ಮೀನಾರ ಪ್ರತಿಬಿಂಬವಾಗಲಿರುವ ಕಂಗನಾ
ಮೀನಾ ಕುಮಾರಿಯಂಥ ಖ್ಯಾತ ಕಲಾವಿದೆಯ ಜೀವನವನ್ನು ಬೆಳ್ಳಿತೆರೆಯ ಮೇಲೆ ಜೀವಂತಾಗಿಸುವುದು ಇಂದಿನ ಆಧುನಿಕ ನಟೀಮಣಿಯರಿಗೆ ದೊಡ್ಡ ಸವಾಲೇ ಸರಿ. ಹೀಗಾಗಿ ಮೀನಾ ಕುಮಾರಿ (ಕನ್ನಡದಲ್ಲಿ ಕಲ್ಪನಾ ಕುರಿತು `ಅಭಿನೇತ್ರಿ’ ಚಿತ್ರ ಬಂದಂತೆ) ಬಯೋಪಿಕ್ ಚಿತ್ರ ರೂಪಿಸಿಸುತ್ತಿರುವ ತಿಗ್ಮಾಂಶೂ ಧೂಲಿಯಾ, ಈ ಟ್ರಾಜಿಡಿ ಕ್ವೀನ್‌ನನ್ನು ಸಮರ್ಥವಾಗಿ ತೋರಿಸಲೆಂದೇ ಕಂಗನಾ ರಾಣಾವತ್‌ಳನ್ನು ಆರಿಸಿದ್ದಾರೆ. ಅವರು ಸಿನಿ ಪತ್ರಕರ್ತ ವಿನೋದ್ ಮೆಹ್ತಾರ `ಮೀನಾ ಕುಮಾರಿ : ಕ್ಲಾಸಿಕ್ ಬಯಾಗ್ರಫಿ’ ಆಧಾರಿತ ಇನ್ನೂ ಹೆಸರಿಡದ ಚಿತ್ರ ಮಾಡಲು ನಿರ್ಧರಿಸಿದ್ದಾರೆ. ಈ ಚಿತ್ರದ ನಿರ್ಮಾಪಕರಾದ ಸುನೀಲ್ ಬೋಹ್ರಾ ಈ ಪುಸ್ತಕದ ಹಕ್ಕುಗಳನ್ನೂ ಪಡೆದಿದ್ದಾರೆ. ಕಂಗನಾಳ ನಿಕಟವರ್ತಿಗಳ ಪ್ರಕಾರ, ಆಕೆ ಈ ಚಿತ್ರಕ್ಕಾಗಿ ತನ್ನ ಡೇಟ್ಸ್ ಸಹ ಕೊಟ್ಟಿದ್ದಾಳಂತೆ. ಬಹುಶಃ ಆಗಸ್ಟ್ ಹೊತ್ತಿಗೆ ಚಿತ್ರೀಕರಣ ಶುರುವಾಗಬಹುದು.
ಹರಾಮ್ ಖೋರ್ ನವಾಜುದ್ದೀನ್!
ಇದೇನು ಶೀರ್ಷಿಕೆ ಎಂದು ಹುಬ್ಬೇರಿಸದಿರಿ. ಅಸಲಿಗೆ ನವಾಜುದ್ದೀನ್ ಸಿದ್ದಿಕಿ ಇದೀಗ `ಹರಾಮ್ ಖೋರ್’ ಚಿತ್ರದಲ್ಲಿ ಶ್ವೇತಾ ತ್ರಿಪಾಠಿ ಜೊತೆ ಕೆಲಸ ಮಾಡುತ್ತಿದ್ದಾರೆ. ಶ್ಲೋಕ್ ಶರ್ಮಾರ ನಿರ್ದೇಶನದಲ್ಲಿ ಮೂಡಲಿರುವ ಈ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್‌ಇಂಡಿಯನ್ ಫೆಸ್ಟಿವ್ ಆಫ್ ಲಾಸ್‌ಏಂಜಲೀಸ್‌ನಲ್ಲಿ ನಡೆಯಲಿದೆ. 29 ವರ್ಷದ ಶ್ವೇತಾಳಿಗೆ ಇದು ಡೆಬ್ಯು ಚಿತ್ರ. ದೆಹಲಿ ನಿವಾಸಿ ಶ್ವೇತಾಳ ತಂದೆ ಮಾಜಿ ಮಂತ್ರಿಗಳೂ ಹೌದು. ಈ ಚಿತ್ರದಲ್ಲಿ ನವಾಜುದ್ದೀನ್‌ಗೆ ತನ್ನ ವಿದ್ಯಾರ್ಥಿನಿಯನ್ನೇ ಪ್ರೇಮಿಸುವ ಶಿಕ್ಷಕನ ಪಾತ್ರ! ಅವರಿಬ್ಬರ ಸಂಬಂಧವನ್ನು ಸಮಾಜ ಒಪ್ಪದಿರುವುದೇ ಇದರ ಕಥೆ.
ನನ್ನ ಸೌಂದರ್ಯದ ರಹಸ್ಯ
ಪ್ರೌಢ ವಯಸ್ಸಿನಲ್ಲೂ ಇನ್ನೂ ಯಂಗ್ ಆಗಿಯೇ ಕಾಣಿಸಿಕೊಳ್ಳುವ ಮಾಧುರಿ ದೀಕ್ಷಿತ್, ಇಂದಿಗೂ ತನ್ನ ಮೋಡಿ ಉಳಿಸಿಕೊಂಡಿದ್ದಾಳೆ. ಈ ವಯಸ್ಸಿನಲ್ಲೂ ತನ್ನ ಚರ್ಮದ ಮೈಕಾಂತಿ ಹೀಗಿರುವ ಗುಟ್ಟನ್ನು ತೆರೆದಿಟ್ಟಿದ್ದಾಳೆ. `ವಿಶ್ವ ಆರೋಗ್ಯ ದಿನ’ದಂದು ಮಾತನಾಡುತ್ತಾ ಈಕೆ ತನ್ನ ಅಭಿಮಾನಿಗಳಿಗೆ ಸದಾ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾಳೆ. ತನ್ನ ಸೌಂದರ್ಯದ ಕುರಿತಾಗಿ ಮಾಧುರಿ ಟ್ವೀಟರ್‌ನಲ್ಲಿ, ನಟನೆ ಮತ್ತು ನೃತ್ಯ ತನ್ನನ್ನು ಸದಾ ಬಿಝಿ ಆಗಿರಿಸಿದೆ. ಇದರಿಂದಾಗಿ ತನುಮನ ಸದಾ ಆರೋಗ್ಯಕರವಾಗಿದೆ. ನೀವು ನಿಮ್ಮ ದೇಹವನ್ನು ಸದಾ ಫಿಟ್ ಆಗಿರಿಸಿಕೊಳ್ಳಬಯಸಿದರೆ, ನಿಯಮಿತವಾಗಿ ಬೆಳಗಿನ ವಾಕಿಂಗ್ ಜಾಗಿಂಗ್ ಹಾಗೂ ವ್ಯಾಯಾಮಕ್ಕೆ ಮಹತ್ವ ಕೊಡಿ. ನಿಮ್ಮ ಆಹಾರ ಸದಾ ಪೌಷ್ಟಿಕ ಹಾಗೂ ಹೆಲ್ದಿ ಆಗಿರಬೇಕು ಎನ್ನುತ್ತಾಳೆ.
ಡೇಝಿಗೆ ಸಲ್ಲು ನೀಡಿದ ಸಲಹೆ
ಸಲ್ಮಾನ್ ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿ ಇದೀಗ ದೊಡ್ಡ ಪಾತ್ರದ ಹುಡುಕಾಟದಲ್ಲಿರುವ ನಟಿ ಡೇಝಿಗೆ ಐಟಂ ಸಾಂಗ್ಸ್ ಅಥವಾ ಕ್ಯಾಮಿಯೋ ರೋಲ್ಸ್ ಸಾಕಾಗಿದೆಯಂತೆ. ಆಕೆಯ ಈ ಚಿಂತೆಗೆ ಸಲ್ಲು ಪರಿಹಾರ ಹೇಳಿದ್ದಾನೆ. ಕೆಲವು ದಿನಗಳ ಹಿಂದೆ ನಿರ್ಮಾಪಕ ಭೂಷಣ್ ಕುಮಾರ್ ತಮ್ಮ ಮುಂದಿನ `ಐ ಹೇಟ್ ಲವ್ ಸ್ಟೋರೀಸ್’ ಚಿತ್ರಕ್ಕಾಗಿ ನಾಯಕಿ ಬೇಕೆಂದು ಹುಡುಕುತ್ತಿದ್ದರು. ತಕ್ಷಣ ಸಲ್ಲು ಭೂಷಣ್‌ಗೆ ಡೇಝಿಯ ಹೆಸರು ಶಿಫಾರಸ್ಸು ಮಾಡಿದನಂತೆ. ಅಂಥ ಸಲ್ಮಾನ್ ಫ್ರೆಂಡ್ ಆಗಿ ಜೊತೆಗಿರುವಾಗ ಡೇಝಿ ಮುಂದಿನ ಚಿತ್ರಗಳಿಗಾಗಿ ಅವರಿವರನ್ನು ಬೇಳಾಡಬೇಕಿಲ್ಲ.
ಕಿರುತೆರೆಗೆ ಬರಲಿದ್ದಾಳೆ ದಬಂಗ್ ಗರ್ಲ್
ಮೂವರು ಮಹಾನ್ ಖಾನ್‌ಗಳ ನಂತರ ಅಮಿತಾಬ್ ಬಚ್ಚನ್ ಆದಮೇಲೆ ಈಗ ಸೋನಾಕ್ಷಿ ಸಿನ್ಹಾ ಸಹ ಕಿರುತೆರೆಯಲ್ಲಿ ಮಿಂಚಲಿದ್ದಾಳಂತೆ. ಸೋನಾಕ್ಷಿ ಇದೀಗ ಸೋನಿ ಟಿ.ವಿ.ಯ ಮ್ಯೂಸಿಕ್ ರಿಯಾಲಿಟಿ ಶೋ `ಇಂಡಿಯನ್ ಐಡಲ್ ಜೂನಿಯರ್’ ಜಡ್ಜ್ ಪ್ಯಾನೆಲ್‌ಲ್ಲಿ ಶಾಮೀಲಾಗಿದ್ದಾಳೆ. ಈ ಮಾತಿಗೆ ಪುಷ್ಟಿ ನೀಡುತ್ತಾ ಸೋನಾಲಿ ಹೇಳುತ್ತಾಳೆ, “ಮಕ್ಕಳ ಈ ಮ್ಯೂಸಿಕ್ ರಿಯಾಲಿಟಿ ಶೋಗೆ ಜಡ್ಜ್ ಆಗಿ ಬರಲು ನಾನು ಬಹಳ ಉತ್ಸುಕಳಾಗಿದ್ದೇನೆ. ಈಗಲೂ ನಾನು ಅಂತರಾಳದಲ್ಲಿ ಚಿಕ್ಕ ಹುಡುಗಿಯೇ! ಇಂಥ ಶೋಗಳೆಂದರೆ ನನಗೆ ಬಲು ಇಷ್ಟ ಪ್ರತಿಭೆಗಳ ಭಂಡಾರವೇ ಇದರಲ್ಲಿ ಅಡಗಿರುತ್ತದೆ. ಈ ಶೋ ನನಗಂತೂ ಪರ್ಫೆಕ್ಟ್ ಅನಿಸುತ್ತದೆ.”
9 ಸುದೀರ್ಘ ಗಂಟೆಗಳ ಕಾಲ ನೀರಿನಲ್ಲಿ
ಯಾರಿಗಾದರೂ 9 ಗಂಟೆಗಳ ಕಾಲ ನೀರಿನಲ್ಲೇ ಇರಬೇಕಾಗುತ್ತದೆ ಎಂದರೆ ಅವರ ಗತಿ ಏನಾದೀತು ಎಂದು ನೀವು ಸುಲಭವಾಗಿ ಊಹಿಸಬಹುದು. ಇತ್ತೀಚೆಗೆ ನಟಿ ತಾಪಸೀ ಪನ್ನು ತನ್ನ ಹೊಸ ಚಿತ್ರಕ್ಕಾಗಿ ಇಂಥ ಘನಘೋರ ಸಾಹಸ ಮಾಡಿದ್ದಾಳೆ. ತನ್ನ ಮುಂದಿನ ಚಿತ್ರದ ಅಂಡರ್ ವಾಟರ್ ಶೂಟ್‌ಗಾಗಿ ಹೀಗೆ ಮಾಡಿದಳು. ಸತತ 9 ಗಂಟೆ ಕಾಲ ನೀರಿನಲ್ಲೇ ಇದ್ದುಬಿಟ್ಟಿದ್ದಾಳೆ. ಈ ಚಿತ್ರಕ್ಕಾಗಿ ತಾಪಸೀ ತಾನೇ ಹಲವಾರು ಸ್ಟಂಟ್ಸ್ ಮಾಡಿದ್ದಾಳೆ. ಆದರೆ ನೀರಿನಡಿಯ ಈ ಸ್ಟಂಟ್ ಅವಳಿಗೆ ದುಬಾರಿಯಾಯ್ತು, ಏಕೆಂದರೆ ನೀರಿನಿಂದ ಹೊರಬರುತ್ತಲೇ ಅವಳ ಆರೋಗ್ಯ ಹದಗಿಟ್ಟಿತು. ಆಲ್ ದಿ ಬೆಸ್ಟ್ ತಾಪಸೀ!
ರೀಲ್ರಿಯಲ್ ಅಣ್ಣ ತಂಗಿ
ನಟಿ ಹುಮಾ ಕುರೇಶಿ ಹಾಗೂ ಆಕೆಯ ಅಣ್ಣ ನಟ ಸಾಕಿಬ್ ಸಲೀಂ ಇಬ್ಬರೂ ಒಟ್ಟಿಗೆ ಹಾಲಿವುಡ್‌ನ `ಆಕುಲಸ್’ ಚಿತ್ರದ ಹಿಂದಿ ಅವತರಣಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಕಿಬ್ ಇದಕ್ಕೆ ಮುಂಚೆ `ಮೇರೆ ಡ್ಯಾಡ್ ಕೀ ಮಾರುತಿ’ ಹಾಗೂ `ಹಾಹಾಯಿ’ ಚಿತ್ರಗಳಿಂದ ಪ್ರೇಕ್ಷಕರ ಮನದಲ್ಲಿ ಮನೆ ಮಾಡಿದ್ದಾನೆ. ಆತ `ಬದಲಾಪುರ್’ ಚಿತ್ರದಲ್ಲಿ ತಂಗಿ ಹುಮಾಳ ಪಾತ್ರವನ್ನು ಬಹಳ ಮೆಚ್ಚಿಕೊಂಡಿದ್ದಾನೆ. ತಾವು ಮುಂದೆ ನಟಿಸಲಿರುವ ಚಿತ್ರ ಸಹ ಅಣ್ಣತಂಗಿಯರ ಅನುಬಂಧದ ಕುರಿತು ಹೇಳುವ ಹಾರರ್ ಚಿತ್ರ ಎಂದು ವ್ಯಾಖ್ಯಾನಿಸಿದ. ಬಾಲಿವುಡ್‌ನಲ್ಲಿ ಇದೇ ಮೊದಲ ಬಾರಿಗೆ ರಿಯಲ್ ಲೈಫ್‌ನ ಅಣ್ಣತಂಗಿ ರೀಲ್ ಲೈಫ್‌ನಲ್ಲೂ ಹಾಗೆ ನಟಿಸಲಿದ್ದಾರೆ! (`ಕರ್ಪೂರದ ಗೊಂಬೆ’ ಚಿತ್ರದಲ್ಲಿ ಶರಣ್ ಶೃತಿ ಒಂದೇ ಚಿತ್ರದಲ್ಲಿದ್ದರೂ ಅಣ್ಣ ತಂಗಿ ಆಗಿರಲಿಲ್ಲ) ನನಗಂತೂ ಈ ಚಿತ್ರ ಬಹಳ ಉತ್ಸಾಹ ತಂದುಕೊಟ್ಟಿದೆ, ರಿಯಲ್ ಲೈಫ್‌ನಲ್ಲಿ ನಮ್ಮಿಬ್ಬರ ನಡುವೆ ಇರುವ ಹೊಂದಾಣಿಕೆ ಈ ಚಿತ್ರದಲ್ಲಿ ದಟ್ಟಾಗಿ ಕಾಣಿಸಲಿದೆ ಎಂದಳು.
ಡೆಬ್ಯುನಲ್ಲೇ ಬಿಗ್ ಫ್ಯಾಟ್ ವೆಡ್ಡಿಂಗ್
ಭಾರಿ ತೂಕದ 18 ಕಿಲೋ ಲಹಂಗಾ, ಅದರ ಮೇಲೆ 11 ಕೋಟಿ ರೂ. ಜ್ಯೂವೆಲರಿಯ ಮಣಭಾರ. ಅದನ್ನು ರಕ್ಷಿಸಲೆಂದು 45 ಗಾರ್ಡ್‌ಗಳ ಭದ್ರ ಕೋಟೆ! ರಾಜಸ್ಥಾನದ ಉರಿಯುವ ರಣಬಿಸಿಲಿನಲ್ಲಿ ಈ ಭಾರಿ ಗಾತ್ರ ಸಹಿಸುತ್ತಾ ಶೂಟಿಂಗ್ ನಡೆಸುವುದು ಸಾಮಾನ್ಯ ವಿಷಯವೇನಲ್ಲ. ನಟಿ ಸಯಾಮಿ ಖೇರ್ ಈ ನಿಟ್ಟಿನಲ್ಲಿ ಎಲ್ಲರ ಶಭಾಷ್ ಗಿರಿ ಗಿಟ್ಟಿಸಿದ್ದಾಳೆ. ರಾಕೇಶ್ ಓಂಪ್ರಕಾಶ್‌ರ `ಮಿರ್ಜಿಯಾ’ ಚಿತ್ರದಿಂದ ತನ್ನ ಕೆರಿಯರ್ ಶುರು ಮಾಡಿರುವ ಈಕೆ, ಅದೇ ರೀತಿ ಡೆಬ್ಯುಗೊಳ್ಳುತ್ತಿರುವ ನಟ ಹರ್ಷವರ್ಧನ್ ಕಪೂರ್ (ಅನಿಲ್ ಕಪೂರ್ ಮಗ) ಜೊತೆ ನಾಯಕಿಯಾಗಿದ್ದಾಳೆ. ಚಿತ್ರದಲ್ಲಿನ ಈಕೆಯ ಮದುವೆ ಸೀನ್ ಬಹಳ ಅದ್ಧೂರಿಯಾಗಿ ನಡೆಯುತ್ತಿತ್ತು. ಆಗ ಸಯಾಮಿ ಈ ಭಾರಿ ಡ್ರೆಸ್, ಒಡವೆ, ಬಿಸಿಲು, ಸೆಖೆ ಮಧ್ಯೆ ಈ ಸೀನ್ ನೀಟಾಗಿ ಬರುವಂತೆ ಬಹಳ ಕಷ್ಟಪಟ್ಟಿದ್ದಾಳೆ. ಈ ಸೀಕ್ವೆನ್ಸ್ ಗಮನಿಸಿದ ರಾಕೇಶ್, ಸಹಕಲಾವಿದರ ಉಡುಗೆಯತ್ತಲೂ ಅಷ್ಟೇ ಗಮನಹರಿಸಿದರಂತೆ. ಪ್ರತಿಯೊಬ್ಬರಿಗೂ ಮದುವೆಯ ಭಾರೀ ಕಾಸ್ಟ್ಯೂಮ್ ಏರ್ಪಡಿಸಿದ್ದಲ್ಲದೆ, ಮದುವೆ ಮನೆ ಅಲಂಕಾರಕ್ಕಾಗಿಯೇ ಕೋಲ್ಕತಾದಿಂದ 7 ಟ್ರಕ್‌ಗಳ ಚೆಂಡು ಹೂಗಳನ್ನು ತರಿಸಿದ್ದರಂತೆ!
ಎತ್ತಿಗೆ ಜ್ವರ ಬಂದರೆ…..
ವಿಶ್ವಕಪ್‌ನಲ್ಲಿ ಭಾರತೀಯ ತಂಡ ಹೀನಾಯವಾಗಿ ಸೋತಿದ್ದಕ್ಕೆ ಅನುಷ್ಕಾಳ ಮೇಲೆ ಗೂಬೆ ಕೂರಿಸುವವರಿಗೆ ಅವಳ ಬಾಯ್ ಫ್ರೆಂಡ್ ವಿರಾಟ್ ಕೊಹ್ಲಿ ಸರಿಯಾಗಿ ತಿರುಗೇಟು ನೀಡಿದ್ದಾರೆ. ಅವರ ಪ್ರಕಾರ, ಅನುಷ್ಕಾಳೇ ಈ ಸೋಲಿಗೆ ಕಾರಣ ಎನ್ನುವವರ ಮಾನಸಿಕತೆ ಖಂಡಿತಾ ಸರಿ ಇಲ್ಲ. ಕ್ರಿಕೆಟ್ ಆಡುತ್ತಿದ್ದವನು ನಾನು, ಹಾಗಿರುವಾಗ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಏಕೆ? ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕಳೆದ ತಿಂಗಳ ಪ್ಸ್ರಿ ಮ್ಯಾಚ್‌ನ ಉದ್ಘಾಟನಾ ಸಮಾರಂಭದಲ್ಲೂ ಕೋಲ್ಕತಾದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ವಿರಾಟ್ ಅನುಷ್ಕಾಳ ಪರ್ಫಾರ್ಮೆನ್ಸ್ ನೋಡಲೆಂದೇ ಅಲ್ಲಿಗೆ ಬಂದಿದ್ದರು. ಆದರೆ ಅನುಷ್ಕಾ ಇದಾವುದರ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣಿಸಲಿಲ್ಲ. ಒಂದು ಈವೆಂಟ್‌ನಲ್ಲಿ ತನ್ನ ಡ್ರೆಸ್ ಸೆನ್ಸ್ ಕುರಿತು ಆಕೆ, ನಾನು ಬಹಳ ಸಿಂಪಲ್. ನನ್ನ ಸ್ಟೈಲ್ ಬಲು ಸಾಧಾರಣ, ಧರಿಸಲು ಆರಾಮದಾಯಕ ಉಡುಗೆಗಳನ್ನಷ್ಟೇ ಬಳಸುತ್ತೇನೆ ಎಂದಳು. ಇವೆಲ್ಲ ಹೇಳಿಕೆಯ ಮಾತುಗಳಷ್ಟೇ, ಈಕೆ ಎಂಥ ಫ್ಯಾಷೆನ್‌ಬಲ್, ಗ್ಲಾಮರಸ್ ಎಂದು ಬಾಲಿವುಡ್‌ಗೇನು….? ಎಲ್ಲರಿಗೂ ಚೆನ್ನಾಗೇ ಗೊತ್ತಿದೆ ಬಿಡಿ.
ರಾಂಪ್ ಆಫ್ ಸ್ಟಾರ್ಸ್
ರಾಂಪ್‌ನಲ್ಲಿ ಬಾಲಿವುಡ್ ತಾರೆಯರು ಜಮೆಗೊಳ್ಳಲಿದ್ದಾರೆ ಅದೂ ಪರಿವಾರ ಸಮೇತ ಎಂದರೆ, ಯಾರಾದರೂ ಅಂಥ ಅವಕಾಶ ಕಳೆದುಕೊಳ್ಳಲು ಇಚ್ಛಿಸುತ್ತಾರೆಯೇ? ಇದನ್ನು ವೀಕ್ಷಿಸಲು ಹುಚ್ಚೆದ್ದು ಮುಗಿಬಿದ್ದ ಸಾವಿರಾರು ವೀಕ್ಷಕರು, ಇತ್ತೀಚೆಗೆ ಮುಂಬೈನಲ್ಲಿ ಡಿಸೈನರ್ ಮನೀಶ್ ಮಲ್ಹೋತ್ರಾರ ಚ್ಯಾರಿಟಿ ಫ್ಯಾಷನ್ ಶೋಗೆ ನುಗ್ಗಿದರು. ಇದರಲ್ಲಿ ಬಚ್ಚನ್ ಪರಿವಾರದ ಜೊತೆ, ಜಾವೇದ್ ಅಖ್ತರ್ ತಮ್ಮ ಮಗು ಫರ್ಹಾನ್ ಅಖ್ತರ್, ಶತ್ರುಘ್ನ ಸಿನ್ಹಾ ಮಗಳು ಸೋನಾಕ್ಷಿ ಜೊತೆ ರಾಂಪ್ ಮೇಲೆ ಹೆಜ್ಜೆ ಹಾಕಿದರು. ಬಿಗ್ ಬಿ ಗೋಲ್ಡನ್ ಕಲರ್‌ನ ಶೇರ್ವಾನಿ ಧರಿಸಿ ಮಗಳು ಶ್ವೇತಾ ಜೊತೆ ಬಂದಾಗ ಎಲ್ಲರ ದೃಷ್ಟಿ ಅವರತ್ತಲೇ ನೆಟ್ಟಿತ್ತು. ಜಯಾ ಕಪ್ಪು ಬಣ್ಣದ ಗೋಲ್ಡನ್ ಎಂಬ್ರಾಯಿಡರಿ ಸೂಟ್‌ನಲ್ಲಿ ಮಗ ಅಭಿಷೇಕ್ ಜೊತೆ ಕ್ಯಾಟ್ ವಾಕ್ ಮಾಡಿದರು. ಸೋನಾಕ್ಷಿ ಕೇಸರಿ ಬಣ್ಣದ ಲಹಂಗಾದಲ್ಲಿ ತಂದೆ ಜೊತೆ ಇದ್ದಳು. ಅನಿಲ್ ಕಪೂರ್ ಮಗಳು ಸೋನಂಳ ಗೋಲ್ಡನ್ ಟಾಪ್ ಜೊತೆ ಆಫ್ ಲೈಟ್‌ನ ಲಹಂಗಾ ಎಲ್ಲರ ಕಣ್ಮನ ಸೆಳೆಯಿತು.
ಫಿಟ್ & ಫೈನ್ ಶಾರೂಖ್
ತಮ್ಮ ಮುಂದಿನ `ಫ್ಯಾನ್’ ಚಿತ್ರದ ಶೂಟಿಂಗ್‌ನ್ನು ಲಂಡನ್‌ನಲ್ಲಿ ಮುಗಿಸಿಕೊಂಡು ಬರುತ್ತಿರುವ ಶಾರೂಖ್ ಖಾನ್, ಈ ಚಿತ್ರದ ಉಳಿದ ಶೂಟಿಂಗ್‌ನ್ನು ಮುಂಬೈನಲ್ಲಿ ಮುಗಿಸಲಿದ್ದಾರೆ. ಇತ್ತೀಚೆಗೆ ಡೆನಿಮ್ ಶರ್ಟ್‌ಟವೆಲ್ ಜಾಹೀರಾತಿಗಾಗಿ ಒಂದು ಚಾನೆಲ್ ನಲ್ಲಿ ಕಂಡುಬಂದರು. ತಮ್ಮ ಕಿರಿಯ ಮಗ ಅಬ್ರಾಮ್ ನನ್ನು ಪ್ಸ್ರಿ ಉದ್ಘಾಟನೆಗೆ ಕರೆತಂದು, ಎಲ್ಲರಿಗೂ ಹೆಮ್ಮೆಯಿಂದ ತೋರಿಸಿಕೊಂಡರು. ರಾಹುಲ್ ಢೋಲ್ಕಿಯಾರ `ರಯೀಸ್’ ಚಿತ್ರಕ್ಕೆ ನಾನು ಫಿಟ್ ಆಗಿದ್ದೇನೆ, ಹಾಗಾಗಿ ನನ್ನನ್ನೇ ಆ ಪಾತ್ರಕ್ಕೆ ಆರಿಸಿದ್ದಾರೆ ಎಂದರು. ಚಿತ್ರದ ಸ್ಕ್ರಿಪ್ಟ್ ನೋಡಿ ಹೀಗಂದರೆ ಹೊರತು ಇದಕ್ಕೆ ಗೂಢಾರ್ಥಗಳೇನಿಲ್ಲ. ಇವರ ಜೊತೆಗೆ ಈ ಚಿತ್ರದಲ್ಲಿ ನವಾಜುದ್ದೀನ್, ಫರ್ಹಾನ್ ಅಖ್ತರ್, ಮಹಿರಾ ಖಾನ್ ಮುಂತಾದವರ ದಂಡೇ ಇದೆ.
ಬಿಪಾಶಾಳ ಕಂಗಳು ಸರಿಯಿಲ್ಲ
ತನ್ನ ಬಟ್ಟಲು ಕಂಗಳ ಚೆಲುವಿನಿಂದ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಬಂಗಾಳಿ ಬಾಲೆ ಬಿಪಾಶಾ ಬಸು, ಇತ್ತೀಚೆಗೆ ಲೈಮ್ ಲೈಟ್‌ನಲ್ಲಿ ಇಲ್ಲ. ಜೊತೆಗೆ ಅವಳ ಕಂಗಳೂ ಕೈಕೊಟ್ಟಿವೆ. ಸದಾ ಕಲರ್ಡ್ ಕಾಂಟ್ಯಾಕ್ಟ್ ಲೆನ್ಸ್ ಬಳಸುವ ಬಿಪಾಶಾಳಿಗೆ, ಅವಳ ಡಾಕ್ಟರ್ ಸರ್ಜರಿ ಶಿಫಾರಸ್ಸು ಮಾಡಿದ್ದಾರೆ. ಅವಳಿಗದು ಬೇಕಿಲ್ಲ. ನಾನು ಫ್ಯಾಷನ್‌ಗಾಗಿ ಲೆನ್ಸ್ ಧರಿಸುತ್ತೇನೆ, ಅವಕ್ಕೇನೂ ಪವರ್ ಇಲ್ಲ. ಬಿಪ್ಸ್, ಡಾಕ್ಟರ್ ಮಾತನ್ನು ನಿರ್ಲಕ್ಷಿಸದಿರು ಎನ್ನುತ್ತಿದ್ದಾರೆ ಅಭಿಮಾನಿಗಳು. ಇದು ಹೃದಯದ ವಿಷಯವಲ್ಲ, ಕಂಗಳದ್ದು. ಹೃದಯದ್ದಾದರೆ ಡಿನೋ ಮೋರಿಯಾ, ಜಾನ್ ಅಬ್ರಹಾಂ, ಹರ್ಮನ್ ಭೀಜಾ ಅಥವಾ ಕರಣ್ ಯಾರಾದರೂ ಇಣುಕಿ ನೋಡಿ ಹೋಗಬಹುದು, ಆದರೆ ಕಂಗಳು ಕುಲಗೆಟ್ಟರೆ ಮುಂದೇನು ಗತಿ?
ಗ್ಲಾಮರಸ್ ಬ್ಯಾಕ್ನ ಸೆಕ್ಸೀ ಲುಕ್ಸ್
ಬಾಲಿವುಡ್ ತಾರಾಮಣಿಗಳ ರಾಂಪ್ ಶೋ ಅಂದ ಮೇಲೆ ವೇದಿಕೆಯ ತಾಪಮಾನ ಹೆಚ್ಚದಿದ್ದೀತೇ? ಪ್ರೇಕ್ಷಕರ ಪಾಡಂತೂ ಹೇಳತೀರದು. ಈ ಸಂದರ್ಭ ಲೋರಿಯಲ್ ಪ್ಯಾರಿಸ್‌ಫೆಮಿನಾ ವುಮನ್ ಅವಾರ್ಡ್‌ನದು. ಇದಕ್ಕೆ ಆಗಮಿಸಿದ ಬಾಲಿವುಡ್ ತಾರಾಮಣಿಯರೆಲ್ಲ ಧರೆಗಿಳಿದ ದೇವತೆಗಳಂತೆ ಬಳುಕುತ್ತಾ ತಮ್ಮ ಭಾವಭಂಗಿ ಪ್ರದರ್ಶಿಸುತ್ತಿದ್ದರು. ಈ ಸುಂದರಿಯರ ಸೆಕ್ಸೀ ಲುಕ್ಸ್ ಈ ಬಾರಿ ತಮ್ಮ ಗ್ಲಾಮರಸ್ ಬ್ಯಾಕ್‌ನಿಂದ ನೀಡಿದ ಬಳುವಳಿಯಾಗಿತ್ತು. ಊರ್ವಶಿ ರತೌ, ಏಲೀ ಅರಾಮ್ ನಂಥ ಬಾಲಿವುಡ್ ಕನ್ಯಾಮಣಿಗಳೊಂದಿಗೆ ಕಿರುತೆರೆಯ ಗೌಹರ್‌ಖಾನ್, ನೇಹಾ ಧೂಪಿಯಾ, ಸೋನಂ ಕಪೂರ್‌ರಂಥವರೂ ಮಿಂಚಿದ್ದೇ ಮಿಂಚಿದ್ದು!
ಫ್ಯಾಟ್…. ಬಟ್ ಸ್ಮಾರ್ಟ್!
ಇಂದಿನ ಫ್ಯಾಷನ್ ಯುಗದಲ್ಲಿ ಎಲ್ಲೆಲ್ಲೂ ಝೀರೋ ಫಿಗರ್‌ಗೆ ಹೆಚ್ಚಿನ ಮಾನ್ಯತೆ ಇರುವಾಗ, ಕಿರುತೆರೆಯ ಕೆಲವು ಕಲಾವಿದರು ದಡೂತಿ ವ್ಯಕ್ತಿತ್ವ ಹೊಂದಿದ್ದರೂ ಅದೇನೂ ಅವರಿಗೆ ಶಾಪವಾಗಿಲ್ಲ. ಫ್ಯಾಟ್ ಆಗಿದ್ದರೂ ಅದನ್ನು ಸ್ಮಾರ್ಟಾಗಿ ತೋರ್ಪಡಿಸುವ ಕಲೆ ಕರಗತ ಮಾಡಿಕೊಂಡಿರುವ ಈ ಕಲಾವಿದರು ಸ್ಥೂಲಕಾಯಕ್ಕೆ ಸಡ್ಡುಹೊಡೆದು ಮೆರೆಯುತ್ತಿದ್ದಾರೆ. ಇವರಲ್ಲಿ ಭಾರತಿ ಸಿಂಗ್ ಪ್ರಮುಖಳು. ಈಕೆ ಮೋಸ್ಟ್ ಪಾಪ್ಯುಲರ್ ಎನಿಸಿದ್ದಾಳೆ.
ಒಬ್ಬ ಸೂಪರ್ ಕಾಮಿಡಿಯನ್ ಆಗಿ ಹಿಂದಿನ ಕಾಲದ ಟುನ್ ಟುನ್‌ಳನ್ನು ಹಿಂದಿಕ್ಕಿರುವ ಈಕೆ ಆ್ಯಂಕರಿಂಗ್ ಮೂಲಕ ಲಗ್ಗೆ ಇಟ್ಟಿದ್ದಾಳೆ. `ಝಲಕ್ ದಿಖ್‌ಲಾಜಾ’ ಡ್ಯಾನ್ಸ್ ಶೋನಲ್ಲಿ ವೇದಿಕೆ ನಡುಗುವಂತೆ ಕುಣಿದು ಸೈ ಎನಿಸಿದ್ದಾಳೆ. ಅದೇ ತರಹ ಕಪಿಲ್ ಕಾಮಿಡಿ ಶೋನಲ್ಲಿ ಹೆಣ್ಣು ವೇಷಧಾರಿ ಪಲಕ್ ಆಗಿ ಮಿಂಚುತ್ತಿರುವ ಕಿಕ್ಕೂ ಶಾರದಾರನ್ನು ನಿರ್ಲಕ್ಷಿಸುವ ಹಾಗೇ ಇಲ್ಲ. ಇಲ್ಲಿ ಪಲಕ್ ಮಾತ್ರವಲ್ಲದೆ ಅವಳ ಅಜ್ಜಿಯಾಗಿಯೂ ಇವನ ಅತಿ ತೂಕ ಮೈನಸ್ ಪಾಯಿಂಟ್ ಅಲ್ಲ. ಅದೇ ತರಹ ಡ್ಯಾನ್ಸ್ ಶೋಗಳಲ್ಲಿ ಮಿಂಚಿದ,
ಆ್ಯಂಕರ್ ಕಮ್ ಮಾಡೆಲ್ ಡೆಲ್
ನವಾಜ್, `ತಾರಕ್ ಮೆಹ್ತಾ ಕೀ ಉಲ್ಟಾ ಚಶ್ಮಾ’ದ ಕವಿ ಪಾತ್ರಧಾರಿ ಆಜಾದ್, `ಬಡೇ ಅಚೆ ಲಗ್ತೆ ಹೈ, ದಿಲ್ ಕೀ ಬಾತ್ ದಿಲ್ ಹೀ ಜಾನೆ’ ಧಾರಾವಾಹಿಗಳ ಖ್ಯಾತಿಯ ರಾಮ್ ಕಪೂರ್ ಮುಂತಾದವರ ದಡೂತಿತನ ಅವರಿಗೆ ಫ್ಯಾಟ್…. ಬಟ್ ಸ್ಮಾರ್ಟ್ ಹೆಸರು ತಂದುಕೊಟ್ಟಿದೆ. ಗೌರಿಗೆ ಹಿಡಿಸದ ಧಾರಾವಾಹಿ ಸುಮಾರು 5 ವರ್ಷಗಳ ನಂತರ ಕಿರುತೆರೆಗೆ ಮರಳಿದ ಗೌರಿ ಪ್ರಧಾನ್, `ಮೇರಿ ಆಶಿಕಿ ತುಂ ಸೇ ಹೀ’ ಧಾರಾವಾಹಿಯಿಂದ ತಾನು ಮತ್ತಷ್ಟು ಶೈನ್ ಆಗಲಿದ್ದೇನೆ ಎಂದೇ ಭಾವಿಸಿದ್ದಳು. ಆದರೆ…. ಹಾಗೇನೂ ಆದಂತೆ ಕಾಣಿಸುತ್ತಿಲ್ಲ.
ತಾಯಿಯ ಪಾತ್ರವೇ ಆದರೂ ಯಂಗ್ ಆಗಿ ತೋರಿಸಿರುವುದರಿಂದ ತನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇರುತ್ತದೆ ಎಂದುಕೊಂಡು ಆ ಪಾತ್ರ ಒಪ್ಪಿದಳಂತೆ. ಹೀಗಾಗಿ ಏಕ್ತಾ ಕಪೂರ್ ವಿಚಾರಿಸಿದಾಗ ಒಲ್ಲೆ ಎನ್ನದೆ ಒಪ್ಪಿದಳಂತೆ. ಆದರೆ ಕಾಲಕ್ರಮೇಣ ಧಾರಾವಾಹಿ ಸಾಗುತ್ತಿರುವ ಶೈಲಿ ಕಂಡು ಅವಳಿಗೆ ಬಹಳ ಬೇಸರವಾಗಿದೆ, ಭ್ರಮನಿರಸನವಾಗಿದೆ. ಹಿತೇನ್ ಪಾತ್ರ ಕಥೆಯಲ್ಲಿ ಎಂಟ್ರಿ ನೀಡಿದ ನಂತರ ಖಂಡಿತಾ ಏನೋ ಪ್ರಾಮುಖ್ಯತೆ ಸಿಗಲಿದೆ ಎಂದುಕೊಂಡದ್ದೂ ಠುಸ್ಸ ಆಗಿದೆ. ಹೀಗಾಗಿ ತನ್ನ ಪಾತ್ರವನ್ನು ಸಾಯಿಸುವಂತೆ ಕೋರಿಕೊಂಡು ಅವಳು ಆ ಧಾರಾವಾಹಿಯಿಂದಲೇ ಹೊರಬಿದ್ದಿದ್ದಾಳೆ.
ರಾಜೀವ್ಗಾಯ್ತು ಕಪಾಳ ಮೋಕ್ಷ
ಧಾರಾವಾಹಿಯ ಒಂದು ಶೂಟಿಂಗ್‌ನಲ್ಲಿ ನಟಿ ಕೃತಿಕಾ ಕಾಮ್ರಾ ತನ್ನ ಸಹನಟ ರಾಜೀವ್ ಖಂಡೇಲ್ ವಾಲಾನಿಗೆ ಎಲ್ಲರೆದುರು ಬೀಸಿ ಕೆನ್ನೆಗೆ ಹೊಡೆದು ಸಿಕ್ಕಾಪಟ್ಟೆ ಕಿರುಚಾಡಿದ್ದಾಳೆ. ನಡೆದ ವಿಷಯ ಅಂದ್ರೆ, ಟಿ.ವಿ. ಶೋ ಪ್ರೋಮೋಗಾಗಿ ಶೂಟಿಂಗ್‌ಮಾಡುತ್ತಿದ್ದ ರಾಜೀವ್, ಸೀನ್‌ಗೆ ತಕ್ಕಂತೆ ಕೃತಿಕಾಳಿಗೆ ಕಿಸ್ ಮಾಡಿದ. ಕೃತಿಕಾಳಿಗೆ ಏನೂ ಅರ್ಥವಾಗಲಿಲ್ಲ. ಕೆಂಡಾಮಂಡಲ ಕೋಪದಿಂದ ಸಿಡಿದುಬಿದ್ದ ಅವಳು ಎಲ್ಲರೆದುರಿಗೂ ಅವನಿಗೆ ಗ್ರಹಚಾರ ಬಿಡಿಸಿದಳು. ಬಲ್ಲ ಮೂಲಗಳ ಪ್ರಕಾರ ರಾಜೀವ್ ಆಕಸ್ಮಿಕವಾಗಿ ಹೀಗೆ ಮಾಡಿದಾಗ, ಅದಕ್ಕೆ ಪ್ರತಿಯಾಗಿ ಕೃತಿಕಾ ಈ ರೀತಿ ನಡೆದುಕೊಂಡಳಂತೆ.
ಹಿಮಾನಿ ವಿರುದ್ಧ ಕೇಸ್
ಹಿರಿಕಿರಿ ತೆರೆಗಳಲ್ಲಿ ಸದಾ ತಾಯಿ, ಅತ್ತೆಯ ಪಾತ್ರ ವಹಿಸುವ ಹಿಮಾನಿ ಶಿಪುರಿ ಈಗ ಫ್ರಾಡ್ ಗಿರಿ ಕೇಸ್ ಎದುರಿಸಬೇಕಾಗಿದೆ. ಮುಂಬೈ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದೂ ಆಯ್ತು. ನಿರ್ಮಾಪಕ ಮೊಹಮ್ಮದ್ ಅಲಿ ಈಕೆ ವಿರುದ್ಧ ತಮಗೆ 5 ಲಕ್ಷ ರೂ.ಗಳ ಮೋಸ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ದೂರಿನಲ್ಲಿ ಆತ, ಕೆಲವು ವಾರಗಳ ಹಿಂದೆ ಈಕೆ ಅಲಿ ಬಳಿ 2 ಚಿತ್ರಗಳಿಗೆ ಸಹಿ ಮಾಡಿ, 5 ಲಕ್ಷ ರೂ.ಗಳ ಅಡ್ವಾನ್ಸ್ ಪಡೆದು ಸ್ವಾಹಾ ಮಾಡಿದ್ದಾಯ್ತು. ಆದರೆ ತಾನು ಒಪ್ಪಿದ್ದ ಚಿತ್ರಗಳ ಶೂಟಿಂಗ್ ಬಿಟ್ಟು ಈಕೆ ಬೇರೆಲ್ಲೋ ಶೂಟಿಂಗ್‌ಗೆ ಹೋಗಿಬಿಡುವುದೇ? ನಿರ್ಮಾಪಕರಿಗೆ ಅಪಾರ ನಷ್ಟ ಆಗಿದೆಯಂತೆ.
ನೇಣಿಗೆ ಶರಣಾದ ನಟ
ಸಬ್ ಟಿ.ವಿ.ಯ ಜನಪ್ರಿಯ `ಲಾಪತಾ ಗಂಜ್’ ಧಾರಾವಾಹಿಯ ಪ್ರಮುಖ ಹಾಸ್ಯ ಕಲಾವಿದ ರಾಮ್ ಜಿ ಶಾಂಡಿಲ್ಯ ಇತ್ತೀಚೆಗಷ್ಟೇ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಮ್ ಜಿ ಉ.ಪ್ರದೇಶದ ಉರಯಿ ಮೂಲದ ವ್ಯಕ್ತಿ. ಈತ ಹಲವು ಧಾರಾವಾಹಿಗಳಲ್ಲಿ ನಟಿಸಿದ ಬಳಿಕ ವಾಪಸ್ಸು ಊರಿಗೆ ಹೋಗಿ ಲೀಗಲ್ ಅಡ್ವೈಸರ್ ಆಗಿದ್ದ. ಸುದ್ದಿಗಳ ಪ್ರಕಾರ 28 ವರ್ಷದ ರಾಮ್ ಜಿ ಮಾನಸಿಕ ಒತ್ತಡಕ್ಕೆ ಸಿಲುಕಿ ಹೀಗೆ ಮಾಡಿಕೊಂಡನಂತೆ. ಕೊನೆಯ ದಿನ ಮನೆಗೆ ಮರಳಿದಾಗ, ಬಹಳ ಒತ್ತಡಕ್ಕೆ ಸಿಲುಕಿದ್ದು, ಯಾರೊಂದಿಗೂ ಮಾತನಾಡದೆ, ಉದ್ದದ ಮಫ್ಲರ್‌ನ್ನು ಫ್ಯಾನಿಗೆ ಬಿಗಿದು ನೇಣಿಗೆ ಶರಣಾದ.