ನೀವು ಮೀನಿನ ಪದಾರ್ಥಗಳನ್ನು ಸೇವನೆ ಮಾಡುತ್ತಿರುವಾಗ ವಾಸ್ತವದಲ್ಲಿ ನೀವು ಏನನ್ನು ತಿನ್ನುತ್ತಿದ್ದೀರಾ ಎಂಬ ಅರಿವು ನಿಮಗೆ ಇರುತ್ತದೆಯಾ? ರಸಾಯನಗಳು ಅಥವಾ ಪ್ಲಾಸ್ಟಿಕ್? ಕೆಲವು ತಿಂಗಳುಗಳ ಹಿಂದಷ್ಟೇ ಮರೀನ್ ಪೊಲ್ಯೂಶನ್ ಬುಲೆಟಿನ್‌ನಲ್ಲಿ ಫ್ಲೈಮೌಥ್ ಯೂನಿರ್ಸಿಟಿಯ ವಿಜ್ಞಾನಿಯೊಬ್ಬರ ಸಂಶೋಧನಾ ಲೇಖನ ಪ್ರಕಟವಾಗಿತ್ತು. ಅದರ ಪ್ರಕಾರ, ಇಂಗ್ಲೆಂಡಿನ ಸಮುದ್ರ ತೀರದಲ್ಲಿ ಹಿಡಿದ ಮೀನುಗಳ ಪೈಕಿ ಮೂರನೇ ಒಂದರಷ್ಟು ಮೀನುಗಳಲ್ಲಿ ಪ್ಲಾಸ್ಟಿಕ್ ಅಂಶ ಕಂಡುಬಂದಿತ್ತು. ಇದು ಕೇವಲ ಉತ್ತರ ಅಥವಾ ಅಟ್ಲಾಂಟಿಕ್ ಸಾಗರದ ಮೀನುಗಳದ್ದಷ್ಟೇ ಪ್ರಕರಣವಲ್ಲ.
ಪ್ಲಾನೆಟ್ ಅರ್ಥ್ ಆನ್‌ಲೈನ್‌ನಲ್ಲಿ ವಿಜ್ಞಾನಿ ರಿಚರ್ಡ್ ಥಾಮ್ಸನ್ ಹೀಗೆ ಹೇಳಿದ್ದಾರೆ, `ಆರಂಭಿಕ ಸಂಶೋಧನೆಗಳ ಅನುಸಾರ ಇಡೀ ಸಮುದ್ರ ತೀರ, ಸಮುದ್ರ ಮೇಲ್ಮೈ ಹಾಗೂ ತಳಭಾಗದಲ್ಲಿ ಪ್ಲಾಸ್ಟಿಕ್‌ನ ಚಿಕ್ಕಪುಟ್ಟ ಅಂಶಗಳು ಭಾರಿ ಪ್ರಮಾಣದಲ್ಲಿ ಪಸರಿಸಿವೆ.
ಚಕಿತಗೊಳಿಸುವ ಸತ್ಯ ಫ್ಲೈಮೌಥ್
ಸಮುದ್ರ ತೀರದಿಂದ 10 ಕಿ.ಮೀ. ಒಳಭಾಗಕ್ಕೆ ಹೋಗಿ 504 ಮೀನುಗಳನ್ನು ಹಿಡಿಯಲಾಯಿತು. ಅದರಲ್ಲಿ ಲೈಟಿಂಗ್ ಹಾರ್ಸ್ ಮ್ಯಾಕರೆಲ್, ಡಾನ್ ಡೊರಿ, ರೆಡ್ ಗರ್ನ್‌ರ್ಡ್ ಪ್ರಕಾರದ ಮೀನುಗಳನ್ನು ಹಿಡಿಯಲಾಯಿತು. ಬೇರೆ ಬೇರೆ ಬಗೆಯ 351 ಪ್ಲಾಸ್ಟಿಕ್ ಅಂಶಗಳು ಮೀನಿನ ದೇಹದಲ್ಲಿ ಕಂಡುಬಂದವು. ಅದರಲ್ಲಿ ಹೆಚ್ಚಿನ ಅಂಶಗಳು ಪ್ಲಾಸ್ಟಿಕ್ ಬಾಟಲ್ ಪಾಲಿಥಿನ್, ಸ್ಟಾರೋಫೋಮ್ (ಒಂದು ಬಗೆಯ ಥರ್ಮಾಕಾಲ್) ಪ್ಲಾಸ್ಟಿಕ್ ಕೈ ಗಸುಗಳು, ಮುಚ್ಚಳ, ಫೋವ್ ಪ್ಯಾಕೇಜಿಂಗ್ ಐಟಮ್, ಪ್ಲಾಸ್ಟಿಕ್ ದಾರ, ಮೀನು ಹಿಡಿಯುವ ಬಲೆ, ಮೊಟ್ಟೆ ಇಡುವ ಪ್ಲಾಸ್ಟಿಕ್‌ನ ಸೆಪರೇಟರ್ಸ್, ಲೈಟರ್, ಸ್ಟ್ರಾ, ಕಾಸ್ಮೆಟಿಕ್ ಮತ್ತು ಸ್ಯಾನಿಟರಿ ಉತ್ಪಾದನೆಗಳು ಅದರಲ್ಲಿದ್ದವು. ಇದರ ಹೊರತಾಗಿ ಸಿಗರೇಟಿನ ತುಂಡುಗಳು ಭಾರಿ ಪ್ರಮಾಣದಲ್ಲಿ ದೊರೆತವು.
ಇಗಳಲ್ಲಿ ಕೆಲವು ಸತ್ತ ಮೀನುಗಳ ದೇಹದಿಂದ ಲೋಹಗಳ ಮುಚ್ಚಳ, ಗಾಜಿನ ತುಂಡುಗಳನ್ನು ಕೂಡ ಹೊರತೆಗೆಯಲಾಯಿತು. ಈ ಎಲ್ಲ ಮೀನುಗಳ ಜೀವನ ಮಾಂಸಪ್ರಿಯರಿಗೆ ಆಹಾರದ ರೂಪದಲ್ಲಿ ಕೊನೆಗೊಳ್ಳಲಿತ್ತು.
ಪ್ಲಾಸ್ಟಿಕ್‌ನ ಮೂಲ 2011ರಲ್ಲಿ ಬ್ರಿಟನ್‌ನ ಸೂಪರ್ ಮಾರ್ಕೆಟ್‌ಗಳು ಸುಮಾರು 8 ಕೋಟಿಯಷ್ಟು ತೆಳ್ಳನೆಯ ಪ್ಲಾಸ್ಟಿಕ್ ಪಾಲಿಥಿನ್ ಬ್ಯಾಗ್‌ಗಳನ್ನು ವಿತರಿಸಿದ್ದವು. 2010ಕ್ಕೆ ಹೋಲಿಸಿದರೆ ಅದು ಶೇ.5.4ರಷ್ಟು ಹೆಚ್ಚಳವಾಗಿತ್ತು. ಈಗ ಯು.ಕೆ.ಯ ಪ್ರತಿಯೊಬ್ಬ ಅಂಗಡಿಕಾರ ತಿಂಗಳಿನಲ್ಲಿ ಸರಾಸರಿ 9 ಪ್ಲಾಸ್ಟಿಕ್ ಬ್ಯಾಗುಗಳನ್ನು ಉಪಯೋಗಿಸುತ್ತಾನೆ. ಅವು ಕೊನೆಗೆ ವಿಲೇವಾರಿಯಾಗುವುದು ಮೀನುಗಳ ಆಹಾರದ ರೂಪದಲ್ಲಿ.
ಕಾಸ್ಮೆಟಿಕ್ಸ್ ಉತ್ಪಾದನೆಗಳನ್ನು ತಯಾರಿಸುವ ಕಂಪನಿಗಳು ಪ್ಲಾಸ್ಟಿಕ್‌ನ್ನು ಚಿಕ್ಕಪುಟ್ಟ ಪಾರ್ಟಿಕಲ್ಸ್ ರೂಪದಲ್ಲಿ ಬಳಸುತ್ತವೆ. ಹೀಗಾಗಿ ಅವು ಮೀನುಗಳಿಗೆ ಸುಲಭ ಆಹಾರವಾಗುತ್ತವೆ. ಬಳಿಕ ಅವು ಮೀನುಗಳ ಹೊಟ್ಟೆ ಸೇರುತ್ತವೆ. ಅವೇ ಮೀನುಗಳು ನಂತರ ಜನರ ಆಹಾರದ ಮುಖ್ಯ ಮೂಲವಾಗುತ್ತವೆ.
ಪ್ಲಾಸ್ಟಿಕ್ ಕಸ ಅಪಾಯಕಾರಿ
2010ನೇ ಸಾಲಿನಲ್ಲಿ ಅಮೆರಿಕದಲ್ಲಿ 31 ಲಕ್ಷ ಟನ್ ಪ್ಲಾಸ್ಟಿಕ್ ಕಸವನ್ನು ಹೊರತೆಗೆಯಲಾಯಿತು. ಅದರಲ್ಲಿ ಶೇ.92ರಷ್ಟು ಕಸವನ್ನು ಸಮುದ್ರದಿಂದ ಹೊರತೆಗೆಯಲಾಗಿತ್ತು. 2011ರಲ್ಲಿ ವಿಜ್ಞಾನಿಗಳು ಪೆಸಿಫಿಕ್ ಸಾಗರದಲ್ಲಿ ಹಿಡಿದ ಶೇ.10ರಷ್ಟು ಲ್ಯಾಟರ್ನ್ ಜಾತಿಯ ಮೀನುಗಳಲ್ಲಿ ಪ್ಲಾಸ್ಟಿಕ್‌ನ ಅಂಶ ಇರುವುದನ್ನು ಕಂಡರು. ಲ್ಯಾಟರ್ನ್ ಮೀನುಗಳನ್ನು ಹೆಚ್ಚಾಗಿ ದೊಡ್ಡ ಮೀನುಗಳು ಭಕ್ಷಿಸುತ್ತವೆ. ಆ ದೊಡ್ಡ ಮೀನುಗಳು ಮನುಷ್ಯರ ಪ್ರಿಯ ಆಹಾರ ಎನಿಸಿವೆ.
ಸ್ಯಾನ್ ಡಿಯಾಗೊದ ಸ್ಕ್ರಿಪ್ಸ್ ಇನ್‌ಸ್ಟಿಟ್ಯೂಟ್ ಆಫ್ ಓಶನೊಗ್ರಫಿಯ ಒಂದು ಸಂಶೋಧನಾ ವರದಿಯ ಪ್ರಕಾರ, ಉತ್ತರ ಪೆಸಿಫಿಕ್ ಸಾಗರದ ಮಧ್ಯಭಾಗದ ಆಳದಲ್ಲಿರುವ ಮೀನುಗಳು ಪ್ರತಿವರ್ಷ 24,000 ಟನ್ ಪ್ಲಾಸ್ಟಿಕ್ ತಿನ್ನುತ್ತವೆ. ಮೀನುಗಳ ದೇಹದಲ್ಲಿ ಪ್ಲಾಸ್ಟಿಕ್‌ನ ಅಂಶ ದೊಡ್ಡದಾಗಿರದೇ ಇರಬಹುದು. ಇವೇ ಬಳಿಕ ಅದೆಷ್ಟು ಭಾಗಗಳಾಗಿ ವಿಭಜನೆಗೊಳ್ಳುತ್ತವೆಯೆಂದರೆ, ಮೀನು ಸೇವಿಸುವವರು ಈ ಸೂಕ್ಷ್ಮ ತುಂಡುಗಳನ್ನು ನೋಡಲಾರರು. ಸಂಶೋಧನೆಯಲ್ಲಿ ಪಾಲ್ಗೊಂಡ ಲೇಖಕಿ ರೆಬೆಕಾ ಆ್ಯಶ್‌ಹೇಳುವುದೇನೆಂದರೆ, ಈ ಶೇ.10 ಪ್ರಮಾಣ ಅತ್ಯಂತ ಕಡಿಮೆ. ಎಷ್ಟೊಂದು ಮೀನು ಪ್ಲಾಸ್ಟಿಕ್ ಸೇವನೆ ಮಾಡಿ ಮೃತಪಟ್ಟ ಹಾಗೂ ಎಷ್ಟೊಂದು ಮೀನುಗಳು ಪ್ಲಾಸ್ಟಿಕ್‌ನ್ನು ನುಂಗಿದ ಹಾಗೂ ಆ ಪ್ಲಾಸ್ಟಿಕ್ ಅವಗಳ ಪಚನಾಂಗದಲ್ಲಿ ಸೇರಿಕೊಂಡಿತು ಎಂದು ಹೇಳುವುದು ಕಷ್ಟ.
ಎವ್ಗಾಲಿಟಾ ಮರೀನ್ ರಿಸರ್ಚ್ ಫೌಂಡೇಶನ್ನಿನ ಒಂದು ಅಧ್ಯಯನದ ಪ್ರಕಾರ, ಪೆಸಿಫಿಕ್ ಸಾಗರದ ಮಧ್ಯಭಾಗದ ಶೇ.35ರಷ್ಟು ಮೀನುಗಳ ದೇಹದಲ್ಲಿ ಪ್ಲಾಸ್ಟಿಕ್ ಅಂಶ ಇದೆ.
ಪರಿಸರಕ್ಕೆ ಬಹುದೊಡ್ಡ ಅಪಾಯ
ಅಗ್ಗದ, ಹಗುರ ಹಾಗೂ ಬಾಳಿಕೆ ಬರುವಂತಹ ಪ್ಲಾಸ್ಟಿಕ್‌ನ್ನು ಬಹಳಷ್ಟು ಉದ್ಯಮಗಳಲ್ಲಿ ಬಳಸಲಾಗುತ್ತದೆ. ಇದರಲ್ಲಿನ ಬಹಳಷ್ಟು ಕಡಿಮೆ ಭಾಗವನ್ನು ಪುನರ್ ಬಳಕೆ ಮಾಡಲಾಗುತ್ತದೆ. ಉಳಿದ ಭಾಗವನ್ನು ಅಲ್ಲಿ ಇಲ್ಲಿ ಬಿಸಾಕಲಾಗುತ್ತದೆ. ಅದು ನದಿ ಸಮುದ್ರಗಳನ್ನು ಸೇರುತ್ತದೆ. ಅಲ್ಲಿ ಈ ಪ್ಲಾಸ್ಟಿಕ್ ನಷ್ಟ ಆಗುವ ಬದಲು ತುಂಡು ತುಂಡಾಗಿ ಬಹುದೊಡ್ಡ ಹಾನಿಗೆ ಕಾರಣವಾಗುತ್ತದೆ. ಈ ಪ್ಲಾಸ್ಟಿಕ್‌ನ ಒಂದಷ್ಟು ಭಾಗವನ್ನು ಮೀನುಗಳು ತಿನ್ನುತ್ತವೆ. ಬಳಿಕ ಅದೇ ಪ್ಲಾಸ್ಟಿಕ್ ಕಸ ಮೀನುಗಳ ಮುಖಾಂತರ ಮನುಷ್ಯನ ಹೊಟ್ಟೆ ಸೇರಿ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ.
ದೆಹಲಿಯಲ್ಲಿ ಪ್ರತಿವರ್ಷ ಎರಡೂವರೆ ಲಕ್ಷ ಟನ್ ಪ್ಲಾಸ್ಟಿಕ್ ಕಸ ಉತ್ಪತ್ತಿಯಾಗುತ್ತದೆ. ಈ ಕಸದಲ್ಲಿ ಬ್ಯಾಗ್‌ಗಳು, ಶೀಟ್‌ಗಳು ಇರುತ್ತವೆ. ಇದರಲ್ಲಿ ಬಹಳಷ್ಟು ಭಾಗ ನೀರಿಗೆ ಸೇರಿಕೊಂಡು ಹಾನಿಕರ ಪರಿಣಾಮ ಉಂಟುಮಾಡುತ್ತದೆ.
ಅತಿ ಹೆಚ್ಚಿನ ಪ್ಲಾಸ್ಟಿಕ್‌ನ ಕಾರಣದಿಂದಾಗಿ ಉತ್ತರ ಪೆಸಿಫಿಕ್ ಸಾಗರದಲ್ಲಿ `ಗ್ರೇಟ್ ಪೆಸಿಫಿಕ್ ಗಾರ್ಬೇಜ್ ಪ್ಯಾಚ್’ ನಿರ್ಮಾಣವಾಗಿದೆ. ಇದೊಂದು ನಡುಗಡ್ಡೆಯಂತಿದ್ದು, ಅದು ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶವನ್ನು ಸೇರಿಸಿದರೆ ಎಷ್ಟು ವಿಸ್ತಾರವಾಗುತ್ತೋ, ಅಷ್ಟು ದೊಡ್ಡ ನಡುಗಡ್ಡೆಯಂತೆ ಗೋಚರಿಸುತ್ತದೆ. ಯುಎಫ್‌ಓದ ಸಂಶೋಧನೆಗೆ ಹೊರಟ ಏಲಿಯನ್‌ಗಳು ಈ ಕಸದ ನಡುಗಡ್ಡೆಯನ್ನು ಒಂದು ದೇಶವೆಂದೇ ಭಾವಿಸಿದ್ದರು.
ಪ್ಲಾಸ್ಟಿಕ್ಗೆ ತುತ್ತಾದ ಇನ್ನಷ್ಟು ಜೀವಿಗಳು
ಸಮುದ್ರ ಆಮೆಗಳು ಸಾಕಷ್ಟು ಸಂವೇದನಾಶೀಲವಾಗಿರುತ್ತವೆ. ಮೀನುಗಳನ್ನು ಹಿಡಿಯುವ ಬಲೆಯಲ್ಲಿ ಸಿಲುಕಿಕೊಂಡ ಬಳಿಕ ಅವು ಪ್ಲಾಸ್ಟಿಕ್ ಬ್ಯಾಗ್‌ನ್ನು ತಮ್ಮ ಪ್ರೀತಿಯ ಆಹಾರ ಜೆಲ್ಲಿಫಿಶ್ ಎಂದು ಭಾವಿಸಿ ತಿಂದುಬಿಡುತ್ತವೆ. ಆಮೆಗಳನ್ನು ಪರೀಕ್ಷಿಸಿದ ಬಳಿಕ ಈ ಸಂಗತಿ ಬೆಳಕಿಗೆ ಬಂತು. ಪ್ಲಾಸ್ಟಿಕ್‌ನ ಅಂಶ ಆಮೆಗಳ ಕರುಳನ್ನು ಆರಿಸಿಕೊಂಡುಬಿಡುತ್ತದೆ. ಹೀಗಾಗಿ ಅವು ಹಸಿವಿನಿಂದ ಸಾಯುತ್ತವೆ.
ಪ್ಲಾಸ್ಟಿಕ್‌ನ್ನು ಕರಗಿಸಿ ತಯಾರಿಸಿದ ಚಿಕ್ಕ ಚಿಕ್ಕ ಗುಂಡುಗಳು ಅನೇಕ ಉದ್ಯಮಗಳಲ್ಲಿ ಬಳಕೆಯಾಗುತ್ತವೆ. ಇವನ್ನು ಹಡಗಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲಾಗುತ್ತದೆ. ಸಾಗಾಣಿಕೆಯ ಸಂದರ್ಭದಲ್ಲಿ ಪ್ಲಾಸ್ಟಿಕ್ ಗುಂಡುಗಳು ಸಮುದ್ರದಲ್ಲೂ ಬಿದ್ದುಹೋಗುತ್ತವೆ. ಸಮುದ್ರ ಪಾಲಾದ ಈ ಪ್ಲಾಸ್ಟಿಕ್ ಗುಂಡುಗಳನ್ನು ಸಮುದ್ರ ಹಕ್ಕಿಗಳು ತಿಂದುಬಿಡುತ್ತವೆ. ಬಳಿಕ ಆ ಹಕ್ಕಿಗಳು ಈ ಆಹಾರವನ್ನು ತಮ್ಮ ಮರಿಗಳಿಗೆ ಉಣಿಸುತ್ತವೆ. ಸಮುದ್ರ ಹಕ್ಕಿಗಳ 250 ಪ್ರಜಾತಿಗಳಲ್ಲಿ 63 ಪ್ರಜಾತಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ನ ಪಾರ್ಟಿಕ್ಸ್ ಕಂಡುಬಂದಿವೆ.
ಮತ್ಸ್ಯ ಪ್ರೇಮಿಗಳೇ ಎಚ್ಚರ!
ಮೀನುಗಳ ಹೊಟ್ಟೆಯಲ್ಲಿ ಕಂಡುಬರುವ ಪ್ಲಾಸ್ಟಿಕ್ ಹಲವು ಬಗೆಯ ಮೀನು ತಿನ್ನುವವರಲ್ಲಿ ವಿಷಕಾರಿಯಾಗಿ ಪರಿಣಮಿಸಬಹುದು. ಪ್ಲಾಸ್ಟಿಕ್‌ನ ಹಲವು ಬಗೆಯ ಬಣ್ಣ ಮತ್ತು ರಾಸಾಯನಿಕ ಬಿಸ್‌ಫೆನೆಲ್‌ನಲ್ಲಿ ಜೈವಿಕ ಮಾಲಿನ್ಯ ಹಾಗೂ ಇತರ ವಿಷಕಾರಕ ಘಟಕಗಳು ಇರುತ್ತವೆ. ಅದು ಮೀನುಗಳನ್ನು ಕೂಡ ವಿಷಕಾರಿಯಾಗಿ ಪರಿವರ್ತಿಸಬಹುದು. ಮೀನು ಸೇವನೆ ಮಾಡುವವರು ಮೀನುಗಳ ಜೊತೆಗೆ ಈ ಕೆಳಕಂಡ ವಿಷಕಾರಕ ಪದಾರ್ಥಗಳನ್ನು ಕೂಡ ಸೇವಿಸಬಹುದು. ಸೀರ್, ಟಾಯ್ಲೆಟ್, ಮೆಡಿಕಲ್ ವೇಸ್ಟ್, ಡೈಪರ್, ಕಾಂಡೋಮ್ ಅಥವಾ ಇತರೆ ವಸ್ತುಗಳನ್ನು ನೀರಿಗೆ ಹರಿಬಿಡಲಾಗುತ್ತದೆ. ಆ ಚಿಕ್ಕ ಚಿಕ್ಕ ವಸ್ತುಗಳನ್ನು ಪುಟ್ಟ ಪುಟ್ಟ ಮೀನುಗಳು ತಮ್ಮ ಆಹಾರವೆಂದೇ ಭಾವಿಸಿ ತಿಂದುಬಿಡುತ್ತವೆ. ಈ ಚಿಕ್ಕ ಮೀನುಗಳನ್ನು ದೊಡ್ಡ ಮೀನುಗಳು ಆಹಾರವಾಗಿ ಬಳಸಿಕೊಳ್ಳುತ್ತವೆ. ಆ ದೊಡ್ಡ ಮೀನುಗಳನ್ನು ಜನರು ತಮ್ಮ ಆಹಾರವೆಂಬಂತೆ ಬಳಸುತ್ತಾರೆ.
1975ರಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಒಂದು ಸಂಶೋಧನೆ ನಡೆಸಿ ನೀಡಿದ ಹೇಳಿಕೆಯೆಂದರೆ, ಸುಮಾರು 14 ಕೋಟಿ ಪೌಂಡ್ ಪ್ಲಾಸ್ಟಿಕ್ ಕಸವನ್ನು ಸಮುದ್ರಕ್ಕೆ ಚೆಲ್ಲಲಾಗುತ್ತದೆ. 1985ರಲ್ಲಿ ಬಂದ ವರದಿಯ ಪ್ರಕಾರ, ವ್ಯಾಪಾರಿ ಹಡಗುಗಳು ಸುಮಾರು ನಾಲ್ಕೂವರೆ ಲಕ್ಷ ಪ್ಲಾಸ್ಟಿಕ್ ಕಂಟೇನರ್‌ಗಳನ್ನು ಸಮುದ್ರಕ್ಕೆಸೆಯುತ್ತವೆ. ಮೀನು ಹಿಡಿಯುವ ವ್ಯಾಪಾರಿಗಳು, ಸೇವನೆಯ ಹಡಗುಗಳು, ಬೋಟುಗಳು, ತೈಲ ಹಾಗೂ ಗ್ಯಾಸ್ ವಾಹಕ ಹಡಗುಗಳು ಟನ್ನುಗಟ್ಟಲೆ ಪ್ಲಾಸ್ಟಿಕ್‌ನ್ನು ಸಮುದ್ರಕ್ಕೆಸೆಯುತ್ತವೆ. ಮನುಷ್ಯನ ಒಂದು ಮೂಲ ಸ್ವಭಾವವೆಂದರೆ ಅವನಿಗೆ ಉಚಿತ ವಸ್ತುಗಳು ಬಹಳ ಇಷ್ಟವಾಗುತ್ತವೆ. ಅವನು ಮೀನು ಸೇವನೆಯ ಜೊತೆ ಜೊತೆಗೆ ಪ್ಲಾಸ್ಟಿಕ್ ಕಸವನ್ನು ಉಚಿತವಾಗಿ ಹೊಟ್ಟೆಗೆ ಸೇರಿಸಿಕೊಳ್ಳುತ್ತಿದ್ದಾನೆ. ಪುಟ್ಟ ಮೀನುಗಳು ಪ್ಲಾಸ್ಟಿಕ್‌ನ್ನು ತಮ್ಮ ಸಾಮಾನ್ಯ ಆಹಾರ ಪ್ಲಾಂಕ್ಟನ್ ಎಂದು ಭಾವಿಸಿ ತಿನ್ನುತ್ತವೆ. ಪ್ಲಾಂಕ್ಟನ್ ಮತ್ತು ಪ್ಲಾಸ್ಟಿಕ್ ಪಾರ್ಟಿಕ್ಸ್ ಸಂಖ್ಯೆಗಳ ಬಗ್ಗೆ ಸಾಕಷ್ಟು ಅಂಕಿ ಅಂಶಗಳು ಲಭ್ಯವಿವೆ. ಕೆಲವು ಅಂಕಿಅಂಶಗಳು 6 ಮತ್ತು 1ರ ಅನುಪಾತ ಹೇಳುತ್ತವೆಯಾದರೆ, ಮತ್ತೆ ಕೆಲವು ಅಂಕಿಅಂಶಗಳು ವಿನಾಶಕಾರಿ 46 ಮತ್ತು 1ರ ಅಂದರೆ 46 ಪ್ಲಾಸ್ಟಿಕ್ ಪಾರ್ಟಿಕ್ಸ್ ಮತ್ತು 1 ಪ್ಲಾಂಕ್ಟನ್! ಶೀಘ್ರದಲ್ಲಿ ಬಹುಶಃ ಹೀಗೂ ಆಗಬಹುದು. ನೀವು ಮೀನುಗಳಿಗಿಂತ ಹೆಚ್ಚಾಗಿ ಪ್ಲಾಸ್ಟಿಕ್‌ನ್ನೇ ಸೇವಿಸಬಹುದು. ಮೀನನ್ನು ಪ್ಲಾಸ್ಟಿಕ್‌ನ ಹೊದಿಕೆಯಲ್ಲಿ ಸುತ್ತಿ ನಿಮಗೆ ತಿನ್ನಲು ಕೊಟ್ಟರೆ, ಒಳಗೂ ಪ್ಲಾಸ್ಟಿಕ್ ಹೊರಗೂ ಪ್ಲಾಸ್ಟಿಕ್ ಎಂಬಂತಾಗುತ್ತದೆ.
– ಮೇನಕಾ ಗಾಂಧಿ