“ಥೂ, ಎಂಥಾ ಹಾಗಲಕಾಯಿ ತಂದಿದ್ದೀರಿ, ಎಲ್ಲ ಬಹಳ ಕಹಿ. ಅದೇನೂಂತ ಕೊಂಡುಕೊಂಡು ಬರ್ತೀರೋ, ಒಂದು ತರಕಾರಿನಾದ್ರೂ ಸರಿಯಾಗಿ ತರಲ್ಲ.”

ನನ್ನಾಕೆ ನಾನು ತಂದ ಹಾಗಲಕಾಯಿಯ ಕಹಿಯನ್ನೆಲ್ಲಾ ನನ್ನ ಮೇಲೆ ಕಕ್ಕಿದಳು.

“ಈ ಹಾಗಲಕಾಯಿಯಲ್ಲಿ ಏನು ದೋಷ ಇದೆ? ಮಾರ್ಕೆಟ್‌ನಲ್ಲಿ ಸರಿಯಾಗಿ ನೋಡಿ, ಚೆನ್ನಾಗಿರೋದನ್ನು ಆರಿಸಿ ತಂದಿದ್ದೀನಿ. ಇನ್ನು ಅದು ಕಹಿಯಾಗಿದೆ ಅಂದ್ರೆ ಅದರ ಸ್ವಭಾವನೇ ಕಹಿ ಅಲ್ವೇನೇ… ಇದುವರೆಗೆ ಎಂದಾದರೂ ಸಿಹಿ ಹಾಗಲಕಾಯಿ ಬಗ್ಗೆ ಕೇಳಿದ್ದೀಯಾ?” ನಾನು ಹೇಳಿದೆ.

“ರೀ, ಹಾಗಲಕಾಯಿ ಕಹಿ ಅಂತ ನನಗೂ ಗೊತ್ತು. ಆದ್ರೆ ಇಷ್ಟು ಕಹೀನಾ? ಕಾರ್ಕೋಟಕ ವಿಷ ಇದ್ದ ಹಾಗಿದೆ. ನಿನ್ನೆ ತಾನೇ ಪಕ್ಕದ್ಮನೆ ಜೋಯಿಸರು ಗಾಡಿಯವನ ಹತ್ತಿರ ಹಾಗಲಕಾಯಿ ತಗೊಂಡ್ರಂತೆ. ಅವರ ಹೆಂಡ್ತಿ ಅಲಮೇಲಮ್ಮ ಹೇಳಿದ್ರು. ಎಳಸಾಗಿ, ನಳನಳಿಸ್ತಾ ಇತ್ತಂತೆ. ಕಹೀನೂ ಇರಲಿಲ್ವಂತೆ. ಅಲ್ರೀ ಊರೋರ್ಗೆಲ್ಲಾ ಒಳ್ಳೆಯ ತರಕಾರಿಗಳು, ಒಳ್ಳೆಯ ಹಣ್ಣುಗಳು, ಒಳ್ಳೆಯ ಸಾಮಾನುಗಳೂ ಸಿಗುತ್ವೆ. ನಿಮಗೆ ಮಾತ್ರ ಕೊಳೆತಿದ್ದು, ಹಳಸಿದ್ದು ಅದ್ಹೇಗೆ ಸಿಗುತ್ತೋ ನನಗಂತೂ ಗೊತ್ತಿಲ್ಲ.

“ನನಗೆ ಎಷ್ಟೋ ಬಾರಿ ಅನ್ನಿಸಿದೆ. ನಿಮಗೆ ಹೇಳೋ ಬದಲು ನಾನೇ ಮಾರ್ಕೆಟ್‌ಗೆ ಹೋಗಿ ತರಕಾರಿ, ಹಣ್ಣುಗಳನ್ನು ತರೋಣಾಂತ, ಆದರೆ ನಾನು ಹೋದರೆ ನೀವು ಆರಾಮವಾಗಿ ಮನೇಲಿ ಕೂತು ಓತ್ಲಾ ಹೊಡೀತೀರಿ. ಏನು ಮಾಡೋದು?” ನನ್ನ ಹೆಂಡತಿ ನನ್ನಿಂದ ಕೆಲಸ ಮಾಡಿಸಲೇಬೇಕಾದ ಅನಿವಾರ್ಯತೆಯನ್ನು ಹೇಳಿಕೊಂಡಳು.

“ಒಮ್ಮೊಮ್ಮೆ ಆಕಸ್ಮಿಕವಾಗಿ ಹೀಗಾಗಿಬಿಡುತ್ತೆ. ಇಲ್ಲದಿದ್ರೆ ಈ ದುಬಾರಿ ದಿನಗಳಲ್ಲಿ ದುಡ್ಡು ಕೊಟ್ಟು ಕೆಟ್ಟ ಪದಾರ್ಥಗಳನ್ನು ನಾನ್ಯಾಕೆ ತರಲಿ? ನಾನು ತಂದ ಪದಾರ್ಥಗಳು ಹೀಗಾದಾಗ ನನಗೂ ಬೇಸರಾಗುತ್ತೆ. ಆದರೆ ಏನು ಮಾಡೋಕಾಗುತ್ತೆ?” ನಾನು ಅಸಹಾಯಕತೆ ವ್ಯಕ್ತಪಡಿಸಿದೆ.

“ಅಂದರೆ, ಈ ಎಲ್ಲ ಆಕಸ್ಮಿಕಗಳೂ ನಿಮಗೇ ಆಗುತ್ತೆ.  ಆಕಸ್ಮಿಕವಾಗಿ ನಿಮಗೇ ಒಳಗಡೆ ಕಪ್ಪಗಿರುವ ಆಲೂಗಡ್ಡೆ ಸಿಗುತ್ತದೆ.  ಆಕಸ್ಮಿಕವಾಗಿ ನಿಮಗೇ ಹುಳುಕಾಗಿರೋ ಸೇಬು ಸಿಗುತ್ತೆ. ಒಡೆದಾಗ ಕೆಟ್ಟುಹೋಗಿರುವಂಥ ತೆಂಗಿನಕಾಯಿ ಆಕಸ್ಮಿಕವಾಗಿ ನಿಮಗೇ ಸಿಕ್ಕೋದು,” ನಾನು ತಂದ ಕೆಟ್ಟ ಪದಾರ್ಥಗಳ ಒಂದು ಲಿಸ್ಟೇ ಅವಳಲ್ಲಿತ್ತು.

“ನಿನ್ನನ್ನು ಮದುವೆಯಾಗಿ ನಾನೇ ಈ ಮನೆಗೆ ಕರೆತಂದಿದ್ದು. ಅದನ್ಯಾಕೆ ಮರೆತುಹೋದೆ? ನಾನೇ ನಿನ್ನನ್ನು ಮೆಚ್ಚಿ ಮದುವೆಯಾಗಿದ್ದು. ಅದರ ಬಗ್ಗೆ ಏನು ಹೇಳ್ತೀಯಾ? ನಾನು ಯಾವಾಗ್ಲೂ ಕೆಟ್ಟಿರೋದನ್ನೇ ತರ್ತೀನಿ ಅಂತೀಯಲ್ಲಾ? ಹಹ್ಹಹ್ಹಾ” ನನ್ನ ಮೇಲೆ ಸತತವಾಗಿ ಹೊರೆಸಿದ ಆರೋಪಗಳಿಂದ ಭಯಭೀತನಾಗಿ ವಾತಾವರಣವನ್ನು ತಿಳಿಗೊಳಿಸಲು ನಾನು ಅವಳಿಗೆ ತಮಾಷೆ ಮಾಡಿದೆ.

ಆದರೆ ಇದೇನು? ಅವಳು ನನ್ನ ತಮಾಷೆಯನ್ನು ಬೇಗನೆ ಅರ್ಥ ಮಾಡಿಕೊಂಡಳು. ಅವಳು ಕೋಪಗೊಂಡು, “ತಮಾಷೆ ಸಾಕು. ನಾನು ನಿಮ್ಮ ಜೊತೆ ಸೀರಿಯಸ್ಸಾಗಿ ಮಾತಾಡ್ತಿದ್ದೀನಿ. ನಿಮ್ಮ ತಪ್ಪುಗಳ ಬಗ್ಗೆ ನಿಮಗೆ ಹೇಳ್ತಿದ್ದೀನಿ. ನೀವು ನನ್ನ ಮಾತನ್ನು ಗಂಭೀರವಾಗಿ ಕೇಳಿ ತಿದ್ದಿಕೊಳ್ಳೋದು ಬಿಟ್ಟು ತಮಾಷೆ ಮಾಡ್ತಿದ್ದೀರಿ. ನಿಮ್ಮ ಈ ಸ್ವಭಾವದಿಂದಲೇ ಅಂಗಡಿಯವರು ಚೆನ್ನಾಗಿ ಲಾಭ ಮಾಡಿಕೊಳ್ತಿರೋದು. ಅವರು ಕಳಪೆ ಮಾಲನ್ನು ನಿಮ್ಮ ತಲೆಗೆ ಕಟ್ಟಿ ಡಬ್ಬಲ್ ಲಾಭ ಹೋಡೀತಿದ್ದಾರೆ.

“ಮೊದಲನೆಯದು ಅವರ ಬಳಿ ಇರೋ ಕಳಪೆ ಮಾಲು ಖಾಲಿಯಾಗುತ್ತೆ. ಎರಡನೇದು ಅದನ್ನು ಮಾರಿ ಲಾಭಾನೂ ಮಾಡಿಕೊಳ್ತಿದ್ದಾರೆ. ನಾವು ಮಾತ್ರ ನಿರಂತರವಾಗಿ ನಷ್ಟ ಅನುಭವಿಸ್ತಾ ಇದ್ದೀವಿ. ಇನ್ನಷ್ಟು ನಷ್ಟ ಆಗದಂತೆ ನಿಮ್ಮನ್ನು ಹೇಗೆ ಎಚ್ಚರಿಸೋದು, ಏನು ಮಾಡೋದೂಂತ ನನಗೆ ತಿಳೀತಿಲ್ಲ.”

“ನೀನು ಸಣ್ಣ ಸಣ್ಣ ವಿಷಯಗಳನ್ನೂ, ದೊಡ್ಡದು ಮಾಡಿಬಿಡ್ತೀಯ. ಹಾಗಲಕಾಯಿ ಕಹಿ ಅನ್ನೋದು ದೊಡ್ಡ ವಿಷಯಾನಾ? ಅದರ ಸ್ವಭಾವ ಅದು. ನಾವು ಅದನ್ನು ತಿದ್ದೋಕಾಗುತ್ತಾ? ಯಾರು ಯಾರನ್ನು ಫೂಲ್ ಮಾಡಿದ್ರು? ಯಾರು ಯಾವಾಗ ಫೂಲ್ ಆದ್ರು? ಇದೆಲ್ಲಾ ನಮಗೆ ಗೊತ್ತಾಗುತ್ತಾ? ಈ ಸಣ್ಣಪುಟ್ಟ ವಿಷಯಗಳನ್ನು ಸೀರಿಯಸ್‌ ಆಗಿ ತಗೋಬೇಡ. ಸ್ವಲ್ಪ ಅಡ್ಜಸ್ಟ್ ಮಾಡ್ಕೋ.” ನಾನು ಕಹಿ ಹಾಗಲಕಾಯಿಯ ವಿಷಯಕ್ಕೆ ಇಲ್ಲಿಯೇ ಮುಕ್ತಾಯ ಹಾಡಲು ಬಯಸಿದ್ದೆ.

“ಇದೆಲ್ಲಾ ಸಣ್ಣ ವಿಷಯಗಳು ಅಂದ್ಕೊಂಡಿದ್ದೀರಾ? ನಿಮ್ಮ ಕಣ್ಣಿಗೆ ಮಣ್ಣೆರಚಿ, ನಿಮ್ಮನ್ನು ಫೂಲ್ ಮಾಡಿ ಕಳಪೆ ಮಾಲನ್ನು ಮಾರಿ ದುಡ್ಡು ಕಿತ್ಕೊಂಡ್ರೆ ಅದು ನಿಮಗೆ ಸಣ್ಣ ವಿಷಯ, ಇರಬಹುದು. ಆದರೆ ನನ್ನ ಮಟ್ಟಿಗೆ ಅದು ಅಪಮಾನ ಮಾಡಿದಂತೆ. ನಿಮಗೆ ಟೋಪಿ ಹಾಕಿ ಅವರು ತಮ್ಮ ಬೇಳೆ ಬೇಯಿಸ್ಕೊಳ್ತಿದ್ದಾರೆ. ದಾರೀಲಿ ಹೋಗೋರು ಯಾರು ಏನು ಮಾಡ್ತಿದ್ದಾರೆ, ತಮ್ಮ ಮನೆಯಲ್ಲಿ ಏನು ಅಡಿಗೆ ಮಾಡ್ತಿದ್ದಾರೆ, ತಿನ್ನುತ್ತಿದ್ದಾರೆ ಅನ್ನೋದಕ್ಕೆ ನಾನು ತಲೆಕೆಡಿಸಿಕೊಳ್ಳಲ್ಲ.  ಆದರೆ ನೀವು ನನ್ನ ಗಂಡ. ನಿಮಗೆ ಯಾರಾದರೂ ಮೋಸ ಮಾಡಿದ್ರೆ, ತೊಂದರೆ ಕೊಟ್ರೆ ಅದು ನಮ್ಮ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆಲ್ಲಾ ಅವಕಾಶ ಕೊಡಬೇಡಿ. ನಿಮ್ಮ ಈ ಮೂರ್ಖತನಗಳಿಂದ ನನ್ನ ಚಿಂತೆ ಇನ್ನಷ್ಟು ಹೆಚ್ಚುತ್ತದೆ,” ಎಂದಳು.

“ಆಯ್ತು, ನಾನು ತಂದ ಪದಾರ್ಥಗಳು, ತರಕಾರಿ, ಹಣ್ಣುಗಳು ನಿನಗೆ ಹಿಡಿಸಲ್ಲಾಂದ್ರೆ ಒಂದ್ಕೆಲಸ ಮಾಡು. ಇವತ್ತಿನಿಂದ ಎಲ್ಲಾ ಸಾಮಾನುಗಳನ್ನೂ ನೀನೇ ತಗೊಂಡು ಬಾ. ಅದರಿಂದ ನಿನಗಿಷ್ಟವಾದ ಪದಾರ್ಥ ಸಿಗುತ್ತೆ,” ನಾನು ಅವಳ ದಾಳಿಯಿಂದ ತಪ್ಪಿಸಿಕೊಳ್ಳಲು ಒಂದು ಉಪಾಯ ಹೂಡಿದೆ.

“ಓಹೋ, ಇದಾ ನಿಮ್ಮ ಉಪಾಯ! ಮೆಲ್ಲಗೆ ನನ್ನ ಮೇಲೆ ಹೆಚ್ಚಿನ ಜವಾಬ್ಧಾರಿ ಹೊರೆಸ್ತಿದ್ದೀರಿ. ನಿಮ್ಮ  ಚಾಲಾಕಿತನ ನನಗೆ ಅರ್ಥ ಆಗಲ್ಲ ಅಂದ್ಕೊಂಡಿದ್ದೀರಾ? ಕೊಂಡು ತರೋ ಕೆಲಸ ನನಗೆ ವಹಿಸಿ ನೀವು ಆರಾಮವಾಗಿ ಮನೇಲಿ ನಿದ್ದೆ ಮಾಡಬೇಕೂಂತಿದ್ದೀರಾ… ಅದೆಲ್ಲಾ ಆಗೋದಿಲ್ಲ. ನೀವು ಇಷ್ಟು ಕೆಲಸ ಮಾಡಲೇಬೇಕು. ಮಾರ್ಕೆಟ್‌ಗೆ ಹೋಗಿ ಸಾಮಾನುಗಳನ್ನು ತರಲೇಬೇಕು,” ನನ್ನಾಕೆ ನಿರ್ಣಾಯಕ ಸ್ವರದಲ್ಲಿ ಹೇಳಿದಳು.

ನಾನೇನು ಮಾಡಲಿ? ತೆಪ್ಪಗಿದ್ದೆ. ಆಗ ನನ್ನ ಪರಿಸ್ಥಿತಿ ಹೇಗಿತ್ತೆಂದರೆ ನನಗೆ ಒದೆಯೂ ಬೀಳುತ್ತಿತ್ತು, ಅಳುವ ಹಾಗೂ ಇರಲಿಲ್ಲ.

Tags:
COMMENT