“ಆರತಿ, ನೀನೀಗ ಬಹಳ ಬದಲಾಗಿದ್ದೀಯ. ಮೊದಲು ನೀನು ಹೀಗಿರಲಿಲ್ಲ. ಏನೇ ಇದ್ದರೂ ನೇರವಾಗಿ ಮಾತಾಡುತ್ತಿದ್ದೆ. ಈಗ ನಿನ್ನ ಮಾತುಗಳಲ್ಲಿ ಸಾವಿರಾರು ಬಾಣಗಳಿರುತ್ತವೆ. ಪ್ರತಿ ಮಾತಿನಲ್ಲಿಯೂ ಏನೋ ಮುಚ್ಚಿಡುವುದು. ಇಲ್ಲಿನ ವಿಷಯ ಅಲ್ಲಿ ಹೇಳೋದು, ಅಲ್ಲಿನ ವಿಷಯ ಇಲ್ಲಿ ಹೇಳೋದು. ಸಿಕ್ಕಿ ಹಾಕ್ಕೊಂಡ್ರೆ ಏನಾಗುತ್ತೇಂತ ಭಯ ಇಲ್ವಾ? ಅದಕ್ಕೆ ಯಾವಾಗಲೂ ಟೆನ್ಶನ್ನಲ್ಲಿರ್ತೀಯ.”
“ಏನು ನೀನು ಹೇಳೋದು? ನನಗೆ ಅರ್ಥ ಆಗ್ಲಿಲ್ಲ.”
“ನೇರವಾಗಿ, ಸರಳ ಭಾಷೆಯನ್ನು ಉಪಯೋಗಿಸ್ತಿದ್ದೀನಿ ನಿನಗ್ಯಾಕೆ ಅರ್ಥ ಆಗಿಲ್ಲ? ಅಂಥಾ ಕ್ಲಿಷ್ಟವಾದ ಪದಗಳನ್ನು ಉಪಯೋಗಿಸಲಿಲ್ಲ ನಾನು. ನೀನು ಹೇಗೆ ಇಷ್ಟು ಚೆನ್ನಾಗಿ ಆ್ಯಕ್ಟಿಂಗ್ ಮಾಡೋದು ಕಲಿತುಕೊಂಡೆ? ಪ್ರತಿ ಕ್ಷಣ ಅಭಿನಯ ಮಾಡ್ತಿರ್ತೀಯ ನಿನಗೆ ಬೇಸರ ಆಗಲ್ವಾ? ಅಭಿನಯದ ಗೂಡಿಂದ ಹೊರಗೆ ಬಾ. ಡ್ರಾಮಾ, ಸಿನಿಮಾದಲ್ಲಿ ಅಭಿನಯ ಮಾಡೋರು ತಮ್ಮ ಸೀನ್ ಮುಗಿದ ಮೇಲೆ ಮೇಕಪ್ ತೆಗೆದು ನೆಮ್ಮದಿಯಾಗಿ ಇದ್ದಾರೆ, ನೀನು ನೋಡಿದ್ರೆ ಮನೆಯಲ್ಲೇ ಆಟ ಆಡ್ತಿದ್ದೀಯ. ನನ್ನ ಜೊತೆ ಮಾತಾಡುವಾಗಲೇ ಒಂದು ರೀತಿ ಮಾತಾಡ್ತೀಯ. ಬೇರೆಯವರ ಜೊತೆ ಇನ್ನೊಂದು ರೀತಿ. ಯಾವಾಗ ನೋಡಿದ್ರು ತಲೆನೋವು ಅಂತ ಹೇಳ್ತಾ ಇರ್ತೀಯ. ಇಷ್ಟೊಂದು ಟೆನ್ಶನ್ನಲ್ಲಿದ್ರೆ ತಲೆನೋವು ಬರದೆ ಇನ್ನೇನಾಗುತ್ತೆ? ”
ರಾಜೀವ್ ತಮ್ಮ ತಂಗಿ ಆರತಿಯ ಜೊತೆ ಮಾತಾಡುತ್ತಿದ್ದರು. ಮಾತಾಡ್ತಾ ಮಾತಾಡ್ತಾ ಅವರ ಧ್ವನಿ ಹೆಚ್ಚಾಗುತ್ತಿತ್ತು. ಅವರ ಆಕ್ರೋಶ ಇನ್ನೂ ಹೆಚ್ಚಾಗುತ್ತಿತ್ತು. ಹಾಗೆ ಆದಾಗ ಮನೆಯಲ್ಲಿ ರುದ್ರತಾಂಡವವಾಗುತ್ತಿತ್ತು. ಆ ತಾಂಡವದಿಂದ ಏನು ಪ್ರಭಾವ ಉಂಟಾಗುತ್ತದೆಂದು ನನಗೆ ತಿಳಿದಿಲ್ಲ. ಆದರೆ, ಕೆಲವು ವಿಷಯಗಳು ಇಂದು ಅಗತ್ಯವಾಗಿ ಸ್ಪಷ್ಟವಾಗುವುದೆಂದು ನನಗೆ ತಿಳಿದಿತ್ತು.
“ಯಾವಾಗಲೂ ತಮಾಷೆ ಮಾಡೋದು ನಿನಗೆ ಅಭ್ಯಾಸವಾಗಿ ಹೋಗಿದೆ.”
“ನಾನು ಅಂಥಾದ್ದೇನು ಹೇಳಿದೆ ರಾಜೀವಣ್ಣಾ?”
“ಹುಂ ನನ್ನ ಮಾತಿನ ಅರ್ಥ ನಿನಗೆ ಆಗಲ್ಲ. ಏಕೆಂದರೆ ಯಾವಾಗ ಏನು ಹೇಳಿದ್ದೀಯಾಂತ ಸ್ವತಃ ನಿನಗೆ ಗೊತ್ತಾಗಲ್ಲ. ನೀನು ಓದಿದಳು, ತಿಳಿವಳಿಕೆ ಇರೋಳು. ಕಿಟಿ ಪಾರ್ಟಿಗಳಿಗೆ ಹೆಚ್ಚು ಹೋಗೋಕೆ ಶುರು ಮಾಡಿದಾಗಿನಿಂದ ನಿನ್ನ ಹಾವಭಾವ ಬಹಳ ಬದಲಾಗಿದೆ ನೇರವಾಗಿ ಮಾತಾಡೋದನ್ನು ನೀನು ಮರೆತು ಹೋಗ್ತೀಯ. ಅಮ್ಮ ಸರಿಯಾಗೆ ಹೇಳ್ತಿದ್ದರು ನಿನ್ನ ಬಗ್ಗೆ. ನೀನು ಎಲ್ಲರನ್ನೂ ಬಹಳ ಸುಲಭವಾಗಿ ನಂಬಿಬಿಡ್ತೀಯ. ಸಹವಾಸದ ಪ್ರಭಾವ ನಿನ್ನ ಮೇಲೆ ಬಹಳ ಬೇಗ ಆಗುತ್ತೇ ಅಂತ.”
“ಅಮ್ಮನನ್ನು ಯಾಕೆ ತಗೋಳ್ತೀ ಅಣ್ಣ? ನಿನ್ನ ಹೆಂಡತಿ ಅಂತ ಹೇಳು…..”
“ಅದರಿಂದ ಏನು ಅರ್ಥವಾಯ್ತು? ಅವಳು ನಿನ್ನ ಅತ್ತಿಗೆ! ಏನು ಮಾತಾಡ್ತಿದ್ದೀಯಾ ನೀನು? ನಿನ್ನ ಕೆಲಸ ಮಾಡಿಸಿಕೊಳ್ಳೋಕೆ ನೀನು ಅವಳಿಗೆ ಅಮ್ಮನ ಸ್ಥಾನ ನೀಡಿದೆ. ಈಗ ನಾನು ನಿನ್ನ ಬೇಜವಾಬ್ದಾರಿತನದ ಬಗ್ಗೆ ಮಾತನಾಡಿದಾಗ ಅವಳು ನನ್ನ ಹೆಂಡತಿ ಆಗಿಬಿಟ್ಟಳು.”
“ಸಾಕ್ರಿ ನಿಮ್ಮ ಮಾತು. ವಿಷಯ ಹೆಚ್ಚಿಸಬೇಡಿ. ಇವತ್ತು ರಾಖಿ ಹಬ್ಬ, ಶಾಂತವಾಗಿ ಕಳೀಲಿ.”
“ಚಂದ್ರಾ, ನೀನು ಸುಮ್ನಿರು. ಇದರಲ್ಲಿ ತಲೆ ಹಾಕಬೇಡ. ನೀನು ಸಮಸ್ಯೇನ ಮುಗಿಯೋಕೆ ಬಿಡಲ್ಲ. ನಾನು ಮಾತಾಡೋಕೆ ಶುರು ಮಾಡಿದ ಕೂಡಲೇ ಮಾತನ್ನು ಮುಗಿಸಿಬಿಡ್ತೀಯ. ಗಂಟುಗಳ ಮೇಲೆ ಗಂಟು ಬೀಳ್ತಿದೆ. ಕೊನೆ ಮೊದಲಿಲ್ಲ. ಮನೆಯ ಪರಿಸ್ಥಿತಿ ದಿನದಿನಕ್ಕೂ ಹಾಳಾಗ್ತಿದೆ. ಅಣ್ಣನಂತೂ ನನ್ನ ಜೊತೆ ಮಾತಾಡ್ತಾನೇ ಇಲ್ಲ. ನನಗೂ ಅವರಿಗೂ ಯಾವುದೇ ಜಗಳ ಆಗ್ಲಿಲ್ಲ. ಮನಸ್ತಾಪ ಇಲ್ಲ. ಅವನ ಮನೇಲಿ ಅವನು ಇದ್ದಾನೆ. ನನ್ನ ಮನೇಲಿ ನಾನಿದ್ದೀನಿ. ಆಸ್ತಿ ಬಗ್ಗೆ ಯಾವುದೇ ಜಗಳ ಇತ್ಯಾದಿ ಇಲ್ಲ. ಫೋನ್ ಮಾಡಿದಾಗಲೂ ಅಣ್ಣ ಒಂದು ರೀತಿಯ ಸಿಡಿಮಿಡಿಯಲ್ಲಿ ಇರುತ್ತಾನೆ. ನನ್ನ ಮೇಲೆ ತುಂಬಾ ದೂರುಗಳಿರೋ ಹಾಗೆ ವರ್ತಿಸ್ತಾನೆ. ನಾವಿಬ್ಬರೂ ಗಂಡ ಹೆಂಡತಿ ನಮ್ಮ ನಮ್ಮ ಕೆಲಸಗಳಲ್ಲಿ ಎಷ್ಟು ವ್ಯಸ್ತರಾಗಿ ಇರ್ತೀವೀಂದ್ರೆ ವ್ಯರ್ಥವಾದ ವಿಷಯಗಳನ್ನು ಮಾತಾಡೋಕೆ ನಮಗೆ ಪುರಸತ್ತಿಲ್ಲ. ಅಂತಹ ವಿಷಯಗಳೂ ಇಲ್ಲ…”
“ನಿಮಗೇನು ಗೊತ್ತು? ಅವರಿಗೆ ಇರಬಹುದು.” ಆರತಿ ನಿಧಾನವಾಗಿ ಹೇಳಿದಳು.
“ಇದ್ರೆ ಅವನು ನನಗೆ ಹೇಳಬಹುದು. ಅವನು ನನಗಿಂತ ದೊಡ್ಡೋನು. ನನ್ನ ಕಿವಿ ಹಿಂಡಿ ಹೇಳಿದರೆ ತಿಳಿದುಕೊಳ್ತೀನಿ. ಅವನಿಗೆ ಅಷ್ಟು ಅಧಿಕಾರ ಇದೆ. ಆದ್ರೆ ಯಾಕೋ ಗೊತ್ತಿಲ್ಲ. ನನ್ನ ಜೊತೆ ಮಾತೇ ಆಡಲ್ಲ. ನನಗೆ ಉಸಿರು ಸಿಕ್ಕಿಕೊಳ್ತಿದೆ. ನೀನೇ ಅವನಿಗೆ ನನ್ನ ಮೇಲೆ ಏನೇನೋ ಹೇಳಿರಬೇಕು. ನೀನು ಹೇಗೆ ಮಾತಾಡ್ತೀಯಾಂತ ನಿನಗೇ ಗೊತ್ತಾಗೋದಿಲ್ಲ. ಅದರಿಂದ ನನಗೆ ಹಾಗೂ ಅವನಿಗೆ ಆಗಾಗ್ಗೆ ತಲೆ ಕೆಡುತ್ತಿರುತ್ತದೆ.”
“ನಾನು ಅವರಿಗೆ ಅಂಥಾದ್ದೇನು ಹೇಳಿದೆ? ನಿನಗೂ ಅವರಿಗೂ ಸರಿ ಹೋಗೋದಿಲ್ಲ. ನೀನು ಅವರಿಗೆ ಗೌರವ ಕೊಡೋದಿಲ್ಲ. ಅಮ್ಮ ಸತ್ತ ಮೇಲೆ ನೀವಿಬ್ರೂ ಬಹಳ ಉನ್ಮತ್ತರಾದ್ರಿ. ನೆಂಟರ ಬಗ್ಗೆ ನಿಮಗೆ ಪರಿವೆಯೇ ಇರ್ತಿರಲಿಲ್ಲ. ಆ ಕಡೆ ದೊಡ್ಡ ಅತ್ತಿಗೆಗೆ ಬಹಳ ಕಾಯಿಲೆ. ನೀನು ನೋಡಿ ವಿಚಾರಿಸೋಕು ಹೋಗಲಿಲ್ಲ. ಅತ್ತಿಗೆಗೆ ಬೇಜಾರಾಗಲ್ವಾ? ನಾನೇ ಆಸ್ಪತ್ರೆಗೆ ಬೆಳಗ್ಗೆ ರಾತ್ರಿ ಊಟ ಕಳಿಸ್ತಿದ್ದೆ.”
ಈಗ ಬೆಚ್ಚಿಬೀಳುವ ಸರದಿ ನಮ್ಮದಾಗಿತ್ತು. ಇಬ್ಬರಿಗೂ ಮಾತೇ ಹೊರಡಲಿಲ್ಲ. ಆರತಿ ನಮಗೆ ಇದನ್ನು ಹೇಳಿಯೇ ಇರಲಿಲ್ಲ.
“ನೀನ್ಯಾಕೆ ನಮಗೆ ಹೇಳಲಿಲ್ಲ”
“ನಾನ್ಯಾಕೆ ಹೇಳ್ಲಿ? ನಿನಗೇ ಅಲ್ಲಿಗೆ ಹೋಗೋಕೆ ಇಷ್ಟವಿಲ್ಲ. ಹೋದತಿಂಗಳು ಎಲ್ರೂ ಒಟ್ಟಿಗೆ ಅತ್ತೆ ಮಗಳ ಮದುವೆಗೆ ಹೋಗೋಣ ಅಂತ ನಾನು ನಿನಗೆ ಹೇಳಿದ್ರೆ, ನೀನು ಅಣ್ಣ ಅತ್ತಿಗೆ ಹೋಗ್ತಿದ್ದಾರೆ. ಎಲ್ಲರೂ ಹೋಗಿ ಏನು ಮಾಡೋದು ಅಂದೆ.”
“ಅಂದ್ರೆ ಅಣ್ಣ ಅತ್ತಿಗೆ ಹೋಗ್ತಿದ್ದಾರೆ. ಅದಕ್ಕೆ ನಾವು ಹೋಗೋದು ಬೇಡ ಅಂದೇಂತ ನೀನು ಅರ್ಥ ಕಟ್ಟಿದೆ.”
“ಅದೇ ಅರ್ಥ ಇರಬಹುದು,” ಆರತಿ ಹೇಳಿದಳು.
ರಾಜೀವ್ ಆಶ್ಚರ್ಯದಿಂದ ಒಮ್ಮೆ ನನ್ನ ಮುಖ ಇನ್ನೊಮ್ಮೆ ತಂಗಿಯ ಮುಖ ನೋಡತೊಡಗಿದರು. ಅವರಿಗೆ ಅವಳು ಬರುವಂತಾಯಿತು. ಅವರ ಅಮ್ಮ ಸತ್ತ ನಂತರ ರಾಜೀವ್ಗೆ ಒಂದು ರೀತಿ ಶೂನ್ಯಭಾವ ಆವರಿಸಿತ್ತು. ಅಣ್ಣ ಅತ್ತಿಗೆಯರು ದೊಡ್ಡರೂಂತ ಇದ್ದಾರೆ. ಅವರಿಬ್ಬರೂ ರಾಜೀವ್ನನ್ನು ಬಹಳ ಪ್ರೀತಿಸುತ್ತಾರೆ. ಈ ಆರತಿ ಅಣ್ಣ ತಮ್ಮಂದಿರ ಮಧ್ಯೆ ವಿಷ ಉಣ್ಣಿಸುತ್ತಿದ್ದಾಳೆ. ಅವಳಿಗೆ ಏನನ್ನಿಸುತ್ತದೆ, ಇಬ್ಬರ ಮಧ್ಯೆ ಜಗಳ ತಂದಿಟ್ಟು ಲಾಭ ಪಡೆಯಬಹುದು ಅಂತಾನಾ?
“ಅಣ್ಣ ಅತ್ತಿಗೆಯರ ಬೇಸರಕ್ಕೆ ಏನೋ ಕಾರಣ ಇದೆ. ಆದರೆ ಅತ್ತಿಗೆಯಂತೂ ಬಹಳ ಸರಳ ಸ್ವಭಾವದವರು. ಅವರಿಗೆ ನಮ್ಮ ಮೇಲೆ ಯಾವುದೇ ದೂರುಗಳು ಇರುವುದಿಲ್ಲ. ಏಕೆಂದರೆ ಜಗಳ ಆಡಲು ಕಾರಣಗಳೇ ಇಲ್ಲ.
“ನಾನು ಹೇಳಿದ ಮಾತುಗಳನ್ನು ನಿನ್ನದೇ ಆದ ವಿಧಾನದಲ್ಲಿ ಅನುವಾದ ಮಾಡಿ ಜಗಳ ತಂದಿಡೋದು ಯಾಕೆ? ನೀನು ನಮ್ಮ ತಂಗಿ, ರಾಖಿ ಕಟ್ಟೋಕೆ ಬಂದಿದ್ದೀಯ. ಅದಕ್ಕೆ ನಿನ್ನನ್ನು ಅವಮಾನಿಸೋಕೆ ಇಷ್ಟಪಡಲ್ಲ. ರಾಖಿ ಕಟ್ಟಿಬಿಟ್ಟು ಹೋಗ್ತಾ ಇರು.” “ಮನೆಯಿಂದ ಹೋಗೂಂತ ಹೇಳ್ತಿದ್ದೀಯ… ಹಾಗಾದ್ರೆ ರಾಖಿ ಕಟ್ಟೋದು ಬೇಡ ಬಿಡು. ಮನಸ್ಸಿನಲ್ಲಿ ಪ್ರೀತಿ ಇಲ್ಲದಿದ್ರೆ ಈ ದಾರದ ಅಗತ್ಯವಾದರೂ ಏನೂ?” ಕಾಲನ್ನು ಅಪ್ಪಳಿಸುತ್ತಾ ಆರತಿ ಹೊರಟುಹೋದಳು.
ರಾಜೀವ್ ತಂಗಿಯನ್ನು ತಡೆಯಲಿಲ್ಲ. ನಾನು ಆಶ್ಚರ್ಯದಿಂದ ಮೂಕಳಾಗಿದ್ದೆ. ವಿಷಯಗಳನ್ನು ಯಾವ ಯಾವ ರೀತಿ ರೂಪಾಂತರಗೊಳಿಸಬಹುದೆಂದು ನನಗೆ ತಿಳಿದಿರಲಿಲ್ಲ. ಇಷ್ಟು ಹೊತ್ತು ಮಾತಾಡಿದ್ದೆಲ್ಲಾ ಯಾವ ಯಾವ ಕಥೆಗಳ ರೂಪ ತಾಳುತ್ತೋ ಗೊತ್ತಿಲ್ಲ. ನಾನು ನಾದಿನಿಯ ಹಿಂದೆ ಓಡಿದೆ. ಆದರೆ ರಾಜೀವ್ ಕೈಹಿಡಿದು ನಿಲ್ಲಿಸಿದರು.
“ಹೋದರೆ ಹೋಗಲಿ ಬಿಡು ಆ ಮಂಥರೇನ….. ಕನಿಷ್ಠ ಅನುಮಾನದ ಬೀಜ ಯಾರು ಬಿತ್ತಿದ್ದಾರೇಂತ ಗೊತ್ತಾಯ್ತು. ಯಾವಾಗಲೂ ನಗುನಗುತ್ತಾ ಮಾತಾಡುತ್ತಿದ್ದ ಅಣ್ಣ ಅತ್ತಿಗೆ ಈಗೇಕೆ ಮುನಿಸಿಕೊಂಡಿದ್ದಾರೇಂತ ಅರ್ಥ ಆಗಿರಲಿಲ್ಲ.”
“ಅವಳು ನಿಮ್ಮ ತಂಗಿ. ನಮ್ಮ ಮನೆಯಿಂದ ಅಳುತ್ತಾ ಹೋದಳು. ನಮ್ಮಮ್ಮ ಹೇಳ್ತಿದ್ರು ಮನೆಮಗಳು ಅಳುತ್ತಾ ಹೋದರೆ ಅಪಶಕುನ ಅಂತ.
“ನಾನು ನಿಮಗೆ ಹೇಳಿದ್ದೆ. ಇವತ್ತು ಪ್ರೀತಿಯಿಂದ ಕಳೀಲಿ ಅಂತ ನೀವು ಕೇಳಲಿಲ್ಲ. ಅನ್ಯಾಯವಾಗಿ ತೊಂದರೆ ಅನುಭವಿಸಿದ್ದಾಯಿತು,”
“ತೊಂದರೆಗೆ ಹೆದರಿದ್ರೆ ಇನ್ನಷ್ಟು ಹೆಚ್ಚು ಹೆದರಿಸುತ್ತೆ. ಒಂದು ಬಾರಿ ಬಾಯಿ ತೆರೆಯಲೇಬೇಕಿತ್ತು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ನೀನು ಹೆದರಬೇಡ. ಆರತಿಗೆ ಬುದ್ಧಿ ಕಲಿಸಬೇಕು. ನಮ್ಮ ಮೇಲೆ ಕೋಪಿಸಿಕೊಳ್ಳಬಹುದು. ಅಣ್ಣನಿಗೆ ಅವಳ ಬಗ್ಗೆ ಗೊತ್ತಾದರೆ ಇನ್ನೊಂದು ಸಾರಿ ಅವಳ ಜೊತೆ ಮಾತಾಡಲ್ಲ. ಇದೇ ಸ್ವಭಾವ ಮುಂದುವರಿಸಿದ್ರೆ ಕೊನೆಗೆ ಅವಳ ಜೀವನ ನರಕವಾಗುತ್ತೆ.”
ರಾಜೀವ್ ಸರಿಯಾಗೇ ಹೇಳಿದ್ದರು. ಜಗಳದಿಂದ ಅಥವಾ ಕಷ್ಟಗಳಿಂದ ಮನುಷ್ಯ ಎಷ್ಟು ಹೆದರ್ತಾನೋ ಕಷ್ಟಗಳು ಅವನನ್ನು ಅಷ್ಟು ಹೆದರಿಸುತ್ತವೆ. ರಾಜೀವ್ ಶಾಂತ ಮನಸ್ಸಿನವರು. ಅವರು ವ್ಯರ್ಥವಾಗಿ ಯಾರೊಂದಿಗೂ ಮನಸ್ತಾಪ ಮಾಡಿಕೊಳ್ಳುವವರಲ್ಲ. ಸ್ವಲ್ಪ ತೊಂದರೆ ಅನುಭವಿಸಿಯೂ ಒಂದು ವೇಳೆ ಶಾಂತಿ ಸಿಕ್ಕರೆ ಅವರಿಗೆ ಅದೇ ಸರಿಯೆನ್ನಿಸುತ್ತದೆ. ಆದರೆ ಶಾಂತಿಗಾಗಿ ಇಷ್ಟು ಗುಲಾಮರಾಗುವುದೂ ನರದೌರ್ಬಲ್ಯ ಉಂಟುಮಾಡುತ್ತದೆ. ಮನುಷ್ಯ ಕೊಂಚ ಉಳಿಸಲು ಕೊಂಚ ಕಳೆದುಕೊಳ್ಳಬೇಕಾಗುತ್ತದೆ. ಆದರೆ ಕೊಂಚ ಉಳಿಸಿ ಎಲ್ಲವನ್ನೂ ಕಳೆದುಕೊಳ್ಳುವುದೇಕೆ?
ನನ್ನ ನಾದಿನಿ ಆರತಿ ಮದುವೆಗೆ ಮುಂಚೆ ಬಹಳ ಒಳ್ಳೆಯವಳಾಗಿದ್ದಳು. ಇಬ್ಬರು ಅಣ್ಣಂದಿರೂ ಅವಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ನಮ್ಮ ಅತ್ತೆ ಸತ್ತ ಮೇಲೆ ಅಣ್ಣಂದಿರು ಅವಳನ್ನು ಮಗಳಂತೆ ನೋಡಿಕೊಳ್ಳುತ್ತಿದ್ದರು. ಈಗ ಅವಳೇ ನುಸಿಹುಳುವಿನಂತಾಗಿ ಸಂಬಂಧಗಳ ಮಹತ್ವವನ್ನೇ ಅರಿತಿಲ್ಲ. ನಮ್ಮಪ್ಪ ಅಮ್ಮ ನಮಗೆ ಇದೇ ಆಸ್ತಿ ಬಿಟ್ಟುಹೋದರು. ಜಮೀನುಗಳನ್ನು ಇತ್ಯಾದಿ ಜಗಳಕ್ಕೆ ಕಾರಣವಾಗುವ ಆಸ್ತಿ ಇರಲಿಲ್ಲ. ಭಾವ ತಾವು ಖರೀದಿಸಿದ ಚಿಕ್ಕ ಮನೆಯಲ್ಲಿ ವಾಸವಾಗಿದ್ದಾರೆ. ನಾವು ನಮ್ಮ ಆಫೀಸ್ ಕ್ವಾರ್ಟರ್ಸ್ನಲ್ಲಿದ್ದೇವೆ. ರಾಜೀವ್ ರಿಟೈರ್ ಆಗುವವರೆಗೆ ಅದು ನಮ್ಮದಾಗಿರುತ್ತದೆ. ನಾವು ಭಾವ ಅತ್ತಿಗೆಯರೊಂದಿಗೆ ಜಗಳವಾಡುವ ಪ್ರಸಂಗವೇ ಇರಲಿಲ್ಲ. ಅತ್ತಿಗೆ ನನಗೆ ತಾಯಿಯಂತೆಯೇ ಅನ್ನಿಸುತ್ತಾರೆ. ಅವರು ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ. ನಮಗೆ ತಿಳಿಯಲೇ ಇಲ್ಲ. ಕನಿಷ್ಠ ಭಾವನಾದರೂ ನಮಗೆ ತಿಳಿಸಬಹುದಿತ್ತು. ಹೇಳಿದ್ದರೆ ನಾನಾಗಲೀ ರಾಜೀವ್ ಆಗಲಿ ಹೋಗಿ ನೋಡದೇ ಇರತ್ತಿದ್ದೇವೆ?
“ನಡಿ ಚಂದ್ರಾ, ಬೇಗ ರೆಡಿಯಾಗು… ನಾವು ಈಗಲೇ ಅಣ್ಣ ಅತ್ತಿಗೆ ಬಳಿ ಹೋಗಬೇಕು… ಹಾಳಾದ ಹುಡುಗಿ ನಮಗೆ ಬಹಳ ತೊಂದರೆ ಕೊಟ್ಟಳು.”
ರಾಜೀವ್ರ ಗಡಿಬಿಡಿ ನ್ಯಾಯಯುತವಾಗೇ ಇತ್ತು. ಅವರ ನಿರ್ಧಾರ ನನಗೆ ಸರಿ ಎನಿಸಿತ್ತು. ಒಂದು ಗಂಟೆಯಲ್ಲಿ ನಾವು ಭಾವ ಅತ್ತಿಗೆಯರ ಎದುರಿನಲ್ಲಿದ್ದೆವು. ಅತ್ತಿಗೆ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದರು. ಭಾವ ಅತ್ತಿಗೆಗೆ ತಿಂಡಿ ತಿನ್ನಿಸುತ್ತಿದ್ದರು. ನಮ್ಮನ್ನು ಕಂಡು ಇಬ್ಬರಿಗೂ ಆಶ್ಚರ್ಯವಾಗಿತ್ತು ಅವರು ಭಾವುಕರಾಗಿದ್ದರು. ಭಾವ ಬನಿಯನ್ ಮತ್ತು ಪೈಜಾಮಾದಲ್ಲಿದ್ದರು. ಬೆವರಿನಿಂದ ತೊಯ್ದು ಹೋಗಿದ್ದರು. ವಿಪರೀತ ತಾಪವಿತ್ತು. ಹವಾಮಾನದಲ್ಲಿ ಹಾಗೂ ನಮ್ಮ ಸಂಬಂಧಗಳಲ್ಲಿ.
ನಾವು ಭಾವ ಅತ್ತಿಗೆಯರಿಗೆ ನಮಸ್ಕಾರ ಮಾಡಿದೆವು.
“ಚೆನ್ನಾಗಿರಿ….. ದೇವರು ಒಳ್ಳೆಯದು ಮಾಡಲಿ….”
ಭಾವ ಪದಗಳನ್ನು ಸೇರಿಸಿ ನಿಧಾನವಾಗಿ ಮಾತನಾಡಿದರು. ಆದರೆ ಅತ್ತಿಗೆಗೆ ಮಾತುಗಳೇ ಹೊರಡಲಿಲ್ಲ. ಅವರು ಮಲಗಿದ್ದೆಡೆಯಿಂದಲೇ ಕೈ ಚಾಚಿದರು. ರಾಜೀವ್ರ ದುಃಖ ಎಷ್ಟು ಗಾಢವಾಗಿತ್ತೆಂದರೆ ತಾವೇ ಅತ್ತಿಗೆಯ ಕೈ ಹಿಡಿದು ಮಗುವಿನಂತೆ ಅಳತೊಡಗಿದರು.
“ಏನಾಯ್ತು ರಾಜೀವ್…. ಅರೆ, ನಾನಿನ್ನು ಬದುಕಿದ್ದೀನಿ.” ಕ್ಷೀಣ ಸ್ವರದಲ್ಲಿ ಅತ್ತಿಗೆ ಹೇಳಿದರು. ಅವರ ಮಾತಿನಲ್ಲಿ ಕೋಪ ಇತ್ತು, ಪ್ರೀತಿಯೂ ಇತ್ತು.
“ಸಾಕು ರಾಜೀವ್… ಇದೇನು ಮಗೂ ತರಹ ಅಳ್ತಿದ್ದೀಯ?” ಭಾವ ತಮ್ಮನ ಭುಜ ತಟ್ಟುತ್ತಾ ಸುಮ್ಮನಾಗಿಸಲು ಪ್ರಯತ್ನಿಸಿದರು. ನಮ್ಮ ನಾಲ್ಕೂ ಜನರ ಕಣ್ಣೀರು ಕೋಡಿಯಾಗಿ ಹರಿಯಿತು. ನಾನು ಅಡುಗೆ ಮನೆಗೆ ಹೋಗಿ ತಿಂಡಿ ಕಾಫಿ ಮಾಡಿದೆ. ಎಲ್ಲರೂ ಒಟ್ಟಿಗೆ ತಿಂಡಿ ತಿಂದೆವು. ಭಾವನ ಕೈಯಲ್ಲೂ ರಾಖಿ ಇರಲಿಲ್ಲ ಆರತಿಯ ಹೆಸರನ್ನು ನಾವು ಇದುವರೆಗೆ ಪ್ರಸ್ತಾಪ ಮಾಡಿರಲಿಲ್ಲ. ಅತ್ತಿಗೆಗೆ ಹುಷಾರಿಲ್ಲವೆಂದು ಒಬ್ಬ ಮಿತ್ರನಿಂದ ತಿಳಿಯಿತೆಂದು ರಾಜೀವ್ ಹೇಳಿದರು. ನಾನು ಮಧ್ಯಾಹ್ನದ ಅಡುಗೆ ತಯಾರಿಸಿದೆ. ನಂತರ ಅತ್ತಿಗೆಗೆ ಸ್ನಾನ ಮಾಡಿಸುವ ತಯಾರಿ ಮಾಡತೊಡಗಿದೆ.
“ಇಷ್ಟು ದಿನಗಳಾಯ್ತು ಒಂದು ಫೋನ್ ಮಾಡಲಿಲ್ಲ ನೀವು, ನಾವಿಬ್ಬರೂ ಇಲ್ಲಿಂದಲೇ ಆಫೀಸಿಗೆ ಹೋಗಿ ಬರುತ್ತೇವೆ. ನಾವೇನು ಪರಕೀಯರಾ ನಿಮಗೆ?” ರಾಜೀವ್ ದೂರಿದಾಗ ಅತ್ತಿಗೆ ನಕ್ಕರು. ಆರತಿಯ ಹೆಸರು ಯಾರೂ ಎತ್ತಲಿಲ್ಲ. ಅತ್ತಿಗೆಯೂ ಎತ್ತಲಿಲ್ಲ. ಬಹುಶಃ ಆರತಿ ಒಂದು ಸೂಕ್ಷ್ಮ ಪದರವಾಗಿದ್ದು ಅದರ ಸುತ್ತಮುತ್ತ ಎಲ್ಲ ಕಂಡುಬರುತ್ತಿತ್ತು. ನಾವು ಮಾತ್ರ ಕಣ್ಣು ಮುಚ್ಚಿಕೊಂಡಿದ್ದೆವು.
ಸಂಜೆಯಾಯಿತು. ಭಾವ ಮತ್ತು ಅತ್ತಿಗೆ ನಿಶ್ಚಿಂತರಾಗಿದ್ದರು.
“ಇಲ್ಲಿಂದಲೇ ಆಫೀಸಿಗೆ ಹೋಗಿ ಬರೋದ್ರಿಂದ ರಾಜೀವ್ಗೆ ಬಹಳ ದೂರ ಆಗುತ್ತೆ ಆಫೀಸಿಗೆ, ನಿಮ್ಮಿಬ್ರಿಗೂ ತೊಂದರೆ ಆಗುತ್ತೆ ಚಂದ್ರಾ.”
“ಹೌದು ಅತ್ತಿಗೆ ಕಷ್ಟವಾಗುತ್ತೆ. ಆದರೆ ನಿಮ್ಮನ್ನು ಹೀಗೆ ಬಿಟ್ಟು ಹೋದರೆ ಪಶ್ಚಾತ್ತಾಪ ಆಗುತ್ತಲ್ಲ. ಅದಕ್ಕೆ ಏನು ಮಾಡೋಣ? ನಮಗೆ ಕಷ್ಟವಾಗುತ್ತೆ ಅಂದ್ರೆ ಇನ್ಯಾರು ಮಾಡೋರಿದ್ದಾರೆ? ನಾಳೆ ನಾನು ಕಾಯಿಲೆ ಬಿದ್ರೆ ನಾವು ನಿಮ್ಮನ್ನು ಬಿಟ್ಟ ಹಾಗೆ ನನ್ನನ್ನೂ ಬಿಟ್ಟು ಬಿಡಿ,”
ನನ್ನ ಗಂಟಲು ಗದ್ಗದಿತವಾಯಿತು.ಅತ್ತಿಗೆ ಏನೂ ಹೇಳಲಿಲ್ಲ, ನನ್ನ ಕೈಯನ್ನು ಒತ್ತಿದರು. ನಮ್ಮಿಂದ ಏನೂ ತಪ್ಪಾಗಲಿಲ್ಲವೆಂದು ಮೂಕ ಸಂದೇಶ ಕೊಟ್ಟಂತಿತ್ತು. ಭಾವ ಹಾಗೂ ರಾಜೀವ್ರ ಕೈಗಳು ಖಾಲಿಯಾಗಿದ್ದವು. ಇಬ್ಬರ ಹಣೆಗಳೂ ತಿಲಕವಿಲ್ಲದೆ ಕಾಂತಿಹೀನವಾಗಿದ್ದವು. ಅತ್ತಿಗೆಗೆ ಲೈಟಾಗಿ ಪೆರಾಲಿಸಿಸ್ ಆಗಿತ್ತು. ಅವರಿಗೆ ಬೆರಳು ಆಡಿಸಲು ಆಗುತ್ತಿರಲಿಲ್ಲ. ಅವರ ತಲೆ ಬಾಚಿ ಹಣೆಗೆ ಬಿಂದಿ ಇಡಲು ಇಚ್ಛಿಸಿದಾಗ ಅವರು, “ಇರಲಿ ಬಿಡು, ನನಗ್ಯಾಕೆ ಅಲಂಕಾರ ಮಾಡ್ತಿದ್ದೀಯಾ?” ಎಂದರು ನಗುತ್ತಾ.
“ಸುಮ್ನಿರಿ ಅತ್ತಿಗೆ. ಹೀಗ್ಯಾಕೆ ಹೇಳ್ತೀರಿ?”
ರಾಜೀವ್ ಮತ್ತೆ ಅಳತೊಡಗಿದರು. ಅಮ್ಮ ಸತ್ತ ಮೇಲೆ ಅತ್ತಿಗೆಯೇ ಒಂದು ಸಧೃಡವಾದ ಕಂಬದಂತಿದ್ದರು ರಾಜೀವ್ಗೆ. ಅತ್ತಿಗೆಯನ್ನು ಒಮ್ಮೆ ನೋಡಿ ಶಾಂತರಾಗುತ್ತಿದ್ದರು. ಅತ್ತಿಗೆ ತಾನೇ? ಅಮ್ಮನಿಲ್ಲದಿದ್ದರೆ ಏನಾಯ್ತು. ಈಗ ಅತ್ತಿಗೆಗೂ ಏನಾದ್ರೂ ಆಗಿಬಿಟ್ರೆ? ನನ್ನ ಇಬ್ಬರು ಮಕ್ಕಳೂ ಹಾಸ್ಟೆಲ್ನಲ್ಲಿದ್ದಾರೆ. ಭಾವ ಅತ್ತಿಗೆ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಿ ಅವರ ಸುಖೀ ದಾಂಪತ್ಯದ ಬಗ್ಗೆ ಆಶಾಭಾವನೆ ಹೊಂದಿದ್ದಾರೆ. ರಾಜೀವ್ ಬಗ್ಗೆ ಇರುವ ಮಮಕಾರ ಅತ್ತಿಗೆಯ ಬಾಯಲ್ಲಿ ಆಗಾಗ್ಗೆ ಹೊರಹೊಮ್ಮುತ್ತದೆ.
“ನೀನಿದ್ದೀಯಲ್ಲಾ ರಾಜೀವ್ ಪುಟ್ಟಾ, ನನ್ನ ಮಗ…. ವಯಸ್ಸಾದ ಮೇಲೆ ಅತ್ತಿಗೇನ ನೋಡಿಕೊಳ್ಳಲ್ವಾ?” ಸಂಬಂಧಗಳಲ್ಲಿ ಹುಳಿ ಹಿಂಡುವವರ ಗಂಟಲನ್ನೇ ಕೊಯ್ದು ಹಾಕಬೇಕು ಎಂದು ರಾಜೀವ್ ಹೇಳುತ್ತಿದ್ದರು. ಇಬ್ಬರ ನಡುವೆ ಅನುಮಾನದ ಬೀಜ ಬಿತ್ತುವವರಿಗೆ ಮರಣದಂಡನೆ ವಿಧಿಸಬೇಕು. ಕೊಲೆ ಮಾಡುವುದಕ್ಕಿಂತ ದೊಡ್ಡ ಅಪರಾಧ ಇದು. ಹತ್ಯೆಗೀಡಾದ ವ್ಯಕ್ತಿ ಸತ್ತು ಮುಕ್ತಿ ಪಡೆಯುತ್ತಾನೆ. ಆದರೆ ಸಂಬಂಧಗಳಲ್ಲಿ ಬೆರೆಸಿದ ವಿಷ ಜೀವನ ಪರ್ಯಂತ ಕಾಡುತ್ತದೆ. ಇಬ್ಬರು ವ್ಯಕ್ತಿಗಳು ಇಡೀ ಜೀವನ ಕಷ್ಟ ಅನುಭವಿಸುತ್ತಾರೆ. ದ್ವೇಷಿಸುವುದೂ ಇಲ್ಲ. ಒಳಗಿರುವ ಪ್ರೀತಿಯೂ ಸಾಯುವುದಿಲ್ಲ. ವಿಷ ಬೆರೆಸುವವರು ಈ ಬೆಂಕಿಗೆ ಸ್ವಲ್ಪ ಸ್ವಲ್ಪವೇ ಎಣ್ಣೆ ಸವರುತ್ತಿರುತ್ತಾರೆ. ಏಕೆಂದರೆ ಬೆಂಕಿ ಎಂದೂ ನಂದಬಾರದು. ಈ ಆರತಿ ಮಾಡುತ್ತಿರುವುದು ಇದನ್ನೇ.
ಹೀಗೆ ಯೋಚಿಸುತ್ತಿರುವಾಗ ಬಾಗಿಲು ತಟ್ಟಿದ ಶಬ್ದವಾಯಿತು. ಬಾಗಿಲು ತೆರೆದು ನೋಡಿದರೆ…. ಸಂಜೀವ್?! ಎಲ್ಲರಿಗೂ ಆಶ್ಚರ್ಯವಾಯಿತು. ಸಂಜೀವ್ ಆರತಿಯ ಗಂಡ. ಆರತಿ ಮನೆಗೆ ಹೋದ ನಂತ ಇವರೊಂದಿಗೆ ಏನೇನು ಹೇಳಿದ್ದಾಳೋ? ನಮ್ಮ ಹುಡುಗಿಯ ವಿರುದ್ಧವೇ ಮಾತನಾಡಬೇಕಾಗಿದೆಯೇ ಇಂದು ನಾನು! ಅಳಿಯನ ಎದುರು ಮಗಳು ಕೆಟ್ಟವಳು ಎಂದು ದೂರಲು ಸಾಧ್ಯವೇ? ಸಂಜೀವ್ ಎಲ್ಲರನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರು. ಸ್ವಲ್ಪಹೊತ್ತು ಹಾಗೆ ನೋಡಿದ ನಂತರ ಭಾವ ಅತ್ತಿಗೆಯರಿಗೆ ನಮಸ್ಕರಿಸಿ ಆರೋಗ್ಯ ವಿಚಾರಿಸಿದರು.
ನಾವು ಸಪ್ಪಗೆ ನಕ್ಕೆವು ಯಾವುದೇ ಕ್ಷಣದಲ್ಲಿ ಬಿರುಗಾಳಿ ಬೀಸಬಹುದು ಎಂಬ ಶಂಕೆಯಿಂದ ಗಾಬರಿಯಾಗುತ್ತಿತ್ತು. ಹಾಗೆ ನೋಡಿದರೆ ರಾಜೀವ್ ಶಾಂತ ಮನಸ್ಸಿನವರಾಗಿದ್ದರು. ಆದರೆ ಶಾಂತ ಮನಸ್ಸಿನ ವ್ಯಕ್ತಿ ಸಹನೆ ಕಳೆದುಕೊಂಡು ಸಿಡಿದಾಗ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ.
“ನಿಮ್ಮಿಬ್ಬರ ಕೈಗಳು ಖಾಲಿ ಇವೆ. ರಾಖಿ ಕಟ್ಟಿಸಿಕೊಳ್ಳಲಿಲ್ವಾ? ಆರತಿ ಬರಲಿಲ್ವಾ ಇನ್ನೂ?”
ಸಂಜೀವ್ರ ಪ್ರಶ್ನೆ ಎಲ್ಲೋ ಒಂದು ಕಡೆ ನಮ್ಮ ಪ್ರಶ್ನೆಯೇ ಆಗಿತ್ತು. ನಾವಿಬ್ಬರೂ ಸುಮ್ಮನಿದ್ದೆ. ಎಲ್ಲರ ಮುಖ ಪೆಚ್ಚಾಗಿತ್ತು. ರಾಜೀವ್ ಅಣ್ಣನ ಮುಖವನ್ನೇ ನೋಡುತ್ತಿದ್ದರು. ನಂತರ ಇದ್ದಕ್ಕಿದ್ದಂತೆ ಭಾವ ಹೇಳಿದರು, “ನಮ್ಮ ತಂಗಿ ಈಗ ಮುಂಚಿನಂತೆ ಸರಳವಾಗಿಲ್ಲ ಸಂಜೀವ್. ನಿಮ್ಮ ಮನೆಗೆ ಸೇರಿದ ಮೇಲೆ ಅವಳ ಅಂತಸ್ತು ಹೆಚ್ಚಾಗಿಬಿಟ್ಟಿದೆ. ಸಣ್ಣ ಪುಟ್ಟ ನೆಂಟರನ್ನಂತೂ ಅವಳು ನಿಕೃಷ್ಟವಾಗಿ ನೋಡ್ತಾಳೆ. ಅವಳು ಬರದೆ ಇರೋದೇ ಒಳ್ಳೆಯದು. ನಮ್ಮ ಸಂಬಂಧಗಳು ಅಷ್ಟೊಂದು ಬಲಹೀನವಾಗೇನೂ ಇಲ್ಲ. ನಾವು ಹೀಗೆಯೇ ಇರೋದು. ಇಲ್ಲಿಯೇ ಇರ್ತೀವಿ. ನನ್ನ ತಮ್ಮನ ಹೆಂಡತಿ ನನಗೆ ಇಲ್ಲೇ ಈಗಲೇ ರಾಖಿ ಕಟ್ಟಿಬಿಡ್ತಾಳೆ. ಸಂಬಂಧಗಳಲ್ಲಿ, ನಾವು ನಮ್ಮರೂಂತ ಇಲ್ಲದಿದ್ದ ಮೇಲೆ ಈ ರಾಖಿ ಕಟ್ಟೋ ಸಂಪ್ರದಾಯ, ಶಾಸ್ತ್ರಗಳು ಇತ್ಯಾದಿಗಳ ಅಗತ್ಯವೇ ಇರೋದಿಲ್ಲ. ಸಂಪ್ರದಾಯಗಳು ಇರೋದು ಸಂಬಂಧಗಳನ್ನು, ಸ್ನೇಹವನ್ನು ಗಾಢವಾಗಿ ಮಾಡೋಕೆ.”
“ಹಾಗೇನಿಲ್ಲ ಭಾವ, ನೀವು ತಪ್ಪು ತಿಳಿದುಕೊಂಡಿದ್ದೀರಿ.”
“ರಾಜೀವ್ನ ವಿರುದ್ಧ ಯಾವ ಮಾತನ್ನೂ ನಾನು ಕೇಳಲ್ಲ ಸಂಜೀವ್, ತಪ್ಪು ತಿಳ್ಕೋಬೇಡಿ. ಆರತಿ ನಮ್ಮ ಸ್ವಂತ ತಂಗಿ. ಅವಳನ್ನು ಬಹಳ ಪ್ರೀತಿಯಿಂದ ಬೆಳೆಸಿದ್ದೇವೆ. ಆದರೆ ಅವಳು ನಾವಿಬ್ಬರೂ ಅಣ್ಣಂದಿರಿಗಿಂತ ಬಹಳ ದೊಡ್ಡವಳಾಗಿ ನಮಗೇ ಬುದ್ಧಿ ಹೇಳ್ತಿದ್ದಾಳೆ.”
“ಭಾವ ಇದರಲ್ಲಿ ಅವಳ ತಪ್ಪೇನೂ ಇಲ್ಲ. ನಮ್ಮ ಮನೆಯವರದ್ದೇ ತಪ್ಪು. ಅದರ ಪ್ರಭಾವ ಅವಳ ಮೇಲೆ ಹೆಚ್ಚಾಗಿ ಆಗಿದೆ. ನಮ್ಮ ಮನೆಯಲ್ಲಿ ಕೆಲವು ಪದ್ಧತಿಗಳು ನನಗೂ ಇಷ್ಟವಿಲ್ಲಾಂತ ಅವಳಿಗೆ ಮೊದಲೇ ಹೇಳಿದ್ದೆ. ಆದರೆ ಅವಳು ನಮ್ಮ ಮನೆಯವರ ಅಭ್ಯಾಸಗಳಿಗೆ ಒಗ್ಗಿಹೋದಳು. ನಮ್ಮ ಮನೆಯಲ್ಲಿ ನನ್ನ ಇಬ್ಬರು ತಂಗಿಯರ ಹಸ್ತಕ್ಷೇಪ ತುಂಬಾ ಇದೆ. ಅದು ನನಗೆ ಸುತರಾಂ ಇಷ್ಟವಿಲ್ಲ. ಆದರೆ ಅಪ್ಪ ಅಮ್ಮ ಅವರಿಗೆ ತಿಳಿವಳಿಕೆ ಹೇಳಲಿಲ್ಲ, ಅವರನ್ನೇ ಪ್ರೋತ್ಸಾಹಿಸಿದರು.
“ನಮ್ಮ ಮನೆಯಲ್ಲಿ ಒಂದು ಬೆಡ್ ಶೀಟ್ಕೊಳ್ಳಬೇಕಾದರೂ ತಂಗಿಯರಿಗೆ ಇಷ್ಟವಾದದ್ಧನ್ನೇ ಆರಿಸಿ ತರುತ್ತಾರೆ. ದೊಡ್ಡ ಸೊಸೆ ಆರಿಸಿದರೂ ಹೆಣ್ಣುಮಕ್ಕಳು ಇಷ್ಟಪಡದಿದ್ದರೆ ಅದನ್ನು ತಿರಸ್ಕರಿಸಲಾಗುತ್ತದೆ. ನಾನು ಅಪ್ಪ ಅಮ್ಮನಿಗೆ ನಿಧಾನವಾಗಿ ಹೇಳಿದೆ. ಈಗ ಹೇಗೂ ಅತ್ತಿಗೆ ಮನೆಗೆ ಬಂದಿದ್ದಾರೆ. ಅವರ ಸೆಲೆಕ್ಷನ್ ಫೈನ್ ಆಗಬೇಕೂಂತ. ಆದರೆ ಅವರು ನನ್ನ ಸಲಹೆಯನ್ನು ಕಿವಿಯ ಮೇಲೇ ಹಾಕಿಕೊಳ್ಳುವುದಿಲ್ಲ.
“ಆರತಿ ಇದೆಲ್ಲವನ್ನೂ ನೋಡುತ್ತಿದ್ದಳು. ಅದನ್ನು ಬೇಗನೆ ಕಲಿತುಕೊಂಡಳು. ಮೊದ ಮೊದಲು ಸರಳವಾಗಿದ್ದ ಆರತಿಗೆ ನನ್ನ ತಂಗಿಯರು ಹೇಗೆ ಅತ್ತಿಗೆಯನ್ನು ಕೀಳಾಗಿ ನೋಡಿಕೊಳ್ಳಬೇಕೆಂದು ಕಲಿಸಿದರು. ಆರತಿ ಮೇಲೆ ಇನ್ನೊಬ್ಬರ ಪ್ರಭಾವ ಬಹಳ ಬೇಗ ಆಗುತ್ತೇಂತ ನಿಮಗೂ ಚೆನ್ನಾಗಿ ಗೊತ್ತು,” ಸಂಜೀವ್ರ ಕಣ್ಣುಗಳು ತುಂಬಿಬಂದಿದ್ದವು. ಅವರ ಮುಖದಲ್ಲಿ ಅಪರಾಧೀ ಪ್ರಜ್ಞಿ ಇತ್ತು, “ಅವಳು ತಾನು ಕಲಿತದ್ದನ್ನು ಇಬ್ಬರು ಅಣ್ಣಂದಿರ ಮೇಲೆ ಪ್ರಯೋಗಿಸತೊಡಗಿದಳು. ಯಾವತ್ತಾದ್ರೂ ಒಂದು ದಿನ ಹೀಗೆ ನಡೆಯುತ್ತೇಂತ ನನಗೆ ಭಯ ಇತ್ತು. ರಾಜೀವ್ ಇತ್ತು ಆರತೀನ ತರಾಟೆಗೆ ತಗೊಂಡ್ರು. ನಾನಿಷ್ಟು ಧೈರ್ಯವನ್ನು ಎಂದೂ ಮಾಡಲಾಗಿಲ್ಲ. ನನ್ನ ಜಗಳಂಟಿ ತಂಗಿಯರನ್ನು ವಿರೋಧಿಸಲಾಗಲಿಲ್ಲ. ಅಮ್ಮನನ್ನು ಖುಶಿ ಪಡಿಸ್ತೀನಿ. ತಂಗಿಯರನ್ನು ಖುಶಿ ಪಡಿಸ್ತೀನಿ, ಆದರೆ ಅಣ್ಣ ಅತ್ತಿಗೆಯರನ್ನು ಎಂದೂ ಖುಶಿಪಡಿಸಲಾಗಲಿಲ್ಲ. ಸಣ್ಣ ಸಣ್ಣ ವಿಷಯಗಳಲ್ಲೂ ತಂಗಿಯರ ಹಸ್ತಕ್ಷೇಪ ನಮ್ಮ ಮನೆಯ ಶಾಂತಿ ನೆಮ್ಮದಿ ಕದಡುತ್ತದೆ.”
ಕೋಣೆಯಲ್ಲಿ ಸ್ವಲ್ಪ ಹೊತ್ತು ಮೌನ ಆರಿಸಿತ್ತು. ಸಂಜೀವ್ರ ಮಾತುಗಳಲ್ಲಿ ಸಂಪೂರ್ಣ ಸತ್ಯ ಹೊರಬಂದಿತ್ತು. ರಾಜೀವ್ ಆರತಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಗಂಡ ಹೆಂಡತಿ ಇಬ್ಬರೂ ಅಣ್ಣ ಅತ್ತಿಗೆಯರನ್ನು ನೋಡಲು ಓಡಿ ಬಂದಿದ್ದು ಎಲ್ಲವೂ ಅವರಿಗೆ ತಿಳಿದಿತ್ತು. ಅತ್ತಿಗೆ ಇದೆಲ್ಲಾ ನಿಜವೇ ಎಂದು ಕೇಳುವಂತೆ ನನ್ನತ್ತ ನೋಡಿದರು. ನಾವೆಲ್ಲಾ ಮಾತಾಡದೇ ನಿಂತಿದ್ದೆವು. ಆರತಿಯ ವಿರುದ್ಧ ಮಾತಾಡುವುದು ನಮಗೆ ಶೋಭೆ ತರುವಂಥದ್ದಾಗಿರಲಿಲ್ಲ. ಸಂಜೀವ್ರ ನೋವು ಅರ್ಥವಾಗುವಂಥದ್ದೇ.
“ರಾಜೀವ್ ನೀವು ಮಾಡಿದ್ದು ಸರಿಯಾಗಿಯೇ ಇತ್ತು. ಕನಿಷ್ಠ ಆರತಿಗೆ ತಾನು ಮಾಡಿದ್ದು ಸರಿಯಲ್ಲ. ತಾನು ಹದ್ದು ಮೀರಿದ್ದೀನಿ ಎಂದು ತಿಳಿಯಿತು. ಪಾಪ ಅವಳೇನು ಮಾಡೋಕೆ ಸಾಧ್ಯ? ನಮ್ಮ ಮನೆಯಲ್ಲಿ ಅವಳ ಮಾತು ನಡೆಯುವುದಿಲ್ಲ. ಅದಕ್ಕೆ ಅವಳು ನಿಮ್ಮಿಬ್ಬರ ಮನೆಗಳನ್ನು ಆರಿಸಿಕೊಂಡಳು,” ಸಂಜೀವ್ ಹೇಳಿದರು.
ಕೆಲವು ಕ್ಷಣಗಳು ಕಳೆದವು. ಸಂಜೀವ್ ಅತ್ತಿಗೆಯ ಕೈ ಹಿಡಿದು ಸಂತೈಸಿದರು. “ನಿಮ್ಮ ಮನೆಯಲ್ಲಿ ಸಂಬಂಧ ಬೆಳೆಸಿದ ಮೇಲೆ ನೀವಿಬ್ಬರೂ ಅಣ್ಣ ತಮ್ಮಂದಿರ ಪ್ರೀತಿ ಕಂಡು ನನಗೆ ಬಹಳ ಖುಶಿಯಾಗಿತ್ತು ಅತ್ತಿಗೆ, ನೀವು ರಾಜೀವ್ರನ್ನು ನಿಮ್ಮ ಮಗನಂತೆ ನೋಡಿಕೊಳ್ಳುತ್ತಿದ್ದದ್ದೂ ಸಹ. ನನ್ನ ಅತ್ತಿಗೆಯಂತೂ ಸದಾ ಒತ್ತಡದಲ್ಲಿರುತ್ತಾರೆ. ಖಿನ್ನತೆಯಿಂದ ಕೂಡಿರುತ್ತಾರೆ. ನಾನೆಂದೂ ಅವರ ಮಗನಾಗಿರಲಿಲ್ಲ. ಅವರಿಗೆ ಮಕ್ಕಳಿಲ್ಲ. ಹಗಲೂ ರಾತ್ರಿ ಅದರ ಬಗ್ಗೆ ಗೊಣಗಾಡ್ತಾ ಇರ್ತಾರೆ…..”
“ಇವತ್ತು ನೀವು ಯಾ ರೀತಿ ನಿಮ್ಮ ತಂಗಿಗೆ ಬುದ್ಧಿ ಕಲಿಸಿದಿರೊ ಅದರಿಂದ ನನಗೆ ಬಹಳ ಧೈರ್ಯ ಬಂದಿದೆ. ಶಾಂತಿ ಸ್ಥಾಪನೆಗಾಗಿ ಒಮ್ಮೊಮ್ಮೆ ಜಗಳ, ಗಲಾಟೆ ಮಾಡಬೇಕಾಗುತ್ತೆ. ಈಗ ನಮ್ಮ ಮನೆಯಲ್ಲೂ ಅದೇ ಆಗುತ್ತೆ. ಕೆಲವು ಹಳೆಯ ಪದ್ಧತಿಗಳನ್ನು ಬದಲಾಯಿಸ್ತೇನೆ. ಆಗಲೇ ಹೊಸ ರೀತಿ, ನೀತಿ ಶುರುವಾಗುತ್ತದೆ. ನೀವು ಆರತಿಯ ಮೇಲೆ ಇದೇ ಕೋಪ ಮುಂದುವರಿಸಿ. ಅದೇ ಅವಳಿಗೆ ಸರಿಯಾದ ಚಿಕಿತ್ಸೆ. ನಮ್ಮ ಮನೇಲಿ ನಾನೂ ಅದೇ ಚಿಕಿತ್ಸೆ ಕೊಡ್ತೀನಿ. ಅದರಿಂದ ಬರುವ ವರ್ಷದ ರಾಖಿ ಮತ್ತು ಇತರ ಹಬ್ಬಗಳು ಆನಂದವಾಗಿ ಕಳೆಯುತ್ತವೆ. ನನ್ನ ತಂಗಿಯರು ತೌರುಮನೆಗೆ ಬಂದಾಗ ತಮ್ಮ ಹದ್ದು ಮೀರಲ್ಲ. ಅತ್ತಿಗೆ, ನಾನು ನಿಮ್ಮ ಕ್ಷಮೆ ಕೇಳಲು ಬಂದಿದ್ದು…”
“ಹಾಗೆ ಹೇಳಬೇಡಿ ಸಂಜೀವ್.”
ಭಾವ ಕೂಡ ಅಳುತ್ತಿದ್ದರು. ಸಂಜೀವ್ರನ್ನು ಭುಜ ಹಿಡಿದು ನಿಲ್ಲಿಸಿ ಅಪ್ಪಿಕೊಂಡರು, “ಸಂಜೀವ್, ಕಾಯಿಲೆ ಬಂದರೆ ರೋಗಿಗೆ ಕಹಿಯಾದ ಔಷಧಿ ಕೊಡಬೇಕಾಗುತ್ತೆ. ಅದರರ್ಥ ನಾವು ರೋಗಿಯನ್ನು ದ್ವೇಷಿಸುತ್ತೇವೆ ಎಂದಲ್ಲ,” ಎಂದರು.
ಮುಂದೆ ಏನಾಗಬಹುದು? ಸಂಜೀವ್ ತಮ್ಮ ಮನೆಯಲ್ಲಿನ ಪದ್ಧತಿಗಳನ್ನು ಬದಲಾಯಿಸೋದ್ರಲ್ಲಿ ಯಶಸ್ವಿ ಆಗುತ್ತಾರೆಯೇ ಎಂದು ನನಗೆ ಸಂದೇಹವಿದೆ. ಏಕೆಂದರೆ ಅನೇಕ ವರ್ಷಗಳಿಂದ ಮುಂದುವರಿಸಿಕೊಂಡು ಬಂದಿರುವ ಪದ್ಧತಿಗಳು ಅಷ್ಟು ಬೇಗ ಬದಲಾಗುವುದಿಲ್ಲ. ಸಂತೋಷವೆಂದರೆ ಆರತಿ ಸರಿಯಾದ ಮನುಷ್ಯನ ನಿಯಂತ್ರಣದಲ್ಲಿರುತ್ತಾಳೆ. ಸಂಜೀವ್ ಆಗಾಗ್ಗೆ ಅವಳನ್ನು ನಮ್ಮ ಮನೆಗೆ ಕರೆದುಕೊಂಡು ಬರುತ್ತಾರೆ ಹಾಗೂ ಅವಳನ್ನು ಅದೇ ಹಿಂದಿನ ಸರಳ ರೂಪದಲ್ಲಿ ಬದಲಾಯಿಸುತ್ತಾರೆ.