ಇಂದಿನ ದಿನಗಳಲ್ಲಿ ಸಂಗೀತ ಕ್ಷೇತ್ರ ಸಹ ಇತರೆ ಎಲ್ಲಾ ಕ್ಷೇತ್ರಗಳಂತೆಯೇ ವೇಗವಾಗಿ ಬೆಳೆಯುತ್ತಿದೆ. ಉದಯೋನ್ಮುಖ ಗಾಯಕರು, ವಾದ್ಯಗಾರರೂ ನಮ್ಮ ನಡುವೆ ಪ್ರಕಟವಾಗುತ್ತಿದ್ದಾರೆ. ಹೊಸ ಪ್ರಯೋಗಗಳೊಂದಿಗೆ ಹಳೆಯ ಸಾಂಪ್ರದಾಯಿಕತೆಯೂ ಸೇರಿಕೊಂಡಿರುವ ಅವರ ಹಾಡುಗಾರಿಕೆ ಹಾಗೂ ಪಕ್ಕವಾದ್ಯ ಸಂಗೀತಗಳು ಸಹೃದಯ ಮನಸ್ಸುಗಳಿಗೆ ಆನಂದದ ರಸಾನುಭೂತಿಯನ್ನು ಉಂಟು ಮಾಡುತ್ತದೆ. ಇಂತಹ ಹಲವಾರು ಸಂಗೀತ ಕಲಾವಿದರ ಪೈಕಿ ವಿ. ನಳಿನಾ ಮೋಹನ್‌ಅವರೂ ಒಬ್ಬರು. ಪದ್ಮಭೂಷಣ ಡಾ. ಆರ್‌.ಕೆ. ಶ್ರೀಕಂಠನ್‌ ಅವರ ಶಿಷ್ಯೆಯಾಗಿದ್ದು ದೇಶ ವಿದೇಶಗಳಲ್ಲಿ ತಮ್ಮ ಪಿಟೀಲು ವಾದನದ ಮೂಲಕ ಮನೆ ಮಾತಾಗಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನದ `ಎ’ ದರ್ಜೆಯ ಸಂಗೀತಾಗಾರರೂ ಆದ ನಳಿನಾ ಮೋಹನ್‌ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನಲ್ಲಿ ಇಪ್ಪತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತರಾದರೆಂದರೆ ಅಚ್ಚರಿ ಆಗದೆ ಇರದು.

ಅಮೆರಿಕಾ, ಕೆನಡಾ ಫ್ರಾನ್ಸ್, ಶ್ರೀಲಂಕಾ ದೇಶಗಳಲ್ಲಿ ಅನೇಕ ಬಾರಿ ಪ್ರವಾಸ ನಡೆಸಿ ಸಾಕಷ್ಟು ಸಂಖ್ಯೆಯಲ್ಲಿ ಕಚೇರಿ ನಡೆಸಿರುವ ನಳಿನಾ ಅವರು ಪಿಟೀಲು ವಾದನದಲ್ಲಿ ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಭಾವಪೂರ್ಣವಾದ, ಉತ್ಕೃಷ್ಟವಾದ ಇವರ ಪಿಟೀಲು ವಾದನ ಸಂಗೀತ ಪ್ರೇಮಿಗಳ, ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಗಿದೆ. ಪಿಟೀಲು ತನಿ ಕಚೇರಿ ನೀಡುವುದರಲ್ಲಿಯೂ ಪ್ರೌಢಿಮೆಯನ್ನು ಸಾಧಿಸಿರುವ ಇವರು, ಇಂದು ರಾಷ್ಟ್ರದ ಅತ್ಯಂತ ಬೇಡಿಕೆಯ ಪಕ್ಕವಾದ್ಯಗಾರ್ತಿಯಾಗಿದ್ದಾರೆ. ಇಂತಹ ಪ್ರತಿಭಾವಂತ ಸಂಗೀತ ಕಲಾವಿದೆಯೊಂದಿಗೆ `ಗೃಹಶೋಭಾ’ ನಡೆಸಿದ ವಿಶೇಷ ಸಂದರ್ಶನದ ಪೂರ್ಣ ವಿವರನ್ನು ಕೆಳಗೆ ನೀಡಲಾಗಿದೆ.

ನಿಮಗೆ ಪಿಟೀಲು ಕಲಿಯಲು ಆಸಕ್ತಿ ಹೇಗೆ ಹುಟ್ಟಿತು? ಬಾಲ್ಯದ ದಿನಗಳಲ್ಲಿಯೇ ಕುರಿತು ಆಲೋಚಿಸಿದ್ದಿರಾ? ನಾನು ಆಗ ಚೆನ್ನಪಟ್ಟಣದಲ್ಲಿದ್ದೆ. ನಮ್ಮದು ಸಂಪ್ರದಾಯಸ್ಥ ಮನೆತನ. ನನ್ನ ತಾಯಿ ರಾಜಲಕ್ಷ್ಮಿ ಪುರಾಣಿಕ್‌ ಅವರೂ ಕೂಡ ಹಾರ್ಮೋನಿಯಂ ನುಡಿಸುತ್ತಿದ್ದರು. ಖ್ಯಾತ ಸಂಗೀತಗಾರರಾಗಿದ್ದ ಬಿಡಾರಂ ಕೃಷ್ಣಪ್ಪನವರ ಶಿಷ್ಯರಾದ ಕೊಳ್ಳೇಗಾಲದ ಎಂ.ಡಿ. ನಾರಾಯಣಸ್ವಾಮಿಯವರಿಂದ ಹಾರ್ಮೋನಿಯಂ ಹಾಗೂ ಸಂಗೀತವನ್ನು ಅಭ್ಯಾಸ ಮಾಡಿದ್ದರು. ಇನ್ನು ನನ್ನ ತಂದೆ ಸಹ ಸಾಮೀದ ಪಾರಂಗತರಾಗಿದ್ದ ವೆಂಕಟರಾಮ ಪುರಾಣಿಕ್‌. ಹೀಗಾಗಿ ಮನೆಯಲ್ಲಿ ಸಂಗೀತಮಯ ವಾತಾವರಣವೇ ಇತ್ತು. ಆಗ ನನ್ನ ಅಕ್ಕ ಭಾಗ್ಯಲಕ್ಷ್ಮಿ ಸಹ ಸಂಗೀತದ ಅಭ್ಯಾಸ ನಡೆಸುತ್ತಿದ್ದರು. ಅವರ ಸಂಗೀತಾಭ್ಯಾಸವನ್ನು ನೋಡಿ ನನಗೂ ಸಂಗೀತ ಕಲಿಯಬೇಕೆನ್ನುವ ಆಸಕ್ತಿ ಮೂಡಿತ್ತು. ನಾನೂ ಸಂಗೀತದ ಅಭ್ಯಾಸದಲ್ಲಿ ತೊಡಗಿದೆ. ನಂತರದ ದಿನಗಳಲ್ಲಿ ನಮ್ಮ ಕುಟುಂಬ ಬೆಂಗಳೂರಿನಲ್ಲಿ ಬಂದು ನೆಲೆಸಿತು. ಪ್ರಾರಂಭದಲ್ಲಿ ನನಗೆ ವೀಣೆ ಕಲಿಯಲು ಆಸಕ್ತಿ ಇತ್ತಾದರೂ ನಮ್ಮ ಮನೆಯಲ್ಲಿ ಅದಕ್ಕೆ ತಕ್ಕ ಪ್ರೋತ್ಸಾಹ ದೊರೆಯಲಿಲ್ಲ. ಸಂಗೀತ ಹಾಡುಗಾರಿಕೆ ಅಭ್ಯಾಸವನ್ನೇ ಮುಂದುವರಿಸುವಂತೆ ತಾಯಿಯವರು ಸೂಚಿಸಿದರು.

ಆನಂತರದಲ್ಲಿ ನನ್ನ ಅಕ್ಕ ಖ್ಯಾತ ಗಮಕ ವಿದ್ವಾನ್‌ ಆದ ಕಡಬ ಸುಬ್ರಹ್ಮಣ್ಯ ಅವರನ್ನು ವಿವಾಹವಾದರು. ನನಗೆ ನನ್ನ ಅಕ್ಕ ಭಾವನವರಿಂದ ಒಳ್ಳೆಯ ಪ್ರೋತ್ಸಾಹ ಸಿಕ್ಕಿತು. ಮನೆಯಲ್ಲಿ ಎಲ್ಲರೂ ಸಂಗೀತವನ್ನೇ ಕಲಿತವರಾದ ಕಾರಣ ಭಾವನವರು ನನಗೆ ಪಿಟೀಲು ಕಲಿಯುವಂತೆ ಸೂಚಿಸಿದರು. ಅವರೇ ನನ್ನನ್ನು ಆರ್‌.ಆರ್‌. ಕೇಶವಮೂರ್ತಿಗಳ ಬಳಿ ಪಿಟೀಲು ಅಭ್ಯಾಸಕ್ಕೆಂದು ಸೇರಿಸಿದರು. ಹೀಗೆ ನನ್ನ ಹದಿನೈದನೇ ವಯಸ್ಸಿನಲ್ಲಿ ಪಿಟೀಲು ವಾದನದ ಅಭ್ಯಾಸ ಪ್ರಾರಂಭವಾಯಿತು. ಸುಮಾರು 8-9 ವರ್ಷಗಳ ಕಾಲ ಆರ್‌.ಆರ್‌. ಕೇಶವಮೂರ್ತಿಯವರ ಬಳಿ ವಿದ್ಯಾಭ್ಯಾಸ ನಡೆಸಿದೆ. ಮುಂದೆ ಗಾನಕಲಾ ಭೂಷಣ ಆನೂರು ಎಸ್‌. ರಾಮಕೃಷ್ಣರವರಲ್ಲಿ ಹೆಚ್ಚಿನ ಶಿಕ್ಷಣ ಪಡೆದೆ.

ಇದರ ನಡುವೆ ವಿಜ್ಞಾನದಲ್ಲಿ ಪದವಿ ಮುಗಿಸಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿ ಚಿನ್ನದ ಪದಕ ಗಳಿಸಿದೆ. ಇದಾದ ಕೆಲವೇ ದಿನಗಳಲ್ಲಿ ನನಗೆ ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರ್‌ನಲ್ಲಿ ಉದ್ಯೋಗ ದೊರೆಯಿತು.

ನೀವು ಬಹುಸಂಖ್ಯೆಯಲ್ಲಿ ಹಿರಿಯ ಕಲಾವಿದರೊಂದಿಗೆ ವೇದಿಕೆ ಹಂಚಿಕೊಂಡಿದ್ದೀರಿ. ಅನುಭವ ಹೇಗಿತ್ತು?

ನಾನು ಕಲಿಯುವಾಗ ಈಗಿರುವಂತೆ ಯುವ ಗಾಯಕರಿಗೆ ಸಾಕಷ್ಟು ಅವಕಾಶಗಳು ಇರಲಿಲ್ಲ. ಗಾಯನ ಸಮಾಜ ಹಾಗೂ ಗಾನ ಕಲಾ ಪರಿಷತ್ತು ಮಾತ್ರವೇ ಆಗ ಯುವ ಗಾಯಕರಿಗೆ ಕೆಲವು ಬಾರಿ ಅವಕಾಶ ನೀಡುತ್ತಿದ್ದವು. ಹಾಗಾಗಿ ಯಾರೇ ಹಿರಿಯ ಸಂಗೀತಗಾರರು ತಮ್ಮ ಹಾಡುಗಾರಿಕೆಗಾಗಿ ಪಕ್ಕವಾದ್ಯಕ್ಕೆ ನನ್ನನ್ನು ಆಹ್ವಾನಿಸಿದರೆ ಬಹಳ ಸಂಭ್ರಮವಾಗುತ್ತಿತ್ತು ಮತ್ತು ಅವರ ಹಾಡುಗಳಿಗೆ ಪಕ್ಕವಾದ್ಯ ನುಡಿಸುವುದು ಒಂದು ವಿಶೇಷ ಅನುಭವಾಗಿರುತ್ತಿತ್ತು. ನನಗೆ ಈ ನಿಟ್ಟಿನಲ್ಲಿ ಎಂ.ಎಸ್‌. ಶೀಲಾ ಬಹಳ ಪ್ರೋತ್ಸಾಹ ನೀಡಿದ್ದರು. ಅವರು ತಮ್ಮ ಹಲವಾರು ಕಚೇರಿಗಳಿಗೆ ನನ್ನನ್ನು ಪಕ್ಕವಾದ್ಯಗಾರ್ತಿಯಾಗಿ ಸೇರಿಸಿಕೊಂಡರು. ಇದು ನನಗೆ ಅತ್ಯಂತ ವಿಶಿಷ್ಟ ಅನುಭವ ಎನ್ನಬಹುದು. ಮುಂದೆ ಸಂಗೀತ ಕಲಾನಿಧಿ ಆರ್‌.ಕೆ. ಶ್ರೀಕಂಠನ್‌, ಪ್ರೊ. ಟಿ.ಆರ್‌. ಸುಬ್ರಹ್ಮಣಿಯನ್‌, ಸಂಗೀತಾ ಕಲಾನಿಧಿ ಟಿ.ಕೆ. ಗೋವಿಂದರಾವ್‌, ಡಾ. ಎಸ್‌. ರಾಜನ್‌, ಡಾ. ಎಸ್‌. ರಮಣಿ, ಟಿ.ವಿ. ಗೋಪಾಲಕೃಷ್ಣನ್‌, ವಿದುಷಿ ಮಣಿ ಕೃಷ್ಣಸ್ವಾಮಿ, ಸುಗುಣಾ ಪುರುಷೋತ್ತಮನ್‌, ಸೀತಾಲಕ್ಷ್ಮಿ ವೆಂಕಟೇಶನ್‌, ಸಂಗೀತ ಕಲಾರತ್ನ  ನೀಲಾ ರಾಮ್ ಗೋಪಾಲ್‌, ಡಾ.ಕೆ. ವಾಗೀಶ್‌, ಗಾನ ಕಲಾಭೂಷಣ ಆರ್‌.ಕೆ. ಪದ್ಮನಾಭ, ರಾಧಾ ವೆಂಕಟಾಚಲಂ, ಅರುಣಾ ಸಾಯಿರಾಂ ಮುಂತಾದ ಇನ್ನೂ ಹಲವಾರು ಮೇರು ಸಂಗೀತಗಾರರೊಡನೆ ವೇದಿಕೆ ಹಂಚಿಕೊಳ್ಳುವ ಅವಕಾಶ ಒದಗಿತು. ಇದರಿಂದಾಗಿ ನಾನೂ ಉತ್ತಮ ಪಕ್ಕವಾದ್ಯಗಾರ್ತಿಯಾಗಿ ಬೆಳೆಯಲು ಸಾಧ್ಯಾಯಿತು.

ಇಂದಿನ ಕರ್ನಾಟಕ ಸಂಗೀತ, ಒಟ್ಟು ಸಂಗೀತ ಕ್ಷೇತ್ರದ ಸ್ಥಿತಿಗತಿಯ ಕುರಿತಂತೆ ತಿಳಿಸಿ?

ಸಂಗೀತವೆನ್ನುವುದು ಒಂದು ಮಹಾ ಸಾಗರವಿದ್ದಂತೆ. ಸಂಗೀತ ಕಲಿಯುವುದಕ್ಕೆ ಕೊನೆ ಇಲ್ಲ. ಬೇರೆ ವಿದ್ಯಾಭ್ಯಾಸದ ರೀತಿಯಲ್ಲಿ ಪದವಿ ಪ್ರಮಾಣಪತ್ರ ದೊರಕಿದೊಡನೆ ಕಲಿಕೆ ಪೂರ್ಣಗೊಂಡಿತೆಂದು ಅಲ್ಲ. ಇಲ್ಲಿ ಕಲಿಕೆ ನಿರಂತರಾಗಿರುತ್ತದೆ. ಹಾಗೆಯೇ ಕೇವಲ ಗುರುಗಳ ಬಳಿ ಅಭ್ಯಾಸ ಮಾಡುವುದಷ್ಟೇ ಸಂಗೀತವಾಗಿರುವುದಿಲ್ಲ. ನಾವು ಬೇರೆಯವರ ಸಂಗೀತ ಕಚೇರಿಗಳಿಗೆ ತೆರಳಿ ಅವರ ಸಂಗೀತವನ್ನು ಆಲಿಸಬೇಕು ಮತ್ತು ದಿನಕ್ಕೆ ನಾಲ್ಕರಿಂದ ಐದು ಗಂಟೆಗಳ ಕಾಲ ಅಭ್ಯಾಸ ನಡೆಸಬೇಕು. ಹೀಗಾದಾಗಲೇ ನಾವು ಒಳ್ಳೆಯ ಕಲಾವಿದರಾಗಲು ಸಾಧ್ಯವಾಗುತ್ತದೆ. ಹಾಗೆ ನೋಡಿದರೆ, ಇಂದು ಕರ್ನಾಟಕ ಸಂಗೀತದ ಭವಿಷ್ಯ ಉಜ್ವಲವಾಗಿದೆ. ಇಂದಿನ ಯುವಜನತೆ ಕರ್ನಾಟಕ ಸಂಗೀತ ಕಲಿಯುಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಹಲವರು ಇದನ್ನೇ ಪ್ರಮುಖ ವೃತ್ತಿಯಾಗಿಯೂ ಆಯ್ಕೆ ಮಾಡಿಕೊಂಡಿರುವುದನ್ನು ಕಾಣುತ್ತೇವೆ. ಇನ್ನು ಕೆಲವರು ಹೊಟ್ಟೆಪಾಡಿಗೆ ಬೇರೆ ಉದ್ಯೋಗದಲ್ಲಿದ್ದರೂ ಸಹ ಪ್ರವೃತ್ತಿಯಾಗಿ ಸಂಗೀತಾಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದೇ ಕಾರಣದಿಂದ ಕರ್ನಾಟಕ ಸಂಗೀತ ಕ್ಷೇತ್ರ ಇನ್ನೂ ಚೆನ್ನಾಗಿ ಬೆಳವಣಿಗೆ ಹೊಂದಲಿದೆ ಎನ್ನುವ ಭರವಸೆ ಮೂಡಿದೆ.

ನೀವು ಮೈಸೂರ್ಬ್ಯಾಂಕ್ಉದ್ಯೋಗಿಯಾಗಿದ್ದವರು. ಅಲ್ಲಿ ನಿಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳಿದ್ದವು?

ಖಂಡಿತ! ಬ್ಯಾಂಕ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳಮಟ್ಟಿಗೆ ನಡೆಯುತ್ತಿದ್ದವು. ನಾನು ಹಲವಾರು ಬಾರಿ ವಾಕ್‌ ಸಂಗೀತ ಕಚೇರಿಯನ್ನು ನಮ್ಮ ಬ್ಯಾಂಕ್‌ನಲ್ಲಿ ನಡೆಸಿಕೊಟ್ಟಿದ್ದು ಇದೆ. ಬೇರೆ ಬೇರೆ ಗಾಯನ ಸ್ಪರ್ಧೆಗಳಿಗೂ ನಾನು ಬ್ಯಾಂಕ್‌ಕಡೆಯಿಂದಲೇ ತೆರಳುತ್ತಿದ್ದೆ. ಇಂಟರ್‌ ಬ್ಯಾಂಕ್‌ ಕಾಂಪಿಟೀಶನ್ಸ್ ಇರುತ್ತಿತ್ತು. ಭಾರತದ ಎಲ್ಲಾ ಭಾಗಗಳಿಂದ ಸ್ಪರ್ಧಿಗಳು ಬರುತ್ತಿದ್ದರು. ಅವೆಲ್ಲಾ ನನಗೆ ಬಹಳ ಒಳ್ಳೆಯ ಅವಕಾಶಗಳು ಸಿಕ್ಕಿತ್ತು. ಬ್ಯಾಂಕ್‌ ಹಾಗೂ ಬ್ಯಾಂಕ್‌ ಯೂನಿಯನ್‌ ಕಡೆಯಿಂದಲೂ ಒಳ್ಳೆಯ ಪ್ರೋತ್ಸಾಹ ದೊರಕಿದೆ. ನಾನಿಂದು ಇಷ್ಟು ಸಾಧನೆ ಮಾಡಲು ಬ್ಯಾಂಕ್‌ ಸಹ ಒಂದು ಪ್ರಮುಖ ಕಾರಣವಾಗಿದೆ. ನಾನು ಪಿಟೀಲು ವಾದಕಿ ಎನ್ನುವುದರೊಂದಿಗೆ ಬ್ಯಾಂಕ್‌ ಉದ್ಯೋಗಿ ಎನ್ನುವುದೂ ನನ್ನ ಬೆಳವಣಿಗೆಯಲ್ಲಿ ಒಂದು ಪ್ಲಸ್‌ ಪಾಯಿಂಟ್.

`ವೇಲ್ಸ್ ಆಫ್ಮೆಲಡಿಎನ್ನುವ ವಿಶೇಷ ಧ್ವನಿಮುದ್ರಿಕೆಯನ್ನು ನೀವು ಹೊರತಂದಿದ್ದೀರಿ. ಅದರ ವಿಶೇಷತೆಗಳೇನು? ಅದರ ಬಗ್ಗೆ ತಿಳಿಸಿ.

`ವೇಲ್ಸ್ ಆಫ್‌ ಮೆಲಡಿ’ ಇದು ನನ್ನ ಸೋಲೋ ವಾದನದ ಧ್ವನಿಮುದ್ರಿಕೆ. ಇದನ್ನು ಬೆಂಗಳೂರಿನ ಸುಸ್ವರಾಲಯ ಕಾಲೇಜ್‌ ಆಫ್ ಮ್ಯೂಸಿಕ್‌ ಇವರು ಬಿಡುಗಡೆಗೊಳಿಸಿದ್ದಾರೆ. ವಿಶೇಷವೆಂದರೆ ಇದರಿಂದ ಬರುವ ಆದಾಯವನ್ನು ಕಲಾಶ್ರಿತ ಕಲ್ಪಕ ಎನ್ನುವ ಸಂಗೀತಗಾರರ ವೈದ್ಯಕೀಯ ಸಹಾಯಧನಕ್ಕೆಂದು ಮೀಸಲಾಗಿರಿಸಿದ್ದೇವೆ.

ನಿಮ್ಮ ಕುಟುಂಬದ ಕುರಿತಂತೆ ತಿಳಿಸಿ. ನಿಮ್ಮ ಮನೆಯವರು ನಿಮ್ಮ ಪ್ರಗತಿಗೆ ಹೇಗೆ ಸಹಕಾರ ನೀಡಿದರು?

ಹೌದು. ನನ್ನ ಮನೆಯ ಸದಸ್ಯರೆಲ್ಲರೂ ನನ್ನ ಸಂಗೀತ, ಪಿಟೀಲು ವಾದನ ಕಾರ್ಯಕ್ರಮಗಳಿಗೆ ಉತ್ತಮ ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರೆಲ್ಲರ ಸಹಕಾರದಿಂದಲೇ ನಾನಿಂದು ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ಮೊದಲು ನನ್ನ ತಂದೆ, ತಾಯಿ, ಅಕ್ಕ ಹಾಗೂ ಭಾವನವರ ಸಹಕಾರದಿಂದ ನಾನು ಪಿಟೀಲು ವಾದಕಿಯಾಗುವುದು ಸಾಧ್ಯವಾಯಿತು. ಮದುವೆಯಾದ ನಂತರ ನನ್ನ ಪತಿ ಸಹ ನನ್ನ ಈ ಸಂಗೀತ ಕೈಂಕರ್ಯಕ್ಕೆ ಉತ್ತಮ ಬೆಂಬಲ ನೀಡಿದರು.

ನನ್ನ ಪತಿ ಎನ್‌.ಎಸ್‌. ಮೋಹನ್‌ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌. ಅರು ಉತ್ತಮ ಸಂಗೀತಾಸಕ್ತಿಯನ್ನು ಹೊಂದಿದ್ದಾರೆ. ಅಲ್ಲದೆ, ಭರತನಾಟ್ಯದಲ್ಲಿಯೂ ಪರಿಶ್ರಮ ಪಡೆದಿದ್ದಾರೆ. ನನ್ನ ಪ್ರತಿಯೊಂದು ಹೆಜ್ಜೆಗೂ ದೊರಕುತ್ತಿರುವ ಅವರ ಸಹಕಾರ ಹಾಗೂ ಪ್ರೋತ್ಸಾಹಗಳೇ ನಾನಿಂದು ಒಬ್ಬ ಯಶಸ್ವಿ ಕಲಾವಿದೆಯಾಗಲು ಕಾರಣವಾಗಿದೆ. ನನ್ನ ಮಗಳು ಶಾರದಾ ಮೋಹನ್‌ ನನ್ನ ಶಿಷ್ಯೆಯೂ ಹೌದು! ನಾನೇ ಅವಳಿಗೆ ಸಂಗೀತ ಹಾಗೂ ಪಿಟೀಲು ಕಲಿಸಿದೆ. ಇಂದು ಅವಳೂ ಸಹ ಓರ್ವ ಪ್ರತಿಭಾನ್ವಿತ ಗಾಯಕಿ ಹಾಗೂ ಪಿಟೀಲು ವಾದಕಿ ಎಂದು ಹೆಸರಾಗಿದ್ದಾಳೆ. ಇದೀಗ ಅವಳ ಪತಿಯ ಮನೆಯ ಸಹಾಯ, ಪ್ರೋತ್ಸಾಹ ನನಗೆ ಸಿಗುತ್ತಿದೆ.

ನಿಮ್ಮ ಬಿಡುವಿನ ವೇಳೆಯನ್ನು ಹೇಗೆ ವಿನಿಯೋಗಿಸುತ್ತೀರಿ? ಸಂಗೀತದ ಹೊರತಾಗಿ ಬೇರೆ ಏನಾದರೂ ಹವ್ಯಾಸಗಳಿವೆಯೇ?

ನನಗೆ ಚಿಕ್ಕ ವಯಸ್ಸಿನಿಂದಲೂ ಕರಕುಶಲ ಕಲೆಯಲ್ಲಿ ಆಸಕ್ತಿ ಇತ್ತು. ಜೊತೆಗೆ ಎಂಬ್ರಾಯಿಡರಿ, ಚಿಕ್ಕ ಮಣಿಗಳಿಂದ ಗೊಂಬೆ ತಯಾರಿಸುವುದು, ಕೊಬ್ಬರಿ ಬಟ್ಟಲಲ್ಲಿ ವಿವಿಧ ವಿನ್ಯಾಸಗಳನ್ನು ರಚನೆ ಮಾಡುವುದು, ರಂಗೋಲಿ ಹಾಕುವುದು ಈ ಎಲ್ಲಾ ಹವ್ಯಾಸಗಳಿತ್ತು. ನಾನು ಪೇಂಟಿಂಗ್‌ ಸಹ ಮಾಡುತ್ತಿದ್ದೆ. ಡ್ರಾಯಿಂಗ್‌ ಪರೀಕ್ಷೆಗಳಲ್ಲೂ ಉತ್ತೀರ್ಣಳಾಗಿದ್ದೆ. ಆದರೆ ಸಂಗೀತವನ್ನೇ ನನ್ನ ಪ್ರಮುಖ ಕಾರ್ಯಕ್ಷೇತ್ರವೆಂದು ಆರಿಸಿಕೊಂಡ ಬಳಿಕ ಬೇರೆಲ್ಲಾ ಹವ್ಯಾಸಗಳನ್ನು ಬಿಟ್ಟು ಈ ಒಂದರಲ್ಲಿಯೇ ಮುಂದುವರಿಯಬೇಕಾಯಿತು.

ನಿಮ್ಮ ಭವಿಷ್ಯದ ಕನಸು, ಯೋಜನೆಗಳೇನು?

ಭವಿಷ್ಯದ ಕನಸು ಎಂದರೆ ನನಗೆ ಎಷ್ಟು ಸಾಧ್ಯವೋ ಅಷ್ಟು ಯುವಜನರಿಗೆ ನನಗೆ ತಿಳಿದಿರುವ ಸಂಗೀತ ವಿದ್ಯೆಯನ್ನು ಕಲಿಸಬೇಕು. ನಾವು ಕಲಿತಿರುವುದನ್ನು ನಮ್ಮ ಮುಂದಿನ ಪೀಳಿಗೆಗೆ ಸಹ ತಿಳಿಸಬೇಕು. ಈ ನಿಟ್ಟಿನಲ್ಲಿಯೇ ಕೆಲಸದಲ್ಲಿ ತೊಡಗಿದ್ದೇನೆ. ಇದುವರೆಗೂ ಅನೇಕ ವಿದ್ಯಾರ್ಥಿಗಳಿಗೆ ಹಾಡುಗಾರಿಕೆ ಹಾಗೆಯೇ ಪಿಟೀಲು ತರಬೇತಿ ನೀಡಿದ್ದೇನೆ. ನನ್ನ ಅನೇಕ ಶಿಷ್ಯರು ಕಚೇರಿ ನೀಡಬಲ್ಲ ಮಟ್ಟಕ್ಕೆ ಬೆಳೆದಿದ್ದಾರೆ. ಇದು ನನಗೆ ನಿಜಕ್ಕೂ ಸಂಭ್ರಮದ ಸಂಗತಿ! ಒಟ್ಟಾರೆ ಕರ್ನಾಟಕ ಸಂಗೀತದ ಉತ್ಥಾನಕ್ಕಾಗಿ ಸತತ ದುಡಿಯುವುದು ನನ್ನ ಗುರಿ.

ವರ್ಷ ಎಂ.ಎಸ್‌. ಸುಬ್ಬಲಕ್ಷ್ಮಿಯವರ ಜನ್ಮ ಶತಮಾನೋತ್ಸವ ವರ್ಷ. ಹಿನ್ನೆಲೆಯಲ್ಲಿ ಅವರ ಬಗೆಗೆ ನೀವೇನು ಹೇಳಲು ಬಯಸುತ್ತೀರಿ? ನೀವೆಂದಾದರೂ ಅವರನ್ನು ಭೇಟಿ ಆಗಿದ್ದಿರಾ?

ಎಂ.ಎಸ್‌. ಸುಬ್ಬಲಕ್ಷ್ಮಿಯವರನ್ನು ವೈಯಕ್ತಿಕವಾಗಿ ಭೇಟಿಯಾಗುವ ಅವಕಾಶ ನನಗೆ ಲಭಿಸಲಿಲ್ಲ. ಒಂದು ವೇಳೆ ಲಭಿಸಿದ್ದಿದ್ದರೆ ಚೆನ್ನಾಗಿತ್ತು! ಆದರೆ ಅವರೆಂದರೆ ನನಗೆ ಅಪಾರವಾದ ಗೌರವವಿದೆ. ಅವರ ಹಾಡುಗಳೆಂದರೆ ನನಗೆ ಅಚ್ಚುಮೆಚ್ಚು. ಈಗಲೂ ನಾನು ಆಗಾಗ ಅವರ ಸಂಗೀತವನ್ನು ಕೇಳುತ್ತಿರುತ್ತೇನೆ. ಅವರೊಬ್ಬ ಅಪರೂಪದ ಕಲಾವಿದೆ. ಭಾರತದ ಹೆಮ್ಮೆಯ ಸಂಗೀತ ಕಲಾವಿದೆ ಎಂದರೆ ಅದು ಎಂ.ಎಸ್‌. ಸುಬ್ಬಲಕ್ಷ್ಮಿ.

ರಾಘವೇಂದ್ರ ಅಡಿಗ ಎಚ್ಚೆನ್

ನೀವು ಪದ್ಮಭೂಷಣ ಆರ್‌.ಕೆ. ಶ್ರೀಕಂಠನ್ಅವರ ಬಳಿ ಸುದೀರ್ಘಕಾಲ ಶಿಷ್ಯರಾಗಿದ್ದರು. ಅವರ ಬಗೆಗೆ ತಿಳಿಸಿ, ನಿಮ್ಮ ಅವರ ನಡುವಿನ ಗುರುಶಿಷ್ಯ ಸಂಬಂಧ ಹೇಗಿತ್ತು?

ರುದ್ರಪಟ್ಟಣ ಕೃಷ್ಣಶಾಸ್ತ್ರೀ ಶ್ರೀಕಂಠನ್‌ ಆಕಾಶವಾಣಿಯಲ್ಲಿ ಪ್ರಥಮ ಶ್ರೇಣಿಯ ಕಲಾವಿದರಾಗಿ ಸಂಗೀತ ಪ್ರಾಯೋಜಕರಾಗಿ ಖ್ಯಾತರಾದರು. ಅವರು ಜೀವನದುದ್ದಕ್ಕೂ ಪರಿಶ್ರಮದಿಂದ ಕಲಿತ ಸಂಗೀತ ಸಾಧನೆಯ ಬಲದಿಂದ ಶೃತಿ, ಲಯ, ಸಾಹಿತ್ಯದ ಮೇಲೆ ಅಪಾರ ಜ್ಞಾನ, ಪ್ರಭುತ್ವವನ್ನು  ಹೊಂದಿದ್ದರು. ಅವರು ಪದ್ಮಭೂಷಣ, ಸಂಗೀತ ಕಲಾನಿಧಿ, ಸಂಗೀತ ಕ್ಷೇತ್ರಕ್ಕೆ ಭೀಷ್ಮನಂತಿದ್ದರು ಎಂದರೆ ತಪ್ಪಲ್ಲ. ನನಗೆ ಶ್ರೀಕಂಠನ್‌ ಸರ್‌ ವೈಯಕ್ತಿಕ ಪರಿಚಯವಿರಲಿಲ್ಲ. ಅವರ ಕಚೇರಿಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಒಮ್ಮೆ ಸುಚಿತ್ರಾ ಅಕಾಡೆಮಿಯಲ್ಲಿ ಶಾಮಲಾ ಶಾಸ್ತ್ರಿ ಗಳ ಕೃತಿಗಳ ಕುರಿತಂತೆ ಕಾರ್ಯಾಗಾರವೊಂದು ಏರ್ಪಾಟಾಗಿತ್ತು. ನನಗೂ ಆ ಕೃತಿಗಳನ್ನು ಕಲಿಯುವ ಆಸಕ್ತಿ ಇತ್ತು. ನಾನೂ ಆ ಕಾರ್ಯಾಗಾರಕ್ಕೆ ನನ್ನ ಹೆಸರನ್ನು ನೋಂದಾಯಿಸಿದ್ದೆ. ಕಾರ್ಯಾಗಾರದ ಮೊದಲ ದಿನ ಶ್ರೀಕಂಠನ್‌ ಸರ್‌ ಒಂದು ಕೃತಿಯನ್ನು ಹೇಳಿಕೊಟ್ಟಿದ್ದರು. ಅದನ್ನು ಕೇಳಿದ್ದ ನನಗೆ ಅವರಲ್ಲಿ ನಾನು ಇನ್ನೂ ಹೆಚ್ಚಿನ ವ್ಯಾಸಂಗ ಮಾಡಬೇಕೆಂಬ ಹಂಬಲ ಮೂಡಿತು. ಅವರಲ್ಲಿ ನನ್ನ ಬೇಡಿಕೆ ತಿಳಿಸಿದೆ. ಅವರೂ ಸಂತಸದಿಂದ ಒಪ್ಪಿದರು. ಅಲ್ಲಿಂದ ನಾನು ಅವರಲ್ಲಿ ಸುಮಾರು ಹದಿನಾಲ್ಕು ವರ್ಷಗಳ ಕಾಲ ಪಿಟೀಲು ವಾದನದ ವ್ಯಾಸಂಗ ನಡೆಸಿದೆ. ಅವರ ಬಳಿ ಯಾವ ಸಮಯದಲ್ಲಿ ಹೋದರೂ ನನಗೆ ಅಗತ್ಯವಾದ ಕಲಿಕಾ ಸಾಮಗ್ರಿಗಳನ್ನು ತಕ್ಷಣ ನೀಡುತ್ತಿದ್ದರು ಮತ್ತು ಸಂಗೀತದ ಕುರಿತಂತೆ ಯಾವ ಸಮಸ್ಯೆಯ ವಿಚಾರವೆತ್ತಿದರೂ ಅದಕ್ಕೆ ಅವರಲ್ಲಿ ಪರಿಹಾರ ಇರುತ್ತಿತ್ತು.

ಪ್ರಶಸ್ತಿ, ಬಿರುದು ಸನ್ಮಾನಗಳು ನಳಿನಾ ಮೋಹನ್‌ಅವರ ಅದ್ಭುತವಾದ ಪಿಟೀಲು ಪ್ರೌಢಿಮೆಗೆ ಸಂದಿರುವ ಪ್ರಶಸ್ತಿ ಗೌರವಗಳು ಹೀಗಿವೆ :

ಸಂಗೀತದ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರಾಂಕ್‌, ಚಿನ್ನದ ಪದಕ ಗಳಿಸಿದ್ದಕ್ಕಾಗಿ ಕರ್ನಾಟಕ ಯೂತ್‌ ಸೆಂಟರ್‌, ಬೆಂಗಳೂರು ಅವರಿಂದ ಗೌರವ ಪುರಸ್ಕಾರ.

1999ರಲ್ಲಿ ಮುಳಬಾಗಿಲು ಶ್ರೀಪಾದರಾಜ ಮಠದವರಿಂದ `ಕಲಾರತ್ನ’ ಬಿರುದು ಪ್ರದಾನ.

ಶ್ರೀ ನಾದ ಜ್ಯೋತಿ ತ್ಯಾಗರಾಜ ಸ್ವಾಮಿ ಭಜನಾ ಸಭಾ, ಬೆಂಗಳೂರು ಇವರಿಂದ 2002ರ ಸಾಲಿನ ನಾದ ಜ್ಯೋತಿ ಪುರಸ್ಕಾರ.

2003ರ ಸಾಲಿನ ಕರ್ನಾಟಕ ಗಾನ ಕಲಾ ಪರಿಷತ್ತಿನ ಯುವ ಕಲಾವಿದರ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದು ಪರಿಷತ್ತಿನಿಂದ `ಗಾನಕಲಾಶ್ರೀ’ ಬಿರುದು ಪ್ರದಾನ.

ಶ್ರೀವಾಣಿ ಸಂಗೀತ ವಿದ್ಯಾಲಯ, ಬೆಂಗಳೂರು ಇವರಿಂದ 2011ರಲ್ಲಿ `ಸತ್ಯಶ್ರೀ’ ಬಿರುದು ಪ್ರದಾನ.

ಸ್ವಭಾನು ಸಂಗೀತ ಶಾಲೆ, ಬೆಂಗಳೂರು ಇವರಿಂದ 2012ನೇ ಸಾಲಿನ `ಸ್ವಭಾನು ವಾರ್ಷಿಕ’ ಪ್ರಶಸ್ತಿ.

ವಂಶಿ ಅಕಾಡೆಮಿ ಆಫ್‌ ಮ್ಯೂಸಿಕಲ್ ಟ್ರಸ್ಟ್, ಇವರಿಂದ 2014ರ `ಗಾಂಧರ್ವ ವಂಶ ನಿಧಿ’ ಪ್ರಶಸ್ತಿ.

ಮನೋರಂಜನಿ ಸಾಂಸ್ಕೃತಿಕ ವೇದಿಕೆ, ಬೆಂಗಳೂರು ಇವರಿಂದ 2016ನೇ ಸಾಲಿನ `ಮನೋರಂಜಿನಿ’ ಪ್ರಶಸ್ತಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ