೆ ಕಡಿಮೆಯಾಗುತ್ತದೆ. ವಿಜ್ಞಾನಿಗಳ ಪ್ರಕಾರ, ನಾವು ಸಂಗಾತಿಯನ್ನು ತಬ್ಬಿಕೊಂಡಾಗ ರಕ್ತದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನು ಸ್ರಾವವಾಗುತ್ತದೆ. ಅದರಿಂದಾಗಿ ಅತಿರಕ್ತದೊತ್ತಡ ಕಡಿಮೆಯಾಗುತ್ತದೆ. ಸ್ಮರಣಶಕ್ತಿ ಅತ್ಯುತ್ತಮಗೊಳ್ಳುತ್ತದೆ.
ತಕರಾರುಗಳನ್ನು ನಿವಾರಿಸುತ್ತದೆ
ಆಫೀಸಿನಿಂದ ಮನೆಗೆ ತಲುಪಲು ತಡವಾಯಿತು. ಹೆಂಡತಿ ಮಾರುಕಟ್ಟೆಯಿಂದ ಕೆಲವು ಅಗತ್ಯ ಸಾಮಾನುಗಳನ್ನು ತರಲು ಹೇಳಿದ್ದಳು. ಆದರೆ ನೀವು ಅದನ್ನು ತರಲು ಮರೆತುಬಿಟ್ಟಿರಿ. ಆಗ ಹೆಂಡತಿ ಮುನಿಸಿಕೊಳ್ಳುವುದು ಸಹಜವೇ. ಇಂತಹ ಸಂದರ್ಭದಲ್ಲಿ ಪತ್ನಿಯನ್ನು ಒಲಿಸಿಕೊಳ್ಳುವ ಏಕೈಕ ಉಪಾಯವೆಂದರೆ, ಪ್ರೀತಿಯ ಒಂದು ಅಪ್ಪುಗೆ. ಆ ಬಳಿಕ ಅವಳ ಕೋಪ ಎಷ್ಟು ಬೇಗ ನಿವಾರಣೆಯಾಗುತ್ತದೆಂದು ನೋಡಿ. ಹೆಂಡತಿಯ ಕೋಪವನ್ನು ತಣ್ಣಗಾಗಿಸುವ ಸೂಕ್ತ ಉಪಾಯವೆಂದರೆ ಆಕೆಯನ್ನು ತಬ್ಬಿಕೊಂಡು ಕ್ಷಮೆ ಯಾಚಿಸಬೇಕು. ನಿಮ್ಮ ಈ ಅಪ್ಪುಗೆ ಆಕೆಯ ಕೋಪವನ್ನು ಮಂಜಿನ ರೀತಿಯಲ್ಲಿ ಕರಗಿಸಿಬಿಡುತ್ತದೆ. ಏಕೆಂದರೆ ಅದರಲ್ಲಿ ನಿಮ್ಮ ಪ್ರೀತಿಯ ಬಿಸುಪು ಬರುತ್ತದೆ.