ಸಮಯದ ಕೊರತೆ ಸಂಬಂಧಗಳನ್ನು ನಿಭಾಯಿಸುವ ತರ್ಕವನ್ನೇ ಬದಲಿಸಿಬಿಟ್ಟಿದೆ. ವ್ಯಸ್ತತೆಯಿಂದಿರುವ ಇಂದಿನ ಜನ ಮೊಬೈಲ್, ಇಂಟರ್‌ನೆಟ್‌ ಇತ್ಯಾದಿಗಳ ಉಪಯೋಗದಿಂದ ಪರಸ್ಪರ ಸಂಪರ್ಕದಲ್ಲಿರುತ್ತಾರೆ. ಆದರೆ ಕೊಂಚ ಯೋಚಿಸಿ. ಗೆಳೆಯರನ್ನು ಭೇಟಿಯಾಗಿ ಮಾತಾಡುವುದು, ಅವರ ಮನೆಗೆ ಹೋಗಿ ಎಂಜಾಯ್‌ ಮಾಡುವುದನ್ನು ಇಂಟರ್‌ನೆಟ್‌ ಅಥವ್ ಫೋನ್ ಪೂರೈಸುತ್ತದೆಯೇ? ಇಲ್ಲ ತಾನೇ? ಹಾಗಾದರೆ ಬಹಳ ದಿನಗಳಿಂದ ಮಾಡಲಾಗದ್ದನ್ನು ಈಗೇಕೆ ಮಾಡಬಾರದು? ನಿಮ್ಮ ಗೆಳೆಯರು ಹಾಗೂ ಬಂಧುಗಳ ಮನೆಗೆ ಸರ್‌ಪ್ರೈಸ್‌ ವಿಸಿಟ್‌ ಕೊಡಿ…..

ಹೆಚ್ಚಿನ ಜನಕ್ಕೆ ಬಹಳ ದಿನಗಳಿಂದ ನಾವು ನೆಂಟರೊಬ್ಬರ ಮನೆಗೆ ಹೋಗಬೇಕು ಎಂದುಕೊಂಡಿದ್ದರೂ ಸಮಯವೇ ಸಿಗದೇ ಹೋಗಲಾಗುವುದಿಲ್ಲ. ಆದರೆ ಈಗ ಒಮ್ಮೆ ಸರ್‌ಪ್ರೈಸ್‌ ವಿಸಿಟ್‌ ನೀಡಬೇಕು ಎಂದುಕೊಂಡಿದ್ದರೆ ವಿಸಿಟ್‌ ಕೊಟ್ಟುಬಿಡಿ. ಆದರೆ ಹಾಗೆ ಮಾಡುವಾಗ ಕೆಲವು ವಿಷಯಗಳನ್ನು ಗಮನದಲ್ಲಿಡಬೇಕು. ಏಕೆಂದರೆ ನೀವು ಅಲ್ಲಿಗೆ ಎಂಜಾಯ್‌ ಮಾಡಲು ಹೋಗುತ್ತಿದ್ದೀರಿ. ಅವರಿಗೆ ತೊಂದರೆ ಕೊಡಲು ಅಲ್ಲ. ಬನ್ನಿ, ಸರ್‌ಪ್ರೈಸ್‌ ವಿಸಿಟ್‌ ಸ್ಮರಣೀಯವಾಗಿ ಮಾಡುವುದು ಹೇಗೆಂದು ತಿಳಿಯೋಣ :

ಅವರ ಸೌಲಭ್ಯದ ಬಗ್ಗೆಯೂ ಗಮನಿಸೋಣ : ಗೆಳೆಯರು ಹಾಗೂ ಬಂಧುಗಳ ಮನೆಗೆ ಹೋಗುವುದೆಂದರೆ ಬಹಳ ಖುಷಿಯಾಗಿರುತ್ತದೆ. ಆದರೆ ಹಾಗೆ ಒಬ್ಬರ ಮನೆಗೆ ಹೋಗುವಾಗ ವೀಕೆಂಡ್‌ನಲ್ಲಿಯೇ ಹೋಗಿ. ಏಕೆಂದರೆ ಅವರಿಗೆ ತೊಂದಲೆಯಾಗಬಾರದು ಮತ್ತು ಅವರು ನಿಮಗೆ ಸಂಪೂರ್ಣ ಸಮಯ ಕೊಡುವಂತಿರಬೇಕು.

ಉಪಾಯದಿಂದ ಇನ್ಫರ್ಮೇಶನ್ಪಡೆಯಿರಿ : ನೀವು ಹೋಗಬೇಕೆಂದಿರುವವರ ಮನೆಯವರು ಮನೆಯಲ್ಲಿ ಇರುತ್ತಾರೆಯೋ ಇಲ್ಲವೋ ಎಂದು ತಿಳಿದುಕೊಳ್ಳಿ. ಅಂದು ಅವರಿಗೆ ಬೇರೇನಾದರೂ ಪ್ರೋಗ್ರಾಂ ಇದೆಯೇ? ಅವರ ಮನೆಗೆ ಬೇರೆ ಅತಿಥಿಗಳು ಬರುತ್ತಿದ್ದಾರೆಯೇ? ಆದ್ದರಿಂದ ಮೊದಲೇ ಅವರಿಗೆ ಫೋನ್‌ ಮಾಡಿ ಅದೂ ಇದೂ ಮಾತಾಡುತ್ತಾ ಇರಿ. ಅವರೇನು ಮಾಡುತ್ತಿದ್ದಾರೆ ಎಂದು ತಿಳಿದುಕೊಂಡು ಅದಕ್ಕೆ ತಕ್ಕಂತೆ ಪ್ರೋಗ್ರಾಂ ಮಾಡಿಕೊಳ್ಳಿ.

ಅತಿಥಿ ಸತ್ಕಾರ ನಿರೀಕ್ಷಿಸಬೇಡಿ : ನೀವು ಅವರ ಮನೆಗೆ ಇದ್ದಕ್ಕಿದ್ದಂತೆ ಹೋಗುತ್ತಿದ್ದೀರಿ. ಅವರಿಗೆ ಹೆಚ್ಚು ಕೆಲಸ ಕೊಡಬೇಡಿ. ಸ್ವಲ್ಪ ಹೊತ್ತು ಇಲ್ಲಿ ಇರುತ್ತೀರಿ. ನಕ್ಕು ನಗಿಸುತ್ತಾ ಹೊತ್ತು ಕಳೆಯಿರಿ. ಊಟ ತಿಂಡಿಯಲ್ಲೇ ಕಾಲ ಕಳೆಯಬೇಡಿ. ಸ್ವೀಟ್ಸ್ ಜೊತೆ  ಏನಾದರೂ ತಿನ್ನಲು ತೆಗೆದುಕೊಂಡು ಹೋಗಿ.

ಹಳೆಯ ವಿಷಯಗಳನ್ನು ನೆನಪಿಸಿಕೊಳ್ಳಿ : ಬಹಳ ದಿನಗಳ ನಂತರ ಭೇಟಿಯಾಗುತ್ತಿದ್ದೀರಿ. ಒಳ್ಳೆಯ ಹಿತವಾದ ಹಳೆಯ ನೆನಪುಗಳನ್ನು ತಾಜಾ ಅನುಭವಿಸಬಹುದು. ನಿಮ್ಮ ಗೆಳೆಯರೊಂದಿಗೆ ನಿಮ್ಮ ಮನಸ್ಸಿನ ಹಾಗೂ ಶಾಲಾ ಕಾಲೇಜು ದಿನಗಳ ಎಲ್ಲ ವಿಷಯಗಳನ್ನೂ ಮೆಲುಕು ಹಾಕಿ. ನಿಮಗೆ ಅವರ ವಿಷಯದಲ್ಲಿ ಇಷ್ಟವಾದದ್ದು ಹಾಗೂ ಅವರಿಗೆ ನಿಮ್ಮ ವಿಷಯದಲ್ಲಿ ಇಷ್ಟವಾದದ್ದು,  ಪರಸ್ಪರ ಮಾಡಿದ ಸಹಾಯ ಎಲ್ಲವನ್ನೂ ನೆನಪಿಸಿಕೊಳ್ಳಿ.

ಹೆಚ್ಚು ಸಮಯ ತೆಗೆದುಕೊಳ್ಳಬೇಡಿ : ಸರ್‌ಪ್ರೈಸ್‌ ವಿಸಿಟ್‌ ಯಾವಾಗಲೂ ಚಿಕ್ಕದಾಗಿರಲಿ. 25-30 ನಿಮಿಷಗಳಿಗಿಂತ ಹೆಚ್ಚು ಬೇಡ. ಅಷ್ಟು ಸಮಯದಲ್ಲೇ ನಗುನಗುತ್ತಾ ಹೊತ್ತು ಕಳೆಯಿರಿ.

ದೂರುಗಳನ್ನು ತಳ್ಳಿಹಾಕಿ : ನೀವು ಬಹಳ ದಿನಗಳ ನಂತರ ಭೇಟಿಯಾಗುತ್ತಿದ್ದರೆ ನಿಮ್ಮಿಬ್ಬರ ಮಧ್ಯೆ, ಏನಾದರೂ ಮನಸ್ತಾಪವಿದ್ದು ನಿಮ್ಮಿಬ್ಬರ ಸಂಬಂಧಗಳಿಗೆ ತೊಂದರೆಯಾಗುತ್ತಿದ್ದರೆ ಅದನ್ನು ಕ್ಲಿಯರ್‌ ಮಾಡಿಕೊಳ್ಳಿ. ಖಂಡಿತ ನಿಮ್ಮ ಸಂಬಂಧ ಸುಧಾರಿಸುತ್ತದೆ.

ಗಿಫ್ಟ್ ವಿಶೇಷವಾಗಿರಲಿ : ನಿಮ್ಮ ರಿಲೇಟಿವ್ ಬಳಿ ಹೋಗುವಾಗ ಒಯ್ಯುವ ಗಿಫ್ಟ್ ಅಥವಾ ಆಹಾರ ಪದಾರ್ಥಗಳು ಅವರಿಗೆ ಇಷ್ಟವಾಗಿದ್ದು ಯೂಸ್‌ಫುಲ್ ಆಗಿರಬೇಕು. ನೀವು ಅವರಿಗೆ ಸ್ವೀಟ್ಸ್ ಬದಲು ಡ್ರೈಫ್ರೂಟ್ಸ್ ಕೊಟ್ಟರೆ ಅವರು ಹಲವು ದಿನಗಳವರೆಗೆ ತಿನ್ನುತ್ತಾ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ. ಒಂದುವೇಳೆ ಗಿಫ್ಟ್ ಕೊಡುವ ಮನಸ್ಸಿದ್ದರೆ ಆರ್ಗ್ಯಾನಿಕ್‌ ಟೀ, ಕಾಫಿ, ಸೋಪ್‌, ಕ್ರೀಂ, ಹೇರ್‌ ಅಂಡ್‌ ಸ್ಕಿನ್‌ ಕೇರ್‌ ರೇಂಜ್‌ ಅಥವಾ ಪ್ಲ್ಯಾಂಟ್ಸ್ ಇತ್ಯಾದಿ ಆರ್ಗ್ಯಾನಿಕ್‌ ಗಿಫ್ಟ್ಸ್ ಕೊಡಬಹುದು. ಯಾವುದೇ ಗಿಫ್ಟ್ ಕೊಟ್ಟರೂ ಬಹಳ ದಿನಗಳವರೆಗೆ ನಿಮ್ಮನ್ನು ನೆನಪಿಸಿಕೊಳ್ಳುವಂತಿರಬೇಕು.

ಇದ್ದಕ್ಕಿದ್ದಂತೆ ಮಾಡಿದ ಪ್ರೋಗ್ರಾಂ ಚೆನ್ನಾಗಿರುತ್ತದೆ : ನಾವು ಹಲವಾರು ಬಾರಿ ಪ್ಲ್ಯಾನ್‌ ಮಾಡಿ ಯಾವುದಾದರೂ ಪ್ರೋಗ್ರಾಂ ಇಟ್ಟುಕೊಂಡು ಬಹಳಷ್ಟು ಜನರ ಒಪ್ಪಿಗೆ ಪಡೆದುಕೊಳ್ಳುವಾಗ ಪ್ರೋಗ್ರಾಂ ನಡೆಯುವುದೇ ಇಲ್ಲ. ನಮ್ಮಿಷ್ಟ ನೆರವೇರದಿದ್ದಾಗ ಯಾರಿಗೇ ಆಗಲಿ ಕೆಡುಕೆನಿಸುತ್ತದೆ. ಆದರೆ ನಾವು ಇದ್ದಕ್ಕಿದ್ದಂತೆ ಪ್ರೋಗ್ರಾಂ ಮಾಡುವಾಗ ಹೆಚ್ಚು ಯೋಚಿಸಲು ಮತ್ತು ಪ್ಲ್ಯಾನ್ ಮಾಡಲು ಸಮಯ ಇರುವುದಿಲ್ಲ. ಆಗ ಎಷ್ಟು ಸಾಧ್ಯವೋ ಅಷ್ಟು ಕೊಂಚ ಸಮಯದಲ್ಲಿಯೇ ದಿ ಬೆಸ್ಟ್ ಆಗುತ್ತದೆ. ಅದು ಆತಿಥೇಯರ ಮನೆಗೆ ಹೋಗಿ ಊಟ ತಿಂಡಿ ಮಾಡುವ ವಿಷಯವಾಗಲಿ, ಎಂಜಾಯ್‌ ಮಾಡುವ ವಿಷಯವಾಗಲಿ ಯಾವುದಾದರೂ ಸರಿ.

ಸರ್ಪ್ರೈಸ್ವಿಸಿಟ್ ಲಾಭಗಳು

ಮನಸ್ತಾಪಗಳ ನಿವಾರಣೆ ಹಾಗೂ ಸಂಬಂಧ ಸುಧಾರಿಸುವ ಚಾನ್ಸ್ ಹೆಚ್ಚು.

ಎಂಜಾಯ್‌ ಮಾಡುವ ಉತ್ತಮ ಅವಕಾಶ.

ನೀವು ಇದ್ದಕ್ಕಿದ್ದಂತೆ ಬಂದುದನ್ನು. ನೋಡಿ ಬಂಧುಗಳ ಮುಖದಲ್ಲಿ  ಅವರ್ಣನೀಯ ಖುಷಿ ಕಂಡುಬರುತ್ತದೆ.

ಗೆಳೆಯರು ಹಾಗೂ ಬಂಧುಗಳು, `ನಮ್ಮ ಮನೆಗೆ ಬರೋದೇ ಇಲ್ಲ ನೀವು,’ ಎನ್ನುವ ದೂರುಗಳು ಮಾಯವಾಗುತ್ತವೆ.

ಇಂದು ನೀವು ಸರ್‌ಪ್ರೈಸ್‌ ವಿಸಿಟ್‌ಕೊಟ್ಟಿದ್ದೀರಿ. ನಾಳೆ ಅವರು ವಿಸಿಟ್‌ ಕೊಡಲಿದ್ದಾರೆ. ಹೀಗೆ ಮತ್ತೆ ಬಂದು ಹೋಗುವ ಕ್ರಮ ಶುರುವಾಗುತ್ತದೆ.  ಹಾಳಾಗುವುದರಲ್ಲಿದ್ದ ಸಂಬಂಧ ತಾಜಾ ಆಗುತ್ತದೆ.

ನೀವು ಮೊದಲೇ ಅವರಿಗೆ ತಿಳಿಸಿದ್ದರೆ, ಅವರು ನಿಮಗೆ ಊಟಕ್ಕೆ ಹತ್ತಾರು ರೀತಿಯ ವ್ಯಂಜನಗಳನ್ನು ಮಾಡಿಸಬೇಕಿದ್ದು ತೊಂದರೆಯಾಗುತ್ತಿತ್ತು. ನೀವು ದಿಢೀರನೇ ಹೋಗಿದ್ದರಿಂದ ಊಟೋಪಚಾರದ ಔಪಚಾರಿಕತೆ ಕಡಿಮೆಯಾಗುತ್ತದೆ. ಅವರು ಮಾರ್ಕೆಟ್‌ನಿಂದ ಅಥವಾ ಬೇಕರಿಯಿಂದ ಏನಾದರೂ ತರಿಸಬಹುದು ಅಥವಾ ನೀವೇ ಏನಾದರೂ ಪ್ಯಾಕ್‌ ಮಾಡಿಸಿಕೊಂಡು ಹೋಗಿ.

ಇಡೀ ಕುಟುಂಬ ಮತ್ತು ಹತ್ತಿರದ ನೆಂಟರು, ಗೆಳೆಯರೊಂದಿಗೆ ಹೀಗೆ ಟೈಂ ಸ್ಪೆಂಡ್‌ ಮಾಡುವುದರಿಂದ ನಿಮ್ಮ ಸಂಬಂಧಗಳಲ್ಲಿ ಹೊಸ ಎನರ್ಜಿ ಸಿಗುತ್ತದೆ.

ಮಕ್ಕಳಲ್ಲೂ ಸಹ ಎಮೋಷನ್‌ ಬಾಂಡಿಂಗ್‌ನ ಭಾವನೆ ವಿಕಸಿತವಾಗುವುದು ಬಹಳ ಅಗತ್ಯ. ಇದು ನಿಮ್ಮ ಸಂಬಂಧಿಗಳು ಮನೆಗೆ ಬಂದು ಹೋಗುತ್ತಿದ್ದರೆ ನೀವು ಅವರ ಮನೆಗೆ ಹೋಗುತ್ತಿದ್ದರೆ ಉಂಟಾಗುತ್ತದೆ. ನಿಮ್ಮ ಈ ಸಾಮಾಜಿಕ ವರ್ತನೆ ಕಂಡು ಮುಂದೆ ನಿಮ್ಮ ಮಕ್ಕಳೂ ಸಹ ಇದನ್ನು ಕಲಿಯುತ್ತಾರೆ.

ಸರ್ಪ್ರೈಸ್ವಿಸಿಟ್ನಿಂದ ಹಾನಿ

ಇದ್ದಕ್ಕಿದ್ದಂತೆ ನೀವು ಬಂದದ್ದನ್ನು ನೋಡಿ ಅವರಿಗೆ ಬೇಸರಾಗಬಹುದು.

ಗೆಳೆಯರು ಅಥವಾ ನೆಂಟರು ಮನೆಯಲ್ಲಿ ಇರದಿದ್ದರೆ ನಿರಾಶರಾಗದಿರಿ. ಇನ್ನೂ 2-3 ಗೆಳೆಯರಲ್ಲಿಗೆ ಹೋಗಲು ತಯಾರಿ ಮಾಡಿಕೊಂಡಿರಿ.

ಅವರು ಬೇರೆ ಯಾರನ್ನೋ ನಿರೀಕ್ಷಿಸುತ್ತಿದ್ದು ನೀವು ಬಂದಿದ್ದರಿಂದ ಅವರ ಮೂಡ್‌ ಹಾಳಾಗಬಹುದು.

ಸರ್ಪ್ರೈಸ್ಯಾವಾಗ ಕೊಡಬಹುದು?

ಸರ್‌ಪ್ರೈಸ್‌ನ್ನು ಯಾವುದಾದರೂ ವೀಕೆಂಡ್‌ನಲ್ಲಿ ಕೊಡಬಹುದು. ಆದರೆ ಹತ್ತಿರದ ನೆಂಟರ ಬರ್ಥ್‌ ಡೇ, ಮದುವೆ, ಹುಟ್ಟುಹಬ್ಬ, ಯಾವುದಾದರೂ ಹಬ್ಬ ಇತ್ಯಾದಿ ಇದ್ದರೆ ನೀವು ಹೀಗೆ ದಿಢೀರನೆ ಸ್ವೀಟ್ಸ್ ಅಥವಾ ಕೇಕ್‌ ತೆಗೆದುಕೊಂಡು ಹೋದರೆ ಅವರಿಗೆ ಬಹಳ ಸಂತೋಷವಾಗುತ್ತದೆ. ನಿಮ್ಮ ಮೇಲೆ ಮೊದಲಿಗಿಂತ ಹೆಚ್ಚು ಪ್ರೀತಿ, ಗೌರವ ಉಂಟಾಗುತ್ತದೆ. ಏಕೆಂದರೆ ನೀವು ಈ ಸ್ಪೆಷಲ್ ದಿನವನ್ನು ನೆನಪಿನಲ್ಲಿ ಇಟ್ಟುಕೊಂಡು ಅವರೊಂದಿಗೆ ಸೆಲೆಬ್ರೇಟ್‌ ಮಾಡಿದ್ದೀರಿ.

ಹೊಸ ವರ್ಷವಾಗಲಿ, ಯುಗಾದಿ ಅಥವಾ ದೀಪಾವಳಿ ಸಂದರ್ಭಗಳಲ್ಲಿ ಶುಭಾಶಯ ಹೇಳುವ ಸಂದರ್ಭವನ್ನು ನಾವು ಬಿಡುವುದಿಲ್ಲ. ಆ ಸಂದರ್ಭಗಳಲ್ಲಿ ಶುಭಾಶಯ ಹೇಳಲು ನಾವು ಯಾವಾಗಲೂ ಸೋಶಿಯಲ್ ಸೈಟ್ಸ್ ಮತ್ತು ಟೆಕ್ನಾಲಜಿಯ ಆಸರೆ ಪಡೆಯುತ್ತೇವೆ. ವಿಶೇಷ ಶುಭಾಶಯಗಳನ್ನು ನಿಮ್ಮ ಗೆಳೆಯರು, ಸಂಬಂಧಿಗಳಿಗೆ ಕಳಿಸಿದಾಗ ಉತ್ತರವಾಗಿ ಲೈಕ್‌, ಥ್ಯಾಂಕ್ಸ್, ರಿಪ್ಲೈ, ಗ್ರೀಟಿಂಗ್‌ ಕಂಡಾಗ ಎದುರಿಗೆ ನೋಡಿ ಮಾತಾಡುವಾಗ ಸಿಕ್ಕಷ್ಟು ಖುಷಿಯಾಗುವುದಿಲ್ಲ. ಆದ್ದರಿಂದ ಈ ಬಾರಿ ನಿಮ್ಮ ಗೆಳೆಯರು, ಬಂಧುಗಳ ಮನೆಗೆ ಹೋಗಿ ಶುಭಾಶಯ ಹೇಳಿ. ಅವರಿಗೂ ಖುಷಿಯಾಗುತ್ತದೆ, ನಿಮ್ಮ ಹಬ್ಬದ ಖುಷಿಯೂ ದ್ವಿಗುಣಿತವಾಗುತ್ತದೆ!

ಕೆ. ವನಿತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ