ತಳಿರು ತೋರಣಗಳಿಲ್ಲದೆ ಹಬ್ಬ, ಹರಿದಿನ, ಗೃಹಪ್ರವೇಶ, ಮದುವೆಗಳಂಥ ಯಾವುದೇ ಶುಭ ಸಮಾರಂಭಕ್ಕೂ ಕಳೆ ಬರುವುದಿಲ್ಲ.

ಇದು ಗೃಹಾಲಂಕಾರದಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತದೆ, ಏಕೆಂದರೆ ಇದಿಲ್ಲದೆ ಅಲಂಕಾರ ಅಪೂರ್ಣ ಎನಿಸುತ್ತದೆ. ಆದ್ದರಿಂದ ಇಂಥ ವಿಶೇಷ ಶುಭ ಸಮಾರಂಭಗಳಿಗಾಗಿಯೇ ಗೃಹಿಣಿಯರು ತಾವೇ ತಯಾರಿಸಿದ ವಿಶೇಷ ವಿನ್ಯಾಸಗಳ ತೋರಣಗಳಿಂದ ಮನೆಯನ್ನು ಸಿಂಗರಿಸುತ್ತಾರೆ.

ಅಂದಹಾಗೆ ಇಂದಿನ ಧಾವಂತದ ದಿನಚರಿಗೆಂದೇ ಮಾರುಕಟ್ಟೆಯಲ್ಲಿ ನಾನಾ ಬಗೆಯ ಕೃತಕ ತೋರಣಗಳು ಲಭ್ಯವಿವೆ. ಅದನ್ನು ಹಾಗೇ ಹಣ ಕೊಟ್ಟು ಕೊಳ್ಳುವುದಕ್ಕಿಂತ, ಮನೆಯಲ್ಲೇ ಲಭ್ಯವಿರುವ ಸಾಮಗ್ರಿ ಬಳಸಿ ಅಚ್ಚುಕಟ್ಟಾಗಿ ತಯಾರಿಸಿದರೆ ಅದು ಇನ್ನಷ್ಟು ಸೊಗಸೆನಿಸುತ್ತದೆ. ಹಾಗಿದ್ದರೆ ಬನ್ನಿ, ಇವನ್ನು ಹೇಗೆ ತಯಾರಿಸುವುದೆಂದು ನೋಡೋಣ.

ಗ್ಲಿಟರ್‌ ಪಟ್ಟಿಯ ತೋರಣ

ಸಾಮಗ್ರಿ : ಅರ್ಧ ಮೀ. ಬಕರಮಲ್ ಬಟ್ಟೆ, 1 ಮೀ. ಗೋಲ್ಡನ್‌ ಸ್ಯಾಟಿನ್‌, 1 ಮೀ. ಅಗಲದ ಗ್ಲಿಟರ್‌ ಪಟ್ಟಿಸ್‌, 2 ಬಣ್ಣಗಳಲ್ಲಿ 10-15 ಹೂವಿನ ವಿನ್ಯಾಸಗಳು, ಕೃತಕ ಎಲೆಗಳು, ರಿಬ್ಬನ್‌, 10-12 (ಹೂವಿನ ಬಣ್ಣಕ್ಕೆ ಹೊಂದುವ) ಕೃತಕ ಮಣಿಮಾಲೆಗಳು, ಹೂವಿನ ಗುಚ್ಛ ತುಂಬಿಸಲು ಫಿಲ್ಲರ್ಸ್‌.

ವಿಧಾನ : ಮೊಟ್ಟ ಮೊದಲಿಗೆ ಬಕರಮ್ (ರೆಡಿಮೇಡ್‌) ಬಟ್ಟೆ ಬೇಸ್‌ ಮಾಡಿಕೊಂಡು, ಅದನ್ನು ಗೋಲ್ಡನ್‌ ಸ್ಯಾಟಿನ್‌ ಬಟ್ಟೆಯಿಂದ ಕವರ್‌ ಮಾಡಿ. ಇದರ ಉದ್ದ 3 ಅಡಿ ಮತ್ತು ಅಗಲ 5 ಇಂಚು ಇರಬೇಕು. ನಂತರ ಕೃತಕ ಹೂ ಎಲೆ, ಫಿಲ್ಲರ್ಸ್‌ ನೆರವಿನಿಂದ 3 ಗುಚ್ಛಗಳನ್ನು ಮಾಡಿಕೊಳ್ಳಿ. ಅದರಲ್ಲಿ 2 ಮೂಲೆಗಳಿಗೆ ಮತ್ತು ಒಂದನ್ನು ಮಧ್ಯದಲ್ಲಿ ಸಿಗಿಸಿಡಿ. ಈಗ ಬೇಸ್‌ಗೆ ಅಗಲದ ಗ್ಲಿಟರ್‌ ಪಟ್ಟಿ ಅಂಟಿಸಿ, ಇದರಿಂದ ಬೇಸ್‌ ಕವರ್‌ ಆಗುತ್ತದೆ. ಈಗ ಹೂಗುಚ್ಛಗಳನ್ನು 2 ಮೂಲೆಗೆ ಮತ್ತು ಒಂದನ್ನು ಮಧ್ಯದಲ್ಲಿ ಅಳವಡಿಸಿ. ನಂತರ ಇವುಗಳಿಗೆ ಹೊಂದುವಂತೆ ಮಣಿಮಾಲೆ ಇಳಿಬಿಡಿ. ಇದೀಗ ನಿಮ್ಮ ಗ್ಲಿಟರ್‌ ಪಟ್ಟಿಯ ತೋರಣ ರೆಡಿ!

ಕ್ರಿಸ್ಟಲ್ ತೋರಣ

ಸಾಮಗ್ರಿ : ಟಿಶ್ಶುವಿನ ಸಣ್ಣ ಗಾತ್ರದ ಚೌಕಾಕಾರದ ಬೇಸ್‌ 5 ಪೀಸ್‌ ಇರಲಿ, ಇದಕ್ಕೆ ಕಲರ್‌ಫುಲ್ ಡಿಸೈನ್‌ ಪ್ಯಾಚಸ್‌, 5 ಪೀಸ್‌ಕಲರ್‌ ಫುಲ್ ಬ್ರೋಚ್‌, ಅರ್ಧ ಮೀ. ಗ್ಲಿಟರ್‌ ಪಟ್ಟಿ ಲೇಸ್‌, ಕಲರ್‌ಫುಲ್ ಕ್ರಿಸ್ಟಲ್ಸ್ ಮತ್ತು ಬಣ್ಣಬಣ್ಣದ ಪ್ಲಾಸ್ಟಿಕ್‌ ಮುತ್ತುಗಳು, 5-6 ಪೀಸ್‌ ದೊಡ್ಡ ಗಾಜಿನ ಘಂಟೆಗಳು.

ವಿಧಾನ : ಮೊಟ್ಟ ಮೊದಲು ಟಿಶ್ಶು ಬೇಸ್‌ ತೆಗೆದುಕೊಂಡು ಅದನ್ನು 5 ಭಾಗವಾಗಿಸಿ. ಮುತ್ತು ಮತ್ತು ಕ್ರಿಸ್ಟಲ್ಸ್ ನಿಂದ ದೊಡ್ಡ ಜಾಲರಿ ಮಾಡಿ. ಪ್ರತಿಯೊಂದನ್ನೂ ಬೇಸ್‌ಗೆ ದಾರದಿಂದ ಜೋಡಿಸಿ. ಈ ರೀತಿ 4 ಸಲ ಮಾಡಿ. ನಂತರ ಘಂಟೆಗಳನ್ನು ನೀಟಾಗಿ ಇಳಿಬಿಡಿ, ಪ್ರತಿಯೊಂದನ್ನೂ ಉದ್ದಕ್ಕೆ ಬರುವಂತೆ ತೂಗುಬಿಡಿ. ಈಗ ಬೇಸ್‌ ಮೇಲೆ ಕ್ರಿಸ್ಟಲ್ ಬ್ರೋಚ್‌ನಿಂದ ಅಲಂಕರಿಸಿ, ಇದೀಗ ನಿಮ್ಮ ಕ್ರಿಸ್ಟಲ್ ತೋರಣ ರೆಡಿ!

– ದೀಪ್ತಿ ಜೈನ್‌

ಬಟರ್‌ಫ್ಲೈ ತೋರಣ

ಸಾಮಗ್ರಿ : 1-1 ಮೀಟರ್‌ ಬೇಸ್‌ಗಾಗಿ ಬಕರಮ್ ಬಟ್ಟೆ, ಸಿಲ್ವರ್‌ ಟಿಶ್ಯು, 5-6 ಗ್ಲಿಟರ್‌ ಚಿಟ್ಟೆಗಳು, 2 ಇಂಚಿನಷ್ಟು ದೊಡ್ಡದಾದ ಗ್ಲಿಟರ್ ಎಲೆಗಳು, ಅಲಂಕರಿಸಲು ಮಣಿಮಾಲೆ, ವೆಲ್ವೆಟ್‌ ಬಾರ್ಡರ್‌ ಮತ್ತು ಅಂಟಿಸಲು ಗ್ಲೂಗನ್‌.

ವಿಧಾನ : ಮೊಟ್ಟ ಮೊದಲು ಬಕರಮ್ ಬಟ್ಟೆಯನ್ನು 3 ಅಡಿ ಉದ್ದ ಹಾಗೂ ನಾಲ್ಕೂವರೆ ಅಡಿ ಅಗಲದ ಬೇಸ್‌ ಮಾಡಿಕೊಳ್ಳಿ. ಸಿಲ್ವರ್‌ ಟಿಶ್ಶುನ್ನು 3 ಬಾರಿ ಮಡಿಚಿ ಕವರ್‌ ಮಾಡಿ. ಇದರ ಮೇಲೆ ವೆಲ್ವೆಟ್‌ ಬಾರ್ಡರ್‌ ಬರಲಿ. ಅದನ್ನು ಅಂಚಿನಿಂದ ಅಂಟಿಸಿ. ನಂತರ ಚಿಟ್ಟೆ ಮತ್ತು ಎಲೆಗಳನ್ನು ಬೇಸ್‌ ಮೇಲೆ ಸೆಟ್‌ ಮಾಡಿ, ಗ್ಲೂಗನ್‌ನಿಂದ ಅಂಟಿಸಿಬಿಡಿ. ಕೆಳಭಾಗದಲ್ಲಿ ಮಣಿಮಾಲೆಗಳನ್ನು (ಚಿತ್ರದಲ್ಲಿರುವಂತೆ) ಚಿಟ್ಟೆ, ಎಲೆಗಳಿಗೆ ಹೊಂದುವಂತೆ ಅಂಟಿಸಿ. ಇದೀಗ ನಿಮ್ಮ ಬಟರ್‌ಫ್ಲೈ ತೋರಣ ರೆಡಿ.

ನವಿಲು ತೋರಣ

ಸಾಮಗ್ರಿ : 3 ಅಡಿ ಉದ್ದದ ವುಡನ್‌ ಫ್ರೇಂ, 5 ಇಂಚು ಅಗಲದ 2 ಪೀಕಾಕ್‌ ಪ್ಯಾಚ್‌, 40-50 ನವಿಲುಗರಿ, ಅಲಂಕರಿಸಲು ಲೇಸ್‌, ಗ್ಲಿಟರ್‌ನ ಎಲೆ ಹೂವು, ನೆಟ್‌ಫಿಲ್ಲರ್ಸ್‌, 10-12 ಸಣ್ಣ ಗಂಟೆಗಳು, ಇಳಿಬಿಡಲು ಮಣಿಮಾಲೆಗಳು.

ವಿಧಾನ : ಮೊಟ್ಟ ಮೊದಲು ವುಡನ್‌ ಬೇಸ್‌ನ್ನು ಸ್ಯಾಟಿನ್‌ ಬಟ್ಟೆಯಿಂದ ಕವರ್‌ ಮಾಡಿ. ಪೀಕಾಕ್‌ ಪ್ಯಾಚ್‌ನ್ನು ಇದಕ್ಕೆ ಕಸೂತಿಗೊಳಿಸಿ, ಲೇಸ್‌ ಮಣಿಮಾಲೆಗಳಿಂದ  ಅಲಂಕರಿಸಿ. ಚಿತ್ರದಲ್ಲಿರುವಂತೆ ಪ್ಯಾಚ್‌ಗೆ ನವಿಲು ಗರಿ ಸಿಗಿಸಿಡಿ. ನಂತರ ಪೀಕಾಕ್‌ ಪ್ಯಾಚ್‌ನ್ನು ಚಿತ್ರದಲ್ಲಿರುವಂತೆ ಎದುರುಬದುರಾಗಿ ಕೂರಿಸಿ, ಅದನ್ನು ವುಡನ್‌ ಬೇಸ್‌ಗೆ ಅಂಟಿಸಿಬಿಡಿ. ಈಗ ಗ್ಲಿಟರ್‌ ಎಲೆ ಹೂಗಳು, ನೆಟ್‌ ಮತ್ತು ಫಿಲ್ಲರ್ಸ್‌ನಿಂದ ವುಡನ್‌ ಬೇಸ್‌ನ ಉಳಿದ ಭಾಗ ಸಿಂಗರಿಸಿ. ಕೆಳಭಾಗಕ್ಕೆ ಗಂಟೆಗಳು, ಮಣಿಮಾಲೆಗಳನ್ನು ಇಳಿಬಿಡಿ. ಇದೀಗ ನಿಮ್ಮ ನವಿಲು ತೋರಣ ರೆಡಿ!

Tags:
COMMENT