ದೆಹಲಿ ನಿವಾಸಿ ಅನೀಶಾ ಸಿಂಗ್‌ ಎಂತಹ ಮಹಿಳಾ ಉದ್ಯಮಿಯೆಂದರೆ, ಅವರು 21ನೇ ವಯಸ್ಸಿನಲ್ಲಿಯೇ ತಮ್ಮ ಉದ್ಯೋಗ ಜೀವನ ಆರಂಭಿಸಿದರು. ಅವರ ಅಪಾರ ಪರಿಶ್ರಮ ಹಾಗೂ ಶ್ರದ್ಧೆಯ ಕಾರಣದಿಂದಾಗಿ ಮೈಡಾಲಾ ಡಾಟ್‌ ಕಾಮ್ ಸಂಸ್ಥೆಯ ಸಂಸ್ಥಾಪಕಿ ಮತ್ತು ಕಾರ್ಯಕಾರಿ ಅಧಿಕಾರಿಯಾಗಿದ್ದಾರೆ.

2014ನೇ ಸಾಲಿನಲ್ಲಿ ಅವರು  `ವರರ್ಲ್ಡ್ ಲೀಡರ್‌ ಶಿಪ್‌ ಅವಾರ್ಡ್‌’ ಮತ್ತು 2012ರಲ್ಲಿ ರೀಟೇಲ್‌ನಲ್ಲಿ `ಲೀಡಿಂಗ್‌ ವುಮನ್‌ ಅವಾರ್ಡ್‌’ನಿಂದ ಸನ್ಮಾನಿತರಾಗಿದ್ದಾರೆ.

ಕುಟುಂಬ ಹಿನ್ನೆಲೆ ಮತ್ತು ಶಿಕ್ಷಣ

“ನಾನು ದೆಹಲಿಯವಳು. ಅವಿಭಕ್ತ ಕುಟುಂಬದಲ್ಲಿ ಬೆಳೆದ ಹಿನ್ನೆಲೆ ನನ್ನದು. ನನ್ನ ತಂದೆ ಸೈನ್ಯದಲ್ಲಿದ್ದರು. ಅಮ್ಮ ದಂತತಜ್ಞೆ. ನನ್ನ ತಾತಾ ಭಾರಿ ವ್ಯಕ್ತಿತ್ವದವರು,” ಎಂದು ಅನಿಶಾ ಹೇಳುತ್ತಾರೆ.

“ನಾನು ಆರಂಭದಿಂದಲೇ ಎಲ್ಲವನ್ನೂ ತದ್ವಿರುದ್ಧ ಮಾಡುವ ಸ್ವಭಾವದವಳು. ಹುಡುಗಿಯಾಗಿ ನಾನು ಅದನ್ನು ಮಾಡಬಾರದು, ಇದನ್ನು ಮಾಡಬಾರದು ಎಂದು ಯೋಚಿಸಲು ಹೋಗುತ್ತಿರಲಿಲ್ಲ. ನನ್ನ ಕುಟುಂಬ ಪಾರಂಪರಿಕ ಹಿನ್ನೆಲೆಯದ್ದಾಗಿದ್ದರಿಂದ ನಾನು ಶಾರ್ಟ್ಸ್ ಮುಂತಾದುವನ್ನು ಧರಿಸಲು ನನ್ನ ತಾತಾ ವಿರೋಧ ವ್ಯಕ್ತಪಡಿಸುತ್ತಿದ್ದರು. `ಹುಡುಗರು ಅದನ್ನು ಧರಿಸಬಹುದಾದರೆ, ಹುಡುಗಿಯರು ಅದನ್ನು ಏಕೆ ಧರಿಸಬಾರದು?’ ಎಂದು ನಾನು ತಾತನಿಗೆ ವಾದಿಸುತ್ತಿದ್ದೆ. ನಾನು ತಾತನನ್ನು ಅಷ್ಟೇ ಪ್ರೀತಿಸುತ್ತಿದ್ದೆ. ತಮ್ಮ ಮೊಮ್ಮಗಳು ಇಷ್ಟು ಎತ್ತರಕ್ಕೆ ಬೆಳೆಯಬಹುದು ಎಂದು ಅವರು ಯೋಚಿಸಿರಲಿಲ್ಲ,” ಎಂದು ಅನೀಶಾ ಹೇಳುತ್ತಾರೆ.

ತಮ್ಮ ಶಿಕ್ಷಣದ ಬಗ್ಗೆ ಅವರು ಹೀಗೆ ಹೇಳುತ್ತಾರೆ, “ನಾನು ದೆಹಲಿಯ ಏರ್‌ಫೋರ್ಸ್‌ ಶಾಲೆಯಲ್ಲಿ ಓದಿದೆ. ಮುಂದಿನ ಕಾಲೇಜು ಶಿಕ್ಷಣವನ್ನು ಪ್ರೊಫೆಶನಲ್ ಕಾಲೇಜ್‌ ಆಫ್‌ ಆರ್ಟ್ಸ್‌ನಲ್ಲಿ ಪೂರೈಸಿದೆ. ನಾನು ಅಮೆರಿಕಾದಲ್ಲಿ ಶಿಕ್ಷಣ ಪಡೆಯುವ ಉತ್ಸುಕತೆ ಹೊಂದಿದ್ದೆ. ಆದರೆ ಮನೆಯವರಿಂದ ಅದಕ್ಕೆ ಅನುಮತಿ ದೊರೆಯಲಿಲ್ಲ.

“ಕಾಲೇಜ್‌ ಆಫ್‌ ಆರ್ಟ್ಸ್ ನಲ್ಲಿ ಓದುವುದರ ಜೊತೆಗೆ ನಾನು ಡಿಸ್ಕವರಿ ಚಾನೆಲ್‌ನಲ್ಲಿ ಇಂಟರ್ನ್‌ಶಿಪ್‌ ಮಾಡಿದೆ. ಆಗಲೇ ನನಗೆ ಯಾರೋ ಅಮರಿಕಾದಲ್ಲಿ ಅತ್ಯುತ್ತಮ ಕಮ್ಯುನಿಕೇಶನ್‌ ಸ್ಕೂಲ್‌‌ಗಳಿವೆ ಎಂದು ಹೇಳಿದರು. ಅದು ಪೊಲಿಟಿಕ್‌ ಕಮ್ಯುನಿಕೇಶನ್‌ಗಂತೂ ನಂಬರ್‌ ಒನ್‌ ಎಂದು ನನಗೆ ತಿಳಿಸಿದರು. ನನಗೆ ರಾಜಕೀಯದಲ್ಲಿ ಬಹಳ ಆಸಕ್ತಿ ಇತ್ತು. ಹೀಗಾಗಿ ನಾನು ಅಮೆರಿಕಕ್ಕೆ ಹೋಗಲು ಕಾತುರಳಾದೆ. ಅಪ್ಪ ಅಮ್ಮ ತಾತನ ಮನವೊಲಿಸಿ ಅಮೆರಿಕಕ್ಕೆ ಹೊರಟು ನಿಂತೆ.

“ಅಮೆರಿಕಕ್ಕೆ ಹೋಗಿ ನಾನು ಮಾಸ್ಟರ್ಸ್ ಕೋರ್ಸ್‌ ಶುರು ಮಾಡಿದೆ. ಅದರ ಜೊತೆಗೆ ಒಂದು ಕೆಲಸ ಕೂಡ ಮಾಡತೊಡಗಿದೆ. ಆ ಮನೆಯ ಹೆಸರು ಸ್ಪ್ರಿಂಗ್‌ ಬೋರ್ಡ್‌. ಆ ಮನೆಯ ಮಹಿಳೆ ಮಹಿಳಾ ಉದ್ಯಮಿಗಳಿಗೆ ಹಣಕಾಸು ಒದಗಿಸುವ ಕೆಲಸ ಮಾಡುತ್ತಿದ್ದಳು.”

ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ ಅನೀಶಾ ಹೀಗೆ ಹೇಳುತ್ತಾರೆ, “ಸ್ಪ್ರಿಂಗ್‌ ಬೋರ್ಡ್‌ ಮನೆಯಲ್ಲಿ ಕೆಲಸ ಮಾಡುವ ದಿನಗಳು ನನ್ನ ಮಟ್ಟಿಗೆ ಚಿನ್ನದ ದಿನಗಳೆಂದೇ ಹೇಳಬಹುದು. ಜನರಿಗೆ ಜೀವನದಲ್ಲಿ ಬದಲಾಗುವ ಹಲವಾರು ಅವಕಾಶಗಳು ಬರುತ್ತವೆ. ನಾನೂ ಕೂಡ ಅಲ್ಲಿಯೇ ಬದಲಾದೆ. ಅಲ್ಲಿ ಕೆಲವೊಂದು ಯಶಸ್ವಿ ಮಹಿಳೆಯರನ್ನು ನೋಡಿ, ಅವರ ಕಥೆಗಳನ್ನು ಓದಿ ನಾನು ಸಾಕಷ್ಟು ಚಕಿತಳಾಗುತ್ತಿದ್ದೆ. ಇಷ್ಟೆಲ್ಲ ಅದ್ಭುತ ಸಾಧನೆ ಮಾಡುವ ಇವರು ಅದೆಂಥ ಮಹಿಳೆಯರಿರಬಹುದೆಂದು ಯೋಚಿಸುತ್ತಿದ್ದೆ. ಕೆಲವರನ್ನು ಅವರ ಪತಿ ಬಿಟ್ಟುಹೋಗಿದ್ದರು. ಅವರಿಗೆ ಯಾವುದೇ ಹಣಕಾಸಿನ ಸಹಾಯವಿರಲಿಲ್ಲ. ಆದರೂ ಅವರು ತಮ್ಮದೇ ಆದ ಸ್ಟೋರ್‌ ನಡೆಸುತ್ತಿದ್ದರು. ಅವರನ್ನು ನೋಡಿ ನಾನೂ ಏನಾದರೂ ಮಾಡಬಹುದು ಎಂದು ನನಗೆ ಧೈರ್ಯ ಬರುತ್ತಿತ್ತು.

“ಅದೇ ಸಮಯಕ್ಕೆ ನಾನು ಬಿಸ್‌ನೆಸ್‌ ಸ್ಕೂಲ್‌‌ನಲ್ಲಿ ಕೋರ್ಸ್‌ ಒಂದಕ್ಕೆ ಅಡ್ಮಿಷನ್‌ ಪಡೆದೆ. ಅದು ಇನ್‌ಫರ್ಮೇಶನ್‌ ಸಿಸ್ಟಮ್ ನದ್ದಾಗಿತ್ತು. ನಾನು ಮೊದಲು ಕ್ಲಾಸಿನಲ್ಲಿ ಹೆಚ್ಚು ಮಾತನಾಡದೆ ಮೌನವಾಗಿಯೇ ಇರುತ್ತಿದ್ದೆ. ಆಗ ನನ್ನ ಪ್ರೊಫೆಸರ್‌,  ಅನೀಶಾ ಇದನ್ನು ಮಾಡಲು ಸಾಧ್ಯವೋ, ಇಲ್ಲವೋ ಎಂಬುದನ್ನು ಹೇಳು ಎಂದು ನನಗೇ ಕೇಳುತ್ತಿದ್ದರು. ಅವರ ಮಾತುಗಳು ಆಗ ಚುಚ್ಚುತ್ತಿರುವಂತೆ ಭಾಸವಾಗುತ್ತಿದ್ದವು. ಆದರೆ ಆ ಬಳಿಕ ನನಗೆ ಜೀವನದಲ್ಲಿ ಏನೂ ಮಾತನಾಡದೇ ಇದ್ದರೆ ಏನೂ ಲಭಿಸುವುದಿಲ್ಲ ಎಂದು ಮನವರಿಕೆಯಾಯಿತು. ಜೀವನದಲ್ಲಿ ಮಾತನಾಡುವ ಕಲೆ ಚೆನ್ನಾಗಿ ಬರಬೇಕು. ಪ್ರೊಫೆಸರ್‌ ನನಗೆ ಏನನ್ನು ಹೇಳ್ತಿದ್ರೊ, ಕೇಳ್ತಿದ್ರೊ ಅದು ಸರಿಯಾಗೇ ಇತ್ತು. ಏಕೆಂದರೆ ಮಹಿಳೆಯರು ಹೆಚ್ಚಾಗಿ ಮಾತನಾಡುವುದಿಲ್ಲ. ಆದರೆ ಅವರ ಬಳಿ ಒಳ್ಳೊಳ್ಳೆಯ ಐಡಿಯಾಗಳು ಇರುವುದಂತೂ ಖಚಿತ. ಹಿಂಜರಿಕೆಯಿಂದ ಅವು ಒಳಗೇ ಉಳಿದುಬಿಡುತ್ತವೆ ಎಂದವರು ಹೇಳುತ್ತಿದ್ದರು. ಅವರ ಮಾತಿನಿಂದ ನನ್ನ ಹಿಂಜರಿಕೆ ದೂರಗೊಳಿಸಿದೆ. ಆ ಬಳಿಕ ಕ್ಲಾಸಿನಲ್ಲಿ ನಾನೇ ಎಲ್ಲದಕ್ಕೂ ಮೊದಲು ಪ್ರಶ್ನೆ ಕೇಳಲಾರಂಭಿಸಿದೆ.

ನನ್ನ ಕಂಪನಿಯ ಕುರಿತು

“ನನ್ನ ಕಂಪನಿ ಮೈಡಾಲಾ ಡಾಟ್‌ ಕಾಮ್ ನ್ನು ನೀವು ಯೂಸರ್‌ನ ರೀತಿಯಲ್ಲಿ ನೋಡಿದರೆ ಇದೊಂದು ಕೂಪನಿಂಗ್‌ ಸೈಟ್‌ಆಗಿದೆ. ಇದರಿಂದ ನಿಮಗೆ ಸಾಕಷ್ಟು ಉಳಿತಾಯವಾಗುತ್ತದೆ. ಇದರ ಮುಖಾಂತರ ನೀವು ಹೆಲ್ತ್ ಚೆಕಪ್‌, ಬ್ಯೂಟಿ ಡೀಲ್‌, ಸಲೂನ್, ರೆಸ್ಟೋರೆಂಟ್‌ ಮುಂತಾದ ಖರ್ಚುಗಳಲ್ಲಿ ಸಾಕಷ್ಟು ಉಳಿತಾಯ ಮಾಡಬಹುದು. ನಾನು ಮೈಡಾಲಾ ಶುರು ಮಾಡಿದಾಗ ಭಾರತದಲ್ಲಿ ಆಗ `ಹೇಗನ್‌’ ಎಂಬ ಆನ್‌ಲೈನ್‌ ಇಂಡಸ್ಟ್ರಿ ಮಾತ್ರ ಚಾಲ್ತಿಯಲ್ಲಿತ್ತು.”

“ತಮ್ಮ  ಪತಿ ಹಾಗೂ ಕುಟುಂಬದವರ ಬೆಂಬಲವನ್ನು ಅವರು ಅತ್ಯಂತ ಪ್ರಮುಖ ಎಂದು ಪರಿಗಣಿಸುತ್ತಾರೆ. ಮನೆಯವರ ಸಹಕಾರ ಇರದೇ ಇದ್ದರೆ ಪ್ರಗತಿ ಸಾಧಿಸುವುದು ಸಾಧ್ಯವಿಲ್ಲ ಎಂದೂ ಅವರು ಹೇಳುತ್ತಾರೆ.

“ನಾನು ಮಕ್ಕಳೊಂದಿಗೆ ಸಮಯ ಕಳೆಯುವುದನ್ನು ನನ್ನ ಜೀವನದ ಪ್ರಮುಖ ಹಂತ ಎಂದು ಭಾವಿಸುತ್ತೇನೆ. ಅವರ ಜೀವನ ಅರಳುವುದೇ ತಂದೆತಾಯಿಯ ಗುಣಮಟ್ಟದ ಸಮಯದಿಂದಾಗಿ. ನಾನು ಮುಂಜಾನೆ ನನ್ನಿಬ್ಬರೂ ಮಕ್ಕಳನ್ನು ಸಿದ್ಧಪಡಿಸಿ ಶಾಲೆಗೆ ಕಳುಹಿಸುತ್ತೇನೆ. ಶನಿವಾರ ಭಾನುವಾರ ಅವರ ಜೊತೆಗೇ ಸಮಯ ಕಳೆಯುತ್ತೇನೆ.

ಜೀವನದ ಸಿಹಿಕಹಿ ಕ್ಷಣಗಳು

“ಪ್ರತಿ ದಿನವನ್ನು ನಾನು `ಬೆಸ್ಟ್ ಡೇ ಆಫ್‌ ಲೈಫ್‌’ ಎಂದೇ ಭಾವಿಸುತ್ತೇನೆ. ನಮ್ಮ ಕಂಪನಿ ಶುರು ಮಾಡಿದಾಗ ನಾವು ನಮ್ಮ ಉಳಿತಾಯವನ್ನೆಲ್ಲ ಈ ಕಂಪನಿಯಲ್ಲಿ ವಿನಿಯೋಗಿಸಿದ್ದೆವು. ನಮ್ಮ ಬಳಿ ಕೆಲವು ಇನ್ವೆಸ್ಟರ್‌ಗಳೂ ಕೂಡ ಬಂದಿದ್ದರು. ಅವರು ಇಂತಿಂಥ ಸೇವೆ ಕೊಡಿ, ಇಂತಿಂಥವು ಬೇಡ ಅಂತಾ ಹೇಳ್ತಿದ್ರು. ಈ ಕಾರಣದಿಂದ ನಾವು ಬಹಳಷ್ಟು ಇನ್ವೆಸ್ಟರ್‌ಗಳ ಪ್ರಪೋಸಲ್ ತಿರಸ್ಕಾರ ಮಾಡಿದೆವು. ನಮ್ಮ ಟೀಮಿನವರು, ಕುಟುಂಬದವರು ಸಾಕಷ್ಟು ಬೆಂಬಲ ಕೊಟ್ಟಿದ್ದರಿಂದ ನಾವು ನಮ್ಮದೇ ಆದ ಧ್ಯೇಯದೊಂದಿಗೆ ಮುಂದೆ ಹೊರಟೆವು.

ಮಹಿಳೆಯರು ಸ್ಟ್ರಾಂಗ್ಮತ್ತು ಕೇರಿಂಗ್

“ಮಹಿಳೆಯರು ತಮ್ಮನ್ನು ತಾವು ಬದಲಿಸಿಕೊಳ್ಳಬೇಕಾದ ಅಗತ್ಯವಿದೆ. ಮಹಿಳೆಯರು ತಮ್ಮನ್ನು `ಗಿಲ್ಟ್ ಕ್ವೀನ್‌’ ಎಂದು ಭಾವಿಸುತ್ತಾರೆ. ಅಂದರೆ ಯಾವುದೇ ತಪ್ಪು ಘಟಿಸಿದರೂ ಅದನ್ನು ತಮ್ಮ ಮೇಲೆಯೇ ಹಾಕಿಕೊಳ್ಳುತ್ತಾರೆ. ನಾವು ಅದನ್ನು ಸಾಧಿಸಿ ತೋರಿಸುತ್ತೇವೋ ಇಲ್ಲವೋ ಎಂಬ ಅಳುಕು ಅವರಲ್ಲಿರುತ್ತದೆ. ನನ್ನ ಸ್ಥಿತಿಯೂ ಹಾಗೇ ಇತ್ತು. ಮುಂದೇನು ಎಂಬ ಚಿಂತೆ ಕಾಡುತ್ತಿತ್ತು. ಆದರೆ ಅದನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ನಮ್ಮ ಬಳಿ ಇರುತ್ತದೆ. ಏಕೆಂದರೆ ಮಹಿಳೆಯರು ಸ್ಟ್ರಾಂಗ್‌ ಮತ್ತು ಕೇರಿಂಗ್‌ ಸ್ವಭಾವಗಳೆರಡನ್ನೂ ಮೈಗೂಡಿಸಿಕೊಂಡಿರುತ್ತಾರೆ.

ಪ್ರಭಾ ಮಾಧವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ