ತನ್ನ 17ರ ಹರೆಯದಲ್ಲೇ ನಟನೆಯ ಕ್ಷೇತ್ರಕ್ಕೆ ಕಾಲಿರಿಸಿದ ಶಿಲ್ಪಾ ಶೆಟ್ಟಿ ಮಾಡೆಲ್, ನಟಿ, ಪತ್ನಿ, ತಾಯಿ, ಇದೀಗ ಮಹಿಳಾ ಉದ್ಯಮಿಯಾಗಿ ಸೈ ಎನಿಸಿದ್ದಾರೆ. ಈಕೆ ಬಾಲಿವುಡ್‌ನ ಸುಮಾರು 60 ಹಾಗೂ ತೆಲುಗು, ಕನ್ನಡ, ತಮಿಳು ಸೇರಿದಂತೆ ದಕ್ಷಿಣದ ಸುಮಾರು ಚಿತ್ರಗಳಲ್ಲೂ ಮಿಂಚಿದ್ದಾರೆ.
ಶಿಲ್ಪಾ ಸದಾ ಏನಾದರೊಂದು ಹೊಸತನ್ನು ವಿಭಿನ್ನವಾದುದನ್ನು ಮಾಡಲು ಬಯಸುತ್ತಾರೆ. ಇದೇ ಕಾರಣದಿಂದಲೇ ಆಕೆ ನಟನೆಯ ಜೊತೆ ಬಿಸ್‌ನೆಸ್ ಸಹ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಅವರ ತಾಯಿ ತಂದೆಯರದೇ ಮೂಲ ಪ್ರೇರಣೆ. ಜೊತೆಗೆ ಮದುವೆ ನಂತರ ಪತಿ ರಾಜ್ ಕುಂದ್ರಾರಿಂದ ಶಿಲ್ಪಾ `ಸತ್ ಯುಗ್ ಗೋಲ್ಡ್,' `ಐಓಸಿಸ್ ಸ್ಪಾ ಸೆಲೂನ್.' `ಯೋಗ ಥೆರಪಿ ಸೆಂಟರ್ಸ್' ಹಾಗೂ `ಬೆಸ್ಟ್ ಡೀಲ್ ಟಿವಿ ಚಾನೆಲ್' ಮುಂತಾದ ಸಂಸ್ಥೆಗಳ ಚೇರ್‌ಪರ್ಸನ್ ಆಗಿದ್ದಾರೆ.
ನಟಿ ಆಗಲು ಬಯಸಿರಲಿಲ್ಲ
ಶಿಲ್ಪಾ ಮುಂಬೈನಲ್ಲಿ ಹುಟ್ಟಿ ಬೆಳೆದರು. ಸೇಂಟ್ ಆ್ಯಂಟನಿ ಕಾನ್ವೆಂಟ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಜೂನಿಯರ್ ಕಾಲೇಜ್ ನಂತರ ವಾಣಿಜ್ಯ ಪದವಿ ಪಡೆಯಲು ಮಾತುಂಗಾದ ಪೊದ್ದಾರ್ ಕಾಲೇಜ್ ಸೇರಿದರು. ಆಕೆಗೆ ಕಲಿಕೆಯಲ್ಲಿ ಆಸಕ್ತಿ ಇರಲಿಲ್ಲ. ಪದವಿ ಕಾಲೇಜಿನಲ್ಲೂ ಸ್ಪೋರ್ಟ್ಸ್ ಕೋಟಾ ಕಾರಣದಿಂದ ಅಡ್ಮಿಶನ್ ಸಿಕ್ಕಿತ್ತು. ಆಕೆ ವಾಲಿಬಾಲ್ ನಲ್ಲಿ ರಾಜ್ಯ ಮಟ್ಟದ ಚಾಂಪಿಯನ್ ಆಗಿದ್ದರು. ಬಿಸ್‌ನೆಸ್‌ಮನ್ ಆಗುವುದು ಆಕೆಯ ಕನಸಾಗಿತ್ತು. ತಾನು ಮುಂದೆ ನಟಿ ಆಗಬೇಕೆಂದು ಅವರೆಂದೂ ಬಯಸಿರಲಿಲ್ಲವಂತೆ.
ಶಿಲ್ಪಾ ಇನ್ನೂ 10ನೇ ತರಗತಿಯಲ್ಲಿದ್ದಾಗ, ಫ್ರೆಂಡ್ ಒಬ್ಬ ಆಕೆಯ ಫೋಟೋ ಕ್ಲಿಕ್ಕಿಸಿ ಮಾಡೆಲಿಂಗ್ ಏಜೆನ್ಸಿಗೆ ಕಳುಹಿಸಿದನಂತೆ. ಈ ರೀತಿ ಆಕೆ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಹೀಗೆ 2 ವರ್ಷ ಕಳೆದಾಗ `ಬಾಜಿಗರ್' ಚಿತ್ರದ ಆಫರ್ ಸಿಕ್ಕಿತು. ತಾನು ಜೀವನದಲ್ಲಿ ಇಷ್ಟೆಲ್ಲ ಬದಲಾವಣೆ ಕಾಣಬೇಕಾಗಬಹುದೆಂದು ಆಕೆ ಅಂದುಕೊಂಡಿರಲಿಲ್ಲ.
ತಾಯಿ, ತಂದೆ, ಪತಿಯ ಸಹಕಾರ
ನಟನೆ ಹಾಗೂ ಬಿಸ್‌ನೆಸ್ ಕೆರಿಯರ್‌ನಲ್ಲಿ ಎಲ್ಲಕ್ಕಿಂತ ಹೆಚ್ಚು ಸಹಕಾರ ನೀಡಿದವರಾರು? ಈ ಕುರಿತಾಗಿ ಶಿಲ್ಪಾ, ``ನಟನೆ ಆರಂಭಿಸಿದಾಗ ನನಗಿನ್ನೂ 17ರ ಹರೆಯ. ಆ ಸಮಯದಲ್ಲಿ ಸಿನಿಮಾ ಇಂಡಸ್ಟ್ರಿಯನ್ನು ಇಷ್ಟು ಆದರದಿಂದ ಕಾಣುತ್ತಿರಲಿಲ್ಲ. ನಾನು ಶೆಟ್ಟಿ ಸಮುದಾಯದ ಮೊದಲ ಹುಡುಗಿಯಾಗಿ ನಾಯಕಿಯಾದೆ. ಈಗಿನ 22 ವರ್ಷಗಳ ಹಿಂದಿನ ಮಾತದು. ``ನನ್ನ ತಂದೆ ಮೊದಲು ನಾನು ಪದವಿ ಮುಗಿಸಿಕೊಳ್ಳಬೇಕು ಎಂದರು, ಅದು ಪೂರ್ತಿ ಆಗಲೇ ಇಲ್ಲ. ಸದಾ ಔಟ್‌ಡೋರ್ ಶೂಟಿಂಗ್ ಇದರ ಮೂಲಕಾರಣ. ನಾನು ಅಮ್ಮನ ಜೊತೆ ಆಗಾಗ ಯಾತ್ರೆಗೆ ಹೋಗುತ್ತಿದ್ದೆ, ನಾನು ಅವರಿಗೆ ಬಹಳ ನಿಕಟವರ್ತಿ ಆಗಿದ್ದೆ. ಆ್ಯಕ್ಟಿಂಗ್, ಫ್ಯಾಷನ್, ಸ್ಟೈಲ್ ಏನೊಂದೂ ಗೊತ್ತಿರಲಿಲ್ಲ. ಆಗ ನನ್ನ ತಾಯಿ ತಂದೆ ನನಗೆ ಬಹಳ ಸಹಕಾರ ನೀಡಿದರು.
``ಬಿಸ್‌ನೆಸ್ ಮಾಡಲು ಹಣ ಹಾಗೂ ತಿಳಿವಳಿಕೆ ಎರಡೂ ಮುಖ್ಯ. ನಮ್ಮ ತಂದೆ ಸಹ ಬಿಸ್‌ನೆಸ್‌ನಲ್ಲಿದ್ದರು, ಹೀಗಾಗಿ ನಾನು ಅಂಥದೇ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದರು. ಆದರೆ ರಾಜ್ ನನ್ನ ಸಂಗಾತಿಯಾದಾಗ, ತಾವೇ ಬಿಸ್‌ನೆಸ್ ಮ್ಯಾನ್ ಆಗಿದ್ದ ಅವರು ನನಗೂ ಅದರಲ್ಲಿ ಮುಂದುವರಿಯುವಂತೆ ಪ್ರೋತ್ಸಾಹ ನೀಡಿದರು. ಯೋಗ ಡಿವಿಡಿ ತಯಾರಿಸುವಂತೆ ಸಲಹೆ ಕೊಟ್ಟರು. ಅಲ್ಲಿಂದ ನನಗೆ ಸತತ ಮುಂದುವರಿಯಲು ಪ್ರೇರಣೆ ನೀಡಿದರು.''