ಅಂಬಾಸೆಡರ್‌ ಕಾರು ಯಾರಿಗೆ ತಾನೆ ಗೊತ್ತಿಲ್ಲ? ಅದನ್ನು ಹೊಸದಾಗಿ ಪರಿಚಯ ಮಾಡಿಕೊಡಬೇಕಿಲ್ಲ. ಭಾರತದ ಅತ್ಯಂತ ಸದೃಢ ಕಾರು ಎನ್ನಿಸಿಕೊಂಡಿರುವ ಅಂಬಾಸೆಡರ್‌ ಕಾರನ್ನು ಭಾರತ ಸರ್ಕಾರದ ಅಧಿಕೃತ ವಾಹನವೆಂದು ತಿಳಿಯಲಾಗಿದೆ. ಪೊಲೀಸ್‌ ಹಾಗೂ ಸೇನೆಯಲ್ಲೂ ಇದರ ಪ್ರತಿಷ್ಠೆ ಮನೆಮಾತಾಗಿದೆ. ನಾಯಕರುಗಳಿಂದ ಹಿಡಿದು ಕಲಾವಿದರವರೆಗೆ ಅಂಬಾಸೆಡರ್ ಎಲ್ಲರ ನೆಚ್ಚಿನ ಕಾರು ಆಗಿತ್ತು. ಆದರೆ ಬದಲಾದ ಕಾಲ ಹಾಗೂ ಹೆಚ್ಚುತ್ತಿರುವ ಆಧುನಿಕತೆ ಈ ಕಾರಿನ ಬೇಡಿಕೆ ಮಹತ್ವ ಮತ್ತು ಪ್ರತಿಷ್ಠೆಯನ್ನು ಪ್ರಭಾವಿತಗೊಳಿಸಿದ್ದಲ್ಲದೆ, ಅದರ ಅಸ್ತಿತ್ವವನ್ನೇ ಅಳಿಸಿಹಾಕಿತು. ಪಶ್ಚಿಮ ಬಂಗಾಳದ ಉತ್ತರಪಾರಾನಲ್ಲಿರುವ ಹಿಂದೂಸ್ಥಾನ್‌ ಮೋಟಾರ್ಸ್‌ ಮಾರಾಟದಲ್ಲಿ ಇಳಿಕೆ, ಪ್ರತಿ ತಿಂಗಳೂ 7-8 ಕೋಟಿ ರೂ.ಗಳ ನಷ್ಟದಿಂದಾಗಿ ಅಂಬಾಸೆಡರ್‌ ಕಾರಿನ ಉತ್ಪಾದನೆಯನ್ನು 2014ರ ಮೇ 24 ರಂದು ಶಾಶ್ವತವಾಗಿ ನಿಲ್ಲಿಸಲಾಯಿತು. ಅದರೊಂದಿಗೆ ಇದರ ಹೆಸರು ಇತಿಹಾಸದ ಪುಟಗಳಲ್ಲಿ ಸೇರಿತು.

ಒಂದು ಕಾಲದಲ್ಲಿ ಈ ಕಾರು ಜನರ ನಡುವೆ ಸ್ಟೇಟಸ್‌ ಸಿಂಬಲ್ ಆಗಿತ್ತು. ಈ ಕಾರಿದ್ದ ಮನೆಯವರನ್ನು ಸಮೃದ್ಧಿಯುವಳ್ಳರೆಂದು ತಿಳಿಯಲಾಗಿತ್ತು. ಭಾರತದಲ್ಲಿ ಇದನ್ನು ವೈಭವದ ಪ್ರತೀಕವೆಂದು ತಿಳಿಯಲಾಗಿತ್ತು. ಆದರೆ ಕಾಲ ಬದಲಾದಂತೆ ವಯಸ್ಸಾದ ಅಭಿನೇತ್ರಿಯಂತೆ ಅಂಬಾಸೆಡರ್‌ ಕಾರಿನ ಪಾತ್ರ ಬದಲಾಗುತ್ತಾ ಹೋಯಿತು. ನಿಧಾನವಾಗಿ ಈ ಕಾರು ಟ್ಯಾಕ್ಸಿಯಾಗಿ ಮುಂದೆ ವಧುವರರ ಮೆರವಣಿಗೆಯಲ್ಲಿ ಉಪಯೋಗಕ್ಕೆ ಬಂತು.

ಆದರೆ ಸರ್ಕಾರಿ ಇಲಾಖೆಗಳು ಸುರಕ್ಷತಾ ಕಾರಣಗಳಿಂದಾಗಿ ಅಂಬಾಸೆಡರ್‌ ಬದಲು ಬೇರೆ ವಾಹನಗಳನ್ನು ಉಪಯೋಗಿಸಲು ಆರಂಭಿಸಿದವು. ಎಲ್ಲಕ್ಕೂ ಮೊದಲು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಅಂಬಾಸೆಡರ್‌ ಬದಲು ಬಿಎಂಡಬ್ಲ್ಯು ಆರಿಸಿಕೊಂಡರು. ಮುಂದೆ ನಿಧಾನವಾಗಿ ಎಲ್ಲ ನಾಯಕರೂ ತಮಗಿಷ್ಟವಾದ ವಿದೇಶಿ ಕಾರುಗಳನ್ನು ಆರಿಸಿಕೊಳ್ಳತೊಡಗಿದರು.

ಕಳೆದ ಕೆಲವು ವರ್ಷಗಳಿಂದ ಸರ್ಕಾರಿ ಇಲಾಖೆಗಳಲ್ಲಿ ಅಂಬಾಸೆಡರ್‌ ಕಾರುಗಳ ಖರೀದಿ ನಿಂತುಹೋಗಿದೆ. ಸಾಮಾನ್ಯ ಜನರೂ ಅಂಬಾಸೆಡರ್‌ನ್ನು ಅಲಕ್ಷಿಸತೊಡಗಿದ್ದಾರೆ. ಅಲ್ಲಿಂದಲೇ ಅಂಬಾಸೆಡರ್‌ನ ಕೆಟ್ಟ ದಿನಗಳು ಆರಂಭಗೊಂಡವು.

ದೇಶದಲ್ಲಿ ಪ್ರಪ್ರಥಮವಾಗಿ ಸ್ವದೇಶಿ ಕಾರುಗಳನ್ನು ತಯಾರಿಸಿದ ಹಿಂದೂಸ್ಥಾನ್‌ ಮೋಟರ್ಸ್‌ ಲಿ., 1942ರಲ್ಲಿ ಅಂಬಾಸೆಡರ್‌ನ ಉತ್ಪಾದನೆ ಶುರು ಮಾಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಅನೇಕ ಹೊಸ ದೇಶೀ ವಿದೇಶೀ ಕಾರು ಕಂಪನಿಗಳು ಹೊಸ ಟೆಕ್ನಿಕ್‌ಗಳೊಡನೆ ತಮ್ಮ ಮಾಡೆಲ್ ಗಳನ್ನು ಪ್ರಸ್ತುತಪಡಿಸಿವೆ. ಅವಕ್ಕೆ ಹೋಲಿಸಿದರೆ ಅಂಬಾಸೆಡರ್‌ನಲ್ಲಿ ಬಹಳಷ್ಟು ಬದಲಾವಣೆಗಳ ಅಗತ್ಯವಿತ್ತು. ಆದರೆ ಈ ಅಗತ್ಯಗಳನ್ನು ಕಂಪನಿ ಪೂರೈಸಲಾಗಲಿಲ್ಲ. ಹೀಗಾಗಿ ಈ ಕಾರು ಇತಿಹಾಸದ ಪುಟಗಳಲ್ಲಿ ಸೇರಬೇಕಾಯಿತು.

ಪಿ. ಅರವಿಂದ್

morris-oxford

ಅಂಬಾಸೆಡರ್ಗೆ ಸಂಬಂಧಿಸಿದ ರೋಚಕ ಸಂಗತಿಗಳು

ಅಂಬಾಸೆಡರ್‌ ಉತ್ಪಾದನೆ 1942ರಲ್ಲಿ ಹಿಂದೂಸ್ತಾನ್‌ 10 ಎಂಬ ಹೆಸರಿನಲ್ಲಿ ಗುಜರಾತ್‌ನ ಪೋರ್ಟ್‌ ಓಖಾದಲ್ಲಿ ಶುರುವಾಯಿತು. 1954ರವರೆಗೆ ಇದೇ ಕಾರುಗಳನ್ನು ಉತ್ಪಾದಿಸಲಾಯಿತು. 1948ರಲ್ಲಿ ಇದರ ಉತ್ಪಾದನೆ ಪಶ್ಚಿಮ ಬಂಗಾಳದ ಉತ್ತರ ಪಾರಾದಲ್ಲಿ ಶುರುವಾಯಿತು. ಈ ಕಾರಿನ ವಿಶೇಷತೆಯೆಂದರೆ ಇದನ್ನು ಹಳೆಯ ಮಾರಿಸ್‌, ಆಕ್ಸ್ಫರ್ಡ್‌ ಮತ್ತು ಹೊಸ ಮಾರಿಸ್‌, ಆಕ್ಸ್ಫರ್ಡ್‌ನ ಡಿಸೈನ್‌ ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿತ್ತು.

1957ರಲ್ಲಿ ಅಂಬಾಸೆಡರ್‌ನ್ನು 1,478 ಸಿಸಿಯ ಸೈಡ್ಸ್ ವಾಲ್ ‌ಎಂಜಿನ್‌ನೊಂದಿಗೆ ಭಾರತದ ರಸ್ತೆಗೆ ಬಿಡಲಾಯಿತು. ಆಗ ಈ ಕಾರನ್ನು ಪುಷ್ಪಕ್‌, ಕಾಂಟೆಸ್ಸಾ ಮತ್ತು ಪೋರ್ಟರ್‌ನಂತಹ ಕಾರುಗಳೊಂದಿಗೆ ಹೋಲಿಸಲಾಗುತ್ತಿತ್ತು.

ಅಂಬಾಸೆಡರ್‌ನ ವಿಶೇಷತೆಯೆಂದರೆ ಅದರ ಎಂಜಿನ್‌ನ್ನು ಭಾರತದ ರಸ್ತೆಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗುತ್ತಿತ್ತು. ನಂತರ 1959ರಲ್ಲಿ ಮತ್ತೊಮ್ಮೆ ಅಂಬಾಸೆಡರ್‌ ಎಂಜಿನ್‌ ಬದಲಾಯಿತು. ಈ ಬಾರಿ ಇದರಲ್ಲಿ 1,489 ಸಿಸಿಯ 55 ಬಿಎಚ್‌ಪಿ ಓವರ್ ಹೆಡ್‌ ವಾಲ್ ‌ಬಿಎಎಂಸಿಬಿ ಸೀರೀಸ್‌ನ ಪೆಟ್ರೋಲ್ ‌ಎಂಜಿನ್‌ ಅಳವಡಿಸಿದ್ದು ಮಾರ್ಕ್‌ ಒನ್‌ ವರ್ಜನ್‌ನ ಪೇಟೆಂಟ್‌ ಮಾಡಲಾಗಿತ್ತು.

4 ವರ್ಷಗಳ ನಂತರ ಅಂಬಾಸೆಡರ್‌ ತನ್ನ ಹೊಸ ಮಾಡೆಲ್ ಅಂಬಾಸೆಡರ್‌ ನೋವಾ ಪ್ರಸ್ತುತಪಡಿಸಿತು. ಅದರಲ್ಲಿ 1,489 ಸಿಸಿಯ 37 ಬಿಎಚ್‌ಪಿ ಬಿಎಂಸಿಬಿ ಸೀರೀಸ್‌ನ ಡೀಸಲ್ ಎಂಜಿನ್‌ ಅಳವಡಿಸಿತ್ತು. ಆಗ ಇದಕ್ಕೆ ಭಾರತದ ಪ್ರಥಮ ಡೀಸಲ್ ಕಾರು ಎಂಬ ಖ್ಯಾತಿ ಬಂದಿತ್ತು.

1989-model

1989ರವರೆಗೆ ಅಂಬಾಸೆಡರ್‌ ತನ್ನ 55 ಬಿಎಚ್‌ಪಿ ಪೆಟ್ರೋಲ್ ಪವರ್‌ ಡೀಲಕ್ಸ್ ವರ್ಜನ್‌ ಮತ್ತು 37 ಬಿಎಚ್‌ಪಿ ಡೀಸಲ್ ಪವರ್‌ಡೀಲಕಿಸಿ ವೇರಿಯಂಟ್‌ ಕೂಡ ಲಾಂಚ್‌ ಮಾಡಿತ್ತು.

ಅಂಬಾಸೆಡರ್‌ 1800 ಎಸ್‌ಝಡ್‌ನಲ್ಲಿ 1,800 ಸಿಸಿಯ ಎಂಜಿನ್‌ ಉಪಯೋಗಿಸಿತು. ಅದುವರೆಗೆ ಅಂಬಾಸೆಡರ್‌ನಲ್ಲಿ ಅದೇ ಅತ್ಯಂತ ದೊಡ್ಡ ಬದಲಾವಣೆಯಾಗಿತ್ತು.

1984ರಲ್ಲಿ ಈ ಕಾರಿನ ಮಾರಾಟ 1 ಲಕ್ಷವಿದ್ದರೆ 2004ರಲ್ಲಿ 9 ಲಕ್ಷವಿತ್ತು. ಆದರೆ 2013ರಲ್ಲಿ ಬರೀ 2,200 ಕಾರುಗಳು ಮಾರಾಟವಾದವು.

ಟಾಪ್‌ ಗೇರ್‌ ಮ್ಯಾಗಝೀನ್‌ 2013ರಲ್ಲಿ ನಡೆಸಿದ ಒಂದು ಸಮೀಕ್ಷೆಯಲ್ಲಿ ಅಂಬಾಸೆಡರ್‌ನ್ನು ವಿಶ್ವದ ಸರ್ವಶ್ರೇಷ್ಠ ಟ್ಯಾಕ್ಸಿ ಎಂದು ಘೋಷಿಸಲಾಯಿತು.

ಅಂಬಾಸೆಡರ್‌ನ ಮತ್ತೊಂದು ವಿಶೇಷತೆಯೆಂದರೆ ಇದರ ಔಟರ್‌ ಡಿಸೈನ್‌ನಲ್ಲಿ 65 ವರ್ಷಗಳಲ್ಲಿ ಎಂದೂ ಯಾವುದೇ ಬದಲಾವಣೆ ಮಾಡಿಲ್ಲ.

ಭಾರತದಲ್ಲಿ 1980ರ ದಶಕದಲ್ಲಿ ಮಾರುತಿ ಕಾರು ಅಸ್ತಿತ್ವಕ್ಕೆ ಬಂದಾಗ ಅಂದಿನಿಂದಲೇ ಅಂಬಾಸೆಡರ್‌ನ ಬೇಡಿಕೆ ಕಡಿಮೆಯಾಯಿತು. 1990ರಲ್ಲಿ ವಿದೇಶಿ ಕಾರುಗಳು ಭಾರತದಲ್ಲಿ ಕಾಲಿಟ್ಟಾಗ ಅಂಬಾಸೆಡರ್‌ ಸ್ಥಿತಿ ಇನ್ನಷ್ಟು ಹಾಳಾಯಿತು.

ಹಿಂದೆ ಭಾರತದ ಪ್ರಧಾನಿಗೂ ಸಹ ಅಂಬಾಸೆಡರ್‌ ಕಾರನ್ನು ಕೊಡಲಾಗುತ್ತಿತ್ತು. ಆದರೆ ಈಗ ಸುರಕ್ಷತಾ ಕಾರಣಗಳಿಂದ ಅವರಿಗೆ ಜರ್ಮನ್‌ ಮೂಲದ ಬಿಎಂಡಬ್ಲ್ಯು ಕೊಡಲಾಗುತ್ತಿದೆ. ಆದರೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದಿಗೂ ಅಂಬಾಸೆಡರ್‌ನಲ್ಲಿಯೇ ಪ್ರಯಾಣಿಸುತ್ತಾರೆ.

ಅಂಬಾಸೆಡರ್‌ನ ಉತ್ಪಾದನೆ ನಿಲ್ಲಲು ಪ್ರಮುಖ ಕಾರಣವೇನೆಂದರೆ ಕಂಪನಿ ಈ ಕಾರಿನ ಬ್ರ್ಯಾಂಡ್‌ ಪ್ರಮೋಶನ್‌ ಎಂದೂ ಮಾಡಲಿಲ್ಲ. ಈಗ ಕಾರು ಕಂಪನಿಗಳು ತಮ್ಮ ಕಾರಿನ ಬಗ್ಗೆ ದೊಡ್ಡ ದೊಡ್ಡ ಜಾಹೀರಾತುಗಳನ್ನು ಕೊಡುತ್ತಿರುವಾಗ ಅಂಬಾಸೆಡರ್ ಮಾತ್ರ ಎಂದೂ ಯಾವುದೇ ಜಾಹೀರಾತನ್ನು ಕೊಡಲಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ