ಈ ಹೊಸ ವರ್ಷದಲ್ಲಿ ಸಂಬಂಧಗಳನ್ನು ಉತ್ತಮಗೊಳಿಸಲು ನಿಮ್ಮ ಕೌಟುಂಬಿಕ ಮತ್ತು ಸಾಮಾಜಿಕ ಸಂಬಂಧಗಳಲ್ಲಿ ಮಾಧುರ್ಯ ತುಂಬಿ ಇನ್ನಷ್ಟು ಸುಖದಾಯಕವಾಗಿಸಿ.
ಕೌಟುಂಬಿಕ ಸಂಬಂಧಗಳು
ಎಲ್ಲಕ್ಕೂ ಮೊದಲು ವಂಶಪಾರಂಪರ್ಯವಾಗಿ ಸಿಕ್ಕಿರುವ ಕೌಟುಂಬಿಕ ಸಂಬಂಧಗಳು ಯಾವುದೇ ಬಂಡವಾಳಕ್ಕೆ ಕಡಿಮೆಯಲ್ಲ. ಆ ಸಂಬಂಧಗಳನ್ನು ಸದೃಢಗೊಳಿಸಲು 5 ವಿಧಾನಗಳನ್ನು ತಿಳಿಸುತ್ತಿದ್ದೇವೆ.
ಸೋಗನ್ನು ಬಿಡಿ : ಸೋಗು ಒಂದು ರೀತಿಯಲ್ಲಿ ಮಸಾಲೆಯುಕ್ತ ಶಬ್ದ. ಜನ ಇದನ್ನು ಚಪ್ಪರಿಸುತ್ತಾ ಉಪಯೋಗಿಸುತ್ತಾರೆ. ಉದಾಹರಣೆಗೆ ಸೊಸೆಯ ಅಣ್ಣ ಇಂಟರ್ ಕ್ಯಾಸ್ಟ್ ಮದುವೆ ಮಾಡಿಕೊಂಡಿದ್ದಕ್ಕೆ ಸೊಸೆಯ ತವರುಮನೆಯವರನ್ನು ಭೇಟಿಯಾಗುವುದು ಕಡಿಮೆಯಾಯಿತು. ಅತ್ತೆ ತನ್ನ ಮನೆಯ ಸಂಸ್ಕಾರಗಳ ಉದಾಹರಣೆ ಒಡ್ಡುತ್ತಾ ಸೊಸೆಯ ತವರುಮನೆಯವರನ್ನು ಆಡಿಕೊಳ್ಳುತ್ತಿರುತ್ತಾರೆ.
ಇದನ್ನು ಅಪಹಾಸ್ಯದ ವಸ್ತುವನ್ನಾಗಿ ಮಾಡುವ ಅಗತ್ಯವಿದೆಯೇ?
ಇಂಟರ್ ಕ್ಯಾಸ್ಟ್ ಮದುವೆ ಅಪರಾಧವೇನೂ ಅಲ್ಲ. ಸಮಾಜದವರಿಗೆ ಅದನ್ನು ಅರಗಿಸಿಕೊಳ್ಳಲಾಗುವುದಿಲ್ಲ ಎಂಬುದು ಬೇರೆಯೇ ವಿಚಾರ. ಆದರೆ ಸೊಸೆ ನಿಮ್ಮ ಮನೆಯವಳೇ. ಅವಳ ಸುಖದುಃಖಗಳಲ್ಲಿ ಭಾಗಿಯಾಗುವುದು ನಿಮ್ಮ ಕರ್ತವ್ಯ. ಇತರರೆದುರು ನಿಮ್ಮನ್ನು ದೊಡ್ಡವರೆಂದು ಬಿಂಬಿಸಿಕೊಳ್ಳುತ್ತೀರಿ ಮತ್ತು ಅವರನ್ನು ಕೆಳಗೆ ತಳ್ಳುತ್ತೀರಿ. ಅದರಿಂದ ನಿಮ್ಮ ಪ್ರತಿಷ್ಠೆಗೆ ಧಕ್ಕೆ ಬರುತ್ತದೆ. ನಿಮ್ಮದೇ ಕುಟುಂಬದ ಅಪಹಾಸ್ಯವಾಗುತ್ತದೆ. ಅದರಲ್ಲಿ ನೀವು ಭಾಗಿಯಾಗಿರುತ್ತೀರಿ.
ಆದ್ದರಿಂದ ಹೊಸ ವರ್ಷದಲ್ಲಿ ನಿಮ್ಮನ್ನು ನೀವು ಈ ಸ್ವಭಾವದಿಂದ ಮುಕ್ತಗೊಳಿಸಿ ಇತರರಿಗೂ ಸಲಹೆ ನೀಡಿ.
ನಿಮ್ಮ ಹೊಣೆಗಾರಿಕೆ ಅರಿಯಿರಿ : ಹೊಣೆಗಾರಿಕೆಯ ಅರ್ಥ ಬರೀ ಅಪ್ಪ ಅಮ್ಮನ ಸೇವೆ ಮಾಡುವುದಷ್ಟೇ ಅಲ್ಲ. ನಿಮ್ಮ ಮಕ್ಕಳ ಬಗ್ಗೆಯೂ ಕೆಲವು ಜವಾಬ್ದಾರಿಗಳಿವೆ. ಇಂದಿನ ಅಪ್ಪ ಅಮ್ಮ ಆಧುನಿಕತೆಯ ಹೊದಿಕೆಯಲ್ಲಿದ್ದಾರೆ. ಮಕ್ಕಳಿಗೆ ಜನ್ಮ ಕೊಡುವುದು ಮತ್ತು ಅವರಿಗೆ ಸುಖ ಸೌಲಭ್ಯಗಳನ್ನು ಕೊಡುವುದಷ್ಟೇ ತಮ್ಮ ಜವಾಬ್ದಾರಿ ಎಂದುಕೊಳ್ಳುತ್ತಾರೆ. ಅದಕ್ಕೂ ಹೆಚ್ಚಾಗಿ ಅವರು ತಮ್ಮ ಪರ್ಸನಲ್ ಲೈಫ್‌ಗೆ ಮಾತ್ರ ಮಹತ್ವ ಕೊಡುತ್ತಾರೆ. ಈ ಸ್ಥಿತಿಯಲ್ಲಿ ನೀವು ಆದರ್ಶ ತಾಯಿ ತಂದೆ ಅಲ್ಲ. ಆದರೆ ಈ ಹೊಸ ವರ್ಷದಲ್ಲಿ ನೀವು ಹೊಣೆಗಾರಿಕೆಗಳನ್ನು ಶಿಸ್ತಿನಿಂದ ನಿಭಾಯಿಸಿದರೆ ನಿಮಗೂ ಆದರ್ಶರಾಗುವ ಅವಕಾಶ ಸಿಗುತ್ತದೆ.
ಸುಳ್ಳಿನ ಆಸರೆ ಬೇಡ : ತಮ್ಮ ಹೊಣೆಗಾರಿಕೆಗಳಿಂದ ಜಾರಿಕೊಳ್ಳಲು, ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಅಥವಾ ತಮ್ಮ ತಪ್ಪು ಮುಚ್ಚಿಕೊಳ್ಳಲು ಜನ ಸುಳ್ಳಿನ ಆಶ್ರಯ ಪಡೆಯುತ್ತಾರೆ. ಒಟ್ಟು ಕುಟುಂಬದಲ್ಲಿ ಸುಳ್ಳಿನ ಹೆಚ್ಚು ಗೆರೆಗಳು ಕಂಡುಬರುತ್ತವೆ. ಏಕೆಂದರೆ ಪರಸ್ಪರರಲ್ಲಿ ತಮ್ಮನ್ನು ಉತ್ತಮರೆಂದು ಸಾಬೀತುಪಡಿಸುವ ಸ್ಪರ್ಧೆಯಲ್ಲಿ ಜನರಿಂದ ತಪ್ಪುಗಳಾಗುತ್ತವೆ. ಆದರೆ ಅವನ್ನು ನಕಾರಾತ್ಮಕ ದೃಷ್ಟಿಯಿಂದ ನೋಡುವ ಬದಲು ಸಕಾರಾತ್ಮಕ ರೂಪದಲ್ಲಿ ತೆಗೆದುಕೊಳ್ಳಬೇಕು. ಆಗ ನೀವು ಸುಳ್ಳು ಹೇಳುವ ಪ್ರಮೇಯವೇ ಬರುವುದಿಲ್ಲ. ಈ ವರ್ಷ ಸಕಾರಾತ್ಮಕ ಆಲೋಚನೆ ಇಟ್ಟುಕೊಂಡರೆ ಅದರಿಂದ ಕೌಟುಂಬಿಕ ಸಂಬಂಧಗಳು ಹಾಗೂ ನಿಮ್ಮ ವ್ಯಕ್ತಿತ್ವ ಸುಧಾರಿಸುತ್ತದೆ.
ಆರ್ಥಿಕ ಅಹಂಕಾರ ಬೇಡ : ಆಧುನಿಕತೆಯ ಈ ಕಾಲದಲ್ಲಿ ಜನ ಸಂಬಂಧಗಳನ್ನೂ ಹಣದಿಂದ ಅಳೆಯಲು ಶುರು ಮಾಡಿದ್ದಾರೆ. ಸಂಬಂಧಗಳಲ್ಲಿ ಆಗಾಗ್ಗೆ ಸಮಾರಂಭಗಳ ಹೆಸರಿನಲ್ಲಿ ಹಣ ಕೀಳುವ ಪದ್ಧತಿ ಇದೆ. ಮದುವೆ, ಮುಂಜಿಯಂತಹ ಸಮಾರಂಭಗಳನ್ನೇ ನೋಡಿ. ಶಾಸ್ತ್ರದ ಹೆಸರಿನಲ್ಲಿ ಕವರಿನಲ್ಲಿ ಕೊಡುವುದು ಪಡೆಯುವುದು, ಆ ಕವರ್‌ಗಳಲ್ಲಿ ಹಣ ಇಟ್ಟು ಸಂಬಂಧಿಕರಿಗೆ ಕೊಡಲಾಗುತ್ತದೆ. ಯಾರು ಎಷ್ಟು ಹಣ ಕೊಡುತ್ತಾರೋ ಅವರಿಗೂ ಅಷ್ಟೇ ಹಣ ವಾಪಸ್‌ಕೊಟ್ಟು ವ್ಯವಹಾರ ಮುಗಿಸಲಾಗುವುದು. ಆದರೆ ಇಂತಹ ಸಂಬಂಧಗಳಿಂದ ಯಾವುದೇ ಲಾಭವಿಲ್ಲ. ಏಕೆಂದರೆ ಅ ಹಣದ ಆಧಾರದ ಮೇಲೆ ನಿಲ್ಲುತ್ತವೆ. ಸಂಬಂಧಗಳಲ್ಲಿ ಆರ್ಥಿಕ ಅಹಂಕಾರ ಇಟ್ಟುಕೊಳ್ಳಬಾರದು. ಸಂಬಂಧಗಳ ಭಾವನೆಗಳನ್ನು ಸದೃಢಗೊಳಿಸುತ್ತೇವೆ ಎಂದು ಈ ವರ್ಷ ನಿರ್ಧರಿಸಿ.