ಇತ್ತೀಚಿನ ವರ್ಷಗಳಲ್ಲಿ ಎಲ್ಲೆಲ್ಲೂ ಪುರುಷ ಬಾಬಾಗಳು, ಸಂತರದ್ದೇ ಚರ್ಚೆ. ಒಂದೆಡೆ ಆಸಾರಾಮ್ ಬಾಪು ಚರ್ಚೆಯಲ್ಲಿದ್ದರೆ, ಮತ್ತೊಂದೆಡೆ ಹರಿಯಾಣಾದ ಬಾಬಾ ರಾಮ್ ಪಾಲ್ ಸುದ್ದಿಯಲ್ಲಿರುತ್ತಾರೆ. ಬಾಬಾ ರಾಮದೇವ್ ಅವರಂತೂ ಯೋಗ ಹಾಗೂ ಔಷಧಿಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ರಾಮ್ ರಹೀಮ್ ಸಿನಿಮಾಗಳಿಂದ ಚರ್ಚೆಯಲ್ಲಿರುತ್ತಾರೆ. ಅವರ `ಮೆಸೇಜ್ ಆಫ್ ಗಾಡ್' ಸಿನಿಮಾ ನೋಡಿ ಜನರ ಚಿಂತೆ ಇನ್ನಷ್ಟು ಹೆಚ್ಚಾಯಿತು. ಒಬ್ಬ ಮಹಿಳೆಯಾಗಿ ನನಗೆ ಅನಿಸಿದ್ದೇನೆಂದರೆ, ಈಗ ರಾಖಿ ಸಾವಂತಳೂ ಸುದ್ದಿಯಲ್ಲಿಲ್ಲ, ಏಕೆಂದರೆ ಪುರುಷರಿಗೆ ಸವಾಲು ಹಾಕುವ ತಾಕತ್ತು ಬೇರೆ ಯಾರಲ್ಲೂ ಇಲ್ಲ. ಹಾಗಾದರೆ ಮಹಿಳೆಯ ಗೌರವ ರಕ್ಷಿಸುವ ಮಹಿಳಾ ಸಂತರು ಯಾರೂ ಇಲ್ಲವೇ? ತನ್ನ ಗತ್ತು ಗೈರತ್ತಿನಿಂದ ಎಲ್ಲರನ್ನೂ, ತನ್ನ ಮೋಹಕ ವ್ಯಕ್ತಿತ್ವದಿಂದ ಬೆರಗುಗೊಳಿಸುವ ಮಹಿಳಾ ಸಂತಳಿಗಾಗಿ ಹುಡುಕಾಟದಲ್ಲಿದ್ದೆ.
ದೇವರು ನನ್ನ ಮೊರೆಯನ್ನು ಕೇಳಿಸಿಕೊಂಡನು. ನಮ್ಮ ಕೆಂಪು ವರ್ಣದ ಏಂಜೆಲ್ ರಾಧೇಮಾಳ ಆಗಮನದಿಂದಾಗಿ ನನಗೆ ನೆಮ್ಮದಿ ಎನಿಸಿತು. ಬಾಬಾಜಿಗೆ ರಂಗೀಲಾ ಹಾಗೂ ಪಾಪ್ ಸ್ಟಾರ್ ಲುಕ್ ಇದ್ದರೆ, ನಮ್ಮ ರಾಧೇಮಾ ಮಿನಿ ಸ್ಕರ್ಟ್ ಹಾಗೂ ಮಾಡ್ ಗೆಟಪ್‌ನಲ್ಲಿ ಜವಾಬು ಕೊಡುತ್ತಿದ್ದಳು. ಸಂತರ ಮನಸ್ಸು ಬೇರೆ ಬೇರೆ ಬಣ್ಣಗಳಲ್ಲಿ ಸುತ್ತುತ್ತದೆ ಎಂದಾದರೆ, ನಮ್ಮ ರಾಧೇಮಾ ಕೇವಲ ಒಂದೇ ಬಣ್ಣ ಕೆಂಪು ಬಟ್ಟೆ ಹಾಗೂ ಕೆಂಪು ಲಿಪ್‌ಸ್ಟಿಕ್. ದೇವರ ಪ್ರೀತಿಗೆ ಆಕೆ ಕೆಂಪು ಕೆಂಪಾಗಿ ಹೋದಳು.
ನನಗೊಂದು ಭಯ ಕಾಡುತ್ತಿತ್ತು, ಎವರೆಡಿ ಬ್ಯಾಟರಿಯ `ಗಿವ್ ಮೀ ರೆಡ್' ಜಾಹೀರಾತನ್ನು ಅಕ್ಷಯ್ ಕುಮಾರ್‌ನ ಕೈಯಿಂದ ಕಸಿದುಕೊಂಡು ನಮ್ಮ ರಾಧೇಮಾಳಿಗೆ ಕೊಟ್ಟುಬಿಡುತ್ತಾರೇನೊ ಎಂದು!
ರಾಖಿ ಸಾವಂತ್ ಜನರಿಗೆ ತನ್ನ ಅಚ್ಚರಿದಾಯಕ ವ್ಯಕ್ತಿತ್ವದ ಪರಿಚಯ ಮಾಡಿಕೊಟ್ಟಳು. ಆ ಬಳಿಕ ಕಮಾಲ್ ಖಾನ್ ಕೂಡ ಸಾಕಷ್ಟು ಬೆವರು ಹರಿಸಿದ್ದ. ಆದರೆ ಅಲ್ಲಿ ಗೆದ್ದದ್ದು ರಾಮ್ ರಹೀಮ್ ಹಾಗೂ ರಾಧೇಮಾ. ದೇವರ ಹೆಸರು ಜಪಿಸುತ್ತ ಜಪಿಸುತ್ತ ಇರುವ ಸೂಪರ್ ಸ್ಟಾರ್ ಆಗಿಬಿಟ್ಟರು.
ಕಳೆದ 10 ವರ್ಷಗಳಲ್ಲಿ ನಮ್ಮ ಜೀವನ ಬದಲಾಗಿಬಿಟ್ಟಿದೆ. ನಮ್ಮ ಧರ್ಮ ಪ್ರೀತಿ, ವ್ಯವಹಾರ, ಬುದ್ಧಿಮತ್ತೆ ಎಲ್ಲವುಗಳ ಟ್ರೆಂಡ್‌ಬದಲಾಗಿ ಹೋಗಿದೆ. ಎಲ್ಲದರಿಂದಲೂ ಉಪಯೋಗ ಹಾಗೂ ವೇಗ ಬಯಸುತ್ತೇವೆ. ಎಲ್ಲದರಲ್ಲೂ ನಾವು ಸಮೀಪದ ದಾರಿ ಹುಡುಕುತ್ತೇವೆ. ನಾವು ಬಹುಬೇಗ ನಮ್ಮ ಗುರಿ ತಲುಪಲು ಯೋಚಿಸುತ್ತೇವೆ.
ನಮ್ಮ ರಾಧೇಮಾ ಧರ್ಮದ ಅರ್ಥವನ್ನೇ ಬದಲಿಸಿಬಿಟ್ಟರು. ಅವರು ಅದಕ್ಕೊಂದು ತಾಜಾತನ ತಂದುಕೊಟ್ಟರು. ಯಾವ ಗುರು ತಾನೇ ಬಾಲಿವುಡ್‌ನ ಹಿಟ್ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಾರೆ? ಸ್ವಲ್ಪ ಯೋಚಿಸಿ, ನಮಗೆ ನಮ್ಮಿಷ್ಟದ ಹಾಡುಗಳಿಗೆ ನರ್ತಿಸುವುದರಿಂದ ಸತ್ಯ, ಶಾಂತಿ ಮತ್ತು ದೇವರು ವರ ಕೊಡುತ್ತಾನೆಂದರೆ, ನಾವು ರಾಧೇಮಾರಿಂದ ಇನ್ನು ಬಹಳಷ್ಟು ಅಪೇಕ್ಷಿಸಬಹುದು. ರಾಧೇಮಾ ಸದಾ ನಿಮ್ಮ ಜೊತೆಗೇ ಇದ್ದಾರೆ ಎಂಬಂತೆ ಭಾವಿಸಿಕೊಳ್ಳಬಹುದು. ಎಂತಹ ಒಂದು ವಾತಾವರಣದಲ್ಲಿ ಪೂಜೆ ನಡೆಯುತ್ತದೆ ಎಂಬುದನ್ನು ಕಲ್ಪಿಸಿಕೊಳ್ಳಿ. ಎಲ್ಲೆಡೆ ಹೂಗಳ ಅಲಂಕಾರ. ಸಿನಿಮಾ ಸ್ಟೈಲ್‌ನಲ್ಲಿ ರಾಧೇಮಾ ಭಕ್ತರ ನಡುವೆ ಪ್ರತ್ಯಕ್ಷವಾಗುವುದು, ಗುಲಾಬಿ ಹಾಗೂ ಚೆಂಡು ಹೂಗಳಿಂದ ಅವರ ಸ್ವಾಗತ. ಅವರ ಮುಖ ಕೆಂಪು ತಿಲಕ ಹಾಗೂ ಲಿಪ್‌ಸ್ಟಿಕ್‌ನಿಂದ ಹೊಳೆಯುತ್ತಿತ್ತು. ಬಾಲಿವುಡ್ ಸಂಗೀತ, ಒಮ್ಮೆ ಈ ಮಾತೆ ಯಾರದೋ ಮಡಿಲಲ್ಲಿ ಆಸೀನರಾದರೆ, ಇನ್ನೊಮ್ಮೆ ಯಾರಿಗೋ ಆಶೀರ್ವಾದ ನೀಡುವಲ್ಲಿ ಮಗ್ನರಾಗಿರುತ್ತಿದ್ದರು. ಇಷ್ಟೆಲ್ಲ ಆದರೂ ಅವರ ಕೂದಲು ಮಾತ್ರ ಸ್ವಲ್ಪ ಅತ್ತಿತ್ತ ಕೂಡ ಆಗಿರಲಿಲ್ಲ. `ನನ್ನ ಕೂದಲನ್ನು ಕೊಂಕಿಸಲು ಯಾರಿಂದಲೂ ಸಾಧ್ಯವಿಲ್ಲ!' ಎಂಬ ಗಾದೆ ಇದನ್ನು ನಿಜ ಎಂದು ಒತ್ತಿ ಒತ್ತಿ ಹೇಳುತ್ತಿತ್ತು. ಧರೆಗಿಳಿದ ಸ್ವರ್ಗ ಎಂದರೆ ಇದೇ ಅಲ್ಲವೇ? ಇದನ್ನು ದೊರಕಿಸಿಕೊಟ್ಟ ಮಾತೆಗೆ ಕೋಟಿ ಕೋಟಿ ವಂದನೆ ಹೇಳಿದರೂ ಸಾಲದು. ಈ ಮೂಲಕ ಅವರು ಭೂಮಿಯ ಮೇಲೆ ಸ್ವರ್ಗದ ದರ್ಶನ ಮಾಡಿಸಿದರು.