ಸಂಬಂಧಗಳಲ್ಲಿ ಈಗ ಎಲ್ಲ ಇನ್‌ಸ್ಟೆಂಟ್ ಆಗತೊಡಗಿವೆ. ಹೀಗಾಗಿ ಹಳೆಯ ಗಾದೆ ಮಾತು ಬದಲಾಗುತ್ತಿದೆ. `ಲಗ್ನಪತ್ರಿಕೆ ಮುಗಿಯುತ್ತಿದ್ದಂತೆ ಮುಹೂರ್ತದ ದಿನ ಓಡಿ ಬಂತು,’ ಎಂಬುದು ಬದಲಾಗಿ ಈಗ `ಮುಹೂರ್ತ ಮುಗಿಯುತ್ತಿದ್ದಂತೆ ಡೈವೋರ್ಸ್‌ಆಗೇಹೋಯ್ತು!’ ಮಾಮೂಲಿ ಎನಿಸಿಬಿಟ್ಟಿದೆ.
ಇಂದಿನ ಯುವಜನತೆಗೆ `ಜಗಳ ಶುರುವಾಯ್ತು ಡೈವೋರ್ಸ್ ಆಗ್ಹೋಯ್ತು,’ ಎಂಬುದು ಟ್ರೆಂಡ್ ಆಗಿಹೋಗಿದೆ. ಪ್ರೇಮ ಪ್ರಕರಣಗಳಲ್ಲಿ ಬಿಝಿ ಎನಿಸಿರುವ ಅಮೆರಿಕನ್‌ಪಾಪ್ ಸ್ಟಾರ್ ಸಿಂಗರ್ ಜೆನಿಫರ್ ಲೋಪೇಸ್ ಈಗಾಗಲೇ 3 ಬಾರಿ ಡೈವೋರ್ಸ್‌ಪಡೆದಾಯಿತು. ಆ್ಯಕ್ಟರ್ ಮಾಡೆಲ್ ಓಜಾನಿ ನೇಲಾ ಜೊತೆ ಈಕೆಯ ಸಂಬಂಧ 1 ವರ್ಷ ಸಹ ಇರಲಿಲ್ಲ. ಡ್ಯಾನ್ಸರ್ ಕ್ರಿಸ್ ಜೂಡ್ ಜೊತೆ 2 ವರ್ಷ ಇದ್ದದ್ದೇ ಹೆಚ್ಚು. ಅದೇ ತರಹ ಗಾಯಕ ಮಾರ್ಕ್ ಆಲ್ಯೋನಿ ಜೊತೆ 3 ವರ್ಷಕ್ಕೆ ಮೊದಲೇ ಡೈವೋರ್ಸ್ ಆಯಿತು.
ಇದೇ ತರಹ ಭಾರತದಲ್ಲಿ ಕಣ್ಣಾಡಿಸಿದರೆ, ಉ. ಭಾರತದ ಭೋಜ್‌ಪುರದಲ್ಲಿ ಸುನೀತಾ ಮದುವೆಯಾದ ಎರಡೇ ದಿನಗಳಲ್ಲಿ ತನ್ನ ಕೈಗಳ ಮದರಂಗಿ ಬಣ್ಣ ತೇಲುವ ಮೊದಲೇ, ಗಂಡ ತನಗೆ ಇಷ್ಟ ಆಗಲಿಲ್ಲ ಎಂಬ ನೆಪ ಹೇಳಿ ವಿಚ್ಛೇದನಕ್ಕೆ ಅರ್ಜಿ ಹಾಕಿದಳು.
ಹೀಗೆಯೇ ಬಿಕೇನೇರ್‌ನಲ್ಲಿ ಫೇಸ್‌ಬುಕ್‌ನಿಂದ ಆರಂಭಗೊಂಡ ಲವ್ ಸ್ಟೋರಿಯೊಂದು, 1 ವಾರ ಮುಗಿಯುಷ್ಟವರಲ್ಲೇ ಮದುವೆ ಆದರು. ಇನ್ನೇನು? ಮಧುಚಂದ್ರ ಮುಗಿಸಿ ಬರುವಷ್ಟರಲ್ಲಿ ದೊಡ್ಡ ಜಗಳವಾಗಿ, ಪರಸ್ಪರ ಸಹಮತಿಯಿಂದ ವಿಚ್ಛೇದನಕ್ಕೆ ಮುಂದಾದರು.
ದಿಢೀರ್ ಮದುವೆ ದಿಢೀರ್ ಡೈವೋರ್ಸ್‌ಗಳ ಕೆಲವು ಪ್ರಕರಣಗಳ ಕಾರಣ ಕೆದಕಿದರೆ ಬೆಚ್ಚಿಬೀಳುಂತಾಗುತ್ತದೆ. ಆಫೀಸಿನಿಂದ ಬರಲು ತಡವಾಯ್ತು, ಜೊತೆಯಲ್ಲಿ ಡ್ರಿಂಕ್ಸ್ ತೆಗೆದುಕೊಳ್ಳಲಿಲ್ಲ, ಗೊರಕೆ…… ಇತ್ಯಾದಿ. ಒಟ್ಟಾರೆ ಹೇಳುವುದಾದರೆ ಧೈರ್ಯದ ಕೊರತೆ, ಅತ್ಯಧಿಕ ಮಹತ್ವಾಕಾಂಕ್ಷೆ ಸಂಬಂಧಗಳನ್ನು ದುರ್ಬಲಗೊಳಿಸುತ್ತವೆ. ಧರ್ಮಕ್ಕೆ ಅನುಸಾರ ಮದುವೆಯಾದರು, 1-2 ವರ್ಷಗಳಲ್ಲೇ ಆ ಧಾರ್ಮಿಕ ವಿಧಿಗಳನ್ನೆಲ್ಲ ಗಾಳಿಗೆ ತೂರಿ ವಿಚ್ಛೇದನಕ್ಕೆ ಮೊರೆಹೋಗುವುದು ನಿಜಕ್ಕೂ ವಿಪರ್ಯಾಸ.
ಇನ್‌ಸ್ಟೆಂಟ್ ದೋಸ್ತಿ ಹಾಗೂ ಅಷ್ಟೇ ವೇಗದ ಬ್ರೇಕ್‌ಅಪ್ ಮಾಡಿಕೊಳ್ಳುವ ಇಂದಿನ ಯುವಜನತೆಗೆ ಏನು ಹೇಳುವುದು? ಹಿಂದಿಯ ಬಿಗ್‌ಬಾಸ್‌ನಿಂದ ಖ್ಯಾತಿಗೊಂಡ ಗೌಹರ್ ಹಾಗೂ ಕುಶಾಲ್ ಟಂಡನ್ ಎಷ್ಟು ಬೇಗ ಪ್ರೇಮಿಗಳಾದರೋ ಅಷ್ಟೇ ಬೇಗ ದೂರ ಸರಿದರು. ಹೀಗೆ ಎಲ್ಲ ದಿಢೀರ್ ಆಗಿಬಿಡಬೇಕು ಎಂಬುದು ಇಂದಿನವರ ಧಾವಂತ.
ಫಾಸ್ಟ್ ಫುಡ್, ಫಾಸ್ಟ್ ಟ್ರಾಕ್ ವಾಚಸ್, ಸ್ಪೀಡಿ ಬೈಕ್ಸ್, 2 ಮಿನಿಟ್ ನೂಡಲ್ಸ್, ಹೈ ಸ್ಪೀಡ್ ಇಂಟರ್‌ನೆಟ್, ಆನ್‌ಲೈನ್ ಶಾಪಿಂಗ್, ಆನ್‌ಲೈನ್ ಪಿಜ್ಜಾ ಆರ್ಡರ್, ಆನ್‌ಲೈನ್ ಮೂವಿ ಟಿಕೆಟ್ ಬುಕಿಂಗ್, ರೆಸ್ಟೋರೆಂಟ್‌ನ ಟೇಬಲ್ ಬುಕಿಂಗ್…. ಇತ್ಯಾದಿಗಳೆಲ್ಲವೂ ಒಂದೇ ಟಚ್ ಒಂದೇ ಕ್ಲಿಕ್‌ನಲ್ಲಿ! ಇಷ್ಟು ಮಾತ್ರವಲ್ಲ ಬ್ಯೂಟಿಫುಲ್ ಆಗಿ ಕಾಣಿಸಲು ಇನ್‌ಸ್ಟೆಂಟ್ ಗ್ಲೋ. ಒಟ್ಟಾರೆ ಹೇಳಬೇಕೆಂದರೆ ಇಂದಿನ ಯುವಜನತೆಯ ಜೀವನದ ಫಂಡಾ ಎಂದರೆ ಇನ್‌ಸ್ಟೆಂಟ್‌ಸ್ಪೀಡ್. ಅವರಿಗಿರುವುದು ಒಂದೇ ಪಾಲಿಸಿ, ಮೂವ್ ಆನ್! ಸದಾ ಮುಂದುವರಿಯುವುದೊಂದೇ ಧ್ಯೇಯ. ಇಂದು ಅವರಿಗೆ ಯಾವುದು ಅತ್ಯಗತ್ಯ, ಅದನ್ನು ಹೊಂದಲೇಬೇಕು ಎಂಬ ವ್ಯಾಮೋಹ ಇರುತ್ತದೋ, ನಾಳೆಗೆ ಅದು ಕಾಲ ಕಸವಾಗಿರುತ್ತದೆ. ಹೀಗೆ ಸದಾ ವೇಗವಾಗಿ ಓಡುವುದೊಂದನ್ನೇ ಜೀವನದ ಗುರಿಯಾಗಿಸಿಕೊಂಡ ಇಂದಿನ ಯುವಜನತೆ, `ಆತುರಗಾರನಿಗೆ ಬುದ್ಧಿಮಟ್ಟ’ ಎಂಬಂತೆ ನಡೆದುಕೊಳ್ಳುತ್ತಾರೆ. ಇದರಿಂದ ಅವರ ಜೀವನದ ಮೇಲಾಗುವ ಪರಿಣಾಮಗಳನ್ನು ಗಮನಿಸೋಣ.
ಫಾಸ್ಟ್ ಫುಡ್ ಫಂಡಾ ಜೀವನದ ಅತ್ಯಂತ ಆವಶ್ಯಕ ವಸ್ತುಗಳಾದ ತಿಂಡಿಊಟಗಳೂ ಇಂದಿನವರಿಗೆ ಇನ್‌ಸ್ಟೆಂಟ್‌ಫಾಸ್ಟ್ ಆಗಿರಬೇಕು. ಹಿಂದೆಲ್ಲ ಹಸಿವಾದಾಗ, ಅಡುಗೆ ತಯಾರಾಗಲಿ ಊಟಕ್ಕೆ ಕೂರೋಣ ಎಂಬ ವ್ಯವಧಾನವಿತ್ತು. ಆದರೆ ಈಗ ಕೆಲವೇ ನಿಮಿಷಗಳಲ್ಲಿ ಇವರಿಗೆ ತ್ರೀಕೋರ್ಸ್ ಮೀಲ್ ಬೇಕೇಬೇಕು. ಅದು ಸ್ಟಾರ್ಟರ್, ಮೇನ್‌ಕೋರ್ಸ್, ಡೆಸರ್ಟ್ ಇರಲಿ, ಎಲ್ಲ ಸೂಪರ್‌ಫಾಸ್ಟ್ ಇನ್‌ಸ್ಟೆಂಟ್ ಆಗಿರಬೇಕು.
ವೇಗವನ್ನು ಚುರುಕುಗೊಳಿಸಿದ ತಾಂತ್ರಿಕತೆ
ಇಂದಿನ ಟೆಕ್ನಿಕ್ಸ್, ಯುವಜನತೆಯನ್ನು ಬಲು ಫಾಸ್ಟ್ ಆಗಿಸಿದೆ. ಅದು ಮೆಸೇಜ್ ಇರಲಿ, ಅದನ್ನೂ ಶಾರ್ಟ್‌ಕಟ್‌ನಲ್ಲೇ ಟೈಪ್ ಮಾಡುತ್ತಾರೆ. ಸೋಶಿಯಲ್ ನೆಟ್‌ವರ್ಕಿಂಗ್ ಸೈಟ್ಸ್ ಅವರ ಸೆಕೆಂಡ್ ವೈಫ್ ಆಗಿದೆ. ಆ ಮೂಲಕ ಅವರು ಸದಾ ಫ್ರೆಂಡ್ಸ್ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಫ್ರೆಂಡ್ಸ್ ಬರ್ತ್‌ಡೇಗೆ ವಿಶ್ ಮಾಡುವುದು, ಗಿಫ್ಟ್ ಕಳುಹಿಸುವುದು ಇತ್ಯಾದಿಗಳಿಗೆ ಆನ್‌ಲೈನ್ ಶಾಪಿಂಗ್ ಮಾಡುತ್ತಾರೆ. ಮಾರುಕಟ್ಟೆಯ ಅಂಗಡಿ, ಮಾಲ್‌ಗಳ ತಡಕಾಟ ಅವರಿಗೆ ಬೇಕಿಲ್ಲ. ಅವರಿಗೆ ಸದಾ ಒಂದು ಕ್ಲಿಕ್‌ನ ಮೇಲೇ ಭರವಸೆ. ಸಾಧ್ಯವಿದ್ದಿದ್ದರೆ ಇದರ ಬದಲು ಟೆಲಿಪಥಿ ಮೂಲಕವೇ ಸಂವಹನ ನಡೆಸುತ್ತಿದ್ದರೇನೋ! ಸ್ಮಾರ್ಟ್‌ಫೋನ್‌ನಲ್ಲಿನ ಲಭ್ಯಗಳು ಅವರನ್ನು ಇನ್ನಷ್ಟು ಸ್ಪೀಡ್ ಏರಿಸಿಕೊಳ್ಳುವಂತೆ ಮಾಡಿವೆ. ಅವರು ತಮ್ಮ ಎಲ್ಲಾ ಅಫಿಶಿಯಲ್ ಹಾಗೂ ಪರ್ಸನಲ್ ಕೆಲಸಗಳನ್ನು ಅದರ ಮೂಲಕ ಮಾಡಿಕೊಳ್ಳುತ್ತಾರೆ. ಓಡಾಡುವಾಗ ಅಥವಾ ಪ್ರಯಾಣದಲ್ಲಿ ಎಲ್ಲೇ ಇರಲಿ, ಫ್ರೆಂಡ್ಸ್ ಜೊತೆ ಸದಾ ಸರ್ವದಾ ಕನೆಕ್ಟೆಡ್ ಆಗಿರುತ್ತಾರೆ. ಈಗ ಅವರು ಲೈಬ್ರೆರಿಗೆ ಹೋಗಿ ಪುಸ್ತಕಗಳನ್ನು ಹುಡುಕುವ ಬದಲು ಆನ್‌ಲೈನ್
ನಾವೆಲ್ಸ್ ಓದುತ್ತಾರೆ, ಸಂಗೀತದ ಆನಂದದಲ್ಲಿ ತೇಲುತ್ತಾರೆ.
ಇನ್‌ಸ್ಟೆಂಟ್ ಸಂಬಂಧಗಳು
ಯಾವುದೇ ವಿಷಯಕ್ಕೂ ತಾಳ್ಮೆ, ಸಹನೆಯಿಂದ ಕಾಯಲಾರದ ಈ ಪೀಳಿಗೆ, ಸಂಬಂಧಗಳಲ್ಲಿ ಶಾರ್ಟ್‌ಕಟ್ ಹುಡುಕುತ್ತದೆ. ಪ್ರತಿ ವಸ್ತು ಅವರಿಗೆ ಸಮಯಕ್ಕೆ ಮೊದಲೇ ಬೇಕು ಹಾಗೂ ಅತಿ ಅವಸರದಲ್ಲಿ ಆ ಕ್ಷಣಕ್ಕೆ ಸಿಕ್ಕಿಬಿಡಬೇಕು. ಇದೇ ಮಾತು ಸೆಕ್ಸ್ ಗೆ ಸಹ ಅನ್ವಯಿಸುತ್ತದೆ. ಎಷ್ಟೋ ಸಲ ಅವಸರಕ್ಕೆ ಬಲಿಬಿದ್ದು, ಅನೈತಿಕ ದಾರಿ ಹಿಡಿದು, ಅಪರಾಧಿಗಳೂ ಆಗಿಬಿಡುತ್ತಾರೆ.
ನೌಕರಿ, ಸಂಬಂಧ, ಫ್ರೆಂಡ್ಸ್, ಫ್ಯಾಷನ್, ಗ್ಲಾಮರ್, ಬ್ಯೂಟಿ ಇತ್ಯಾದಿ ಎಲ್ಲಾ ಕ್ಷೇತ್ರಗಳಲ್ಲಿಯೂ ಅವರಿಗೆ ಎಲ್ಲ ಬೇಗ ಆಗಿಬಿಡಬೇಕು. ಪ್ರತಿ ಸಂದರ್ಭದಲ್ಲೂ ಅವರಿಗೆ ಬದಲಾವಣೆ ಹಾಗೂ ಹೊಸತನ ಬೇಕು. ಇನ್ನುಳಿದ ಸಾಧಾರಣ ವಿಷಯಗಳಿಗೆ ಇವರು ಬೇಗ ಬೋರ್ ಆಗಿಬಿಡುತ್ತಾರೆ. ಮೊದಲೆಲ್ಲ ಯಾವ ಗರ್ಲ್ ಫ್ರಂಡ್‌ನ್ನು ಒಲಿಸಿಕೊಳ್ಳಲು ಹುಡುಗ ದಿನವಿಡೀ ಶ್ರಮಿಸುತ್ತಿದ್ದನೋ, ಪ್ರೇಮ ಹಳತಾದಂತೆ, ಅವನಿಗೆ ಬೇರೊಬ್ಬ ಹುಡುಗಿ ಇಷ್ಟವಾಗಲು, ಇವಳನ್ನು ಮರೆತೇಬಿಡುತ್ತಾನೆ. ಹೀಗಾಗಿ ಇಂದಿನ ಯುವಜನತೆಗೆ ಎಲ್ಲದಕ್ಕೂ ಎಕ್ಸ್ ಪೈರಿ ಡೇಟ್ ಬೇಗ ಬಂದುಬಿಡುತ್ತದೆ. ಯಾವುದರ ಜೊತೆಯೂ ಹೆಚ್ಚು ದಿನಗಳ ಕಾಲ ಕಮಿಟೆಡ್ ಆಗಿರಲು ಬಯಸುವುದಿಲ್ಲ. ಅವರ ಫ್ರೆಂಡ್‌ಶಿಪ್ ಸಹ ಇನ್‌ಸ್ಟೆಂಟ್. ಫ್ರೆಂಡ್ಸ್ ಜೊತೆ ಭಿನ್ನಾಭಿಪ್ರಾಯ ಬಂದಾಗ, ಜಗಳ ಆದಾಗ, ಒಂದೇ ಕ್ಲಿಕ್‌ನಲ್ಲಿ ಆ ಫ್ರೆಂಡ್‌ನ್ನು ತನ್ನ ಫ್ರೆಂಡ್ ಲಿಸ್ಟ್ ನಿಂದ ಡಿಲಿಟ್ ಮಾಡಿಬಿಡುತ್ತಾರೆ. ಆನ್‌ಲೈನ್ ಡೇಟಿಂಗ್, ಲಿವ್ ಇನ್ ರಿಲೇಷನ್‌ಶಿಪ್ ಅವರ ಈ ಇನ್‌ಸ್ಟೆಂಟ್ ಆಸೆಗಳ ಪರಿಣಾಮವಾಗಿದೆ. ಅವರು ಹೇರ್‌ಕಲರ್, ಫ್ಯಾಷನ್, ಬ್ಯೂಟಿ ಪ್ರಾಡಕ್ಟ್ಸ್ ಇತ್ಯಾದಿಗಳಂತೆಯೇ ಸ್ನೇಹ, ಪ್ರೇಮ, ಸಂಬಂಧಗಳನ್ನೂ ಬದಲಾಯಿಸ ಬಯಸುತ್ತಾರೆ.
ಸೂಪರ್‌ಗಿಂತ ಇನ್ನೊಂದು ಹಂತ ಮೇಲೇರಬೇಕು ಎಂಬ ಧಾವಂತದಲ್ಲಿ ಸದಾ ಜಾಬ್ ಹಾಪಿಂಗ್ ಅಂದರೆ ಕೆಲಸ ಬದಲಾಯಿಸುತ್ತಿರುತ್ತಾರೆ. ಇವರ ಒಂದೇ ಉದ್ದೇಶವೆಂದರೆ ಕೇವಲ ಅತಿ ಎತ್ತರದ ಸ್ಥಾನ ತಲುಪಿ ಎಲ್ಲವನ್ನೂ ಬೇಗ ಬೇಗ ಪಡೆದುಕೊಳ್ಳುವುದೇ ಆಗಿದೆ. ಆದರೆ ಯಾವ ಯಶಸ್ಸು ಇಷ್ಟು ಇನ್‌ಸ್ಟೆಂಟ್ ಆಗಿ ಸಿಗುತ್ತದೋ ಅಷ್ಟೇ ಬೇಗ ಅದು ಬಿಟ್ಟು ಹೋಗಬಹುದು ಎಂಬುದನ್ನು ಅವರು ಮರೆಯುತ್ತಾರೆ. ವೈವಾಹಿಕ ಸಂಬಂಧದಲ್ಲೂ ದಿಢೀರ್ ಎಂಗೇಜ್‌ಮೆಂಟ್ ಇನ್‌ಸ್ಟೆಂಟ್‌ಮದುವೆಯನ್ನೇ ಬಯಸುತ್ತಾರೆ. ಆದರೆ ಸಂಬಂಧಗಳನ್ನು ಸಹನೆಯಿಂದ ಕಾಪಾಡಿಕೊಳ್ಳದೆ, ಡೈವೋರ್ಸ್ ಮಟ್ಟಕ್ಕೆ ಇಳಿದುಬಿಡುತ್ತಾರೆ. ಆದರೆ ಈ ಯಾವ ವಿಷಯದ ಕುರಿತೂ ಅವರಿಗೆ ಪಶ್ಚಾತ್ತಾಪವಿಲ್ಲ. ಏಕೆಂದರೆ ಸಂಬಂಧಗಳಲ್ಲೂ ಅವರಿಗೆ ಇನ್‌ಸ್ಟೆಂಟ್ ಚೇಂಜ್ ಬೇಕೇಬೇಕು. ತನ್ನ ಮನಸ್ಸಿಗೆ ಒಪ್ಪದ, ತನ್ನಿಷ್ಟಕ್ಕೆ ತಕ್ಕಂತಿರದ ಯಾವುದಕ್ಕೂ ಅವನು/ಅವಳು ಅಂಟಿಕೊಂಡಿರಲು ಬಯಸುವುದೇ ಇಲ್ಲ.
ಯುವಕರ ಹಾಗೆಯೇ ಯುವತಿಯರೂ ಸಹ ತಮ್ಮ ಕೆರಿಯರ್, ಬ್ಯೂಟಿ, ಗ್ಲಾಮರ್, ದೀರ್ಘಕಾಲ ಚೆನ್ನಾಗಿರಲೆಂದು ಮದುವೆಗಳನ್ನು ಮುಂದೂಡುತ್ತಾರೆ. ಒಂದು ಪಕ್ಷ ಮದುವೆಯಾಗಿ ಗರ್ಭ ಧರಿಸಬೇಕಾದ ಅನಿವಾರ್ಯತೆ ಬಂದಾಗ, ತಾಯಿಯಾಗಲು 9 ತಿಂಗಳ ಕಾಲ ಕಾಯುವ ಸಹನೆ ತೋರಿಸುವುದಿಲ್ಲ. ಹೀಗಾಗಿ ಮುಲಾಜಿಲ್ಲದೆ ಬಾಡಿಗೆ ತಾಯಂದಿರ (ಸರೋಗೇಟ್ ಮದರ್) ಸಹಾಯ ಪಡೆಯುತ್ತಾರೆ. ನಾರ್ಮಲ್‌ಗೆ ಬದಲಾಗಿ ಸಿಝೇರಿಯನ್ ಡೆಲಿವರಿ ಪ್ರಿಫರ್ ಮಾಡಿ ಕಾಯುವಿಕೆಗೆ ಬೇಗ ಅಂತ್ಯ ಹಾಡುತ್ತಾರೆ.
ಕಾಲಕ್ಕೆ ತಕ್ಕಂತೆ ಇರಬೇಕಾದ ಅನಿವಾರ್ಯತೆ
ಎಲ್ಲವನ್ನೂ ಬೇಗ ಬೇಗ ಪಡೆದೇ ತೀರಬೇಕು ಎನ್ನುವ ಅತಿಯಾದ ದಾಹವುಳ್ಳ ಇಂದಿನ ಯುವಜನತೆಗೆ, ಏಷ್ಯನ್ ಇನ್‌ಸ್ಟಿಟ್ಯೂಟ್‌ಆಫ್ ಮೆಡಿಕಲ್ ಸೈನ್ಸ್, ಫರೀದಾಬಾದ್‌ನ ಮನೋವಿಜ್ಞಾನಿ ಮೀನಾಕ್ಷಿ ಚಂದ್ರ, `ಇನ್‌ಸ್ಟೆಂಟ್ ಗ್ರಾಟಿಫಿಕೇಶನ್’ ಎಂದು ಹೆಸರಿಟ್ಟರು. ಈ ಅತಿಯಾದ ಬೇಕು ಬೇಕೆಂಬ ಬಯಕೆ ಕ್ಷಣಿಕ ಆನಂದ ಅಥವಾ ಸಂತುಷ್ಟಿಯನ್ನಷ್ಟೇ ತರಬಲ್ಲದು ಎನ್ನುತ್ತಾರೆ.
“ಯುವಜನತೆಯ ಈ ಸ್ವಭಾವಕ್ಕೆ ಕಾರಣ ಅವರ ಸುತ್ತಮುತ್ತಲ ವಾತಾವರಣ ಇರಬಹುದು. ಅದು ಶಾಲೆ, ಕಾಲೇಜು ಅಥವಾ ಮನೆಯಲ್ಲಿ ತಾಯಿ ತಂದೆಯರ ಸ್ವಭಾವ ಇರಬಹುದು. ಅವರುಗಳು ಮೊದಲಿನಿಂದಲೂ ಮಕ್ಕಳಿಗೆ ಬಾಲ್ಯದ ಎಲ್ಲಾ ಕೆಲಸಗಳನ್ನೂ ಬೇಗ ಬೇಗ ಮಾಡಿ ಮುಗಿಸುವಂತೆ, ಸದಾ ಮುಂದೆ ಏಳಿಗೆಯ ಹಾದಿಯಲ್ಲಿ ಫಸ್ಟ್ ಇರಬೇಕೆಂದು ಒತ್ತಾಯಿಸುತ್ತಿರುತ್ತಾರೆ.
“ಸದಾ ನಿರುತ್ಸಾಹ ಹಾಗೂ ಸುಸ್ತು ಎನ್ನುವವರನ್ನು ಯಾರೂ ಇಷ್ಟಪಡುವುದಿಲ್ಲ, ಈ ಯುಗ ಫಾಸ್ಟ್ ಯುಗ ಅಂದರೆ ಇಂದಿನ ಮಕ್ಕಳು ಪ್ರತಿಯೊಂದು ಕೆಲಸವನ್ನೂ ಆದಷ್ಟೂ ಫಾಸ್ಟಾಗಿ ಮಾಡಬೇಕೆಂದು ಮತ್ತೆ ಮತ್ತೆ ಪ್ರೇರೇಪಿಸಿರುತ್ತಾರೆ. ಪೋಷಕರ ಇಂಥ ವರ್ತನೆ ಅವರಲ್ಲಿ ಎಲ್ಲಾ ಕೆಲಸಗಳನ್ನೂ ಬೇಗ ಬೇಗ ಆತುರದಲ್ಲಿ ಮುಗಿಸುವಂತೆ ಮಾಡುತ್ತದೆ, ಎಲ್ಲವನ್ನೂ ಇನ್‌ಸ್ಟೆಂಟ್ ಆಗಿ ಪಡೆಯಲು ಪ್ರಚೋದಿಸುತ್ತದೆ.
“ಇಂಥ ಪೋಷಕರು ಮಕ್ಕಳು ಕೇಳಿದ್ದನ್ನೆಲ್ಲ ಕ್ಷಣಮಾತ್ರದಲ್ಲಿ ಕೊಡಿಸಿ, ಅವರಿಗೆ ಯಾವುದೂ ಹಣದ ಮುಂದೆ ಅಸಾಧ್ಯವಲ್ಲ ಎಂಬ ಭಾವನೆ ತುಂಬಿಸುತ್ತಾರೆ. ಇದರಿಂದ ಅವರಿಗೆ ಧಾರಾಳ ಖರ್ಚು ಮಾಡುವ ಗುಣ ಮಾತ್ರವಲ್ಲದೆ, ಆತ್ಮವಿಶ್ವಾಸದ ಕೊರತೆಯೂ ಮೂಡುತ್ತದೆ. ಮುಂದೆ ಅವರು ಬೆಳೆದಂತೆ ಹಠಮಾರಿಗಳಾಗುತ್ತಾರೆ, ತಾವು ಬಯಸಿದ್ದು ಸಿಗದಿದ್ದಾಗ ಸೇಡಿನ ಭಾವನೆ ಅಥವಾ ಡಿಪ್ರೆಶನ್‌ಗೆ ತುತ್ತಾಗುತ್ತಾರೆ. ಅಂಥವರು ಮುಂದೆ ಸಣ್ಣಪುಟ್ಟ ವಿಷಯಗಳಿಗೂ ಜಗಳವಾಡಲು ಮುಂದಾಗುತ್ತಾರೆ.
“ಪ್ರತಿ ವಿಷಯವನ್ನೂ ಪ್ರೆಸ್ಟೀಜ್ ಇಶ್ಯು ಮಾಡಿಕೊಳ್ಳುತ್ತಾರೆ, ತಮ್ಮ ಮೇಲೆ ಸ್ವನಿಯಂತ್ರಣ ಕಳೆದುಕೊಳ್ಳುತ್ತಾರೆ. ಖಾಸಗಿ ಕಮರ್ಷಿಯಲ್ ಕಂಪನಿಗಳು ಇಂಥವರ ಈ ಇನ್‌ಸ್ಟೆಂಟ್ ಗ್ರಾಟಿಫಿಕೇಶನ್‌ನ ಬಯಕೆಯ ದುರ್ಲಾಭ ಪಡೆಯುತ್ತವೆ. ಯುವಜನತೆಯ ಈ ಸ್ವಭಾವವನ್ನು ಗಮನದಲ್ಲಿರಿಸಿಕೊಂಡೇ ದಿನೇದಿನೇ ಅತ್ಯಾಧುನಿಕ ಪ್ರಾಡಕ್ಟ್ಸ್ ಲಾಂಚ್ ಮಾಡುತ್ತಿರುತ್ತಾರೆ. ಅದು ಫುಡ್, ಬ್ಯೂಟಿ, ಗ್ಯಾಜೆಟ್ಸ್, ಕಾರ್, ಬೈಕ್ ಯಾ ಪ್ರಾಡಕ್ಟೇ ಆಗಿರಬಹುದು, ಎಲ್ಲಕ್ಕೂ ಯಾವುದು ಹೆಚ್ಚಿನ ಸ್ಪೀಡ್‌ಇನ್‌ಸ್ಟೆಂಟ್ ಎಂದು ನೋಡಿ ಪಡೆಯುತ್ತಾರೆ.
“ಹೀಗಿರುವ ಯುವಜನತೆ ಇನ್‌ಸ್ಟೆಂಟ್ ಗ್ರಾಟಿಫಿಕೇಶನ್‌ನಿಂದ ಹೇಗೆ ತಾನೇ ಹೊರಬರಲು ಸಾಧ್ಯ?
“ಅವಿಭಕ್ತ ಕುಟುಂಬಗಳು ದಿನೇದಿನೇ ಚದುರಿಹೋಗುತ್ತಿರುವುದೂ ಕೂಡ ಯುವಜನತೆಯ ಈ ಸ್ವಭಾವಕ್ಕೆ ಇನ್ನೊಂದು ಕಾರಣ ಎನ್ನಬಹುದು.
“ಸಮಯಾಭಾವದ ಕಾರಣ ತಾಯಿ ತಂದೆ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಲು ಸಾಧ್ಯವಾಗದು. ಈ ಕಾರಣವಾಗಿ ಅವರು ಜೀವನದಲ್ಲಿ ಎಂದೂ ಕಷ್ಟಸಹಿಷ್ಣುತೆ ಕಲಿಯುವುದೇ ಇಲ್ಲ.
“ತಮ್ಮ ಪ್ರೇಮ ತಿರಸ್ಕರಿಸುವ ಸಂಗಾತಿಯ ಮೇಲೆ ಆ್ಯಸಿಡ್ ಸುರಿಯಲು ಹಿಂಜರಿಯುವುದಿಲ್ಲ, ಸೆಕ್ಸ್ ಸಿಗದಿದ್ದಾಗ ರೇಪ್‌ಗೆ ಯತ್ನಿಸುತ್ತಾರೆ. ಇಂಥ ಸ್ವಾರ್ಥಮಯ ಪ್ರಪಂಚದಿಂದ ಅವರನ್ನು ಹೊರಬರುವಂತೆ ಮಾಡಬೇಕು. ಅಸಂತೃಪ್ತಿಯಿಂದ ಅವರು ಸಂತೃಪ್ತಿ ಕಡೆ ವಾಲುವಂತೆ ಮಾಡಬೇಕು.
“ಹೀಗಾಗಿ ತಾಯಿ ತಂದೆ ಮಕ್ಕಳ ಎಲ್ಲಾ ಸುಖ ಸೌಲಭ್ಯಗಳನ್ನೂ ಇನ್‌ಸ್ಟೆಂಟ್ ಆಗಿ ಸಿಗುವಂತೆ ಮಾಡುವ ಬದಲು ಜೀವನದ ವಾಸ್ತವತೆಯನ್ನು ಅವರಿಗೆ ಪರಿಚಯಿಸಬೇಕು. ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಅವರಲ್ಲಿ ಆತ್ಮವಿಶ್ವಾಸ ತುಂಬಿಸಿ, ಯಶಸ್ಸಿನತ್ತ ಹೆಜ್ಜೆ ಹಾಕುವಂತೆ ಮಾಡಬೇಕು,” ಎನ್ನುತ್ತಾರೆ.
– ಜಿ. ಲಲಿತಾ