ಪ್ರಾಪರ್ಜಿ ವೆಬ್‌ಸೈಟ್‌ನ ಸಂಸ್ಥಾಪಕಿ ಪ್ರಿಯಾ ಮಹೇಶ್ವರಿ ತಮ್ಮ ಜೀವನದ ಪ್ರಾರಂಭಿಕ ದಿನಗಳಲ್ಲಿ ಅತಿ ಸಾಧಾರಣ ಜೀವನ ನಡೆಸುತ್ತಿದ್ದರು ಹಾಗೂ ಸಾಮಾನ್ಯ ಕನಸುಗಳನ್ನು ಕಾಣುವ ಮಹಿಳೆಯರಂತೆಯೇ ಇದ್ದುಬಿಟ್ಟಿದ್ದರು. ಪ್ರಿಯಾ ರಾಜಾಸ್ಥಾನದ ಒಂದು ಸಣ್ಣ ಹಳ್ಳಿಯ ಕಟ್ಟಾ ಸಂಪ್ರದಾಯಸ್ಥರ ಮನೆಯ ಹುಡುಗಿ. ಮನೆಯವರ ಕಂದಾಚಾರಗಳು ಇವರ ಪ್ರಗತಿಪರ ವಿಚಾರಗಳಿಗೆ ಅಡ್ಡಿಯಾಗಲಿಲ್ಲ, ಅವರ ವಿಚಾರಧಾರೆ ಸದಾ ಉನ್ನತ ಮಟ್ಟದ ಸಕಾರಾತ್ಮಕ ಧೋರಣೆಯದ್ದಾಗಿದೆ.
ಪ್ರಿಯಾ ತಮ್ಮ ಕಷ್ಟಕರ ಜೀವನದ ಮಧ್ಯೆ ಕೇವಲ 3 ವಿಷಯಗಳತ್ತ ಮಾತ್ರ ಗಮನಹರಿಸಿದರು. ಅವೆದರೆ ಪರಿಶ್ರಮ, ದೃಢಸಂಕಲ್ಪ ಹಾಗೂ ಸಕಾರಾತ್ಮಕ ಧೋರಣೆ. ಈ ವಿಚಾರಗಳನ್ನು ಆಧರಿಸಿ ಇವರು ತಮ್ಮ ಜೀವನದಲ್ಲಿ ಯಶಸ್ವಿ ಎನಿಸಿದರು.
ಉದ್ಯಮಿಯಾಗಲು ಪ್ರೇರಣೆ
ತಮ್ಮ ಜೀವನ ಹಾಗೂ ಉದ್ಯಮದ ಕುರಿತಾಗಿ ಪ್ರಿಯಾ, “ಬೆಳೆಯುತ್ತಾ ಬಂದಂತೆ ನಾನು ಮುಂದೆ ಏನಾದರೂ ಸಾಧಿಸಲೇಬೇಕು ಎಂದೆನಿಸಿತು. ಏಕೆಂದರೆ ನಮ್ಮ ಕುಟುಂಬದಲ್ಲಿ ಯಾವ ಹೆಂಗಸೂ ಇದುವರೆಗೂ ನೌಕರಿ ಮಾಡಿದ ಇತಿಹಾಸವೇ ಇಲ್ಲ. ಹೀಗಾಗಿ ಪ್ರತಿಯೊಬ್ಬ ಉದ್ಯೋಗಸ್ಥ ವನಿತೆಯೂ ನನಗೆ ಪ್ರೇರಣಾದಾಯಕರಾಗಿದ್ದಾರೆ. ಮದುವೆ ನಂತರ ನಾನು ಅಮೆರಿಕಾಗೆ ಹೋಗಿ ಉನ್ನತ ಶಿಕ್ಷಣ ಮುಂದುರಿಸುವ ಅವಕಾಶ ಸಿಕ್ಕಿತು. ಅಲ್ಲಿ ನಾನು ಯೂನಿವರ್ಸಿಟಿ ಆಫ್‌ಪೆನ್ಸಿಲ್ವೇನಿಯಾದಲ್ಲಿ ಪಿ.ಜಿ. ಮಾಡಿದೆ. ಅಮೆರಿಕಾದಲ್ಲಿ ಕೆಲವು ವರ್ಷ ಕೆಲಸ ಮಾಡಿದ ನಂತರ ನಾನು ಭಾರತಕ್ಕೆ ವಾಪಸ್ಸು ಬಂದೆ. ಇಲ್ಲಿ ನೋಡಿದರೆ ಭಾರತ ಬಹಳ ವೇಗವಾಗಿ ಪ್ರಗತಿ ಸಾಧಿಸುತ್ತಿದೆ! ಒಬ್ಬ ಸಾಮಾನ್ಯ ವ್ಯಕ್ತಿಯ ಸಮಸ್ಯೆಗಳನ್ನು ನಿವಾರಿಸಲು ಬಹಳಷ್ಟು ವಿಧಾನಗಳಿವೆ. ಆಗ ನನಗೆ ಪ್ರಾಪರ್ಜಿ ಕುರಿತಾದ ಐಡಿಯಾ ಹೊಳೆಯಿತು.”
ಪ್ರಾಪರ್ಜಿಯ ಪರಿಕಲ್ಪನೆ
ತಮ್ಮ ಬಿಸ್‌ನೆಸ್ ಕುರಿತು ಹೇಳುತ್ತಾ ಪ್ರಿಯಾ, “ರಿಯಲ್ ಎಸ್ಟೇಟ್‌ಗಳ ಕ್ಷೇತ್ರದಲ್ಲಿ ಪ್ರಾಪರ್ಜಿ ಒಂದು ಅನುಪಮ ವೆಬ್‌ಸೈಟ್ ಎನ್ನಬಹುದು. ಇದು ಜನರಿಗೆ ತಮ್ಮ ಪ್ರಾಪರ್ಟಿ ಕೊಳ್ಳಲು ಮಾರಲು ಅದ್ಭುತ ಸಲಹೆಗಳನ್ನು ನೀಡುತ್ತದೆ. ನಿರ್ಧಾರ ಕೈಗೊಳ್ಳಲು ನಿಷ್ಪಕ್ಷಪಾತವಾಗಿ ಸಹಕರಿಸುತ್ತದೆ. ಪ್ರಾಪರ್ಜಿ ಮೂಲಕ ನಾವು ರಿಯಲ್ ಎಸ್ಟೇಟ್ ಮಾರ್ಕೆಟ್‌ನಲ್ಲಿ ಸತ್ಯ ನಿಷ್ಠೆ, ಪ್ರಾಮಾಣಿಕತೆ, ಪಾರದರ್ಶಿಕತೆ ಹಾಗೂ ಉದ್ಯಮಶೀಲತೆಗಳನ್ನು ತರಲು ಪ್ರಯತ್ನಿಸಿದ್ದೇವೆ. ನಮ್ಮ ಆನ್‌ಲೈನ್ ರಿಸರ್ಚ್ ಟೀಂ, ಸ್ವತಂತ್ರವಾಗಿ ಪ್ರಾಪರ್ಜಿಯ ವಿಶ್ಲೇಷಣೆ ಮಾಡಿ ಗ್ರಾಹಕರಿಗೆ ಅತ್ಯುತ್ತಮ ಡೇಟಾ ಒದಗಿಸುತ್ತದೆ, ಇದರಿಂದ ಅವರು ಪ್ರಾಪರ್ಟಿ ಕೊಳ್ಳಲು ಸುಲಭವಾಗುತ್ತದೆ.
“ನಮ್ಮ ವೆಬ್‌ಸೈಟ್ ಗ್ರಾಹಕರಿಗೆ ಬಿಲ್ಡರ್‌ಗಳು, ಅವರ ಯೋಜನೆಗಳು, ಪ್ರಾಪರ್ಟಿ ಲೊಕೇಶನ್, ಬಿಲ್ಡರ್ ರೇಟಿಂಗ್, ಪ್ರಾಪರ್ಟಿ ದರ ಹಾಗೂ ಅದರ ಖರೀದಿಗೆ ತಗುಲುವ ಬಡ್ಡಿ ಇತ್ಯಾದಿಗಳ ಕುರಿತು ನಿಷ್ಪಕ್ಷ ಮಾಹಿತಿ ನೀಡುತ್ತದೆ. ಯಾರು ಪ್ರಾಪರ್ಜಿಯ ಸೇವೆ ಪಡೆಯುತ್ತಾರೋ, ಅವರಿಂದ ಸರ್ವೀಸ್ ಚಾರ್ಜ್ ಪಡೆಯಲಾಗುತ್ತದೆ. ಈ ರೀತಿ ಈ ವೆಬ್‌ಸೈಟ್ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಇತರ ವೆಬ್‌ಸೈಟ್‌ಗಳಿಗಿಂತ ತೀರಾ ವಿಭಿನ್ನವಾಗಿದೆ.”
ಪತಿಯ ಸಹಕಾರ
ತಮ್ಮ ಉದ್ಯಮದ ಸ್ಥಾಪನೆಯಲ್ಲಿ ಪತಿಯ ಸಹಕಾರವನ್ನು ಪ್ರಿಯಾ ಸಾಕಷ್ಟು ದೊಡ್ಡದಾಗಿಯೇ ಭಾವಿಸುತ್ತಾರೆ. ಆಕೆ ಪ್ರಕಾರ, “ನನ್ನ ಪತಿ ಈ ಪ್ರಾಪರ್ಜಿಯ ಸ್ಥಾಪನೆಯಲ್ಲಿ ಬಹಳ ಮಹತ್ವಪೂರ್ಣ ಪಾತ್ರ ನಿರ್ವಹಿಸಿದ್ದಾರೆ. ಅವರು ಆಗಾಗ ನನಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರುತ್ತಾರೆ.”
ಉದ್ಯಮವೆಂದರೆ ಹೂಗಳ ಹಾದಿಯಲ್ಲ
ಯಾರು ಯಾವುದೇ ಸಮಸ್ಯೆಗಳನ್ನು ಎದೆಯೊಡ್ಡಿ ಎದುರಿಸುವರೋ, ಅವರು ಮಾತ್ರವೇ ಯಶಸ್ಸಿನ ಸವಿಯುಣ್ಣಲು ಸಾಧ್ಯ. ಪ್ರಿಯಾರಿಗೂ ತಮ್ಮ ಉದ್ಯಮ ನಡೆಸಲು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯ್ತು. ಆದರೆ ತಮ್ಮ ತಿಳಿವಳಿಕೆ ಹಾಗೂ ಸಕಾರಾತ್ಮಕ ಧೋರಣೆ ಕಾರಣ, ಅವರು ಆ ಕಷ್ಟಗಳಿಂದ ಹೊರಬರಲು ಸಾಧ್ಯವಾಯಿತು. “ನನಗೆ ಆರಂಭದಲ್ಲಿ ಬಹಳ ಕಷ್ಟಗಳು ಎದುರಾದವು. ಈಗಲೂ ಸಹ ನಾನು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ.
“ಆರಂಭದಲ್ಲಿ ನನಗೆ ಅತಿ ದೊಡ್ಡ ಸವಾಲು ಎಂದರೆ, ವೆಬ್‌ಸೈಟ್ ರೂಪಿಸಿ, ನನ್ನದೇ ಆದ ಒಂದು ತಂಡ ಕಟ್ಟಿಕೊಳ್ಳುವುದು. ನನ್ನದೇ ಐಡಿಯಾ ಪ್ರಕಾರ ತಂಡ ರಚಿಸುವುದು ಇನ್ನೂ ಕಷ್ಟಕರ ಎನಿಸಿತು. ಯಾವುದೇ ಉದ್ಯಮದ ಆರಂಭದಲ್ಲಿ ಪ್ರಸ್ತುತ ಮಾರ್ಕೆಟ್ ದರದಲ್ಲಿ ಸಿಬ್ಬಂದಿಗೆ ಸಂಬಳ, ಸೌಲಭ್ಯಗಳನ್ನು ಒದಗಿಸುವುದು ಸುಲಭವಲ್ಲ. ಹಾಗಾದಾಗ ಹೆಚ್ಚು ಸಿಬ್ಬಂದಿಯನ್ನು ತಂಡಕ್ಕೆ ಸೇರಿಸಿಕೊಂಡು, ಅವರ ಆಶಾಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಖಂಡಿತಾ ಸುಲಭವಲ್ಲ. ನನ್ನ ಮತ್ತೊಂದು ಚಾಲೆಂಜ್ ಹೆಚ್ಚು ಹಣ ಸಂಗ್ರಹಣೆ. ಮುಂದೆ ಕ್ರಮೇಣ ಈ ಎರಡೂ ಸವಾಲುಗಳನ್ನೂ ಸಮರ್ಥವಾಗಿ ನಿಭಾಯಿಸಿದೆ.”
ದೊರೆತ ಅವಕಾಶಗಳು
ಇದರ ಕುರಿತಾಗಿ ಪ್ರಿಯಾ, “ನನ್ನ ಜೀವನದಲ್ಲಿ ದೊರೆತ ಸುವರ್ಣಾವಕಾಶ ಎಂದರೆ, ಪ್ರಾಪರ್ಜಿಯ ಸ್ಥಾಪನೆ ಹಾಗೂ ಇದರ ಅಡಿಪಾಯ ಹಾಕಿದ ಮೇಲೆ ದೊರೆತ ಪಾಠಗಳು. ನಾನು ಈ ಬಿಸ್‌ನೆಸ್ ಮೂಲಕ ಏನೇ ಕಲಿತಿರಲಿ, ಅದು ಮುಂದೆ ನನ್ನ ಭವಿಷ್ಯ ಬೆಳಗುತ್ತದೆ. ಇದಲ್ಲದೆ, ಅಮೆರಿಕಾದ ಶಿಕ್ಷಣ ಹಾಗೂ ಕೆಲಸದ ನೆಪದಲ್ಲಿಯೂ ನಾನು ಸಾಕಷ್ಟು ವಿಷಯ ಕಲಿತಿದ್ದೇನೆ. ಪ್ರಾಪರ್ಜಿ ನನಗೊಂದು ಐಡೆಂಟಿಟಿ ತಂದುಕೊಟ್ಟಿದೆ, ಅದು ನನಗೆ ಬಹಳ ಹೆಮ್ಮೆ ಎನಿಸುತ್ತದೆ.”
ಹವ್ಯಾಸಗಳು
ಪ್ರವಾಸ ಹೊರಡುವುದು, ಹೊಸ ಹೊಸ ಜಾಗಗಳನ್ನು ನೋಡುವುದು ಹಾಗೂ ವಿಭಿನ್ನ ಪ್ರಾಂತ್ಯಗಳ ಸಸ್ಯಾಹಾರಿ ವ್ಯಂಜನ ಸವಿಯುವುದು ಆಕೆಗೆ ಬಹಳ ಇಷ್ಟ. ಆಕೆಯನ್ನು ಇತರರಿಂದ ಬೇರೆ ಮಾಡುವ ಇನ್ನೊಂದು ಹವ್ಯಾಸವೆಂದರೆ, “ನಾನು ಕೆಲವು ವರ್ಷ ಒಬ್ಬಂಟಿಯಾಗಿ ಸ್ಪೇನ್‌ನಲ್ಲಿರಲು ಬಯಸುತ್ತೇನೆ. ಆಗ ಸ್ಪ್ಯಾನಿಶ್ ಕಲಿಯುವುದು ಸುಲಭ,” ಎಂಬುದು.
ಫಿಟ್ನೆಸ್ನ ರಹಸ್ಯ
ತಮ್ಮ ಫಿಟ್‌ನೆಸ್ ಕುರಿತು ಪ್ರಿಯಾ ಹೇಳುತ್ತಾರೆ, “ಹಾಗೆ ನೋಡಿದರೆ ನನಗೆ ಜಿಮ್ ಗೆ ಹೋಗುವುದು ಅಷ್ಟೇನೂ ಹಿಡಿಸದು. ಆದರೆ ಇದೀಗ ನನ್ನ ದಿನಚರಿಯ ಒಂದು ಭಾಗವೇ ಆಗಿಹೋಗಿದೆ. ವಾರದಲ್ಲಿ 3 ದಿನ ನಾನು ಯೋಗಾಭ್ಯಾಸ ಮಾಡ್ತೀನಿ. ನನ್ನ ಊಟ ತಿಂಡಿಗಳ ವಿಚಾರವಾಗಿ ವಿಶೇಷ ಗಮನ ಕೊಡುತ್ತೀನಿ, ಹಾಗಾಗಿ ನನ್ನ ಆರೋಗ್ಯ ಸದಾ ಫಿಟ್ ಆಗಿರುತ್ತದೆ.”
ಜೀವನದ ಸಿಹಿಕಹಿ ಕ್ಷಣಗಳು
ಪ್ರಿಯಾರ ಜೀವನದಲ್ಲಿ ಸಿಹಿಕಹಿ ಕ್ಷಣಗಳು ಧಾರಾಳವಾಗಿವೆ. ಅವರು ವರ್ತಮಾನವನ್ನೇ ತಮ್ಮ ಜೀವನದ ಅತಿ ಮಧುರ ದಿನಗಳು ಎಂದು ಭಾವಿಸುತ್ತಾರೆ.
“ನನ್ನ ಜೀವನ ಮೊದಲಿನಿಂದಲೂ ಬಹಳ ಕಷ್ಟಕರವಾಗಿತ್ತು. ಆದರೆ ನಾನು ಎಲ್ಲಾ ಚಾಲೆಂಜ್‌ಗಳಿಂದಲೂ ಒಂದಲ್ಲ ಒಂದು ಕಲಿತಿದ್ದೇನೆ. ಈ ಕಲಿಕೆ ನನಗೆ ಕಠಿಣ ಪರಿಸ್ಥಿತಿ ಎದುರಿಸಲು ಸಹಾಯ ಮಾಡಿತು.”
ಪ್ರಗತಿಪರ ಮಹಿಳೆಯರಿಗೆ ಸಂದೇಶ ನೀಡುತ್ತಾ ಪ್ರಿಯಾ ಹೇಳುತ್ತಾರೆ, ನೀವು ಮುಕ್ತರಾಗಿ ಜೀವನ ಎದುರಿಸಿ, ಸದಾ ಸಕಾರಾತ್ಮಕ ಧೋರಣೆ ಇಟ್ಟುಕೊಳ್ಳಿ. ಒಬ್ಬ ಮಹಿಳೆ ಅಂದಮೇಲೆ ಅನೇಕ ರೂಪಗಳಲ್ಲಿ ಕಾಣಿಸಿಕೊಳ್ಳಬೇಕಾಗುತ್ತದೆ. ಅದು ಪರ್ಸನಲ್ ಅಥವಾ ಪ್ರೊಫೆಷನ್ ಇರಲಿ, ಕಾಲಕ್ಕೆ ತಕ್ಕಂತೆ ಬೇಡಿಕೆ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ಟೆನ್ಶನ್ಸ್ ಹೆಚ್ಚಬಹುದು. ನೀವು ಮಾಡುವ ಇಂಥ ಕೆಲಸಗಳಲ್ಲಿ ಒಮ್ಮೊಮ್ಮೆ ಲೋಪದೋಷ ತಲೆದೋರಬಹುದು, ಆದರೆ ಸಕಾರಾತ್ಮಕ ಧೋರಣೆಯ ಕಾರಣ, ಕನಿಷ್ಠ ಆ ಕೆಲಸ ಸಾಧಿಸಲು ಅಷ್ಟಾದರೂ ಪ್ರಯತ್ನಗಳಾಯಿತಲ್ಲ ಎಂದು ನೀವು ನಿಮ್ಮ ಪರಿಶ್ರಮದ ಕುರಿತು ಸಮಾಧಾನ ಪಡಬಹುದು.
– ಪ್ರತಿನಿಧಿ