ಪ್ರತಿದಿನ ಅಡುಗೆಮನೆಯಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಕತ್ತರಿಸುವಾಗ ಅವುಗಳ ಬೀಜಗಳು ಅಥವಾ ತುದಿಗಳನ್ನು ಕತ್ತರಿಸಿ ಕಸದ ಡಬ್ಬಿಗೆ ಎಸೆಯುತ್ತೇವೆ. ಅದರೆ ಅವುಗಳಿಂದ ಸುಂದರ ಗಿಡಗಳನ್ನು ಬೆಳೆಸಿ ಮನೆಯ ಸೌಂದರ್ಯ ಹೆಚ್ಚಿಸಬಹುದೆಂದು ನಿಮಗೆ ಗೊತ್ತೇ? ಹಣ್ಣು ಮತ್ತು ತರಕಾರಿಗಳ ಬೀಜಗಳು ಮತ್ತು ತುದಿಗಳನ್ನು ಬೆಳೆಸಿ ಮನೆಯ ಸೌಂದರ್ಯ ಹೆಚ್ಚಿಸುವುದು ಹೇಗೆಂದು ತಿಳಿಸುತ್ತಿದ್ದೇವೆ.

ಕ್ಯಾರೆಟ್‌ : ನೀವು ಕ್ಯಾರೆಟ್‌ನ್ನು ಕತ್ತರಿಸಿದಾಗ ಅವುಗಳ ಬುಡ ಭಾಗವನ್ನು ಎಸೆಯಬೇಡಿ. ಕುಂಡದಲ್ಲಿ ಒಳ್ಳೆಯ ಗೊಬ್ಬರ ಸೇರಿಸಿದ ಮಣ್ಣು ತುಂಬಿಸಿ ಅದರಲ್ಲಿ ನೆಡಿ. ನಂತರ ನೀರು ಹಾಕಿ. ಕೆಲವೇ ದಿನಗಳಲ್ಲಿ ನಿಮಗೆ ಸುಂದರ ಗಿಡ ಹುಟ್ಟುತ್ತಿರುವುದು ಕಾಣುತ್ತದೆ. ಈ ಗಿಡಗಳಿಂದ ಮನೆಯ ಶೋಭೆ ಹೆಚ್ಚುವುದಲ್ಲದೆ, ಕ್ಯಾರೆಟ್‌ ಕೂಡ ಸಿಗುತ್ತದೆ.

ಬೆಳ್ಳುಳ್ಳಿ : ಬೆಳೆಯುತ್ತಿರುವ ಬೆಳ್ಳುಳ್ಳಿ ಬಹಳ ಸುಂದರವಾಗಿರುತ್ತದೆ. ಬೆಳ್ಳುಳ್ಳಿ ಬೆಳೆಯಲು ನಿಮಗೆ 10 ಇಂಚು ಆಳದ ಕುಂಡ ಹಾಗೂ ಬಿಸಿಲಿನ ಅವಶ್ಯಕತೆ ಇದೆ. ಕುಂಡದಲ್ಲಿ ಮಣ್ಣು ತುಂಬಿ ಅದನ್ನು ಒದ್ದೆ ಮಾಡಿ ನಂತರ ಬೆಳ್ಳುಳ್ಳಿಯ ಮೊಗ್ಗುಗಳನ್ನು ಸಿಪ್ಪೆ ಬಿಡಿಸದೆ 4-4 ಇಂಚು ದೂರದಲ್ಲಿ ನೆಡಿ. 1 ವಾರದಲ್ಲಿ ನಿಮಗೆ ಹಸಿರು ಎಲೆಗಳು ಬೆಳೆಯುವುದು ಕಾಣುತ್ತದೆ. ಅದು ಬಾಲ್ಕನಿಯನ್ನು ಸುಂದರವಾಗಿಸುತ್ತದೆ.

ಶುಂಠಿ : ಶುಂಠಿ ಬೆಳೆಸುವುದು ಬಹಳ ಸುಲಭ. ನಿಮ್ಮ ಮನೆಯಲ್ಲಿ ಉಳಿದ ಶುಂಠಿಯ ಚೂರನ್ನು ಕುಂಡದಲ್ಲಿ ನೆಡಿ. ಇದನ್ನು ಬೆಳೆಸಲು ಹೆಚ್ಚು ಬಿಸಿಲಿನ ಅಗತ್ಯವಿಲ್ಲ. ಕೆಲವೇ ದಿನಗಳಲ್ಲಿ ಸುಂದರ ಗಿಡ ಬೆಳೆಯುತ್ತಿರುವುದು ಕಾಣುತ್ತದೆ. ಅದರಿಂದ ನಿಮಗೆ ಶುಂಠಿಯೂ ಸಿಗುತ್ತದೆ. ಜೊತೆಗೆ ಮನೆಯ ಸೌಂದರ್ಯ ಹೆಚ್ಚುತ್ತದೆ.

ಇಷ್ಟೇ ಅಲ್ಲ, ಶುಂಠಿಯ ಚೂರನ್ನು ಸ್ವಚ್ಛಗೊಳಿಸಿ ಅದನ್ನು ಸುಂದರವಾದ ಗಾಜಿನ ಜಾರ್‌ಲ್ಲಿ ಅಥವಾ ಅಗಲವಾದ ಗಾಜಿನ ಗ್ಲಾಸ್‌ನಲ್ಲಿ ಹಾಕಿ ಕಿಚನ್‌ ಕೌಂಟರ್‌ನಲ್ಲಿಡಿ. ಕೆಲವೇ ದಿನಗಳಲ್ಲಿ ಅದರಲ್ಲಿ ಬಿಳಿಯ ಬೇರುಗಳು ಬರುವುದು. ಅದು ಬಹಳ ಸುಂದರವಾಗಿರುವುದು. ಆಗಾಗ್ಗೆ ನೀರನ್ನು ಅಗತ್ಯವಾಗಿ ಬದಲಿಸುತ್ತಿರಿ.

ಈರುಳ್ಳಿ : ನೀವು ಹಸಿ ಈರುಳ್ಳಿ ಕತ್ತರಿಸುವಾಗ ಅದರ ತುದಿಗಳನ್ನು ಕಸದ ಡಬ್ಬಿಯಲ್ಲಿ ಎಸೆಯಬಹುದು. ಇನ್ನು ಮುಂದ ಈರುಳ್ಳಿ ಕತ್ತರಿಸಿದಾಗ ಅದರ ತುದಿಗಳನ್ನು ನೀರು ತುಂಬಿದ ಗಾಜಿನ ಬಟ್ಟಲಿನಲ್ಲಿ ಹಾಕಿ. ತುದಿ ನೀರಿನಲ್ಲಿ ಮುಳುಗದೆ ಈಜುವಂತಿರಬೇಕು. ನೀರನ್ನು ಪ್ರತಿ 2 ದಿನಗಳಿಗೊಮ್ಮೆ ಅಗತ್ಯವಾಗಿ ಬದಲಿಸಬೇಕು. ಇಲ್ಲದಿದ್ದರೆ ದುರ್ವಾಸನೆ ಬೀರುತ್ತದೆ. ಈ ಬಟ್ಟಲನ್ನು ಬಿಸಿಲು ಬೀಳುವ ಜಾಗದಲ್ಲಿಡಿ. ಕೆಲವೇ ದಿನಗಳಲ್ಲಿ ಬೇರು ಹಾಗೂ ಎಲೆಗಳು ಹೊರಬರುತ್ತವೆ. ಆಮ್ಲೆಟ್‌ ತಯಾರಿಸುವಾಗ ಈ ತಾಜಾ ಎಲೆಗಳನ್ನು ಕತ್ತರಿಸಿ ಹಾಕಿ.

Ghar-main-poudha-2

ಟೊಮೇಟೊ : ಒಂದು ವೇಳೆ ಟೊಮೇಟೊ ಕೊಳೆತರೆ ಅದನ್ನು ಎಸೆಯಬೇಡಿ. ಅದನ್ನು ಕವರ್‌ನಲ್ಲಿ ಹಾಕಿ ಪೂರ್ತಿ ಕೊಳೆಯಲು ಬಿಡಿ. ಟೊಮೇಟೊ ಒಣಗಿ ಬರೀ ಬೀಜಗಳು ಉಳಿದಾಗ ಅವನ್ನು ತೋಟದಲ್ಲಿ ಬಿತ್ತಿ ಕೆಲವೇ ದಿನಗಳಲ್ಲಿ ಟೊಮೇಟೊ ಎಲೆಗಳು ಚಿಗುರುವುದು ಕಂಡುಬರುತ್ತದೆ.

ಟೊಮೇಟೊವನ್ನು ಬಕೆಟ್‌ನಲ್ಲಿ ಬಹಳ ಸುಂದರವಾಗಿ ಬೆಳೆಸಬಹುದು. ಅದಕ್ಕೆ ದೊಡ್ಡ ಬಕೆಟ್‌ ಬೇಕು. ಬಕೆಟ್‌ನ ಕೆಳಭಾಗದಲ್ಲಿ ಪಾಟ್‌ಗಳಲ್ಲಿ ಇರುವಂತೆ ನೀರು ಹೋಗುವ ವ್ಯವಸ್ಥೆ ಇರಬೇಕು. ನಂತರ ಗೊಬ್ಬರ, ಮಣ್ಣು, ಔಷಧಿ ಮತ್ತು ಮೊಟ್ಟೆಯ ಹೊರ ಕವಚವನ್ನು ಬೆರೆಸಿ ಬಕೆಟ್‌ನಲ್ಲಿ ಹಾಕಿ. ಈಗ ಬೀಜಗಳನ್ನು ಮಣ್ಣಿನ ಮೇಲ್ಮೈನಲ್ಲಿ ತೆಳುವಾಗಿ ಬಿತ್ತಿ. ಬಹಳ ಆಳವಾಗಿ ಬಿತ್ತಬೇಡಿ. ಬಕೆಟ್‌ನಲ್ಲಿ ಟೊಮೇಟೊ ಬೆಳೆಯತೊಡಗಿದಾಗ, ಅವುಗಳ ಸೌಂದರ್ಯ ಕಂಡು ನಿಮಗೆ ಬಹಳ ಖುಷಿಯಾಗುತ್ತದೆ. ಸಾಮಾನ್ಯವಾಗಿ ಟೊಮೇಟೊ ನೆಲದಲ್ಲಿ ಹರಡಿಕೊಂಡು ಬೆಳೆಯುತ್ತದೆ. ಆದ್ದರಿಂದ ಬಕೆಟ್‌ನಲ್ಲಿ ಟೊಮೇಟೊವನ್ನು ಸಮತಟ್ಟಿನಲ್ಲಿ ಬೆಳೆಸಬೇಡಿ.

12 ಇಂಚು ಉದ್ದವಾದಾಗ ಟೊಮೇಟೊದ ರೆಂಬಗಳನ್ನು ಮೃದುವಾಗಿ 1 ಕೋಲಿಗೆ ಕಟ್ಟಿ. ಆಗ ಅವು ನೇರವಾಗಿ ಮೇಲಕ್ಕೆ ಹೋಗುತ್ತದೆ. ಆಗ ಮನೆಯ ಸೌಂದರ್ಯ ಹೆಚ್ಚುವುದಲ್ಲದೆ, ತಿನ್ನಲು ಒಳ್ಳೆಯ ಟೊಮೇಟೊ ಸಹ ಸಿಗುತ್ತದೆ.

ನೀವು ಮನೆಯೊಳಗೆ ಕಡಿಮೆ ಬೆಳಕಿನಲ್ಲೂ ಗಿಡಗಳನ್ನು ಬೆಳೆಸಿ. ಮನೆಯನ್ನು ಸುಂದರವಾಗಿ ಹಾಗೂ ಸುವಾಸನೆಭರಿತವಾಗಿಯೂ ಮಾಡಬಹುದು.

ಪುದೀನಾ ಸೊಪ್ಛು : ಸಣ್ಣ ಕುಂಡಗಳಲ್ಲಿ ಗೊಬ್ಬರ ಹಾಗೂ ಮಣ್ಣನ್ನು ಬೆರೆಸಿಡಿ. ನಂತರ ಮಾರುಕಟ್ಟೆಯಲ್ಲಿ ಖರೀದಿಸಿದ ಪುದೀನಾದ ಕಾಂಡಗಳಿಂದ ಪುದೀನ ಎಲೆಗಳನ್ನು ಕಿತ್ತು ಕಾಂಡಗಳನ್ನು ಹೊಸ ಕುಂಡಗಳಲ್ಲಿ ಇಡಿ. 3-4 ಕಾಂಡಗಳನ್ನು ಒಟ್ಟಿಗೆ ನೆಟ್ಟರೆ ಯಾವುದಾದರೂ ಒಂದು ಬೇರು ಬಿಡುತ್ತದೆ.

ಕ್ಯಾಪ್ಸಿಕಂ : ಕುಂಡದಲ್ಲಿ ಕ್ಯಾಪ್ಸಿಕಂನ ಬೀಜ ಬಿತ್ತಿ. ಗಿಡ ಬೆಳೆಯಲು 3-4 ವಾರ ಬೇಕು. ಬಹಳಷ್ಟು ಬೀಜಗಳನ್ನು ಒಂದು ಕುಂಡದಲ್ಲಿ ಹಾಕಬೇಡಿ. ಗಿಡಗಳು ಬೆಳೆದಾಗ ಬಹಳ ಸಂದರವಾಗಿ ಕಾಣುತ್ತವೆ. ಬಕೆಟ್‌ ಅಥವಾ ಕುಂಡದಲ್ಲಿ ಬೆಳೆದಾಗ ನಿಮಗೆ ಸಣ್ಣ ಆಕಾರದಲ್ಲಿಯೇ ಸಿಗುತ್ತದೆ. ಆದ್ದರಿಂದ ಕುಂಡದಲ್ಲಿ ಹೆಚ್ಚು ಬೀಜಗಳನ್ನು ಬಿತ್ತಬೇಡಿ.

ಆಲೂಗಡ್ಡೆ :  ನೀವು ಬಹಳ ಕಾಲ ಆಲೂಗಡ್ಡೆ ಉಪಯೋಗಿಸದಿದ್ದರೆ ಅವುಗಳಿಗೆ ಕಣ್ಣುಗಳು ಬಂದಿರುವುದು ಕಾಣುತ್ತದೆ. ಅವನ್ನು ಎಸೆಯಬೇಡಿ. ಆಲೂಗಡ್ಡೆಯನ್ನು 3-4 ತುಂಡುಗಳಾಗಿ ಹೆಚ್ಚಿ. ಪ್ರತಿ ತುಂಡಿನಲ್ಲಿಯೂ ಕನಿಷ್ಠ 1 ಕಣ್ಣು ಅಗತ್ಯವಾಗಿ ಇರಬೇಕು. ಆ ತುಂಡುಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಅವು ಕಪ್ಪಗೆ ಗಟ್ಟಿಯಾಗುವಂತೆ ಮಾಡಿ. ಹಾಗೆ ಮಾಡುವುದರಿಂದ ಅವು ಕೊಳೆಯುವುದಿಲ್ಲ ಹಾಗೂ ಕ್ರಿಮಿಕೀಟಗಳು ತಗುಲುವುದಿಲ್ಲ.

ಕುಂಡದಲ್ಲಿ ಬೆಳೆಯವ ಆಲೂಗಡ್ಡೆಗೆ ಮಣ್ಣು ಹಾಗೂ ಗೊಬ್ಬರದ ಮಿಶ್ರಣ ಸಮ ಪ್ರಮಾಣದಲ್ಲಿರಬೇಕು. ಆಲೂಗಡ್ಡೆಯ ತುಂಡುಗಳನ್ನು 8 ಇಂಚಿನ ಆಳದಲ್ಲಿ ಬಿತ್ತಿ. ಕಣ್ಣುಗಳು ಮೇಲೆ ಕಾಣುಂತಿರಲಿ. ಬಿತ್ತಿದ ಆಲೂಗಡ್ಡೆಯ ತುಂಡಿನ ಮೇಲೆ ಬರೀ 3-4 ಇಂಚಿನವರೆಗೆ ಮಣ್ಣು ಹಾಕಿ. ಬೇರು ಗಟ್ಟಿಯಾಗಿ ಆಲೂಗಡ್ಡೆ ಮೇಲಿನ ಪದರದಲ್ಲಿ ಕಂಡುಬಂದಾಗ ಮೇಲೊಂದಿಷ್ಟು ಮಣ್ಣು ಹಾಕಿ ಅವನ್ನು ಮುಚ್ಚಬೇಕು.

ಟಿ. ಹರಿಣಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ