ಹಾಸ್ಟೆಲ್‌ನಿಂದ ಮನೆಗೆ ಹೋಗುವ ಸಮಯದಲ್ಲಿ ರೈಲ್ವೆ ಪ್ಲಾಟ್‌ಫಾರ್ಮ್ ಬಳಿ ನಿಂತಿದ್ದ ಒಬ್ಬ ಹುಡುಗಿ ಬಳಿ ರಾಶಿ ರಾಶಿ ತಲೆದಿಂಬಿನ ಗಾತ್ರದ ಪುಸ್ತಕಗಳಿದ್ದವು. ಅದನ್ನು ಕಂಡು ಒಬ್ಬ ಪೋರ್ಟರ್‌ ಕೇಳಿದ, “ಮೇಡಂ, ಕೂಲಿ ಬೇಕೇ?” ಆ ಹುಡುಗಿ ತಕ್ಷಣ ಸ್ಟೈಲಾಗಿ ಹೇಳಿದಳು, “ಬೇಡ ರೀ, ನನ್ನ ಬಾಯ್‌ ಫ್ರೆಂಡ್‌ಗಾಗಿ ಕಾಯುತ್ತಿದ್ದೇನೆ.”

 

ರಾಜು : ಡಿಯರ್‌, ಸ್ನ್ಯಾಕ್ಸ್ ಗಾಗಿ ಇತ್ತು ಏನು ತಂದಿದ್ದಿ?

ರೀಟಾ : ಇವತ್ತು ಟಿಫನ್‌ ಬಾಕ್ಸ್ ನಲ್ಲಿ ಬರೀ 2 ಲಾಡು ತಂದಿದ್ದೇನೆ ಅಷ್ಟೆ.

ಅವಳು ಕೊಟ್ಟಿದ್ದನ್ನು ಅವನು ಗಬಕ್ಕನೆ ತಿಂದು ಮುಗಿಸಿದ.

ರಾಜು : ಯಾವುದಾದರೂ ಬಾರ್‌ ಚಾಕಲೇಟ್‌ ಇದ್ದರೆ ತಕ್ಷಣ ಕೊಡು.

ರೀಟಾ : ಅದ್ಯಾಕೆ…? ಈಗ ತಾನೇ ತಿಂದ್ಯಲ್ಲ……

ರಾಜು : ಹಾಗಲ್ಲ, ಇದು ಸ್ನ್ಯಾಕ್ಸ್. ಏನಾದರೂ ತಿಂದ ಮೇಲೆ ಬಾಯಿ ಸಿಹಿ ಮಾಡಿಕೊಳ್ಳಲು ಚಾಕಲೇಟ್‌ ಇತ್ಯಾದಿ ಬೇಕಲ್ಲವೇ?

 

ಗುಂಡ ರೈಲಿನಲ್ಲಿ ಊರಿಗೆ ಹೊರಟಿದ್ದ. ಸೀಟು ಖಾಲಿ ಇದೆ ಅಂತ ಹಾಯಾಗಿ ಉದ್ದಕ್ಕೆ ಮಲಗಿಬಿಟ್ಟ. ರೈಲಿಗೇರಿದ ಒಬ್ಬ ಸಹಪ್ರಯಾಣಿಕ ಕೇಳಿದ, “ಸ್ವಲ್ಪ ಜರುಗುತ್ತೀರಾ? ನಾನೂ ಕೂರಬೇಕು.”

ಗುಂಡ ತುಸು ಠೇಂಕಾರದಿಂದ ಕೇಳಿದ, “ನಿನಗೆ ಗೊತ್ತೇ…. ನಾನು ಯಾರೂ ಅಂತ?”

ಆತ ತೆಪ್ಪಗೆ ಇನ್ನೆಲ್ಲೋ ಒಂದು ಕಡೆ ಜಾಗ ನೋಡಿ ಕುಳಿತುಕೊಂಡ. ಸ್ವಲ್ಪ ಹೊತ್ತಾದ ಮೇಲೆ ಪೈಲ್ವಾನ್‌ ಪಾಪಣ್ಣ ಅದೇ ಬೋಗಿ ಹತ್ತಿದ. ಹಾಯಾಗಿ ಒರಗಿದ್ದ ಗುಂಡನನ್ನು ಕಂಡು, “ಏನಯ್ಯ, ಆ ಕಡೆ ಜರುಗು. ನಾನೂ ಕೂರಬೇಕು,” ಎಂದ.

ಗುಂಡ ಅದೇ ಠೇಂಕಾರದಲ್ಲಿ, “ಏ… ನಿನಗೆ ಗೊತ್ತೇ…. ನಾನು ಯಾರು ಅಂತ?” ಎಂದ.

ಪೈಲ್ವಾನ್‌ ಪಾಪಣ್ಣ ತಕ್ಷಣ ಗುಂಡನ ಕುತ್ತಿಗೆಪಟ್ಟಿ ಹಿಡಿದು, “ಯಾವೋನಯ್ಯ ನೀನು?” ಎಂದು ಅಬ್ಬರಿಸಿದ. ಗುಂಡ ಗಡಗಡ ನಡುಗುತ್ತ, “ಅದು…. ನಾನು ಒಬ್ಬ ರೋಗಿ. 2 ದಿನಗಳಿಂದ ವಿಷಮಶೀತ ಜ್ವರ ಇದೆ,” ಎನ್ನುವುದೇ?

 

ಕಾಲೇಜಿಗೆ ಬಂದ ಹೊಸ ಹುಡುಗಿಯನ್ನು ಕಂಡು ಗುಂಡ ಶಿಳ್ಳೆ ಹೊಡೆದು ಚುಡಾಯಿಸಿದ. ಅದಕ್ಕೆ ಸಿಡುಕಿದ ಅವಳು, “ಏಯ್‌, ನಾನು ಅಂತಿಂಥ ಹುಡುಗಿಯಲ್ಲ…. ಗೊತ್ತಾಯ್ತಾ?” ಎಂದಳು. ಅದಕ್ಕೆ ಗುಂಡ ಸ್ವಲ್ಪ ಸಂಕೋಚಪಡದೆ,  “ಅದು ಸರಿ, ನಾವು ಚೆಕ್‌ ಮಾಡಿದರೆ ತಾನೇ ನೀವು ಎಂಥವರು ಅಂತ ಗೊತ್ತಾಗುವುದು?” ಎನ್ನುವುದೇ?

ಕಲ್ಲೇಶಿ ಸರಸರ ನೇರವಾಗಿ ನಡೆದವನೇ ಎದುರಿಗೆ ಸಿಕ್ಕ ಪೊಲೀಸ್‌ ಠಾಣೆಗೆ ನುಗ್ಗಿ ರಿಪೋರ್ಟ್‌ ಬರೆಸುವಾಗ ಹೇಳಿದ, “ಯಾರೋ ನನಗೆ ಫೋನ್‌ ಮಾಡಿ ಒಂದೇ ಸಮ ಬೆದರಿಸುತ್ತಿದ್ದಾರೆ….”

“ಯಾರದು? ಎಷ್ಟು ಸಲ ಕಾಲ್ ‌ಬಂದಿತ್ತು?”

“ಆಗಾಗ ಬರ್ತಾನೇ ಇರುತ್ತೆ… ಇದೋ ನೀವು ಕೇಳಿಸಿಕೊಳ್ಳಿ….” ಎಂದು ಆಗ ತಾನೇ ಬಂದ ಕರೆಯನ್ನು ಪೊಲೀಸ್‌ ಪೇದೆಗೆ ನೀಡಿದ.

ಅದನ್ನು ಕೇಳಿಸಿಕೊಂಡ ಪೊಲೀಸ್‌ ಪೇದೆ, “ಏ ಕಲ್ಲೇಶಿ…. ಇದು ಕಸ್ಟಮರ್‌ ಕೇರ್‌ನವರದು. ಬಾಯಿ ಮುಚ್ಚಿಕೊಂಡು ತೆಪ್ಪಗೆ ಮೊಬೈಲ್ ಬಿಲ್ ‌ಹಣ ಕಟ್ಟು. ಇಲ್ಲದಿದ್ದರೆ ಲೈನ್‌ ಕಟ್‌ ಮಾಡ್ತೀವಿ, ಅಂತ ಆಗಾಗ ಬೆದರಿಸುತ್ತಿದ್ದಾರೆ ಅಷ್ಟೇ, ಹೋಗಯ್ಯ!”

 

ಅರುಣ್‌ ಮೊದಲ ಬಾರಿಗೆ ತನ್ನ ಗರ್ಲ್ ಫ್ರೆಂಡ್‌ನ್ನು ಕರೆದುಕೊಂಡು ಪಿಜ್ಜಾ ಹಟ್‌ಗೆ ಹೊರಟಿದ್ದ.

ಈ ಅನನುಭವಿಗಳನ್ನು ಕಂಡು ವೇಟರ್‌ ಕೇಳಿದ, “ಬೇಗ ಆರ್ಡರ್‌ ಹೇಳಿ?”

ಅರುಣ್‌ ತಕ್ಷಣ ಸ್ಟೈಲಾಗಿ ಅವಳ ಕಡೆ ತಿರುಗಿ ಕೇಳಿದ, “ಏನು ತಗೋತೀಯಾ?”

ಅವಳು ತಕ್ಷಣ ಹೇಳಿದಳು, “ಮಸಾಲೆ ದೋಸೆ!”

ಕಿಸಕ್ಕನೆ ನಕ್ಕ ವೇಟರ್‌. “ಹೋಟೆಲ್ ‌ಕಾಣದವಳನ್ನು ಗರ್ಲ್ ಫ್ರೆಂಡ್‌ ಅಂತ ಕರೆತಂದರೆ ಹೀಗೆ ಆಗುವುದು!”

 

ಉಂಡಾಡಿ ಗುಂಡನಾಗಿ 3 ಸಲ 8ನೇ ತರಗತಿಯಲ್ಲಿ ಫೇಲಾಗಿ ಸದಾ ಕೊನೆಯ ಬೆಂಚಿನಲ್ಲಿ ಕೂತಿರುತ್ತಿದ್ದ ಕಲ್ಲೇಶಿಯನ್ನು ಕಂಡು ಮೇಷ್ಟ್ರು ಚೆನ್ನಾಗಿ ಜಾಡಿಸಿದರು, “ನಾಚಿಕೆ ಆಗುವುದಿಲ್ಲವೇ ನಿನ್ನ ಜನ್ಮಕ್ಕೆ…. ಹೋಗೋವ್ರಿಗೆಲ್ಲ ತಮ್ಮನಾಗಿ ಬರೋವ್ರಿಗೆಲ್ಲ ಅಣ್ಣನಾಗಿ 4ನೇ ವರ್ಷ ಇದೇ 8ನೇ ತರಗತಿಯಲ್ಲಿ ಇದ್ದೀಯಾ… ಒಂದಿಷ್ಟು ಭಯ ಭಕ್ತಿಯಿಂದ ಓದಿ ಪಾಸ್‌ಮಾಡಿಕೊಳ್ಳಬಾರದೇ?”

“ನೋಡಿ ಸಾರ್‌…. ವಿದ್ಯೆ ಅನ್ನೋದು, ಒಂದು ಭಕ್ತಿಯಿಂದ ಕಲಿಯಬೇಕು ಅಥವಾ ಭಯದಿಂದ. ಶ್ರದ್ಧೆ ಭಕ್ತಿ ಅನ್ನೋದು ಈ ಜನ್ಮದಲ್ಲಿ ನನಗೆ ಬರೋಲ್ಲ…. ಈ ಜನ್ಮದಲ್ಲಿ ನಾನು ಯಾವುದಕ್ಕೂ ಭಯಪಟ್ಟಿಲ್ಲ, ಮತ್ತೆ ಎಲ್ಲಿಂದ ಪಾಸಾಗಲಿ?”

 

ಟೀಚರ್‌ಗಣಿತದ ಪಾಠ ಮಾಡುತ್ತಾ ಉತ್ಸಾಹದಿಂದ ಲೆಕ್ಕಗಳನ್ನು ವಿವರಿಸುತ್ತಾ ಪ್ರಶ್ನೆ ಕೇಳುತ್ತಿದ್ದರು.

ಕಿಟ್ಟಿ ನೀನು ಹೇಳು, 1 ಪುಸ್ತಕದ ಜೊತೆ 5 ಪುಸ್ತಕಗಳು ಸೇರಿದರೆ ಏನಾಗುತ್ತೆ?

ಕಿಟ್ಟಿ : 6 ಪುಸ್ತಕಗಳು ಟೀಚರ್‌.

ಟೀಚರ್‌ : ಶಭಾಷ್‌! ವೆಂಕಿ ನೀನು ಹೇಳು, 500 ಪುಸ್ತಕಗಳು, 200 ಶಬ್ದಕೋಶ, 400 ಪತ್ರಿಕೆಗಳು ಎಲ್ಲಾ ಸೇರಿ ಏನಾಗುತ್ತೆ?

ವೆಂಕಿ : ಲೈಬ್ರೆರಿ ಟೀಚರ್‌!

 

ಟೀಚರ್‌ ಶಾಲೆಯಲ್ಲಿ ವಿಚಾರಿಸುತ್ದಿದ್ದರು, “ಮಕ್ಕಳೇ, ನಿನ್ನೆ ಹೇಳಿದ ಪದ್ಯವನ್ನು ಎಲ್ಲರೂ ಕಂಠಪಾಠ ಮಾಡಿದ್ದೀರಿ ತಾನೇ?” .  ಗುಂಡ ಮಾತ್ರ ಎದ್ದು ನಿಂತು ಹೇಳಿದ, “ಇಲ್ಲ ಟೀಚರ್‌… ನಾನು ಮಾಡಿಲ್ಲ.”

ಟೀಚರ್‌ಕೋಪದಿಂದ, “ಯಾಕಪ್ಪ? ಏನಂಥ ಘನಂದಾರಿ ಕೆಲಸ?” ಎಂದರು.

“ನಾನು ರಾತ್ರಿ 10 ಗಂಟೆವರೆಗೂ ಟಿ.ವಿ. ನೋಡಿ ಇನ್ನೇನು ಪದ್ಯ ಓದೋಣ ಅಂತ ಕುಳಿತ ತಕ್ಷಣ, ಹಾಳು ಕರೆಂಟ್‌ಹೋಗಿಬಿಡ್ತು?”

“ಯಾಕೆ? ಮತ್ತೆ ಕರೆಂಟ್‌ ಬರಲೇ ಇಲ್ಲೇನು?” ಟೀಚರ್‌ಗೆ ಸಿಟ್ಟೇರಿತ್ತು.

“ಅರ್ಧ ಗಂಟೆ ಆದ ಮೇಲೇನೋ ಬಂತು…. ನಾನೆಲ್ಲಿ ಮತ್ತೆ ಪದ್ಯ ಓದಲು ಕುಳಿತಿದ್ದೇನೆ ಅಂತ, ಅದಕ್ಕೆ ಗೊತ್ತಾಗಿ ಹೋಗಿಬಿಡುತ್ತೇನೋ ಅಂತ, ಪುಸ್ತಕ ಎತ್ತಿಟ್ಟು ಮಲಗಿಬಿಟ್ಟೆ!” ಎನ್ನುವುದೇ ಈ ಭೂಪ?

ಕಿರಣ್‌ : ನಮ್ಮ ಸರ್ಕಾರ ಹೇಳುತ್ತದೆ, ಹೆಣ್ಣುಮಕ್ಕಳನ್ನು ಓದಿಸಿ. ಅವಳು ಮನೆಯ 5 ಜನರನ್ನು ವಿದ್ಯಾವಂತರನ್ನಾಗಿಸುತ್ತಾಳೆ ಅಂತ, ಇದು ಸರಿಯೇ?

ವರುಣ್‌ : ಯಾಕೆ…? ಸರಿ ಇಲ್ಲವೇ?

ಕಿರಣ್‌ : ಒಬ್ಬಳು ಹುಡುಗಿ ಕಾಲೇಜಿಗೆ ಬಂದರೆ ಅವಳ ಹಿಂದೆ ಬೀಳುವ 40 ಹುಡುಗರು ಫೇಲ್ ‌ಆಗ್ತಾರಲ್ಲ… ಅವರ ಗತಿ ಏನು?

 

ಸುರೇಶ್‌ : ರಾಜೇಶ್‌, ನಿನ್ನೆ ನಿನ್ನ ತಂಗಿಯ ಹುಟ್ಟಿದ ದಿನ ಅಲ್ಲವೇ, ನೀನು ಅವಳಿಗೆ ಯಾವ ಗಿಫ್ಟ್ ಕೊಟ್ಟೆ?

ರಾಜೇಶ್‌ : ಅವಳು ಇಡೀ ವಿಶ್ವ ನೋಡಲು ಬಯಸುತ್ತಿದ್ದಳು. ಹೀಗಾಗಿ ಒಂದು ಭೂಪಟ (ಅಟ್ಲಾಸ್‌) ಕೊಡಿಸಿದೆ.

 

ಗುಂಡನ ತಾತಾ ಅವನಿಗೆ ಸರ್‌ಪ್ರೈಸ್‌ ಕೊಡೋಣ ಎಂದು ಆ ದಿನ ಶಾಲೆಗೆ ಅಚಾನಕ್ಕಾಗಿ ಬಂದರು.

ತಾತಾ : ಟೀಚರ್‌, ನಾನು ಗುಂಡನ ತಾತಾ. ಇದು 8ನೇ `ಬಿ’ ತರಗತಿ ಅಲ್ಲವೇ? ಅವನನ್ನು ನಾನು ಭೇಟಿ ಆಗಬಹುದೇ? ಅವನು ಹೇಗೆ ಕಲಿಯುತ್ತಿದ್ದಾನೆ…?

ಟೀಚರ್‌ : ನೀವು ಬಹಳ ತಡ ಮಾಡಿ ಬಂದಿರಿ. ಈಗ ತಾನೇ ಅವನು ಮೊಬೈಲ್‌ಗೆ ತಾತಾ ತೀರಿಕೊಂಡರೆಂಬ ಸುದ್ದಿ ಬಂತೆಂದು ರಜಾ ಹೇಳಿ ಹೊರಟುಹೋದ.

 

ರಾಮು : ಆಂಟಿ, 1 ಕಪ್‌ ಸಕ್ಕರೆ ಕೊಡ್ಬೇಕಂತೆ. ಅಮ್ಮ ಹೇಳಿದ್ದಾರೆ.

ಆಂಟಿ : ಹೌದೇನು…? ಬಾ ಬಾ, ನಿಮ್ಮಮ್ಮ ಬೇರೇನು ಹೇಳಿದ್ದಾರೆ?

ರಾಮು : ಅಕಸ್ಮಾತ್‌ ಆ ಕುಳ್ಳಿ ಕೊಡಲಿಲ್ಲಾಂದ್ರೆ ಆಚೆ ಮನೆ ಡುಮ್ಮಿ ಹತ್ತಿರ ಕೇಳಿ ತಗೊಂಬಾ ಅಂತ…

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ