ಇತ್ತೀಚೆಗೆ ಎಲ್ಲದಕ್ಕೂ ಪಾರ್ಟಿ ಏರ್ಪಡಿಸುವುದು ಮಾಮೂಲಿಯಾಗಿದೆ. ಬಹಳಷ್ಟು ಜನರಿಗೆ ಪಾರ್ಟಿ ಅಟೆಂಡ್ ಮಾಡುವುದೇ ದೊಡ್ಡ ಟೈಂಪಾಸ್. ಪಾರ್ಟಿ ಅರೇಂಜ್ ಮಾಡಿಕೊಡುವುದೇ ಈಗ ದೊಡ್ಡ ವೃತ್ತಿಯಾಗಿದೆ. ಈಗೆಲ್ಲ ಚಿಟಿಕೆ ಹೊಡೆಯುವುಷ್ಟರಲ್ಲಿ ಎಲ್ಲ ಆನ್‌ಲೈನ್‌ನಲ್ಲಿ ಸಿಗುವುದರಿಂದ, ಪಾರ್ಟಿ ತಯಾರಿಗೆಂದೇ ಹಲವಾರು ವೆಬ್‌ಸೈಟ್‌ಗಳು ಲಭ್ಯವಿದ್ದು, ಅವು ಪಾರ್ಟಿಗೆ ಬೇಕಾದ ಎಲ್ಲಾ ಬಗೆಯ ಅಗತ್ಯಗಳನ್ನೂ ಪೂರೈಸುತ್ತವೆ. ನಿಮ್ಮ ಬಜೆಟ್‌ಗೆ ಹೊಂದುವಂಥದ್ದನ್ನು ಆರಿಸಿಕೊಳ್ಳಬೇಕಷ್ಟೆ. ಜೊತೆಗೆ ಜನರು ಪಾರ್ಟಿಗಳಿಗೆ ಅಗತ್ಯವಾದ ಶಿಷ್ಟಾಚಾರ ರೂಢಿಸಿಕೊಂಡು, ಆತಿಥೇಯರಿಗೆ ಸ್ವಲ್ಪ ತೊಂದರೆಯಾಗದಂತೆ ಪಾರ್ಟಿ ಎಂಜಾಯ್ ಮಾಡುವುದೂ ಅಷ್ಟೇ ಮುಖ್ಯ.ಬೆಂಗಳೂರಿನ 32ರ ಹರೆಯದ ಅವಿನಾಶ್ ತಮ್ಮ ಬಾಲ್ಯದಿಂದಲೇ ಪಾರ್ಟಿಗಳಿಗೆ ಹೋಗುತ್ತಿದುದ್ದರಿಂದ, ಕಳೆದ 10 ವರ್ಷಗಳಲ್ಲಿ ಅವರು ಅನೇಕ ಪಾರ್ಟಿಗಳನ್ನು ಆಯೋಜಿಸಿದ್ದಾರೆ. ಅದೇ ತರಹ 36ರ ಪ್ರಮೋದ್‌ಸಹ ತಮ್ಮ 16ನೇ ವರ್ಷದಿಂದಲೇ ಪಾರ್ಟಿಗಳನ್ನು ಅಟೆಂಡ್ ಮಾಡುತ್ತಿದ್ದಾರೆ. ಕಳೆದ 8-10 ವರ್ಷಗಳಿಂದ ವಾರಕ್ಕೆ 3 ಸಲ ಪಾರ್ಟಿಗಳಿಗೆ ಹೋಗುತ್ತಿರುತ್ತಾರೆ. ಹೀಗೆ ಪಾರ್ಟಿಗಳಿಗೆ ಹೋಗಿಬರುವುದು ಒಂದು ಹವ್ಯಾಸವಾಗಿ ಇದ್ದದ್ದು, ಈಗ ಇವರಿಬ್ಬರ ಕೆರಿಯರ್ ಆಗಿಹೋಗಿದೆ.
ಆರಂಭ : ಜನ ನಾನಾ ಕಾರಣಗಳಿಗಾಗಿ ಪಾರ್ಟಿ ಮಾಡುತ್ತಾ ಇರುತ್ತಾರೆ. ಅವಿನಾಶ್ ಹೇಳುವ ಪ್ರಕಾರ ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಪಾರ್ಟಿಗಳಿರುತ್ತವೆ. ಅಂದರೆ ಬರ್ತ್‌ಡೇ ಪಾರ್ಟಿ, ವೆಡ್ಡಿಂಗ್ ಪಾರ್ಟಿ, ಫೇರ್‌ವೆಲ್ ಪಾರ್ಟಿ, ಫ್ರೆಶರ್ ಪಾರ್ಟಿ, ಗೆಟ್ ಟು ಗೆದರ್ ಪಾರ್ಟಿ ಇತ್ಯಾದಿ.
ಇದರ ಕುರಿತಾಗಿ ಪ್ರವೋದ್ ಹೇಳುತ್ತಾರೆ, “ಜನ ಏನೇ ಕಾರಣ ಸಿಗಲಿ ಅಥವಾ ಕಾರಣ ಇಲ್ಲದಿರಲಿ, ಪಾರ್ಟಿ ಕೊಡುತ್ತಿರುತ್ತಾರೆ. ಎಷ್ಟೋ ಜನ ವಾರಾಂತ್ಯದಲ್ಲಿ ಶುಕ್ರವಾರ, ಶನಿವಾರ ತಪ್ಪದೇ ಪಾರ್ಟಿಗಳಿಗೆ ಹೋಗುತ್ತಾರೆ. ಇನ್ನು ಬ್ಯಾಚ್ಯುಲರ್ ಪಾರ್ಟಿಗಳ ಕುರಿತು ಹೇಳುವುದೇ ಬೇಡ. ಬರ್ತ್‌ಡೇ ಪಾರ್ಟಿಗಳು ಎಲ್ಲಕ್ಕಿಂತ ಕಾಮನ್. ಎಲ್ಲರಿಗೂ ತಮ್ಮ ಬರ್ತ್‌ಡೇ ಆಚರಿಸಿಕೊಳ್ಳುವ ಕಾತುರ. ನಮ್ಮ ಸಲಹೆ ಎಂದರೆ, ಪ್ರತಿ ಬರ್ತ್ ಡೇ ಪಾರ್ಟಿಯೂ ಸಾಧ್ಯವಾದಷ್ಟೂ ವಿಭಿನ್ನವಾಗಿರಬೇಕು. ಆಗ ಜನ ಸದಾ ಅದನ್ನು ನೆನಪಿನಲ್ಲಿಡುತ್ತಾರೆ.”
ಪಾರ್ಟಿಯ ಹವ್ಯಾಸವನ್ನೇ ತಮ್ಮ ಕೆರಿಯರ್ ಆಗಿಸಿಕೊಂಡ ಪ್ರಮೋದ್, “ಈಗೆಲ್ಲ ಇರುವಂತೆ ವಾಟರ್ ಪಾರ್ಕ್, ಅಮ್ಯೂಸ್‌ಮೆಂಟ್ ಪಾರ್ಕ್ ಅಂತೆಲ್ಲ ಹಿಂದೆ ಇರಲಿಲ್ಲ. ಆಗಿನಿಂದ ನಾವು ಪಾರ್ಟಿ ಮಾಡುತ್ತಿದ್ದೇವೆ. ನಾನು ಪದವಿ ಕಾಲೇಜಿನಲ್ಲಿದ್ದಾಗಲೇ ಕ್ಲಬ್‌ಗಳಲ್ಲಿ ಪಾರ್ಟಿ ಅರೇಂಜ್ ಮಾಡಿಸುತ್ತಿದ್ದೆ, ಜನರನ್ನು ಒಟ್ಟುಗೂಡಿಸುತ್ತಿದ್ದೆ. ಪಾರ್ಟಿ ಮುಂದುವರಿದಂತೆ ಜನರೊಂದಿಗಿನ ನೆಟ್‌ವರ್ಕ್‌ಹೆಚ್ಚು ಬೆಳೆಯಿತು. ಇದರಿಂದಾಗಿ ನನ್ನ ಫ್ರೆಂಡ್ಸ್ ಜೊತೆ ಹೊಸ ಹೊಸ ಕ್ಲಬ್‌ಗಳಿಗೆ ಹೋಗಿ ಸದಸ್ಯರಾಗಲು ಸುಲಭವಾಯ್ತು. ಪಾರ್ಟಿ ನಡೆಸುವುದು ಒಂದು ಮೋಜಿನ ಹವ್ಯಾಸವಾಗಿದೆ. ಅದು ಆಧುನಿಕ ಬದುಕಿನ ಒಂದು ಭಾಗವೇ ಆಗಿದೆ.
“ಪಾರ್ಟಿ ಕೊಡುವುದೆಂದರೆ ನನಗೆ ಭಾರಿ ಖುಷಿ, ನನ್ನ ಈ ಚಟುವಟಿಕೆಗಳಿಂದ ಬಹಳಷ್ಟು ಜನರಿಗೆ ಹೆಚ್ಚಿನ ಮನರಂಜನೆ ಸಿಗುತ್ತದೆ. ಕೆಲವೊಮ್ಮೆ ನಾನು ನನ್ನ ಸ್ವಂತ ಖರ್ಚಿನಿಂದಲೇ ಗೆಳೆಯರು ಮತ್ತು ಪರಿಚಿತರಿಗೆ ಪಾರ್ಟಿ ಕೊಡುತ್ತೇನೆ, ಮತ್ತೆ ಉಳಿದಂತೆ ಈವೆಂಟ್ ಮೂಲಕ ಏರ್ಪಡಿಸುತ್ತೇನೆ.”
ಅವಿನಾಶ್ ಹೈಸ್ಕೂಲಿನಿಂದಲೇ ಪಾರ್ಟಿಗಳಿಗೆ ಹೋಗುತ್ತಿದ್ದರಂತೆ. ಮುಂದೆ ಕಾಲೇಜಿನಲ್ಲಿ ಡಿಸ್ಕೋ ಥೆಕ್‌ಗಳಿಗೆ ಹೋಗುವ ಅಭ್ಯಾಸವಾದಾಗ, ಪಾರ್ಟಿ ಮಾಡುವುದು ಮಾಮೂಲಾಗಿ ಹೋಯಿತು. “ನನಗಂತೂ ಕೆಲಸ, ಮನರಂಜನೆ, ಪಾರ್ಟಿ….. ಎಲ್ಲದರಲ್ಲೂ ಬಹಳ ಖುಷಿ ಸಿಗುತ್ತದೆ. ಸ್ನೇಹಿತರ ಜೊತೆ ಹೆಚ್ಚು ಸಮಯ ಆನಂದವಾಗಿ ಕಳೆಯುವುದೇ ಪಾರ್ಟಿಯ ಮುಖ್ಯ ಉದ್ದೇಶ.”
ಸಮಯ ಮತ್ತು ಪುನರಾವರ್ತನೆ : ಪಾರ್ಟಿಗಾಗಿ ಸಮಯಾವಕಾಶ ಮಾಡಿಕೊಳ್ಳುವುದರ ಕುರಿತು ಅವಿನಾಶ್ ಹೇಳುತ್ತಾರೆ, “ನಾನು ಕೆಲಸದಲ್ಲಿ ಬಿಝಿ ಇರುವ ಕಾರಣ ತಿಂಗಳಲ್ಲಿ 1-2 ಸಲ ಮಾತ್ರ ಪಾರ್ಟಿಗೆ ಹೋಗುತ್ತೇನೆ. ಅದರಲ್ಲೂ ವಾರಾಂತ್ಯಗಳಲ್ಲಿ ಮಾತ್ರ. ನಾನು ಹೋಗುವ ಪಾರ್ಟಿಗಳು ಸಾಮಾನ್ಯವಾಗಿ 5-6 ಗಂಟೆಗಳಷ್ಟು ಸಮಯದ್ದು.“ಸಾಮಾನ್ಯವಾಗಿ ಪಾರ್ಟಿ ಪೂರ್ತಿ ಮುಗಿಯುವವರೆಗೂ ಇರುತ್ತೇನೆ. ಇಷ್ಟೆಲ್ಲ ಪಾರ್ಟಿ ಬಗ್ಗೆ ಮಾತನಾಡುತ್ತಿರುವ ಈತ ಪಕ್ಕಾ ಕುಡುಕ ಇರಬಹುದೇ ಎಂದು ನೀವು ಅಂದುಕೊಂಡರೆ, ಅದು ತಪ್ಪು. ನಾನು ಹಾಟ್ ಡ್ರಿಂಕ್ಸ್ ಮುಟ್ಟುವುದೇ ಇಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹೀಗಾಗಿ ಪಾರ್ಟಿ ಮುಗಿಸಿಕೊಂಡವರನ್ನು ಮನೆ ತಲುಪಿಸುವ ಜವಾಬ್ದಾರಿ ನಾನೇ ವಹಿಸಿಕೊಳ್ಳುತ್ತೇನೆ.”
ಈ ಕುರಿತು ಪ್ರಮೋದ್ ಹೇಳುತ್ತಾರೆ, “ಪಾರ್ಟಿಗಳಲ್ಲಿ ಮನರಂಜನೆ, ಮೋಜು ಇರುವವರೆಗೂ ಅಲ್ಲೇ ಇರುತ್ತೇನೆ. ಬೋರಿಂಗ್‌ಎನಿಸಿದ ನಂತರವೇ ಹೊರಡುವುದು. ಈ ಮಧ್ಯೆ ಬೇಕಾದಷ್ಟು ಜನರ ಪರಿಚಯ ಆಗಿರುತ್ತದೆ. ಮತ್ತೊಂದು ವಿಷಯ ಎಂದರೆ ಅದು ಎಂಥ ಪಾರ್ಟಿ ಎಂಬುದೂ ಮುಖ್ಯ. ಒಮ್ಮೊಮ್ಮೆ ಭಾನುವಾರಗಳಲ್ಲಿ 1-2 ಗಂಟೆವರೆಗಿನ ಬ್ರಂಚ್ ಪಾರ್ಟಿಯೂ ಇರುತ್ತದೆ. ಸಾಮಾನ್ಯವಾಗಿ ತಡರಾತ್ರಿ 10-11ಕ್ಕೆ ಶುರುವಾಗಿ ಮಾರನೇ ಮುಂಜಾನೆ 3-4 ಗಂಟೆಗೆ ಮುಗಿಯುವಂಥದೇ ಹೆಚ್ಚು. ಸಾಮಾನ್ಯವಾಗಿ ಕ್ಲಬ್ಬುಗಳಲ್ಲಿ ರಾತ್ರಿ 12 ಗಂಟೆವರೆಗೂ ಇರುತ್ತದೆ, ನಂತರ ಹತ್ತಿರದಲ್ಲೇ ಯಾರ ಮನೆಯಲ್ಲಾದರೂ ಆಫ್ಟರ್ ಪಾರ್ಟಿ ಇರುತ್ತದೆ.”
ಕೆರಿಯರ್ : ಪ್ರಮೋದ್ ಹೇಳುತ್ತಾರೆ, “ನಾನು 16ರ ಹರೆಯದಲ್ಲೇ ಪಾರ್ಟಿ ಅರೇಂಜ್ ಮಾಡುವುದನ್ನು ನನ್ನ ಕೆರಿಯರ್ ಆಗಿ ಮಾಡಿಕೊಂಡೆ. ನಿಜಕ್ಕೂ ಜನ ಉತ್ತಮ ಮನರಂಜನೆಗಾಗಿ ಕ್ವಾಲಿಟಿ ಟೈಂ ಬಳಸುತ್ತಾರೆ, ಅದನ್ನು ಆಯೋಜಿಸುವುದು ಖುಷಿಯ ಕೆಲಸ. ಇದಕ್ಕಾಗಿ ಮುಖ್ಯವಾಗಿ ಪಾರ್ಟಿ ಆಯೋಜಿಸುವ, ಅದನ್ನು ಇಷ್ಟಪಡುವ ಗುಣಗಳಿರಬೇಕು, ಬ್ಯಾಂಕಿನವರು ಸದಾ ಅಂಕಿಸಂಖ್ಯೆಗಳ ಜೊತೆ ಬೆರೆತುಹೋಗಿರುವಂತೆ. ಜನರಿಗೆ ಇಂಥ ಉತ್ತಮ ಗುಣಮಟ್ಟದ ಪಾರ್ಟಿ ಅಣಿಗೊಳಿಸುವುದು ಸುಲಭದ ಬಾಬತ್ತಲ್ಲ. ಈವೆಂಟ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿದ್ದರೆ ಹೆಚ್ಚು ಅನುಕೂಲಕರ. ಇದಕ್ಕಾಗಿ ಈವೆಂಟ್ ಕಂಪನಿಗಳಲ್ಲಿ ಕೆಲಸ ಮಾಡಿದ್ದರೆ ಹೆಚ್ಚು ಅನುಭವ ಸಿಗುತ್ತದೆ.”
“ಅವರು ಅಂಥದೇ ಒಂದು ಈವೆಂಟ್ ಮೇಕಿಂಗ್ ಆಫೀಸ್ ತೆರೆದು ಆ ಕುರಿತು ಹೇಳುತ್ತಾರೆ, “ನಾವು ನಮ್ಮ ಒಂದು ಬಾಡಿಗೆ ಮನೆಯನ್ನೇ ಅದಕ್ಕಾಗಿ ಆಫೀಸ್ ತರಹ ಮಾಡಿಕೊಂಡಿದ್ದೇವೆ. ಅಲ್ಲಿಂದಲೇ ಎಲ್ಲಾ ಮ್ಯಾನೇಜಿಂಗ್ ಕೆಲಸಗಳೂ ನಡೆಯುತ್ತವೆ. ಆದರೆ ಪ್ರಾಕ್ಟಿಕಲ್ ಕೆಲಸ ನಡೆಯುವುದು, ಜನ ಎಲ್ಲಿ ಪಾರ್ಟಿ ಅರೇಂಜ್ ಮಾಡುತ್ತಾರೋ ಅಲ್ಲವೋ…. ಹೊಸ ಹೊಸ ಗ್ರಾಹಕರನ್ನು ಹುಡುಕುವುದೇನೂ ಕಷ್ಟವಲ್ಲ. ಒಮ್ಮೆ ಒಳ್ಳೆಯ ಪಾರ್ಟಿ ಅರೇಂಜ್ ಮಾಡಿಸುತ್ತಾರೆ ಎಂದು ಸಾರ್ವಜನಿಕರಿಗೆ ಮನವರಿಕೆಯಾದರೆ, ಜನರಿಂದ ಜನರಿಗೆ ಮಾತು ಹರಡಿ, ಪಬ್ಲಿಕ್ ನಮ್ಮನ್ನು ತಾವೇ ಹುಡುಕಿಕೊಂಡು ಬರುತ್ತಾರೆ.”
ಪಾರ್ಟಿಯ ಜಾಗ ಮತ್ತು ಮೆನು ಹೇಗೆ ಮ್ಯಾನೇಜ್ ಮಾಡುತ್ತೀರಿ ಎಂಬುದಕ್ಕೆ, “ಹೌದು, ನಮ್ಮ ಗ್ರಾಹಕರ ಅಗತ್ಯ, ಅನುಕೂಲ, ಸಂದರ್ಭ ಮತ್ತು ಬಜೆಟ್‌ಗೆ ತಕ್ಕಂತೆ ಹಲವಾರು ಜಾಗಗಳನ್ನು ತೋರಿಸುತ್ತೇವೆ. ಅದೇ ರೀತಿ ಪಾರ್ಟಿ ಮೆನು ಕೂಡ. ವೆಜ್, ನಾನ್‌ವೆಜ್, ಹಾಟ್ ಕೂಲ್ ಡ್ರಿಂಕ್ಸ್, ಮ್ಯೂಸಿಕ್ ಆರ್ಕೆಸ್ಟ್ರಾ, ಮ್ಯಾಜಿಕ್ ಶೋ…. ಇತ್ಯಾದಿ ಎಲ್ಲ ಗ್ರಾಹಕರ ಅಂತಿಮ ಆಯ್ಕೆ ಮೇಲೆ ನಿಂತಿದೆ.”
ಪಾರ್ಟಿ ಸಂಸ್ಕೃತಿ : ಅವಿನಾಶ್ ದಿನೇ ದಿನೇ ದಟ್ಟವಾಗುತ್ತಿರುವ ಪಾಶ್ ನಗರಗಳ ಪಾರ್ಟಿ ಕಲ್ಚರ್ ಬಗ್ಗೆ ಹೇಳುತ್ತಾರೆ,?
“ಹೌದು ಬೆಂಗಳೂರಿನಂಥ ಮಹಾನಗರಗಳು ಸಾಗರೋಪಾದಿಯಲ್ಲಿ ಬೆಳೆದು ಹರಡುತ್ತಿವೆ. ಹೀಗಾಗಿ ಎಲ್ಲೆಲ್ಲೂ ಪಾರ್ಟಿಗಳ ಸಂಖ್ಯೆ ದಿನೇದಿನೇ ಹೆಚ್ಚುವುದು ಸಹಜ. ಅದೇ ತರಹ ವಿವಿಧ ಕಂಪನಿಗಳ ಈವೆಂಟ್ಸ್ ಕೂಡ ಇರುತ್ತದೆ. ಜನ ತಮ್ಮ ಬಿಡುವಿನ ವೇಳೆಯನ್ನು ಇಂಥ ಪಾರ್ಟಿಗಳ ಮೂಲಕ ಎಂಜಾಯ್ ಮಾಡಲು ಬಯಸುತ್ತಾರೆ. ಇಡೀ ವಾರದ ಶ್ರಮದಾಯಕದ ಕೆಲಸದ ನಂತರ ಇಂಥ ಮನರಂಜನೆ ಬಯಸುವುದು ಸಹಜ.
“ಹಿಂದಿನ ತಲೆಮಾರಿನ ಜನ ಹೆಚ್ಚು ಉಳಿತಾಯಕ್ಕೆ ಮಾನ್ಯತೆ ಕೊಡುತ್ತಾ, ಇಂಥದ್ದನ್ನು ಇಷ್ಟು ಬಿಂದಾಸ್ ಆಗಿ ಮಾಡುತ್ತಿರಲಿಲ್ಲ. ಇರುವುದಲ್ಲೇ ಸಾವರಿಸಿಕೊಂಡು ಪಾರ್ಟಿ ನೀಡುತ್ತಿದ್ದರು. ಆದರೆ ಈಗ ಹಾಗಲ್ಲ, ಜನ ಪ್ರತಿಯೊಂದು ಸಣ್ಣಪುಟ್ಟ ಸಂದರ್ಭವನ್ನೂ ಶೋಆಫ್ ಮಾಡಲು ಬಯಸುತ್ತಾರೆ, ಹಣವನ್ನು ನೀರಿನಂತೆ ಧಾರಾಳವಾಗಿ ಖರ್ಚು ಮಾಡಲು ರೆಡಿ. ಜೊತೆಗೆ ಮನರಂಜನೆ ಒದಗಿಸುವವರು, ಡಿ.ಜೆ.ಗಳು ಇತ್ಯಾದಿ ದುಬಾರಿ ಖರ್ಚುಗಳೂ ಇರುತ್ತವೆ. ಅಂತಾರಾಷ್ಟ್ರೀಯ ಕಲಾವಿದರನ್ನು ಭಾರತೀಯ ಮಹಾನಗರಗಳ ಪಾರ್ಟಿಗಳಿಗೆ ಕರೆಸುವುದು ಬಹಳ ಸಾಧಾರಣ ವಿಷಯವಾಗಿದೆ.”
ಅದೆಲ್ಲ ಸರಿ, ಇಷ್ಟೆಲ್ಲ ಪಾರ್ಟಿಗಳು ಜನರ ಆರೋಗ್ಯಕ್ಕೆ ಹಿತಕರವೇ? ಅದಕ್ಕೆ ಅವಿನಾಶ್, “ಇದು ಆಯಾ ವ್ಯಕ್ತಿಗಳನ್ನು ಅಲಂಬಿಸಿದೆ. ಜನ ತಮ್ಮ ವ್ಯಕ್ತಿಗತ ಆರೋಗ್ಯ ಆಧರಿಸಿ, ಪಾರ್ಟಿಗಳಲ್ಲಿ ಏನನ್ನು ತಿನ್ನಬೇಕು ಬಿಡಬೇಕು, ಹಾಟ್ ಸಾಫ್ಟ್ ಡ್ರಿಂಕ್ಸ್ ಯಾವುದು ಸೂಕ್ತ ಎಂದು ನಿರ್ಧರಿಸಬೇಕು. ನಾನು ಪ್ರತಿ ವಾರಾಂತ್ಯ ಪಾರ್ಟಿಗಳಿಗೆ ಹೋಗುತ್ತಿರುತ್ತೇನೆ. ಸಮಯಾಭಾವದ ಕಾರಣ ಇದು ಕೆಲವೊಮ್ಮೆ ತಪ್ಪುತ್ತದೆ. ಜನಕ್ಕೆ ಮುಖ್ಯವಾಗಿ ಬಹುಜನರ ಭೇಟಿ, ಮನರಂಜನೆ, ನಂತರದ ಹ್ಯಾಂಗೋರ್ ಪಾರ್ಟಿ ಕಲ್ಚರ್‌ನ ವಿವಿಧ ಹಂತಗಳು,” ಎನ್ನುತ್ತಾರೆ.
ಆದರೆ ಪ್ರವೋದ್, “ಪಾರ್ಟಿ ಅಂದ್ರೆ ಜಸ್ಟ್ ಫನ್‌ಎಂಜಾಯ್‌ಮೆಂಟ್,” ಎನ್ನುತ್ತಾರೆ.
ಪಾರ್ಟಿ ಶಿಷ್ಟಾಚಾರ : ಪಾರ್ಟಿಗಳಲ್ಲಿ ಶಿಷ್ಟಾಚಾರದ ಪ್ರಾಮುಖ್ಯತೆಯನ್ನು ಇಬ್ಬರೂ ಒಪ್ಪುತ್ತಾರೆ. ಪ್ರಮೋದ್ ಪ್ರಕಾರ, “ನೀವು ಯಾರದೋ ಮನೆಯ ವೈಯಕ್ತಿಕ ಪಾರ್ಟಿಗೆ ಹೋಗುತ್ತಿದ್ದರೆ, ನಿಮ್ಮೊಂದಿಗೆ ಒಬ್ಬರಿಗಿಂತ ಹೆಚ್ಚು ಅತಿಥಿ ಬೇಡ. ಅದು ಅನಿವಾರ್ಯ ಅನಿಸಿದಾಗ, ನೀವು ಮೊದಲೇ ನಿಮ್ಮ ಆತಿಥೇಯರನ್ನು ಈ ಕುರಿತು ಕೇಳಿಟ್ಟುಕೊಳ್ಳುವುದು ಒಳ್ಳೆಯದು. ಅದರಲ್ಲೂ ಮುಖ್ಯವಾಗಿ ನ್ಯೂ ಇಯರ್ ಪಾರ್ಟಿಗಳಂಥ ಭರ್ಜರಿ ಪಾರ್ಟಿಗೆ 5-6 ಜನರನ್ನು ಕರೆದೊಯ್ಯಬೇಕಾದಾಗ ಜೊತೆಗೆ 1-2 ಬಾಟಲ್ ಶಾಂಪೇನ್ ಅಥವಾ ಬಿಯರ್ ಇರಲೇಬೇಕು.
“ಇನ್ನೊಂದು ಗಮನಿಸಲೇಬೇಕಾದ ಮುಖ್ಯ ವಿಷಯ ಎಂದರೆ, ಪಾರ್ಟಿ ತಾನೇ ಎಂದು ಬಿಟ್ಟಿಯಾಗಿ ಸಿಕ್ಕಾಗ ನಿಮ್ಮ ಮಿತಿ ಮೀರಿ ಕುಡಿಯಲು ಹೋಗಬಾರದು. ಯಾರೋ ನಮ್ಮನ್ನು ಮನೆ ತಲುಪಿಸುತ್ತಾರೆ ಎಂದು ಉಡಾಫೆ ಬೇಡ. ಕೆಲವರಂತೂ ಅಲ್ಲೇ ವಾಂತಿ ಮಾಡಿಕೊಳ್ಳುವ ಅತಿರೇಕಕ್ಕೂ ಹೋಗುತ್ತಾರೆ. ಇಂಥದ್ದನ್ನೆಲ್ಲ ಖಂಡಿತಾ ಅವಾಯ್ಡ್ ಮಾಡಬೇಕು. ಎಲ್ಲೂ ನ್ಯೂಸೆನ್ಸ್ ಗೆ ಅವಕಾಶ ಕೊಡಬಾರದು. ಅದೇ ತರಹ ಪಾರ್ಟಿ ಅರೇಂಜ್ ಮಾಡುವ ಆತಿಥೇಯರು, ಯಾವುದಕ್ಕೂ ಕೊರತೆಯಾಗದಂತೆ ಎಲ್ಲವನ್ನೂ ಧಾರಾಳವಾಗಿ ಅಣಿಗೊಳಿಸಿರಬೇಕು. ಜೊತೆಗೆ ಪಾರ್ಟಿಗೆ ಬಂದವರಿಗೆ ತಕ್ಷಣ ನೀಡಲು ವೆಲ್‌ಕಂ ಡ್ರಿಂಕ್, ಸ್ಟಾರ್ಟರ್ಸ್ ಇರಬೇಕು. ಒಳ್ಳೆಯ ಮ್ಯೂಸಿಕ್ ಇರಲಿ. ಅಕಸ್ಮಾತ್ ಅತಿಥಿಗಳು ಹಾಟ್ ಡ್ರಿಂಕ್ಸ್ ತೆಗೆದುಕೊಂಡರು ಅಂತಾದರೆ, ಆತಿಥೇಯರು ಅವರನ್ನೆಂದೂ ತಾವೇ ಡ್ರೈವ್ ಮಾಡಿಕೊಂಡು ಹೋಗಲು ಬಿಡಬಾರದು.”
ಇದಕ್ಕೆ ಅವಿನಾಶ್ ಸಹ, “ಹೌದು, ಪಾರ್ಟಿ ಶಿಷ್ಟಾಚಾರ ಬಲು ಮುಖ್ಯ. ನಿಮ್ಮ ಬಾಡಿ ಲ್ಯಾಂಗ್ವೇಜ್, ಡ್ರೆಸ್ಸಿಂಗ್ ಸೆನ್ಸ್, ಇತರ ಜನರೊಂದಿಗೆ ಸಂವಹನದ ಕಲೆ ಎಲ್ಲದರ ಕಡೆ ಗಮನವಿರಲಿ. ಮುಖ್ಯವಾಗಿ ನ್ಯೂ ಇಯರ್ ಪಾರ್ಟಿಯ ಮಾರನೇ ದಿನ ಪೇಪರ್‌ಗಳಲ್ಲಿ, ಇಂತಿಷ್ಟು ಜನ ಕುಡಿದು ವಾಹನ ಓಡಿಸ್ದಿದರಿಂದ ಅಪಘಾತಕ್ಕೀಡಾದರು ಎಂಬುದು ಪ್ರಮುಖ ಸುದ್ದಿಯಾಗುತ್ತದೆ. ಅಂಥದ್ದಕ್ಕೆ ಅವಕಾಶ ಕೊಡದಂತೆ ಅತಿಥಿಗಳ ತಂಡದಲ್ಲಿ ಒಬ್ಬರು ಅಂಥವರನ್ನು ಕರೆದೊಯ್ಯಲಿ,” ಎನ್ನುತ್ತಾರೆ.
– ಗಾಯತ್ರಿ ರಾವ್