ಯಾರು ಈ ವ್ಯಾಲೆಂಟೈನ್ ಡೇಯನ್ನು ಕೇವಲ ಪ್ರೇಮದ ದೃಷ್ಟಿಯಿಂದ ಮಾತ್ರ ಅಳೆಯುತ್ತಾರೋ, ಅವರಿಗೆ ಅದರ ಕಾನ್‌ಸೆಪ್ಟ್ ಅರ್ಥ ಆಗಿರುವುದಿಲ್ಲ. ವ್ಯಾಲೆಂಟೈನ್ ಡೇ ಕೇವಲ ಪ್ರೇಮಕ್ಕೆ ಮಾತ್ರವಲ್ಲದೆ, ಮದುವೆಗೂ ಸಮರ್ಪಿತ. ಇಟಲಿಯ ರೋಮ್ ನಗರದಲ್ಲಿ 3ನೇ ಶತಮಾನದ ಕಾಲಘಟ್ಟದಲ್ಲಿ, ಅಲ್ಲಿನ ರಾಜ ಕ್ಲಾಡಿಯಸ್ ತನ್ನ ಅಧಿಕಾರಾವಧಿಯಲ್ಲಿ ಸದಾ, ಮದುವೆ ಆಗುವುದರಿಂದ ಗಂಡಸರ ಬುದ್ಧಿ ಮತ್ತು ಶಕ್ತಿ ಎರಡೂ ಕ್ಷೀಣಿಸುತ್ತದೆ ಎಂದೇ ಭಾವಿಸಿದ್ದ. ಆದ್ದರಿಂದ ಆತ ತನ್ನ ಸೇನೆಯ ಅಧಿಕಾರಿ, ಸಿಬ್ಬಂದಿಗೆ ಮದುವೆ ಆಗುವಂತಿಲ್ಲ ಎಂದು ಸುಗ್ರೀವಾಜ್ಞೆ ಹೊರಡಿಸಿದ್ದ. ಆಗ ಸಂತ ವ್ಯಾಲೆಂಟೈನ್ ಇದನ್ನು ವಿರೋಧಿಸಿದರು ಹಾಗೂ ಅಂಥ ಸೈನಿಕರು ಮದುವೆ ಆಗಬೇಕೆಂದು ಸಲಹೆ ನೀಡುತ್ತಾ, ಅದಕ್ಕಾಗಿ ಸಹಕರಿಸುತ್ತಿದ್ದರು. ಇದರಿಂದ ಕೋಪಗೊಂಡ ರಾಜ, 14ನೇ ಫೆಬ್ರವರಿ 269ರಂದು ಅವರಿಗೆ ಮರಣದಂಡನೆ ವಿಧಿಸಿದ. ಅಂದಿನಿಂದ ವಿಶ್ವಾದ್ಯಂತ ಆ ಪ್ರೇಮದೂತನ ಹೆಸರಿನಲ್ಲಿ ಈ `ಪ್ರೇಮಿಗಳ ದಿನ' ಅಥವಾ `ವ್ಯಾಲೆಂಟೈನ್ ಡೇ' ಆಚರಿಸುತ್ತಿದ್ದಾರೆ.
ವ್ಯಾಲೆಂಟೈನ್ ಡೇ ಮತ್ತು ಮದುವೆಗೆ ಇರುವ ಪವಿತ್ರ ಸಂಬಂಧದ ಅರ್ಥ ತಿಳಿದುಕೊಂಡು, ಈಗ ನಮ್ಮ ದೇಶದಲ್ಲೂ ಎಷ್ಟೋ ಯುವ ಜೋಡಿಗಳು ಆ ದಿನದಂದೇ ತಮ್ಮ ಮದುವೆ ಗೊತ್ತುಪಡಿಸಿಕೊಂಡು ಅಥವಾ ತಮ್ಮ ಮ್ಯಾರೇಜ್ ಡೇಯನ್ನು ಆ ದಿನದಂದೇ ಪ್ರತಿ ವರ್ಷ ಆಚರಿಸುವ ಪದ್ಧತಿ ಬೆಳೆಸಿಕೊಂಡು ಬಂದಿದ್ದಾರೆ. ಇದರಿಂದ ವ್ಯಾಲೆಂಟೈನ್ ಡೇ ಎಂದರೆ ಏನೋ ಅನೈತಿಕ ದಿನಾಚರಣೆ ಎಂಬಂತೆ ಕೆಂಡಕಾರುವ ಕಂದಾಚಾರಿಗಳಿಗೆ ತಿರುಗೇಟು ನೀಡಿದಂತಿದೆ.
ಈ ಕಂದಾಚಾರಿಗಳು ವ್ಯಾಲೆಂಟೈನ್ ಡೇಯನ್ನು ಎಷ್ಟೇ ವಿರೋಧಿಸಲಿ, ಪ್ರೇಮಿಸುವವರ ಪಾಲಿಗಂತೂ ಈ ದಿನ ಮಹತ್ವದ್ದಾಗಿದೆ. 2016ರಲ್ಲಿ ನಡೆಯಲಿರುವ ಮದುವೆಯ ದಿನಾಂಕ ಗಮನಿಸಿದರೆ ಎಲ್ಲಕ್ಕೂ ಅಧಿಕ ಮದುವೆಗಳು ವ್ಯಾಲೆಂಟೈನ್ ಡೇನಂದೇ ನಡೆಯಲಿವೆ. ಹೋಟೆಲ್, ವೆಡ್ಡಿಂಗ್ ಹಾಲ್, ಬ್ಯೂಟಿಪಾರ್ಲರ್, ಮ್ಯಾರೇಜ್ ಗಾರ್ಡನ್‌ಗಳ ಬುಕ್ಕಿಂಗ್ ಎಲ್ಲವೂ ಅತ್ಯಧಿಕವಾಗಿ ಈ ದಿನದಂದೇ ಡಿಮ್ಯಾಂಡ್ ಗಳಿಸಿವೆ. ಇದಕ್ಕೆ ಕಾರಣ ಇಷ್ಟೆ, ನಾವು ಸಾಮಾನ್ಯ ವ್ಯವಹಾರಗಳಲ್ಲಿ ಉದಾರರಾಗುತ್ತಾ ಇದ್ದೇವೆ. ವಿಶ್ವದ ಬಹಳಷ್ಟು ಜನ ವಿಜೃಂಭಣೆಯಿಂದ ಆಚರಿಸುವ ಈ ಪ್ರೇಮೋತ್ಸವವನ್ನು ನಾವು ಆಚರಿಸುತ್ತಿದ್ದೇವೆ. ಇದರಿಂದ ಸ್ಪಷ್ಟ ತಿಳಿಯುವುದೆಂದರೆ ಈ ಪ್ರೇಮೋತ್ಸವದ ಹಬ್ಬ ಯಾವುದೇ ಧರ್ಮಕ್ಕೆ ಸೀಮಿತವಲ್ಲ ಎಂಬುದು. ವ್ಯಾಲೆಂಟೈನ್ ಡೇ, ನ್ಯೂ ಇಯರ್‌ಇತ್ಯಾದಿಗಳನ್ನು ವಿಶ್ವದ ಬಹುತೇಕ ಜನ ಒಟ್ಟಾಗಿ ಕೂಡಿ ಆಚರಿಸುತ್ತಾರೆ. ಸಾಧಾರಣ ದಿನಗಳನ್ನು ಬದಿಗೊತ್ತಿ, ಇಂದಿನ ಯುವ ಪ್ರೇಮಿಗಳು ವ್ಯಾಲೆಂಟೈನ್ ಡೇಯಂದೇ ತಮ್ಮ ಮದುವೆಯ ಮುಹೂರ್ತ ಇಡಿಸುತ್ತಿದ್ದಾರೆ.
ಸ್ಪೆಷಲ್ ಡೇ ಆಗಿಸುವ ಬಯಕೆ
ಈ ಕುರಿತಾಗಿ ಸ್ಮಿತಾ ಹೇಳುತ್ತಾರೆ, ``ನಾನು ನನ್ನ ಮದುವೆಯ ದಿನವನ್ನು ಸ್ಪೆಷಲ್ ಡೇ ಆಗಿಸಬಯಸುತ್ತೇನೆ. ನನಗೆ ಅನಿಸಿದ್ದು, ನಾವು ನಮ್ಮ ಮದುವೆಯ ವಾರ್ಷಿಕೋತ್ಸವವನ್ನು ಸ್ಮರಣೀಯವಾಗಿಸಬೇಕು ಎಂದರೆ, ಜೀವನವಿಡೀ ಅದನ್ನು ನೆನೆಯಲು ವ್ಯಾಲೆಂಟೈನ್ ಡೇನಂದೇ ಮದುವೆ ಆಗುವುದು ಸರಿ ಎನಿಸಿತು. ``ಇದರಿಂದ ಪ್ರತಿ ವರ್ಷ ನಮ್ಮ ಮದುವೆಯ ದಿನವನ್ನು ನಾವು ಮಾತ್ರ ಸ್ಪೆಷಲ್ ಆಗಿ ಆಚರಿಸುವುದಲ್ಲ, ಇಡೀ ವಿಶ್ವವೇ ಅದನ್ನು ಕೊಂಡಾಡುತ್ತಿದೆ ಎಂದುಕೊಳ್ಳಬಹುದು. ಮದುವೆಯ ಯಶಸ್ಸಿನಲ್ಲಿ ಪ್ರೇಮ, ರೊಮಾನ್ಸ್ ನ ಸಿಂಹಪಾಲು ಅಡಗಿದೆ. ನಾವು ಯಾವಾಗ ವೆಡ್ಡಿಂಗ್ ಡೇ ಸೆಲೆಬ್ರೇಟ್ ಮಾಡಿಕೊಂಡರೂ, ಅದು ಸಂಥಿಂಗ್ ಸ್ಪೆಷಲ್ ಎಂದೇ ಅನಿಸುತ್ತಿರುತ್ತದೆ.''