ಇಂದು ಪ್ರತಿಯೊಬ್ಬರೂ ಮಾಲಿನ್ಯ ರಹಿತ ವಾತಾವರಣ ಇಷ್ಟಪಡುತ್ತಾರೆ. ಏಕೆಂದರೆ ತಮ್ಮ ಇಡೀ ದಿನದ ದಣಿವು ನಿವಾರಣೆ ಆಗಬೇಕೆನ್ನುವುದು ಅವರ ಅಪೇಕ್ಷೆಯಾಗಿರುತ್ತದೆ. ಒಂದೆಡೆ ಸುಗಂಧ ಸಂಬಂಧದಲ್ಲಿ ಮಾಧುರ್ಯತೆ ತಂದು ಹೊಸ ತಾಜಾತನ ತುಂಬುತ್ತದೆ. ಅದು ಮನೆಯ ವಾತಾವರಣವನ್ನು ಸ್ವಚ್ಛ ಹಾಗೂ ಶುದ್ಧವಾಗಿಡುತ್ತದೆ. ಇಂತಹ ಮನೆಯಲ್ಲಿ ಪ್ರವೇಶ ಮಾಡುತ್ತಿದ್ದಂತೆ ನೀವು ಸುಖಶಾಂತಿಯ ಅನುಭೂತಿ ಪಡೆದುಕೊಳ್ಳುತ್ತೀರಿ. ಇಡೀ ದಿನದ ದಣಿವು ಕ್ಷಣಾರ್ಧದಲ್ಲಿಯೇ ನಿವಾರಣೆಯಾಗುತ್ತದೆ.
ಹೋಮ್ ಫ್ರಾಗ್ರೆನ್ಸ್
ಈಗ ಮಾರುಕಟ್ಟೆಯಲ್ಲಿ ಹಲವು ಬಗೆಯ ಹೋಮ್ ಫ್ರಾಗ್ರೆನ್ಸ್ ಲಭ್ಯವಿವೆ. ಅವನ್ನು ನೀವು ನಿಮ್ಮ ಆಸಕ್ತಿ ಹಾಗೂ ಸೌಲಭ್ಯಕ್ಕನುಗುಣವಾಗಿ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಮನೆಯ ತೇವಾಂಶ ಹಾಗೂ ಒದ್ದೆಬಟ್ಟೆಗಳ ವಾಸನೆಯನ್ನು ಕ್ಷಣಾರ್ಧದಲ್ಲಿಯೇ ನಿವಾರಿಸಿಕೊಂಡು ಮನೆಯನ್ನು ಸುಗಂಧಮಯ ಮಾಡಿಕೊಳ್ಳಬಹುದು.
ಹೋಮ್ ಫ್ರಾಗ್ರೆನ್ಸ್ ಕುರಿತು ಜನರ ಹೆಚ್ಚುತ್ತಿರುವ ಆಸಕ್ತಿಯ ಕಾರಣದಿಂದ ಮಾರುಕಟ್ಟೆಯಲ್ಲಿ ಪರ್ಫ್ಯೂಮ್ ಡಿಸ್ಪೆನ್ಸರ್, ಆ್ಯರೋಮಾ ಲ್ಯಾಂಪ್ಸ್ ಪ್ಲಗ್ ಇನ್, ರೂಮ್ ಸ್ಪ್ರೇ, ಏರ್ ಫ್ರೆಶ್‌ನರ್ಸ್, ಪಾಟ್‌ಪೋರಿ ಸೆಂಟೆಡ್ ಆಯಿಲ್, ಸೆಂಟೆಡ್ ಕ್ಯಾಂಡಲ್ಸ್ ಮುಂತಾದವು ಲಭ್ಯವಿವೆ. ಇವುಗಳ ಬೇರೆ ಬೇರೆ ಕೆಟಗರಿಗಳಿವೆ. ಫ್ರೂಟ್ಸ್ ಕೆಟಗರಿಯಲ್ಲಿ ವೆನಿಲಾ, ಸ್ಟ್ರಾಬೆರಿ. ಚಾಕ್ಲೇಟ್ ಮುಂತಾದ ಸುವಾಸನೆಗಳು ಬರುತ್ತವೆ.
ಫ್ಲೋರ್ ಕೆಟಗರಿಯಲ್ಲಿ ಇಂಡಿಯನ್ ಸ್ಪೈಸ್, ಜಾಸ್ಮಿನ್, ರೋಸ್, ಲ್ಯಾವೆಂಡರ್ ಮುಂತಾದವು ಸಿಗುತ್ತವೆ.
ನ್ಯಾಚುರಲ್ ಫ್ರಾಗ್ರೆನ್ಸ್ ಅಗರಬತ್ತಿ : ಇದು ಅತ್ಯಂತ ಉತ್ತಮ ಫ್ರಾಗ್ರೆನ್ಸ್ ಆಗಿದ್ದು, ಆರಂಭದಿಂದಲೇ ಇದನ್ನು ಬಳಸುತ್ತ ಬರಲಾಗುತ್ತಿದೆ. ಸುಗಂಧಮಯ ಕಟ್ಟಿಗೆ, ಗಿಡಮೂಲಿಕೆಗಳು, ಆಯಿಲ್, ಮಸಾಲೆಗಳು, ಜಾಸ್ಮಿನ್, ಗುಲಾಬಿ, ದೇವದಾರು ಮುಂತಾದವು ನೈಸರ್ಗಿಕ ವಸ್ತುಗಳಿಂದಲೂ ಅಗರಬತ್ತಿಗಳನ್ನು ತಯಾರಿಸಲಾಗುತ್ತವೆ. ಕೆಲವು ಅಗರಬತ್ತಿಗಳು ನೇರವಾಗಿ ದಹಿಸುವಂಥವು. ಮತ್ತೆ ಕೆಲವು ಪರೋಕ್ಷವಾಗಿ ದಹಿಸುವಂಥವು.
ಡೈರೆಕ್ಟ್ ಬರ್ನ್ ಅಗರಬತ್ತಿ : ಇವು ಕಡ್ಡಿಗಳ ರೂಪದಲ್ಲಿರುತ್ತವೆ. ಇವನ್ನು ನೇರವಾಗಿ ದಹಿಸಲಾಗುತ್ತದೆ. ಇವು ನಿಧಾನವಾಗಿ ಉರಿದು ಮನೆಯನ್ನೆಲ್ಲ ಸುಗಂಧಿತಗೊಳಿಸುತ್ತವೆ.
ಇನ್ಡೈರೆಕ್ಟ್ ಬರ್ನ್ ಅಗರಬತ್ತಿ : ಇದರಲ್ಲಿ ಸುಗಂಧಮಯ ವಸ್ತುವನ್ನು ಯಾವುದೇ ಮೆಟಲ್ ಅಥವಾ ಬೆಂಕಿ ಕೆಂಡದ ಮೇಲೆ ಇರಿಸಲಾಗುತ್ತದೆ. ಇದು ವಸ್ತುವಿನ ರೂಪದಲ್ಲಿದ್ದು, ಇಡೀ ಮನೆಯಲ್ಲಿ ಸುವಾಸನೆಯನ್ನು ಹರಡುತ್ತದೆ.
ಫ್ರಾಗ್ರೆನ್ಸ್ ಪಾಟ್ಪೋರಿ : ಇದರಲ್ಲಿ ನೈಸರ್ಗಿಕ ಸುವಾಸನೆ ಬೀರುವ ಒಣ ಸಸಿಗಳ ಭಾಗಗಳು ಹಾಗೂ ಇತರೆ ಫ್ರಾಗ್ರೆನ್ಸ್ ಸಾಮಗ್ರಿಯನ್ನು ಡೆಕೊರೇಟಿವ್ ಬೌಲ್ ಅಥವಾ ತೆಳ್ಳನೆಯ ಬಟ್ಟೆ ಗಂಟಿನಲ್ಲಿ ಕಟ್ಟಿಡಲಾಗುತ್ತದೆ. ನೀವು ಮಣ್ಣಿನ ಅಥವಾ ಸೆರಾಮಿಕ್ ಪಾಟ್‌ನಲ್ಲಿ ನೀರು ತುಂಬಿ ತಾಜಾ ಗುಲಾಬಿ ಹೂವಿನ ಪಕಳೆಗಳನ್ನು ಹಾಕಿ ಬಾಗಿಲಿನ ಬಳಿ ಅಥವಾ ಕಿಟಕಿ ಹತ್ತಿರ ನೇತುಬಿಡಿ. ಗಾಳಿಯ ಅಲೆಯ ಜೊತೆಗೆ ಅದರ ಸುವಾಸನೆ ಇಡೀ ಮನೆ ತುಂಬ ಪಸರಿಸುತ್ತದೆ.
ಕ್ಯಾಂಡಲ್ ವಾರ್ಮ್ಸ್ : ಇದು ಮೇಣವನ್ನು ಬಿಸಿ ಮಾಡುತ್ತದೆ. ಕೆಳಗೆ ಸೋರುವ ಮೇಣದಬತ್ತಿಯಿಂದ ಹೊರಹೊಮ್ಮುವ ವಾಸನೆ ಮನೆ ತುಂಬ ಪಸರಿಸುತ್ತದೆ. ಕೆಲವು ಉತ್ಪನ್ನಗಳು 100% ನೈಸರ್ಗಿಕ ಸುಗಂಧ ತೈಲದಿಂದ ನಿರ್ಮಾಣಗೊಂಡಿರುತ್ತವೆ. ಅವು ಇಡೀ ಮನೆಯನ್ನು ಸುವಾಸನಾಭರಿತ ಮಾಡುತ್ತವೆ ಹಾಗೂ ಪರಿಸರಸ್ನೇಹಿ ಕೂಡ ಆಗಿರುತ್ತವೆ.
ಏರ್ ಫ್ರೆಶ್‌ನರ್ಸ್ : ಇವು ಚಿಕ್ಕ ಕ್ಯಾನ್‌ಗಳಲ್ಲಿ ಬರುತ್ತವೆ ಹಾಗೂ ಈ ಏರ್ ಫ್ರೆಶನರ್‌ಗಳನ್ನು ಗೋಡೆಯ ಮೇಲೆ ನೇತುಬಿಡಲಾಗುತ್ತದೆ. ಅದರ ಗುಂಡಿ ಅದುಮುತ್ತಿದ್ದಂತೆಯೇ ಸುವಾಸನೆ ಬೀರಲು ಆರಂಭಿಸುತ್ತದೆ.
ರೀಡ್ ಡಿಫ್ಯೂಸರ್ : ಇದರಲ್ಲಿ ನ್ಯಾಚುರಲ್ ಹಾಗೂ ಸಿಂಥೆಟಿಕ್ ಎರಡೂ ಬಗೆಯ ತೈಲಗಳನ್ನು ಉಪಯೋಗಿಸಲಾಗುತ್ತದೆ. ಇದು ಸುವಾಸನೆಯನ್ನು ಕೋಣೆಯಲ್ಲಿ ಹೆಚ್ಚು ಹೊತ್ತಿನತನಕ ಕಾಯ್ದಿಡುವಂತೆ ಮಾಡುತ್ತದೆ. ಇದನ್ನು ಮತ್ತೆ ಮತ್ತೆ ಉರಿಸಬೇಕಾದ ಅಗತ್ಯವಿಲ್ಲ. ಇದು ಹಲವು ಬಗೆಯ ಸುವಾಸನೆ ಹಾಗೂ ಗಾತ್ರಗಳಲ್ಲಿ ಲಭಿಸುತ್ತದೆ.
ಫ್ರಾಗ್ರೆನ್ಸ್ ಕ್ಯಾಂಡಲ್ : ಈಗ ಮಾರುಕಟ್ಟೆಯಲ್ಲಿ ಹಲವು ಬಣ್ಣಗಳು, ಡಿಸೈನುಗಳು ಹಾಗೂ ಸುವಾಸನೆಗಳಲ್ಲಿ ಈ ಕ್ಯಾಂಡಲ್ಸ್ ದೊರೆಯುತ್ತವೆ. ಡಿಸೈನರ್ ಆ್ಯರೋಮಾ ಲ್ಯಾಂಪ್‌ನ್ನು ನೀವು ಎಲ್ಲಿ ಬೇಕಾದರೂ ಇಡಬಹುದು. ವಿಶೇಷ ರೀತಿಯಲ್ಲಿ ತಯಾರಿಸಿದ ಈ ಲ್ಯಾಂಪ್‌ನಲ್ಲಿ ನೀರಿನಲ್ಲಿ ಕೆಲವು ಹನಿ ಆ್ಯರೋಮಾ ಹಾಕಲಾಗುತ್ತದೆ. ಅದರಿಂದಾಗಿ ಮನೆಯಲ್ಲಿ ಹೆಚ್ಚು ಸಮಯ ಸುವಾಸನೆ ಬೀರುತ್ತಿರುತ್ತದೆ.
– ಸಿ. ವಾರಿಜಾ