ಅಸ್ಸಾಂ ರಾಜ್ಯದ ಒಂದು ಸಣ್ಣ ನಗರದ ಸ್ವಾತಿ ಶರ್ಮ, ತಮ್ಮ ಬಾಲ್ಯದಿಂದಲೂ ಡಿಸೈನರ್ ಡ್ರೆಸೆಸ್ ಧರಿಸುವುದರಲ್ಲಿ ಆಸಕ್ತರು. ಆದರೆ ನಗರ ಚಿಕ್ಕದು, ಭಾರೀ ಡಿಸೈನರ್ ಸ್ಟೋರ್ಸ್‌ಗಳ ದೊಡ್ಡ ಕೊರತೆ ಇದ್ದುದರಿಂದ ಅವರಿಗೆ ಅಂಥ ಡ್ರೆಸ್ ಕೊಳ್ಳಲು ತುಂಬಾ ಕಷ್ಟವಾಗುತ್ತಿತ್ತು. ಸ್ವಾತಿ ಗಮನಿಸಿದ ಮತ್ತೊಂದು ವಿಷಯವೆಂದರೆ, ಕೇವಲ ಅವರು ಮಾತ್ರವಲ್ಲದೆ ಇನ್ನೂ ಎಷ್ಟೋ ಮಹಿಳೆಯರು ಸಹ ಅವರಂತೆಯೇ ಉತ್ತಮ ಡಿಸೈನರ್ ಡ್ರೆಸೆಸ್ ಧರಿಸಲಾಗದೆ ಕಷ್ಟಪಡುತ್ತಿದ್ದರು. ಈ ಸಲುವಾಗಿಯೇ ಸ್ವಾತಿಯ ಮನದಲ್ಲಿ ಒಂದು ವಿಚಾರ ಮೂಡಿ, ವಿಶ್ವದ ಯಾವುದೇ ಮೂಲೆಯಿಂದಾದರೂ ಜನ ಮನೆಯಲ್ಲೇ ಕುಳಿತು ತಮಗೆ ಬೇಕಾದ ಡ್ರೆಸ್‌ಗೆ ಆರ್ಡರ್‌ನೀಡುವಂತಾದರೆ ಎಷ್ಟು ಚೆನ್ನ ಎಂದು ಆಲೋಚಿಸಿದರು. ಸ್ವಾತಿ ಮೂಲತಃ ವ್ಯಾಪಾರಸ್ಥ ಕುಟುಂಬಕ್ಕೆ ಸೇರಿದರು.
ವಾಣಿಜ್ಯೋದ್ಯಮದಲ್ಲಿ ಪದವಿ, ಸಿ.ಎಸ್ ಪೂರೈಸಿ ಫ್ಯಾಷನ್ ಉದ್ಯಮಕ್ಕೆ ಬರಲು ಬಯಸಿದರು. 2011ರಲ್ಲಿ ಆಕೆ ಒಂದು ಫ್ಯಾಷನ್‌ಸ್ಟೋರ್‌ನಲ್ಲಿ ಕೆಲಸ ಮಾಡಿದರು. ಅಲ್ಲಿ ಈ ಉದ್ಯಮದ ಆಳದ ಬಗ್ಗೆ ತಿಳಿದುಕೊಂಡರು. ಅದು ಆಕೆ ಫ್ಯಾಷನ್ ಇಂಡಸ್ಟ್ರಿಗೆ ಬರಲು ನಾಂದಿ. 2014ರಲ್ಲಿ ಡೀ ವಿಬ್‌ಗಯಾರ್ ರೂಪದಲ್ಲಿ ಆಕೆ ತಾವು ಕಂಡ ಕನಸನ್ನು ನನಸಾಗಿಸಿಕೊಂಡರು.
ಡೀ ವಿಬ್‌ಗಯಾರ್ ಒಂದು ಇಕಾಮರ್ಸ್ ಪೋರ್ಟ್, ಅದು ಫ್ಯಾಷನ್‌ಲೈಫ್ ಸ್ಟೈಲ್ ಪ್ರಾಡಕ್ಟ್ಗೆ ಹೆಸರುವಾಸಿ. ಅಲ್ಲಿಂದ ಶುರುವಾಗಿ ಮುಂದೆ ಬ್ಯಾಗ್ಸ್, ಫ್ಯಾಷನ್ ಅಪೇರ್, ಚಪ್ಪಲಿ, ಬೂಟು, ಲೇಡೀಸ್ ಆ್ಯಕ್ಸೆಸರೀಸ್‌ನಿಂದ ಡೆಕೋವರೆಗೆ ಈಗ ಇಲ್ಲಿ ಎಲ್ಲ ಲಭ್ಯ.
ಈ ಮೂಲಕ ಸ್ವಾತಿ ಸುಮಾರು ಮಂದಿ ಡಿಸೈನರ್ಸ್ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಅವರುಗಳು ಫೆಂಟಾಸ್ಟಿಕ್ ಡಿಸೈನ್ ಮಾಡಿಕೊಟ್ಟಿರುತ್ತಾರೆ. ಬೇರೆ ಊರು, ರಾಜ್ಯಗಳಿಗೆ ಅದನ್ನು ತಲುಪಿಸಲು ಕಷ್ಟಪಡುವವರಿಗೆ ಇಲ್ಲಿ ಉತ್ತಮ ಅವಕಾಶ. ದೇಶೀ, ಮಾಡರ್ನ್, ಸೊಫೆಸ್ಟಿಕೇಟೆಡ್ ಹಾಗೂ ಬಿಲ್‌ಕುಲ್ ಡಿಫರೆಂಟ್ ಕಂಟೆಂಪರರಿ ಡಿಸೈನ್ ಎಲಿಮೆಂಟ್ಸ್ ನ್ನು ವಿಶಿಷ್ಟ ವಿಧಾನದಲ್ಲಿ ಪ್ರಸ್ತುತಪಡಿಸುವುದೇ ಈ ಕಂಪನಿಯ ಸ್ಪೆಷಾಲಿಟಿ.
ನಿಮ್ಮ ಕನಸನ್ನು ನನಸಾಗಿಸಲು ಒಬ್ಬ ಮಹಿಳೆಯಾಗಿ ನೀವು ಏನೆಲ್ಲ ಕಷ್ಟ ಪಡಬೇಕಾಯಿತು?
ಹೌದು, ಮಹಿಳೆಯಾಗಿ ಈ ಉದ್ಯಮಕ್ಕಿಳಿದ ಮೇಲೆ ಹಲವು ಕಷ್ಟಗಳನ್ನು ಎದುರಿಸಲೇಬೇಕಾಗುತ್ತದೆ. ಏಕೆಂದರೆ ಭಾರತೀಯ ಸಮಾಜ ಮಹಿಳೆಯರ ವ್ಯವಹಾರಜ್ಞಾನವನ್ನು ಭರವಸೆಯಿಂದ ಒಪ್ಪಿಕೊಳ್ಳುವುದಿಲ್ಲ, ಬಿಸ್‌ನೆಸ್ ಕೇವಲ ಗಂಡಸರ ಸಾಮ್ರಾಜ್ಯ ಎನ್ನುತ್ತದೆ. ಹೀಗಾಗಿ ಆರಂಭದಲ್ಲಿ ನಾನೂ ಈ ನಿಟ್ಟಿನಲ್ಲಿ ಬೆಟ್ಟಕ್ಕೆ ಕಲ್ಲು ಹೊರಬೇಕಾಯ್ತು. ಮಹಿಳೆಯರು ಕೇವಲ ಅಡುಗೆಮನೆಗೆ ಸೀಮಿತವಲ್ಲ ಎಂದು ನಾನು ಪ್ರೂವ್ ಮಾಡಿ ತೋರಿಸಬೇಕಾಯ್ತು. ಈಗಲೂ ನನಗೆ ಮನೆವಾರ್ತೆ ಮತ್ತು ಹೊರಗಿನ ಕೆಲಸಗಳಲ್ಲಿ ಬ್ಯಾಲೆನ್ಸ್ ತೋರಿಸುವುದು ಸುಲಭದ ವಿಷಯವಲ್ಲ, ಪ್ರಯತ್ನಮೀರಿ ಸರಿದೂಗಿಸುತ್ತಿದ್ದೇನೆ.
ನಿಮ್ಮ ದೃಷ್ಟಿಯಲ್ಲಿ ಫ್ಯಾಷನ್ ಎಂದರೇನು?
ಯಾವುದು ಚಾಲ್ತಿಯಲ್ಲಿದೆಯೋ ಅದನ್ನು ಕಣ್ಣು ಮುಚ್ಚಿ ಫಾಲೋ ಮಾಡುವುದೇ ಫ್ಯಾಷನ್ ಅಲ್ಲ. ಯಾವ ಡ್ರೆಸ್ ಡಿಸೈನ್ಸ್ ನಿಮ್ಮ ವ್ಯಕ್ತಿತ್ವಕ್ಕೆ ಒಪ್ಪುತ್ತದೋ, ನಿಮಗೆ ಕಂಫರ್ಟೆಬಲ್ ಎನಿಸುತ್ತದೋ ಅದುವೇ ನಿಜವಾದ ಫ್ಯಾಷನ್. ಫ್ಯಾಷನ್ ನಿಮ್ಮ ಕುರಿತಾದ ಸಹಜ ಅಭಿವ್ಯಕ್ತಿ. ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಇತರರೂ ತಲೆದೂಗುವಂತಿರಬೇಕು.
ಮನೆ ಮತ್ತು ಆಫೀಸ್ ವ್ಯವಹಾರವನ್ನು ಒಟ್ಟೊಟ್ಟಿಗೆ ಹೇಗೆ ನಿಭಾಯಿಸುತ್ತೀರಿ?
ನನಗೆ 3 ವರ್ಷದ ಒಬ್ಬ ಮಗನಿದ್ದಾನೆ. ನಮ್ಮದು ಅವಿಭಕ್ತ ಕುಟುಂಬ, ಹೀಗಾಗಿ ಸುಲಭವಾಗಿ ನಿಭಾಯಿಸಬಹುದಾಗಿದೆ. ಅವನು ಶಾಲೆಯಿಂದ ಬಂದಾಗ, ಅವನ ಬೇಕು ಬೇಡ ಗಮನಿಸಲು ಅಜ್ಜಿ ತಾತಾ ಇರುತ್ತಾರೆ. ನಾನು ಮನೆಗೆ ಮರಳಿದಾಗ ನನ್ನೊಂದಿಗೆ ಸಮಯ ಕಳೆಯುತ್ತಾನೆ, ಹೀಗೆ ಮನೆವಾರ್ತೆ ನಡೆಯುತ್ತದೆ.
ಪತಿ ಜೊತೆ ಬೆರೆತು ಬಿಸ್‌ನೆಸ್ ನಿಭಾಯಿಸುವುದು ಹೇಗೆ ಅನಿಸುತ್ತೆ?
ನನ್ನ ಅನುಭವದ ಪ್ರಕಾರ, ನಿಮ್ಮನ್ನು ಯಾರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೋ, ನಿಮ್ಮ ನಿರ್ಧಾರಗಳನ್ನು ವಿಶ್ಲೇಷಿಸುವ ಬದಲು ಜೊತೆಯಾಗಿ ನಿಂತು ಗುರಿಸಾಧನೆಗೆ ಕೈ ಜೋಡಿಸುವರೋ ಅಂಥವರೊಂದಿಗೆ ಮಾತ್ರ ಬಿಸ್‌ನೆಸ್ ನಡೆಸಬೇಕು. ಹೀಗಾದಾಗ ನಿಮ್ಮ ಪಾರ್ಟ್‌ನರ್ ಜೊತೆ ಉತ್ತಮ ಅಂಡರ್ ಸ್ಟ್ಯಾಂಡಿಂಗ್ ಇರುತ್ತದೆ. ಅದು ನಿಮ್ಮ ಕೆಲಸದಲ್ಲೂ ಪ್ರತಿಫಲಿಸುತ್ತದೆ.
ನಿಮ್ಮ ಯಾವ ಕನಸು ಇನ್ನೂ ಕೈಗೂಡಿಲ್ಲ ಅಂತೀರಾ?
ನಾನು ಈ ವ್ಯವಹಾರ ಇನ್ನಷ್ಟು ಮತ್ತಷ್ಟು ವಿಸ್ತೃತಗೊಳ್ಳುತ್ತಾ ಇಡೀ ದೇಶದ ತುಂಬಾ ಹರಡುವುದನ್ನು ಕಾಣಬಯಸುತ್ತೇನೆ. ದೇಶದ ನಾನಾ ಮೂಲೆಗಳ ಡಿಸೈನರ್ಸ್ ಇದರಡಿ ಬಂದಾಗ ಸಹಜವಾಗಿ ಬೇಡಿಕೆ ಹೆಚ್ಚುತ್ತದೆ. ನನ್ನ ಪ್ರಕಾರ, ಭಾರತೀಯ ಡಿಸೈನರ್ಸ್‌ಗೆ ಇನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮನ್ನಣೆ ದೊರಕಿಲ್ಲ. ನಮ್ಮವರಿಗೆ ಹೊರದೇಶಗಳಲ್ಲೂ ಮನ್ನಣೆ ಸಿಗುವಂತೆ ಈ ಕಂಪನಿ ಮೂಲಕ ಏನಾದರೂ ಮಾಡಬೇಕೆಂಬುದೇ ನನ್ನ ಕನಸು. ವಿದೇಶಗಳಲ್ಲಿ ಭಾರತೀಯ ಡಿಸೈನರ್ಸ್ ಕುರಿತು ಮಾತನಾಡುವಾಗ ಅವರು ಕಲಾತ್ಮಕ ಮಾಹಿತಿ ಇಲ್ಲದೆಯೇ ಥಳುಕು ಬಳುಕಿಗೆ ಪ್ರಾಶಸ್ತ್ಯ ನೀಡುತ್ತಾರೆ ಎಂಬ ಆರೋಪವಿದೆ. ಈ ಆಪಾದನೆ ಸರಿಪಡಿಸುವುದೇ ನನ್ನ ಕನಸು.
ಈ ಆಧುನಿಕ ಯುಗದಲ್ಲಿ ಮಹಿಳೆಯರ ಕುರಿತಾಗಿ ಜನರ ವಿಚಾರ ಬದಲಾಗಿದೆ ಅಂತೀರಾ?
ಹೌದು, ಜನರ ಯೋಚನಾ ಧಾಟಿ ನಾಟಕೀಯವಾಗಿ ಬದಲಾಗಿದೆ. ಉದಾ, ಹಿಂದೆಲ್ಲ ನಮ್ಮ ಕುಟುಂಬದವರು, ಏನಾದರೂ ಬಹಳ ಅಗತ್ಯವಿದ್ದಾಗ ವಿಧಿಯೇ ಇಲ್ಲವೆಂದಾಗ ಮಾತ್ರ ಹೆಂಗಸು ಹೊರಗೆ ಹೋಗಿ ದುಡಿಯಬೇಕು ಎಂದಿತ್ತು. ಆದರೆ ಈ ಭಾವನೆ ಈಗ ಬದಲಾಗಿದೆ. ಈಗ ಮಹಿಳೆ ತಮ್ಮ ಆಸೆ ಪೂರೈಸಿಕೊಳ್ಳಲು ಹಾಗೂ ಜೀವನದ ಇನ್ನೊಂದು ಮಗ್ಗುಲನ್ನು ಕಾಣಲು ಹೊರಗೆ ಕೆಲಸ ಮಾಡಬಹುದೆಂದು ಅವರೂ ಒಪ್ಪುತ್ತಾರೆ. ಹೆಂಗಸರು ಗಂಡಸರಿಗಿಂತ ತಮ್ಮ ಕೆಲಸದಲ್ಲಿ ಹೆಚ್ಚು ನಿಷ್ಠಾವಂತರೆಂಬುದು ಸಾಬೀತಾಗಿದೆ, ಈ ಕುರಿತಾಗಿ ಹಿಂದೆ ಯಾರೂ ಆಲೋಚಿಸುತ್ತಲೂ ಇರಲಿಲ್ಲ.
– ಪಿ. ಗಿರಿಜಾ