ತಾಯಿ ತಂದೆಯರ ದಾರಿಯಲ್ಲೇ ಮಕ್ಕಳು ನಡೆಯಬೇಕೆನ್ನುವುದು ಹಿರಿಯರ ಆಸೆಯಾಗಿರುತ್ತದೆ. ಆದರೆ ಎಲ್ಲಾ ಮಕ್ಕಳೂ ಹಾಗೆ ಇರದೆ ತಮ್ಮದೇ ವಿಭಿನ್ನ ಮಾರ್ಗಗಳನ್ನು ಆಯ್ದುಕೊಂಡು ಮುನ್ನಡೆಯುತ್ತಾರೆ. ಇನ್ನು ಕೆಲವರು ಮಾತ್ರ ತಾಯಿ ತಂದೆಯರ ಮಾರ್ಗದರ್ಶನದಲ್ಲಿ ಅವರ ದಾರಿಯಲ್ಲಿಯೇ ಸಾಗಿ ಯಶಸ್ಸು ಕಾಣುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಪುತ್ರಿ ಅನನ್ಯಾ ಕಾಸರವಳ್ಳಿ ಸಹ ಒಬ್ಬರು. ಕನ್ನಡ ಚಿತ್ರ ಜಗತ್ತಿನಲ್ಲಿ ಕೇಳಿಬರುತ್ತಿರುವ ಕೆಲವೇ ಕೆಲವು ಸಮರ್ಥ ಮಹಿಳಾ ನಿರ್ದೇಶಕಿಯರಲ್ಲಿ ಇವರೂ ಒಬ್ಬರಾಗಿದ್ದಾರೆ.
ಈ ಹಿಂದೆ `ದೇಸಿ,’ `ನಾಯಿನೆರಳು’ ಮುಂತಾದ ಚಿತ್ರಗಳು ಹಾಗೂ`ಗುಪ್ತ ಗಾಮಿನಿ,’ `ಮುತ್ತಿನ ತೋರಣ’ ಮೊದಲಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅನನ್ಯಾ ಇದುವರೆಗೂ ನಾಲ್ಕೈದು ಕಿರುಚಿತ್ರಗಳನ್ನು ನಿರ್ದೇಶಿಸಿದ್ದರು. ಅವರು ನಿರ್ದೇಶಿಸಿದ್ದ `ಕಪ್ಪು ಕಲ್ಲಿನ ಸೈತಾನ’ ಎಂಬ ಕಿರುಚಿತ್ರಕ್ಕೆ ಪುಣೆ ಅಂತಾರಾಷ್ಟ್ರೀಯ ಚಿತ್ರೋತ್ಸದಲ್ಲಿ ಪ್ರಶಸ್ತಿ ಸಹ ಬಂದಿತ್ತು. ಕಿರುಚಿತ್ರಗಳನ್ನು ಮಾಡುವುದರ ಜೊತೆಗೆ ತಮ್ಮ ತಂದೆ ಗಿರೀಶ್ ಕಾಸರವಳ್ಳಿ ಅವರ ಚಿತ್ರಕ್ಕೂ ಸಹಾಯಕರಾಗಿ ದುಡಿದಿದ್ದರು.
ತಾಯಿ, ತಂದೆ, ಅಣ್ಣ ಹೀಗೆ ಮನೆಯವರೆಲ್ಲರೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕುಟುಂಬದಿಂದ ಬಂದ ಅನನ್ಯಾ ಇದೀಗ ತಾವು ಕೂಡ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಖ್ಯಾತ ನಿರ್ಮಾಪಕ ಬಸಂತ್ ಕುಮಾರ್ ಪಾಟೀಲರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಗೋಪಾಲಕೃಷ್ಣ ಪೈಗಳ ಕಥೆಯಾಧಾರಿತ ಚಿತ್ರ `ಹರಿಕಥಾ ಪ್ರಸಂಗ’ ತೆರೆಗೆ ಬರಲು ಸಿದ್ಧವಾಗಿದೆ.
ಇಂತಹ ಪ್ರತಿಭಾನ್ವಿತ ಯುವ ನಿರ್ದೇಶಕಿಯನ್ನು `ಗೃಹಶೋಭಾ’ ಮಾತಿಗೆ ಅಹ್ವಾನಿಸಿದಾಗ ಅವರು ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಸಂದರ್ಶನದ ಪ್ರಮುಖ ಸಾರಾಂಶ ಮುಂದಿನಂತಿದೆ :
ನಿಮ್ಮ ಬಾಲ್ಯದ ಕುರಿತು ತಿಳಿಸಿ.
ನಮ್ಮದು ಮಧ್ಯಮ ವರ್ಗದ ಕುಟುಂಬವಾಗಿತ್ತು. ನಾವು ಮೊದಲು ಬೆಂಗಳೂರಿನ ರಾಜಾಜಿನಗರದಲ್ಲಿದೆ. ಎಲ್ಲಾ ಮಕ್ಕಳಂತೆಯೇ ನನ್ನ ಬಾಲ್ಯ ಆಟ, ನೋಟಗಳಿಂದ ಕೂಡಿ ಸುಂದರವಾಗಿತ್ತು. ನಾನು ಓದಿದ್ದು ಕಾರ್ಮೆಲ್ ಕಾನ್ವೆಂಟ್‌ನಲ್ಲಿ. ನನ್ನ ಶಾಲಾ ದಿನಗಳಲ್ಲಿಯೇ ನಾನು ನೃತ್ಯಾಭ್ಯಾಸದಲ್ಲಿ ತೊಡಗಿದ್ದೆ. ಶಾಲಾ ವಿದ್ಯಾಭ್ಯಾಸದ ನಂತರ ಕ್ರೈಸ್ಟ್ ಕಾಲೇಜಿಗೆ ಸೇರಿದೆ. ಇದಾದ ನಂತರ ಚೆನ್ನೈನ ಎಲ್.ವಿ. ಪ್ರಸಾದ್‌ರ ಇನ್‌ಸ್ಟಿಟ್ಯೂಟ್ ಸೇರಿ ಸಿನಿಮಾ ಲೋಕದ ನಾನಾ ಪ್ರಕಾರಗಳ ಕುರಿತು ತರಬೇತಿ ಹೊಂದಿದೆ. ನಾನು ಕಾಲೇಜಿನಲ್ಲಿರುವಾಗಲೇ ಧಾರಾವಾಹಿ ಮತ್ತು ನಾಟಕಗಳಲ್ಲಿ ಅಭಿನಯಿಸತೊಡಗಿದ್ದೆ.
ನಿಮ್ಮ ತಂದೆ ಅಂತಾರಾಷ್ಟ್ರೀಯ ಮಟ್ಟದ ನಿರ್ದೇಶಕ, ತಾಯಿ ಹೆಸರಾಂತ ಕಲಾವಿದೆಯಾಗಿದ್ದರು. ನಿಮ್ಮ ಬೆಳವಣಿಗೆಯಲ್ಲಿ ಅವರ ಸಹಾಯ, ಮಾರ್ಗದರ್ಶನ ಹೇಗಿತ್ತು?
ನನಗೆ ನನ್ನ ತಂದೆಯಿಂದ ಸಾಕಷ್ಟು ಪ್ರೋತ್ಸಾಹ ಸಿಕ್ಕಿದೆ. ಇಂದು ನಾನು ಸ್ವತಂತ್ರವಾಗಿ ಚಿತ್ರ ನಿರ್ದೇಶನ ಮಾಡುತ್ತಿದ್ದೇನೆಂದರೆ ಅದರ ಹಿಂದೆ ನನ್ನ ತಂದೆಯ ಪ್ರೋತ್ಸಾಹ, ಮಾರ್ಗದರ್ಶನ ಸಾಕಷ್ಟು ಇದೆ. ನನ್ನ ತಾಯಿ ಇದ್ದಾಗ ಅವರೂ ಸಹ ನನ್ನ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದರು. ಅವರು ಆಸ್ಪತ್ರೆಯಲ್ಲಿದ್ದ ಸಮಯದಲ್ಲಿಯೂ ನಾನು ಅಭಿನಯಿಸುತ್ತಿದ್ದ ಧಾರಾವಾಹಿಗಳನ್ನು ವೀಕ್ಷಿಸುತ್ತಿದ್ದರು. ನಾನು ಎಲ್ಲಿ ಚೆನ್ನಾಗಿ ಅಭಿನಯಿಸಿದ್ದೇನೆ, ಎಲ್ಲಿ ಇನ್ನೂ ಚೆನ್ನಾಗಿ ಅಭಿನಯಿಸಲು ಅವಕಾಶಗಳಿದ್ದವು ಎನ್ನುವುದನ್ನು ಸ್ಪಷ್ಟ ತಿಳಿಸಿ ಹೇಳುತ್ತಿದ್ದರು. ನಾನೂ ಸಹ ಚಲನಚಿತ್ರ ನಿರ್ದೇಶಕಿ ಆಗಬೇಕೆನ್ನುವುದು ಅಮ್ಮನ ಕನಸಾಗಿತ್ತು. ಆ ನಿಟ್ಟಿನಲ್ಲಿ ಅವರು ನನಗೆ ಸಾಕಷ್ಟು ವಿಚಾರ ತಿಳಿಸುತ್ತಿದ್ದರು. ಅವರು ಅಭಿನಯಿಸುತ್ತಿದ್ದ ಚಿತ್ರಗಳು, ನಿರ್ದೇಶಿಸಿದ್ದ ಧಾರಾವಾಹಿಗಳ ಸೆಟ್‌ಗಳಿಗೆ ನಾನೂ ಭೇಟಿ ನೀಡುತ್ತಿದ್ದೆ. ಅವರ ಪ್ರಮುಖ ಜನಪ್ರಿಯ ಧಾರಾವಾಹಿ `ಮೂಡಲ ಮನೆ’ ಚಿತ್ರೀಕರಣದ ವೇಳೆ ನಾನೂ ಅಲ್ಲಿದ್ದೆ. ಅವರಿಂದ ಬೇಕಾದಷ್ಟು ಕಲಿತಿದ್ದೇನೆ. ಒಮ್ಮೆ ನನ್ನ ತಾಯಿ `ನೂರೊಂದು ಬಾಗಿಲು’ ಕಿರುಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾಗ, ನಾನು ಅಲ್ಲಿಗೆ ಹೋಗಿದ್ದೆ. ಆಗ ಅಮ್ಮ ನನ್ನನ್ನು ಕರೆದು ಒಂದು ಶಾಟ್ ನೀನೇ ನಿರ್ದೇಶನ ಮಾಡುವ ಎಂದು ಹೇಳುವುದರೊಡನೆ ನನಗೆ ಸ್ವತಂತ್ರವಾಗಿ ನಿರ್ದೇಶನದ ಕೆಲಸ ಮಾಡಲು ಅವಕಾಶ ನೀಡಿದ್ದರು.
ಒಟ್ಟಾರೆ ನನ್ನ ತಾಯಿ ತಂದೆ ನನಗೆ ದಾರಿದೀಪವಾಗಿದ್ದಾರೆ. ಇನ್ನೂ ಹೇಳಬೇಕೆಂದರೆ ಗಿರೀಶ್ ಕಾಸರವಳ್ಳಿಯವರ ಮಗಳಾಗಿರುವುದರಿಂದ ಅವರ ಹೆಸರನ್ನು ಉಳಿಸಿ ಅವರ ಹಾದಿಯಲ್ಲೇ ಸಾಗುವುದರಲ್ಲಿ ನನ್ನ ಮೇಲಿನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ.
ಕಮರ್ಷಿಯಲ್ ಚಿತ್ರಗಳಿಗೇ ಚಿತ್ರಮಂದಿರದ ಕೊರತೆ ಉಂಟಾಗುತ್ತಿರುವ ಈ ದಿನಗಳಲ್ಲಿ ಕಲಾತ್ಮಕ ಚಿತ್ರಗಳು, ಕಿರು ಚಿತ್ರಗಳಿಗೆ ಮಾರುಕಟ್ಟೆ, ಜನರು ಹೇಗೆ ಸ್ಪಂದಿಸುತ್ತಾರೆ?
ನಾನಿನ್ನೂ ಪೂರ್ಣ ಪ್ರಮಾಣದ ಚಿತ್ರ ನಿರ್ದೇಶನ ಮಾಡಿಲ್ಲ. ಇದು (ಹರಿಕಥಾ ಪ್ರಸಂಗ) ನನ್ನ ಚೊಚ್ಚಲ ಚಿತ್ರ. ಈವರೆಗೆ ನಾನು ಕಾಲೇಜಿನಲ್ಲಿದ್ದಾಗ ಕಿರುಚಿತ್ರಗಳನ್ನು ನಿರ್ದೇಶಿಸಿದ್ದೆ. ಇನ್ನು ಒಟ್ಟಾರೆ ಹೇಳಬೇಕೆಂದರೆ ಕನ್ನಡ ಚಿತ್ರೋದ್ಯಮ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ತೆರೆದುಕೊಳ್ಳಬೇಕಿದೆ.
ಕನ್ನಡದಲ್ಲಿ ಕಿರು ಚಿತ್ರಗಳಿಗೆ ಮೀಸಲಾದ ಮಾರುಕಟ್ಟೆಯಾಗಲಿ, ಕಿರು ಚಿತ್ರಗಳ ಪ್ರದರ್ಶನಕ್ಕೆ ಸೂಕ್ತವಾದ ವೇದಿಕೆಯಾಗಲಿ ಇನ್ನೂ ನಿರ್ಮಾಣವಾಗಿಲ್ಲ. ಮುಂದಿನ ದಿನಗಳಲ್ಲಷ್ಟೇ ಈ ಬಗೆಗೆ ಕೆಲಸ ನಡೆಯಬೇಕಿದೆ.
ನೀವೊಬ್ಬ ಮಹಿಳೆಯಾಗಿ ಚಿತ್ರ ನಿರ್ದೇಶನ, ಅಭಿನಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದೀರಿ. ಇಂದು ಚಿತ್ರರಂಗದಂತಹ ಕ್ಷೇತ್ರದಲ್ಲಿ ಮಹಿಳೆಯರು ಸಾಕಷ್ಟು ಎಡರುತೊಡರುಗಳನ್ನು ಎದುರಿಸಬೇಕಾಗುತ್ತದೆ. ತಮಗೆ ಇಂತಹ ಅನುಭವವಾಗಿತ್ತೆ?
ವೈಯಕ್ತಿಕವಾಗಿ ನನಗೆ ಅಂತಹ ಯಾವ ಅನುಭವ ಇಲ್ಲ. ಆದರೆ ಸಮಸ್ಯೆ ಖಂಡಿತಾ ಇದೆ. ಅದು ಚಿತ್ರರಂಗಕ್ಕೆ ಮಾತ್ರವೇ ಸೀಮಿತವಾಗಿಲ್ಲ, ಬೇರೆಲ್ಲಾ ಕ್ಷೇತ್ರಗಳಲ್ಲಿಯೂ ಉಂಟು. ಮಹಿಳೆ ಯಾವ ಕ್ಷೇತ್ರದಲ್ಲಿದ್ದರೂ ಅಲ್ಲಿ ಸಮಸ್ಯೆಗಳು ಎದುರಾಗಿಯೇ ಆಗುತ್ತವೆ. ಆದರೆ ಸಮಸ್ಯೆಗಳಿವೆ ಎಂದು ಕೊರಗುವುದಕ್ಕಿಂತಲೂ ಇಂದು ಮಹಿಳೆ ಆ ಸಮಸ್ಯೆಗಳೆಲ್ಲವನ್ನೂ ಹಿಮ್ಮೆಟ್ಟಿ ಮುಂದುವರಿಯುತ್ತಿದ್ದಾಳೆ ಎಂದು ಸಂತಸಪಡಬೇಕು.
ನಿಮ್ಮ ಬಿಡುವಿನ ವೇಳೆಯಲ್ಲಿ ಏನು ಮಾಡುವಿರಿ?
(ನಗುತ್ತಾ) ನಾನು ಬಿಡುವಿದ್ದಾಗ ಹೆಚ್ಚಿನ ಸಮಯ ಅಡುಗೆ ಕೆಲಸದಲ್ಲಿ ತೊಡಗುತ್ತೇನೆ. ವೈವಿಧ್ಯಮಯ ವಿಭಿನ್ನ ಖಾದ್ಯ ತಯಾರಿಸುವುದು, ಅದೇ ನನ್ನ ನೆಚ್ಚಿನ ಹವ್ಯಾಸ ಆಗಿದೆ.
ನಿಮ್ಮ ಭವಿಷ್ಯದ ಯೋಜನೆಗಳ ಕುರಿತು ತಿಳಿಸಿ……
ಸದ್ಯ ನನ್ನ ನಿರ್ದೇಶನದ `ಹರಿಕಥಾ ಪ್ರಸಂಗ’ ಚಿತ್ರ ಸಿದ್ಧವಾಗುತ್ತಿದೆ. ಇದು ನನ್ನ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪೂರ್ಣ ಪ್ರಮಾಣದ ಮೊದಲ ಚಿತ್ರವಾಗಿದ್ದು, ನನ್ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಇನ್ನು ಭವಿಷ್ಯದಲ್ಲಿ ನನ್ನ ತಂದೆ ಗಿರೀಶ್ ಕಾಸರವಳ್ಳಿಯವರ ಹೆಸರಿನಲ್ಲಿ ಒಂದು ಟ್ರೇನಿಂಗ್ ಇನ್‌ಸ್ಟಿಟ್ಯೂಟ್ ತೆರಯಬೇಕೆಂದಿದ್ದೇನೆ. ಅದು ನನ್ನ ಭವಿಷ್ಯದ ಮಹತ್ವದ ಯೋಜನೆಯೂ ಹೌದು. ಅಂತಿಮವಾಗಿ ಹೇಳಬೇಕೆಂದರೆ, ಅನನ್ಯಾ ಮೂಲಕ ಕನ್ನಡಕ್ಕೊಬ್ಬ ಪ್ರತಿಭಾವಂತ ನಿರ್ದೇಶಕಿಯ ಆಗಮನವಾಗಿದೆ. ತಂದೆ ಗಿರೀಶ್ ಅವರಂತೆಯೇ ಕನ್ನಡ ಚಿತ್ರರಂಗಕ್ಕೆ ಇವರಿಂದಲೂ ಸಾಕಷ್ಟು ಉತ್ತಮ ಹೆಸರು ಒದಗಿ ಬರಲಿ, ಅನನ್ಯಾ ಅವರ ಭವಿಷ್ಯದ ಕನಸಾದ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ ಬೇಗನೇ ಸಾಕಾರವಾಗಲಿ ಎನ್ನುವುದು `ಗೃಹಶೋಭಾ’ಳ ಆಶಯ.
– ರಾಘವೇಂದ್ರ ಅಡಿಗ ಎಚ್ಚೆನ್