ಮುಖ್ಯವಾಗಿ ಉಳಿತಾಯ ಗೃಹಿಣಿಯರ ಮೂಲಮಂತ್ರ ಆದಾಗ, ಆ ಕುಟುಂಬ ನೆಮ್ಮದಿ ಕಾಣಲು ಸಾಧ್ಯ. ಬನ್ನಿ, ಅದರ ವಿವರಗಳನ್ನು ಹಂತ ಹಂತವಾಗಿ ತಿಳಿದುಕೊಳ್ಳೋಣ.
ಹಣ ಉಳಿಸಿ, ಹಣ ನಿಮ್ಮನ್ನು ಉಳಿಸುತ್ತದೆ ಎನ್ನುವ ಗಾದೆ ಮಾತು ಸಾರ್ವಕಾಲಿಕ ಸತ್ಯ. ಇದೇ ವೇಳೆ ಇದೊಂದು ವಿಶಾಲವಾದ ಮಾರ್ಗದರ್ಶಿ ಸೂಚಿಕೆ ಮಾತ್ರ ಎನ್ನುವುದನ್ನು ಯಾರೂ ಮರೆಯುವಂತಿಲ್ಲ. ಹಣ ಎಲ್ಲಿ ಹೂಡುತ್ತೀರಿ ಹಾಗೂ ಹೂಡುವಿಕೆಯಲ್ಲಿ ಭದ್ರತೆ, ಬೇಕಾದಾಗ ಹಿಂದಕ್ಕೆ ಪಡೆಯುವ ಅವಕಾಶ ಹಾಗೂ ಹೆಚ್ಚಿನ ವರಮಾನ, ಈ ಮೂರೂ ಮೂಲಭೂತ ತತ್ವಗಳು ಅಡಕ ಆಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಹಣ ತೊಡಗಿಸಲು ವಿಪುಲ ಅವಕಾಶಗಳಿದ್ದು, ಇಂದು ಹಣದ ಮಾರುಕಟ್ಟೆಯಲ್ಲಿ ಮುಖ್ಯವಾಗಿ ಬ್ಯಾಂಕುಗಳು, ಅಂಚೆ ಕಛೇರಿಗಳು, ಚಿಟ್‌ಫಂಡ್, ಮ್ಯೂಚುವಲ್ ಫಂಡ್, ಷೇರು ಮಾರುಕಟ್ಟೆ, ಬಂಗಾರ, ಜೀವವಿಮೆ ಹೀಗೆ ಹತ್ತು ಹಲವು ಅವಕಾಶಗಳು ಜನರನ್ನು ತಮ್ಮತ್ತ ಕೈಬೀಸಿ ಕರೆಯುತ್ತಿರುತ್ತವೆ.
ಹಣ ಏಕೆ ಉಳಿಸಬೇಕು?
ಮುಪ್ಪನ್ನು ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಬಾಲ್ಯ, ಯೌವನ ಹಾಗೂ ಮುಪ್ಪು. ಅದೇ ರೀತಿ ವೃತ್ತಿ, ಪ್ರವೃತ್ತಿ ಹಾಗೂ ನಿವೃತ್ತಿ ಮಾನವ ಕುಲಕ್ಕೆ ಕಟ್ಟಿಟ್ಟ ಬುತ್ತಿ. ಅರವತ್ತರ ಅಂಚನ್ನು ದಾಟಿ, ಹಿರಿಯ ನಾಗರಿಕರಾಗುವಾಗ ದುಡಿಯುವ ಶಕ್ತಿ ಕುಂದುವುದು ಸಹಜ. ಆದರೆ ಇದೇ ವೇಳೆ ಮಕ್ಕಳ ವಿದ್ಯಾಭ್ಯಾಸ, ಮದುವೆ, ಸ್ವಂತ ಮನೆ ಹೊಂದುವುದು, ಕಾಯಿಲೆ ಕಸಾಲೆ ಮೊದಲಾದ ಹೆಚ್ಚಿನ ಖರ್ಚಿನ ಜವಾಬ್ದಾರಿ ಎದುರಿಸಲೇಬೇಕಾಗುತ್ತದೆ. ಇನ್ನು ಮುಖ್ಯವಾಗಿ ಜೀವನದ ಸಂಜೆಯಲ್ಲಿ ಆರ್ಥಿಕ ಸಫಲತೆ ಇರದಿರುವಲ್ಲಿ, ಸ್ವಾವಲಂಬನೆಗೆ ಧಕ್ಕೆ ಉಂಟಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಜೇಬಿನಲ್ಲಿ `ದುಡ್ಡು' ದೇಹದಲ್ಲಿ `ಬ್ಲಡ್' ಇರುವ ತನಕ ಮಾತ್ರ ನೆಮ್ಮದಿಯಿಂದ ಬಾಳಿ ಬದುಕಬಹುದು. ಮನುಷ್ಯ ಆರ್ಥಿಕವಾಗಿ ಸಫಲನಾಗಲು ಹಾಗೂ ಇಚ್ಚಿಸಿದ ಗುರಿಯನ್ನು ತಲುಪಲು, ಜೀವನದ ಪ್ರಾರಂಭದಿಂದಲೇ ಉತ್ತಮ ಆರ್ಥಿಕ ಶಿಸ್ತನ್ನು ಪರಿಪಾಲಿಸಬೇಕಾಗುತ್ತದೆ.
ಏನಿದು ಆರ್ಥಿಕ ಶಿಸ್ತು?
ಬಿಸಿಲಿರುವಾಗ ಹುಲ್ಲು ಒಣಗಿಸಿ! ಮರವಾಗಿ ಬಗ್ಗಿಸಲು ಸಾಧ್ಯವಿಲ್ಲವಾದ್ದರಿಂದ ಗಿಡ ಇರುವಾಗಲೇ ಬಗ್ಗಿಸು, ಬಿಸಿ ಇರುವಾಗ ಕಬ್ಬಿಣ ಹದಕ್ಕೆ ತರಬೇಕು ಎನ್ನುವ ಗಾದೆ ಮಾತುಗಳು ಆರ್ಥಿಕ ಶಿಸ್ತಿಗೂ ಅನ್ವಯವಾಗುತ್ತವೆ. ಜೀವನದಲ್ಲಿ ತಂಪಾದ ಗಾಳಿ ಬೀಸಿ ಮಾಯವಾಗುವಂತೆ, ಅವಕಾಶಗಳು ಕೂಡಾ ಬಂದಿರುವ ವೇಗದಲ್ಲಿಯೇ ಹಿಂತಿರುಗುತ್ತವೆ. ಒಟ್ಟಿನಲ್ಲಿ ಸಮಯ ಪ್ರಜ್ಞೆಯಿಂದ ಒದಗಿದ ಅವಕಾಶವನ್ನು ನಗದೀಕರಿಸುವುದೇ, `ಆರ್ಥಿಕ ಶಿಸ್ತು' ಹಾಗೂ ಜಾಣರ ಲಕ್ಷಣ. `ಬಡವಂ ಬಲ್ಲಿದನಾಗದೇ?' ಎನ್ನುವ ಸೋಮೇಶ್ವರ ಶತಕದ ಭಾವಾರ್ಥ ಅತೀ ಕಡಿಮೆ ವರಮಾನವುಳ್ಳ ವ್ಯಕ್ತಿ ಕೂಡಾ ಒಂದಲ್ಲ ಒಂದು ದಿಸ ಶ್ರೀಮಂತನಾಗಬಹುದು. ಜೊತೆಗೆ ಸತತ ಸಾಧನೆಯಿಂದ ಅದನ್ನು ಸಾಧಿಸಬಹುದು ಎನ್ನುವುದು ಕೂಡಾ ಕವಿಯ ಕಿವಿಮಾತು. ಆರ್ಥಿಕ ಶಿಸ್ತು ಪಾಲಿಸಲು ಸ್ವಲ್ಪ ಮಟ್ಟಿನ ತ್ಯಾಗದ ಮನೋಭಾವನೆ ಗಂಡಹೆಂಡಿರಲ್ಲಿ ಅಗತ್ಯವಾಗಿರಬೇಕು. ಹಣ ಉಳಿಸಲು ಉತ್ತಮ ಸೂತ್ರವೆಂದರೆ, ಆದಾಯದಲ್ಲಿ ಒಂದಿಷ್ಟು ಹಣ ಪ್ರಾರಂಭದಲ್ಲಿಯೇ ಉಳಿತಾಯಕ್ಕೆ ಮೀಸಲಾಗಿದ್ದು, ಉಳಿಯುವ ಹಣ ಮಾತ್ರ ಖರ್ಚಿಗೆ ಬಳಸಿಕೊಳ್ಳಬೇಕು. ಇದರಿಂದ ಆರ್ಥಿಕ ಶಿಸ್ತಿಗೆ ನಾಂದಿಯಾಗಿ, ಬೇಡವಾದ ಖರ್ಚುಗಳಿಗೆ ಕಡಿವಾಣ ಹಾಕಿದಂತಾಗುತ್ತದೆ.