ಕರ್ನಾಟಕದ ರಾಷ್ಟ್ರೀಯ ಅಭಯಾರಣ್ಯ ನಾಗರಹೊಳೆ, ತನ್ನಲ್ಲಿನ ಅನನ್ಯ ತಿರುವು, ಬಳಸುವ ಮಾರ್ಗಗಳಿಂದ ಭಾರತದ ನೈಸರ್ಗಿಕ ನಿಗೂಢ ತಾಣವಾಗಿ ಉಳಿದಿದೆ. ಇಲ್ಲಿನ ಸಫಾರಿ ನೀಡುವ ರೊಮ್ಯಾಂಟಿಕ್‌ ಥ್ರಿಲ್‌, ಆ ರೋಮಾಂಚನವನ್ನು ಅನುಭವಿಸಿಯೇ ತೀರಬೇಕು. ಅದು ಇಲ್ಲಿನ ವನ್ಯಜೀವಿಗಳನ್ನು ಹತ್ತಿರದಿಂದ ವೀಕ್ಷಿಸಲು ಒಂದು ಅದ್ಭುತ ಕಲೆಯೇ ಸರಿ.

ಕಬಿನಿ ನದಿ ಸುತ್ತಿ ಬಳಸಿ ಹರಿವ ರಭಸ ಹೇಗಿದೆ ಎಂದರೆ, ಅದು ನಾಗರಹೊಳೆ ಅಭಯಾರಣ್ಯವನ್ನು ಒಂದು `ಸರ್ಪ’ದಂತೆ ಸುತ್ತುವರೆದಿದೆ ಹೀಗಾಗಿ ಇದಕ್ಕೆ ಆ ಹೆಸರು ಬಂದಿದೆ. ನಾಗರಹೊಳೆ ನಿಜಕ್ಕೂ ಕರ್ನಾಟಕದ ರಾಷ್ಟ್ರೀಯ ಅಭಯಾರಣ್ಯಗಳಲ್ಲಿ ತನ್ನಲ್ಲಿನ ಅನನ್ಯ ತಿರುವುಗಳಿಂದಾಗಿ ಭಾರತದ ನೈಸರ್ಗಿಕ ನಿಗೂಢ ತಾಣವೆನಿಸಿದೆ. ಆದರೆ ನಾಗರಹೊಳೆ ತನ್ನ ಪಕ್ಕದಲ್ಲೇ ಇರುವ ನೆರೆಯ ಬಂಡೀಪುರ ಟೈಗರ್‌ ರಿಸರ್ವ್ ಅಥವಾ ತಮಿಳುನಾಡಿನ ಮುದುಮೈ ರಾಷ್ಟ್ರೀಯ ಅಭಯಾರಣ್ಯಗಳಂತೆ ವಿಖ್ಯಾತಿಗೊಂಡಿಲ್ಲ, ಜೊತೆಗೆ ಬಹಳ ಕುತೂಹಲಕಾರಿಯೂ ಅಲ್ಲ. ನಾಗರಹೊಳೆ ಒಂದು ವಿಧದಲ್ಲಿ ಪ್ರಕೃತಿಯ ಒಂದು ಬೆಡಗಿನ ಭವ್ಯ ಶೋಕೇಸ್‌ ಎನ್ನಬಹುದು.

ನಾಗರಹೊಳೆ ಅಂದ ತಕ್ಷಣ ನಮಗೆ ನೆನಪಿಗೆ ಬರುವುದು, ದಶಕಗಳ ಹಿಂದೆ ವಿಷ್ಣು, ಭಾರತಿ, ಅಂಬರೀಷ್‌ ಹಾಗೂ ಇನ್ನಿತರ ಖ್ಯಾತ ಬಾಲನಟರು ನಟಿಸಿದ್ದಂಥ, ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ `ನಾಗರಹೊಳೆ’ ಮಕ್ಕಳ ಚಿತ್ರ. ಅದರಲ್ಲಿನ ಒಂದೊಂದು ದೃಶ್ಯಗಳೂ ನಾಗರಹೊಳೆ ಕಾಡಿನ ದಟ್ಟ ರಮಣೀಯತೆಯನ್ನು ಇಂದಿಗೂ ನಿಮ್ಮ ಕಣ್ಣಮುಂದೆ ಕಟ್ಟಿಕೊಡುತ್ತದೆ.

ಇನ್ನೊಂದು ಅಂದರೆ ಶೇಖರ್‌ ದತ್ತಾರಿಯವರ ಉತ್ಕೃಷ್ಟ ಡಾಕ್ಯುಮೆಂಟರಿ ಚಿತ್ರ `ನಾಗರಹೊಳೆ : ಟೇಲ್ಸ್ ಫ್ರಂ ಆ್ಯನ್‌ ಇಂಡಿಯನ್‌ಜಂಗಲ್.’ ಇದು ನಿಜಕ್ಕೂ ಬೆಸ್ಟ್ ವೈಲ್ಡ್ ಲೈ‌ಫ್‌ ಡಾಕ್ಯುಮೆಂಟರಿ ಎನ್ನಬಹುದು. ಇಲ್ಲಿ ನಾಗರಹೊಳೆಯ ಅನುಪಮ ವನ್ಯಜೀವದ ವೈವಿಧ್ಯತೆಯನ್ನು ಕಾಡಿನ ಸಂಗೀತದ ಹಿನ್ನೆಲೆಯೊಂದಿಗೆ ನಾಟಕೀಯವಾಗಿ, ಸರ್ವಸಮ್ಮೋಹನಗೊಳ್ಳುವಂತೆ ಚಿತ್ರಿಸಲಾಗಿದೆ.  ಇಲ್ಲಿನ ಪ್ರಕೃತಿ ಪ್ರೇಮಿಗಳು ನಾಗರಹೊಳೆ ಕುರಿತು ನಮಗೆ ರಂಜನೀಯವಾಗಿ, ಅತಿ ವರ್ಣನೆಯೊಂದಿಗೆ ಬಣ್ಣಿಸುತ್ತಾರೆ. ಇಲ್ಲಿನ ಕಾಡುಹಕ್ಕಿಗಳ ಕಲರವ…. ಅಬ್ಬಬ್ಬಾ, ಅದೆಂಥ ಚಿತ್ರ ವಿಚಿತ್ರ ಬಣ್ಣಗಳೋ ಹೇಳಲಾಗದು. ಅಲ್ಲಲ್ಲಿ ಕಂಡುಬರುವ ಬೃಹತ್‌ಹುತ್ತಗಳು ನಮ್ಮನ್ನು ಬೆಚ್ಚಿಬೀಳಿಸುತ್ತವೆ.

ಇಲ್ಲಿನ ಪೊದೆಗಳು, ಗಿಡಗಂಟಿಗಳಲ್ಲಿ ಅರಳುವ ಅಂದಚಂದದ ಬಣ್ಣ ಬಣ್ಣದ ಹೂಗಳು, ಅದರ ಮಕರಂದ ಹೀರಲು ಬರುವ ದುಂಬಿಗಳು, ಹಿಂಡು ಹಿಂಡಾಗಿ ಸುತ್ತಾಡುವ ಚಿಟ್ಟೆಗಳು, ಬಣ್ಣದ ರೆಕ್ಕೆಗಳನ್ನು ಹರಡಿ ಪಟಪಟ ಬಡಿಯುತ್ತಾ ಕೀಚ್‌ ಕೀಚ್‌, ಕುಹೂ ಕುಹೂ ಎನ್ನುವ ಹಕ್ಕಿಗಳ ಕಲರವ….. ಒಟ್ಟಾರೆ ನಾಗರಹೊಳೆ ಧರೆಗಿಳಿದ ಹಸಿರು ಸ್ವರ್ಗವೇ ಸರಿ!

ಇಲ್ಲಿನ ಪ್ರಾಣಿಗಳ ವರ್ತನೆಯನ್ನು ಕಾಡಿನ ನಿಗೂಢತೆಯನ್ನು ಚೆನ್ನಾಗಿ ಅರಿತವರು ಯಾರು ಗೊತ್ತೇ? ಅನಧಿಕೃತ ಬೇಟೆಯಾಡುವರು! ಆದರೆ ಕಳೆದ 15 ವರ್ಷಗಳಿಂದ ಇಲ್ಲಿ ಅನಧಿಕೃತ ಬೇಟೆಗೆ ಅವಕಾಶವೇ ಇಲ್ಲ. ಏಕೆಂದರೆ ನಾಗರಹೊಳೆ ಅಭಯಾರಣ್ಯ ಭಾರತದ ಪ್ರತಿಷ್ಠಿತ `ಪ್ರಾಜೆಕ್ಟ್ ಟೈಗರ್‌`ನಡುವೆ ಬರುವುದರಿಂದ ಇದನ್ನು ಅಹರ್ನಿಶಿ ಕಾಯಲಾಗುತ್ತದೆ. ಈ ಕಾಡನ್ನು ಬಹು ಹಿಂದಿನಿಂದಲೇ ಸಂರಕ್ಷಿಸಲಾಗಿದೆ. ಅದರಲ್ಲೂ ಬ್ರಿಟಿಷ್‌ ಆಡಳಿತದಲ್ಲಿ ನಾಗರಹೊಳೆಯಲ್ಲಿ ತೇಗದ ಮರಗಳನ್ನು ಗುರುತಿಸಿದಾಗಿನಿಂದ.

ಅಲ್ಲಿನ ಹೊಳೆ ಬದಿಯಲ್ಲಿ ದೈತ್ಯಾಕಾರದ ಅಣಬೆಗಳಂತೆ ತೆಪ್ಪಗಳು ತಿರುವಿಹಾಕಲ್ಪಟ್ಟಿರುವುದು ಕಾಣಿಸುತ್ತವೆ. ಪ್ರವಾಸಿಗರಾಗಿ ಬಂದವರು 3-4 ಜನ ಇದರಲ್ಲಿ ಒಟ್ಟಿಗೆ ಕುಳಿತು ದೋಣಿ ವಿಹಾರಕ್ಕೆ ಹೊರಡಬಹುದು. ತುಸು ದೊಡ್ಡ ದೋಣಿಗಳಲ್ಲಿ 30ಕ್ಕೂ ಹೆಚ್ಚು ಮಂದಿ ಹಳ್ಳಿಯವರು ಇಕ್ಕಟ್ಟಿನಲ್ಲಿ ಕುಳಿತು ಒಟ್ಟಿಗೆ ನದಿ ದಾಟುವುದನ್ನು ಗಮನಿಸಬಹುದು. ಇಲ್ಲಿನ ನದಿ ತೀರದಲ್ಲಿ ದೈತ್ಯ ಗಾತ್ರದ ಕಪ್ಪೆಗಳು ಕಂಡುಬರುತ್ತವೆ. ಅದರಲ್ಲೂ ಇಲ್ಲಿನ ಹೆಣ್ಣು ಕಪ್ಪೆ ಒಂದೇ ದಿನ 5 ಗಂಡು ಕಪ್ಪೆಗಳನ್ನು ಕೂಡುತ್ತದೆ ಎಂದು ಇಲ್ಲಿನ ಸ್ಥಳೀಯರು ತಿಳಿಸುತ್ತಾರೆ. ಆದರೆ ದುರಾದೃಷ್ಟವೆಂದರೆ ಗಂಡುಕಪ್ಪೆಗಳು ಬೇಗ ಹಾವಿಗೆ ಆಹಾರವಾಗುತ್ತಂತೆ. ಯೂರೋಪ್‌ನಿಂದ ವಲಸೆ ಬಂದ ದೈತ್ಯ ಬಸವನ ಹುಳುಗಳು, ಈ ಕಪ್ಪೆಗಳಿಗೆ ದೊಡ್ಡ ಪೈಪೋಟಿ ನೀಡುತ್ತವೆ.

ಜೀಪ್‌ನಲ್ಲಿ ಕುಳಿತು ಪ್ರವಾಸಿಗರು ಇಲ್ಲಿನ ಸಫಾರಿಗೆ ಹೊರಟರೆ ಅದ್ಭುತ, ರೋಚಕ ದೃಶ್ಯಗಳು ಲಭ್ಯ. ಹೊರನಾಡಿನಿಂದ ಬಂದವರಿಗೆ ಇಲ್ಲಿನ ಊಟ, ತಿಂಡಿ ಬಲು ಸ್ವಾದಿಷ್ಟ ಎನಿಸುತ್ತದೆ. ನಮ್ಮವರಿಗೆ ಪಳಗಿದ `ರಾಗಿ ರೊಟ್ಟಿ’  ಅವರಿಗೆ ಅತಿಶಯವೇ ಸರಿ, ಅದರಲ್ಲೂ ಬಿಸಿಯಾಗಿ ಬೆಣ್ಣೆಯ ಜೊತೆ ಸವಿಯುವಾಗ. ಉಪಾಹಾರದ ಜತೆ ವಿಶೇಷವಾಗಿ ಸಿಗುವ ನಿಂಬೆ ಶುಂಠಿ ಬೆರೆತ ಕಬ್ಬಿನ ಹಾಲು, ಒಂದು ರಸದೌತಣವೇ ಸರಿ. ಅದೇ ತರಹ ಕಣ್ಣು ಹಾಯಿಸಿದಷ್ಟಕ್ಕೂ ಉದ್ದಕ್ಕೆ ಕಂಡುಬರುವ ಕಬ್ಬಿನ ತೋಟ, ಹತ್ತಿಯ ತೋಟ, ಬಾಳೆ ತೋಟಗಳು ಕಣ್ಣಿಗೆ ಹಬ್ಬ ಎನಿಸುತ್ತವೆ. ಬಾಳೆಯ ದಿಂಡು, ಹೂ, ಕಾಯಿಯ ವಿವಿಧ ವ್ಯಂಜನಗಳು, ಸಿಹಿಸಿಹಿಯಾದ ಬಾಳೆಹಣ್ಣು ಇಲ್ಲಿನ ಪ್ರವಾಸಿಗರಿಗೆ ಹಬ್ಬದೂಟ ಎನಿಸುತ್ತದೆ. ಬಾಳೆ ಎಲೆಯಲ್ಲಿನ ಈ ಸುಗ್ರಾಸ ಭೋಜನದ ಸವಿಯುಂಡವರೇ ಆ ಸುಖ ಬಲ್ಲರು!

ಮಧ್ಯಾಹ್ನ ಊಟದ ನಂತರ ಬೋಟ್‌ ಸಫಾರಿ ಮುಂದುವರಿಸುವ ಪ್ರಯಾಣಿಕರಿಗೆ 2 ಹುಲಿ ಅಭಯಾರಣ್ಯಗಳಾದ ನಾಗರಹೊಳೆ ಮತ್ತು ಬಂಡೀಪುರ ಹಸಿರಿನ ಸೊಬಗನ್ನು ಉಣಿಸುತ್ತದೆ. ಎಲ್ಲೆಲ್ಲೂ ಹಸುರಿನ ಲ್ಯಾಂಡ್‌ಸ್ಕೇಪ್ಸ್ ಇಡೀ ಭೂಮಿಗೆ ಎಂಬ್ರಾಯಿಡರಿ ಮಾಡಿಟ್ಟಂತೆ ಅನಿಸುತ್ತದೆ. ನದಿಯ ನೀರಲ್ಲಿ ಚಿಮ್ಮಿ ಏಳು ಮೀನುಗಳು ಕಣ್ಣು ಕೋರೈಸುವ ಬಣ್ಣಗಳಲ್ಲಿ ಮಿಂಚಿ ಬೆಳ್ಳಿ ಮೆರುಗನ್ನು ನೀಡುತ್ತವೆ. ಅವನ್ನು ಹಿಡಿಯಿಂದು ಬರುವ ನಾನಾ ಬಗೆಯ ವರ್ಣಮಯ ಹಕ್ಕಿಗಳ ಕಲರವ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ನಾಗರಹೊಳೆಗೆ ಬಂದ ಮೇಲೆ ಅಲ್ಲಿ ಗಜರಾಜನ ಪಡೆ ಬರದಿದ್ದರೆ ಹೇಗೆ? ಆನೆಗಳು ಗಂಭೀರವಾಗಿ ಸಾಗಿಬಂದು, ನದಿಯಲ್ಲಿ ಮಿಂದೆದ್ದು ಮನದಣಿಯೇ ನೀರು ಕುಡಿಯುವ, ಚಿನ್ನಾಟವಾಡುವ ದೃಶ್ಯ ಬಲು ರೋಚಕ!

ನದಿಯ ದಡದಿಂದ ಜೀಪು ಮುಂದುವರಿದಾಗ ದಿಢೀರ್‌ ವ್ಯಾಘ್ರ ದರ್ಶನವಾದರೆ ಅದು ನಿಮ್ಮ ಭಾಗ್ಯವೇ ಸರಿ. ಮೊದಲೇ ಟೈಗರ್‌ಸಫಾರಿ, ಹೀಗಾಗಿ ಖಂಡಿತಾ ಹುಲಿ ದರ್ಶನ ಸಾಧ್ಯವಿದೆ. ದಟ್ಟ ಬಣ್ಣಗಳ ಪಟ್ಟೆ ಪಟ್ಟೆಯ ಹುಲಿ ಕ್ಷಣ ಮಾತ್ರದಲ್ಲಿ ಕಾಣಿಸಿಕೊಂಡು ಜಿಂಕೆಗಳನ್ನು ಬೆನ್ನತ್ತಿ ಹೋಗುವ ದೃಶ್ಯ ಬಲು ರೋಮಾಂಚಕ, ಸಾಹಸಮಯ ಕೂಡ.

ಹೀಗೆ ನಾಗರಹೊಳೆಯ ಸಫಾರಿ ಮುಂದುವರಿದಾಗ ಇಡೀ ಮಧ್ಯಾಹ್ನ ಹಲವು ವನ್ಯ ಮೃಗಗಳನ್ನು ಕಾಣಬಹುದು. ಹಸಿರು ಹುಲ್ಲಿನ ಮಧ್ಯೆ ಘರ್ಜಿಸುವ ಹುಲಿ, ಮರವೇರಿದ ಚಿರತೆ, ಕಾಡೆಮ್ಮೆ, ನರಿ, ಜಿಂಕೆ, ಕಡವೆಗಳ ಹಿಂಡು ಗಮನಿಸಿ ಫೋಟೋ ಕ್ಲಿಕ್ಕಿಸಲು ಯಾರಿಗೆ ತಾನೇ ಉತ್ಸಾಹ ಉಕ್ಕುವುದಿಲ್ಲ? ಹಾಗೇ ಸಂಜೆ ಸಮೀಪಿಸುವಾಗ ಸೂರ್ಯ ನದಿಯ ಕ್ಷಿತಿಜಕ್ಕಿಳಿದು ಅಸ್ತಂಗತನಾಗುವ ದೃಶ್ಯವಂತೂ ನಯನ ಮನೋಹರ! ಇಡೀ ನದಿಯ ತೀರ ಪ್ರದೇಶ ಹೊಂಬಣ್ಣದ ಹೊಳಪಿನಿಂದ ಮಿಂಚುತ್ತಿರುತ್ತದೆ. ಸುತ್ತಲಿನ ಗಿಡಗಂಟಿ, ಪೊದೆ, ಮರಗಳೆಲ್ಲ ಕೆಂಪಾದವೋ ಎಲ್ಲಾ ಕೆಂಪಾದವೋ ಎನಿಸಿ, ಆ ಗೋಧೂಳಿ ಸಮಯದ ಆನಂದವನ್ನು ಮತ್ತೆ ಮತ್ತೆ ಅನುಭವಿಸಬೇಕು ಅನಿಸುತ್ತದೆ.

ಮೊದಲ ದಿನದ ಈ ಸಂಭ್ರಮ ಗಮನಿಸಿದ ನಂತರ ಮಾರನೇ ದಿನ ಹುಲಿಗಳು ದಟ್ಟವಾಗಿರುವ ಲಯಕ್ಕೆ, ದಟ್ಟ ಕಾಡಿನ ಮಧ್ಯ ಭಾಗ ಪ್ರವೇಶಿಸಿದರೆ, ನೀಲಗಿರಿ ಸಾಮ್ರಾಜ್ಯದ ರಮಣೀಯತೆ ಎಲ್ಲೆಲ್ಲೂ ಗೋಚರಿಸುತ್ತದೆ. ಇಲ್ಲಿ ಆನೆಗಳ ಹಿಂಡು ಸುಮಾರು 200ರ ಸಂಖ್ಯೆಯಲ್ಲಿ ಒಮ್ಮೆಲೇ ಗೋಚರಿಸಿದರೂ ಆಶ್ಚರ್ಯವಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಎಲ್ಲಾ ಪ್ರವಾಸಿಗರಿಗೂ ಅಂಥ ಸುವರ್ಣಾವಕಾಶ ಸಿಗುವುದು ಅಪರೂಪ. ಈ ಆನೆಗಳು ಅಷ್ಟೇ ಹೀನಾಯವಾಗಿ ಶಿಕಾರಿಗೆ ಗುರಿಯಾಗುವುದು ದುರದೃಷ್ಟಕರ.

ಹಾಗೆಯೇ ಮುಂದುವರಿದಾಗ ಇನ್ನಷ್ಟು ಹುಲಿ, ಚಿರತೆ, ಬೇಟೆ ನಾಯಿಗಳ ಜಿಗಿತ ಕಂಡು ಎದೆ ಝಲ್ಲೆನಿಸುತ್ತದೆ. ಎಲ್ಲೆಲ್ಲೂ ಹಳದಿ ಹೂಗಳ ಮಳೆ ಸುರಿದು, ಕಾಡಿನ ಹಸಿರಿನ ರಾಶಿಯ ಮಧ್ಯೆ ಹೊನ್ನಿನ ದಾರಿ ಹಾಸಿದಂತಿರುತ್ತದೆ. ಜೊತೆಗೆ ಚಂದದ ನವಿಲು ನರ್ತನ, ಕೋತಿಗಳ ಕಿರುಚಾಟ, ಸಾಂಬಾ ಜಿಂಕೆಯ ನೆಗೆತ, ಕೋಗಿಲೆಯ ಕುಹೂ…. ಈ ಕಾಡು ಬಿಟ್ಟು ಹೋಗಲು ಮನಸ್ಸೇ ಬಾರದು.  ಇಲ್ಲಿನ ಗೈಡ್‌ ಹೇಳುವಂತೆ ಹಿಂದೆಲ್ಲ, ತಮ್ಮ ತಂಗುದಾಣದ ಹೊರ ವರಾಂಡಾದಿಂದ ರಾಜಮಹಾರಾಜರು ಹುಲಿಗಳತ್ತ ಖಯಾಲಿಗಾಗಿ ಶೂಟ್‌ ಮಾಡುತ್ತಿದ್ದರಂತೆ.

ಈ ಸಫಾರಿ ಮಧ್ಯೆ ಆಗಾಗ ಗೈಡ್ಸ್ ಹುಲಿ, ಚಿರತೆ, ಎಂದು ಎಚ್ಚರಿಸುತ್ತಿರುತ್ತಾರೆ. ಆಗ ಜಾಲರಾದಿಂದ ಆವೃತ್ತವಾದ ಸುರಕ್ಷಿತ ಜೀಪ್‌ನಿಂದ ನಿಮ್ಮ ಸಫಾರಿ ಉದ್ದಕ್ಕೂ ಈ ಪ್ರಾಣಿಗಳ ಓಡಾಟವನ್ನು ಕಂಡು ಸಂಭ್ರಮಿಸಬಹುದು. ಅದನ್ನು ಬಿಟ್ಟು ಇನ್ನಾವುದೇ ಬಗೆಯ ದುಸ್ಸಾಹಸಕ್ಕೆ ಕೈಹಾಕುತ್ತೇವೆಂದು ಓಪನ್‌ ಜೀಪ್‌ ಅಥವಾ ವಾಹನದಿಂದ ಜಿಗಿದು ಫೋಟೋ ಕ್ಲಿಕ್ಕಿಸುವ ಕೆಲಸಕ್ಕಿಳಿದರೆ ಅಪಾಯ ತಪ್ಪಿದ್ದಲ್ಲ. ಹಾಗೆ ಮಾಡುವ ಬದಲು ನಿಮ್ಮ ಸಫಾರಿ ಆನಂದದಾಯಕ, ಸ್ಮರಣೀಯವಾಗಿರುವಂತೆ ನೋಡಿಕೊಳ್ಳಿ.

ಹೇಗೆ ಹೋಗುವುದು? ನಾಗರಹೊಳೆಯ ಟ್ರಿಪ್‌ ಹೊರಟಿದ್ದೀರಾ? ಇಲ್ಲಿನ ಸಲಹೆ ಅನುಸರಿಸಿ ಮುಂದುವರಿಯಿರಿ.

ನಾಗರಹೊಳೆ ಅಭಯಾರಣ್ಯಕ್ಕೆ ಸಮೀಪದ ನಗರ ಮೈಸೂರು. ಇದು ಬೆಂಗಳೂರು ಹಾಗೂ ದೇಶದ ಎಲ್ಲಾ ಪ್ರಮುಖ ನಗರಗಳಿಂದಲೂ ರೈಲು ಮಾರ್ಗ, ವಾಯು ಮಾರ್ಗ, ರಸ್ತೆ ಮಾರ್ಗಗಳಿಂದ ಸಂಪರ್ಕ ಹೊಂದಿದೆ. ಮೈಸೂರಿನ ಬಾಡಿಗೆ ಟ್ಯಾಕ್ಸಿ ಅಥವಾ ಸ್ವಂತ ಕಾರಿನಲ್ಲಿ ನಾಗರಹೊಳೆಗೆ ಹೋಗಬಹುದು. ಜೊತೆಗೆ ಮೈಸೂರಿನಿಂದ ಎಚ್‌.ಡಿ. ಕೋಟೆಗೆ ಬಂದು, ಅಲ್ಲಿಂದ 30 ಕಿ.ಮೀ. ದೂರದಲ್ಲಿರುವ ನಾಗರಹೊಳೆಗೆ ಬಸ್ಸುಗಳ ಮುಖಾಂತರ ತಲುಪಬಹುದು.

ವಸತಿ : ಫಾರೆಸ್ಟ್ ರೆಸ್ಟ್ ಹೌಸ್‌ ಅಥವಾ ಡಾರ್ಮೆಟ್ರಿಗಳು ಹಾಗೂ ಟಿ.ಬಿ.ಗಳು ಲಭ್ಯವಿದ್ದು, ಡಬ್ಬಲ್ ರೂಂ ಸಹ ನ್ಯಾಯಬೆಲೆಗೆ ಸಿಗುತ್ತದೆ. 15 ದಿನಗಳಿಗೆ ಮೊದಲೇ ಹುಣಸೂರಿನ ಅರಣ್ಯ ವಿಭಾಗಕ್ಕೆ ಫೋನ್‌ ಮಾಡಿ ಅಡ್ವಾನ್ಸ್ ಬುಕ್ಕಿಂಗ್‌ ಮಾಡಿಸಿದರೆ ಬಹಳ ಒಳ್ಳೆಯದು. ಇತರ ವಸತಿ ಕೇಂದ್ರಗಳೆಂದರೆ ಕಬಿನಿ ರಿವರ್‌ ಲಾಡ್ಜ್, ಖಾಸಗಿ ಲಾಡ್ಜ್ ಹಾಗೂ ರೆಸಾರ್ಟ್ಸ್ ಸಹ ಉಂಟು.

ಸೂಕ್ತ ಸಮಯ : ವರ್ಷದ ಸೆಪ್ಟೆಂಬರ್‌ ಮೇ ತಿಂಗಳ ಅವಧಿ ನಾಗರಹೊಳೆ ಭೇಟಿಗೆ ಪ್ರಶಸ್ತ. ಅದರಲ್ಲೂ ಚಳಿಗಾಲದ ನವೆಂಬರ್‌ಫೆಬ್ರವರಿ ಕಾಲ, 14 ಡಿಗ್ರಿ ಸೆಂಟಿಗ್ರೇಡ್‌ನ ಚುಮುಚುಮು ವಾತಾವರಣ ಹೊಂದಿದ್ದು, ಬಿಸಿಲೇರಿದಂತೆ ಆಹ್ಲಾದಕರ ವಾತಾವರಣ ಮೂಡುತ್ತದೆ.

`ನಾಗರಹೊಳೋ ಅಮ್ಮೀಾ….’ ಹಾಡನ್ನು ಗುನುಗುನಿಸುತ್ತಾ ಈ ಬಾರಿ ಅಗತ್ಯ ಪ್ರವಾಸಕ್ಕೆ ಹೊರಡಿ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ