ಫೆಂಟಾಸ್ಟಿಕ್ ಫಿಶ್ ಫ್ರೈ
ಸಾಮಗ್ರಿ : 400 ಗ್ರಾಂ ಸಾಲ್ಮನ್ ಮೀನು, 2 ಮೊಟ್ಟೆ, 2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಒಂದಿಷ್ಟು ಅಕ್ಕಿಹಿಟ್ಟು, ಕಡಲೆಹಿಟ್ಟು, ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಜೀರಿಗೆ ಪುಡಿ, ಕಿಚನ್‌ಕಿಂಗ್ ಮಸಾಲ, ಓಮ, ಕಸೂರಿಮೇಥಿ, ನಿಂಬೆರಸ, ಕರಿಯಲು ರೀಫೈಂಡ್ ಎಣ್ಣೆ.
ವಿಧಾನ : ಮೀನನ್ನು ಶುಚಿಗೊಳಿಸಿ ಉದ್ದದ ಪೀಸ್‌ಗಳಾಗಿ ಕತ್ತರಿಸಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಗೆ ಉಪ್ಪು, ಖಾರ ಸೇರಿಸಿ ಅದರಲ್ಲಿ ಈ ಪೀಸುಗಳನ್ನು ಮ್ಯಾರಿನೇಟ್‌ಗೊಳಿಸಿ. ನಂತರ ಒಂದು ಬಟ್ಟಲಿಗೆ 2 ಚಮಚ ಎಣ್ಣೆ, ಬೀಟ್ ಮಾಡಿದ ಮೊಟ್ಟೆ ಹಾಗೂ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಂಡು ಬೋಂಡಹಿಟ್ಟಿನ ಹದಕ್ಕೆ ತೆಳುವಾಗದಂತೆ ಕಲಸಿಡಿ. ಅದರಲ್ಲಿ ಫಿಶ್ ಪೀಸ್‌ಗಳನ್ನು ಒಂದೊಂದಾಗಿ ಅದ್ದಿ, ಕಾದ ಎಣ್ಣೆಯಲ್ಲಿ ಕರಿಯಿರಿ. ನಂತರ ಚಿತ್ರದಲ್ಲಿರುವಂತೆ ಸಲಾಡ್ ಜೊತೆ ಅಲಂಕರಿಸಿ ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.
ಚಿಲಿ ಗಾರ್ಲಿಕ್ ಫಿಶ್
ಸಾಮಗ್ರಿ : 1 ಇಂಚು ಉದ್ದಕ್ಕೆ ಕತ್ತರಿಸಿದ 500 ಗ್ರಾಂ ಬೋನ್ ಲೆಸ್ ಫಿಶ್, ಕರಿಯಲು ಎಣ್ಣೆ, ಒಂದಿಷ್ಟು ಹೆಚ್ಚಿದ ಈರುಳ್ಳಿ, ಹಸಿ ಮೆಣಸು, ಶುಂಠಿ, ಕೆಂಪು ಹಸಿರು ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಡಾರ್ಕ್ ಸೋಯಾ ಸಾಸ್, ಆಯೆಸ್ಟರ್ ಸಾಸ್, ಸಕ್ಕರೆ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಮೆಣಸು.
ಮ್ಯಾರಿನೇಡ್ : 1 ನಿಂಬೆಯ ರಸ, ಅರ್ಧರ್ಧ ಚಮಚ ಉಪ್ಪು ಮೆಣಸು.
ಬ್ಯಾಟರ್ : ಅರ್ಧ ಕಪ್ ಕಾರ್ನ್‌ಫ್ಲೋರ್, 1 ಮೊಟ್ಟೆ, ತುಸು ಉಪ್ಪು.
ಕಾರ್ನ್‌ಸ್ಟಾರ್ಚ್ ಪೇಸ್ಟ್ : ಇದಕ್ಕಾಗಿ 2 ದೊಡ್ಡ ಚಮಚ ಕಾರ್ನ್‌ಸ್ಟಾರ್ಚ್‌ನ್ನು 4-5 ಚಮಚ ನೀರಿನಲ್ಲಿ ಕದಡಿಕೊಳ್ಳಿ.
ವಿಧಾನ : ನಿಂಬೆರಸಕ್ಕೆ ಉಪ್ಪು, ಮೆಣಸು, ಬೆಳ್ಳುಳ್ಳಿ ಪೇಸ್ಟ್ ಬೆರೆಸಿ ಕದಡಿಕೊಂಡು ಅದರಲ್ಲಿ ಮೀನು ಹಾಕಿ 15 ನಿಮಿಷ ನೆನೆಯಲು ಬಿಡಿ. ಈಗ ಮೊಟ್ಟೆ ಒಡೆದು ಗೊಟಾಯಿಸಿ ಅದಕ್ಕೆ ಕಾರ್ನ್‌ಫ್ಲೋರ್, ಉಪ್ಪು, ಮೆಣಸು ಹಾಕಿ ಬ್ಯಾಟರ್ ರೆಡಿ ಮಾಡಿಡಿ. ನಂತರ ಮೀನನ್ನು ಇದರಲ್ಲಿ ಒಂದೊಂದಾಗಿ ಅದ್ದಿ ತೆಗೆದು, ಕಾದ ಎಣ್ಣೆಯಲ್ಲಿ ಕರಿಯಿರಿ. ನಂತರ ಟಿಶ್ಯು ಪೇಪರ್ ಮೇಲೆ ಹರಡಿ ಹೆಚ್ಚುರಿ ಎಣ್ಣೆ ಹೋಗಲಾಡಿಸಿ.
ನಂತರ ಒಂದು ಚಿಕ್ಕ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಇದಕ್ಕೆ ಈರುಳ್ಳಿ ಹಾಕಿ ಬಾಡಿಸಿ. ನಂತರ ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಹಾಕಿ ಕೆದಕಬೇಕು. ಆಮೇಲೆ ಹೆಚ್ಚಿದ ಹಸಿಮೆಣಸು, 2 ಬಗೆಯ ಕ್ಯಾಪ್ಸಿಕಂ ಹಾಕಿ ಬಾಡಿಸಿ. ಕೊನೆಯಲ್ಲಿ ಉಪ್ಪು, ಖಾರ ಹಾಕಿ ಕೈಯಾಡಿಸಿ ಕೆಳಗಿಳಿಸಿ.
ಒಂದು ದೊಡ್ಡ ಬಟ್ಟಲಿಗೆ ತುಸು ಎಣ್ಣೆ, ಫ್ರಿಶ್ ಫ್ರೈ, 2 ಸಾಸ್‌ಗಳು, ಸಕ್ಕರೆ, ತುಸು ನೀರು ಬೆರೆಸಿ ಕೆದಕುತ್ತಾ ಕುದಿಸಬೇಕು. ನಂತರ ಇದಕ್ಕೆ ಕಾರ್ನ್‌ಸ್ಟಾರ್ಚ್ ಪೇಸ್ಟ್ ಬೆರೆಸಿ, ಮಿಶ್ರಣ ಸಾಕಷ್ಟು ಗಟ್ಟಿ ಆಗುವವರೆಗೂ ಬಾಡಿಸಬೇಕು. ಇದಕ್ಕೆ ಹೆಚ್ಚಿದ ಹಸಿ ಈರುಳ್ಳಿ ಬೆರೆಸಿ, ಬಿಸಿ ಬಿಸಿ ಅನ್ನ ಅಥವಾ ನೂಡಲ್ಸ್ ಜೊತೆ ಸವಿಯಲು ಕೊಡಿ.
ಹನೀ ಚಿಲೀ ಪೊಟೇಟೊ
ಸಾಮಗ್ರಿ : 3 ಮಧ್ಯಮ ಗಾತ್ರದ ಆಲೂ (ಸಿಪ್ಪೆ ಹೆರೆದದ್ದು), 2-3 ಹೆಚ್ಚಿದ ಈರುಳ್ಳಿ, 2-2 ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಸೋಯಾ ಸಾಸ್, ವಿನಿಗರ್, ಚಿಲೀ ಸಾಸ್, ಟೊಮೇಟೊ ಸಾಸ್, ಜೇನುತುಪ್ಪ, ಅರ್ಧ ಕಪ್ ಕಾರ್ನ್‌ಫ್ಲೋರ್, ಕರಿಯಲು ಎಣ್ಣೆ, ಅಲಂಕರಿಸಲು ನೈಲಾನ್ ಎಳ್ಳು, ಒಂದಿಷ್ಟು ಈರುಳ್ಳಿ ತೆನೆಗಳು.
ವಿಧಾನ : ಆಲೂಗಡ್ಡೆಯನ್ನು ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ. ಒಂದು ಬಟ್ಟಲಿಗೆ ಕಾರ್ನ್‌ಫ್ಲೋರ್, ಉಪ್ಪು, ಖಾರ, ನೀರು ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. ಇದರಲ್ಲಿ ಆಲೂ ಅದ್ದಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಇದನ್ನು ಟಿಶ್ಯು ಪೇಪರ್ ಮೇಲೆ ಹರಡಿರಿ. ಒಂದು ಚಿಕ್ಕ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಹೆಚ್ಚಿದ ಈರುಳ್ಳಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ನಂತರ ಉಳಿದೆಲ್ಲ ಸಾಮಗ್ರಿ ಸೇರಿಸಿ ಕೆದಕಬೇಕು. ಕೊನೆಯಲ್ಲಿ ಇದಕ್ಕೆ ಕರಿದ ಆಲೂ ಸೇರಿಸಿ ಕೆದಕಿ ಕೆಳಗಿಳಿಸಿ. ಆಮೇಲೆ ಚಿತ್ರದಲ್ಲಿರುವಂತೆ ಅಲಂಕರಿಸಿ ಬಿಸಿಯಾಗಿ ಸವಿಯಲು ಕೊಡಿ.
ಗ್ರೀನ್ ಪೀಸ್ ಪಾಪಡ್ ಟಿಕ್ಕಿ
ಸಾಮಗ್ರಿ : 5-6 ಕರಿದ ಹಪ್ಪಳ, 200 ಗ್ರಾಂ ಹಸಿ ಬಟಾಣಿ ಕಾಳು, 100 ಗ್ರಾಂ ಆಲೂ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಕಿಚನ್ ಕಿಂಗ್ ಮಸಾಲ, ಕಸೂರಿಮೇಥಿ, ಗರಂಮಸಾಲ, ಹುರಿದು ಪುಡಿ ಮಾಡಿದ ಜೀರಿಗೆ, ಕಡಲೆಕಾಳು, ಒಂದಿಷ್ಟು ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, ಕರಿಯಲು ಎಣ್ಣೆ.
ವಿಧಾನ : ಒಂದು ಚಿಕ್ಕ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಅದಕ್ಕೆ ಜೀರಿಗೆ ಪುಡಿ, ಆಮೇಲೆ ಬಟಾಣಿ. ತುಸು ಉಪ್ಪು, ಖಾರ, ಹಾಕಿ ಚೆನ್ನಾಗಿ ಬಾಡಿಸಿ ಒಂದು ಬದಿಗಿಡಿ.
ಆಲೂ ಸಿಪ್ಪೆ ಹೆರೆದು, ಉದ್ದಕ್ಕೆ ಹೆಚ್ಚಿ, ಎಣ್ಣೆಯಲ್ಲಿ ಕರಿಯಿರಿ. ಆಮೇಲೆ ಇದನ್ನು ಬಟಾಣಿಗೆ ಸೇರಿಸಿ. ಆಮೇಲೆ ಅದಕ್ಕೆ ಉಳಿದೆಲ್ಲ ಮಸಾಲೆ ಸೇರಿಸಿ ಕೆದಕಬೇಕು. ನಂತರ ಇದಕ್ಕೆ ಹಪ್ಪಳ ಕರಿದು, ಪುಡಿ ಮಾಡಿ ಹಾಕಿ. ಇದನ್ನು ಕಲಸಿ ಸಣ್ಣ ಉಂಡೆ ಮಾಡಿ, ಚಿತ್ರದಲ್ಲಿರುವಂತೆ ವಡೆಯಾಕಾರದಲ್ಲಿ ಟಿಕ್ಕಿ ತಟ್ಟಿಕೊಂಡು ಮತ್ತೆ ಎಣ್ಣೆಯಲ್ಲಿ ಕರಿಯಬೇಕು. ಇದನ್ನು ಒಂದು ಟ್ರೇನಲ್ಲಿ ಜೋಡಿಸಿ, ಚಿತ್ರದಲ್ಲಿರುವಂತೆ ಚಟ್ನಿ ಸಮೇತ ಅಲಂಕರಿಸಿ ಸವಿಯಲು ಕೊಡಿ.
ವೆಜಿಟೆಬಲ್ ಟೆಂಪುರಾ
ಸಾಮಗ್ರಿ : 250 ಗ್ರಾಂ ಮಿಶ್ರ ತರಕಾರಿ ಹೋಳು (ಬದನೆ, ಕುಂಬಳ, ಸೋರೆ, ಕೆಂಪು ಹಸಿಮೆಣಸು, ಕ್ಯಾರೆಟ್, ಆ್ಯಸ್ಪೆರಾಗಸ್, ಹೀರೆಕಾಯಿ), ಕರಿಯಲು ಎಣ್ಣೆ, 1 ಕಪ್ ಮೈದಾ, 1 ಮೊಟ್ಟೆ, ಟೆಂಪುರಾ ಬ್ಯಾಟರ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಸಕ್ಕರೆ, ನಿಂಬೆರಸ, ಸೋಯಾ ಸಾಸ್.
ವಿಧಾನ : ಮೊಟ್ಟೆ ಒಡೆದು ಬೀಟ್ ಮಾಡಿಕೊಂಡು ಅದಕ್ಕೆ ಉಪ್ಪು, ಮೆಣಸು, ಮೈದಾ, ತುಸು ನೀರು ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ಚೆನ್ನಾಗಿ ಗೊಟಾಯಿಸಿ. ಇದಕ್ಕೆ ಟೆಂಪುರಾ ಬ್ಯಾಟರ್ (ರೆಡಿಮೇಡ್ ಲಭ್ಯ) ಸಹ ಬೆರೆಸಬೇಕು. ಅದು ಸಿಗದಿದ್ದರೆ, ಇದೇ ಮಿಶ್ರಣಕ್ಕೆ ಅರ್ಧ ಕಪ್ ಕಾರ್ನ್‌ಪ್ಲೇರ್ ಬೆರೆಸಿ ಗೊಟಾಯಿಸಿ. ತರಕಾರಿ ಹೋಳನ್ನು ಇದರಲ್ಲಿ ಒಂದೊಂದಾಗಿ ಅದ್ದಿ, ಕಾದ ಎಣ್ಣೆಯಲ್ಲಿ ಕರಿಯಬೇಕು. ಸೋಯಾ ಸಾಸ್, ನಿಂಬೆರಸ, ಉಪ್ಪು, ಮೆಣಸು ಬೆರೆಸಿ ಡಿಪ್ ರೆಡಿ ಮಾಡಿ, ಕರಿದ ವೆಜ್ ಟೆಂಪುರಾ ಜೊತೆ ಸವಿಯಲು ಕೊಡಿ.
ಟ್ರೋಲ್ ಆಫ್ ಟೋಫು, ಪೊಟೇಟೊ ಮಶ್ರೂಮ್
ಸಾಮಗ್ರಿ : ಅರ್ಧ ಸೌಟು ಎಣ್ಣೆ, 3-4 ಲವಂಗ, 5-6 ಎಸಳು ಬೆಳ್ಳುಳ್ಳಿ, 1-2 ಈರುಳ್ಳಿ, 2-3 ಹೆಚ್ಚಿದ ಆಲೂ, 10-12 ಬಟನ್ ಮಶ್‌ರೂಮ್, 100 ಗ್ರಾಂ ಟೋಫು ಕ್ಯೂಬ್ (ರೆಡಿಮೇಡ್ ಲಭ್ಯ), ರುಚಿಗೆ ತಕ್ಕಷ್ಟು ಉಪ್ಪು, ಹಸಿಮೆಣಸಿನ ಪೇಸ್ಟ್, ಫಿಶ್ ಸಾಸ್, ಸೋಯಾ ಸಾಸ್, ಆಯಿಸ್ಟರ್ ಸಾಸ್, ಕಾರ್ನ್‌ಸ್ಟಾರ್ಚ್, 1-2 ಹೆಚ್ಚಿದ ಕೆಂಪು ಹಸಿ ಮೆಣಸಿನಕಾಯಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ.
ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಒಗ್ಗರಣೆ ಕೊಟ್ಟು ಹೆಚ್ಚಿದ ಬೆಳ್ಳುಳ್ಳಿ, ನಂತರ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಹೆಚ್ಚಿದ ಆಲೂ, ಕೆಂಪು, ಹಸಿಮೆಣಸಿನಕಾಯಿ, ಮಶ್‌ರೂಮ್, ಟೋಫು ಹಾಕಿ ಬಾಡಿಸಬೇಕು. ಆಮೇಲೆ ಇದಕ್ಕೆ ಉಪ್ಪು, ಫಿಶ್ ಸಾಸ್, ಸೋಯಾ ಸಾಸ್, ಚೆಲೀ ಪೇಪ್ಟ್, ಆಯಿಸ್ಟರ್ ಸಾಸ್ ಹಾಕಿ ಚೆನ್ನಾಗಿ ಕೆದಕಬೇಕು.
ಕಾರ್ನ್‌ಸ್ಟಾರ್ಚ್‌ನ್ನು ತುಸು ಬೆಚ್ಚಗಿನ ನೀರಿನಲ್ಲಿ ಕದಡಿಕೊಂಡು, ಅದನ್ನು ಈ ಮಿಶ್ರಣಕ್ಕೆ ಬೆರೆಸಿ ಕೈಯಾಡಿಸಿ. ಎಲ್ಲ ಚೆನ್ನಾಗಿ ಬೆರೆತು ಗಟ್ಟಿಯಾಗುವಂತೆ ಮಾಡಿ. ನಂತರ ಇದನ್ನು ಸರ್ವಿಂಗ್ ಡಿಶ್ಶಿಗೆ ಹಾಕಿ, ಚಿಲೀ, ಪೆಪ್ಪರ್, ಕೊ.ಸೊಪ್ಪು, ಪುದೀನಾ ಉದುರಿಸಿ ಸವಿಯಲು ಕೊಡಿ.
ಹ್ಯಾಮ್ ಚೀಸ್ ಟೋಸ್ಟ್
ಸಾಮಗ್ರಿ : 50 ಗ್ರಾಂ ರೆಗ್ಯುಲರ್ ಪನೀರ್, 40 ಗ್ರಾಂ ಮೊಜರೆಲಾ ಪನೀರ್, 60 ಗ್ರಾಂ ಹ್ಯಾಮ್, ಒಂದಿಷ್ಟು ಹೆಚ್ಚಿದ ಪಾರ್ಸ್ಲೆ, 4-5 ಬ್ರೆಡ್ ಸ್ಲೈಸ್, ರುಚಿಗೆ ತಕ್ಕಷ್ಟು ಉಪ್ಪು, ಪುಡಿ ಮೆಣಸು, ಟೊಮೇಟೊ ಕೆಚಪ್.
ವಿಧಾನ : ಬ್ರೆಡ್ ಸ್ಲೈಸ್‌ನ್ನು ಒಂದು ಬದಿಯಿಂದ ಟೋಸ್ಟ್ ಮಾಡಿ. ಅದರ ಇನ್ನೊಂದು ಬದಿಗೆ ಉಳಿದೆಲ್ಲ ಸಾಮಗ್ರಿಗಳ ಮಿಶ್ರಣ ಸವರಬೇಕು. ಆಮೇಲೆ ಆ ಭಾಗವನ್ನು ಹೆಂಚಿನ ಮೇಲೆ ಹೊಂಬಣ್ಣ ಬರುವಂತೆ ಫ್ರೈ ಮಾಡಿ. ನಂತರ ಅದನ್ನು ಕೆಳಗಿಳಿಸಿ. 4 ಭಾಗ ಮಾಡಿ, ಟೊಮೇಟೊ ಕೆಚಪ್‌ನೊಂದಿಗೆ ಸವಿಯಲು ಕೊಡಿ.
ಚಿಲೀ ಚೀಸ್ ಟೋಸ್ಟ್
ಸಾಮಗ್ರಿ : 4-5 ಬ್ರೆಡ್ ಸ್ಲೈಸ್, 50-50 ಗ್ರಾಂ ರೆಗ್ಯುಲರ್‌ಮೋಜರೆಲಾ ಪನೀರ್, ಒಂದಿಷ್ಟು ಹೆಚ್ಚಿದ ಪಾರ್ಸ್ಲೆ, ರುಚಿಗೆ ತಕ್ಕಷ್ಟು ಉಪ್ಪು, ಹಸಿ ಮೆಣಸಿನ ಪೇಸ್ಟ್, ಬೆಣ್ಣೆ, ಟೊಮೇಟೊ ಕೆಚಪ್.
ವಿಧಾನ : ಟೋಸ್ಪರ್‌ನಲ್ಲಿ ಬೆಣ್ಣೆ ಸರಿದ ಬ್ರೆಡ್ ಸ್ಲೈಸ್‌ನ್ನು ಒಂದು ಬದಿಗೆ ಟೋಸ್ಟ್ ಮಾಡಿ. ಇನ್ನೊಂದು ಬದಿಗೆ ಬೆಣ್ಣೆ ಸವರಿ, ಅದರ ಮೇಲೆ ಉಳಿದ ಸಾಮಗ್ರಿಗಳ ಮಿಶ್ರಣ ಸವರಬೇಕು. ನಂತರ ಈ ಭಾಗವನ್ನು ಓವನ್ನಿನಲ್ಲಿಟ್ಟು ಪನೀರ್ ಹೊಂಬಣಕ್ಕೆ ಬರುವವರೆಗೆ ಬೇಕ್ ಮಾಡಿ. ನಂತರ ಈ ಟೋಸ್ಟ್ ನ್ನು 4 ಭಾಗ ಮಾಡಿ ಕೆಚಪ್ ಜೊತೆ ಸವಿಯಲು ಕೊಡಿ.
ಟ್ರೋಲ್ ಬೆಲ್ ಪೆಪ್ಪರ್ ಟೋಸ್ಟ್
ಸಾಮಗ್ರಿ : 50-50 ಗ್ರಾಂ ರೆಗ್ಯುಲರ್ ಮೊಜರೆಲಾ ಪನೀರ್, 1-1 ಕೆಂಪು ಹಸಿರಿನ ಕ್ಯಾಪ್ಸಿಕಂ, ಒಂದಿಷ್ಟು ಹೆಚ್ಚಿದ ಪಾರ್ಸ್ಲೆ, 5-6 ಬ್ರೆಡ್‌ಸ್ಲೈಸ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಬೆಣ್ಣೆ.
ವಿಧಾನ : ಮೊದಲು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಹೆಚ್ಚಿದ ಕ್ಯಾಪ್ಸಿಕಂ ಹಾಕಿ ಬಾಡಿಸಿ. ಉಪ್ಪು, ಮೆಣಸು ಉದುರಿಸಿ ಕೆದಕಿ ಕೆಳಗಿಳಿಸಿ. ಬ್ರೆಡ್‌ನ ಒಂದು ಬದಿಗೆ ಬೆಣ್ಣೆ ಸವರಿ, ಟೋಸ್ಟ್ ಮಾಡಿ. ಇನ್ನೊಂದು ಬದಿಗೆ ಈ ಮಿಶ್ರಣ ಸವರಿ, ಎರಡೂ ಬಗೆಯ ಪನೀರ್‌ನ್ನು ತುರಿದು ಹಾಕಿ ಅದು ಕರಗುವಂತೆ ಬೇಕ್ ಮಾಡಿ. ನಂತರ ಅದನ್ನು 4 ಭಾಗ ಮಾಡಿ ಕೆಚಪ್ ಜೊತೆ ಸವಿಯಿರಿ.
ಸ್ಕ್ರಂಬ್ಡ್ ಕಾಟೇಜ್ ಚೀಸ್ ಟೋಸ್ಟ್
ಸಾಮಗ್ರಿ : 25-25 ಗ್ರಾಂ ರೆಗ್ಯುಲರ್ ಮೊಜರೆಲಾ ಪನೀರ್, 100 ಗ್ರಾಂ ಕಾಟೇಜ್ ಚೀಸ್, 5-6 ಚಮಚ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಮೆಣಸು, ಗರಂಮಸಾಲ, ಹಸಿ ಮೆಣಸಿನ ಪೇಸ್ಟ್, ಬೆಣ್ಣೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಒಂದಿಷ್ಟು ಹೆಚ್ಚಿದ ಈರುಳ್ಳಿ, ಟೊಮೇಟೊ, ಕೊ.ಸೊಪ್ಪು, 4-5 ಬ್ರೆಡ್ ಸ್ಲೈಸ್, ಜೊತೆಗೆ ಪುದೀನಾ ಚಟ್ನಿ.
ವಿಧಾನ : ಒಂದು ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಹೆಚ್ಚಿದ ಈರುಳ್ಳಿ, ನಂತರ ಟೊಮೇಟೊ ಹಾಕಿ ಬಾಡಿಸಿ. ಕೊನೆಯಲ್ಲಿ ಕಾಟೇಜ್ ಪನೀರ್, ಉಪ್ಪು, ಖಾರ, ಹಸಿಮೆಣಸಿನ, ಶುಂಠಿ ಬೆಳ್ಳುಳ್ಳಿಯ ಪೇಸ್ಟ್ ಹಾಕಿ ಕೆದಕಿ ಕೆಳಗಿಳಿಸಿ. ಒಂದಿಷ್ಟು ಕೊ.ಸೊಪ್ಪು ಉದುರಿಸಿ. ಎಲ್ಲಾ ಬ್ರೆಡ್ ಸ್ಲೈಸ್‌ಗಳಿಗೂ ಒಂದು ಬದಿಗೆ ಬೆಣ್ಣೆ ಸವರಿ ಟೋಸ್ಟ್ ಮಾಡಿಕೊಳ್ಳಿ. ಇನ್ನೊಂದು ಬದಿಗೆ ಪನೀರ್ ಮಿಶ್ರಣ ಹರಡಿ, ತುರಿದ ರೆಗ್ಯುಲರ್ ಪನೀರ್, ಕಾಟೇಜ್ ಚೀಸ್ ಉದುರಿಸಿ, ಓವನ್‌ನಲ್ಲಿ ಹದನಾಗಿ ಬೇಕ್ ಮಾಡಿ. ಅದನ್ನು 4 ಭಾಗವಾಗಿಸಿ ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.