ನಿಮಗೆ ಈ ವಿಷಯ ಆಶ್ಚರ್ಯ ಎನಿಸಬಹುದು, `ಕೌನ್‌ ಬನೇಗಾ ಕರೋಡ್‌ಪತಿ’ ಹಿಂದಿ ಅವತರಣಿಕೆಯಲ್ಲಿ ಭಾಗವಹಿಸಿ ಮೊದಲ ಸಲ ಕೋಟಿ ಬಹುಮಾನ ಗಳಿಸಿದ ಒಬ್ಬ ಮಹಿಳೆ, ಯಾವ ಬ್ಯಾಂಕಿನಲ್ಲೂ ಒಂದು ಖಾತೆ ಸಹ ಹೊಂದಿರಲಿಲ್ಲಂತೆ! ಈ ಸರಣಿಯ 4ನೇ ಸೀರೀಸ್‌ನಲ್ಲಿ ಕೋಟಿ ಗಳಿಸಿದ ಈಕೆ ಜಾರ್ಖಂಡ್‌ ರಾಜ್ಯದ ಗಿರೀಡೀಹ್‌ ಎಂಬ ಊರಿನವರು. ಹೊಲಿಗೆಯಂತ್ರ ಇರಿಸಿಕೊಂಡು, ಕಸೂತಿ ಇತ್ಯಾದಿ ಮಾಡುತ್ತಾ ಗಳಿಸುತ್ತಿದ್ದ ಈಕೆ, ತನ್ನಂಥವರಿಗೇಕೆ ಬ್ಯಾಂಕ್‌ ಖಾತೆ ಎಂಬಂತೆ ಇದ್ದುಬಿಟ್ಟಿದ್ದರು.

ಅಮಿತಾಬ್ ಬಚ್ಚನ್‌ ಈಕೆಯ ಕುರಿತು ತಮ್ಮ ಬ್ಲಾಗ್‌ನಲ್ಲಿ ಪ್ರಸ್ತಾಪಿಸುತ್ತಾ, ಭಾರತದ ಹೃದಯ ಇರುವುದು ಹಳ್ಳಿ, ಸಣ್ಣ ಊರುಗಳಲ್ಲಿ. ಅವರುಗಳಿಗೆ ಸೂಕ್ತ ಅವಕಾಶ ನೀಡಿದರೆ ಯಾವ ನಗರಾಸಿಗಳಿಗೂ ಕಡಿಮೆ ಇಲ್ಲದಂತೆ ಮಿಂಚಬಲ್ಲರು ಎಂದಿದ್ದರು.

ಒಂದು ವಿಡಂಬನೆ

ದೇಶದ ಸುಮಾರು ಶೇ.74ರಷ್ಟು ಮಹಿಳೆಯರಿಗೆ ಯಾವುದೇ ಬ್ಯಾಂಕಿನಲ್ಲೂ ಖಾತೆ ಇಲ್ಲ. 2012ರ ವಿಶ್ವ ಬ್ಯಾಂಕಿನ ಒಂದು ಸರ್ವೇ ಪ್ರಕಾರ, ಭಾರತದಲ್ಲಿ ಕೇವಲ ಶೇ.26ರಷ್ಟು ಮಹಿಳೆಯರು ಮಾತ್ರವೇ ತಮ್ಮದೇ ಆದ ಬ್ಯಾಂಕಿನ ಖಾತೆ ಹೊಂದಿರುತ್ತಾರಂತೆ. ಹೀಗಾಗಲು ಮುಖ್ಯ ಕಾರಣ, ದೇಶದ ಶೇ.35ರಷ್ಟು ಮಹಿಳೆಯರು ಇನ್ನೂ ಅನಕ್ಷರಸ್ಥರು. ಹೆಚ್ಚಿನ ಕುಟುಂಬಗಳಲ್ಲಿ ಹೆಂಗಸರಿಗೇಕೆ ಹಣಕಾಸಿನ ವ್ಯವಹಾರ ಎಂದು ಅವರನ್ನು ದೂರ ಇರಿಸಲಾಗುತ್ತದೆ.

ವಿಶ್ವಸಂಸ್ಥೆಯ ಎಷ್ಟೋ ಸಂಶೋಧನೆಗಳ ಪ್ರಕಾರ, ಮಹಿಳೆಯರು ಸಂಪಾದನೆ ಆರಂಭಿಸಿ ತಮ್ಮದೇ ಆದ ಖಾತೆ ಹೊಂದಿದ್ದರೆ, ಸಹಜವಾಗಿಯೇ ಕುಟುಂಬದಲ್ಲಿ ಅವರ ವರ್ಚಸ್ಸು ಹೆಚ್ಚುತ್ತದೆ, ಅದೇ ತರಹ ದೇಶದ ಆರ್ಥಿಕ ಸ್ಥಿತಿಯೂ ಉತ್ತಮಗೊಳ್ಳುತ್ತದೆ. ಬ್ಯಾಂಕ್‌ ಖಾತೆ ಎಂಬುದು ಯಾವುದೇ ಮಹಿಳೆಯ ಜೀವನಶೈಲಿ ಸುಧಾರಿಸುವುದಲ್ಲದೆ, ಆಕೆಗೆ ಹೆಚ್ಚಿನ ಆತ್ಮವಿಶ್ವಾಸವನ್ನೂ ತುಂಬುತ್ತದೆ.

ಬ್ಯಾಂಕ್ಖಾತೆ ಅಸಾಧ್ಯದ ಮಾತಲ್ಲ

ಗ್ರಾಮೀಣ, ಅನಕ್ಷರಸ್ಥ, ಅನಾಗರಿಕ ಮಹಿಳೆಯರು ಬ್ಯಾಂಕ್‌ ಖಾತೆ ಬೇಕಾಗಿಯೇ ಇಲ್ಲ ಅಂದುಕೊಳ್ಳುತ್ತಾರೆ. ಖಾತೆ ತೆರೆಯುವುದು ಮತ್ತು ಅದನ್ನು ನಿಭಾಯಿಸುವುದು ಕಷ್ಟಕರ ಕೆಲಸ ಎಂದೇ ಭಾವಿಸುತ್ತಾರೆ.`ಯಾರು ಆ ಫಾರ್ಮ್ ತುಂಬಿಸುತ್ತಾರೆ? ಯಾರು ಬ್ಯಾಂಕಿಗೆ ಹೋಗಿ ಆ ಸಾಲುಗಳಲ್ಲಿ ನಿಲ್ಲುತ್ತಾರೆ? ನಮ್ಮ ಬಳಿ ಖರ್ಚು ಮಾಡಿ ಹಣ ಉಳಿದರೆ ತಾನೇ ಅದನ್ನು ಬ್ಯಾಂಕಿಗೆ ಹೋಗಿ ಕಟ್ಟಬೇಕಾಗುವುದು? ಇನ್ನೇಕೆ ಖಾತೆ? ನನ್ನದು ಅಂತ ಏನು ಹಣ ಸಿಗತ್ತೋ ಅದು ನನ್ನ ಕುಟುಂಬಕ್ಕೇ ಸೇರಬೇಕಾದ್ದು ತಾನೇ?’ ಮುಂತಾಗಿ ಆಲೋಚಿಸುವ ಮಹಿಳೆಯರು ಬ್ಯಾಂಕ್‌ ಖಾತೆ ತೆರೆಯಲು ಹೋಗುವುದೇ ಇಲ್ಲ. ಅವರು ಅಲ್ಪ ಪ್ರಮಾಣದಲ್ಲಿ ಏನೇ ಸಂಪಾದಿಸಲಿ, ಅದನ್ನು ತಮ್ಮ ಕುಟುಂಬಕ್ಕಾಗಿಯೇ ಖರ್ಚು ಮಾಡಿಬಿಡುತ್ತಾರೆ. ಜೊತೆಗೆ ಆರ್ಥಿಕವಾಗಿ ಮನೆಯವರ ಮೇಲೆ ನಿರ್ಭರರಾಗಿರುತ್ತಾರೆ. ಇದರಿಂದ ಅವರ ಆರ್ಥಿಕ ಸ್ಥಿತಿ ಮತ್ತಷ್ಟು ದರ್ಬಲವಾಗುತ್ತದೆ, ಆತ್ಮವಿಶ್ವಾಸ ಕುಂಠಿತಗೊಳ್ಳುತ್ತದೆ.

ಐಡಿಬಿಐ ಬ್ಯಾಂಕಿನ ರಿಲೇಷನ್‌ಶಿಪ್‌ ಮ್ಯಾನೇಜರ್‌ ಸ್ವಾತಿ ಹೇಳುತ್ತಾರೆ, “ಯಾವ ಮಹಿಳೆಯೇ ಆಗಲಿ, ಯಾವ ರಾಷ್ಟ್ರೀಕೃತ ಬ್ಯಾಂಕ್‌ ಆದರೂ ಸರಿ, ಕನಿಷ್ಠ ರೂ.250 ಕಟ್ಟಿ ತನ್ನ ಖಾತೆ ತೆರೆಯಬಹುದು.

“ಈಗಂತೂ ಪ್ರಧಾನಮಂತ್ರಿಯವರೇ ಜನಸಾಮಾನ್ಯರಿಗಾಗಿ ಆರಂಭಿಸಿರುವ `ಜನ್‌ಧನ್‌’ ಯೋಜನೆ ಮೂಲಕ ಖಾತೆ ತೆರೆಯಲು ಅವಕಾಶವಿದೆ, ಇದಕ್ಕೆ ಕನಿಷ್ಠ ಮೊತ್ತ ಕಟ್ಟು ಅಗತ್ಯ ಇಲ್ಲ.

“ತಮ್ಮ ಐ.ಡಿ. ಪ್ರೂಫ್‌ಗಾಗಿ ವೋಟರ್‌ ಐಡಿ, ಆಧಾರ್‌ ಕಾರ್ಡ್‌ ಕೊಡಬಹುದು. ಅವರು ಅಶಿಕ್ಷಿತರಾಗಿದ್ದರೆ ಹೆಬ್ಬೆರಳನ್ನು ಒತ್ತಿಯೂ ಖಾತೆ ತೆರೆಯಬಹುದು. ಇದಕ್ಕಾಗಿ ಅಂಥವರು ಬ್ಯಾಂಕಿನಲ್ಲಿ ಫಾರ್ಮ್ ಭರ್ತಿ ಮಾಡಬೇಕಾದ ರಗಳೆಯೂ ಇಲ್ಲ, ಅಲ್ಲಿನ ಅಧಿಕಾರಿಗಳೇ ಅದನ್ನು ಮಾಡಿಕೊಡುತ್ತಾರೆ.

“ಒಂದು ಮನೆಯಲ್ಲಿ ಕೆಲಸ ಮಾಡುವ ಕೆಲಸದ ಹೆಂಗಸು, ತಿಂಗಳಿಗೆ ಕನಿಷ್ಠ ರೂ.300 ಉಳಿತಾಯ ಮಾಡಿದ್ದನ್ನು ಮನೆಯಲ್ಲಿಡುವ ಬದಲು ಬ್ಯಾಂಕಿನಲ್ಲಿಟ್ಟರೆ ಎಷ್ಟೋ ಸುರಕ್ಷಿತವಾಗಿರುತ್ತದೆ. ಹಾಗೇ ಒಂದು ಆರ್‌.ಡಿ. ಖಾತೆ ತೆರೆದರೆ ಹೆಚ್ಚಿನ ಬಡ್ಡಿ ಸಿಗುತ್ತದೆ. ಹೀಗೆ ಮನೆಯಲ್ಲಿ ಕುಡುಕ ಗಂಡನಿಂದ ಹಣ ಸುರಕ್ಷಿತವಾಗಿರುತ್ತದೆ, ಜೊತೆಗೆ ಆಕೆಯ ಮೂಲ ಬಂಡವಾಳ ದಿನೇದಿನೇ ಹೆಚ್ಚುತ್ತಿರುತ್ತದೆ.”

ಮಹಿಳೆಯರದೇ ಆದ ಬ್ಯಾಂಕ್‌ ಮಹಿಳೆಯರ ಸಶಕ್ತೀಕರಣದ ಉದ್ದೇಶದಿಂದ ದೇಶದ ಅರ್ಧ ಜನಸಂಖ್ಯೆಗೂ ಹೆಚ್ಚಿನವರಿಗೆ ವಿಶೇಷ ಬ್ಯಾಂಕಿಂಗ್‌ ಸೇವೆ ಒದಗಿಸಬೇಕೆನ್ನುವ ದೃಷ್ಟಿಯಿಂದ, ಸರ್ಕಾರ ಭಾರತೀಯ ಮಹಿಳಾ ಬ್ಯಾಂಕಿನ ಯೋಜನೆ ಶುರು ಮಾಡಿತು. ಈ ಬ್ಯಾಂಕಿನ ಎಲ್ಲಾ ಕೆಲಸಗಳನ್ನೂ ಮಹಿಳೆಯರೇ ನಿರ್ವಹಿಸುವರು. ಈ ಬ್ಯಾಂಕಿನಲ್ಲಿ ಮಹಿಳೆಯರು ಕೇವಲ ತಮ್ಮ ಖಾತೆ ಮಾತ್ರ ಶುರು ಮಾಡುವುದಲ್ಲದೆ ವಿಮೆ, ಪೆನ್ಶನ್‌ ಇತ್ಯಾದಿ ಸೌಲಭ್ಯಗಳನ್ನೂ ಪಡೆಯಬಹುದಾಗಿದೆ.

ಮಹಿಳೆಯರು ಈ ಬ್ಯಾಂಕುಗಳಿಂದ ತಮ್ಮ ಸ್ವಂತ ಉದ್ದಿಮೆಗಳಾದ ಬ್ಯೂಟಿಪಾರ್ಲರ್‌, ಕಸೂತಿ, ಟೇಲರಿಂಗ್‌ ಇತ್ಯಾದಿಗಳ ಜೊತೆ ಸಣ್ಣಪುಟ್ಟ ಗೃಹೋದ್ಯಮಗಳಿಗೂ ಸಾಲ ಪಡೆಯಬಹುದು. ಮಹಿಳಾ ಶಿಕ್ಷಣಕ್ಕಾಗಿಯೂ ಈ ಬ್ಯಾಂಕುಗಳಿಂದ 10 ಲಕ್ಷದವರೆಗೂ ಸಾಲದ ಸೌಲಭ್ಯ ಪಡೆಯಬಹುದು. ಅವರುಗಳಿಗೆ 4 ಲಕ್ಷದವರೆಗಿನ ಸಾಲಕ್ಕೆ ಏನೂ ಬಡ್ಡಿ ಕಟ್ಟಬೇಕಿಲ್ಲ. ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಶೇ.5ರಷ್ಟು ಬಡ್ಡಿ ಕಟ್ಟಬೇಕು. ಮಹಿಳಾ ಬ್ಯಾಂಕುಗಳ ಮುಖ್ಯ ಉದ್ದೇಶವೇ ಮಧ್ಯಮ ಹಾಗೂ ಕೆಳವರ್ಗದ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ, ಸಮಾಜದಲ್ಲಿ ಅವರನ್ನು ಸದೃಢರನ್ನಾಗಿಸುವುದಾಗಿದೆ. ಬ್ಯಾಂಕ್‌ ಅವರಿಗೆ ಪ್ರೊಫೆಶನಲ್ ಸಲಹೆಗಳನ್ನೂ ನೀಡುತ್ತದೆ.

ಲಾಭಗಳು ಅನೇಕ

ಇಂದಿನ ಫಾಸ್ಟ್ ಯುಗದಲ್ಲಿ ಬ್ಯಾಂಕಿನ ಖಾತೆ ಮಹಿಳೆಯರ ಅನೇಕ ತೊಂದರೆಗಳನ್ನು ಕ್ಷಣ ಮಾತ್ರದಲ್ಲಿ ನಿವಾರಿಸಬಲ್ಲದು. ಅವರ ಜೀವನಶೈಲಿಯನ್ನು ಎಷ್ಟೋ ಸ್ಮಾರ್ಟ್‌ ಆಗಿ ಸುಧಾರಿಸುವಲ್ಲಿ ನೆರವಾಗುತ್ತದೆ. ಅವರ ದಿನನಿತ್ಯದ ಎಷ್ಟೋ ಜಂಜಾಟಗಳು ತಾನಾಗಿ ತಗ್ಗುತ್ತವೆ. ಬ್ಯಾಂಕ್‌ ಅಕೌಂಟ್‌ನ ಜೊತೆಗೆ ದೊರಕಿದ ಡೆಬಿಟ್‌ ಕಾರ್ಡ್‌ನಿಂದ ಆಕೆ ಎಲ್ಲಿ, ಯಾವಾಗ ಬೇಕಾದರೂ ಶಾಪಿಂಗ್‌ ಮಾಡಬಹುದು. ರೈಲು, ವಿಮಾನಗಳ ಟಿಕೆಟ್‌ ಬುಕಿಂಗ್‌, ಬೇಕಾದ ವಸ್ತುಗಳ ಆರ್ಡರ್‌ ಪ್ಲೇಸ್‌ಮೆಂಟ್‌ ಸುಲಭವಾಗುತ್ತದೆ. ಎಟಿಎಂ ಫೆಸಿಲಿಟಿಯಿಂದಾಗಿ ಚೆಕ್‌ನ ರಗಳೆ ಇಲ್ಲದೆ ಹಣ ಪಡೆಯಬಹುದು. ಮೊಬೈಲ್‌ಇಂಟರ್‌ನೆಟ್ ಬ್ಯಾಂಕಿಂಗ್‌ನಿಂದ ಯಾವಾಗ ಬೇಕಾದರೂ, ದೂರದಲ್ಲಿರುವ ಬಂಧುಮಿತ್ರರಿಗೆ ಹಣ ಕಳುಹಿಸಿಕೊಡಲು ಫಂಡ್‌ ಟ್ರಾನ್ಸ್ ಫರ್‌ನ ಲಾಭ ಪಡೆಯಬಹುದು. ಇದಕ್ಕಾಗಿ ಆಕೆಯ ಬಳಿ ಆ ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್‌ (ಇಂಡಿಯನ್‌ ಫೈನಾನ್ಶಿಯ್‌ ಸಿಸ್ಟಂ ಕೋಡ್‌) ಇರಬೇಕಷ್ಟೇ. ಆಗ ಹಣದ ರವಾನೆ ಅತಿ ಸುಲಭ. ಡ್ರಾಫ್ಟ್ ಗೆ ಹೋಲಿಸಿದರೆ ಈ ಕೆಲಸ ಬಲು ಸರಳ. ಇದರಿಂದ ಸಕಾಲದಲ್ಲಿ ಬೇಗ ಹಣದ ರವಾನೆ ಆಗುತ್ತದೆ.

ಎಷ್ಟೋ ಸಲ ಬ್ಯಾಂಕ್‌ ಶಾಪಿಂಗ್‌ ಅನುಕೂಲಕ್ಕೆಂದು ಕ್ಯಾಶ್‌ ಚೆಕ್‌ನ ಆಫರ್‌ ನೀಡುತ್ತದೆ. ಇದರ ಹೊರತಾಗಿ ಎಲ್ಲಾ ತರಹದ ಲೇವಾದೇವಿ ಮಾಹಿತಿಯೂ ಎಸ್‌ಎಂಎಸ್‌ ಅಲರ್ಟ್‌ ಮೂಲಕ ಅಪ್‌ಡೇಟ್‌ ಆಗುತ್ತಿರುತ್ತದೆ. ಒಂದು ಬ್ಯಾಂಕಿನ ಖಾತೆಯಿಂದ ಇಷ್ಟೆಲ್ಲ ಲಾಭಗಳಿರುವಾಗ, ಆ ಖಾತೆ ತೆರೆಯಲು ಹಿಂಜರಿಕೆ ಏಕೆ?

ಅದೇ ತರಹ ಗ್ರಾಮೀಣ ಮಹಿಳೆಯರ ಬ್ಯಾಂಕ್‌ ಖಾತೆ ತೆರೆಯುವುದು ಹಾಗೂ ಅದರ ಪೂರ್ಣ ಲಾಭ ಪಡೆಯುವ ವಿಷಯದಲ್ಲಿ, ಅವರನ್ನು ಅಗತ್ಯವಾಗಿ ಅಕ್ಷರಸ್ಥರನ್ನಾಗಿ ಮಾಡಲೇಬೇಕಾಗುತ್ತದೆ. ಮಹಿಳೆಯರು ಸುಶಿಕ್ಷಿತರಾಗಿ, ಜಾಗರೂಕರಾದಾಗ ಮಾತ್ರ ಬ್ಯಾಂಕಿನ ವ್ಯವಹಾರಗಳಿಂದ ಲಾಭ ಪಡೆಯಲು ಸಾಧ್ಯ.

ಹೆಚ್ಚು ಹೆಚ್ಚು ಲಾಭಗಳು

ಕಷ್ಟಪಟ್ಟು ಗಳಿಸಿದ ಹಣಕ್ಕೆ ಎಷ್ಟು ಬೆಲೆ ಎಂದು ಅದನ್ನು ಸಂಪಾದಿಸಿದವರಿಗೆ ಮಾತ್ರ ಗೊತ್ತು. ನಿಮ್ಮ ಆ ಹಣವನ್ನು ಬ್ಯಾಂಕ್‌ಖಾತೆಗಳಲ್ಲಿರಿಸಿ ಹೇಗೆ ಹೆಚ್ಚು ಹೆಚ್ಚು ಲಾಭ ಗಳಿಸಬಹುದೆಂದು ತಿಳಿಯಲು ಒಂದಿಷ್ಟು ಸಲಹೆಗಳು :

ಸಣ್ಣ ಉಳಿತಾಯ (ಎಸ್‌.ಬಿ) ಖಾತೆಯಲ್ಲೇ ಎಲ್ಲಾ ಹಣ ಇರಿಸಬೇಡಿ. ಏಕೆಂದರೆ ಇದರಲ್ಲಿ ಸಿಗುವ ಬಡ್ಡಿ ರೆಕವರಿಂಗ್‌ ಡೆಪಾಸಿಟ್‌ಮತ್ತು ಫ್ಲೆಕ್ಸಿ ಅಕೌಂಟ್‌ಗಳಿಗೆ ಹೋಲಿಸಿದಾಗ ಕಡಿಮೆ ಇರುತ್ತದೆ. ಎಸ್‌ಬಿ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಮೇಂಟೇನ್‌ಮಾಡುತ್ತಾ, ಬಾಕಿ ಹಣದಿಂದ ಆರ್‌ಡಿ ಅಥವಾ ಫ್ಲೆಕ್ಸಿ ಅಕೌಂಟ್‌ ತೆರೆಯಿರಿ. ಫ್ಲೆಕ್ಸಿ ಅಕೌಂಟ್‌ ಎಂಬುದು ನಿಮ್ಮ ಎಸ್‌ಬಿಗೆ ಲಿಂಕ್ಡ್ ಆಗಿರುತ್ತದೆ. ಹೀಗಾಗಿ ಎಸ್‌ಬಿಯಲ್ಲಿ ಕನಿಷ್ಠ ಹಣವಿರಿಸಿ, ಇದಕ್ಕೆ ರವಾನೆ ಮಾಡಿಕೊಳ್ಳಬಹುದು, ಅದರಿಂದ ನಿಮಗೆ ಹೆಚ್ಚಿನ ಬಡ್ಡಿ ಸಿಗುತ್ತದೆ.

ನೀವು ಬ್ಯಾಂಕ್‌ ಖಾತೆಯಿಂದ ಎಲೆಕ್ಟ್ರಾನಿಕ್‌ ಕ್ಲಿಯರಿಂಗ್‌ ಸರ್ವೀಸ್‌ (ಇಸಿಎಸ್‌) ಸೌಲಭ್ಯ ಪಡೆದಿದ್ದರೆ, ನಿಮ್ಮ ಖಾತೆಯಲ್ಲಿ ಸದಾ ಸಾಕಷ್ಟು ಬ್ಯಾಲೆನ್ಸ್ ಇರಿಸಿಕೊಳ್ಳಿ.

ಬ್ಯಾಂಕ್‌ ನೀಡಿದ ಸಾಲಕ್ಕೆ ಸಕಾಲಕ್ಕೆ ಕಂತುಗಳಲ್ಲಿ ಮರುಪಾವತಿ ಮಾಡಿ. ಇಲ್ಲದಿದ್ದರೆ ಅನಗತ್ಯವಾಗಿ ದಂಡ ತೆರಬೇಕಾದೀತು.

ಬ್ಯಾಂಕ್‌ ಮೂಲಕ ಪಡೆದ ಕ್ರೆಡಿಟ್‌ ಕಾರ್ಡ್‌ ಸಹ ನಿಮಗೆ ಹೆಚ್ಚಿನ ಲಾಭ ಗಳಿಸಿಕೊಡುತ್ತದೆ. ನಿಮ್ಮ ಕ್ರೆಡಿಟ್‌ ಕಾರ್ಡ್‌ನ ಡೇಟ್‌ ಆಫ್ ಸ್ಟೇಟ್‌ಮೆಂಟ್‌ 10ನೇ ತಾರೀಕು ಇದ್ದರೆ, ಅದಾದ ಮೇಲೆ ಶಾಪಿಂಗ್‌ ಮಾಡಿ. ಇದರಿಂದಾಗಿ ನಿಮಗೆ ಬಿಲ್ ಮೊತ್ತ ಸಲ್ಲಿಸಲು ಅನುಕೂಲಕರ ಕಾಲಾವಕಾಶ ಸಿಗುತ್ತದೆ. ಕ್ರೆಡಿಟ್‌ ಕಾರ್ಡ್‌ ಕಂಪನಿ ವತಿಯಿಂದ ದೊರಕಿದ ಕ್ಯಾಶ್‌ ಬ್ಯಾಕ್‌ ಆಫರ್‌ನ ಲಾಭ ಪಡೆದುಕೊಳ್ಳಿ. ಎಷ್ಟೋ ಕಂಪನಿಗಳು 25% ಕ್ಯಾಶ್‌ ಬ್ಯಾಕ್‌ ಆಫರ್‌ ನೀಡುತ್ತವೆ.

ಶಾಪಿಂಗ್‌ ಮಾಡುವಾಗ ಒನ್‌ ಟೈಂ ಪೇಮೆಂಟ್‌ನಿಂದ ಪಾರಾಗ ಬಯಸಿದರೆ, ಇಎಂಐ ಮಾಡಿಸಿಕೊಳ್ಳಿ. ಏಕೆಂದರೆ ಇದರ ಬಡ್ಡಿ ದರ ಎಷ್ಟೋ ಕಡಿಮೆ ಇರುತ್ತದೆ.

ಕರೆಂಟ್‌ ಅಕೌಂಟ್‌ನಿಂದ ಓವರ್‌ ಡ್ರಾಫ್ಟ್ ನ ಸೌಲಭ್ಯವನ್ನು ಆದಷ್ಟೂ ಕಡಿಮೆ ಪಡೆಯಿರಿ, ಏಕೆಂದರೆ ಇದರ ಮೇಲೆ ಬ್ಯಾಂಕ್‌ ಹೆಚ್ಚು ಬಡ್ಡಿ ವಸೂಲು ಮಾಡುತ್ತದೆ.

ಲಲಿತಾ ಗೋಪಾಲ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ