ನಮ್ಮ ದೇಹದ ಒಂದು ಟೆಂಡೆನ್ಸಿ ಎಂದರೆ ಸಾಧ್ಯವಾದಷ್ಟೂ ಕೊಬ್ಬನ್ನು ಒಂದು ಕಡೆ ಶೇಖರಿಸಿಡುವುದು. ವಯಸ್ಸು ಹೆಚ್ಚಿದಂತೆಲ್ಲ ಈ ಟೆಂಡೆನ್ಸಿ ಸಹ ಹೆಚ್ಚುತ್ತದೆ, ಏಕೆಂದರೆ ದೇಹದ ಮೆಟಬಾಲಿಕ್ ರೇಟ್ ಕಡಿಮೆ ಆಗಿಹೋಗುತ್ತದೆ. ಹುಡುಗಿಯರಲ್ಲಿ 16 ವರ್ಷ ಆದನಂತರ, ಫ್ಯಾಟ್ ವೇಗವಾಗಿ ಹೆಚ್ಚುತ್ತದೆ. ಅದರಲ್ಲೂ ಊಟ ತಿಂಡಿ ಸಾಕಷ್ಟು ರಿಚ್ ಆಗಿದ್ದು, ಹೆಚ್ಚಿನ ಓಡಾಟ ಏನೂ ಇಲ್ಲದಿದ್ದರೆ, 2 ವರ್ಷಗಳಲ್ಲಿ ಸೊಂಟದ ಸುತ್ತ ಟೈರೋ ಟೈರು! ಅದರಲ್ಲೂ ಹೆಣ್ಣುಮಕ್ಕಳಲ್ಲಿ ಮುಖ್ಯವಾಗಿ ಫ್ಯಾಟ್‌ನ ಟಾರ್ಗೆಟ್ ಎಂದರೆ ಸೊಂಟ, ನಿತಂಬ ಹಾಗೂ ಕುತ್ತಿಗೆಯ ಭಾಗಗಳು. ಸ್ಲಿಂ ಟ್ರಿಂ ಹುಡುಗಿಗೆ ಹೆಚ್ಚು ಕಡಿಮೆ 6 ಕಿಲೋ ತೂಕ ಹೆಚ್ಚಿದ ನಂತರವೇ, ತನ್ನ ತೂಕ ಹೆಚ್ಚಿರುವ ವಿಷಯ ಮನದಟ್ಟಾಗುವುದು, ಏಕೆಂದರೆ ಅಷ್ಟು ಹೊತ್ತಿಗೆ ಅದು ದೇಹದ ತುಂಬಾ ಹರಡಿಹೋಗಿರುತ್ತದೆ. ಸಾಮಾನ್ಯವಾಗಿ ನಾವು ನಮ್ಮ ಸೊಂಟದ ಸುತ್ತಳತೆ ನೋಡಿಕೊಂಡು ಫ್ಯಾಟ್ ಹೆಚ್ಚಾಗಿದೆ ಎಂದು ಅರಿಯುತ್ತೇವೆ. ಆದರೆ ಅದು ಸೊಂಟದ ಬಳಿ ಸಂಗ್ರಹಗೊಳ್ಳುವ ಮೊದಲೇ, ಫ್ಯಾಟ್ ದೇಹದಲ್ಲಿ ಎಲ್ಲೆಡೆ ಪದರ ಕಟ್ಟಿರುತ್ತದೆ.
ನಿಮ್ಮ ದೇಹದ ಕುರಿತು ನೀವು ಸೀರಿಯಸ್ ಆಗಿ ಚಿಂತಿಸುವಿರಾದರೆ, ದೀರ್ಘ ಕಾಲದವರೆಗೂ ನಿಮ್ಮ ಫಿಗರ್‌ನ್ನು ಸಂಭಾಳಿಸಬಹುದು. ನಿಮ್ಮ ಬಳಿ ಸಾಕಷ್ಟು ಕಾಲಾವಕಾಶ ಇರುವಾಗಲೇ ಫಿಟ್ ಆಗಿರಲು ಪಾಲಿಸ ಬೇಕಾದ ಕೆಲವು ನಿಯಮಗಳನ್ನು ಅನುಸರಿಸಿದರೆ, ಮುಂದೆ ಪಶ್ಚಾತ್ತಾಪ ಪಡಬೇಕಾದ ಅಗತ್ಯ ಇರುವುದಿಲ್ಲ. ಮುಂದೆ ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆ ವಾಸ, ಔಷಧ, ಪಥ್ಯಗಳ ಗೊಡವೆ ಇರಲ್ಲ. ಫಿಸಿಕಲ್ ಆ್ಯಕ್ಟಿವಿಟಿ ಹಾಗೂ ಊಟ ತಿಂಡಿ ಬಗ್ಗೆ ಕಂಟ್ರೋಲ್ ಇದ್ದಾಗ ಮಾತ್ರ ಬೊಜ್ಜು ನಿಮ್ಮ ಹತ್ತಿರ ಸುಳಿಯುವುದಿಲ್ಲ. ಜೊತೆಗೆ ಇನ್ನೊಂದಷ್ಟು ಸಲಹೆಗಳನ್ನು ಅನುಸರಿಸಿದರೆ ನಿಮ್ಮ ದೇಹ ಬಿಗಡಾಯಿಸುವ ಬದಲು ಫಿಗರ್ ಸುಧಾರಿಸುತ್ತದೆ.
ಈ ಅಭ್ಯಾಸ ರೂಢಿಸಿಕೊಳ್ಳಿ
ಮಲಗುವ ಮುನ್ನ ಪ್ರತಿದಿನ ರಾತ್ರಿ ಬಿಸಿ ನೀರನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಬಿಸಿ ನೀರಿನ ರುಚಿ ಹಿಡಿಸದು ಎನಿಸಿದರೆ, ಅದಕ್ಕೆ ತುಸು ನಿಂಬೆಹಣ್ಣು ಹಿಂಡಿಕೊಳ್ಳಿ. 1 ಚಿಟಕಿ ಉಪ್ಪು, 1-2 ಕಾಳು ಮೆಣಸು ಕುಟ್ಟಿ ಹಾಕಬಹುದು.
ವಾರದಲ್ಲಿ 1 ದಿನ ಉಪವಾಸ ಇರಬೇಕು. ಆ ದಿನ ಕೇವಲ ನೀರು, ಹಣ್ಣು ಅಥವಾ ಹಸಿ ತರಕಾರಿ ಸಲಾಡ್ ಸೇವಿಸಿ.
ಬೆಳಗ್ಗೆ ಕಡ್ಡಾಯವಾಗಿ ಬ್ರಿಸ್ಕ್ ವಾಕ್, ಜಾಗಿಂಗ್ ಮತ್ತು ವ್ಯಾಯಾಮ, ಯೋಗ ರೂಢಿಸಿಕೊಳ್ಳಿ.
ಸದಾ ಅನ್ನ ಅಥವಾ ಗೋಧಿ ಚಪಾತಿ ಬದಲಿಗೆ ನಡುನಡುವೆ ರಾಗಿ, ಜೋಳದ ರೊಟ್ಟಿ, ಸಜ್ಜೆ, ನವಣೆ ಇತ್ಯಾದಿ ಸಿರಿ ಧಾನ್ಯಗಳನ್ನು ಬಳಸಿ. ಜವೆಗೋಧಿ, ಕಡಲೆಕಾಳು, ಹೆಸರುಕಾಳು, ಹುರುಳಿಕಾಳು ಇತ್ಯಾದಿ ಹೆಚ್ಚು ಬಳಸಿ.
ಊಟ ಆದ ತಕ್ಷಣ ನೀರು ಕುಡಿಯುವ ಅಭ್ಯಾಸ ಬೇಡ. ಊಟದ ನಂತರ ಬಹಳ ಬಾಯಾರಿಕೆ ಎನಿಸಿದರೆ, 1-2 ಹನಿ ಮಾತ್ರ ಸೇವಿಸಿ….
ಊಟ ಮುಗಿಸಿದ 1 ತಾಸಿನ ನಂತರ ನೀರು ಕುಡಿಯುವುದೇ ಸರಿ.
ಊಟಕ್ಕೆ ಮೊದಲು 1 ಬಟ್ಟಲು ತರಕಾರಿ ಸೂಪ್ ಅಗತ್ಯ ಸೇವಿಸಿ.
ಹೊಟ್ಟೆ ಬಳಿ ಕೊಬ್ಬು ಹೆಚ್ಚಾಗಿದ್ದರೆ….ವ್ಯಾಯಾಮ ಮಾಡದೆ ಹೊಟ್ಟೆ ಬಳಿಯ ಕೊಬ್ಬು ಎಂದೂ ಕರಗದು. ಅದರಲ್ಲೂ ಕೇವಲ ಸೊಂಟಕ್ಕೆ ಸಂಬಂಧಿಸಿದ ವ್ಯಾಯಾಮ ಮಾಡಿದರೆ ಸೊಂಟ ಸಣ್ಣಗಾಗದು. ಇಡೀ ದೇಹಕ್ಕೆ ಅನ್ವಯವಾಗುವಂತೆ ವ್ಯಾಯಾಮ ಮಾಡಬೇಕು. ನೀವು ವ್ಯಾಯಾಮ ಮತ್ತು ಡಯೆಟ್ ಕುರಿತಾಗಿ ಶ್ರದ್ಧೆ ವಹಿಸಿದರೆ, ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು. ಒಂದು ಸ್ಟೀಲ್ ಪಾತ್ರೆಯಲ್ಲಿ ನೀರು ತುಂಬಿಸಿ ಕಾಯಿಸಿ. ಇದಕ್ಕೆ 1-1 ಚಮಚ ಉಪ್ಪು, ಓಮ ಹಾಕಿ. ನೀರು ಕುದಿಯತೊಡಗಿದಾಗ, ಇದರ ಮೇಲೆ ಒಂದು ಸ್ಟೀಲ್ ಜರಡಿ ಇರಿಸಿ. ಇದರ ಮೇಲೆ ನೀರಲ್ಲಿ ಅದ್ದಿ ಹಿಂಡಿದ 2 ಸಣ್ಣ ಟವೆಲ್ ಹರಿಡರಿ. ನೀರಿನ ಆವಿ ಅದಕ್ಕೆ ನುಗ್ಗಿ ಬರಲಿ. ಅದನ್ನು ನಿಮ್ಮ ಸೊಂಟದ ಸುತ್ತ (ಹೊಕ್ಕುಳ ಬಳಿ) ಒತ್ತಿಹಿಡಿದು, ಸ್ಟೀಂ ಸಿಗುವಂತೆ ಮಾಡಿ. ಹೀಗೆ 10-15 ನಿಮಿಷ ಮಾಡಬೇಕು. ಇದನ್ನು ರಾತ್ರಿ ಮಲಗುವ ಮುನ್ನ ಅಥವಾ ಬೆಳಗ್ಗೆ ಎದ್ದ ತಕ್ಷಣ 2 ತಿಂಗಳ ಕಾಲ ಮಾಡಿ. ಇದನ್ನೇ ಸ್ಲಿಮ್ಮಿಂಗ್‌ಸೆಂಟರ್‌ನಲ್ಲಿ ಆಧುನಿಕ ಪರಿಕರಗಳಿಂದ ಸ್ಟೀಂ ಬಾಥ್ ನೀಡಿ, ಕೊಬ್ಬು ಕರಗಿಸುತ್ತಾರೆ.
ತಾಯಂದಿರ ಅತಿ ಮುದ್ದು
ಅಮ್ಮಂದಿರು ತಮ್ಮ ಪ್ರೀತಿಗಾಗಿ ಮಕ್ಕಳು ಹೆಚ್ಚು ಬೆಣ್ಣೆ ತುಪ್ಪ ಸವಿಯಲಿ ಎಂದು ಬಯಸುತ್ತಾರೆ. ಆದರೆ ಹೆಣ್ಣುಮಕ್ಕಳು ಹೊರಗೆಲ್ಲೂ ಇಂಥ ಜಿಡ್ಡಿನ ಪದಾರ್ಥ ಸೇವಿಸದಿದ್ದರೆ, ಮನೆಯಲ್ಲಿ ಇವನ್ನು ಅಪರೂಪಕ್ಕೆ ಸೇವಿಸಬಹುದು. ಆದರೆ ಹೊರಗಡೆಯೂ ಜಿಡ್ಡು, ಪಿಜ್ಜಾ ಬರ್ಗರ್ ತಿಂದು ಮನೆಯಲ್ಲೂ ಇಂಥವನ್ನು ಧಾರಾಳವಾಗಿ ತಿನ್ನುತ್ತೇವೆ ಎಂದರೆ ಖಂಡಿತಾ ತಪ್ಪು. ಮುಖ್ಯವಾಗಿ ಬೆಳಗಿನ ಹೊತ್ತು ಬ್ರೇಕ್ ಫಾಸ್ಟ್ ಗೆ ತುಸು ಬೆಣ್ಣೆ ತುಪ್ಪ ಸವಿದರೆ, ಇಡೀ ದಿನದ ಓಡಾಟದಿಂದ ಅದು ಸಹಜವಾಗಿ ಕರಗುತ್ತದೆ. ಬದಲಿಗೆ ಸಂಜೆ ರಾತ್ರಿ ಇದನ್ನು ಸೇವಿಸಲೇ ಬಾರದು.
ಆದ್ದರಿಂದ ಫಿಗರ್ ಮೇಂಟೆನೆನ್ಸ್ ಕುರಿತಾಗಿ ಒಟ್ಟಾಗಿ ಹೇಳಬೇಕೆಂದರೆ, ನೀವು ಖುದ್ದಾಗಿ ನಿಮ್ಮ ಫಿಗರ್ ಯಾವ ಮಟ್ಟದಲ್ಲಿದೆ ಎಂಬುದನ್ನು ನಿರ್ಧರಿಸಬೇಕು. ಸ್ಥೂಲತೆ ನಿಮ್ಮ ದೇಹದ ಬಾರ್ಡರ್ ಲೈನ್‌ನಲ್ಲಿದೆಯೇ, ಅದಕ್ಕಿಂತಲೂ ಮುಂದೆ ಅಥವಾ ಹಿಂದೆ ಉಳಿದಿದೆಯೋ ನಿರ್ಣಯಿಸಿ. ನಿಮ್ಮ ಬಿಎಂಐ ಅಂದರೆ ಬಾಡಿ ಮಾಸ್ ಇಂಡೆಕ್ಸ್ ನ್ನು ಅಗತ್ಯ ಪರೀಕ್ಷಿಸಿ. ಇದರಿಂದ ಮುಂದೆ ನೀವೇನು ಮಾಡಬೇಕೆಂದು ತಿಳಿಯುತ್ತದೆ.
ಅಗತ್ಯ ಕಿವಿಮಾತು
ನೀವು ಫಾಸ್ಟ್ ಫುಡ್, ಜಂಕ್ ಫುಡ್, ಕರಿದ ತಿಂಡಿ ತಿನಿಸುಗಳನ್ನು ಸೇವಿಸುವುದನ್ನು ಬಿಡಲಾಗದು ಎಂದರೆ ಈ ಮೇಲಿನ ಯಾವ ಉಪಾಯಗಳೂ ಕೆಲಸಕ್ಕೆ ಬರುವುದಿಲ್ಲ. ಇಂಥ ತಿನಿಸುಗಳು ಸ್ಥೂಲಕಾಯಕ್ಕೆ ಮೂಲ ಕಾರಣ. ಇಂಥವನ್ನು ಕಂಟ್ರೋಲ್‌ಮಾಡಲಾಗದಿದ್ದರೆ ಫಿಗರ್ ಮೇಂಟೆನೆನ್ಸ್ ಕುರಿತು ಚಿಂತಿಸುವುದೆಲ್ಲ ವ್ಯರ್ಥ.
– ಶ್ರವಂತಿ