ಇಂದಿನ ವ್ಯಸ್ತ ದಿನಚರಿಯಲ್ಲಿ ಪ್ರತಿಯೊಬ್ಬರು ಸಾಧ್ಯವಿದ್ದಷ್ಟು ಮಟ್ಟಿಗೆ ಆಧುನಿಕ ಸುಖಸೌಲಭ್ಯಗಳನ್ನು ಬಳಸಲು ಇಚ್ಛಿಸುತ್ತಾರೆ. ಅದರಲ್ಲೊಂದು ಮುಖ್ಯ ಸೌಲಭ್ಯವೆಂದರೆ ಎಟಿಎಂ ಕಮ್ ಡೆಬಿಟ್ ಕಾರ್ಡ್. ಅದರಿಂದ ವಿತ್ತ ಕ್ಷೇತ್ರದ ನಕ್ಷೆಯೇ ಬದಲಾಗಿಬಿಟ್ಟಿದೆ. ಈಗ ಪ್ರತಿಯೊಬ್ಬ ವ್ಯಕ್ತಿಯೂ ತಮಗೆ ಬೇಕೆಂದಾಗ ತಮ್ಮ ಅಗತ್ಯಕ್ಕನುಗುಣವಾಗಿ ಹಣ ತೆಗೆಯುತ್ತಿರುತ್ತಾರೆ.
ಎ.ಟಿ.ಎಂ. ಕಮ್ ಡೆಬಿಟ್ ಕಾರ್ಡ್‌ನಿಂದ ನಿಮಗೆ ಬೇಕೆಂದಾಗ ಆನ್‌ಲೈನ್ ಶಾಪಿಂಗ್ ಕೂಡ ಮಾಡಬಹುದು. ನಿಮ್ಮ ಪ್ರವಾಸದ ಟಿಕೆಟ್ ಬುಕ್ ಮಾಡಿಸಬಹುದು, ಶಾಪಿಂಗ್ ಮಾಲ್‌ನಲ್ಲಿ ಶಾಪಿಂಗ್ ಮಾಡಬಹುದು, ಹೋಟೆಲ್‌ನ ಊಟ ತಿಂಡಿಯ ಬಿಲ್ ಪಾತಿಸಬಹುದು.
ಒಟ್ಟಾರೆ ಹೇಳಬೇಕೆಂದರೆ, ಇಂದು ಎಟಿಎಂ ಜನಸಾಮಾನ್ಯರ ದಿನಚರಿಯ ಒಂದು ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ಎ.ಟಿ.ಎಂ. ಕಾರ್ಡ್‌ನಿಂದ ನಿಮಗೆ ಯಾವುದೇ ರೀತಿಯ ಹಾನಿಯುಂಟಾಗದಿರಲು ಕೆಳಕಂಡ ಸಂಗತಿಗಳನ್ನೊಮ್ಮೆ ಅವಶ್ಯವಾಗಿ ಓದಿ.
ಶಾಪಿಂಗ್ ಮಾಡುವ ಸಂದರ್ಭದಲ್ಲಿ ಎ.ಟಿ.ಎಂ. ಕಾರ್ಡ್‌ನಿಂದ 2 ಸಲ ಸ್ವೈಪ್ ಮಾಡದಂತೆ ಎಚ್ಚರಿಕೆ ವಹಿಸಿ. ಒಂದು ವೇಳೆ ಆ ರೀತಿ ಮಾಡಿದ್ದರೆ ಆ ಬಗ್ಗೆ ಮಾಹಿತಿ ಪಡೆದುಕೊಳ್ಳಿ ಮತ್ತು ಶಾಪಿಂಗ್‌ನ ರಸೀದಿಯನ್ನು ನಿಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಎ.ಟಿ.ಎಂ. ಕಾರ್ಡ್‌ನ ಹಿಂಭಾಗದಲ್ಲಿ ಬರೆದ ಸಿ.ವಿ.ವಿ. (ಕಾರ್ಡ್ ವೆರಿಫಿಕೇಶನ್ ವ್ಯಾಲ್ಯೂ) ನಂಬರ್‌ನ್ನು ಎಲ್ಲಿಯಾದರೂ ಸುರಕ್ಷಿತ ಸ್ಥಳದಲ್ಲಿ ನಮೂದಿಸಿ ಇಡಿ. ಇಲ್ಲದಿದ್ದರೆ ನಂಬರ್‌ನ ನೆರವಿನಿಂದ ನಿಮ್ಮ ಮಾಹಿತಿ ಹಾಗೂ ಕಾರ್ಡ್ ಇಲ್ಲದೆಯೂ ಯಾರೇ ಆಗಲಿ ಇಂಟರ್‌ನೆಟ್‌ನಲ್ಲಿ ಶಾಪಿಂಗ್ ಮಾಡಬಹುದು.
ಶಾಪಿಂಗ್ ಮಾಲ್ ಹಾಗೂ ರೆಸ್ಟೋರೆಂಟ್‌ನಲ್ಲಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡಿನ ಸುರಕ್ಷಿತ ಬಳಕೆಗಾಗಿ ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಿ.
ಟ್ರಾನ್ಸಾಕ್ಷನ್ ಯಾವಾಗಲೂ ನಿಮ್ಮ ಉಪಸ್ಥಿತಿಯಲ್ಲಿಯೇ ಆಗಬೇಕು.
ಶಾಪಿಂಗ್ ಮಾಲ್ ಹಾಗೂ ರೆಸ್ಟೋರೆಂಟ್‌ನಲ್ಲಿ ಕೊಟ್ಟ ಯಾವುದೇ ಸರ್ವೇ ಫಾರ್ಮ್ ನಲ್ಲಿ ನಿಮ್ಮ ಖಾಸಗಿ ಮಾಹಿತಿಯನ್ನು ಕೊಡಬೇಡಿ.
ಇಂಟರ್‌ನೆಟ್‌ನಲ್ಲಿ ಶಾಪಿಂಗ್ ಮಾಡುವಾಗ ಟ್ರಾನ್ಸಾಕ್ಷನ್‌ಗಾಗಿ ಸದಾ ಸುರಕ್ಷಿತ ಹಾಗೂ ಮಾನ್ಯತೆ ಹೊಂದಿರುವ ವೆಬ್‌ಸೈಟ್‌ನ್ನೇ ಉಪಯೋಗಿಸಿ.
ನಿಮ್ಮ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್‌ನಿಂದ ಶಾಪಿಂಗ್ ಮಾಡಿದ ಬಳಿಕ ಲಾಗ್ ಆಫ್ ಮಾಡಿ ಹಾಗೂ ಬ್ರೌಸರ್ ಕುಕೀಸ್‌ನ್ನು ಸದಾ ಡಿಲೀಟ್ ಮಾಡಿ.
ನಿಮಗೆ ಬಂದ ಇಮೇಲ್ ಸಂದೇಶಗಳನ್ನು ಗಮನವಿಟ್ಟು ಓದಿ. ನಿಮ್ಮ ಬ್ಯಾಂಕ್ ವಿವರ ಹಾಗೂ ಖಾಸಗಿ ಮಾಹಿತಿ ಕೇಳಿದ ವಿವರಗಳುಳ್ಳ ಮೇಲ್‌ಗಳಿಗೆ ಉತ್ತರ ಕೊಡಲು ಹೋಗಲೇಬೇಡಿ. ಸಾಮಾನ್ಯವಾಗಿ ಯಾವುದೇ ಒಂದು ಬ್ಯಾಂಕ್ ಈ ರೀತಿಯ ವಿವರಗಳನ್ನು ಕೇಳುವುದಿಲ್ಲ.
ಪೇಮೆಂಟ್ ಮಾಹಿತಿಯನ್ನು ಇಮೇಲ್ ಮೂಲಕ ಕಳಿಸಬೇಡಿ. ಏಕೆಂದರೆ ಇದನ್ನು ಯಾರೇ ಆಗಲಿ ಓದಬಹುದು.
ಕೆಲವು ಆನ್‌ಲೈನ್ ಸ್ಟೋರ್‌ಗಳು ಯೂಸರ್ ನೇವ್ ಹಾಗೂ ಪಾಸ್ ವರ್ಡ್ ಜೊತೆಗೆ ರಿಜಿಸ್ಟರ್ಡ್ ಮಾಡಲು ಬೇಡಿಕೆ ಇಡುತ್ತಾರೆ. ನೀವು ಯಾವಾಗಲೂ ನಿಮ್ಮ ಪಾಸ್ ವರ್ಡ್‌ನ್ನು ಗೌಪ್ಯವಾಗಿಡಿ.
ನೆಟ್ ವರ್ಕಿಂಗ್‌ಗಾಗಿ ಸದಾ ವರ್ಚುವಲ್ ಕೀಬೋರ್ಡ್‌ನ್ನೇ ಉಪಯೋಗಿಸಿ.
ಎಚ್ಚರಿಕೆ
ಎಟಿಎಂ ಯಂತ್ರವನ್ನು ಬಳಸುವ ಸಂದರ್ಭದಲ್ಲಿ ಆತುರ ತೋರಿಸಬೇಡಿ. ಹಣ ತೆಗೆದು, ರಸೀದಿ ಪಡೆದ ಬಳಿಕ ಕ್ಯಾನ್ಸಲ್ ಬಟನ್‌ಒತ್ತಲು ಮರೆಯಬೇಡಿ.
ಒಂದುವೇಳೆ ಎಟಿಎಂ ಯಂತ್ರ ಹ್ಯಾಂಗ್ ಆದರೆ ಆ ಯಂತ್ರವನ್ನು ಬಿಟ್ಟು ಮತ್ತೊಂದು ಎಟಿಎಂಗೆ ಹೋಗಿ. ಎಟಿಎಂಗಾಗಿ ಇರುವ ಹೆಲ್ಪ್ ಲೈನ್‌ಗೆ ಮಾಹಿತಿ ಕೊಡಿ ಅಥವಾ ಅಲ್ಲಿರುವ ಸೆಕ್ಯುರಿಟಿ ಗಾರ್ಡ್‌ಗೆ ಈ ಬಗ್ಗೆ ತಿಳಿಸಿ.
ಎಟಿಎಂ ಯಂತ್ರದಿಂದ ಹಣವನ್ನು ಡ್ರಾ ಮಾಡಿಕೊಂಡ ಬಳಿಕ ಕಾರ್ಡ್‌ನ್ನು ಜೇಬಿಗೆ ಹಾಕಿಕೊಳ್ಳಲು ಮರೆಯಬೇಡಿ. ಎಟಿಎಂ ರಸೀದಿಯನ್ನು ಅಲ್ಲಿಯೇ ಬಿಸಾಡುವ ತಪ್ಪು ಮಾಡಬೇಡಿ. ಅದನ್ನು ನಿಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಳ್ಳಿ. ತಿಂಗಳ ಸ್ಟೇಟ್‌ಮೆಂಟ್ ಜೊತೆಗೆ ಹೋಲಿಸಿ ನೋಡಿ. ಇದರಿಂದ ಕಾರ್ಡಿನ ಅನಧಿಕೃತ ಬಳಕೆಯ ಮೇಲೆ ಕಡಿವಾಣ ಬೀಳುತ್ತದೆ.
ಎಷ್ಟೋ ಸಲ ಎಟಿಎಂ ಯಂತ್ರದಲ್ಲಿ ಪಿನ್, ಅಮೌಂಟ್ ಹಾಕಿದ ಬಳಿಕ ಸ್ಲಿಪ್ ಅಂತೂ ಹೊರಬರುತ್ತದೆ. ಆದರೆ ಹಣ ಮಾತ್ರ ಬಂದಿರುವುದಿಲ್ಲ. ನಿಮ್ಮ ಖಾತೆಯಿಂದ ಹಣ ಡಿಡಕ್ಟ್ ಆಗಿರುತ್ತದೆ. ಇಂತಹ ಸ್ಥಿತಿಯಲ್ಲಿ ಡೆಬಿಟ್ ಕಾರ್ಡ್ ಜಾರಿ ಮಾಡಿದ ಕಂಪನಿಗೆ ದೂರು ನೀಡಿ.
ಮೇ, 2011ರ ಆರ್‌ಬಿಐ ನಿರ್ದೇಶನದ ಪ್ರಕಾರ, ದೂರು ಬಂದ 7 ದಿನಗಳೊಳಗೆ ಬ್ಯಾಂಕಿಗೆ ಸಂಬಂಧಪಟ್ಟ ಗ್ರಾಹಕನಿಗೆ ಹಣ ವಾಪಸ್ ಮಾಡಬೇಕಾಗುತ್ತದೆ. ಒಂದುವೇಳೆ 7 ದಿನಗಳೊಳಗೆ ಬ್ಯಾಂಕು ಗ್ರಾಹಕನ ಖಾತೆಗೆ ಹಣ ಮರಳಿಸದೇ ಇದ್ದರೆ ಪ್ರತಿದಿನ 100 ರೂ.ನಂತೆ ದಂಡ ತೆರಬೇಕಾಗುತ್ತದೆ.
ಎಟಿಎಂ ಯಂತ್ರದಲ್ಲಿ ಕಾರ್ಡ್‌ನ್ನು ಬಳಸುವಾಗ ಪಕ್ಕದಲ್ಲಿ ನಿಮ್ಮನ್ನು ಯಾರಾದರೂ ಗಮನಿಸುತ್ತಿದ್ದಾರೆಯೇ ಎಂಬುದನ್ನು ನೋಡಿಕೊಳ್ಳಿ. ಏಕೆಂದರೆ ಅವರು ನಿಮಗೆ ಗೊತ್ತಿಲ್ಲದಂತೆಯೇ ನಿಮ್ಮ ಪಿನ್ ನಂಬರ್ ನಮೂದಿಸಿಟ್ಟುಕೊಳ್ಳಬಹುದು.
ಒಂದುವೇಳೆ ಎ.ಟಿ.ಎಂ. ಕಾರ್ಡ್ ಹಾಕಿದ ಬಳಿಕ ಯಂತ್ರ `ಇನ್‌ವ್ಯಾಲಿಡ್ ಕಾರ್ಡ್’ ಎಂದು ತೋರಿಸಿದರೆ ಕಾರ್ಡ್‌ನ್ನು ಪುನಃ ಟ್ರೈ ಮಾಡಿ. ಎಷ್ಟೋ ಸಲ ತಾಂತ್ರಿಕ ಕಾರಣದಿಂದ ಹೀಗಾಗುತ್ತದೆ. ಆದಾಗ್ಯೂ ಸಮಸ್ಯೆ ಬಗೆಹರಿಯದಿದ್ದರೆ ಬ್ಯಾಂಕಿನಿಂದ ಕಾರ್ಡ್‌ನ್ನು ಬದಲಿಸಿಕೊಳ್ಳಿ.
ಎ.ಟಿ.ಎಂ. ಕಾರ್ಡ್ ಕಳೆದುಹೋದಾಗ ಟೋಲ್ ಫ್ರೀ ನಂಬರ್‌ಗೆ ಫೋನ್ ಮಾಡಿ ಹಾಗೂ ಕಾರ್ಡಿನ ಪೂರ್ಣ ಮಾಹಿತಿ ಕೊಡಿ. ದೂರು ಕೊಟ್ಟ ಬಳಿಕ ಅದರ ನಂಬರ್ ಅವಶ್ಯವಾಗಿ ತೆಗೆದುಕೊಳ್ಳಿ.
ಎ.ಟಿ.ಎಂ. ಕಾರ್ಡ್‌ನ ಪಿನ್ ನಂಬರ್‌ನ್ನು ನೆನಪಿಟ್ಟುಕೊಳ್ಳಿ. ನಿಮ್ಮ ಮನೆ ವಿಳಾಸ, ಹೆಸರು ಅಥವಾ ಹುಟ್ಟುಹಬ್ಬವನ್ನು ಆಧರಿಸಿ ಪಿನ್ ನಂಬರ್ ಇಟ್ಟುಕೊಳ್ಳಬೇಡಿ.
ಎಟಿಎಂನಿಂದ ಹಣ ತೆಗೆಯಲು ರಾತ್ರಿ ಸಮಯದಲ್ಲಿ ಹೋದಾಗ ಜೊತೆಗೆ ಯಾರನ್ನಾದರೂ ಕರೆದುಕೊಂಡು ಹೋಗಿ. ನಿಮ್ಮ ಆಸುಪಾಸು ಯಾರಾದರೂ ಸಂದೇಹಾಸ್ಪದ ವ್ಯಕ್ತಿಗಳು ಕಂಡುಬಂದರೆ, ಅಲ್ಲಿ ಹೆಚ್ಚು ಹೊತ್ತು ನಿಲ್ಲದೆ ಬೇಗ ಹೊರಟುಬಿಡಿ. ಎಟಿಎಂನಲ್ಲಿ ಸುರಕ್ಷತೆ ವಹಿಸುವುದು ಹೆಚ್ಚು ಮಹತ್ವದ್ದು.
ಬೆಂಗಳೂರಿನ ಎಟಿಎಂನಲ್ಲಿ ನಡೆದ ಮಹಿಳೆಯ ಮೇಲಿನ ಹಲ್ಲೆಯ ಘಟನೆಯ ಬಗ್ಗೆ ಸ್ವಲ್ಪ ನೆನಪಿಸಿಕೊಂಡು ಎಚ್ಚರದಿಂದಿರಿ.
ರಾತ್ರಿ ನಿರ್ಜನ ಪ್ರದೇಶದಲ್ಲಿರುವ ಎಟಿಎಂಗೆ ಹೋಗುವುದನ್ನು ಆದಷ್ಟು ತಡೆಯಿರಿ. ಸೆಕ್ಯೂರಿಟಿ ಗಾರ್ಡ್ ಇರುವ ಎಟಿಎಂನಲ್ಲೇ ಹಣ ತೆಗೆಯಿರಿ.
– ವನಿತಾ