ಮುಖ್ಯವಾಗಿ ಉಳಿತಾಯ ಗೃಹಿಣಿಯರ ಮೂಲಮಂತ್ರ ಆದಾಗ, ಆ ಕುಟುಂಬ ನೆಮ್ಮದಿ ಕಾಣಲು ಸಾಧ್ಯ. ಬನ್ನಿ, ಅದರ ವಿವರಗಳನ್ನು ಹಂತ ಹಂತವಾಗಿ ತಿಳಿದುಕೊಳ್ಳೋಣ.
ಹಣ ಉಳಿಸಿ, ಹಣ ನಿಮ್ಮನ್ನು ಉಳಿಸುತ್ತದೆ ಎನ್ನುವ ಗಾದೆ ಮಾತು ಸಾರ್ವಕಾಲಿಕ ಸತ್ಯ. ಇದೇ ವೇಳೆ ಇದೊಂದು ವಿಶಾಲವಾದ ಮಾರ್ಗದರ್ಶಿ ಸೂಚಿಕೆ ಮಾತ್ರ ಎನ್ನುವುದನ್ನು ಯಾರೂ ಮರೆಯುವಂತಿಲ್ಲ. ಹಣ ಎಲ್ಲಿ ಹೂಡುತ್ತೀರಿ ಹಾಗೂ ಹೂಡುವಿಕೆಯಲ್ಲಿ ಭದ್ರತೆ, ಬೇಕಾದಾಗ ಹಿಂದಕ್ಕೆ ಪಡೆಯುವ ಅವಕಾಶ ಹಾಗೂ ಹೆಚ್ಚಿನ ವರಮಾನ, ಈ ಮೂರೂ ಮೂಲಭೂತ ತತ್ವಗಳು ಅಡಕ ಆಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಹಣ ತೊಡಗಿಸಲು ವಿಪುಲ ಅವಕಾಶಗಳಿದ್ದು, ಇಂದು ಹಣದ ಮಾರುಕಟ್ಟೆಯಲ್ಲಿ ಮುಖ್ಯವಾಗಿ ಬ್ಯಾಂಕುಗಳು, ಅಂಚೆ ಕಛೇರಿಗಳು, ಚಿಟ್‌ಫಂಡ್, ಮ್ಯೂಚುವಲ್ ಫಂಡ್, ಷೇರು ಮಾರುಕಟ್ಟೆ, ಬಂಗಾರ, ಜೀವವಿಮೆ ಹೀಗೆ ಹತ್ತು ಹಲವು ಅವಕಾಶಗಳು ಜನರನ್ನು ತಮ್ಮತ್ತ ಕೈಬೀಸಿ ಕರೆಯುತ್ತಿರುತ್ತವೆ.
ಹಣ ಏಕೆ ಉಳಿಸಬೇಕು?
ಮುಪ್ಪನ್ನು ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಬಾಲ್ಯ, ಯೌವನ ಹಾಗೂ ಮುಪ್ಪು. ಅದೇ ರೀತಿ ವೃತ್ತಿ, ಪ್ರವೃತ್ತಿ ಹಾಗೂ ನಿವೃತ್ತಿ ಮಾನವ ಕುಲಕ್ಕೆ ಕಟ್ಟಿಟ್ಟ ಬುತ್ತಿ. ಅರವತ್ತರ ಅಂಚನ್ನು ದಾಟಿ, ಹಿರಿಯ ನಾಗರಿಕರಾಗುವಾಗ ದುಡಿಯುವ ಶಕ್ತಿ ಕುಂದುವುದು ಸಹಜ. ಆದರೆ ಇದೇ ವೇಳೆ ಮಕ್ಕಳ ವಿದ್ಯಾಭ್ಯಾಸ, ಮದುವೆ, ಸ್ವಂತ ಮನೆ ಹೊಂದುವುದು, ಕಾಯಿಲೆ ಕಸಾಲೆ ಮೊದಲಾದ ಹೆಚ್ಚಿನ ಖರ್ಚಿನ ಜವಾಬ್ದಾರಿ ಎದುರಿಸಲೇಬೇಕಾಗುತ್ತದೆ. ಇನ್ನು ಮುಖ್ಯವಾಗಿ ಜೀವನದ ಸಂಜೆಯಲ್ಲಿ ಆರ್ಥಿಕ ಸಫಲತೆ ಇರದಿರುವಲ್ಲಿ, ಸ್ವಾವಲಂಬನೆಗೆ ಧಕ್ಕೆ ಉಂಟಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಜೇಬಿನಲ್ಲಿ `ದುಡ್ಡು’ ದೇಹದಲ್ಲಿ `ಬ್ಲಡ್’ ಇರುವ ತನಕ ಮಾತ್ರ ನೆಮ್ಮದಿಯಿಂದ ಬಾಳಿ ಬದುಕಬಹುದು. ಮನುಷ್ಯ ಆರ್ಥಿಕವಾಗಿ ಸಫಲನಾಗಲು ಹಾಗೂ ಇಚ್ಚಿಸಿದ ಗುರಿಯನ್ನು ತಲುಪಲು, ಜೀವನದ ಪ್ರಾರಂಭದಿಂದಲೇ ಉತ್ತಮ ಆರ್ಥಿಕ ಶಿಸ್ತನ್ನು ಪರಿಪಾಲಿಸಬೇಕಾಗುತ್ತದೆ.
ಏನಿದು ಆರ್ಥಿಕ ಶಿಸ್ತು?
ಬಿಸಿಲಿರುವಾಗ ಹುಲ್ಲು ಒಣಗಿಸಿ! ಮರವಾಗಿ ಬಗ್ಗಿಸಲು ಸಾಧ್ಯವಿಲ್ಲವಾದ್ದರಿಂದ ಗಿಡ ಇರುವಾಗಲೇ ಬಗ್ಗಿಸು, ಬಿಸಿ ಇರುವಾಗ ಕಬ್ಬಿಣ ಹದಕ್ಕೆ ತರಬೇಕು ಎನ್ನುವ ಗಾದೆ ಮಾತುಗಳು ಆರ್ಥಿಕ ಶಿಸ್ತಿಗೂ ಅನ್ವಯವಾಗುತ್ತವೆ. ಜೀವನದಲ್ಲಿ ತಂಪಾದ ಗಾಳಿ ಬೀಸಿ ಮಾಯವಾಗುವಂತೆ, ಅವಕಾಶಗಳು ಕೂಡಾ ಬಂದಿರುವ ವೇಗದಲ್ಲಿಯೇ ಹಿಂತಿರುಗುತ್ತವೆ. ಒಟ್ಟಿನಲ್ಲಿ ಸಮಯ ಪ್ರಜ್ಞೆಯಿಂದ ಒದಗಿದ ಅವಕಾಶವನ್ನು ನಗದೀಕರಿಸುವುದೇ, `ಆರ್ಥಿಕ ಶಿಸ್ತು’ ಹಾಗೂ ಜಾಣರ ಲಕ್ಷಣ. `ಬಡವಂ ಬಲ್ಲಿದನಾಗದೇ?’ ಎನ್ನುವ ಸೋಮೇಶ್ವರ ಶತಕದ ಭಾವಾರ್ಥ ಅತೀ ಕಡಿಮೆ ವರಮಾನವುಳ್ಳ ವ್ಯಕ್ತಿ ಕೂಡಾ ಒಂದಲ್ಲ ಒಂದು ದಿಸ ಶ್ರೀಮಂತನಾಗಬಹುದು. ಜೊತೆಗೆ ಸತತ ಸಾಧನೆಯಿಂದ ಅದನ್ನು ಸಾಧಿಸಬಹುದು ಎನ್ನುವುದು ಕೂಡಾ ಕವಿಯ ಕಿವಿಮಾತು. ಆರ್ಥಿಕ ಶಿಸ್ತು ಪಾಲಿಸಲು ಸ್ವಲ್ಪ ಮಟ್ಟಿನ ತ್ಯಾಗದ ಮನೋಭಾವನೆ ಗಂಡಹೆಂಡಿರಲ್ಲಿ ಅಗತ್ಯವಾಗಿರಬೇಕು. ಹಣ ಉಳಿಸಲು ಉತ್ತಮ ಸೂತ್ರವೆಂದರೆ, ಆದಾಯದಲ್ಲಿ ಒಂದಿಷ್ಟು ಹಣ ಪ್ರಾರಂಭದಲ್ಲಿಯೇ ಉಳಿತಾಯಕ್ಕೆ ಮೀಸಲಾಗಿದ್ದು, ಉಳಿಯುವ ಹಣ ಮಾತ್ರ ಖರ್ಚಿಗೆ ಬಳಸಿಕೊಳ್ಳಬೇಕು. ಇದರಿಂದ ಆರ್ಥಿಕ ಶಿಸ್ತಿಗೆ ನಾಂದಿಯಾಗಿ, ಬೇಡವಾದ ಖರ್ಚುಗಳಿಗೆ ಕಡಿವಾಣ ಹಾಕಿದಂತಾಗುತ್ತದೆ.
ಉಳಿತಾಯದ ಪ್ರಾರಂಭ ಎಲ್ಲಿಂದ?
ಉಳಿತಾಯದ ಖಾತೆಯಿಂದ ಉಳಿತಾಯ ಪ್ರಾರಂಭವಾಗುತ್ತದೆ. ಇದು ಉಳಿತಾಯದ ಪ್ರಥಮ ಪಾಠ ಬರುವ ಸಂಬಳ ಅಥವಾ ವರಮಾನ ಉಳಿತಾಯ ಖಾತೆಗೆ ಜಮಾ ಮಾಡಬೇಕು. ಈ ಖಾತೆಯಲ್ಲಿ ತೊಡಗಿಸಿದ ಹಣ ಯಾವಾಗ ಬೇಕಾದರೂ ಹಿಂತೆಗೆಯಬಹುದು. ಹಣ ವ್ಯಯವಾಗುವ ಸಂದರ್ಭ ಇರುವುದರಿಂದಲೂ ಹಾಗೂ ಇಲ್ಲಿ ಎಲ್ಲಾ ಠೇವಣಿಗಳಿಗಿಂತ ಕಡಿಮೆ ಬಡ್ಡಿ ಬರುವುದರಿಂದಲೂ, ಇಲ್ಲಿ ದೊಡ್ಡ ಮೊತ್ತ ಬಹಳ ಕಾಲ ಇರಿಸುವುದು ಜಾಣರ ಲಕ್ಷಣವಲ್ಲ. ಜಮಾ ಖರ್ಚಿಗೆ ಅನುಕೂಲವಾಗಲೂ ರೂ. 5,000-10,000 ತನಕ ಮಾತ್ರ ಇಲ್ಲಿ ಇರಿಸಿ, ಉಳಿದ ಹಣ ಅವಧಿ ಠೇಣಿಗೆ ವರ್ಗಾಯಿಸುತ್ತಿರಬೇಕು. ಒಟ್ಟಿನಲ್ಲಿ ಈ ಖಾತೆಯ ಅಂಕಿತನಾಮ ಅನ್ವರ್ಥನಾಮವಲ್ಲ!
ಅವಧಿ ಠೇವಣಿಗಳಲ್ಲಿ ಎಷ್ಟು ವಿಧಗಳಿವೆ ಹಾಗೂ ಅವುಗಳ ಅನುಕೂಲಗಳೇನು?
ಅವಧಿ ಠೇವಣಿಗಳೆಂದರೆ ಎಫ್.ಡಿ., ಆರ್.ಡಿ., ಆರ್.ಐ.ಡಿ. ಠೇವಣಿಗಳು. ಎಫ್.ಡಿ. ಠೇವಣಿ 15 ದಿನಗಳಿಂದ 10 ವರ್ಷಗಳ ತನಕ ಮಾಡಬಹುದು. ಕನಿಷ್ಠ ಮೊತ್ತ ರೂ. 500/ ಹಾಗೂ ಗರಿಷ್ಠ ಮೊತ್ತ ಎಂಬುದಿಲ್ಲ. ಈ ಠೇವಣಿಗೆ, ಮಾಸಿಕ ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಬಡ್ಡಿ ಬರುತ್ತದೆ. ಮಾಸಿಕವಾಗಿ ಬಡ್ಡಿ ಪಡೆಯುವಲ್ಲಿ, ತ್ರೈಮಾಸಿಕ ಬಡ್ಡಿ ಪಡೆಯುವುದೇ ಲೇಸು. ಆರ್.ಡಿ. ಒಂದು ಕ್ರಮಬದ್ಧ ಉಳಿತಾಯ ಯೋಜನೆ. ಈ ಠೇವಣಿ 110 ವರ್ಷಗಳ ಅವಧಿಗೆ ಮಾಡಬಹುದು. ಕನಿಷ್ಠ ರೂ.500 ಹಾಗೂ ಗರಿಷ್ಠ ಮಿತಿ ಇಲ್ಲದೆ ಠೇವಣಿ ಮಾಡಬಹುದು, ಈ ಠೇವಣಿಯಲ್ಲಿ ಪ್ರಾರಂಭದಲ್ಲಿ ಇರಿಸುವ ಠೇವಣಿ ಬದಲಾಯಿಸದೇ, ಪ್ರತೀ ತಿಂಗಳೂ ಹಣ ತುಂಬುತ್ತಾ ಒಂದು ಅವಧಿ ಮುಗಿಯುತ್ತಲೇ ಅಸಲು ಬಡ್ಡಿ ಪಡೆಯಬಹುದು. ಹೀಗೆ ಕಟ್ಟು ತಿಂಗಳ ಕಂತಿಗೆ ಮೂರು ತಿಂಗಳಿಗೊಮ್ಮೆ ಬಡ್ಡಿ ಅಸಲಿಗೆ ಸೇರಿಸಿ ಚಕ್ರಬಡ್ಡಿಯಲ್ಲಿ ಹಣ ಪಡೆಯಬಹುದು. ಉಳಿತಾಯ ಖಾತೆಯಲ್ಲಿ ಹಣವಿರಿಸಿ ಸ್ಯಾಂಡಿಂಗ್‌ಇನ್‌ಸ್ಟ್ರಕ್ಷನ್ ಕೊಟ್ಟಲ್ಲಿ, ಆರ್.ಡಿ. ಕಂತುಗಳಲ್ಲಿ ಉಳಿತಾಯ ಖಾತೆಯಿಂದ ಆರ್.ಡಿ. ಖಾತೆಗೆ ತಾನಾಗಿ ಜಮಾ ಆಗಿ ಹಣ ವೃದ್ಧಿಯಾಗುತ್ತಿರುತ್ತದೆ. ಈ ಕ್ರಮಬದ್ಧ ಉಳಿತಾಯದಿಂದ ಬೇಡವಾದ ಖರ್ಚಿಗೆ ಆವದಿಯಲ್ಲಿಯೇ ಕಡಿವಾಣ ಹಾಕಿದಂತಾಗುತ್ತದೆ. ನೀವು ಆರ್.ಡಿ.ಯಲ್ಲಿ ಹಾಕುವ ಹಣ, ಯಾವ ವೇಗದಲ್ಲಿ ವೃದ್ಧಿಯಾಗುತ್ತಿದೆ, ಎನ್ನುವುದನ್ನು ಈ ಕೆಳಗಿನ ಕೋಷ್ಠಕದಿಂದ ತಿಳಿಯಿರಿ.
ಸಂಬಳ ಪಡೆಯು ವ್ಯಕ್ತಿಗಳು ವಾರ್ಷಿಕ ಇನ್‌ಕ್ರಿಮೆಂಟ್ ಹಾಗೂ ಅಧಿಕ ವಾರ್ಷಿಕ, ಡಿ.ಎ. ಹೆಚ್ಚಳ ಇವುಗಳ ಶೇ.50ರಷ್ಟು ಕ್ರಮವಾಗಿ ನಿರಂತರವಾಗಿ ದೀರ್ಘಾವಧಿ ಆರ್.ಡಿ.ಯಲ್ಲಿ ತೊಡಗಿಸುತ್ತಾ ಬಂದಲ್ಲಿ ಮುಂದೊಂದು ದಿಸ `ಮಲ್ಟಿ ಮಿಲೇನಿಯರ್’ ಆಗುವುದರಲ್ಲಿ ಸಂಶಯವಿಲ್ಲ.
ಪಿಂಚಣಿ ಎನ್ನುವ ಪರಿಕಲ್ಪನೆ ಸರ್ಕಾರಿ ನೌಕರಿಯಲ್ಲಿಯೂ ದೊರೆಯದಂತಾದ ಈ ಕಾಲದಲ್ಲಿ ಇಳಿವಯಸ್ಸಿನ ಆರ್ಥಿಕ ಸುರಕ್ಷತೆಗೆ ಪ್ರತಿಯೊಬ್ಬರೂ ಸ್ವಯಂ ಪಿಂಚಣಿ ಯೋಜನೆ ಕಲ್ಪಿಸಿಕೊಳ್ಳುವ ಅವಶ್ಯವಿದೆ. ಬರೇ ರೂ.3000 ತಿಂಗಳು ತುಂಬುವ ಆರ್.ಡಿ. ಶೇ.9 ಬಡ್ಡಿ ದರದಲ್ಲಿ 30 ವರ್ಷಗಳ ಅವಧಿಯಲ್ಲಿ ರೂ.54.58 ಲಕ್ಷಗಳಾಗಿ ನಿಮ್ಮ ಕೈ ಸೇರುತ್ತದೆ ಎಂದರೆ ನೀವು ನಂಬುತ್ತೀರಾ? ಹೀಗೆ ಬರುವ ಮೊತ್ತದಿಂದ ರೂ.4000 ಬಡ್ಡಿ ಪ್ರತಿ ತಿಂಗಳೂ ಪಿಂಚಣಿ ರೂಪದಲ್ಲಿ ಪಡೆಯಬಹುದು ನೆನಪಿರಲಿ. ಇದು ಹೇಗೆ ಸಾಧ್ಯವೆಂದು ಈ ಕೆಳಗಿನ ಕೋಷ್ಠಕದಿಂದ ದೃಢಪಡಿಸಿಕೊಳ್ಳಿ.
ವಿ.ಸೂ. : ಯಾವುದೇ ಅಉಧಿ ಠೇವಣಿ 10 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಬ್ಯಾಂಕ್‌ಗಳಲ್ಲಿ ಇರಿಸುವಂತಿಲ್ಲ. ಈ ಕಾರಣದಿಂದ ಪ್ರಥಮ ರೂ.3000 ಆರ್.ಡಿ. 10 ವರ್ಷಗಳ ಅವಧಿಗೆ ಮಾಡಿ, ನಂತರ ಆರ್.ಐ.ಡಿ. ಮಾಡಿ, ಈ ಪ್ರಕ್ರಿಯೆ ಮೇಲಿನಂತೆ 30 ವರ್ಷಗಳ ಅವಧಿತನಕ ಮುಂದುವರಿಸಬೇಕು.ರೂ. 34.58 ಲಕ್ಷ ಪಡೆದ ಲೆಕ್ಕಾಚಾರರೂ. 34,56,564.00 14,19,417.00 5,82,636.00 ರೂ. 54,58,617.00 ಆರ್.ಐ.ಡಿ. ಒಂದು ಉತ್ಕೃಷ್ಟ ಬ್ಯಾಂಕ್ ಠೇವಣಿ. ಈ ಠೇವಣಿಯನ್ನು ಒಂದೊಂದು ಬ್ಯಾಂಕ್‌ನಲ್ಲಿ ಒಂದೊಂದು ಹೆಸರಿನಲ್ಲಿ ಸಂಬೋಧಿಸಿರುತ್ತಾರೆ. ಉದಾ : ಸ್ಟೇಟ್ ಬ್ಯಾಂಕ್ ಗ್ರೂಪ್‌ನಲ್ಲಿ ಆರ್.ಐ.ಡಿ. ಸಿಂಡಿಕೇಟ್‌ಬ್ಯಾಂಕ್‌ನಲ್ಲಿ ವಿಕಾಸ್ ಸರ್ಟಿಫಿಕೇಟ್, ಕೆನರಾ ಬ್ಯಾಂಕ್‌ನಲ್ಲಿ ಕಾಮಧೇನು, ಕರ್ನಾಟಕ ಬ್ಯಾಂಕ್‌ನಲ್ಲಿ ಅಭ್ಯುದಯ ಸರ್ಟಿಪಿಕೇಟ್, ಬೆಂಗಳೂರು ಸಿಟಿ ಕೋ ಆಪರೇಟೀವ್ ಬ್ಯಾಂಕ್‌ನಲ್ಲಿ ರಜತ ಸರ್ಟಿಫಿಕೇಟ್, ಆರ್.ಡಿ. ಮಾದರಿಯಲ್ಲಿ ಇಲ್ಲಿ ತೊಡಗಿಸಿದ ಹಣ ಚಕ್ರಬಡ್ಡಿಯಲ್ಲಿ ಬೆಳೆಯುತ್ತದೆ. ಎಫ್.ಡಿ.ಯಲ್ಲಿ ಕಾಲಕಾಲಕ್ಕೆ ಬಡ್ಡಿ ಬಂದರೆ, ಆರ್.ಐ.ಡಿ.ಯಲ್ಲಿ ಅವಧಿ ಮುಗಿಯುವಾಗ ಅಸಲು ಬಡ್ಡಿ ಒಮ್ಮೆಲೇ ದೊರೆಯುತ್ತದೆ.
ವಿ.ಸೂ. : ಶೇ.9 ಬಡ್ಡಿ ದರದಲ್ಲಿ ಇರಿಸುವ ಮೊತ್ತ 96 ತಿಂಗಳುಗಳಲ್ಲಿ (8 ವರ್ಷ) ದ್ವಿಗುಣವಾಗುತ್ತದೆ!
`ಹತ್ತಲಾಗುವುದು ನಿನ್ನಿಂದ, ಮುತ್ತಲಾಗುವುದು ನಿನ್ನಿಂದ,’ ಎನ್ನುವ ಗಾದೆ ಮಾತನ್ನು ಇಲ್ಲಿ ಸ್ಮರಿಸಬಹುದು.
ಅಂಚೆ ಕಛೇರಿಗಳಲ್ಲಿ ಬ್ಯಾಂಕ್ ಠೇವಣಿಯ ಮಾದರಿಯಲ್ಲಿ ಬಹಳಷ್ಟು ಠೇವಣಿಗಳು ಲಭ್ಯವಿವೆ. ಠೇವಣಿ ಮೇಲಿನ ಬಡ್ಡಿದರದಲ್ಲಿ ಬ್ಯಾಂಕ್ ಠೇವಣಿ ಹಾಗೂ ಅಂಚೆ ಕಛೇರಿ ಠೇವಣಿಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿಲ್ಲ. ಭದ್ರತೆ ದೃಷ್ಟಿಯಿಂದ ಅಂಚೆ ಕಛೇರಿ ಠೇವಣಿಗೆ ಮಿಗಿಲಾದ ಠೇವಣಿ ಬೇರೊಂದಿಲ್ಲ. ದ್ರವ್ಯತೆ ದೃಷ್ಟಿಯಿಂದ ಅವಧಿಗೆ ಮುನ್ನ ಹಣ ಪಡೆಯಲು ಸ್ವಲ್ಪ ಕಷ್ಟವಾದರೂ ಹಳ್ಳಿಹಳ್ಳಿಗಳಲ್ಲಿ ಜೀವಿಸುವ ಜನಸಾಮಾನ್ಯರಿಗೆ ಅಂಚೆ ಕಛೇರಿ ಠೇವಣಿ ನಿಜವಾಗಿ ಒಂದು ವರದಾನ.ಅಂಚೆ ಕಛೇರಿಗಳಲ್ಲಿ ದೊರೆಯುವ ವಿವಿಧ ಠೇಣಿ ಯೋಜನೆಗಳು
ಯೋಜನೆ ಹೆಸರು ಅವಧಿ ಇಂದಿನ ವಿವರಣೆ ಹಾಗೂ ವೈಶಿಷ್ಟ್ಯತೆ ಬಡ್ಡಿ ದರ
ಉಳಿತಾಯ ಇತರೆ 4% ಬ್ಯಾಂಕ್ ಉಳಿತಾಯದ ಖಾತೆಯಂತೆ ವ್ಯವಹರಿಸಬಹುದು.
ಎಂ.ಐ.ಎಸ್5 ವರ್ಷ 7.8% ಇದೊಂದು ಪ್ರತೀ ತಿಂಗಳೂ ಬಡ್ಡಿ ಪಡೆಯುವ ಠೇವಣಿ
ಎನ್.ಎಸ್.ಸಿ. 5 ರ್ಷ 8.1% ಇದೊಂದು ಮರು ಹೂಡಿಕೆ ಠೇವಣಿ. 6 ತಿಂಗಳಿಗೊಮ್ಮೆ ಬಡ್ಡಿ ಅಸಲಿಗೆ ಸೇರುತ್ತದೆ.
ಸೀನಿಯರ್ ಸಿಟಿಜನ್5 ವರ್ಷ 8.6% ಇಲ್ಲಿ ಠೇವಣಿದಾರರು ಠೇವಣಿ ತ್ರೈಮಾಸಿಕವಾಗಿ ಬಡ್ಡಿ ಪಡೆಯಬಹುದು. ಗರಿಷ್ಠ ಮಿತಿ ರೂ.15/ ಲಕ್ಷ.
ಟೈಮ್ ಡಿಪಾಸಿಟ್5 ವರ್ಷ 7.1%7.9% ಬಡ್ಡಿ ವಾರ್ಷಿಕವಾಗಿ ಪಡೆಯಬಹುದು.
ಆರ್.ಡಿ. 5 ವರ್ಷ 7.4% ಬಡ್ಡಿ ತ್ರೈಮಾಸಿಕವಾಗಿ ಅಸಲಿಗೆ ಸೇರಿಸುತ್ತಾರೆ.
ಪಿ.ಪಿ.ಎಫ್15 ವರ್ಷ 8.1% ಸರಳ ಬಡ್ಡಿ ವಾರ್ಷಿಕವಾಗಿ ಜಮಾ. ಕನಿಷ್ಠ ರೂ.500 ಗರಿಷ್ಠ ರೂ.1.5 ಲಕ್ಷ ಇಲ್ಲಿ ಬರುವ ಬಡ್ಡಿಗೆ ತೆರಿಗೆ ವಿನಾಯಿತಿ ಇದೆ. 3 ಹಾಗೂ 7ನೇ ಹಣಕಾಸು ವರ್ಷದಲ್ಲಿ ಸಾಲ ಹಾಗೂ ಕಟ್ಟಿದ ಹಣದ ಒಂದು ಭಾಗ ಹಿಂಪಡೆಯಬಹುದು.
ಯೋಜನೆ ಹೆಸರು
ಅವಧಿ ಇಂದಿನ ವಿವರಣೆ ಹಾಗೂ ವೈಶಿಷ್ಟ್ಯತೆ ಬಡ್ಡಿ ದರ
ಸುಕನ್ಯಾ ಸಮೃದ್ಧಿ 8.6% 10 ವರ್ಷದ ಯೋಜನೆ ಹೆಣ್ಣುಮಕ್ಕಳಿಗಾಗಿ ಆರಂಭಿಕ ಠೇವಣಿ ರೂ.1000. ಪ್ರತಿ ತಿಂಗಳು ವರ್ಷಕ್ಕೆ ಕನಿಷ್ಠ ರೂ.100 ಗರಿಷ್ಠ ರೂ. 1.5 ಲಕ್ಷ.
ಕಿಸಾನ್ ವಿಕಾಸ್ ಪತ್ರ 7.8% 110 ತಿಂಗಳಲ್ಲಿ ದ್ವಿಗುಣವಾಗುತ್ತದೆ.
ಬ್ಯಾಂಕ್ ಹಾಗೂ ಅಂಚೆಕಛೇರಿ ಠೇವಣಿಗಳ ಮೇಲೆ ಆದಾಯ ತೆರಿಗೆ ವಿನಾಯಿತಿ
ಆದಾಯ ತೆರಿಗೆ ಸೆಕ್ಷನ್
80 ಅಡ್ಡ ಆಧಾರದ ಮೇಲೆ ಬ್ಯಾಂಕ್ ಹಾಗೂ ಅಂಚೆಕಛೇರಿ ಉಳಿತಾಯ ಖಾತೆ ಮೇಲೆ ಬಂದಿರುವ ಗರಿಷ್ಠ ರೂ.10,000 ಬಡ್ಡಿ ಆದಾಯ ತೆರಿಗೆಯಿಂದ ವಿನಾಯಿತಿ ಹೊಂದಿದೆ.
ಸೆಕ್ಷನ್(11) ಆಧಾರದ ಮೇಲೆ ಪಿ.ಪಿ.ಎಫ್. ಮೇಲೆ ಬರುವ ಸಂಪೂರ್ಣ ಬಡ್ಡಿ ತೆರಿಗೆ ವಿನಾಯಿತಿ ಹೊಂದಿದೆ.
ಸೆಕ್ಷನ್ ಆಧಾರದ ಮೇಲೆ 5 ವರ್ಷಗಳ ಬ್ಯಾಂಕ್ ಠೇವಣಿ, ಎನ್.ಎಸ್.ಐ. ಸೀನಿಯರ್ ಸಿಟಿಜನ್ ಠೇವಣಿ ಟೈಮ್ ಡಿಪಾಸಿಟ್, ಪಿ.ಪಿ.ಎಫ್. ಸುಕನ್ಯಾ ಯೋಜನೆ, ಇಲ್ಲಿ ತೊಡಗಿಸಿದ ಗರಿಷ್ಠ ರೂ.1.5 ಲಕ್ಷ ಹಣಕ್ಕೆ ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.
ಹೂಡಿಕೆಗೆ ಸ್ಥಿರ ಆಸ್ತಿ ಗೃಹ ಸಾಲ ಪಡೆದು ಮನೆ ಕಟ್ಟಿಸುವವರಿಗೆ ಇದೊಂದು ಪರ್ವಕಾಲ. ಸೆಕ್ಷನ್. ಆಧಾರದ ಮೇಲೆ ಗರಿಷ್ಠ ಸಾಲದ ಕಂತು ರೂ.1.5 ಲಕ್ಷ, ಸೆಕ್ಷನ್ 24 ಆಧಾರದ ಮೇಲೆ ಬಡ್ಡಿ ಗರಿಷ್ಠ ರೂ.2.00 ಲಕ್ಷ ಬಡ್ಡಿ ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ವಿ.ಸೂ. : ತೆರಿಗೆಯಿಂದ ಉಳಿತಾಯ ಹಾಗೂ ಈಗಲೇ ಕೊಡುವ ಮನೆ ಬಾಡಿಗೆ ಇವೆರಡರಿಂದಲೇ ಹೆಚ್ಚಿನ ಇ.ಎಂ.ಐ. ಭರಿಸಬಹುದು. ಜೊತೆಗೆ ಹಣದುಬ್ಬರ ಎದುರಿಸಲು ಇದೊಂದು ಉತ್ತಮ ಮಾರ್ಗ. ಸ್ಥಿರ ಆಸ್ತಿಗೆ ಹಳ್ಳಿಯಿಂದ ದಿಲ್ಲಿತನಕ ತುಂಬಾ ಬೇಡಿಕೆ ಇರುವುದರಿಂದ, ದೇಶದ ಯಾವ ಭಾಗದಲ್ಲಿಯೂ ಹೂಡಿಕೆ ಮಾಡಬಹುದು. ಆರ್.ಬಿ.ಐ. ರೇಪೋರೇಟ್ ಕಡಿತ ಮಾಡಿದ್ದರಿಂದ, ಗೃಹ ಸಾಲದ ಬಡ್ಡಿ ಬಹಳ ಕಡಿಮೆಯಾಗಿದ್ದು, ಇ.ಎಂ.ಐ. ಕೂಡಾ ಕಡಿಮೆಯಾಗಿದೆ.
ಗೃಹ ಸಾಲ ಪಡೆದಾಗ ತೆರಬೇಕಾದ ಮಾಸಿಕಸಮಾನ ಕಂತು ಪ್ರತೀ ಒಂದು ಲಕ್ಷಕ್ಕೆ ವರ್ಷಗಳು
ಮ್ಯೂಚುವಲ್ ಫಂಡ್ ಷೇರು ಮಾರುಕಟ್ಟೆ
ಮ್ಯೂಚುವಲ್ ಫಂಡ್ ಹಾಗೂ ಷೇರು ಮಾರುಕಟ್ಟೆ ಒಂದೇ ನಾಣ್ಯದ ಎರಡು ಮುಖಗಳು. ಇಲ್ಲಿ ಹಣ ಹೂಡಿ ಹೆಚ್ಚಿನ ವರಮಾನ ಪಡೆಯಲು ಈ ವಿಚಾರದಲ್ಲಿ ಹೆಚ್ಚಿನ ಪರಿಣಿತಿಯ ಅವಶ್ಯವಿದೆ. ಜನಸಾಮಾನ್ಯರಿಗೆ ಈ ದಾರಿ ಸುಲಭವಲ್ಲ ಎಂಬುದಾಗಿ ಕೊಡುಗೆ ಪತ್ರನಲ್ಲಿ ಸ್ಪಷ್ಟಪಡಿಸಿರುತ್ತಾರೆ. ಉಳಿತಾಯದ ಶೇ.5ರಷ್ಟು ಮಾತ್ರ ಇಲ್ಲಿ ಹೂಡಿರಿ.
ಬಂಗಾರದ ಹೂಡಿಕೆ
ಹೂಡಿಕೆಗೆ ಬಂಗಾರ ಉತ್ತಮ ಯೋಜನೆಯಾದರೂ, ಇಲ್ಲಿ ದ್ರವ್ಯತೆ ಇರುವುದಿಲ್ಲ. ಹಣ ಅವಶ್ಯಬಿದ್ದಾಗ ಬಂಗಾರ ಮಾರಾಟ ಮಾಡುವಾಗ ನಷ್ಟ ಅನುಭವಿಸಬೇಕಾಗುತ್ತದೆ. ಸಾಲ ಪಡೆಯಬಹುದಾದರೂ, ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆ. ಇದೇ ವೇಳೆ ಮಕ್ಕಳ ಮದುವೆ ಸಂದರ್ಭದಲ್ಲಿ ಒಮ್ಮೆಲೇ ಬಂಗಾರ ಕೊಳ್ಳಲು ದೊಡ್ಡ ಮೊತ್ತ ಬೇಕಾಗುತ್ತದೆ. ಇಂತಹ ಪರಿಸ್ಥಿತಿ ಎದುರಿಸಲು ಪ್ರತಿ ವರ್ಷ ಕನಿಷ್ಠ 10 ಗ್ರಾಮ್ ಬಂಗಾರದ ನಾಣ್ಯ ಕೊಂಡು, ವಾಕರ್‌ನಲ್ಲಿ ಇರಿಸಿರಿ. ಒಡವೆ ಕೊಂಡಲ್ಲಿ ಮುಂದೆ ವಿನ್ಯಾಸ ಬದಲಾಗಿ, ಒಡವೆ ಮುರಿಸಿ, ಹೊಸ ಒಡವೆ ಮಾಡುವಾಗ ಸವಕಳಿ ಬಂದು ನಷ್ಟ ಅನುಭವಿಸಬೇಕಾಗುತ್ತದೆ. ಬಂಗಾರವನ್ನು ಜಿ.ಇ.ಟಿ.ಎಫ್. ಮುಖಾಂತರ ಪಡೆಯಬಹುದು. ಇಲ್ಲಿ ಒಂದು ಗ್ರಾಮ್ ಬಂಗಾರ ಒಂದು ಯೂನಿಟ್ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ತೊಡಗಿಸಿದ ಬಂಗಾರ 24 ಕ್ಯಾರೆಟ್ ಆಗಿದ್ದು, ಸ್ಟಾಂಡರ್ಡ್ ಹಾಲ್ ಮಾರ್ಕ್‌ನಿಂದ ನೊಂದಾಯಿಸಲ್ಪಡುತ್ತದೆ.
ಜೀವ ವಿಮೆ
ಜೀವ ವಿಮೆಯಲ್ಲಿ ಉಳಿತಾಯದ ತತ್ವಕ್ಕೆ ಬಹಳಷ್ಟು ಮಹತ್ವವಿಲ್ಲವಾದರೂ ಕಂಟಕರಹಿತ ಜೀವನಕ್ಕೆ ಪ್ರತಿಯೋರ್ವ ವ್ಯಕ್ತಿಗೂ, ವಿಮೆಯ ಅವಶ್ಯವಿದೆ. ಶೇ.10-15ರಷ್ಟು ಆದಾಯವನ್ನು ಜೀವವಿಮೆಗೆ ಕಡ್ಡಾಯವಾಗಿ ಮುಡುಪಾಗಿಡಿ. ಸಾಮಾನ್ಯವಾಗಿ 25 ವರ್ಷಗಳ ಎಂಡೋಮೆಂಟ್ ಪಾಲಿಸಿಯಿಂದ ವಾರ್ಷಿಕ ಬೋನಸ್ ಸೇರಿಸಿ ವಿಮಾ ಮೊತ್ತದ ಎರಡು ಪಟ್ಟು ಹಣ ಅಂತ್ಯದಲ್ಲಿ ಪಡೆಯಬಹುದು. ಮನಿ ಬ್ಯಾಕ್ ಪಾಲಿಸಿಯಲ್ಲಿ 5, 10, 15, 20, 25 ವರ್ಷಗಳಲ್ಲಿ ಕ್ರಮವಾಗಿ ಶೇ.20-25ರಷ್ಟು ಹಣ ಮುಂದಾಗಿ ಪಡೆಯಬಹುದು. ಹೀಗೆ ಪಡೆದರೂ ಅವಧಿ ಮಧ್ಯದಲ್ಲಿ ಪಾಲಿಸಿದಾರ ಮರಣ ಹೊಂದಿದಲ್ಲಿ, ಪಾಲಿಸಿ ಇಳಿಸಿದ ಮೊತ್ಕಕ್ಕನುಗುಣವಾಗಿ ಕಂಟಕದ ರಕ್ಷೆ ದೊರೆಯುತ್ತದೆ.
ಉಳಿತಾಯ ಮಾಡುವ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯ. `ಗೃಹಿಣಿ ಗೃಹಮುಚ್ಯತೆ’ ಎನ್ನುವ ಸುಭಾಷಿತದ ಹಿತನುಡಿ ನಿಜವಾಗಿ ಅರ್ಥಗರ್ಭಿತವಾಗಿದೆ. ಆರ್ಥಿಕ ಶಿಸ್ತು ಹಾಗೂ ಕಠಿಣ ಶ್ರಮದಿಂದ ಏನನ್ನೂ ಸಾಧಿಸಬಹುದು. ಆದರೆ ಸಾಧನೆಯ ಹಿಂದೆ ಬಲವಾದ ಸ್ತ್ರೀಶಕ್ತಿ ಇದ್ದಲ್ಲಿ ಮಾತ್ರ ಉತ್ತಮ ಫಲಿತಾಂಶ ಹಾಗೂ ಯಶಸ್ಸು ದೊರೆಯುತ್ತದೆ. ಗೃಹಸಾಲ ಹಾಗೂ ಶಿಕ್ಷಣ ಸಾಲ ಹೊರತುಪಡಿಸಿ ಬೇರಾವ ಸಾಲ ಮಾಡದಿರಿ. ಅಪರಿಚಿತರ ಸಾಲಕ್ಕೆ ಜಾಮೀನು ಗ್ಯಾರಂಟಿ ಹಾಕಿ ಸಿಕ್ಕಿಹಾಕಿಕೊಳ್ಳಬೇಡಿ. ಕಮೀಷನ್, ಹೆಚ್ಚಿನ ವರಮಾನ, ಉಡುಗೊರೆಗಳಿಗೆ ಮರುಳಾಗಿ ಅಭದ್ರವಾದ ಸ್ಥಳದಲ್ಲಿ ಹಣ ಹೂಡದಿರಿ. ಸಾಧ್ಯವಾದಲ್ಲಿ ಕ್ರೆಡಿಟ್ ಕಾರ್ಡಿನ ಸಹವಾಸದಿಂದ ದೂರ ಸರಿಯಿರಿ. ಬಿಡುವಿನ ವೇಳೆಯನ್ನು ಕುಟುಂಬದ ಸದಸ್ಯರ ಜೊತೆ ಕಾಲ ಕಳೆಯಿರಿ. ಠೇವಣಿಗೆ ನಾಮ ನಿರ್ದೇಶನ, ಸ್ಥಿರ ಆಸ್ತಿಗೆ ಉಯಿಲು ಬರೆದಿಡಿ. ಇದರಿಂದ ನಿಮ್ಮ ಕಾಲಾನಂತರ ವಾರಸುದಾರರು ಹಣ ಹಾಗೂ ಆಸ್ತಿ ಪಡೆಯುವಲ್ಲಿ ಪರದಾಡುವುದು ತಪ್ಪಿದಂತಾಗುತ್ತದೆ. ಆರ್ಥಿಕ ಶಿಸ್ತು ನಿಮ್ಮ ಅವಿಭಾಜ್ಯ ಅಂಗವಾಗಿರಲಿ. ಆರ್ಥಿಕ ಶಿಸ್ತಿನಿಂದ ಸ್ವಾವಲಂಬನೆ, ಸಂಸ್ಕಾರ ಹಾಗೂ ಸಂಘಟನೆ ಬರುತ್ತದೆ, ಜೊತೆಗೆ ಜೀವನದುದ್ದಕ್ಕೂ ಸುಖ, ಶಾಂತಿ, ಸಮೃದ್ಧಿಯಿಂದ ಬಾಳಬಹುದು.
– ಯು.ಪಿ. ಪುರಾಣಿಕ್