ಯಾರು ಈ ವ್ಯಾಲೆಂಟೈನ್‌ ಡೇಯನ್ನು ಕೇವಲ ಪ್ರೇಮದ ದೃಷ್ಟಿಯಿಂದ ಮಾತ್ರ ಅಳೆಯುತ್ತಾರೋ, ಅವರಿಗೆ ಅದರ ಕಾನ್‌ಸೆಪ್ಟ್ ಅರ್ಥ ಆಗಿರುವುದಿಲ್ಲ. ವ್ಯಾಲೆಂಟೈನ್‌ ಡೇ ಕೇವಲ ಪ್ರೇಮಕ್ಕೆ ಮಾತ್ರವಲ್ಲದೆ, ಮದುವೆಗೂ ಸಮರ್ಪಿತ. ಇಟಲಿಯ ರೋಮ್ ನಗರದಲ್ಲಿ 3ನೇ ಶತಮಾನದ ಕಾಲಘಟ್ಟದಲ್ಲಿ, ಅಲ್ಲಿನ ರಾಜ ಕ್ಲಾಡಿಯಸ್‌ ತನ್ನ ಅಧಿಕಾರಾವಧಿಯಲ್ಲಿ ಸದಾ, ಮದುವೆ ಆಗುವುದರಿಂದ ಗಂಡಸರ ಬುದ್ಧಿ ಮತ್ತು ಶಕ್ತಿ ಎರಡೂ ಕ್ಷೀಣಿಸುತ್ತದೆ ಎಂದೇ ಭಾವಿಸಿದ್ದ. ಆದ್ದರಿಂದ ಆತ ತನ್ನ ಸೇನೆಯ ಅಧಿಕಾರಿ, ಸಿಬ್ಬಂದಿಗೆ ಮದುವೆ ಆಗುವಂತಿಲ್ಲ ಎಂದು ಸುಗ್ರೀವಾಜ್ಞೆ ಹೊರಡಿಸಿದ್ದ. ಆಗ ಸಂತ ವ್ಯಾಲೆಂಟೈನ್‌ ಇದನ್ನು ವಿರೋಧಿಸಿದರು ಹಾಗೂ ಅಂಥ ಸೈನಿಕರು ಮದುವೆ ಆಗಬೇಕೆಂದು ಸಲಹೆ ನೀಡುತ್ತಾ, ಅದಕ್ಕಾಗಿ ಸಹಕರಿಸುತ್ತಿದ್ದರು. ಇದರಿಂದ ಕೋಪಗೊಂಡ ರಾಜ, 14ನೇ ಫೆಬ್ರವರಿ 269ರಂದು ಅವರಿಗೆ ಮರಣದಂಡನೆ ವಿಧಿಸಿದ. ಅಂದಿನಿಂದ ವಿಶ್ವಾದ್ಯಂತ ಆ ಪ್ರೇಮದೂತನ ಹೆಸರಿನಲ್ಲಿ ಈ `ಪ್ರೇಮಿಗಳ ದಿನ’ ಅಥವಾ `ವ್ಯಾಲೆಂಟೈನ್‌ ಡೇ’ ಆಚರಿಸುತ್ತಿದ್ದಾರೆ.

ವ್ಯಾಲೆಂಟೈನ್‌ ಡೇ ಮತ್ತು ಮದುವೆಗೆ ಇರುವ ಪವಿತ್ರ ಸಂಬಂಧದ ಅರ್ಥ ತಿಳಿದುಕೊಂಡು, ಈಗ ನಮ್ಮ ದೇಶದಲ್ಲೂ ಎಷ್ಟೋ ಯುವ ಜೋಡಿಗಳು ಆ ದಿನದಂದೇ ತಮ್ಮ ಮದುವೆ ಗೊತ್ತುಪಡಿಸಿಕೊಂಡು ಅಥವಾ ತಮ್ಮ ಮ್ಯಾರೇಜ್‌ ಡೇಯನ್ನು ಆ ದಿನದಂದೇ ಪ್ರತಿ ವರ್ಷ ಆಚರಿಸುವ ಪದ್ಧತಿ ಬೆಳೆಸಿಕೊಂಡು ಬಂದಿದ್ದಾರೆ. ಇದರಿಂದ ವ್ಯಾಲೆಂಟೈನ್‌ ಡೇ ಎಂದರೆ ಏನೋ ಅನೈತಿಕ ದಿನಾಚರಣೆ ಎಂಬಂತೆ ಕೆಂಡಕಾರುವ ಕಂದಾಚಾರಿಗಳಿಗೆ ತಿರುಗೇಟು ನೀಡಿದಂತಿದೆ.

ಈ ಕಂದಾಚಾರಿಗಳು ವ್ಯಾಲೆಂಟೈನ್‌ ಡೇಯನ್ನು ಎಷ್ಟೇ ವಿರೋಧಿಸಲಿ, ಪ್ರೇಮಿಸುವವರ ಪಾಲಿಗಂತೂ ಈ ದಿನ ಮಹತ್ವದ್ದಾಗಿದೆ. 2016ರಲ್ಲಿ ನಡೆಯಲಿರುವ ಮದುವೆಯ ದಿನಾಂಕ ಗಮನಿಸಿದರೆ ಎಲ್ಲಕ್ಕೂ ಅಧಿಕ ಮದುವೆಗಳು ವ್ಯಾಲೆಂಟೈನ್‌ ಡೇನಂದೇ ನಡೆಯಲಿವೆ. ಹೋಟೆಲ್‌, ವೆಡ್ಡಿಂಗ್‌ ಹಾಲ್, ಬ್ಯೂಟಿಪಾರ್ಲರ್‌, ಮ್ಯಾರೇಜ್‌ ಗಾರ್ಡನ್‌ಗಳ ಬುಕ್ಕಿಂಗ್‌ ಎಲ್ಲವೂ ಅತ್ಯಧಿಕವಾಗಿ ಈ ದಿನದಂದೇ ಡಿಮ್ಯಾಂಡ್‌ ಗಳಿಸಿವೆ. ಇದಕ್ಕೆ ಕಾರಣ ಇಷ್ಟೆ, ನಾವು ಸಾಮಾನ್ಯ ವ್ಯವಹಾರಗಳಲ್ಲಿ ಉದಾರರಾಗುತ್ತಾ ಇದ್ದೇವೆ. ವಿಶ್ವದ ಬಹಳಷ್ಟು ಜನ ವಿಜೃಂಭಣೆಯಿಂದ ಆಚರಿಸುವ ಈ ಪ್ರೇಮೋತ್ಸವವನ್ನು ನಾವು ಆಚರಿಸುತ್ತಿದ್ದೇವೆ. ಇದರಿಂದ ಸ್ಪಷ್ಟ ತಿಳಿಯುವುದೆಂದರೆ ಈ ಪ್ರೇಮೋತ್ಸವದ ಹಬ್ಬ ಯಾವುದೇ ಧರ್ಮಕ್ಕೆ ಸೀಮಿತವಲ್ಲ ಎಂಬುದು. ವ್ಯಾಲೆಂಟೈನ್‌ ಡೇ, ನ್ಯೂ ಇಯರ್‌ಇತ್ಯಾದಿಗಳನ್ನು ವಿಶ್ವದ ಬಹುತೇಕ ಜನ ಒಟ್ಟಾಗಿ ಕೂಡಿ ಆಚರಿಸುತ್ತಾರೆ. ಸಾಧಾರಣ ದಿನಗಳನ್ನು ಬದಿಗೊತ್ತಿ, ಇಂದಿನ ಯುವ ಪ್ರೇಮಿಗಳು ವ್ಯಾಲೆಂಟೈನ್‌ ಡೇಯಂದೇ ತಮ್ಮ ಮದುವೆಯ ಮುಹೂರ್ತ ಇಡಿಸುತ್ತಿದ್ದಾರೆ.

ಸ್ಪೆಷಲ್ ಡೇ ಆಗಿಸುವ ಬಯಕೆ

ಈ ಕುರಿತಾಗಿ ಸ್ಮಿತಾ ಹೇಳುತ್ತಾರೆ, “ನಾನು ನನ್ನ ಮದುವೆಯ ದಿನವನ್ನು ಸ್ಪೆಷಲ್ ಡೇ ಆಗಿಸಬಯಸುತ್ತೇನೆ. ನನಗೆ ಅನಿಸಿದ್ದು, ನಾವು ನಮ್ಮ ಮದುವೆಯ ವಾರ್ಷಿಕೋತ್ಸವವನ್ನು ಸ್ಮರಣೀಯವಾಗಿಸಬೇಕು ಎಂದರೆ, ಜೀವನವಿಡೀ ಅದನ್ನು ನೆನೆಯಲು ವ್ಯಾಲೆಂಟೈನ್‌ ಡೇನಂದೇ ಮದುವೆ ಆಗುವುದು ಸರಿ ಎನಿಸಿತು. “ಇದರಿಂದ ಪ್ರತಿ ವರ್ಷ ನಮ್ಮ ಮದುವೆಯ ದಿನವನ್ನು ನಾವು ಮಾತ್ರ ಸ್ಪೆಷಲ್ ಆಗಿ ಆಚರಿಸುವುದಲ್ಲ, ಇಡೀ ವಿಶ್ವವೇ ಅದನ್ನು ಕೊಂಡಾಡುತ್ತಿದೆ ಎಂದುಕೊಳ್ಳಬಹುದು. ಮದುವೆಯ ಯಶಸ್ಸಿನಲ್ಲಿ ಪ್ರೇಮ, ರೊಮಾನ್ಸ್ ನ ಸಿಂಹಪಾಲು ಅಡಗಿದೆ. ನಾವು ಯಾವಾಗ ವೆಡ್ಡಿಂಗ್‌ ಡೇ ಸೆಲೆಬ್ರೇಟ್‌ ಮಾಡಿಕೊಂಡರೂ, ಅದು ಸಂಥಿಂಗ್‌ ಸ್ಪೆಷಲ್ ಎಂದೇ ಅನಿಸುತ್ತಿರುತ್ತದೆ.”

ಪ್ರೋತ್ಸಾಹಿಸುವ ಮಾರುಕಟ್ಟೆ

ಕಳೆದ ಕೆಲವು ವರ್ಷಗಳಿಂದ ವ್ಯಾಲೆಂಟೈನ್‌ ಡೇ ದಿನ, ಪ್ರೇಮವನ್ನು ವ್ಯಕ್ತಪಡಿಸಲು ನಮ್ಮ ಮಾರುಕಟ್ಟೆಯಲ್ಲಿ ಬಗೆಬಗೆಯ ಉತ್ಪನ್ನಗಳು ಲಭ್ಯವಿವೆ, ಇದು ಯುವ ಜೋಡಿಗಳನ್ನು ಇನ್ನಷ್ಟು ಮತ್ತಷ್ಟು ರೊಮ್ಯಾಂಟಿಕ್‌ಗೊಳಿಸಲು ಪೂರಕ. ಹೋಟೆಲ್‌ನಲ್ಲಿ ಉಳಿಯಲು, ಹೊರಗೆ ತಿರುಗಾಡಲು, ಊಟ ತಿಂಡಿಗೆಂದು ಹೊರಟರೆ ಅಲ್ಲಿನ ಅಲಂಕಾರ ಬಹಳ ಡಿಫರೆಂಟ್‌ ಎನಿಸುತ್ತದೆ. ಇದರಿಂದ ಸಹಜವಾಗಿಯೇ ರೊಮ್ಯಾಂಟಿಕ್‌ ಮೂಡ್‌ ಹೆಚ್ಚುತ್ತದೆ.

ಪತ್ರಿಕೆಗಳು, ಪೇಪರ್‌, ಟಿ.ವಿ.ಯೂ ಸೇರಿ ಎಲ್ಲೆಡೆ ಕೇವಲ ಹಾಗೂ ಕೇವಲ ಪ್ರೇಮ, ರೊಮಾನ್ಸ್ ನ ಪರಿಸರ ಇರುತ್ತದೆ. ಎಲ್ಲಕ್ಕೂ ಸ್ಪೆಷಲ್ ವಿಷಯ ಎಂದರೆ ಜ್ಯೂವೆಲರಿಯಿಂದ ಡ್ರೆಸೆಸ್‌ವರೆಗೆ ಏನೋ ಕೊಳ್ಳಲು ಹೋಗಿ, ವ್ಯಾಲೆಂಟೈನ್‌ ಡೇ ಆಫರ್‌ಗಳ ಸುರಿಮಳೆಯೇ ಇರುತ್ತದೆ. ಒಟ್ಟಾರೆ ಹೇಳಬೇಕೆಂದರೆ ಎಲ್ಲೆಲ್ಲೂ ಒಲವಿನ ವಾತಾವರಣ!

ವ್ಯಾಲೆಂಟೈನ್ಡೇ ಆಯ್ತು ಮ್ಯಾರೇಜ್ಡೇ

ವ್ಯಾಲೆಂಟೈನ್‌ ಡೇನಂದು ತಮ್ಮ ಏಳನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಅರ್ಪಿತಾ ಶ್ರೀವತ್ಸ ಹೇಳುತ್ತಾರೆ, “ವ್ಯಾಲೆಂಟೈನ್‌ ಡೇನಂದು ಮದುವೆಯಾಗಿ ನಾವು ನಮ್ಮ ಒಲವಿನ ಬಾಂಧ್ಯವವನ್ನು ಮದುವೆಯ ಬಾಂಧವ್ಯವಾಗಿ ಮಾಡಿಕೊಂಡೆ. “ನಮಗೆ ಈ ದಿನ ವೆಡ್ಡಿಂಗ್‌ ಡೇ ಎಂದು ಹೇಳಿಕೊಳ್ಳಲು ಬಹಳ ಸಂಭ್ರಮ ಎನಿಸುತ್ತದೆ. ಪ್ರೇಮವನ್ನು ವಿವಾಹದ ಬಾಂಧವ್ಯದಲ್ಲಿ ಬೆಸೆಯಲು ಇದಕ್ಕಿಂತ ಉತ್ತಮ ಮುಹೂರ್ತ ಬೇಕೇ? ನಾವು ಮಾತ್ರವಲ್ಲ, ಇಡೀ ವಿಶ್ವವೇ ಈ ದಿನವನ್ನು ಪ್ರೇಮೋತ್ಸವದ ಹೆಸರಿನಲ್ಲಿ ಆಚರಿಸುತ್ತದೆ!”

ಲ್ಯಾಕ್ಮೆ ಬ್ಯೂಟಿ ಸೆಲೂನ್‌ನ ಸಂಚಾಲಕಿ ರಿಚಾ ಶರ್ಮ ಹೇಳುತ್ತಾರೆ, “ಮದುವೆಗಾಗಿ ನವ ವಧುವನ್ನು ಸಿಂಗರಿಸಬೇಕೆಂದು ಬೇರೆ ಮಾಮೂಲಿ ದಿನಗಳಿಗಿಂತ ನಮಗೆ ಈ ವ್ಯಾಲೆಂಟೈನ್‌ ದಿನದಂದೇ ಹೆಚ್ಚಿನ ಬೇಡಿಕೆ ಬರುತ್ತದೆ. ಕಳೆದ ಕೆಲವು ವರ್ಷಗಳಿಂದ ಈ ಪದ್ಧತಿ ಪ್ರತಿ ಸಲ ಹೆಚ್ಚುತ್ತಲೇ ಇದೆ. ವಿವಾಹಿತ ಜೋಡಿಗಳು ಸಹಾ ವ್ಯಾಲೆಂಟೈನ್‌ ಡೇ ದಿನ ಥೀಮ್ ಪಾರ್ಟಿಗಳನ್ನು ಏರ್ಪಡಿಸುತ್ತಾರೆ. ಹಾಗಾಗಿ ಈ ದಿನ ಮೇಕಪ್‌ ಮಾಡಿಸಿಕೊಳ್ಳಲು ಹೆಚ್ಚಿನ ಡಿಮ್ಯಾಂಡ್‌ ಇರುತ್ತದೆ.” ನಮ್ಮ ಭಾರತೀಯ ಸಮಾಜದಲ್ಲಿ ಈಗ ಹಿಂದಿನ ಎಷ್ಟೋ ಪದ್ಧತಿಗಳು ಬದಲಾಗುತ್ತಿವೆ. ಜನ ತಮ್ಮ ಆಸೆಯಂತೆ ಬದುಕಲು ಬಯಸುತ್ತಿದ್ದಾರೆ. ಅವರು ತಮ್ಮ ಜೀವನದಲ್ಲಿ ಯಾವುದೇ ರೀತಿಯಲ್ಲೂ ಧರ್ಮ ಅಥವಾ ಆಡಂಬರಕ್ಕೆ ಮಹತ್ವ ಕೊಡುವುದಿಲ್ಲ.

ಆಡಂಬರಕ್ಕಿಲ್ಲ ಮಹತ್ನ

ವ್ಯಾಲೆಂಟೈನ್‌ ಡೇಯನ್ನು ಪಾಶ್ಚಿಮಾತ್ಯರ ಸಂಸ್ಕೃತಿ ಎಂದು ಅದನ್ನು ವಿರೋಧಿಸುವ ಪರಿ ನಿಜಕ್ಕೂ ತಪ್ಪು. ವ್ಯಾಲೆಂಟೈನ್ ಡೇಯನ್ನೇ ತಮ್ಮ ವೆಡ್ಡಿಂಗ್‌ ಡೇ ಮಾಡಿಕೊಂಡು ಜನ ಅದನ್ನು ಪ್ರಮಾಣಿಸಿದ್ದಾರೆ. ಈ ಆಧುನಿಕ ಯುವ ಜೋಡಿಗಳು ಅಂಥ ಕಂದಾಚಾರಿಗಳಿಗೆ ಸರಿಯಾದ ಎದುರು ಜವಾಬು ಕೊಟ್ಟಿದ್ದಾರೆ. ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕಬೇಕಾದುದು ಅನಿವಾರ್ಯ. ಹಾಗಿರುವಾಗ ಯಾವ ದಿನ ಇಡೀ ವಿಶ್ವವೇ ಸಂಭ್ರಮಿಸುತ್ತದೋ, ನಾವು ಅದರಲ್ಲಿ ಬೆರೆತುಹೋಗಬೇಕು. ನಾವು ಧರ್ಮದ ಆಡಂಬರವನ್ನು ಇದರಿಂದ ದೂರ ಇಡಬೇಕು. ಆಗ ಮಾತ್ರ ಎಲ್ಲಾ ಬಗೆಯ ಜನರೂ ಒಂದೆಡೆ ಕಲೆತು ಸಂತೋಷ ಹಂಚಿಕೊಳ್ಳಬಹುದು.

ಕೆಲವು ವರ್ಷಗಳ ಹಿಂದೆ ಈ ವ್ಯಾಲೆಂಟೈನ್‌ ಡೇ ದಿನದಂದು ಯುವ ಜೋಡಿಗಳು ರಸ್ತೆ, ಪಾರ್ಕ್‌, ಸಿನಿಮಾ ಥಿಯೇಟರ್‌ ಅಥವಾ ಸಾರ್ವಜನಿಕ  ಸ್ಥಳಗಳಲ್ಲಿ  ಒಟ್ಟಾಗಿ ಕಾಣಿಸಿ ಕೊಳ್ಳುವುದೇ ದುಸ್ತರವಾಗಿತ್ತು. ಕೆಲವು ಕಂದಾಚಾರಿಗಳಂತೂ ಈ ದಿನ ಗ್ರೀಟಿಂಗ್‌ಕಾರ್ಡ್ಸ್ ಸೇವ್ ‌ಆಗಲಿಕ್ಕೂ ಬಿಡುತ್ತಿರಲಿಲ್ಲ. ಸಮಾಜವನ್ನು ಸುರಕ್ಷಿತವಾಗಿರಿಸಲು ಪೊಲೀಸ್‌ ಹಾಗೂ ಆಡಳಿತ ವ್ಯವಸ್ಥೆ ಬೇರೆ ಬೇರೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಸಮಾಜ ಈಗ ಕಂದಾಚಾರಿಗಳ ವಿಚಾರವನ್ನು ಗಾಳಿಗೆ ತೂರಿ, ಈ ದಿನವನ್ನೇ ಈಗ ವೆಡ್ಡಿಂಗ್‌ ಡೇ ಆಗಿಸಿ, ಸಾಮಾಜಿಕ ಸ್ವೀಕೃತಿ ನೀಡಿದೆ. ಈ ಕುರಿತಾಗಿ ಅನಿತಾ ಪ್ರಸಾದ್‌ ಹೇಳುತ್ತಾರೆ, “ಎಷ್ಟೋ ದೇಶಗಳಲ್ಲಿ ನಮ್ಮ ಈ ಸಂಕುಚಿತ ಮನೋಭಾವವನ್ನು ನೋಡಿ ಆಡಿಕೊಂಡು ನಗುತ್ತಾರೆ. ವ್ಯಾಲೆಂಟೈನ್‌ ಡೇಯನ್ನು ಕ್ರಮೇಣವಾಗಿ ಒಪ್ಪಿಕೊಂಡು ನಮ್ಮ ಸಮಾಜ ಅದಕ್ಕೆ ಒಂದು ಹೊಸ ತಿರುವು ನೀಡಿದೆ.

“ಇದರಿಂದ ಸ್ಪಷ್ಟವಾಗುವುದು ಎಂದರೆ ನಮ್ಮ ದೇಶ ಹಾಗೂ ನಮ್ಮವರ ವಿಚಾರಲಹರಿ ಹಳೆಯ ಕಂದಾಚಾರದ ಕಟ್ಟುಪಾಡುಗಳಿಗೆ ಒಳಪಟ್ಟಿಲ್ಲ ಎಂಬುದು. ವ್ಯಾಲೆಂಟೈನ್‌ ಡೇಯನ್ನು ನಮ್ಮ ಸಮಾಜ ಪ್ರೇಮದ ಚೌಕಟ್ಟಿಗಷ್ಟೇ ಸೀಮಿತಗೊಳಿಸದೆ, ಪ್ರೀತಿಯ ದಿನ ಹಾಗೂ ಕುಟುಂಬದ ದಿನ ಎಂಬಂತೆ ಮಾಡಿದ್ದಾರೆ. ಈ ಮೂಲಕ ನಾವು ಹಳೆಯ ಕಂದಾಚಾರದ ಗೊಡ್ಡುತನಕ್ಕೆ ಸಡ್ಡುಹೊಡೆದು ಮುಂದುವರಿದಿದ್ದೇವೆ ಎಂದು ತೋರಿಸುತ್ತದೆ.”

ಕೌಟುಂಬಿಕ ದಿನವಾಗಿ ಐಡೆಂಟಿಟಿ

ಸಮಾಜಶಾಸ್ತ್ರಜ್ಞೆ ಡಾ. ದೀಪಾ ಹೇಳುತ್ತಾರೆ, “ಮದುವೆ ಹಾಗೂ ಪ್ರೇಮದ ನಂಟು ಪರಸ್ಪರ ಪೂರಕ. ಹೀಗಿರುವಾಗ ಪ್ರೇಮವನ್ನು ವ್ಯಾಖ್ಯಾನಿಸುವ ದಿನವನ್ನು ವೆಡ್ಡಿಂಗ್‌ ಡೇ ಆಗಿಸಿ, ಇಂದಿನ ಯುವ ಜೋಡಿಗಳು ಶುರು ಮಾಡಿರು ಹೊಸ  ಪದ್ಧತಿ ಬಹು ಸಾರ್ಥಕ ಎನಿಸಿದೆ. ನಮ್ಮ ಸಮಾಜ ಇದನ್ನು ಸ್ವೀಕರಿಸುತ್ತಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚು ಜನಪ್ರಿಯಗೊಳ್ಳಲಿದೆ. ಈ ಮೂಲಕ ಹಳೆ ಗೊಡ್ಡು ಕಂದಾಚಾರಗಳಿಗೆ ಧಿಕ್ಕಾರ ಎಂದು ಆಧುನಿಕ ಯುವಜನತೆ ಕೂಗಿ ಸಾರಿದೆ.” ವ್ಯಾಲೆಂಟೈನ್‌ ಡೇಯನ್ನು ಕೇವಲ ಪ್ರೇಮಕ್ಕಷ್ಟೇ ಸೀಮಿತಗೊಳಿಸಿ ಅದನ್ನು ಪ್ರಚಾರಗೊಳಿಸಲಾಗಿತ್ತು. ಅದರಿಂದ ಯುವಜನತೆಗೆ ಒಂದು ಹೊಸ ಸಂದೇಶ ಸಿಕ್ಕಿತು. ಹುಡುಗಿಯರನ್ನು ಪ್ರಭಾವಿತಗೊಳಿಸಲು ಇದು ಸುಲಭ ಮಾಧ್ಯಮ ಎಂದು ಭಾವಿಸುವಂತಾಯಿತು. ಆದರೆ ಈಗ ಇದನ್ನು ಕೌಟುಂಬಿಕ ದಿನವಾಗಿ ಪರಿಗಣಿಸಲಾಗಿದೆ. ವ್ಯಾಲೆಂಟೈನ್‌ ಡೇ ದಿನ ಮದುವೆಯಾಗಿ, ಇಂದಿನ ಯುವಜನತೆ ಈ ದಿನವನ್ನು ಕೌಟುಂಬಿಕ ದಿನವನ್ನಾಗಿ ಮಾನ್ಯಗೊಳಿಸಿದ್ದಾರೆ. ಇದರಿಂದ ಸಮಾಜದಲ್ಲಿ ವ್ಯಾಲೆಂಟೈನ್‌ ಡೇಗೆ ಹೊಸ ಐಡೆಂಟಿಟಿ ಸಿಕ್ಕಿದೆ. ಇದನ್ನು ವಿರೋಧಿಸುತ್ತಿದ್ದವರಿಗೂ ಇದು ಕ್ರಮೇಣ ತಿಳಿಯತೊಡಗಿದೆ. ಇದೇ ಕಾರಣವಾಗಿ ವರ್ಷ ವರ್ಷ ಕಳೆಯುತ್ತಿದ್ದಂತೆ ಇದನ್ನು ವಿರೋಧಿಸುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಆದರೂ ಅಲ್ಲಿ ಇಲ್ಲಿ ಕಂಡುಬರುವ ವಿರೋಧದ ಪರಿ, ಕೇವಲ ಪ್ರತೀಕಾರಾತ್ಮಕ ವಿರೋಧ ವ್ಯಕ್ತಪಡಿಸಲೆಂದೇ ವಿರೋಧ ಪ್ರದರ್ಶನ ನಡೆಸುವಂತಿದೆ.

ಎಸ್‌. ಶೈಲಜಾ.

ವ್ಯಾಲೆಂಟೈನ್ಡೇಯ ರೋಚಕ ಸಂಗತಿಗಳು

ನೀವು ಸಿಂಗಲ್ ಆಗಿದ್ದು, ವ್ಯಾಲೆಂಟೈನ್‌ ಡೇ ಆಚರಿಸಲಾಗುತ್ತಿಲ್ಲ ಎಂಬ ದುಃಖವಿದ್ದರೆ, ಚಿಂತಿಸಬೇಡಿ. ಇದನ್ನೇ ನೀವು ಸ್ಯಾಡ್‌ ಡೇ ಅಥವಾ ಸಿಂಗಲ್ ಅವೇರ್‌ನೆಸ್‌ ಡೇ ಎಂದೂ ಆಚರಿಸಬಹುದು.

ನೀವೇನಾದರೂ ಈ ದಿನ ವಿದೇಶ ಪ್ರವಾಸ ಕೈಗೊಳ್ಳೋಣ ಎಂದುಕೊಂಡಿದ್ದರೆ, ಫಿನ್‌ ಲ್ಯಾಂಡ್‌ನ್ನೇ ಇದಕ್ಕಾಗಿ ಆರಿಸಿ. ಏಕೆಂದರೆ 14ನೇ ಫೆಬ್ರವರಿಯನ್ನು ಇಲ್ಲಿ `ಫ್ರೆಂಡ್ಸ್ ಡೇ’ ಎಂದೇ ಆಚರಿಸುತ್ತಾರೆ, ಏಕೆಂದರೆ ಅಲ್ಲಿ ಎಲ್ಲಾ ಸಂಬಂಧಕ್ಕಿತಂಲೂ ಸ್ನೇಹವೇ ದೊಡ್ಡದೆಂದು ಭಾವಿಸಲಾಗುತ್ತದೆ.

ಯೂರೋಪಿನ ದೇಶವಾದ ಇಸ್ಟೋವಿಯಾದಲ್ಲಿ ಈ ದಿನಕ್ಕೆಂದೇ ವಿಶೇಷ `ಲವ್ ಬಸ್‌’ ಓಡಿಸಲಾಗುತ್ತದೆ. ಇದಕ್ಕೆ ಹತ್ತು ಸಿಂಗಲ್ಸ್ ಇಡೀ ದಿನ ಸುತ್ತಾಡಿ, ತಮಗೆ ಸೂಕ್ತ ಸಂಗಾತಿ ಆರಿಸಿಕೊಳ್ಳಲಿ ಎಂಬುದು ಉದ್ದೇಶ.

ಈ ದಿನ ಚಾಕಲೇಟ್‌ ಪ್ರಿಯರಿಗೂ ಬಹಳ ವಿಶೇಷ. ಏಕೆಂದರೆ 14.02.1800ರಂದು ಕ್ಯಾಡ್‌ಬರಿಯ ಸಂಸ್ಥಾಪಕ ರಿಚರ್ಡ್‌ ಕ್ಯಾಡ್‌ಬರಿ,  ಮೊಟ್ಟ ಮೊದಲ ಕ್ಯಾಡ್‌ಬರಿ ಚಾಕಲೇಟ್‌ ಬಾಕ್ಸ್ ಲಾಂಚ್‌ ಮಾಡಿದ್ದರು.

ಸಮೀಕ್ಷೆಗಳ ಪ್ರಕಾರ, 73% ಗಂಡಸರು ತಮ್ಮ ಸಂಗಾತಿಗಾಗಿ ರೆಡ್‌ ರೋಸ್‌ ಖರೀದಿಸುತ್ತಾರಂತೆ. ಅದೇ ತರಹ 27% ಮಹಿಳೆಯರು ಸಂಗಾತಿಗಾಗಿ ರೆಡ್‌ ರೋಸ್‌ ಕೊಳ್ಳುತ್ತಾರೆ. ಆದರೆ ಉಡುಗೊರೆ ನೀಡುವುದರಲ್ಲಿ ಹೆಂಗಸರದೇ ಮೇಲುಗೈ!

ಪಾಶ್ಚಾತ್ಯ ದೇಶಗಳ ಕೆಲವು ಹೈಸ್ಕೂಲ್ ‌ಕಾಲೇಜುಗಳಲ್ಲಿ ವ್ಯಾಲೆಂಟೈನ್‌ ಡೇಗೆ ಸಂಬಂಧಿಸಿದ ಶಿಕ್ಷಣ ಸಹ ನೀಡುತ್ತಾರೆ. ಯೂನಿವರ್ಸಿಟಿ ಆಫ್‌ ಮೇರಿ ಲ್ಯಾಂಡ್‌ ಇದಕ್ಕಾಗಿ ಜನಪ್ರಿಯ. ಇದಕ್ಕಾಗಿಯೇ ಇಲ್ಲಿ ಒಂದು ಅಕ್ಯಾಡೆಮಿಕ್‌ ತಂಡವನ್ನು ಸಂಘಟಿಸಲಾಗಿದೆ.

ಹಾಲ್ ಮಾರ್ಕ್‌ ಹೆಸರು ನಿಮಗೆಲ್ಲಾ ಗೊತ್ತೇ ಇದೆ. ಗ್ರೀಟಿಂಗ್‌ ಕಾರ್ಡ್ಸ್ ತಯಾರಿಸುವ ಈ ಕಂಪನಿ, ತನ್ನ ಮೊದಲ ಕಾರ್ಡ್‌ನ್ನು 14.02.1913 ರಂದು ಲಾಂಚ್‌ ಮಾಡಿತು.

ಜಪಾನಿನಲ್ಲಿ ಈ ದಿನ ಹೆಂಗಸರು ತಮ್ಮ ಸಂಗಾತಿಗಾಗಿ ಚಾಕಲೇಟ್ಸ್, ಗಿಫ್ಟ್ ಕೊಡುತ್ತಾರೆ. ಇದಕ್ಕೆ ಬದಲಾಗಿ ಗಂಡಸರು ಮಾರ್ಚ್‌ರಂದು ತಮ್ಮ ಸಂಗಾತಿಗಳಿಗೆ ಅನೇಕ ಉಡುಗೊರೆ ನೀಡುತ್ತಾರೆ. ಈ ದಿನವನ್ನು `ವೈಟ್‌ ಡೇ’ ಎನ್ನುತ್ತಾರೆ.

ಇಟಲಿಯ ವಿರೋನಾ ನಗರದ ಪ್ರಸ್ತಾಪವನ್ನು ಶೇಕ್ಸ್ ಪಿಯರ್‌ ತನ್ನ `ರೊಮಿಯೋ ಜೂಲಿಯೆಟ್‌’ ಕೃತಿಯಲ್ಲಿ ಮಾಡಿದ್ದಾನೆ. ಎಷ್ಟೊ ದಶಕಗಳಿಂದ ಆ ಊರಿನಲ್ಲಿ ಈ ದಿನ, ಜೂಲಿಯೆಟ್‌ ಹೆಸರಿನಲ್ಲಿ ಸಾವಿರಾರು ಲವ್ ಲೆಟರ್‌ಗಳು ಬರುತ್ತವಂತೆ!

ಫ್ರಾನ್ಸ್ ನಲ್ಲಿ ಈ ದಿನ ಹೆಂಗಸರಿಗೆ ಏನು ಬೇಕಾದರೂ ಮಾಡಲಿಕ್ಕೆ ಹಕ್ಕಿದೆ. ಬಯಸಿದರೆ ಅವರು ತಮ್ಮ ಪತಿಗೆ ಮೋಸ ಕೂಡ ಮಾಡಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ