ಬೇಸಿಗೆಕಾಲ ಮುಗಿಯುತ್ತಲೇ ಮಳೆ ಬರುತ್ತದೆ. ಆಗ ಉಷ್ಣದಿಂದ ಕೊಂಚ ನೆಮ್ಮದಿ ಸಿಗುವುದಾದರೂ ಅದರ ಜೊತೆಗೆ ತ್ವಚೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ತ್ವಚೆ ಅತಿ ಸಂವೇದನಾಶೀಲ ಹಾಗೂ ಶುಷ್ಕವಾಗುತ್ತದೆ.

ಮಳೆಗಾಲದಲ್ಲಿ ನಿಮ್ಮ ತ್ವಚೆಗೆ ಅತ್ಯಂತ ಹೆಚ್ಚು ಹಾನಿ ವಾಯು ಮಾಲಿನ್ಯ, ಧೂಳು, ಕೊಳೆ, ಹಾನಿಕಾರಕ ಯುವಿ ಕಿರಣಗಳಿಂದ ಉಂಟಾಗುತ್ತದೆ. ಈ ಹವಾಮಾನದಲ್ಲಿ ಸನ್‌ಸ್ಕ್ರೀನ್‌ ಹಚ್ಚುವುದರಿಂದ ಪಾರಾಗಬಹುದು ಎಂದು ನೀವು ಯೋಚಿಸುತ್ತಿರಬಹುದು. ಆದರೆ ಅದರಿಂದ ನಿಮ್ಮ ತ್ವಚೆಗೆ ಹಾನಿಯಾಗುತ್ತದೆ. ಈ ಹವಾಮಾನದಲ್ಲಿ ಹೆಚ್ಚು ಬೆವರು ಬರುವುದರಿಂದ ಮುಖದ ಮೇಲೆ ಧೂಳಿನ ಪದರ ಜಮೆಯಾಗುತ್ತದೆ. ಅದರಿಂದ ಫಂಗಲ್ ಇನ್‌ಫೆಕ್ಷನ್‌ ಉಂಟಾಗುವ ಅಪಾಯ ಹೆಚ್ಚು.

ಈ ಹವಾಮಾನದಲ್ಲಿ ತ್ವಚೆಯನ್ನು ಗಮನಿಸಿಕೊಳ್ಳುವುದು ಅಂತಹ ಕಷ್ಟದ ಕೆಲಸವಲ್ಲ. ಕೆಲವು ಸರಳ ಉಪಾಯಗಳನ್ನು ಅನುಸರಿಸಿ ಮಳೆಗಾಲದಲ್ಲೂ ನಿಮ್ಮ ತ್ವಚೆಯನ್ನು ಆರೋಗ್ಯವಾಗಿ ಹಾಗೂ ಕಾಂತಿಯುತವಾಗಿ ಮಾಡಬಹುದು.

ಭಾರಿ ಮೇಕಪ್ಬೇಡ

ಮಾನ್‌ಸೂನ್‌ ಸಂದರ್ಭದಲ್ಲಿ ತ್ವಚೆಯಲ್ಲಿ ನವೆಯಿಂದ ಪಾರಾಗಲು ವಾಟರ್‌ ಪ್ರೂಫ್‌ ಮತ್ತು ಒಳ್ಳೆಯ ಬ್ರ್ಯಾಂಡ್‌ನ ಸೌಂದರ್ಯ ಉತ್ಪನ್ನಗಳನ್ನು ಉಪಯೋಗಿಸಿ.

ಪಿ. ದಿವ್ಯಾ

skincare

ಟೋನಿಂಗ್

ದಿನಕ್ಕೆ 2 ಬಾರಿ ನಾನ್‌ ಆಲ್ಕೋಹಾಲಿಕ್‌ ಟೋನರ್‌ನಿಂದ ತ್ವಚೆಯ ಟೋನಿಂಗ್‌ ಮಾಡಿ. ಅದರಿಂದ ತ್ವಚೆಯ ಪಿ.ಎಚ್. ಸಮತೋಲನದಲ್ಲಿರುತ್ತದೆ.

ಆ್ಯಂಟಿ ಫಂಗಲ್ ಕ್ರೀಂ

ರಿಂಗ್‌ ವರ್ಮ್ ಅಥವಾ ನವೆಯಂತಹ ಸೋಂಕುಗಳಿಂದ ಪಾರಾಗಲು ತ್ವಚೆಯನ್ನು ಬಹಳ ಹೊತ್ತು ತೋಯಿಸಬೇಡಿ. ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ನಂತರ ಫಂಗಲ್ ಸೋಂಕಿನಿಂದ ಪಾರಾಗಲು ಆ್ಯಂಟಿ ಫಂಗಲ್ ಕ್ರೀಂ ಹಚ್ಚಿ. ಸ್ನಾನದ ನಂತರ ಫ್ಯಾನ್‌ ಗಾಳಿಯಿಂದ ಶರೀರದ ಭಾಗಗಳನ್ನು ಒಣಗಿಸಿಕೊಳ್ಳಿ. ಆ ಭಾಗಗಳು ಪದೇ ಪದೇ ಒದ್ದೆಯಾಗದಂತೆ ಆ್ಯಂಟಿ ಫಂಗಲ್ ಪೌಡರ್‌ ಹಚ್ಚಿ.

ಸ್ವಚ್ಛತೆ

ನಿಮ್ಮ ಮುಖವನ್ನು ನಾನ್‌ ಸೋಪಿ ಫೇಸ್‌ವಾಶ್‌ನಿಂದ ದಿನಕ್ಕೆ 3-4 ಬಾರಿ ತೊಳೆಯಿರಿ. ಅದರಿಂದ ತ್ವಚೆಯ ರೋಮರಂಧ್ರದಲ್ಲಿ ಸೇರಿರುವ ಧೂಳು ಮತ್ತು ಜಿಡ್ಡು ಚೆನ್ನಾಗಿ ಸ್ವಚ್ಛವಾಗುತ್ತದೆ.

ಫೇಸ್ಪ್ಯಾಕ್

ತ್ವಚೆಯ ಜಿಡ್ಡು ಕಡಿಮೆ ಮಾಡಲು ಹಾಗೂ ಅದರ ಆರ್ದ್ರತೆ ಕಾಪಾಡಲು ಸಿಟ್ರಿಕ್‌ (ನಿಂಬೆ ಆಧಾರಿತ) ಫೇಸ್‌ ಪ್ಯಾಕ್‌ ಉಪಯೋಗಿಸಿ. ಅದರಿಂದ ನಿಮ್ಮ ಬ್ಲ್ಯಾಕ್‌ ಹೆಡ್ಸ್/ವೈಟ್‌ ಹೆಡ್ಸ್ ಕೂಡ ದೂರವಾಗುತ್ತವೆ.

ಮಾಯಿಶ್ಚರೈಸಿಂಗ್

ತ್ವಚೆಯ ಕೋಮಲತೆ ಕಾಪಾಡಲು ಜೆಲ್ ‌ಆಧರಿಸಿದ ಮಾಯಿಶ್ಚರೈಸರ್‌ ಅಥವಾ ಗುಲಾಬಿ ಜಲ ಅಥವಾ ಬಾದಾಮಿ ಎಣ್ಣೆ ಉಪಯೋಗಿಸಿ.

ಸನ್ಸ್ಕ್ರೀನ್

ಸನ್‌ಸ್ಕ್ರೀನ್‌ ಹಚ್ಚಲು ಮರೆಯದಿರಿ. ಹೆಚ್ಚು ಎಸ್‌ಪಿಎಫ್‌ ಇರುವ ಸನ್‌ಸ್ಕ್ರೀನ್‌ ಉಪಯೋಗಿಸಿ ಅದರಿಂದ ತ್ವಚೆಯನ್ನು ಹಾನಿಕಾರಕ ಯು.ವಿ. ಕಿರಣಗಳಿಂದ ರಕ್ಷಿಸಬಹುದು.

ಹೆಚ್ಚು ನೀರು ಕುಡಿಯಿರಿ

ತ್ವಚೆಯ ಆರ್ದ್ರತೆ ಕಾಪಾಡಲು ದಿನಕ್ಕೆ 8-10 ಗ್ಲಾಸ್‌ ನೀರು ಅಗತ್ಯವಾಗಿ ಕುಡಿಯಿರಿ. ಏಕೆಂದರೆ ಈ ಹವಾಮಾನದಲ್ಲಿ ಬಹಳ ಹೆಚ್ಚು ಬೆವರುವುದರಿಂದ ತ್ವಚೆಯ ಆರ್ದ್ರತೆ ಖಾಲಿಯಾಗುತ್ತದೆ.

ಸ್ಕ್ರಬಿಂಗ್

ತ್ವಚೆಯ ಹೊಳಪು ಕಾಪಾಡಲು ಅದರ ಮೃತಕೋಶಗಳ ಪದರನ್ನು ಮೃದುವಾಗಿ ತೆಗೆಯುವ ವಿಧಾನ ಅನುಸರಿಸಿ.

ಮನೆಯ ಉಪಾಯಗಳು

ಸ್ಟ್ರಾಬೆರಿ ಫೇಸ್‌ ಮಾಸ್ಕ್ ಅರ್ಧ ಕಪ್‌ ಫ್ರೋಝನ್‌ ಅಥವಾ ತಾಜಾ ಸ್ಟ್ರಾಬೆರಿಯನ್ನು ಅರೆದುಕೊಳ್ಳಿ. ಅದಕ್ಕೆ 1 ಕಪ್‌ ಮೊಸರು, ಒಂದೂವರೆ ಚಮಚ ಜೇನುತುಪ್ಪ ಸೇರಿಸಿ ಈ ಲೇಪನವನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿದರೆ ತ್ವಚೆ ಮೃದುವಾಗಿ ಹೊಳೆಯುತ್ತಿರುತ್ತದೆ.

ಹಾಲು ಮತ್ತು ಹಣ್ಣುಗಳ ಫೇಶಿಯಲ್

ಒಂದು ಕಸ್ಟರ್ಡ್‌ ಆ್ಯಪಲ್ ಲೇಪನ ತಯಾರಿಸಿ ಅದಕ್ಕೆ 1 ಚಮಚ ಸಕ್ಕರೆ, ಅರ್ಧ ಕಪ್‌ ಹಾಲು ಮತ್ತು ಕೆಲವು ಹನಿ ಕ್ಯಾಲೋಮಿನ್‌ಸೇರಿಸಿ ಮುಖಕ್ಕೆ ಹಚ್ಚಿ. ಅದರಿಂದ ತ್ವಚೆ ಆರ್ದ್ರತೆಯಿಂದ ಕೂಡಿದ್ದು ಹೊಳೆಯುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ