ಎಗ್ ಗ್ರಿಲ್ಡ್ ಸ್ಯಾಂಡ್ವಿಚ್

ಸಾಮಗ್ರಿ : 2 ಬೆಂದ ಮೊಟ್ಟೆ, ಅರ್ಧ ಕಪ್‌ ತುರಿದ ಚೀಸ್‌, 4 ಚಮಚ ಬೆಣ್ಣೆ, 5-6 ಬ್ರೆಡ್‌ ಸ್ಲೈಸ್‌, ರುಚಿಗೆ ತಕ್ಕಷ್ಟು ಉಪ್ಪು ಮೆಣಸು ಟೊಮೇಟೊ ಸಾಸ್‌.

ವಿಧಾನ : ಬೆಂದ ಮೊಟ್ಟೆಯನ್ನು ಕಿವುಚಿ, ಮಸೆದಿಡಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಸ್ಪ್ರೆಡ್‌ ಸಿದ್ಧಪಡಿಸಿ. ಬ್ರೆಡ್‌ ಸ್ಲೈಸಿಗೆ ಬೆಣ್ಣೆ ಸವರಿ, ಆ ಭಾಗಕ್ಕೆ ಸಮನಾಗಿ ಈ ಮಿಶ್ರಣ ಹರಡಿಕೊಳ್ಳಿ. ಈ ರೀತಿ ಎಲ್ಲವನ್ನೂ ಸಿದ್ಧಪಡಿಸಿ ನೀಟಾಗಿ ಗ್ರಿಲ್ ಮಾಡಿ ಸವಿಯಲು ಕೊಡಿ.

ಫ್ರೂಟ್‌ನಟ್ಸ್ ಜೆಲ್ಲಿ

ಸಾಮಗ್ರಿ : 1 ಪ್ಯಾಕೆಟ್‌ ನಿಮ್ಮ ಆಯ್ಕೆಯ ಜೆಲ್ಲಿ, 2 ಕಪ್‌ ಬಿಸಿ ನೀರು, ಅರ್ಧ ಕಪ್‌ ಬೀಟ್‌ ಮಾಡಿದ ಕ್ರೀಂ, ಸಣ್ಣಗೆ ತುಂಡರಿಸಿದ 2-3 ಅಖ್ರೋಟು, ಒಂದಿಷ್ಟು ಹೆಚ್ಚಿದ ಮಿಶ್ರ ಹಣ್ಣುಗಳು.

ವಿಧಾನ : ಬಿಸಿ ನೀರಿಗೆ ಜೆಲ್ಲಿ ಕ್ರಿಸ್ಟಲ್ಸ್ ಹಾಕಿಟ್ಟು ಅದನ್ನು 1 ತಾಸು ನೆನೆಯಲು ಬಿಡಿ. ಜೆಲ್ಲಿ ಅದರಲ್ಲಿ ಚೆನ್ನಾಗಿ ಹಿಗ್ಗುತ್ತದೆ. ಆಮೇಲೆ ಅದಕ್ಕೆ  ತಣ್ಣೀರು ಬೆರೆಸಿ ಸೆಟ್‌ ಆಗಲು ಫ್ರಿಜ್‌ನಲ್ಲಿಡಿ. ಜೆಲ್ಲಿ ಅರ್ಧ ಭಾಗ ಸೆಟ್‌ ಆದಾಗ ಕ್ರೀಂ, ಅಖ್ರೋಟು, ಹಣ್ಣುಗಳನ್ನು ಬೆರೆಸಿ ಜೆಲ್ಲಿ ಮೋಲ್ಡ್ಸ್ ‌ಗೆ ಹಾಕಿ, ಮತ್ತೊಮ್ಮೆ ರೀಸೆಟ್‌ ಮಾಡಿ, ಸವಿಯಲು ಕೊಡಿ.

fruitnut

ಚೀಸ್‌ ಪಫ್‌

ಸಾಮಗ್ರಿ : 100 ಗ್ರಾಂ ತುರಿದ ಚೀಸ್‌, 50 ಗ್ರಾಂ ಮೈದಾ, 2 ಮೊಟ್ಟೆ, ರುಚಿಗೆ ತಕ್ಕಷ್ಟು ಉಪ್ಪು ಮೆಣಸು ಟೊಮೇಟೊ ಸಾಸ್‌, ಕರಿಯಲು ಎಣ್ಣೆ.

ವಿಧಾನ : ಒಂದು ಬಟ್ಟಲಿಗೆ ಮೊಟ್ಟೆ ಒಡೆದುಹಾಕಿ ಚೆನ್ನಾಗಿ ಗೊಟಾಯಿಸಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ, ಬೋಂಡ ಹಿಟ್ಟಿನ ಹದಕ್ಕೆ ಬರುವಂತೆ ಮಿಶ್ರಣ ಸಿದ್ಧಪಡಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಇದರಿಂದ ಒಂದೊಂದು ದೊಡ್ಡ ಚಮಚದಷ್ಟು ಮಿಶ್ರಣವನ್ನು ನೇರವಾಗಿ ಎಣ್ಣೆಗೆ ಬಿಟ್ಟು ಕರಿಯಿರಿ. ಬಿಸಿ ಬಿಸಿಯಾಗಿ ಇದನ್ನು ಸಾಸ್‌ ಜೊತೆ ಸವಿಯಲು ಕೊಡಿ.

ಬೀಟ್‌ರೂಟ್‌ ಸ್ಯಾಂಡ್‌ವಿಚ್‌

ಸಾಮಗ್ರಿ : 1 ದೊಡ್ಡ ಬೀಟ್‌ರೂಟ್‌, 1 ಕಪ್‌ ತುರಿದ ಚೀಸ್‌, 2-3 ಚಮಚ ಬೆಣ್ಣೆ, 5-6 ಬ್ರೌನ್‌ವೈಟ್‌ ಬ್ರೆಡ್‌ ಸ್ಲೈಸ್‌, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಮಸ್ಟರ್ಡ್‌ಟೊಮೇಟೊ ಸಾಸ್‌.

ವಿಧಾನ : ಬೀಟ್‌ರೂಟ್‌ ಸಿಪ್ಪೆ ಹೆರೆದು ಇಡಿಯಾಗಿ ಕುಕ್ಕರ್‌ನಲ್ಲಿ ಬೇಯಿಸಿ. ನಂತರ ಅದನ್ನು ಬ್ರೆಡ್‌ ಸ್ಲೈಸ್‌ಗೆ ತಕ್ಕಂತೆ ಹೆಚ್ಚಿಕೊಳ್ಳಿ. ಆಮೇಲೆ ಬೆಣ್ಣೆಗೆ ಮಸ್ಟರ್ಡ್‌ ಸಾಸ್‌ ಬೆರೆಸಿ ಗೊಟಾಯಿಸಿ. ಎಲ್ಲಾ ಬ್ರೆಡ್‌ ಸ್ಲೈಸ್‌ಗಳಿಗೂ ಇದನ್ನು ಸಮನಾಗಿ ಸವರಿಡಿ. ಚಿತ್ರದಲ್ಲಿರುವಂತೆ ಎಲ್ಲಾ ವೈಟ್‌ ಸ್ಲೈಸ್‌ಗಳ ಮೇಲೂ ಒಂದೊಂದು ಬೀಟ್‌ರೂಟ್‌ತುಂಡಿರಿಸಿ. ಇದರ ಮೇಲೆ ಉಪ್ಪು, ಮೆಣಸು, ಚೀಸ್‌ ಉದುರಿಸಿ ಬ್ರೌನ್‌ ಸ್ಲೈಸ್‌ನಿಂದ ಕವರ್‌ ಮಾಡಿ. ಚಿತ್ರದಲ್ಲಿರುವಂತೆ ಅಲಂಕರಿಸಿ, ಸಾಸ್‌ ಜೊತೆ ಸವಿಯಲು ಕೊಡಿ.

chukundar-sandwich

ಚಿಕನ್‌ ಕಟ್‌ಲೆಟ್‌

ಸಾಮಗ್ರಿ : 250 ಗ್ರಾಂ ಚಿಕನ್‌ ಕೀಮಾ, ಅರ್ಧ ಕಪ್‌ ಬ್ರೆಡ್‌ ಕ್ರಂಬ್ಸ್, 1-2 ಈರುಳ್ಳಿ, 3-4 ಎಸಳು ಬೆಳ್ಳುಳ್ಳಿ, 4-5 ಹಸಿ ಮೆಣಸು, 2 ಚಮಚ ಗಸಗಸೆ, 2 ಮೊಟ್ಟೆ, ಅಗತ್ಯವಿದ್ದಷ್ಟು ಎಣ್ಣೆ, ಉಪ್ಪು, ಖಾರ, ಮೆಣಸು, 1 ಮೊಟ್ಟೆ.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳುವುದು. ನಂತರ ಇದನ್ನು 1 ಗಂಟೆ ಕಾಲ ಫ್ರಿಜ್‌ನಲ್ಲಿರಿಸಿ ಕೂಲ್ ಮಾಡಿ. ಆಮೇಲೆ ಹೊರತೆಗೆದು ಸ್ವಲ್ಪ ಹೊತ್ತು ಗಾಳಿಗಿಟ್ಟು, ನಂತರ ಉಂಡೆಗಳಾಗಿಸಿ, ಕಟ್‌ಲೆಟ್‌ ತರಹ ತಟ್ಟಿಕೊಳ್ಳಿ. ಆಮೇಲೆ ಅದರ ಮೇಲೆ ಬೀಟ್‌ ಮಾಡಿದ ಮೊಟ್ಟೆ ಸವರಿಕೊಂಡು ಮೈಕ್ರೋವೇವ್‌ನಲ್ಲಿ ಹದನಾಗಿ ಗ್ರಿಲ್ ‌ಮಾಡಿ, ಇಲ್ಲವೇ ಡೀಪ್‌ ಫ್ರೈ ಮಾಡಿ.

ಕಾರ್ನ್‌ ಆನ್‌ಟೋಸ್ಟ್

ಸಾಮಗ್ರಿ : 1 ಕಪ್‌ ಬೇಬಿ ಸ್ವೀಟ್‌ ಕಾರ್ನ್‌, 2 ಕಪ್‌ ಹಾಲು, 2-3 ಚಮಚ ತುರಿದ ಚೀಸ್‌, ಅರ್ಧ ಚಮಚ ಓರಿಗ್ಯಾನೋ, 3-3 ಚಮಚ ಸಣ್ಣಗೆ ಹೆಚ್ಚಿದ ಹಸಿರು ಹಳದಿ ಕೆಂಪು ಕ್ಯಾಪ್ಸಿಕಂ, ಬೆಣ್ಣೆ ಸವರಿ ಟೋಸ್ಟ್ ಮಾಡಿದ 7-8 ಬ್ರೆಡ್‌ ಸ್ಲೈಸ್‌, ರುಚಿಗೆ ತಕ್ಕಷ್ಟು ಉಪ್ಪು ಮೆಣಸು ಪುದೀನಾ ಚಟ್ನಿ.

ವಿಧಾನ : ಬಿಸಿ ಹಾಲಿಗೆ ಕಾರ್ನ್‌ ಬೆರೆಸಿ ಅದನ್ನು ಚೆನ್ನಾಗಿ ಬೇಯಿಸಿ. ನಂತರ ಇದಕ್ಕೆ ಉಪ್ಪು, ಮೆಣಸು, ಚೀಸ್‌, ಓರಿಗ್ಯಾನೋ, ಬೆರೆಸಿ ತಣ್ಣಗಾಗಲು ಬಿಡಿ. ಆಮೇಲೆ ಇದಕ್ಕೆ ಲಘುವಾಗಿ ಬಾಡಿಸಿದ ಕ್ಯಾಪ್ಸಿಕಂ ಬೆರೆಸಿ, ಇದನ್ನು ಬಿಸಿ ಬ್ರೆಡ್‌ ಟೋಸ್ಟ್ ಮೇಲೆ ಹರಡಿ ಸವಿಯಲು ಕೊಡಿ.

cutlet

ಚೀಸ್‌ ಫ್ರೈ

ಸಾಮಗ್ರಿ : ಬೆಣ್ಣೆ ಸವರಿದ 7-8 ಬ್ರೆಡ್‌ ಸ್ಲೈಸ್‌, 200 ಗ್ರಾಂ ತುರಿದ ಚೀಸ್‌, 2 ಮೊಟ್ಟೆ, 1 ಕಪ್‌ ಬಿಸಿ ಹಾಲು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.

ವಿಧಾನ : ಮೊಟ್ಟೆ ಒಡೆದು ಬೀಟ್‌ ಮಾಡಿಕೊಂಡು ಅದಕ್ಕೆ ಉಪ್ಪು, ಮೆಣಸು, ಹಾಲು ಬೆರೆಸಿ ಮಿಶ್ರಣ ಸಿದ್ಧಪಡಿಸಿ. ಬ್ರೆಡ್‌ ಸ್ಲೈಸುಗಳ ಅಂಚು ಕತ್ತರಿಸಿ, ತ್ರಿಕೋನಾಕಾರವಾಗಿ ಕಟ್‌ ಮಾಡಿ. ಜಿಡ್ಡು ಸವರಿದ ಒಂದು ಬೇಕಿಂಗ್‌ ಟ್ರೇನಲ್ಲಿ ಒಂದು ಪದರ ತ್ರಿಕೋನಗಳನ್ನು ಹರಡಿಕೊಂಡು (ಒಟ್ಟು ಸ್ಲೈಸುಗಳಲ್ಲಿ ಅರ್ಧ ಭಾಗ) ಅದರೆ ಮೇಲೆ ಈ ಹಾಲಿನ ಮಿಶ್ರಣ ಹರಡಬೇಕು. ಇದರ ಮೇಲೆ ತುರಿದ ಚೀಸ್‌ಉದುರಿಸಿ. ಇದರ ಮೇಲೆ ಉಳಿದ ಸ್ಲೈಸುಗಳನ್ನು ಇನ್ನೊಂದು ಪದರವಾಗಿ ಜೋಡಿಸಿಕೊಂಡು, ಅದಕ್ಕೂ ಹೀಗೇ ಮಾಡಿ. ನಂತರ ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ 180 ಡಿಗ್ರಿ ಶಾಖದಲ್ಲಿ ಬೇಕ್‌ ಮಾಡಿ, ಬಿಸಿಯಾಗಿ ಸವಿಯಲು ಕೊಡಿ.

ಆಲೂ ಮೋತಿ ಟಿಕ್ಕಿ

ಸಾಮಗ್ರಿ : 250 ಗ್ರಾಂ ಬೇಯಿಸಿ ಮಸೆದ ಆಲೂ, 75 ಗ್ರಾಂ ಸಬ್ಬಕ್ಕಿ (ಸಾಬೂದಾಣಿ), ಒಂದಿಷ್ಟು ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು, ಪುದೀನಾ, ಶುಂಠಿ, ಹುರಿದು ಪುಡಿ ಮಾಡಿದ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪುಖಾರ ಗರಂಮಸಾಲ, ಕರಿಯಲು ಎಣ್ಣೆ.

ವಿಧಾನ : ಮೊದಲು ಸಬ್ಬಕ್ಕಿಯನ್ನು 1 ತಾಸು ನೀರಿನಲ್ಲಿ ನೆನೆಹಾಕಿಡಿ. ನಂತರ ಇದನ್ನು ಸೋಸಿಕೊಂಡು, ಸಬ್ಬಕ್ಕಿ ಬೇರೆ ಮಾಡಿ. ಅದಕ್ಕೆ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಂಡು ವಡೆಯ ಮಿಶ್ರಣದಂತೆ ಕಲಸಿಕೊಳ್ಳಿ. ನಂತರ ಇದರಿಂದ ಉಂಡೆ ಕಟ್ಟಿ, ವಡೆಗಳಾಗಿ ತಟ್ಟಿಕೊಂಡು, ಕಾದ ಎಣ್ಣೆಯಲ್ಲಿ ಕರಿಯಿರಿ. ನಂತರ ಚಿತ್ರದಲ್ಲಿರುವಂತೆ ತಟ್ಟಿ, ಟೊಮೇಟೊ ಸಾಸ್‌ನಿಂದ ಅಲಂಕರಿಸಿ ಸವಿಯಲು ಕೊಡಿ.

ಬಿಸ್ಕೆಟ್‌ ಡೆಲಿಕೆಸಿ

ಸಾಮಗ್ರಿ : 8-10 ಚೌಕಾಕಾರದ ಬಿಸ್ಕತ್ತು, 2 ಬೇಯಿಸಿ ಮಸೆದ ಆಲೂ, 1 ಕ್ಯಾಪ್ಸಿಕಂ ಸಣ್ಣಗೆ ಹೆಚ್ಚಿದ್ದು, 1 ಹೆಚ್ಚಿದ ಈರುಳ್ಳಿ, 2-3 ಚಮಚ ರವೆ, ರುಚಿಗೆ ತಕ್ಕಷ್ಟು ಉಪ್ಪು ಮೆಣಸು, ಕರಿಯಲು ಎಣ್ಣೆ.

ವಿಧಾನ : ಮೊದಲು ಬಾಣಲೆಯಲ್ಲಿ  ತುಸು ಎಣ್ಣೆ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಉಪ್ಪು, ಮೆಣಸು ಹಾಕಿ ಬಾಡಿಸಿ. ಕೆಳಗಿಳಿಸಿ ಇದಕ್ಕೆ ಮಸೆದ ಆಲೂ ಹಾಕಿ ಕೆದಕಬೇಕು. ಎಲ್ಲಾ ಬಿಸ್ಕತ್ತುಗಳಿಗೂ ಈ ಮಿಶ್ರಣವನ್ನು ಸಮನಾಗಿ ಹರಡಿ, ಚಿತ್ರದಲ್ಲಿರುವಂತೆ ಸ್ಯಾಂಡ್‌ವಿಚ್‌ ತರಹ ಮಾಡಿ. ರವೆಗೆ ಚಿಟಕಿ ಉಪ್ಪು ಸೇರಿಸಿ ನೀರು ಚಿಮುಕಿಸಿ, ಪೇಸ್ಟ್ ತರಹ ಮಾಡಿ, ಸ್ಯಾಂಡ್‌ವಿಚ್‌ ಬಿಟ್ಟುಕೊಳ್ಳದಂತೆ ಅಂಟಿಸಿಬಿಡಿ. ಈ ರೀತಿ ಎಲ್ಲವನ್ನೂ ಸಿದ್ಧಪಡಿಸಿಕೊಂಡು, ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ