“ನಿರ್ಮಾಪಕ ನಿರ್ದೇಶಕರು ಮಹಿಳಾ ಕೊರಿಯೋಗ್ರಾಫರ್ ಸಹ ಉತ್ತಮ ಕೆಲಸ ನಿರ್ವಹಿಸಬಲ್ಲರು ಎಂದು ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ…..!”
ಪೋನಿ ವರ್ಮ 2002ರಲ್ಲಿ ಒಂದು ಖಾಸಗಿ ಟಿ.ವಿ. ಚಾನೆಲ್ ಮೂಲಕ ರಿಯಾಲಿಟಿ ಶೋನಿಂದ ತಮ್ಮ ಕೆರಿಯರ್ ಆರಂಭಿಸಿದರು. ಇದಾದ ಮೇಲೆ `ಗುಜಾರಿಶ್, ಭೂಲ್ ಭುಲೈಯಾ, ದಿ ಡರ್ಟಿ ಪಿಕ್ಚರ್’ ಮುಂತಾದ ಅನೇಕ ಚಿತ್ರಗಳಲ್ಲಿ ಒಂದಾದ ಮೇಲೆ ಒಂದರಂತೆ ಕೊರಿಯೋಗ್ರಫಿ ಮಾಡುತ್ತಾ ಮುಂದುವರಿಸಿದರು. ಅವರು ಎಲ್ಲಕ್ಕೂ ಹೆಚ್ಚಾಗಿ ಅಕ್ಷಯ್ ಕುಮಾರ್‌ರ ಚಿತ್ರಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ.
ಮುಂಬೈನ ಪೋನಿ ವರ್ಮಾರಿಗೆ ಬಾಲ್ಯದಿಂದಲೇ ನೃತ್ಯವೆಂದರೆ ಪಂಚಪ್ರಾಣ. ಆಕೆಯ ಈ ಆಸಕ್ತಿಗೆ ನೀರೆರೆದು ಪೋಷಿಸಿದರು ಅವರ ಅಣ್ಣ. ಹೀಗೆ ಸಿನಿಮಾಗಳಲ್ಲಿ ಬಿಝಿಯಾಗಿರುವಾಗ ದಕ್ಷಿಣದ ಚಿತ್ರರಂಗದತ್ತ ತಿರುಗಲು, ಅಲ್ಲಿ ಕನ್ನಡದ ನಟ, ನಿರ್ದೇಶಕ ಪ್ರಕಾಶ್ ರೈರ ಸ್ನೇಹ ಗಳಿಸಿ, ಅದು ಪ್ರೇಮಕ್ಕೆ ತಿರುಗಲು ಮುಂದೆ ಅವರನ್ನೇ ಮದುವೆಯಾದರು. ಪೋನಿ ಹೇಳುತ್ತಾರೆ, “ನನಗೆ ಬಾಲ್ಯದಿಂದಲೇ ಡ್ಯಾನ್ಸ್ ಎಂದರೆ ವಿಶೇಷ ಪ್ರೀತಿ. ನಮ್ಮ ಏರಿಯಾದಲ್ಲಿನ ಸೊಸೈಟಿಯಲ್ಲಿ ಪ್ರತಿ ಹಬ್ಬಕ್ಕೂ ಪರ್ಫಾರ್ವ್‌ಮಾಡುತ್ತಿದ್ದೆ. ನಾನು ಚಿಕ್ಕಳಾಗಿದ್ದಾಗ ಸರೋಜ್ ಖಾನ್‌ಹಾಗೂ ಶ್ರೀದೇವಿಯವರನ್ನು ಅನುಕರಿಸಿ ಡ್ಯಾನ್ಸ್ ಮಾಡುತ್ತಿದ್ದೆ. ಕಾಲೇಜು ಸೇರಿದ ಮೇಲೆ ಪಾರ್ಟ್ ಟೈಂ ಡ್ಯಾನ್ಸ್ ಕಲಿಸತೊಡಗಿದೆ. ಅದು ನನ್ನ ಸಂಪಾದನೆಗೆ ಮೂಲವಾದುದಲ್ಲದೆ, ನನ್ನ ಕೆರಿಯರ್‌ಗೂ ನೆರವಾಯಿತು.”
ಡ್ಯಾನ್ಸ್ ಆಯಿತು ಪ್ಯಾಷನ್
ನೃತ್ಯಕಲೆ ಎಂಥದು ಎಂದರೆ ಪ್ರತಿ ಕ್ಷಣ ಏನಾದರೊಂದು ಹೊಸ ಬಗೆಯ, ತುಸು ವಿಭಿನ್ನವಾದ ಹಾಗೂ ರಚನಾತ್ಮಕ ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ. ಪೋನಿಯವರಿಗೆ ಈ ಎಲ್ಲಾ ವೈಶಿಷ್ಟ್ಯಗಳೂ ಇದ್ದುದರಿಂದ, ಈ ಕ್ಷೇತ್ರವನ್ನೇ ತಮ್ಮ ಕೆರಿಯರ್ ಆಗಿಸಿಕೊಳ್ಳಲು ಆಕೆ ನಿರ್ಧರಿಸಿದರು.
ತಮ್ಮ ಕೆಲಸದ ಜೊತೆ ಜೊತೆಯಲ್ಲೇ ಪೋನಿ ಗಣೇಶ್ ಹೆಗಡೆಯವರೊಂದಿಗೆ ಬೆರೆತು ಹಲವಾರು ಶೋ ನಡೆಸಿದರು. ಅದೇ ಸಂದರ್ಭದಲ್ಲಿ ವೈಭವಿ ಮರ್ಚೆಂಟ್‌ರೊಂದಿಗೆ ಸ್ನೇಹ ಬೆಳೆಸಿದರು. ವೈಭವಿಯನ್ನು ತಮ್ಮ ಅಕ್ಕನೆಂದೇ ಭಾವಿಸುವ ಪೋನಿ, ಅವರಿಂದ ಎಲ್ಲಾ ಡ್ಯಾನ್ಸ್ ಟೆಕ್ನಿಕ್ಸ್ ಬಗ್ಗೆ ಕಲಿತರು. ಆಕೆಯೊಂದಿಗೆ ಇದ್ದುಕೊಂಡೇ ಪೋನಿ ಹಲವಾರು ಚಿತ್ರಗಳಿಗೆ ಕೊರಿಯೋಗ್ರಫಿ ಮಾಡಿದರು.
ಇದೇ ಸಂದರ್ಭದಲ್ಲಿ ಈಕೆಗೆ ದಕ್ಷಿಣದ ಫಿಲ್ಮ್ ಮೇಕರ್ ಪ್ರಿಯದರ್ಶನ್‌ರಿಂದ ಫೋನ್ ಬಂದಾಗ, ಅವರ ಚಿತ್ರಕ್ಕೆ ಕೊರಿಯೋಗ್ರಫಿ ಮಾಡಲು ಒಪ್ಪಿಕೊಂಡರು. ಹೀಗೆ `ಯೇ ತೇರಾ ಘರ್ ಯೇ ಮೇರಾ ಘರ್’ ಚಿತ್ರಕ್ಕೆ ಸೋಲೋ ಕೊರಿಯೋಗ್ರಫಿ ಮಾಡಿದರು. ಪೋನಿ ಹಿಂದಿ ಚಿತ್ರಗಳಿಗೆ ಮಾತ್ರವಲ್ಲದೆ ತಮಿಳು, ಮಲೆಯಾಳಂ ಚಿತ್ರಗಳಿಗೂ ಕೆಲಸ ಮಾಡಿದ್ದಾರೆ.
ಡ್ಯಾನ್ಸ್ ನ್ನು ಅರ್ಥ ಮಾಡಿಕೊಳ್ಳುವುದು ಕೊರಿಯೋಗ್ರಫಿ ಕುರಿತಾಗಿ ಪೋನಿ ಹೇಳುತ್ತಾರೆ, “ಒಂದು ಹಾಡು ರೂಪುಗೊಳ್ಳುವಾಗ ಅದು ಹೇಗೆ ರೆಡಿ ಆಗಬೇಕೆಂಬುದನ್ನು ಒಂದು ವಿಧದಲ್ಲಿ ಅದು ತಾನೇ ತಿಳಿಸುತ್ತದೆ. ಬೇರೆ ಬೇರೆ ವಾದ್ಯಯಂತ್ರಗಳ ಬೇರೆ ಬೇರೆ ಭಾಷೆ ಇರುತ್ತದೆ. ವಯೋಲಿನ್ ನುಡಿಸುವಾಗ ತಂಗಾಳಿ ಸದ್ದು ಮಾಡಿದಂತೆ, ಸಿತಾರ್ ನುಡಿಸುವಾಗ ಕಣ್ಣುರೆಪ್ಪೆ ತೆರೆದು ಮುಚ್ಚಿದಂತೆ ಇತ್ಯಾದಿ ಭಾಷೆ ಅರ್ಥ ಮಾಡಿಕೊಂಡು ಅದನ್ನು ಅನುಭವಿಸಬೇಕು. ಕೊರಿಯೋಗ್ರಫಿಯನ್ನು ಹೃದಯಪೂರ್ವಕವಾಗಿ ಮಾಡಬೇಕು, ಕೇವಲ ಬುದ್ಧಿವಂತಿಕೆಯಿಂದಲ್ಲ. ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ಮಾಧುರಿ ದೀಕ್ಷಿತ್ ನಂ.1, ಹೀಗಾಗಿಯೇ ಆಕೆಯ ಡ್ಯಾನ್ಸ್ ದಿ ಬೆಸ್ಟ್ ಆಗಿರುತ್ತದೆ.”
ಪೋನಿಗೆ ಅಕ್ಷಯ್ ಕುಮಾರ್‌ಗಾಗಿ ಕೊರಿಯೋಗ್ರಫಿ ಮಾಡುವುದೆಂದರೆ ಬಲು ಮಜವಂತೆ. ಆತನ ಪರ್ಸನಾಲಿಟಿ ಎಂಥ ಹಾಡಿಗಾದರೂ ಪರ್ಫೆಕ್ಟ್ ಆಗಿ ಸೂಟ್ ಆಗುತ್ತದೆ ಎನ್ನುತ್ತಾರೆ. ಅದೇ ರೀತಿ ವಿದ್ಯಾ ಬಾಲನ್ ಜೊತೆ ಕೆಲಸ ಮಾಡುವಾಗಲೂ ಬಹಳ ಖುಷಿ ಆಯ್ತಂತೆ. ಆಕೆ ಗ್ರೇಟ್ ಡ್ಯಾನ್ಸರ್. ಜೊತೆ ಜೊತೆಗೆ ಸೂಪರ್ ಟ್ಯಾಲೆಂಟೆಡ್ ನಟಿಯೂ ಕೂಡ.
ಸಂಘರ್ಷದ ಮುಗಿಯದ ಕಥೆ
ಈ ಹಂತ ತಲುಪಲು ಏನೆಲ್ಲ ಸಂಘರ್ಷ ನಡೆಸಬೇಕಾಯಿತು ಎಂದು ವಿಚಾರಿಸಿದಾಗ, ಪೋನಿ ವರ್ಮ ಹೇಳುತ್ತಾರೆ, “ಇದು ಪುರುಷರ ಕ್ಷೇತ್ರ. ಇಲ್ಲಿ ಮಹಿಳೆಯರು ಬಹಳ ಕಡಿಮೆ. ಪುರುಷ ಕೊರಿಯೋಗ್ರಾಫರ್ ಅಧಿಕ ಬೋಲ್ಡ್ ಆಗಿರುತ್ತಾರೆ. ಶೂಟಿಂಗ್‌ಯೂನಿಟ್‌ನಲ್ಲೂ ಪುರುಷರು ಅಧಿಕವಾಗಿರುತ್ತಾರೆ. ನಿರ್ಮಾಪಕ ನಿರ್ದೇಶಕರು ಮಹಿಳಾ ಕೊರಿಯೋಗ್ರಾಫರ್ ಸಹ ಉತ್ತಮ ಕೆಲಸ ನಿರ್ವಹಿಸಬಲ್ಲರು ಎಂದು ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ.
“ಮಹಿಳಾ ಕೊರಿಯೋಗ್ರಾಫರ್ ಸಹ ಗಟ್ಟಿಗರೇ ಎಂದು ತೀರ್ಮಾನಿಸಲು ಹೆಚ್ಚಿನ ಸಮಯ ಬೇಕೆನಿಸುತ್ತದೆ. ಸೀನಿಯರ್‌ಕೊರಿಯೋಗ್ರಾಫರ್ಸ್ ಆದ ಸರೋಜ್‌ಖಾನ್, ಫರಾ ಖಾನ್ ಈ ಹಂತ ತಲುಪಲು ಎಷ್ಟೋ ಕಾಲ ಬೇಕಾಯಿತು.
“ನಾನು ನನ್ನ ಐಡೆಂಟಿಟಿ ಸ್ಥಾಪಿಸಲು, ಹಲವು ಸಂಘರ್ಷ ಎದುರಿಸಬೇಕಾಯ್ತು. ನನ್ನ ಗುರಿ ತಲುಪಲು ಬಹಳ ಕಷ್ಟಪಡಬೇಕಾಯಿತು, ಆದರೆ ಅಸಾಧ್ಯ ಆಗಿರಲಿಲ್ಲ.”
ಪೋನಿ ಸುಭಾಷ್ ಘೈ ಅವರೊಂದಿಗೂ ಹಲವು ಚಿತ್ರ ಮಾಡಿದ್ದಾರೆ. ಆಕೆ ಹೇಳುತ್ತಾರೆ, ಎಷ್ಟೋ ಸಲ ಚಿತ್ರ ಬಹಳ ದೊಡ್ಡದಾಯಿತು ಎನಿಸಿದರೆ, ಎಡಿಟಿಂಗ್‌ನಲ್ಲಿ ಅನಗತ್ಯ ದೃಶ್ಯಗಳೊಂದಿಗೆ ಹಾಡನ್ನೂ ಕತ್ತರಿಸಿಬಿಡುತ್ತಾರೆ. ಲೇಡಿ ಕೊರಿಯೋಗ್ರಾಫರ್ಸ್ ಸದಾ ಬಹಳ ಪರಿಶ್ರಮ ಹಾಗೂ ಕಮಿಟ್‌ಮೆಂಟ್ ಜೊತೆ ಕೆಲಸ ಮಾಡುತ್ತಾರೆ.
ಪೋನಿಗೆ ರೊಮ್ಯಾಂಟಿಕ್ ಹಾಡುಗಳನ್ನು ಕೊರಿಯೋಗ್ರಾಫ್ ಮಾಡುವುದೆಂದರೆ ಬಹಳ ಇಷ್ಟವಂತೆ. ಇದರ ಜೊತೆ ಐಟಮ್ ಸಾಂಗ್ಸ್ ಚಿತ್ರೀಕರಣ ಕೂಡ. ಇದರಲ್ಲಿ ಡ್ಯಾನ್ಸ್ ನ ಹಲವು ಶೇಡ್ಸ್ ಇರುತ್ತದೆ ಎನ್ನುತ್ತಾರೆ. ಆಕೆ ಕರಣ್ ಜೋಹರ್ ಹಾಗೂ ಯಶ್ ರಾಜ್‌ರ ಚಿತ್ರಗಳಲ್ಲಿ ಕೆಲಸ ಮಾಡಬೇಕೆಂದು ಬಹಳ ಆಸೆಪಡುತ್ತಾರೆ.
ಪೋನಿ ಮಹಿಳೆಯರಿಗೆ ನೀಡುವ ಸಂದೇಶವೆಂದರೆ, ಇಂದಿನ ಮಹಿಳೆಯರಲ್ಲಿ ಪ್ರತಿಭೆ ಅಪಾರವಾಗಿದೆ. ಅವರು ಗೃಹಿಣಿ ಅಥವಾ ಉದ್ಯೋಗಸ್ಥೆ ಆಗಿರಲಿ, ಟ್ಯಾಲೆಂಟ್‌ಗೇನೂ ಕಡಿಮೆ ಇಲ್ಲ. ಯಾವುದೇ ಕ್ಷೇತ್ರದಲ್ಲಾದರೂ ತಮ್ಮನ್ನು ತಾವು ಸಿದ್ಧಪಡಿಸಿ ತೋರ್ಪಡಿಸಬಲ್ಲರು. ಯಾವುದೇ ವಯಸ್ಸಿನಲ್ಲಾದರೂ ಪ್ರಗತಿ ಸಾಧಿಸಿ ಮುಂದುವರಿಯಬಹುದು. ನಿಮ್ಮ ಆಸೆಗಳನ್ನೆಂದೂ ಕಡೆಗಣಿಸದಿರಿ, ನಿಮ್ಮ ಕುಟುಂಬದರ ಸಹಕಾರ ಪಡೆದು ನಿಮ್ಮ ಕನಸು ನನಸಾಗಿಸಿಕೊಳ್ಳಿ ಎನ್ನುತ್ತಾರೆ.
– ಪ್ರತಿನಿಧಿ