ಯುಗಾದಿಯನ್ನು ಹೊಸ ವರ್ಷದ ಮೊದಲ ಹಬ್ಬವೆಂದು ಎಲ್ಲರೂ ಸಂಭ್ರಮೋಲ್ಲಾಸಗಳಿಂದ ಆಚರಿಸುತ್ತಾರೆ, ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ಬಯಸುವುದು ಹಬ್ಬದ ಉದ್ದೇಶವಾಗಿದೆ. ಅಂದು ಪೂಜೆಯ ನಂತರ ಬೇವು, ಬೆಲ್ಲವನ್ನು ಸೇವನೆ ಮಾಡುತ್ತಾರೆ. ಬದುಕಿನ ಸಿಹಿ ಕಹಿಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕೆಂಬ ಭಾವ ಅದರಲ್ಲಿದೆ.
ಯುಗ + ಆದಿ = ಯುಗಾದಿ, ಅಂದರೆ ಹೊಸ ಆವಿಷ್ಕಾರ, ಉಗಮ ಎಂದು. ಹೊಸ ವರ್ಷದ ಮೊದಲ ದಿನ. ಹಾಗೆಯೇ ಯುಗದ ಮೊದಲ ದಿನ ಸಹ. ಹಿಂದೂ ಧರ್ಮಕ್ಕನುಸಾರ ಯುಗಾದಿಯು ಹೊಸ ವರ್ಷದ ಮೊದಲನೇ ದಿನ. ಈ ದಿನ ಹೊಸ ವರ್ಷದ ಮೊದಲ ಹಬ್ಬದ ದಿನ ಆಗಿದೆ. ಫಾಲ್ಗುಣ ಬಹುಳ ಅಮಾವಾಸ್ಯೆಯ ದಿನ ಹಳೆಯ ವರ್ಷಕ್ಕೆ ವಿದಾಯ ಹೇಳಿ ಮಾರನೇ ದಿನ ಚೈತ್ರ ಮಾಸದ ಶುಕ್ಲ ಪ್ರತಿಪದೆಯಂದು ಹೊಸ ವರ್ಷವನ್ನು ಆಚರಿಸುತ್ತೇವೆ. ಹಳೆಯ ವರ್ಷ ಮುಕ್ತಾಯವಾಗುತ್ತಿದ್ದಂತೆ ಹೊಸ ವರ್ಷದ ಆಗಮನ, ಚೈತ್ರ ಮಾಸ ಋತುರಾಜ. ಈ ಮಾಸದಲ್ಲಿ ಇಡೀ ಪ್ರಕೃತಿ ಸಸ್ಯಶಾಮಲ ವರ್ಣದಿಂದ ನಗುತ್ತಿರುತ್ತದೆ. ಮಾವು ಬೇವು ಚಿಗುರಿ, ಆ ಚಿಗುರಿಗೆ ಮನಸೋತ ಕೋಗಿಲೆ ಹಾಡಲು ವಸಂತ ನಲಿಯಬೇಕು. ಇದು ಪ್ರಕೃತಿಯ ಸಹಜ ಧರ್ಮ.
ವರ್ಷದ ಮೂರುವರೆ ಮುಹೂರ್ತಗಳಲ್ಲಿ ಯುಗಾದಿ ಒಂದು ಶುಭ ಮುಹೂರ್ತವೆಂದು ಪ್ರಸಿದ್ಧಿ ಪಡೆದಿದೆ. ಈ ಶುಭ ದಿನಗಳಂದು ಮುಹೂರ್ತ ನೋಡುವುದರ ಅವಶ್ಯಕತೆ ಇರುವುದಿಲ್ಲ. ಈ ದಿನಗಳ ಪ್ರತಿ ಘಳಿಗೆಯೂ ಶುಭ ಮುಹೂರ್ತವೇ ಆಗಿರುತ್ತದೆ. ಈ ದಿನ ಹಿಂದಿನ ವರ್ಷದ ಕಹಿ ಅನುಭವಗಳನ್ನು ಮರೆತು, ಸಿಹಿ ಸಂತಸದ ಕ್ಷಣಗಳನ್ನು ನೆನೆಸಿಕೊಳ್ಳುತ್ತಾ ಭವಿಷ್ಯದ ಸುಖಕ್ಕಾಗಿ ಯುಗಾದಿಯನ್ನು ಆಚರಿಸುತ್ತೇವೆ.
ಸೂರ್ಯಚಂದ್ರರ ಹಿನ್ನೆಲೆಯಲ್ಲಿ ಯುಗಾದಿ ಎರಡು ಬಾರಿ ಆಚರಣೆಯಲ್ಲಿದೆ. ಸೌರಮಾನ ಮತ್ತು ಚಾಂದ್ರಮಾನದ ಹಬ್ಬಗಳು ಪ್ರದೇಶಾನುಸಾರಾಗಿ ರೂಢಿಯಲ್ಲಿವೆ. ಈ ಚಾಂದ್ರಮಾನ ಯುಗಾದಿಯನ್ನು ಪ್ರಥಮಾ ತಿಥಿಯಾದ ಪಾಡ್ಯದಲ್ಲಿಯೇ ಸಾಂಪ್ರದಾಯಿಕವಾಗಿ ಆಚರಿಸಬೇಕು. ಸೌರಮಾನದಂದು ಯುಗಾದಿಯನ್ನು ಮೇಷ ಸಂಕ್ರಮಣದಲ್ಲಿ ಆಚರಿಸಬೇಕು. ಈ ಆಚರಣೆಗಳಲ್ಲಿ ಕೆಲವು ವಿಶೇಷಗಳಿವೆ.
ಪುರಾಣದ ಹಿನ್ನೆಲೆ
ಪುರಾಣದ ಹಿನ್ನೆಲೆಯ ಪ್ರಕಾರ ಬ್ರಹ್ಮ ಪರಿಪೂರ್ಣವಾದ ಸೃಷ್ಟಿ ಕಾರ್ಯವನ್ನು ಮುಗಿಸಿದ್ದು ಯುಗಾದಿಯ ದಿನ. ಕೃತಯುಗದ ಪ್ರಾರಂಭವಾದ ದಿನ. ಶಕರು ಹೂಣರನ್ನು ಸೋಲಿಸಿ ವಿಜಯವನ್ನು ಪಡೆದ ದಿನ. ಈ ದಿನದಿಂದೇ ಶಾಲಿವಾಹನ ಶಕೆ ಪ್ರಾರಂಭವಾಯಿತು. ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದನು. ಶ್ರೀರಾಮಚಂದ್ರನು ಚೈತ್ರ ಶುದ್ಧ ಪಾಡ್ಯಮಿಯಂದೇ ವಿಜಯೋತ್ಸವ ಆಚರಿಸಿದ ದಿನ. `ಯುಗಾದಿ' ಶುಭ ದಿನದಂದು ಶ್ರೀ ರಾಮಚಂದ್ರ ಪಟ್ಟಾಭಿಷಿಕ್ತನಾಗುತ್ತಾನೆ. ಭಗವಂತ ಶ್ರೀಕೃಷ್ಣನು ನೃಪಕೇತುವಿಗೆ ದರ್ಶನ ನೀಡಿದ್ದು ವಿಕೃತಿನಾಮ ಸಂವತ್ಸರದ ಚೈತ್ರಮಾಸದ ಮೊದಲ ದಿನ. ಗಂಗೆ ಶಿವನ ಜಟೆಯಲ್ಲಿ ಬಂಧಿತಳಾಗಿದ್ದು ಚೈತ್ರಮಾಸದ ರುಧಿರೋದ್ಗಾರಿ ಸಂವತ್ಸರದ ಯುಗಾದಿಯಂದು.
ಪ್ರಾದೇಶಿಕ ವಿಭಿನ್ನತೆ ಹಬ್ಬದ ಮೂಲ ಉದ್ದೇಶ ಒಂದೇ ಆಗಿದ್ದರೂ ಹಬ್ಬಗಳ ಆಚರಣೆಯಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಕೆಲವು ವ್ಯತ್ಯಾಸಗಳಿವೆ. ಮಹಾರಾಷ್ಟ್ರದಲ್ಲಿ `ಗುಡಿಪಾಡ' ಎನ್ನುತ್ತಾರೆ. ಪಂಜಾಬಿನಲ್ಲಿ `ಬೈಸಾಕಿ,' ಅಸ್ಸಾಂನಲ್ಲಿ `ಬಿಹು', ಕೇರಳದಲ್ಲಿ `ವಿಶು,' ತಮಿಳುನಾಡಿನಲ್ಲಿ ಸೌರಮಾನ ಯುಗಾದಿ (ಪುತ್ತಾಂಡು ವಿಳಾ), ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ `ಯುಗಾದಿ' ಎಂದು ಆಚರಣೆ ಮಾಡುತ್ತಾರೆ. ಒಟ್ಟಿನಲ್ಲಿ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ಬಯಸುವುದೇ ಹಬ್ಬದ ಉದ್ದೇಶವಾಗಿದೆ.