ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ……!
ಇತ್ತೀಚಿನ ವರ್ಷಗಳಲ್ಲಿ ಫ್ಯಾಷನ್ ಡಿಸೈನಿಂಗ್ ಒಂದು ಆಕರ್ಷಕ, ಗ್ಲಾಮರಸ್ ಮತ್ತು ರೋಮಾಂಚಿತಗೊಳಿಸುವ ಕ್ಷೇತ್ರವಾಗಿಬಿಟ್ಟಿದೆ. ಟಿ.ವಿ. ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿ ಡಿಸೈನ್ ಮಾಡಿದ ಪೋಷಾಕುಗಳನ್ನು ನೋಡಿ ಸಾಮಾನ್ಯ ಜನರು ಕೂಡ ಅವನ್ನು ಧರಿಸಲು ಇಚ್ಛಿಸುತ್ತಿದ್ದಾರೆ. ಮೊದಲು ಬಟ್ಟೆ ಹೊಲಿಯುವವರನ್ನು ದರ್ಜಿ, ಟೈಲರ್ ಎಂದೆಲ್ಲ ಕರೆಯಲಾಗುತ್ತಿತ್ತು. ಆದರೆ ಈಗ ಅವರನ್ನು ಡಿಸೈನರ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಜಾಗತೀಕರಣದ ಕಾರಣದಿಂದ ಈಗ ಫ್ಯಾಷನ್ ಇಂಡಸ್ಟ್ರಿಯಲ್ಲಿ ಸಾಕಷ್ಟು ಏರಿಕೆ ಕಂಡುಬಂದಿದೆ. ಕ್ರಿಯಾಶೀಲರಾಗಿರುವವರೇ ಈ ಕ್ಷೇತ್ರದಲ್ಲಿ ನೆಲೆ ನಿಲ್ಲಬಲ್ಲರು, ಏನನ್ನಾದರೂ ಹೊಸದನ್ನು ಮಾಡಿ ತೋರಿಸಬಲ್ಲರು. ಏಕೆಂದರೆ ಈ ರಂಗದಲ್ಲಿ ಹೊಸದನ್ನು ಮಾಡಿ ತೋರಿಸುವ ಸಾಲುಗಳಿರುತ್ತವೆ.
ಈ ಕುರಿತಂತೆ ಫ್ಯಾಷನ್ ಡಿಸೈನಿಂಗ್ ಕಾಲೇಜೊಂದರ ವಿಭಾಗದ ಮುಖ್ಯಸ್ಥೆ ನೂತನ್ ಹೀಗೆ ಹೇಳುತ್ತಾರೆ, “ಫ್ಯಾಷನ್‌ಡಿಸೈನಿಂಗ್ ಕ್ಷೇತ್ರದಲ್ಲಿ ಏನನ್ನಾದರೂ ವಿಶಿಷ್ಟವಾದುದನ್ನು ಮಾಡಲು ಈ ಕೋರ್ಸ್ ಮಾಡುವುದು ಅತ್ಯವಶ್ಯ. ಪಿಯುಸಿ ಮುಗಿಸಿದ ಬಳಿಕ ಅಂಡರ್ ಗ್ರಾಜ್ಯುಯೇಟ್ ಕೋರ್ಸ್ ಮಾಡುವುದು ಅತ್ಯವಶ್ಯ. ಇದರಿಂದ ನೀವು ಥಿಯರಿ ಜೊತೆ ಪ್ರಾಕ್ಟಿಕಲ್ ಜ್ಞಾನ ಕೂಡ ದೊರಕಿಸಿಕೊಳ್ಳುತ್ತೀರಿ. 3 ವರ್ಷದ ಬಳಿಕ ಯಾರೇ ಆಗಲಿ ತಮ್ಮ ಬುಟಿಕ್, ಸ್ಟೋರ್ ತೆರೆಯಬಹುದು ಅಥವಾ ಫ್ಯಾಷನ್ ಇಂಡಸ್ಟ್ರಿ ಜೊತೆ ನಿಕಟತೆ ಬೆಳೆಸಿಕೊಳ್ಳಬಹುದು.”
ಅಡ್ಮಿಶನ್ ಪ್ರಕ್ರಿಯೆ
ಇದರಲ್ಲಿ ಅಡ್ಮಿಷನ್‌ಗಾಗಿ ಬೇರೆ ಬೇರೆ ಕಾಲೇಜುಗಳಲ್ಲಿ ಬೇರೆ ಬೇರೆ ನಿಯಮಗಳಿರುತ್ತವೆ. ಅದರಲ್ಲಿ ಲಿಖಿತ ಪರೀಕ್ಷೆಯ ಜೊತೆ ಗ್ರೂಪ್ ಡಿಸ್ಕಶನ್ ಮತ್ತು ಪರ್ಸನಲ್ ಇಂಟರ್‌ವ್ಯೂಗಳಿರುತ್ತವೆ.
ಪೋಸ್ಟ್ ಗ್ರಾಜ್ಯುಯೇಶನ್ ಕೋರ್ಸ್‌ಗಾಗಿ ಪದವಿ ಆಗಿರುವುದರ ಜೊತೆಗೆ ಗಾರ್ಮೆಂಟ್ ಡಿಸೈನ್, ಲೆದರ್ ಡಿಸೈನ್, ಆ್ಯಕ್ಸೆಸರೀಸ್‌ಡಿಸೈನ್, ಫ್ಯಾಷನ್ ಬಿಸ್‌ನೆಸ್ ಮ್ಯಾನೇಜ್‌ಮಂಟ್ ಫ್ಯಾಷನ್ ರೀಟೇಲ್ ಮ್ಯಾನೇಜ್‌ಮೆಂಟ್ ಫ್ಯಾಷನ್ ಮಾರ್ಕೆಟಿಂಗ್, ಡಿಸೈನ್ ಪ್ರೊಡಕ್ಷನ್ ಮ್ಯಾನೇಜ್‌ಮೆಂಟ್ ಮುಂತಾದ ಕೋರ್ಸ್‌ಗಳಲ್ಲಿ ಪ್ರಾವೀಣ್ಯತೆ ಪಡೆದುಕೊಳ್ಳಬಹುದು. ಈ ಕ್ಷೇತ್ರದಲ್ಲಿ ಗ್ರಾಜ್ಯುಯೇಟ್, ಪೋಸ್ಟ್ ಗ್ರಾಜ್ಯುಯೇಟ್ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮಾಡಬಹುದು.
ಹೆಸರು ಹಣ ಎಲ್ಲ
ನೂತನ್ ಅವರು ಹೇಳುವ ಪ್ರಕಾರ, ಕೆಲವು ಫ್ಯಾಷನ್ ಡಿಸೈನಿಂಗ್ ಕಾಲೇಜುಗಳಲ್ಲಿ ಮಹಿಳೆಯರಿಗೆ 1 ವರ್ಷದ ಕೋರ್ಸ್‌ಇರುತ್ತದೆ. ಉತ್ಸಾಹಿ ಗೃಹಿಣಿಯರಿಗೆ ವಾರದಲ್ಲಿ ಒಂದೇ ದಿನ ಕಾಲೇಜಿಗೆ ಹಾಜರಾಗಬೇಕಾಗುತ್ತದೆ. ಉಳಿದ 5 ದಿನಗಳಿಗಾಗುವಷ್ಟು ಹೋಮ್ ವರ್ಕ್‌ನ್ನು ಅವರಿಗೆ ಕೊಡಲಾಗುತ್ತದೆ. ಇದರಿಂದ ಅವರ ಕ್ರಿಯೇಟಿವಿಟಿ, ಪರಿಶ್ರಮ ಉಪಯೋಗಕ್ಕೆ ಬರುತ್ತದೆ.
ಪ್ರೊಫೆಶನಲ್ ಟ್ರೇನಿಂಗ್ ತೆಗೆದುಕೊಂಡಾಗ ನಿಮಗೆ ಮಾರುಕಟ್ಟೆಯ ಟ್ರೆಂಡ್ ಹಾಗೂ ಜನರ ಆಸಕ್ತಿಯ ಪರಿಚಯವಾಗುತ್ತದೆ. ಈ ಕುರಿತಂತೆ ಡಿಸೈನರ್ ಶೃತಿ ಹೀಗೆ ಹೇಳುತ್ತಾರೆ, “ಕ್ರಿಯಾಶೀಲತೆ ಎನ್ನುವುದು ಮಹಿಳೆಯರಲ್ಲಿ ಹುಟ್ಟಿದಾಗಿನಿಂದಲೇ ಇರುತ್ತದೆ. ತರಬೇತಿ ನಿಮಗೆ ತಾಂತ್ರಿಕ ಜ್ಞಾನವನ್ನು ನೀಡುತ್ತದೆ. ಈ ಕ್ಷೇತ್ರದಲ್ಲಿ ಹೆಸರು ಗಳಿಸಲು ಪರಿಶ್ರಮ, ಏಕಾಗ್ರತೆ ಮತ್ತು ಫ್ಯಾಷನ್ನಿನ ಅಗತ್ಯತೆ ಇದೆ. ನಾನು ಮೊದಲು ಫ್ಯಾಷನ್ ಡಿಸೈನ್ ಕಾಲೇಜೊಂದರಲ್ಲಿ ಕಲಿಸುತ್ತಿದ್ದೆ. ಕೆಲವು ತಿಂಗಳುಗಳ ಹಿಂದಷ್ಟೇ ಡಿಸೈನರ್ ಆಗಿರುವೆ. ನೀವು ಫ್ಯಾಷನ್ ಡಿಸೈನಿಂಗ್ ಕೋರ್ಸ್‌ನ್ನು ನಿಮ್ಮ ಬಜೆಟ್‌ನ್ನು ಗಮನದಲ್ಲಿಟ್ಟುಕೊಂಡು ಮಾಡಬಹುದು.
ನಿಮ್ಮ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಬುಟಿಕ್‌ನ್ನು ಆರಂಭಿಸಿ. ಅದು 20,000 ರೂ. ನಿಂದ ಹಿಡಿದು 2 ಲಕ್ಷ ರೂ.ತನಕ ಆಗಬಹುದು. ಅದರಲ್ಲಿ 1 ಹೊಲಿಗೆ ಯಂತ್ರ, 1 ಪ್ಯಾಟರ್ನ್ ಕಟಿಂಗ್ ಮೆಷಿನ್ ಅತ್ಯಗತ್ಯ. ಆ ಬಳಿಕ ನಿಮ್ಮ ಕೆಲಸ ಎಷ್ಟು ಹೆಚ್ಚು ಜನರಿಗೆ ಇಷ್ಟ ಆಗುತ್ತೋ, ನಿಮ್ಮ ಆದಾಯ ಕೂಡ ಅಷ್ಟೇ ಹೆಚ್ಚುತ್ತ ಹೋಗುತ್ತದೆ.
ಪ್ರತಿಯೊಬ್ಬ ವ್ಯಕ್ತಿಗೂ ತಮ್ಮದೇ ಆದ ಒಂದು ಟಾರ್ಗೆಟ್ ನಿರ್ಧರಿಸಬೇಕಾಗುತ್ತದೆ. ಯಾವ ಉತ್ಪಾದನೆಯನ್ನು ಯಾವು ಬೆಲೆಯಲ್ಲಿ ಮಾರಬೇಕು ಎಂಬುದೇ ಆ ಟಾರ್ಗೆಟ್ ಆಗಿರುತ್ತದೆ. ಪ್ರಾಡಕ್ಟ್, ಪ್ರೈಸ್, ಪ್ರಮೋಶನ್ ಮತ್ತು ಪ್ಲೇಸ್ ಈ ನಾಲ್ಕೂ ಈ ಕ್ಷೇತ್ರಕ್ಕೆ ಮುಖ್ಯವಾಗಿವೆ. ಅವು ಕಾಸ್ಟ್ಯೂಮ್ಸ್, ಕಲರ್ ಮತ್ತು ಕಾಸ್ಟ್ ನ್ನು ಆಧರಿಸಿರುತ್ತವೆ. ಆರ್ಟ್ ಮತ್ತು ಕಾಮರ್ಸ್ ಎರಡನ್ನೂ ಮೇಳೈಸಿ ಈ ಕ್ಷೇತ್ರದಲ್ಲಿ ಕೆಲಸ ಮಾಡಿದಾಗ ಹೆಚ್ಚು ಲಾಭವಾಗುತ್ತದೆ. ಇಲ್ಲಿ ಸಾವಿರಾರು ರೂ.ಗಳಿಂದ ಹಿಡಿದು ಲಕ್ಷಾಂತರ ರೂ.ತನಕ ಆದಾಯ ಗಳಿಸಬಹುದಾಗಿದೆ.
ಶೃತಿ ಹೇಳುವುದೇನೆಂದರೆ, ಜನರನ್ನು ತಲುಪಲು, ಪ್ರದರ್ಶನ, ಬುಟಿಕ್ ಮತ್ತು ಸ್ಟೋರ್‌ನ ಆಶ್ರಯ ಪಡೆಯಬೇಕಾಗುತ್ತದೆ. ಇದರ ಹೊರತಾಗಿ ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್ ಶಾಪಿಂಗ್ ಕೂಡ ಹೆಚ್ಚು ಜನಪ್ರಿಯವಾಗುತ್ತಿದೆ. ಇ-ಕಾಮರ್ಸ್ ಹೆಚ್ಚು ಲಾಭದಾಯಕವಾಗುತ್ತದೆ. ಇದರಿಂದ ಭಾರತದಲ್ಲಿ ಕುಳಿತುಕೊಂಡೇ ನೀವು ಬ್ರೆಜಿಲ್ ನಲ್ಲಿ ನಿಮ್ಮ ಒಂದು ಉತ್ಪನ್ನವನ್ನು ಮಾರಾಟ ಮಾಡಬಹುದು.
ಈ ಕ್ಷೇತ್ರದಲ್ಲಿ ಯಶಸ್ಸಿಗಾಗಿ ನಿಮ್ಮನ್ನು ಅಪ್‌ಡೇಟ್ ಆಗಿಟ್ಟುಕೊಳ್ಳುವುದು ಅತ್ಯವಶ್ಯಕ. ಏಕೆಂದರೆ ನಿಮ್ಮ ಉತ್ಪಾದನೆಯಲ್ಲಿ ಹೊಸತನ ಇರಲಿ. ಹೀಗಾಗಿ ಹೊಸ ಹೊಸ ಡಿಸೈನ್‌ಗಳನ್ನು ರೂಪಿಸುವುದು ಅತ್ಯವಶ್ಯಕ.
– ಕುಸುಮಾ