ನಾವು ಇಪ್ಪತ್ತು ವರ್ಷಗಳ ಹಿಂದೆ ಸಿಂಗಪೂರಿನ ಆಕರ್ಷಕ ತಾಣವೆನಿಸಿಕೊಂಡಿದ್ದ ಸಂತೋಸಾ ದ್ವೀಪಕ್ಕೆ ಹೋದಾಗ ಅಲ್ಲಿ ಮ್ಯೂಸಿಕಲ್ ಫೌಂಟೆನ್ ಮತ್ತು ಒಂದಷ್ಟು ರೈಡ್‌ಗಳನ್ನು ಬಿಟ್ಟರೆ ಮತ್ತೇನೂ ಇರಲಿಲ್ಲ. ಈಗ ಅಲ್ಲಿಯೇ ಯೂನಿವರ್ಸಲ್ ಸ್ಟುಡಿಯೋ ನಿರ್ಮಿಸಲಾಗಿದೆ. 49 ಎಕರೆ ವಿಸ್ತೀರ್ಣವುಳ್ಳ, ಈ ವಿಶಾಲ ತಾಣ ಈಶಾನ್ಯ ಏಷ್ಯಾ ಅಂದರೆ ದಕ್ಷಿಣ ಪೂರ್ವ ಏಷ್ಯಾದಲ್ಲಿನ ಮೊದಲ ಸ್ಟುಡಿಯೋ ಎಂಬ ಹೆಗ್ಗಳಿಕೆಯನ್ನು ಹೊಂದಿರುವುದೇ ಅಲ್ಲದೆ, ಮುಂದಿನ 30 ವರ್ಷಗಳ ತನಕ ಇದಕ್ಕೆ ಸಮನವಾದ ಮತ್ತೊಂದು ಸ್ಟುಡಿಯೋ ನಿರ್ಮಾಣವಾಗಲು ಸಾಧ್ಯವಿಲ್ಲ ಎನ್ನುವುದು ಅವರ ಅಂಬೋಣ.
ಈ ಸುಂದರ ತಾಣದ ನಿರ್ಮಾಣ 2003ರ ಏಪ್ರಿಲ್‌ನಲ್ಲಿ ಪ್ರಾರಂಭವಾಗಿ, 2009ರ ಅಕ್ಟೋಬರ್‌ನಲ್ಲಿ ಸಾರ್ಜನಿಕರಿಗಾಗಿ ತೆರೆಯಲಾಯಿತು. ನಾವು ಯೂನಿವರ್ಸಲ್ ಸ್ಟುಡಿಯೋವನ್ನು ಲಾಸ್ ಏಂಜಲೀಸ್, ಅರ್ಲ್ಯಾಂಡೋ ಮತ್ತು ಪ್ಯಾರಿಸ್ (ಪ್ಯಾರಿಸ್‌ನ ಡಿಸ್ನಿ ಲ್ಯಾಂಡ್‌ನ ಸಣ್ಣ ಭಾಗ)ನಲ್ಲಿ ನೋಡಿದ್ದು, ಈಗ ಸಿಂಗಪೂರ್‌ನಲ್ಲಿ ನೋಡಿದೆ. ಆದರೆ ಎಷ್ಟು ಬಾರಿ ನೋಡಿದರೂ ಬೇಸರವಾಗುವುದಿಲ್ಲ. ಮನುಷ್ಯನ ಮನಸ್ಸನ್ನು ಜಯಿಸುವ ಶಕ್ತಿ ಇಲ್ಲಿದೆ. ಅವರವರ ವಯಸ್ಸಿಗನುಗುಣವಾಗಿ, ಎಲ್ಲರಿಗೂ ಮನರಂಜನೆ, ಥ್ರಿಲ್ ಬೆರಗುಗೊಳಿಸುವ ತಾಣವೆನ್ನಬಹುದು.
ಸಂತೋಸಾ ದ್ವೀಪದ ಪಶ್ಚಿಮದ ತೀರಕ್ಕಿರುವ ಯೂನಿವರ್ಸಲ್ ಸ್ಟುಡಿಯೋದಲ್ಲಿ ಒಟ್ಟು 24 ಆಕರ್ಷಣೆಗಳಿವೆ. ಅವುಗಳಲ್ಲಿ ಹದಿನೆಂಟನ್ನು ಪಾರ್ಕಿಗೆಂದೇ ರೂಪಿಸಲಾಗಿದೆ. ನೀರಿನಿಂದ ಸುತ್ತುವರೆದ ಏಳು ವಿಭಾಗಗಳಿವೆ. ಪ್ರತಿಯೊಂದನ್ನೂ ಒಂದು ನಿರ್ದಿಷ್ಟ ಉದ್ದೇಶ ಅರ್ಥಾತ್ ಥೀಮ್ ನ್ನು ಅವಲಂಬಿಸಿ ವಿಭಾಗಿಸಲಾಗಿದೆ. ಜಗತ್ತಿನಲ್ಲೇ ಅತಿ ಎತ್ತರದ ಎರಡು ಟ್ರಾಕ್‌ಗಳ ರೋಲರ್ ಕೋಸ್ಟರ್‌ನ್ನು ಹೊಂದಿರುವ ಹೆಗ್ಗಳಿಕೆಯನ್ನು ಪಡೆದಿದೆ. 30 ರೆಸ್ಟೋರೆಂಟ್‌ಗಳು ಮತ್ತು ಫುಡ್ ಕೋರ್ಟ್‌ಗಳನ್ನು ಹೊಂದಿದ್ದು ಅಲ್ಲೇ ಎಡತಾಕಿದರೆ ಅವು ಸಿಗುತ್ತವೆ. ಆದರೆ ಹೆಚ್ಚಿನವುಗಳು ಮಾಂಸಾಹಾರಿಯಾದ್ದರಿಂದ ನಮಗೆ ಮಾತ್ರ ಏನೂ ತಿನ್ನಲಾಗಲಿಲ್ಲ. ಒಂದೆರಡು ಗಾರ್ಲಿಕ್ ಬ್ರೆಡ್ ಮತ್ತು ಜೂಸ್ ಕುಡಿದೆ. ಎಲ್ಲ ದುಬಾರಿಯೇ.
ಹಾಲಿವುಡ್ ಯೂನಿವರ್ಸಲ್ ಸ್ಟುಡಿಯೋ ಪ್ರವೇಶ ಮಾಡಿದ ತಕ್ಷಣ ನಿಮ್ಮನ್ನು ಎದುರುಗೊಳ್ಳುವುದು ಹಾಲಿವುಡ್ ತಾಣ. ಲಾಸ್ ಏಂಜಲೀಸ್‌ನ ವಾಕ್ ಅಪ್ ಫ್ರೇಮ್ ನ ತದ್ರೂಪ. ಹಾಲಿವುಡ್‌ನ ಪ್ರಸಿದ್ಧ ತಾರೆಯರ ಹೆಸರಿನ ನಕ್ಷತ್ರಗಳನ್ನು ಸುಂದರವಾಗಿ ನೆಲದ ಮೇಲೆ ರೂಪಿಸಲಾಗಿದೆ ಮತ್ತು ವಿವಿಧ ಚಲನಚಿತ್ರಗಳ ವೇಷಗಳನ್ನು ಧರಿಸಿದ ವೇಷಧಾರಿಗಳು, ಆ ವೇಷಾಧಾರಿಗಳ ಜೊತೆ ಎಲ್ಲರೂ ಫೋಟೋಗಳನ್ನು ತೆಗೆಸಿಕೊಳ್ಳುತ್ತಾರೆ. ಆ ಫೋಟೋಗಳನ್ನು ನಾವೇ ತೆಗೆಯಬಹುದು. ಅಲ್ಲಿ ಒಬ್ಬ ಫೋಟೋಗ್ರಾಫರ್ ಇರುತ್ತಾರೆ. ಇಷ್ಟವಿದ್ದರೆ ಅವರು ತೆಗೆದ ಫೋಟೋಗಳನ್ನು ಖರೀದಿಸಬಹುದು. ಹಸಿರಿನ ಮಂತ್ರನ್ನುಣಿಸುವ ಉದ್ದಕ್ಕೂ ಬೆಳೆದು ನಿಂತ ಪಾಮ್ ಮರಗಳು, 1500 ಆಸನಗಳಿಂದ ಸುಸಜ್ಜಿತ ಬ್ರಾಡ್ ವೇ ಥಿಯೇಟರ್, ಅಲ್ಲಿ ಒಂದಲ್ಲಾ ಒಂದು ಶೋಗಳು ನಡೆಯುತ್ತಲೇ ಇರುತ್ತವೆ. ಉದ್ದಕ್ಕೂ ಹಾಲಿವುಡ್‌ಗೆ ಸಂಬಂಧಿಸಿದ ಸ್ಟೋರ್‌ಗಳು, ಅಲ್ಲಿ ಆಟಿಕೆಗಳು, ಸೋವಿನೂರ್‌ಗಳು, ತಿಂಡಿ ತಿನಿಸುಗಳು, ಪುಸ್ತಕಗಳು, ಕ್ಯಾಮೆರಾಗೆ ಸಂಬಂಧಿತ ಪರಿಕರಗಳು, ಬ್ರಾಡ್ ವೇ ಥಿಯೇಟರ್‌ನ ಮುಂದೆ ಪ್ರಸಿದ್ಧ ಗಾಯಕರಿಂದ ನೃತ್ಯ ಮತ್ತು ಹಾಡುಗಾರಿಕೆ ನಡೆಯುತ್ತಲೇ ಇರುತ್ತದೆ. ವೀಕ್ಷಕರನ್ನೂ ಅವರೊಂದಿಗೆ ಸೇರಿಸಿಕೊಳ್ಳುತ್ತಾರೆ. ನನ್ನ ಮಗಳು ಅವರೊಂದಿಗೆ ಸೇರಿ ನರ್ತಿಸಿದಳು, ಅವಳ ದೆಸೆಯಿಂದ ನಮ್ಮ ಭಾರತದ ನಮಸ್ತೆ ಎಲ್ಲರಿಗೂ ದೊರೆಯಿತು.
ನ್ಯೂಯಾರ್ಕ್ ಅಲ್ಲಿಂದ ಮುಂದೆ ನಡೆದರೆ ನ್ಯೂಯಾರ್ಕ್‌ನ್ನು ಪ್ರತಿಬಿಂಬಿಸುವಂತೆಯೇ ರೂಪಿಸಲಾದ ಒಂದು ತಾಣ. ಆಧುನಿಕತೆಯ ನಂತರದ ನೂಯಾರ್ಕ್‌ನ್ನು ಸೃಷ್ಟಿಸಲಾಗಿದೆ. ಪ್ರವೇಶ ದ್ವಾರದಲ್ಲಿನ ಬೆಳ್ಳನೆಯ ಎರಡು ಸಿಂಹಗಳ ಶಿಲ್ಪಗಳು ನಿಮ್ಮನ್ನು ಅಲ್ಲಿನ ಗ್ರಂಥಾಲಯಕ್ಕೆ ಸ್ವಾಗತಿಸುತ್ತವೆ. ಚಲನಚಿತ್ರಗಳಲ್ಲಿ ನ್ಯೂಯಾರ್ಕ್‌ನ್ನು ತೋರಿಸುವಂತೆಯೇ ಮುಗಿಲು ಮುಟ್ಟುವ ಎತ್ತರದ ಕಟ್ಟಡಗಳು, ಜನರು ಸಾಗುವ ಪಾದಚಾರಿಗಳ ಪಥ, ಹೊಳೆಯುವ ನಿಯಾನ್ ದೀಪಗಳು, ಸುಂದರ ವಿನ್ಯಾಸದ ಕಟ್ಟಡಗಳು ಒಟ್ಟಿನಲ್ಲಿ ನಿಮಗೆ ನ್ಯೂಯಾರ್ಕಿನ ದರ್ಶನವನ್ನೀಯುತ್ತದೆ. ಹೊರ ನೋಟ ಹೀಗಿದ್ದರೆ ಪ್ರಚಂಡ ಬಿರುಗಾಳಿ ಬೀಸಿದರೆ ನ್ಯೂಯಾರ್ಕ್‌ನಗರ ತಲ್ಲಣಗೊಂಡು ಅಲ್ಲೋಲ ಕಲ್ಲೋಲವಾಗುವ ದೃಶ್ಯಾವಳಿಯನ್ನು ವಿಶೇಷ ಸದ್ದು ಸಪ್ಪಳಗಳೊಂದಿಗೆ ನೋಡುಗರನ್ನು ಒಂದು ಕ್ಷಣಕ್ಕೆ ದಿಗ್ಭ್ರಮೆಗೊಳ್ಳುವಂತೆ ಮಾಡುವ ಸ್ಟೀವೆನ್ ವೆಸ್ಟಿಲ್ ಬೆರ್ಗ್‌ನ ಲೈಟ್ಸ್ ಕ್ಯಾಮೆರಾ ಆ್ಯಕ್ಷನ್ ಶೋ ನಿಜಕ್ಕೂ ನೋಡುಗರನ್ನು ಆಕರ್ಷಿಸುತ್ತದೆ.
ಶೋ ನೋಡಿದ ನಂತರ ಸಿಸೇವ್ ರಸ್ತೆಯಲ್ಲಿ ಹಾಲಿವುಡ್‌ನ ವಿಶೇಷ ಪಾತ್ರಗಳನ್ನು ನೋಡುತ್ತಾ ಮುಂದೆ ಸಾಗಿ ಹಸಿವಿದ್ದರೆ ಅಲ್ಲಿಯೇ ಇರುವ ಪಿಜ್ಜಾ ಕಾರ್ನರ್‌ನಲ್ಲಿ ಹೊಟ್ಟೆ ತುಂಬಿಸಿ ಜೇಬು ಖಾಲಿ ಮಾಡಿಕೊಂಡು ಮುಂದೆ ಸಾಗಿದರೆ ನಿಮ್ಮನ್ನು ಅಂತರಿಕ್ಷದಲ್ಲಿ ಅತಿ ವೇಗವಾಗಿ ಸಾಗಿಸಿ, ಅಂತರಿಕ್ಷದ ದರ್ಶನವನ್ನು ಮಾಡಿಸುವ ಸ್ಪೇಸ್ ಚೇಸ್ ರೈಡ್ ಮಾಡಬಹುದು. ಎರಡು ನಿಮಿಷದಲ್ಲಿ ಅಂತರಿಕ್ಷಕ್ಕೆ ಕರೆದೊಯ್ದು ನಿಮ್ಮನ್ನು ಹಿಗ್ಗಾಮುಗ್ಗಾ ಮೇಲೆ ಕೆಳಗೆ ಉಲ್ಟಾ ಪಲ್ಟಾ ಸಾಗಿಸಿ ತಂದುಬಿಡುತ್ತದೆ. ಥ್ರಿಲ್ ಅಂದರೆ ಇದೇ ಏನೋ?
ಸ್ಕೈ ಫ್ಲೈ ಸಿಟಿ
ಅಲ್ಲಿಂದ ಮುಂದೆ ಸಾಗಿದರೆ ಸ್ಕೈ ಫ್ಲೈ ಸಿಟಿಯಲ್ಲಿ ಬೃಹತ್ ಗಾತ್ರದ ರೋಲರ್ ಕೋಸ್ಟರ್‌ಗಳು, ಬಿಸಿ ರಕ್ತದ ಯುವ ಜನಾಂಗಕ್ಕೆ ಹೇಳಿ ಮಾಡಿಸಿದ್ದು, ಅದು ಭಯವೆನಿಸಿದರೆ ಬೇಡ ಬಿಡಿ. ಚಕ್ರಾಕಾರದ ಟೀ ಕಪ್‌ಗಳ ಮೇಲೆ ಕುಳಿತು ಗುಂಡಗೆ ತಿರುಗುವ ಟೀ ಕಪ್ಸ್ ರೈಡ್ ಮಾಡಿ, 4 ಅಡಿಯ ಕತ್ತಲ ರೈಡ್ ಟ್ರಾನ್ಸ್ ಫಾರ್ಮರ್ ಮಾತ್ರ ಬಿಡುವಂತಿಲ್ಲ, ನಾನಂತೂ ಎರಡು ಬಾರಿ ಮಾಡಿದೆ. ಸಾಗುತ್ತಿರುವಾಗ ಆಯುಧಗಳು ನಿಮ್ಮನ್ನು ಮುಟ್ಟಿಯೇ ಬಿಟ್ಟಿತು ಎನಿಸುತ್ತದೆ, ನೀರಿನ ಪ್ರೋಕ್ಷಣೆಯಾಗುತ್ತದೆ. ಒಮ್ಮೆ ಬಿರುಗಾಳಿ ಬೀಸಿದರೆ ಮತ್ತೊಮ್ಮೆ ಬಿಸಿ ಗಾಳಿ ನಿಮ್ಮನ್ನು ಬೆಚ್ಚಗೆ ಮಾಡುತ್ತದೆ. ಅಷ್ಟರಲ್ಲಿ ಹಿಮ ಆವರಿಸುತ್ತದೆ. ಒಂದೇ ತಾಣದಲ್ಲಿ ಎಲ್ಲ ಬಗೆಯ ಅನುಭವ ಅದಕ್ಕೊಂದು ಕಥೆ, ನಿಜಕ್ಕೂ ಅವರ ಬುದ್ಧಿವಂತಿಕೆಯನ್ನು ಮೆಚ್ಚಲೇ ಬೇಕು. ಅಲ್ಲಿಯೂ ತಿನ್ನಲು ವೈಭವದ ಆಹಾರ ತಾಣಗಳು, ಆದರೆ ಸಸ್ಯಾಹಾರಿಗಳಿಗೆ ಆಯ್ಕೆ ಬಲು ಕಮ್ಮಿ.
ಈಜಿಪ್ಟ್
ಅಲ್ಲಿಂದ ಮುಂದೆ ಸಾಗಿದರೆ ಈಜಿಪ್ಟ್ ನ್ನು ಪ್ರತಿನಿಧಿಸುವ ಶಿಲ್ಪಗಳು, ದೊಡ್ಡ ಗಾತ್ರದ ಮಮ್ಮಿಗಳು, ಒಳ ಹೊಕ್ಕರೆ ಈಜಿಪ್ಟಿನೊಳಗೆ ಇದ್ದೇವೆಂದು ಭಾಸವಾಗುತ್ತದೆ. ಥ್ರಿಲ್ ಬೇಕೆನ್ನುವವರಿಗೆ ರಿವೇಂಜ್ ಆಫ್ ಮಮ್ಮಿ ರೈಡ್, ಮಮ್ಮಿ ಚಲನಚಿತ್ರದಲ್ಲಿ ಬಂದಂತೆ ಬರುವ ಪಾತ್ರಗಳು ಥಟ್ಟೆಂದು ಧಾವಿಸುವಾಗ ನೀವು ಕುಳಿತ ಸೀಟು ಉಲ್ಟಾ ಪಲ್ಟಾ ಆದಾಗ ಕತ್ತಲಲ್ಲಿ ಭಯವಾಗುತ್ತದೆ. ಅದೇನೆಂದು ನಿಮಗೆ ಅರ್ಥವಾಗಿ ನೀವು ಕೂಡ ಚೀರಾಡಿ ಕೂಗಾಡುತ್ತಿರುವಂತೆಯೇ ರೈಡ್ ಮುಗಿದೇ ಹೋಗಿರುತ್ತದೆ. ಅದು ವೇಗದ ರೋಲರ್ ಕೋಸ್ಟರ್ ಆದರೆ, ನಿಧಾನವಾಗಿ ಸಾಗುತ್ತಾ ನಿಮಗೆ ಈಜಿಪ್ಟ್ ಸಂಸ್ಕೃತಿಯನ್ನು ಪರಿಚಯಿಸುವ ಮತ್ತೊಂದು ಟ್ರೆಷರ್ ಹಂಟರ್ ಮಿನಿ ಕಾರ್ ರೈಡ್ ಸಹ ಇದೆ.
ಲಾಸ್ಟ್ ವರ್ಲ್ಡ್ ಮುಂದೆ ಸಾಗಿದರೆ ಕಳೆದುಹೋದ ಪ್ರಪಂಚವನ್ನು ಮುಟ್ಟುತ್ತೀರಾ? ಅಲ್ಲೂ ಬೃಹತ್ ಗಾತ್ರದ ರೋಲರ್ ಕೋಸ್ಟರ್, ವಾಟರ್ ವರ್ಲ್ಡ್ ಚಲನಚಿತ್ರವನ್ನು ನೆನಪಿಸುವ ಜೀವಂತ ವಾಟರ್ ವರ್ಲ್ಡ್ ಶೋ, ಜುರಾಸಿಕ್ ಪ್ರಪಂಚದ ಒಳಹೊಕ್ಕು ಅಲ್ಲಿನ ಪರಿಚಯ ಮಾಡಿಕೊಡುವ ವಾಟರ್ ರೈಡ್ ಬೋಟಿನಲ್ಲಿ ಸಾಗುವಾಗ ನೀರಿನ ಪ್ರೋಕ್ಷಣೆ ನಿಮಗೆ ಆಗೇ ಆಗುತ್ತದೆ.
ಫಾರ್ ಫಾರ್ ಅವೇ!
ಅಲ್ಲಿಂದ ಮುಂದೆ ದೂರ ದೂರ ಸಾಗಿದಂತೆ ಕನಸಿನ ಪ್ರಪಂಚವೊಂದು ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಅದ್ಭುತವಾದ ಸುಂದರ ಅರಮನೆಯ ದರ್ಶನವಾಗುತ್ತದೆ. ಅದನ್ನು ನೋಡಲೆರಡು ಕಣ್ಣು ಸಾಲದು. ನೀವು ಕೇಳಿರುವ, ಚಲನಚಿತ್ರಗಳಲ್ಲಿ ನೋಡಿರುವ ಫೇರಿ ಟೇಲ್ ಕಥೆಗಳ ಪಾತ್ರಗಳು ನಿಜವಾಗಿ ನೋಡಲು ಸಿಗುತ್ತಾರೆ. ಶ್ರೆಕ್, ಅವನ ಗೆಳೆಯ ಡಾಂಕಿ, ರಾಜಕುಮಾರಿ ಅವರ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಬಹುದು. ನೀವು ಬೆಂಗಳೂರಿನಲ್ಲಿ ನೋಡಿದ ಶ್ರೆಕ್ 3ಡಿ ಚಲನಚಿತ್ರವನ್ನು ಇಲ್ಲಿ 4ಡಿ ಎಫೆಕ್ಟ್ ಗಳೊಂದಿಗೆ ನೋಡಬಹುದು. ಡಾಂಕಿಯ ಹವ್ಯಾಸ ಶೋ ಮತ್ತು ಮಕ್ಕಳಿಗಾಗಿ ಪುಟ್ಟ ಕಿಡ್ಸ್ ಫೇರಿ ವೀಲ್, ತಿನ್ನಲು ಕೊಳ್ಳಲು ಎಲ್ಲ ಇಲ್ಲಿ ಲಭ್ಯ.
ಮಡಗಾಸ್ಕರ್
ಇಲ್ಲಿನ ವಾಟರ್ ರೈಡ್ ಬಹು ಚಂದ. ನೀರಿನೊಳಗೆ ಬೋಟ್‌ನಲ್ಲಿ ಕುಳಿತು ಸಾಗುವಾಗ ವಿಚಿತ್ರ ಅರಣ್ಯ ದೃಶ್ಯಗಳು ಮತ್ತು ಒಮ್ಮೆಲೇ ಕಿವಿಗೆ ಅಪ್ಪಳಿಸುವ ಸದ್ದುಗಳು ಕುತೂಹಲವನ್ನು ಕೆರಳಿಸುತ್ತವೆ. ಝೂನಿಂದ ತಪ್ಪಿಸಿಕೊಂಡು ಬಂದ ಪ್ರಾಣಿಗಳು ಮಡಗಾಸ್ಕರ್ ದ್ವೀಪವನ್ನು ತಲುಪುತ್ತವೆ. ಆ ಕಥೆಯನ್ನು ಆಧಾರವನ್ನಾಗಿಟ್ಟುಕೊಂಡು ರೂಪಿಸಿದ ರೈಡ್ ಇದು.
ಹೀಗೆ ಪ್ರತಿಯೊಂದು ವಿಭಾಗದಲ್ಲೂ ನೋಡಲು ಒಂದು ಕುತೂಹಲಕರ ಶೋ. ಒಂದು ರೋಲರ್ ಕೋಸ್ಟರ್ ರೈಡ್ ಮತ್ತು ಸಂಬಂಧಪಟ್ಟ ನೆನಪಿನ ಕಾಣಿಕೆಗಳನ್ನು (ಸೋವಿನೂರ್) ಇಟ್ಟ ಮಳಿಗೆಗಳು, ತಿನ್ನಲು ಫುಡ್ ಔಟ್‌ಲೆಟ್‌ಗಳು, ಜೊತೆಗೆ ದೇಹ ಬಾಧೆಗೆ ರೆಸ್ಟ್ ರೂಮ್ ಗಳು. ಈ ವಿಷಯಕ್ಕೇ ವಿದೇಶ ಪ್ರಯಾಣ ಅಷ್ಟೊಂದು ಆಕರ್ಷಣೆ ಹೊಂದಿರುವುದು.
ವಾರದ ಕೊನೆಯ ದಿನಗಳು ಅಂದರೆ ಶನಿವಾರ ಮತ್ತು ಭಾನುವಾರ ಹಾಗೂ ರಜಾ ದಿನಗಳಲ್ಲಿ ಸಂಜೆ ಐದು ಗಂಟೆಗೆ ಸರಿಯಾಗಿ ಹಾಲಿವುಡ್ ಕನಸಿನ ಮೆರವಣಿಗೆ ನಡೆಯುತ್ತದೆ. ಉದ್ದಕ್ಕೂ ಎಲ್ಲರೂ ನಿಂತು ನೋಡುತ್ತಾರೆ. ಕಿವಿಗಿಂಪು ನೀಡುವ ವಾದ್ಯ ಸಂಗೀತದೊಂದಿಗೆ ಕಿನ್ನರ ಕಿನ್ನರಿಯರು ನರ್ತಿಸುತ್ತಾ ಸಾಗುವ ಆ ಮೆರವಣಿಗೆ ಮನ ಸೆಳೆಯುತ್ತದೆ. ಹಾಲಿವುಡ್‌ನ ಎಲ್ಲ ಪಾತ್ರಗಳು ಎಲ್ಲಾ ವಿಭಾಗದ ಶೋಗಳ ಪಾತ್ರಗಳೂ ನರ್ತಿಸುತ್ತಾ ಸಾಗುತ್ತವೆ. ಅಷ್ಟು ಹೊತ್ತು ಎಲ್ಲರೂ ಮಂತ್ರಮುಗ್ಧರಂತೆ ನೋಡುವುದು, ಫೋಟೋ ತೆಗೆದುಕೊಳ್ಳುವುದು ನಡೆಯುತ್ತಿರುತ್ತದೆ. ಅಲ್ಲಿಂದ ಹೊರ ಹೋಗಲು ಸಹ ಎಷ್ಟು ಹೊತ್ತಾದರೂ ಟ್ಯಾಕ್ಸಿ ಲಭ್ಯ. ಅಂತೂ ಎಲ್ಲವನ್ನೂ ನೋಡಿ ಸಂತೃಪ್ತರಾಗುವುದರ ಜೊತೆಗೆ ಕಾಲುಗಳೂ ಸಹ ಮಾತನಾಡುತ್ತಿದ್ದವು. ಮಕ್ಕಳ ಬಲವಂತಕ್ಕೆ ಅಲ್ಲೊಂದು ಹರ್ಶೀಸ್ ಚಾಕಲೇಟಿನ ಪ್ಯಾಕೆಟ್ ತೆಗೆದುಕೊಂಡೆ. ಆದರೆ ಹೊರಗೆ ವಿಚಾರಿಸಿದಾಗ ಅದರ ಅರ್ಧ ಬೆಲೆಗೆ ಸಿಗುತ್ತಿತ್ತು. ಅದು ಯೂನಿವರ್ಸಲ್! ಅಲ್ಲಿನ ಬೆಲೆ ಅಲ್ಲಿನ ರೋಚಕ ಅನುಭವಗಳೊಂದಿಗೆ ಇದೂ ಒಂದು ಅನುಭವ ಎಂದುಕೊಳ್ಳುತ್ತಾ ವಿದಾಯ ಹೇಳಿದೆ.
– ಮಂಜುಳಾ ರಾಜ್