`ದೇವ್ ಡೀ’ ಚಿತ್ರದಿಂದ ಹಿಂದಿ ಚಿತ್ರೋದ್ಯಮಕ್ಕೆ ಕಾಲಿರಿಸಿದ ಕಲ್ಕಿ ಕೋಚ್‌ಲೀನ್‌, ಸದಾ ವಿಭಿನ್ನ ತರಹದ ಅಭಿನಯದಿಂದ ಗುರುತಿಸಲ್ಪಟ್ಟರು. ಸದಾ ಸಹನ್ಮಖಿ ಎನಿಸುವ ಕಲ್ಕಿ, ಎಲ್ಲಾ ತರಹದ ಚಿತ್ರಗಳಲ್ಲೂ ನಟಿಸಿದ್ದಾರೆ. ಆಕೆಯ `ಮಾರ್ಗರೀಟಾ ವಿತ್‌ ದಿ ಸ್ಟ್ರಾ’ ಬಹುಚರ್ಚಿತ ಚಿತ್ರ ಎನಿಸಿತು. ಅದಕ್ಕಾಗಿ ಆಕೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡರು.

ಕಲ್ಕಿ ತಮಿಳುನಾಡಿನ ಊಟಿಯಲ್ಲಿ ಹುಟ್ಟಿದರು. ಆಕೆ ತಂದೆ ಜೋಯ್‌ ಕೋಚ್‌ಲೀನ್‌ ಮೂಲತಃ ಫ್ರಾನ್ಸ್ ನವರು, ಭಾರತ  ದರ್ಶನಕ್ಕೆಂದು ಎಷ್ಟೋ ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದರು. ಆಕೆಯ ತಾಯಿ ಫ್ರಾಂಕೈಸ್‌ ಆರ್ಮಡಿ ಸದಾ ಈಕೆಯ ಬೆನ್ನೆಲುಬು. ಕಲ್ಕಿ ತನ್ನ ಪ್ರಾರಂಭಿಕ ಶಿಕ್ಷಣವನ್ನು ಊಟಿಯಲ್ಲೇ ಪಡೆದರು. ಬಾಲ್ಯದಿಂದಲೇ ಆಕೆಗೆ ನಟನೆಯ ಹುಚ್ಚಿತ್ತು. ಡ್ರಾಮಾ ಮತ್ತು ಅಭಿನಯದ ಕುರಿತು ಉನ್ನತ ಮಟ್ಟದ ತರಬೇತಿಗಾಗಿ ಲಂಡನ್‌ಗೆ ಹೋದರು. ಅಲ್ಲಿನ ಥಿಯೇಟರ್‌ ಆದ `ಥಿಯೇಟರ್ ರಿಲೇಟಿವಿಟಿ’ಯಲ್ಲಿ 2 ವರ್ಷಗಳವರೆಗೂ ಕೆಲಸ ಮಾಡಿದರು. ಆ ಮೂಲಕ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ನಂತರ ಮುಂಬೈಗೆ ಬಂದು `ದೇವ್ ‌ಡೀ, ಝಿಂದಗಿ ನಾ ಮಿಲೇಗಿ ದೋಬಾರಾ, ಶಾಂಘೈ, ಮಾರ್ಗರೀಟಾ….’ ಇತ್ಯಾದಿ ಚಿತ್ರಗಳಲ್ಲಿ ಕೆಲಸ ಮಾಡಿದರು.

`ದೇವ್ ‌ಡೀ’ ಚಿತ್ರ ಬಿಡುಗಡೆಯಾದ ನಂತರ, ಕಲ್ಕಿ ಚಿತ್ರ ನಿರ್ದೇಶಕ ಅನುರಾಗ್‌ ಕಶ್ಯಪ್‌ರನ್ನು ಮದುವೆಯಾದರು. ಅದಾದ ಕೆಲವೇ ವರ್ಷಗಳಲ್ಲಿ ವಿಚ್ಛೇದನ ಆಯಿತು. ಈಗ ಆಕೆ ಒಬ್ಬರೇ ಇದ್ದಾರೆ.

ನಟನೆಯ ಕ್ಷೇತ್ರದ ಮೊದಲ ಹೆಜ್ಜೆ

ಕಲ್ಕಿಗೆ ಸಿನಿಮಾದಿಂದ ಬಿಡುವ ಸಿಕ್ಕಾಗೆಲ್ಲ ನಾಟಕಗಳಲ್ಲಿ ನಟಿಸುತ್ತಿರುತ್ತಾರೆ. ನಾಟಕಗಳಲ್ಲಿ ಅಭಿನಯ ಎಂದರೆ ಕಲ್ಕಿಗೆ ಪಂಚಪ್ರಾಣ. ಆಕೆ ಹೇಳುತ್ತಾರೆ, “ನನಗೆ ಬಾಲ್ಯದಿಂದಲೂ ನಾಟಕದ ಹುಚ್ಚಿತ್ತು. ಶಾಲೆಯ ಕ್ರಿಸ್‌ಮಸ್‌ ರಜೆಯ ಸಂದರ್ಭದಲ್ಲಿ 9 ವರ್ಷದವಳಿದ್ದಾಗಲೇ ಮೊದಲ ನಾಟಕ ಮಾಡಿದ್ದೆ. ಅದಾದ ಮೇಲೆ ದೊಡ್ಡವಳಾದಂತೆ, ಶಾಲಾ ಕಾಲೇಜುಗಳಲ್ಲಿ ನಟಿಸತೊಡಗಿದೆ. ಮುಂದೆ ಅಭಿನಯ ಕ್ಷೇತ್ರವೇ ನನ್ನ ಕೆರಿಯರ್‌ ಆಗುತ್ತದೆ ಎಂದು ಆಗ ಅಂದುಕೊಂಡಿರಲಿಲ್ಲ.”

ಕಲ್ಕಿಯ ಒಳಗಿನ ರಚನಾತ್ಮಕ ಕಲಾವಿದೆ ಕೇವಲ ಸಿನಿಮಾದ ನಟನೆಯಿಂದಷ್ಟೇ ತೃಪ್ತಿಗೊಳ್ಳಲಿಲ್ಲ. ಹೀಗಾಗಿ ತನ್ನ ರಚನಾತ್ಮಕತೆಯನ್ನು ಅಭಿವ್ಯಕ್ತಿಗೊಳಿಸುವುದಕ್ಕಾಗಿ ಕಲ್ಕಿ ತನ್ನದೇ ಆದ ಪ್ರೊಡಕ್ಷನ್‌ ಹೌಸ್‌ ತೆರೆದರು.

ಆ ಕುರಿತಾಗಿ ಕಲ್ಕಿ, “ನಾನು ನನ್ನದೇ ಆದ ಪ್ರೊಡಕ್ಷನ್‌ ಹೌಸ್‌`ಲಿಟ್ಲ್ ಪ್ರೊಡಕ್ಷನ್‌’ ತೆರೆದೆ. ಇದರಲ್ಲಿ ನನ್ನ ಮೊದಲ ನಿರ್ದೇಶನದ ನಾಟಕ `ದಿ ಲಿವಿಂಗ್‌ ರೂಂ’ ಪ್ರದರ್ಶನಗೊಂಡಿತು. ಈ ನಾಟಕ ಜನಪ್ರಿಯಗೊಂಡಿತು. ನನ್ನ ಪ್ರೊಡಕ್ಷನ್‌ ಹೌಸ್‌ನಲ್ಲಿ ಕೆಲಸ ಮಾಡುವ ಕಲಾವಿದರಿಗೆ ಸೂಕ್ತ ರೀತಿಯ ಸಂಭಾವನೆ ಸಿಗುವಂತೆ ನಾನು ಸದಾ ಪ್ರಯತ್ನಿಸುತ್ತೇನೆ. ಆಗ ಮಾತ್ರ ಅವರ ಅಭಿರುಚಿ ನಾಟಕಗಳಲ್ಲಿ ಗಾಢವಾಗಿರುತ್ತದೆ,” ಎಂದು ನನಗನಿಸುತ್ತದೆ.

“ಈಗ ಎರಡನೇ ನಾಟಕದ ರಚನೆ ಮತ್ತು ನಿರ್ದೇಶನದಲ್ಲಿ ಬಿಝಿ ಆಗಿದ್ದೇನೆ. ಇಂದು ನಮ್ಮ ದೇಶ ಸಾಕಷ್ಟು ಪ್ರಗತಿ ಸಾಧಿಸಿದೆ. ಸಂಚಾರ ಸಾಧನಗಳು ಹೆಚ್ಚಾಗಿವೆ. ಇಷ್ಟೆಲ್ಲ ಆದರೂ ರೈತರ ಆತ್ಮಹತ್ಯೆ ಮಾತ್ರ ನಿಲ್ಲುತ್ತಿಲ್ಲ. ಇದನ್ನೇ ನಾಟಕದಲ್ಲಿ ವೇದಿಕೆಯ ಮೇಲೆ ಪ್ರೇಕ್ಷಕರ ಮನಸ್ಸಿಗೆ ನಾಟುವಂತೆ ತೋರಿಸಬಹುದು. ಆಗ ಜನಸಾಮಾನ್ಯರಲ್ಲಿ ಸಹಜವಾಗಿಯೇ ಜಾಗೃತಿ ಮೂಡಿಸಬಹುದು,” ಎನ್ನುತ್ತಾರೆ.

ಕಣ್ಣು ಕೋರೈಸಿ ದಿಗ್ಭ್ರಾಂತಿ ಮೂಡಿಸುವ ಬಾಲಿವುಡ್‌ನಂಥ ರಂಗುರಂಗಿನ ಲೋಕದಲ್ಲಿ ಪ್ರೆಸೆಂಟೆಬಿಲಿಟಿ ಕುರಿತು ಮಾತನಾಡುತ್ತಾ, ಕೋಚ್‌ಲೀನ್‌, “ಗ್ಲಾಮರ್‌ ಲೋಕದಲ್ಲಿ ಎಲ್ಲಾ ಕಲಾವಿದರೂ ಸದಾ ಪ್ರೆಸೆಂಟೆಬಲ್ ಆಗಿರಲೇಬೇಕು. ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ವಿಷಯವೆಂದರೆ, ಪ್ರತ್ಯೇಕ ಕಲಾವಿದರು ತಮ್ಮ ಪ್ರೆಸೆಂಟೆಬಿಲಿಟಿಗಿಂತ ಹೆಚ್ಚಾಗಿ ತಮ್ಮ ಇಮೇಜ್‌ ಹಾಗೂ ನಟನೆಯಿಂದ ಗುರುತಿಸಲ್ಪಡುತ್ತಾರೆ ಎಂಬುದು.

“ಇದು ಕೇವಲ ಗ್ಲಾಮರ್‌ ಕ್ಷೇತ್ರಕ್ಕೆ ಮಾತ್ರ ಸೀಮಿತಲ್ಲ, ಎಲ್ಲಾ ಕ್ಷೇತ್ರಗಳಲ್ಲಿಯೂ ವ್ಯಕ್ತಿ ಪ್ರೆಸೆಂಟೆಬಲ್ ಆಗಿರಬೇಕಾದುದು ಅನಿವಾರ್ಯ. ಹೀಗಾಗಿ ನನ್ನನ್ನು ನಾನು ಸದಾ ಫಿಟ್‌ಪ್ರೆಸೆಂಟೆಬಲ್ ಆಗಿರಿಸಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಜಾಗಿಂಗ್ ಮಾಡುತ್ತೇನೆ. ಜಿಮ್ ಗೆ ಹೋಗುವುದು ಹಿಡಿಸದು. ಹೀಗಾಗಿ ವಾಕಿಂಗ್‌, ಸ್ವಿಮ್ಮಿಂಗ್‌ ನನ್ನ ಪ್ರಯಾರಿಟಿ. ಬಿಡುವಿದ್ದಾಗ ಮ್ಯೂಸಿಕ್ ಕೇಳ್ತೀನಿ,” ಎನ್ನುತ್ತಾರೆ.

ನಾಟಕಗಳ ಮೂಲಕ ವಿಭಿನ್ನತೆ

ಕವಿ ರವೀಂದ್ರನಾಥ್‌ರ ಜೀವನಗಾಥೆ ಆಧರಿಸಿದ, ಮಾನ್‌ ಕೌಲ್ ‌ವಿರಚಿತ, `ಕಲರ್‌ ಬ್ಲೈಂಡ್‌’ ಪ್ಲೇ ಬಹಳ ಪ್ರಭಾವಗೊಳಿಸಿದೆಯಂತೆ. ಜೊತೆಗೆ ರಜತ್‌ ಕಪೂರ್‌ರ `ಹ್ಯಾಮ್ಲೆಟ್‌’ ನಾಟಕದಲ್ಲಿ  ಜೋಕರ್‌ ಜೊತೆ ತಾವು ಒಂದು ಪಾತ್ರವಾಗಿರುವುದರ ಬಗ್ಗೆ ಆಕೆಗೆ ಬಹಳ ಹೆಮ್ಮೆ ಇದೆ.

ಅಷ್ಟು ಮಾತ್ರವಲ್ಲ, ಸ್ವಾಮಿ ವಿವೇಕಾನಂದರಿಂದ ಕಲ್ಕಿ ಸಾಕಷ್ಟು ಪ್ರಭಾವಿತರು. ಹೀಗಾಗಿ `ಸಿಸ್ಟರ್‌ ನಿವೇದಿತಾ’ರ ಲೈಫ್‌ಜರ್ನಿಯನ್ನು ನಾಟಕವಾಗಿ ಬಿಂಬಿಸಬೇಕೆಂಬುದು ಈಕೆಯ ಕನಸು.

“ನಾನು ಬಹಳ ಚೂಸಿಯೇನಲ್ಲ, ನನ್ನ ಬಳಿ ಬಹಳ ಆಫರ್ಸ್‌ ಏನೂ ಬರಲ್ಲ. ಎಷ್ಟೋ ಸಲ ನೆಗೆಟಿವ್ ‌ಶೇಡ್ಸ್ ನ ಆಫರ್ಸ್‌ ಹೆಚ್ಚಾಗಿ ಬರುತ್ತವೆ. ಮಾನಸಿಕ ಅಸ್ವಸ್ಥೆಯ ಪಾತ್ರ ಅಥವಾ ತಲೆ ಬಾಲವಿಲ್ಲದ ಕಥೆಗಳ ಚಿತ್ರಗಳೇ ಹೆಚ್ಚು ಅರಸಿ ಬರುತ್ತವೆ, ಅವನ್ನೆಲ್ಲ ಸಾರಾಸಗಟಾಗಿ ನಿರಾಕರಿಸುತ್ತೇನೆ. ಈಗ, ತುಸು ವಿಭಿನ್ನ ಕಾಮಿಡಿ ಅಥವಾ ರೊಮ್ಯಾಂಟಿಕ್‌ ಚಿತ್ರಗಳಲ್ಲಿ ನಟಿಸ ಬಯಸುತ್ತೇನೆ. ಅದಾದ ನಂತರ ನೆಗೆಟಿವ್ ‌ಪಾತ್ರಗಳಾದರೂ ಪರವಾಗಿಲ್ಲ. ಒಂದೇ ತರಹದ ರಿಪೀಟೆಡ್‌ ಚಿತ್ರಗಳೆಂದರೆ ಬೋರ್‌.

ನನ್ನ ಬರಲಿರುವ `ಡೆತ್‌ ಇನ್‌ ದಿ ಚರ್ಚ್‌’ ಚಿತ್ರ ವಾಸ್ತವ ಜೀವನಕ್ಕೆ ಬಹಳ ಹತ್ತಿರ,” ಎನ್ನುತ್ತಾರೆ.

ಪ್ರತಿನಿಧಿ

Tags:
COMMENT