ಬನ್ನಿ, ವಿವರವಾಗಿ ತಿಳಿಯೋಣ.ರಿತೀಶ್‌ ಸುಮಾರು 30 ವರ್ಷದ ಯುವಕ. ಮದುವೆಯಾಗಿ 2 ವರ್ಷವಾಗಿದೆ. ಮನಮೆಚ್ಚಿದ ಮಡದಿ, ಮುದ್ದಾದ ಗಂಡುಮಗು, ಸುಂದರ ಸಂಸಾರ. ಯಾವುದಕ್ಕೂ ಕೊರತೆಯಿರದ ಚಂದದ ಬದುಕು. ಆದರೆ ಇತ್ತೀಚೆಗೆ ಈ ಚಂದದ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಮನೆಯಲ್ಲಿ ಮೊದಲಿದ್ದ ಶಾಂತಿ, ನೆಮ್ಮದಿ, ನಗು, ಉಲ್ಲಾಸ ಎಲ್ಲವೂ ಮಾಯವಾಗಿತ್ತು. ಆ ಜಾಗದಲ್ಲೀಗ ಅನುಮಾನ, ಅಸೂಯೆ, ದ್ವೇಷ, ಗಲಾಟೆ ಒಟ್ಟಾರೆ ಅತೃಪ್ತ ಭಾವನೆಗಳು ಬಂದು ಕೂತಿವೆ.

ಯಾಕೆ ಹೀಗಾಯಿತು?

ರಿತೀಶ್‌ ಕುಟುಂಬದಲ್ಲಿ  ಬೀಸಿದ ಬಿರುಗಾಳಿಯಾದರೂ ಎಂತಹದ್ದು? ಉತ್ತರ ತುಂಬ ಸರಳ. ಮನೆಯ ಯಜಮಾನ ರಿತೀಶ್‌`ಭ್ರಮಾಧೀನ ಕಾಯಿಲೆ’ಯಿಂದ ನರಳುತ್ತಿದ್ದ. ಅನುಮಾನದ ಕಾಯಿಲೆಯಾದ ಇದು ಮನುಷ್ಯನನ್ನು ಸಹಜ ಸ್ಥಿತಿಯಿಂದ ಅಸಹಜ ಸ್ಥಿತಿಯತ್ತ ತಳ್ಳಿ ಮಾನಸಿಕ ಅಸಮತೋಲನಕ್ಕೆ ಕಾರಣವಾಗುತ್ತದೆ. ವೈಜ್ಞಾನಿಕವಾಗಿ `ಅನುಮಾನ’ ಒಂದು ಮಾನಸಿಕ ಕಾಯಿಲೆ ಎಂಬುದು ಈಗಾಗಲೇ ಸಾಬೀತಾಗಿದೆ. ಮಾನಸಿಕ ತಜ್ಞರ ಪ್ರಕಾರ ಅನುಮಾನ ಎನ್ನುವ ಪೆಡಂಭೂತ ಗಂಡಹೆಂಡಿರ ನಡುವೆ ಮೌನವಾಗಿ ನರಳಲು ಕಾರಣವಾಗಿ ಮನಸ್ಸನ್ನು ಅಲ್ಲೋಲಕಲ್ಲೋಲ ಮಾಡಿಬಿಡುತ್ತದೆ. ಇದನ್ನೇ ಭ್ರಮಾಧೀನ ಕಾಯಿಲೆ ಎಂದು ಕರೆಯುತ್ತಾರೆ.

ಡೆಲ್ಯೂಷನ್‌ ಅಥವಾ ಭ್ರಮೆ, ವ್ಯಕ್ತಿಯಲ್ಲಿ ಉಂಟಾಗಿದ್ದು, ಅದಕ್ಕನುಸಾರವಾಗಿ ವರ್ತಿಸತೊಡಗಿದಾಗ ಈ ಕಾಯಿಲೆ ಉಂಟಾಗುತ್ತದೆ. ಇದರಿಂದಾಗಿ ವ್ಯಕ್ತಿಯ ಮನಸ್ಸು ಸದಾ ಚಂಚಲಗೊಂಡು, ಅಶಾಂತಿಯಿಂದ ಕೂಡಿರುತ್ತದೆ. ಯಾವಾಗಲೂ ಮಂಕಾಗಿರುವುದು, ಚಿತ್ತ ಚಾಂಚಲ್ಯವೇ ಇದರ ಮೊದಲ ಸಂಕೇತ. ಅನುಮಾನ ಇವರ ಬೆನ್ನಿಗೆ ಬಿದ್ದಿರೋ ದೊಡ್ಡ ಪಿಶಾಚಿ. ಪ್ರತಿಯೊಬ್ಬರನ್ನೂ, ಪ್ರತಿಯೊದನ್ನೂ ಅನುಮಾನದ ದೃಷ್ಟಿಯಿಂದಲೇ ನೋಡುತ್ತಾ ಹೋಗುವ ಇವರದು ಹಳದಿ ಕಣ್ಣು.`ಭ್ರಮಾಧೀನ’ ಎನ್ನುವ ಮಾನಸಿಕ ಕಾಯಿಲೆಗೆ ಒಳಗಾಗಿರುವವರಿಗೆ ಮನಸ್ಸು ಸ್ವಹಿಡಿತದಲ್ಲಿರದೆ ಚಿತ್ತ ವಿಕಲತೆಯ ಭ್ರಮೆಯೇ ಪ್ರಮುಖವಾಗಿದ್ದು, ಈ ಭ್ರಮೆಯ ಜೊತೆಗೆ ಇರಬಹುದಾದ ಆತಂಕ, ಭಯ, ದೈನಂದಿನ ಚಟುವಟಿಕೆಗಳಲ್ಲಿ ಕಂಡುಬರಬಹುದಾದ ಸಮಸ್ಯೆಗಳು ಚಿತ್ತವಿಕಲತೆಯ ಭ್ರಮೆಯಲ್ಲಿರುವುದರಿಂದ ಇವರ ಸುತ್ತ ಅನುಮಾನದ ಹುತ್ತ ಬೆಳೆದಿರುತ್ತದೆ.

ಇಂತಹ ವ್ಯಕ್ತಿಗಳು ಈ ಭ್ರಮೆಯೊಂದನ್ನು ಬಿಟ್ಟು, ಬೇರೆಯವರೊಡನೆ ನಡೆಸುವ ವ್ಯವಹಾರ, ಮಾತುಕತೆ, ನಿಭಾಯಿಸುವ ಜವಾಬ್ದಾರಿ, ಸಂಭಾಷಣೆ, ತಮಗೆ ಒಪ್ಪಿಸುವ ಕೆಲಸವನ್ನು ಅಷ್ಟೇ ನೀಟಾಗಿ ಮುಗಿಸುವ ಜಾಣ್ಮೆ….. ಹೀಗೆ ಯಾವುದರಲ್ಲೂ ತೊಂದರೆ ಇರುವುದಿಲ್ಲ. ಇದರಿಂದಾಗಿ ವ್ಯಕ್ತಿಗೆ ಭ್ರಮಾಧೀನ ಕಾಯಿಲೆ ಇದೆ ಎಂಬ ಅರಿವು ಮೂಡುವುದು ತುಸು ಕಷ್ಟವೆನಿಸುತ್ತದೆ.

ಕಾಯಿಲೆಯ ಲಕ್ಷಣಗಳೇನು?

ಜರ್ಮನಿಯ ಖ್ಯಾತ ಮಾನಸಿಕ ತಜ್ಞರಾದ ಏಮಿಲ್ ‌ಕ್ರಿಪೇಲಿನ್‌ರ ಪ್ರಕಾರ, “ಭ್ರಮಾಧೀನ ಕಾಯಿಲೆಗೆ ತುತ್ತಾಗಿರುವ ವ್ಯಕ್ತಿಗಳು ಸಾಮಾನ್ಯ ಜೀವನವನ್ನು ನಡೆಸುತ್ತಾ ತಮ್ಮ ಸುತ್ತಮುತ್ತಲಿನ ಜಗತ್ತನ್ನು ಅನುಮಾನ, ಅಸೂಯೆ, ದ್ವೇಷದಿಂದ ಕಾಣುವ ಇವರು ಸದಾ ಅತೃಪ್ತರು. ಜೊತೆಗೆ ಅಶಾಂತಿಯ ಸುತ್ತ ಮನಸ್ಸನ್ನು ಕೇಂದ್ರೀಕರಿಸುತ್ತಿರುತ್ತಾರೆ,” ಎನ್ನುತ್ತಾರೆ. ಅವರ ಪ್ರಕಾರ ಭ್ರಮಾಧೀನ ಕಾಯಿಲೆಯ ಕೆಲವು ಲಕ್ಷಣಗಳು ಹೀಗಿವೆ :

ಭ್ರಮಾಧೀನ ಕಾಯಿಲೆಯುಳ್ಳವರು ತಮ್ಮನ್ನು ತಾವು ಶ್ರೇಷ್ಠರು, ಗಟ್ಟಿಗರು, ಬುದ್ಧಿವಂತರು, ಮೇಧಾವಿಗಳು ಎಂಬ ಭ್ರಮೆಯಲ್ಲಿರುತ್ತಾರೆ. ಸದಾ ಆತ್ಮರತಿಯಲ್ಲಿ ತೊಡಗುವ ಇವರು `ನಾನೊಬ್ಬನೆ ಬುದ್ಧಿವಂತ… ಮಿಕ್ಕವರೆಲ್ಲ ದಡ್ಡರು,’ ಎನ್ನುವ ವಿಚಿತ್ರ ಭ್ರಮಾಲೋಕದಲ್ಲಿ ತೇಲಾಡುತ್ತಿರುತ್ತಾರೆ. ತಾನೇ `ಗ್ರೇಟ್‌’ ಎನ್ನುವ ಹಮ್ಮಿನಿಂದ ಒಳಗೊಳಗೆ ಖುಷಿಪಡುತ್ತಿರುತ್ತಾರೆ.

ಈ ಕಾಯಿಲೆಗೆ ತುತ್ತಾಗಿರುವವರು ಸಾಮಾನ್ಯವಾಗಿ ಸದಾ ಮಂಕಾಗಿರುತ್ತಾರೆ. ಆಕಾಶವೇ ತಲೆ ಮೇಲೆ ಕಳಚಿ ಬಿದ್ದವರಂತೆ ಹಾರಾಡುತ್ತಿರುತ್ತಾರೆ. ಅಲ್ಲದೆ, `ಎಲ್ಲ ಸರಿ ಇಲ್ಲ’ ಎನ್ನುವ ಅಭದ್ರತೆಯ ಭಾವನೆಯಿಂದಲೇ ಒದ್ದಾಡುತ್ತಿರುತ್ತಾರೆ.

ಅಸೂಯೆ ಅಥವಾ ಹೊಟ್ಟೆಕಿಚ್ಚಿನಿಂದ ಸದಾ ಬುಸುಗುಡುವ ಇವರಿಗೆ ತಮ್ಮ ಸಂಗಾತಿ, ಸ್ನೇಹಿತರು, ಬಂಧುಗಳು ಯಾರಾದರೂ ಸ್ವಲ್ಪ ಟ್ರಿಮ್ ಆಗಿ ಡ್ರೆಸ್‌ ಮಾಡಿಕೊಂಡು ಅಂದವಾಗಿ ಕಂಡರೆ ಸಾಕು ಒಂದು ಕ್ಷಣ ತಬ್ಬಿಬ್ಬಾಗಿ ಅವರನ್ನು ಟೀಕಿಸಲು ಆರಂಭಿಸುತ್ತಾರೆ.

ಕಾರಣವಿಲ್ಲದೆ ಕಾಲು ಕೆರೆದುಕೊಂಡು ಜಗಳಕ್ಕಿಳಿಯುವುದು ಇವರ ಇನ್ನೊಂದು ಲಕ್ಷಣ. ಅನಗತ್ಯವಾಗಿ, ಅವಾಚ್ಯ ಶಬ್ದಗಳಿಂದ ನಿಂದನೆಯನ್ನು ಮಾಡುತ್ತಿರುತ್ತಾರೆ. `ತಾನು ಮಾಡಿರುವುದೇ ಸರಿ…..’ ಎನ್ನುವ ಅಹಂನಲ್ಲಿ ಓಡಾಡುವ ಇವರು ಬೇರೆಯವರ ಚಿಕ್ಕಪುಟ್ಟ ತಪ್ಪು ಕಂಡಬಂದರೆ ಕೂಡಲೇ ಕಿಡಿಕಾರುತ್ತಾರೆ.

ಈ ಭ್ರಮಾಧೀನ ಕಾಯಿಲೆಯಿಂದ ನರಳುವವರಿಗೆ ಅನುಮಾನವೇ ಇವರ ಆಪ್ತಮಿತ್ರ. ಸಂಗಾತಿಯೇ ಇವರ ಮೊದಲ ಟಾರ್ಗೆಟ್‌. ಗಂಡನಾದರೆ ಪತ್ನಿಗೆ ಪದೇ ಪದೇ ಫೋನ್‌ ಮಾಡಿ ಆಗಾಗ್ಗೆ ವಿಚಾರಿಸುತ್ತಿರುವುದು. ಮಹಿಳೆಯಾದರೆ ಸದಾ ಗಂಡನನ್ನು ಅನುಮಾನಾಸ್ಪದವಾಗಿ ನೋಡುತ್ತಾ ಅವನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಕೆಲವೊಮ್ಮೆ ಹಿಂಬಾಲಿಸುವ ಪ್ರಯತ್ನವನ್ನೂ ಮಾಡುತ್ತಿರುತ್ತಾರೆ. ಇನ್ನು ಕೆಲವು ಗಂಡಸರಂತೂ ಪತ್ನಿಯನ್ನು ಮನೆಯಲ್ಲಿ ಕೂಡಿಹಾಕಿ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗುವುದೂ ಉಂಟು!

ಕೆಲವರು ತಮ್ಮ ಪತಿ ಅಥವಾ ಪತ್ನಿ ಬೇರೆಯವರೊಡನೆ ಲೈಂಗಿಕ ಸಂಬಂಧ ಬೆಳೆಸಿರಬಹುದೇನೋ ಎನ್ನುವ ಅನುಮಾನದಿಂದ ಅದರ ಗುರುತಿಗಾಗಿ ಸತತ ಹುಡುಕಾಡುವುದು. ಬಟ್ಟೆಗಳ ಪರೀಕ್ಷೆ, ಕೂದಲಿನ ಹುಡುಕಾಟ, ಸುಗಂಧ ದ್ರವ್ಯದ ಆಘ್ರಾಣಿಸುವಿಕೆ,  ಮೊಬೈಲ್ ಪರೀಕ್ಷೆ.

ಈ ಅನುಮಾನದ ಭ್ರಮೆಯಲ್ಲಿರುವವರು ಸಾಮಾನ್ಯವಾಗಿ ಜನರಿಂದ ದೂರವಾಗಿ ಏಕಾಂತವನ್ನು ಬಯಸುತ್ತಾರೆ. ಜನ ಜಂಗುಳಿಯಿಂದ, ಸಾಮಾಜಿಕ ಕಾರ್ಯಕ್ರಮ, ರಾಲಿ, ಸಿನಿಮಾ, ನಾಟಕದಂತಹ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮದಿಂದ ದೂರ ಉಳಿಯಲು ಯತ್ನಿಸುತ್ತಾರೆ. ಎಂತಹ ಅದ್ಭುತ ಕಾರ್ಯವಾದರೂ ಕೂಡ `ಅದು ಸರಿ ಇರಲಿಲ್ಲ….  ತುಂಬಾ ಕೆಟ್ಟದಾಗಿತ್ತು’ ಎಂದು ಕಮೆಂಟ್‌ ಮಾಡುವುದು ಇವರ  ಲಕ್ಷಣ.

ಹೊರಗಿನ ಪ್ರಪಂಚಕ್ಕೆ ಇವರು ಮಾಮೂಲಿ ಮನುಷ್ಯರಂತೆ ಕಂಡುಬಂದರೂ ತಮ್ಮ ಸಂಗಾತಿಗಳ ಜೊತೆ ಮಾತ್ರ ತುಂಬಾ ವಿಚಿತ್ರವಾಗಿ ವಿಕೃತವಾಗಿ ವರ್ತಿಸುವ ಮನೋರೋಗಿಗಳಂತೆ ಕಾಣುತ್ತಾರೆ.

`ಅಹಂ’ ಇವರ ಗುಡ್‌ ವಿಲ್ ‌ಇದ್ದ ಹಾಗೆ. ಎಲ್ಲಾ ವಿಚಾರದಲ್ಲೂ ತಾನು ಹೇಳಿದ್ದೇ ಸರಿ, ತನ್ನ ಮಾತನ್ನೇ ಎಲ್ಲರೂ ಪರಿಪಾಲಿಸಬೇಕು ಅದನ್ನು ಯಾರೂ ಮೀರುವಂತಿಲ್ಲ. ತನ್ನ ನಿರ್ಧಾರವೇ ಯಾವಾಗಲೂ ಸರಿಯಾಗಿರುತ್ತದೆ ಎನ್ನುವ ಭಾವನೆಯಿಂದ ತಮ್ಮನ್ನು ತಾವೇ ಸಮರ್ಥಿಸಿಕೊಳ್ಳುತ್ತಿರುತ್ತಾರೆ.

ತಮ್ಮ ಸಂಗಾತಿಗಳ ಬಗ್ಗೆ ಅತಿಯಾದ ಕಾಳಜಿ ವಹಿಸುವಿಕೆ ಹಾಗೂ ನೀನು ನನ್ನ ಪತಿ/ಪತ್ನಿ ನೀನು ನನಗೆ ಮಾತ್ರ ಸೇರಿರುವುದು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನೀನು ನನ್ನ ಸ್ವತ್ತು. ನನ್ನ ವಿನಾ ಬೇರೆ ಯಾರಿಗೂ ಅಧಿಕಾರವಿಲ್ಲ. ನೀನು ನನ್ನ ಹಿಡಿತದಲ್ಲೇ ಇರಬೇಕು ಅನ್ನುವ ಅಘೋಷಿತ ನಿಯಮವನ್ನು ಮಾಡಿರುತ್ತಾರೆ. ಇಂತಹ ಸ್ಥಿತಿಯಲ್ಲಿ ಇವರೊಂದಿಗಿನ ಇವರ ಸಂಗಾತಿಗಳು  ಸದಾ ಕಿರಿಕಿರಿ ಅನುಭವಿಸುತ್ತಿರುತ್ತಾರೆ.

ಮಾನಸಿಕ ಕಾಯಿಲೆಯಿಂದ ಹೊರಬರುವುದು ಹೇಗೆ…..?

ಭ್ರಮಾಧೀನ ಕಾಯಿಲೆಯಲ್ಲಿ ಬಳಲುವವರು ಹೊರನೋಟಕ್ಕೆ ಸಾಮಾನ್ಯರಂತೆ ಕಂಡುಬಂದರೂ ಮಾನಸಿಕ ಅಸಮತೋಲನದಲ್ಲಿರುತ್ತಾರೆ. ಇದು ಕೂಡ ಮಾನಸಿಕ ರೋಗದ ಒಂದು ವಿಧವಾಗಿರುತ್ತದೆ. ಮಾನಸಿಕ ತಜ್ಞರ ಪ್ರಕಾರ, ಸುಮಾರು ಒಂದು ಲಕ್ಷ ಜನರಲ್ಲಿ 25 ರಿಂದ 30 ಮಂದಿಗೆ ಕಾಣಿಸಿಕೊಳ್ಳುವ ಈ ಕಾಯಿಲೆಗೆ ಕೇವಲ ಶೇ.1 ರಷ್ಟು ಜನರು ಮಾತ್ರ ಸರಿಯಾದ ಟ್ರೀಟ್‌ಮೆಂಟ್‌ ತೆಗೆದುಕೊಳ್ಳುತ್ತಾರೆ. ಉಳಿದವರು ಹಾಗೆಯೇ ಇದ್ದುಬಿಡುತ್ತಾರೆ. ಬೇರೆ ಎಲ್ಲಾ ವಿಚಾರದಲ್ಲೂ ಸ್ಪಷ್ಟ, ನೇರ, ಗಂಭೀರವಾಗಿರುವ ಇವರಿಗೆ ತಮಗೆ ಈ ಭ್ರಮಾ ಕಾಯಿಲೆ ಇದೆ ಎನ್ನುವ ಅರಿವು ಕೂಡ ಇರುವುದಿಲ್ಲ. ಆದರೆ ಯಾವಾಗಲೂ ಜೊತೆಯಲ್ಲಿರುವ ಸಂಗಾತಿಗಳಿಗೆ ಇವರು ಬಿಸಿ ತುಪ್ಪವಾಗಿ ಕಾಡುತ್ತಿರುತ್ತಾರೆ.

ಆರಂಭದಲ್ಲೇ ಈ ಕಾಯಿಲೆಯನ್ನು ಗುರುತಿಸಿ, ಸರಿಯಾದ ವೈದ್ಯರಲ್ಲಿ ತೋರಿಸಿ. ಚಿಕಿತ್ಸೆ ತೆಗೆದುಕೊಂಡಲ್ಲಿ ಇದು ಅಂತಹ ಅಪಾಯಕಾರಿ ಕಾಯಿಲೆ ಏನಲ್ಲ…!

ಕಾಯಿಲೆ ಗುಣಮುಖ ಆಗುವವರೆಗೂ ಇವರು ಹೇಳಿದಂತೆ ತಲೆ ಅಲ್ಲಾಡಿಸಿ, ಅವರನ್ನು ಸಮಧಾನಪಡಿಸಿದಲ್ಲಿ ಹಂತ ಹಂತವಾಗಿ ಗುಣಮುಖರಾಗುತ್ತಾರೆ. ಕಲೆ, ಸಾಹಿತ್ಯ, ಸಿನಿಮಾ, ನಾಟಕ ಮುಂತಾದ ಲಲಿತಕಲೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವಂತೆ ಮಾಡಬೇಕು. ಮನಸ್ಸು ಅದರತ್ತ ಸೆಳೆದಲ್ಲಿ, ಯೋಚವೆ ಬೇರೆಡೆಗೆ ಹರಿಯುವುದರಿಂದ ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ. ಪ್ರತಿನಿತ್ಯ ಯೋಗ, ಲಘು ನಡಿಗೆ, ವ್ಯಾಯಾಮ ಮುಂತಾದ ದೇಹ ದಂಡನೆಯ ಕಸರತ್ತು ನಡೆಸಿದರೆ, ಮಾನಸಿಕ ಒತ್ತಡದಿಂದ ಹೊರಬರುವುದರಿಂದ ಮನಸ್ಸು ನಿರಾಳಗೊಂಡು ದ್ವೇಷ, ಅಸೂಯೆಯಂತಹ ನಕಾರಾತ್ಮಕ ಭಾವನೆಯಿಂದ ಹೊರಬರಬಹುದು.

ದಿನದಲ್ಲಿ ಕನಿಷ್ಠ ಒಂದು ಗಂಟೆ ಕಾಲ ನಿಶ್ಶಬ್ದ ವಾತಾವರಣದಲ್ಲಿ ಯೋಗ ಮಾಡುವುದರಿಂದ ಮಾನಸಿಕ ಸ್ಥಿಮಿತತೆ ಕಾಪಾಡಿಕೊಳ್ಳುವುದರ ಜೊತೆಗೆ ಮನಸ್ಸಿನಲ್ಲಡಗಿದ ಕೆಟ್ಟ ಯೋಚನೆಗಳು ದೂರವಾಗಿ ಭಾವನೆಯ ಬೆಳಕು ದೇಹವನ್ನು ಆಕ್ರಮಿಸಿ ಸಕಾರಾತ್ಮಕ ಚಿಂತನೆಗಳು ಹೆಚ್ಚುವುದರಿಂದ ರೋಗಿ ಅತೀ ಶೀಘ್ರವಾಗಿ ಸಹಜ ಬದುಕಿಗೆ ಪುನಃ ಮರಳಬಹುದು.

ಗಂಡಸರಿಗೆ ಹೋಲಿಸಿದಲ್ಲಿ ಹೆಂಗಸರಲ್ಲಿ ಇದು ಹೆಚ್ಚು. ಸದಾ ಅಭದ್ರತೆಯಲ್ಲಿ ಬದುಕು ಸಾಗಿಸುವ ಇವರಿಗೆ ಅತಿಯಾದ ನಿರೀಕ್ಷೆ `ಭ್ರಮೆ’ಯ ಈ ಕಾಯಿಲೆಗೆ ಆಹ್ವಾನವಿತ್ತಂತೆ.

ಬದುಕು ಬಂದಂತೆ ಸ್ವೀಕರಿಸುವ ಮನೋಭಾವ ರೂಢಿಸಿಕೊಂಡು ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದಿದ್ದಲ್ಲಿ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ.

ಎಂ. ಅಶೋಕ್‌.

Tags:
COMMENT