ಹಬ್ಬಗಳೆಂದರೆ ಎಲ್ಲೆಡೆ ಸಂಭ್ರಮ….. ಸಡಗರ…..! ಹಬ್ಬಗಳು ಕುಟುಂಬದ ಸದಸ್ಯರನ್ನೆಲ್ಲಾ ಒಂದೆಡೆ ಸೇರಿಸುತ್ತವೆ. ಇಂದಿನ ಧಾವಂತದ ಯಾಂತ್ರಿಕ ಬದುಕಿನಲ್ಲಿ ಪತಿ ಪತ್ನಿಯರಿಬ್ಬರೂ ನೌಕರಿ ಮಾಡುತ್ತಿದ್ದು, ಮನೆಯವರು ಒಟ್ಟಿಗೆ ಕುಳಿತು ಊಟ ಮಾಡುವುದೇ ಅಪರೂಪವಾಗಿದೆ. ಇನ್ನು ಅವರಿಬ್ಬರೂ ಬೇರೆ ಬೇರೆ ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದರೆ, ಕೇಳುವುದೇ ಬೇಡ. ತಮ್ಮ ಮಕ್ಕಳ ಆಟಪಾಠಗಳನ್ನು ಗಮನಿಸಲೂ ಅವರಿಗೆ ಸಮಯ ಇರುವುದಿಲ್ಲ. ಹಬ್ಬಗಳು ಬಂದಾಗ ಅವರು ತಮ್ಮ ತಂದೆತಾಯಿಯರ, ಗುರುಹಿರಿಯರ ಆಶೀರ್ವಾದ ಪಡೆಯುತ್ತಾರೆ. ಸಿಹಿ ಮತ್ತು ಕಾಣಿಕೆಗಳನ್ನು ಹಂಚಿ ಸಂತೋಷಿಸುತ್ತಾರೆ.

ವಿಕ್ರಮ ಶಕೆ ಪ್ರಾರಂಭವಾಗಿ 2069 ರ್ಷಗಳಾಗಿವೆ. ಹಿಂದೂ ಪಂಚಾಂಗದನ್ವಯ `ಯುಗಾದಿ’ ವರ್ಷದ ಮೊದಲ ದಿನವಾಗಿದ್ದು, ಜನ ಅದನ್ನು ಸಂಭ್ರಮ, ಉಲ್ಲಾಸ, ಹರ್ಷಗಳಿಂದ ಆಚರಿಸುತ್ತಾರೆ. ಯುಗಾದಿ ಹಬ್ಬವನ್ನು ಚಾಂದ್ರಮಾನ ಮತ್ತು ಸೌರಮಾನ ರೀತಿಯಲ್ಲಿ ಆಚರಿಸುವ ಎರಡೂ ಪದ್ಧತಿಗಳೂ ನಮ್ಮಲ್ಲಿವೆ.

ಭಾರತದ ವಿವಿಧ ರಾಜ್ಯಗಳಲ್ಲಿ ವರ್ಷಾಗಮನವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಇದನ್ನು ಕರ್ನಾಟಕ, ಆಂಧ್ರ ಪ್ರದೇಶಗಳಲ್ಲಿ `ಯುಗಾದಿ’ ಎಂದು ಕರೆದರೆ, ತಮಿಳುನಾಡಿನಲ್ಲಿ `ಸೌರ ಯುಗಾದಿ’ (ಪುತ್ತಾಂಡುವಿಳಾ), ಕೇರಳದಲ್ಲಿ `ಚೈತ್ರ ವಿಶು’ ಎಂದು ಹೇಳುತ್ತಾರೆ. ಮಹಾರಾಷ್ಟ್ರದಲ್ಲಿ ಇದನ್ನು `ಗುಡಿಪಾಡ್ವ,’ ಬಂಗಾಳದಲ್ಲಿ `ಬಸಂತ್‌ ಪಂಚಮಿ’ ಮತ್ತು ಪಂಜಾಬ್‌ನಲ್ಲಿ `ಬೈಸಾಖಿ,’ ಸಿಂಧ್‌ನಲ್ಲಿ  `ಚೇಟಿ ಚಾಂದ್‌’ ಎಂದು ಕರೆಯುತ್ತಾರೆ.  ಇಷ್ಟೇ ಅಲ್ಲದೆ, ಇನ್ನಿತರ ರಾಜ್ಯಗಳಲ್ಲಿ ತಮ್ಮ ಪ್ರಾದೇಶಿಕತೆಗೆ ಅನ್ವಯಿಸುವಂತೆ ಹೊಸ ವರ್ಷದ ಮೊದಲ ದಿನವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.

ಕರ್ನಾಟಕದಲ್ಲಿ ಯುಗಾದಿ ಒಂದು ವಿಶಿಷ್ಟ ಹಬ್ಬವಾಗಿದ್ದು, ಜನ ಸಂಭ್ರಮಾತುರಗಳಿಂದ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಆ ದಿನ ಉಷಃಕಾಲದಲ್ಲಿ ಎದ್ದು ಪರಮಾತ್ಮನ ಸ್ಮರಣೆ ಮಾಡುತ್ತಾ, ದೇವರ ಕೋಣೆ ಮತ್ತು ಮನೆಯ ಮುಖ್ಯ ದ್ವಾರಗಳನ್ನು ರಂಗವಲ್ಲಿ, ತೋರಣಾದಿಗಳಿಂದ ಸಿಂಗರಿಸಿ ಅಭ್ಯಂಜನ ಸ್ನಾನ ಮಾಡಿ ಹೊಸ ವರ್ಷದ ಪಂಚಾಂಗವನ್ನು ದೇವರ ಮುಂದಿಟ್ಟು ಶ್ರೀ ಗಣಪತಿ ಪೂಜೆಯೊಡನೆ ಕುಲದೇವತೆಯನ್ನು ಅರ್ಚಿಸಿ, ನಂತರ ಬೇವು ಬೆಲ್ಲ ಸೇವಿಸಿ ಬಂಧುಗಳು ಸ್ನೇಹಿತರು, ಸುಜನರೊಡಗೂಡಿ ಪಂಚಾಗ ಶ್ರವಣ ಮಾಡುತ್ತಾರೆ. ನೂತನ ಸಂವತ್ಸರಾರಂಭದ ದಿನವಾದ ಚೈತ್ರ ಶುಕ್ಲ ಪ್ರತಿಪತ್‌ ದಿನ ಯುಗಾದಿ ಹಬ್ಬದ ಆಚರಣೆ ಮಾಡಲಾಗುತ್ತದೆ. ಇದು ವರ್ಷದ ಮೊದಲ ದಿನವಾಗಿರುವುದರಿಂದ ಜನ ತಮ್ಮ ಆಸೆ ಆಕಾಂಕ್ಷೆ ಅಭೀಷ್ಟೆಗಳ ಈಡೇರಿಕೆಗಾಗಿ ಸಂಭ್ರಮವನ್ನು ಪ್ರಕಟಿಸುತ್ತಾ ಹೊಸ ಬಟ್ಟೆ ತೊಟ್ಟು, ಹಿರಿಯರಿಗೆ ನಮಿಸಿ, ಬೇವು ಬೆಲ್ಲವನ್ನು ಸವಿದು ಇದನ್ನು ಸಾಂಸ್ಕೃತಿಕವಾಗಿ ಒಂದು ಪ್ರಮುಖ ದಿನವನ್ನಾಗಿಸುತ್ತಾರೆ. ಹಿಂದೆ ಹಬ್ಬದ ಹಿಂದಿನ ದಿನವೇ ತೋರಣಕ್ಕೆ ಮಾವಿನ ಎಲೆ ಮತ್ತು ಬೇವಿನ ಎಲೆಗಳ ಗುತ್ತಿಗಳನ್ನು ಕೀಳುವುದೇ ಒಂದು ಸೊಗಸು. ಆಗ  ಆ ಮನೆಯವರೂ ಧಾರಾಳವಾಗಿ ಎಲೆಗಳನ್ನು ಕೊಡುತ್ತಿದ್ದರು. ಈಗ ಕಾಲ ಬದಲಾಗಿದೆ. ಮಾರುಕಟ್ಟೆಯಲ್ಲಿ ಪ್ರತಿಯೊಂದು ಸುಲಭವಾಗಿ ದೊರೆಯುತ್ತದೆ. ಹಿಂದಿನ ದಿನ ಸಂಜೆಯೇ ಪುರುಷರು ಮುಂಬಾಗಿಲಿಗೆ ಮತ್ತು ಮಂಟಪಕ್ಕೆ ಮಾವಿನ ತೋರಣವನ್ನು ಕಟ್ಟುತ್ತಾರೆ. ಮಹಿಳೆಯರು ಅಂಗಳವನ್ನು ಸಾರಿಸಿ, ಸುಂದರವಾದ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸುತ್ತಾರೆ. ಚೈತ್ರಮಾಸದ ಹಸಿರು ಚಿಗುರು, ಕೋಗಿಲೆಯ ಇಂಪಾದ ಸ್ವರ ಎಲ್ಲರಲ್ಲೂ ಆನಂದ ತರುತ್ತದೆ.

ಬೇವು ಬೆಲ್ಲ

ಯುಗಾದಿ ಹಬ್ಬದ ಆಚರಣೆಯಲ್ಲಿ ಬೇವು ಬೆಲ್ಲದ ಸ್ವೀಕಾರ ಒಂದು ಪ್ರಮುಖ ಘಟ್ಟವಾಗಿದೆ. ಬೇವು ಬೆಲ್ಲ ನಮ್ಮ ಬದುಕಿನಲ್ಲಿ ಅಂತರ್ಗತವಾಗಿರುವ ದ್ವಂದ್ವವನ್ನು ತೋರುವ ಪ್ರತಿಮೆಯಾಗಿದೆ. ಈ ಪ್ರತಿಮಾ ರೂಪದ ಆಚರಣೆ, ಬದುಕಿನಲ್ಲಿ ಪ್ರತಿಯೊಬ್ಬರೂ ಎದುರಿಸುವ ಕಷ್ಟನಷ್ಟಗಳನ್ನು ಸ್ಥಿತಪ್ರಜ್ಞ ಸ್ಥಿತಿಯಲ್ಲಿ ಸ್ವೀಕರಿಸು ಒಂದು ನಿಯಮನ್ನು ಧ್ವನಿಸುತ್ತದೆ. ಬೇವು ಕಹಿ, ಬೆಲ್ಲ ಸಿಹಿ, ಆದರೆ ಇವೆರಡರ ಮಿಶ್ರಣ ತನ್ನದೇ ಆದ ವಿಶಿಷ್ಟ ರುಚಿಯಿಂದ ಸಿಹಿ ಕಹಿಗಳ ಸಮನ್ವಯ ಸಾಧಿಸುತ್ತದೆ. ಬೇವು ಬೆಲ್ಲದ ಮಿಶ್ರಣವನ್ನು ಎರಡು ರೀತಿಯಲ್ಲಿ ತಯಾರಿಸಲಾಗುತ್ತದೆ.

ಸರಳ ಮಿಶ್ರಣ : ಬೇವಿನ ಎಳೆ ಚಿಗುರು, ಕತ್ತರಿಸಿದ ಗೋಡಂಬಿ, ದ್ರಾಕ್ಷಿ, ಬಾದಾಮಿ, ಬಿಳಿ ಬೆಲ್ಲದ ಚೂರುಗಳನ್ನು ಮಿಶ್ರಣ ಮಾಡಿ ದೇವರ ಮುಂದಿಟ್ಟು ಪೂಜಿಸಿ ನಂತರ ಕುಟುಂಬದ ಸದಸ್ಯರಿಗೆ ಹಂಚಲಾಗುತ್ತದೆ.

ದ್ರಾವಕ ಮಿಶ್ರಣ : ಇದನ್ನು ತಯಾರಿಸಲು ಬೇವಿನ ಹೂಗಳು, ಗೋಡಂಬಿ, ಹುರಿಗಡಲೆ, ಬೆಲ್ಲ ಮತ್ತು ಹಾಲು ಬೇಕಾಗುತ್ತದೆ. ಹುರಿಗಡಲೆ, ಗೋಡಂಬಿ, ಬೆಲ್ಲಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಅರೆದು ಹಾಲಿನಲ್ಲಿ ಬೆರೆಸಿ ದ್ರಾವಕದ ರೂಪದಲ್ಲಿ ತಯಾರಿಸಲಾಗುವುದು. ಈ ರೀತಿಯ ತಯಾರಿಕೆ ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಚಲಿತ.

ಮನೆಯ ಸಿಂಗಾರ : ಯುಗಾದಿ ಹಬ್ಬಕ್ಕೆ ಹಿಂದಿನ ವಾರವೇ ಸುಣ್ಣ ಬಣ್ಣ ಬಳಿದು ಮನೆಯನ್ನು ಹೊಸದಾಗಿ ಸಿಂಗರಿಸಿ, ಹೊಸ ವರ್ಷವನ್ನು ಹರ್ಷಾತುರಗಳಿಂದ ಸ್ವಾಗತಿಸಲಾಗುತ್ತದೆ. ಮನೆಯ ಮುಂದಿನ ಅಂಗಳದಲ್ಲಿ ದೊಡ್ಡದಾಗಿ ಬಿಡಿಸಿದ ಬಣ್ಣದ ರಂಗೋಲಿಗಳು ಮಹಿಳೆಯರ ಕಲಾಚಾತುರ್ಯವನ್ನು ಪ್ರದರ್ಶಿಸಿದರೆ, ಬಾಗಿಲಿಗೆ ಕಟ್ಟಿದ ಮಾವಿನೆಲೆಯ ತೋರಣ ಕುಟುಂಬದ ಪುರುಷರ ಸಹಭಾಗಿತ್ವವನ್ನು ಪ್ರತಿಬಿಂಬಿಸುತ್ತದೆ.

ಬಾಗಿಲಿನ ಚೌಕಟ್ಟಿಗೆ ಸುಂದರವಾಗಿ ಮಾವಿನೆಲೆಗಳಿಂದ ತೋರಣ ಕಟ್ಟಿ, ಅದರ ಕೊನೆಗೆ ಬೇವಿನ ಟೊಂಗೆಗಳನ್ನು ಸಿಕ್ಕಿಸಿದಾಗ ಆ ದೃಶ್ಯ ನೋಡಲಿಕ್ಕೇ ಸೊಗಸು! ಇದರ ಮುಂದೆ ಪ್ಲಾಸ್ಟಿಕ್‌ ಹಸಿರೆಲೆಯ ತೋರಣ ಕೃತಕವೆನಿಸುತ್ತದೆ.

ಯುಗಾದಿ ಖಾದ್ಯಗಳು : ಯುಗಾದಿ ದಿನದಂದು ಹೊಸ ವರ್ಷದ ಆಗಮನವನ್ನು ವಿಶಿಷ್ಟವಾದ ವ್ಯಂಜನಗಳನ್ನು ತಯಾರಿಸಿ ಆಚರಿಸಲಾಗುತ್ತದೆ. ಈ ವ್ಯಂಜನಗಳು ರಾಜ್ಯದಿಂದ ರಾಜ್ಯಕ್ಕೆ ಪ್ರಾದೇಶಿಕತೆಯನ್ನು ಬಿಂಬಿಸುವಂತೆ ಬೇರೆ ಬೇರೆಯಾಗಿವೆ.

ಕರ್ನಾಟಕದಲ್ಲಿ ಬೇಳೆ ಹೋಳಿಗೆ, ಕೊಬ್ಬರಿ ಹೋಳಿಗೆ, ಶ್ಯಾವಿಗೆ ಪಾಯಸ, ನಿಂಬೆಹುಳಿ ಚಿತ್ರಾನ್ನ, ಮಾವಿನಕಾಯಿ ಕಲಸನ್ನ, ಆಂಬೋಡೆ, ಕೋಸಂಬರಿ, ಪಲ್ಯ ಇತ್ಯಾದಿ ಹತ್ತು ಹಲವು ಬಗೆಯ ಸಿಹಿ ತಿನಿಸುಗಳೊಂದಿಗೆ ಹಬ್ಬದಡುಗೆ ಮಾಡುತ್ತಾರೆ.

ಮಹಾರಾಷ್ಟ್ರದಲ್ಲಿ ಪೂರಣಪೋಳಿ, ತಮಿಳುನಾಡಿನಲ್ಲಿ ಸಿಹಿ ಅಪ್ಪಂ, ಕೇರಳದಲ್ಲಿ ಅವಿಯಲ್ ಮತ್ತಿತರ ಪಕ್ವಾನ್ನಗಳು  ಪ್ರಧಾನವಾಗಿರುತ್ತವೆ. ಗೃಹಿಣಿಯರು ಹೊಸ ರೇಷ್ಮೆ ಸೀರೆಗಳನ್ನುಟ್ಟು ಸಂಭ್ರಮದಿಂದ ಅಡುಗೆ ತಯಾರಿಸಿ, ಪ್ರೀತಿಯಿಂದ ಬಡಿಸುತ್ತಾ ಮನೆಮಂದಿಯೊಂದಿಗೆ ಊಟ ಮಾಡುತ್ತಾರೆ. ಹಿರಿಯರು ಮಕ್ಕಳೊಂದಿಗೆ ಮಕ್ಕಳಾಗಿ ನಲಿಯುತ್ತಾರೆ.

ಸಾಹಿತ್ಯದಲ್ಲಿ ಯುಗಾದಿ

ಬಹಳಷ್ಟು ಕನ್ನಡ ಕವಿಗಳು `ಯುಗಾದಿ’ಯ ಬಗ್ಗೆ ಹಾಡಿದ್ದಾರೆ. ಜನಮನದ ಕವಿ ದ.ರಾ. ಬೇಂದ್ರೆಯವರಂತೂ, `ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷ ಹೊಸತು ಹೊಸತು ತರುತಿದೆ….’ ಎಂದು ವರ್ಣಿಸಿದ್ದಾರೆ. ಈ ಭಾವಗೀತೆ ಜನರ ಬಾಯಲ್ಲಿ ನಲಿಯುತ್ತಾ ಯುಗಾದಿಯ ಅನನ್ಯತೆಯನ್ನು ಸಾರುತ್ತದೆ. ಹಾಗೆಯೇ `ಈ ಜೀವನ ಬೇವು ಬೆಲ್ಲ….. ಬಲ್ಲಾತಗೆ ನೋವೇ ಇಲ್ಲ…..’ ಹಾಡು ಸಹ. ಜನಪದರೂ ಇದರ ಬಗ್ಗೆ ಬೇಕಾದಷ್ಟು ಹಾಡಿದ್ದಾರೆ. ಅನೇಕ ಕಡೆ `ಯುಗಾದಿ ಕವಿಗೋಷ್ಠಿ’ಗಳು ನಡೆಯುತ್ತವೆ. ಹೊಸ ವರ್ಷದ ಆಗಮನ ಕವಿಮನಗಳನ್ನು ಪಲ್ಲವಿಸಿ ಸಾಹಿತ್ಯದಲ್ಲಿ ಬಿಂಬಿತವಾಗಿದೆ.

ಯುಗಾದಿ ಶಾಪಿಂಗ್

ಇತರ ಹಬ್ಬಗಳಂತೆ ಯುಗಾದಿಗೂ ಜನ ಹೊಸ ಬಟ್ಟೆ ಖರೀದಿಸಿ ತೊಟ್ಟು ಸಂತೋಷಪಡುತ್ತಾರೆ. ಎಲ್ಲ ಬಗೆಯ ಅಂಗಡಿಗಳೂ, ಸ್ಯಾರಿ ಹೌಸ್‌, ಡ್ರೆಸ್‌ ಮೆಟೀರಿಯಲ್ಸ್ ಅಂಗಡಿಗಳೂ ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತದೆ. ಬಿಗ್‌ ಧಮಾಕಾನಲ್ಲಿ ಡಿಸ್ಕೌಂಟ್‌ನೀಡಿ ಗ್ರಾಹಕರನ್ನು ಆಕರ್ಷಿಸುತ್ತಾರೆ. ಮಹಿಳೆಯರು ಸೀರೆ ಅಂಗಡಿಗಳನ್ನು ಮುತ್ತಿ ತಮಗೊಪ್ಪುವ ಬಣ್ಣದ, ಡಿಸೈನಿನ ಸೀರೆಗಳನ್ನೂ, ಅದಕ್ಕೊಪ್ಪುವ ಬ್ಲೌಸ್‌ ಪೀಸನ್ನೂ ಆಯ್ಕೆ ಮಾಡಿಕೊಳ್ಳುತ್ತಾರೆ. ಪುರುಷರೂ ಸಿಲ್ಕ್ ಜುಬ್ಬಾ, ಸಿಲ್ಕ್ ಪಂಚೆ ಮತ್ತು ಇತರ ಉಡುಪುಗಳನ್ನು ಖರೀದಿಸುತ್ತಾರೆ. ಮಕ್ಕಳಿಗೂ ಅಂದಚೆಂದದ ರೆಡಿಮೇಡ್‌ ಉಡುಪುಗಳನ್ನು ಖರೀದಿಸುತ್ತಾರೆ. ಬೆಂಗಳೂರಿನ ಮೆಜೆಸ್ಟಿಕ್‌, ಚಿಕ್ಕಪೇಟೆ, ಎಂ.ಜಿ. ರೋಡ್‌,  ಮಲ್ಲೇಶ್ವರಂ, ಜಯನಗರ ಮುಂತಾದ ಕಡೆ ಮಧ್ಯರಾತ್ರಿಯವರೆಗೂ ಗ್ರಾಹಕರು ತುಂಬಿರುತ್ತಾರೆ. ಹಾಗೆಯೇ ರಾಜ್ಯದ ಎಲ್ಲಾ ಪ್ರಮುಖ ಜಿಲ್ಲಾ ಕೇಂದ್ರ, ತಾಲ್ಲೂಕು ಮಟ್ಟಗಳಲ್ಲೂ ಶಾಪಿಂಗ್‌ನ ಭರಾಟೆ ಕಂಡುಬರುತ್ತದೆ.

ಸೀರೆ ಅಂಗಡಿಗಳು ಬಣ್ಣದ ದೀಪಗಳಿಂದ ಅಲಂಕೃತಗೊಂಡು ನವ ವಧುವಿನಂತಿ ಕಂಗೊಳಿಸುತ್ತಿರುತ್ತವೆ. ಅಂಗಡಿಗಳ ಮಾಲೀಕರು ಸೇಲ್ಸ್ ಮೆನ್‌ ಮತ್ತು ಸೇಲ್ಸ್ ಗರ್ಲ್ಸ್ ಗ್ರಾಹಕರ ಅಭಿರುಚಿಗೆ ತಕ್ಕಂತೆ ಬಟ್ಟೆಗಳನ್ನು ತೋರಿಸುವಲ್ಲಿ ಮತ್ತು ಅವರನ್ನು ಒಪ್ಪಿಸುವಲ್ಲಿ ನಿರತರಾಗಿರುತ್ತಾರೆ.

ಬಗೆಬಗೆಯ ಸಾವಿರಾರು ಬಣ್ಣಗಳಲ್ಲಿ, ಡಿಸೈನ್‌ಗಳಲ್ಲಿ ತಮ್ಮ ಮೆಚ್ಚಿನ ಸೀರೆ, ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳುವ ಗೊಂದಲದಲ್ಲಿರುತ್ತಾರೆ.

ನೂತನ ವರ್ಷದ ಮೊದಲ ದಿನದಂದು ಮಹಿಳೆಯರು ತಮ್ಮ ಮೆಚ್ಚಿನ ಆಭರಣಗಳನ್ನು ಕೊಳ್ಳುವುದು ಶುಭವೆಂದು ಪರಿಗಣಿಸುತ್ತಾರೆ. ತಮಗೆ ಮೆಚ್ಚಿಗೆಯಾದ ಹೊಸ ಡಿಸೈನಿನ ಆಭರಣಗಳಿಗೆ ಆರ್ಡರ್‌ ಕೊಡುತ್ತಾರೆ. ಕೆಲವೊಮ್ಮೆ ತಮ್ಮ ಹಳೆಯ ಆಭರಣಗಳನ್ನು ಎಕ್ಸ್ ಚೇಂಜ್‌ ಮಾಡಿ ಹೊಸ ಆಭರಣಗಳನ್ನು ಪಡೆಯುತ್ತಾರೆ. ನಗರದ ಎಲ್ಲಾ ಆಭರಣ ಅಂಗಡಿಗಳೂ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿರುತ್ತವೆ. ಕೆಲವು ಅಂಗಡಿಗಳು ಗ್ರಾಹಕರಿಗೆ ಸುಲಭ ಕಂತುಗಳಲ್ಲಿ ಹಣ ನೀಡುವ ಅವಕಾಶವನ್ನು ಕೊಡುತ್ತವೆ. ರೇಷ್ಮೆ ಸೀರೆ ಅಂಗಡಿಗಳೂ ಸೀರೆ ಚೀಟಿಗಳನ್ನು ನಡೆಸುತ್ತವೆ.

ಪ್ರತಿ ವರ್ಷ ಯುಗಾದಿಯ ದಿನ ಹೊಸ ವರ್ಷ ಆರಂಭವಾಗುತ್ತದೆ. ಹಿಂದೂ ಪಂಚಾಂಗದಂತೆ ಒಟ್ಟು 60 ಸಂವತ್ಸರಗಳಿವೆ. ಈ ಸಲ ಬರಲಿರುವುದು `ಶೋಭಕೃತ್’ ನಾಮ ಸಂವತ್ಸರ. ಇದು 37ನೇ ಸಂವತ್ಸರವಾಗಿದೆ. ನಾವು ಇದೀಗ ಶುಭಕೃತ್ ಸಂವತ್ಸರದಿಂದ `ಶೋಭಕೃತ್’ ನಾಮ ಸಂವತ್ಸರಕ್ಕೆ ಅಡಿ ಇರಿಸುತ್ತಿದ್ದೇವೆ. ಚಾಂದ್ರಮಾನ ಮತ್ತು ಸೌರಮಾನ ಪದ್ಧತಿಯಲ್ಲಿ ಆಚರಿಸುವ ಹೊಸ ವರ್ಷದ  ದಿನದಲ್ಲಿ ಹೆಚ್ಚು ಕಡಿಮೆ ಒಂದು ವಾರದ ಅಂತರವಿರುತ್ತದೆ.

ಬನ್ನಿ, ನಾವೆಲ್ಲಾ ಸಂಭ್ರಮದಿಂದ `ಶೋಭಕೃತ್’ ಸಂವತ್ಸರವನ್ನು ಸ್ವಾಗತಿಸೋಣ. ಹೊಸ ವರ್ಷದಲ್ಲಿ ನಮ್ಮೆಲ್ಲರ ಆಸೆ ಆಕಾಂಕ್ಷೆ ಅಭೀಷ್ಟೆಗಳೂ ಈಡೇರಲಿ ಎಂದು ಪ್ರಾರ್ಥಿಸೋಣ.

ಇಂದಿನ ಆಧುನಿಕ ದಿನಗಳಲ್ಲಿ ಈ ಸಂದರ್ಭದಲ್ಲಿ ಕೆಲವರು ಬಂಧುಮಿತ್ರರಿಗೆ ಪಾರ್ಟಿಗಳನ್ನು ಕೊಟ್ಟು ನೆನಪಿನ ಕಾಣಿಕೆಗಳನ್ನು, ಸಿಹಿಯನ್ನೂ ಹಂಚಿ ತಾವು ಸಂತೋಷಿಸುತ್ತಾರೆ.

ತಮ್ಮ ಪ್ರೀತಿಪಾತ್ರರು ಹಾಗೂ ಮಕ್ಕಳಿಗೆ ಸುಂದರ ಉಡುಗೊರೆಗಳನ್ನೂ, ಆಟಿಕೆಗಳನ್ನೂ ನೀಡುತ್ತಾರೆ. ಯುಗಾದಿ ಎಲ್ಲರ ಬಾಳಿನಲ್ಲೂ ಸಂತೋಷ, ಸಮೃದ್ಧಿ ತರಲಿ. `ಶೋಭಕೃತ್’ ನಾಮ ಸಂವತ್ಸರ ಎಲ್ಲರಿಗೂ ಸನ್ಮಂಗಳನ್ನು ಉಂಟು ಮಾಡಲಿ ಎಂದು `ಗೃಹಶೋಭಾ’ ಹಾರೈಸುತ್ತಾಳೆ.

ಎನ್‌. ಚಂದ್ರಮೌಳಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ