ಹುಡುಗಿಯರಿಗೆ, “ನೀವು ದೊಡ್ಡವರಾದ ಬಳಿಕ ಏನು ಆಗಲು ಬಯಸುತ್ತೀರಿ?” ಎಂಬ ಪ್ರಶ್ನೆಗೆ ನಾನು ಡಾಕ್ಟರ್‌, ಎಂಜಿನಿಯರ್‌, ವಕೀಲೆ, ಕಲಾವಿದೆ… ಹೀಗೆ ಏನೆಲ್ಲ ಉತ್ತರಗಳು ಕೇಳಿ ಬರುತ್ತವೆ. ನಿಮ್ಮ ಮಗಳು, ನಾನು ಪತ್ತೇದಾರಿಣಿ ಆಗ್ತೀನಿ. ಎಂದು ಉತ್ತರ ಕೊಟ್ಟರೆ ಬಹುಶಃ ನಿಮ್ಮ ಮುಖದ ಬಣ್ಣವೇ ಬದಲಾಗಿ ಬಿಡಬಹುದು. ನಾವು ಟಿ.ವಿ. ಚಾನೆಲ್‌ಗಳಲ್ಲಿ ಪತ್ತೇದಾರಿ ಧಾರಾವಾಹಿಗಳನ್ನು ನೋಡುವಾಗ ಅದರಲ್ಲಿ ಪತ್ತೇದಾರನಿಗೆ ಮಹಿಳೆ ಸಹಾಯಕಿ ಆಗಿರುವುದು ಕಂಡುಬರಬಹುದು. ಇಲ್ಲಿ ಆಕೆ ಅದರಲ್ಲಿ ಮೋಜಿನ ಪಾತ್ರ ನಿರ್ವಹಿಸುತ್ತಿರಬಹುದು. ಆದರೆ ರಜನಿ ಪಂಡಿತ್‌ ದೇಶದ ಮೊದಲ ಮಹಿಳಾ ಪತ್ತೇದಾರಿಣಿಯಾಗಿ ವಿಶೇಷ ಸಾಧನೆ ಮಾಡಿದ್ದಾರೆ. ಅವರು ಪ್ರಸಿದ್ಧ ವ್ಯಕ್ತಿಗಳ, ಉದ್ಯಮಿಗಳ, ಉದ್ಯೋಗಿಗಳ ಹಲವು ಸಮಸ್ಯೆಗಳನ್ನು ಬಗೆಹರಿಸಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಹೀಗಾಯ್ತು ಆರಂಭ

ಆರಂಭದಿಂದಲೇ ರಜನಿ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಕೆಟ್ಟ ದಾರಿಯಲ್ಲಿ ಸಾಗುತ್ತಿದ್ದ ಯುವತಿಯೊಬ್ಬಳ ಬಗ್ಗೆ ಎಲ್ಲಾ ಪುರಾವೆಗಳನ್ನು ಸಂಗ್ರಹಿಸಿ ಆಕೆಯ ತಾಯಿಗೆ ಒಪ್ಪಿಸಿದ್ದರು.

ಪ್ರೊಫೆಶನಲ್ ಪತ್ತೇದಾರಿಣಿ ಆದದ್ದು ಹೇಗೆ ಮತ್ತು ಯಾವಾಗ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸುತ್ತಾರೆ, “ನಾನು ಪತ್ರಕರ್ತರೊಬ್ಬರ ಕ್ಲಿಷ್ಟಕರ ಸಮಸ್ಯೆಯೊಂದನ್ನು ಬಗೆಹರಿಸಿದ್ದೆ. ಆ ಬಳಿಕ ಆ ಪತ್ರಕರ್ತರು ನನ್ನ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟಿಸಿದ್ದರು. ಬಳಿಕ ದೂರದರ್ಶನ, ಮ್ಯಾಗಝೀನ್‌ಗಳ ಗಮನ ನನ್ನತ್ತ ಹರಿಯಿತು.”  ಒಂದು ಆಶ್ಚರ್ಯದ ಸಂಗತಿಯೆಂದರೆ, ಆ ಮುಂಚೆ ಅವರ ಪತ್ತೇದಾರಿ ವೃತ್ತಿಯ ಬಗೆಗಿನ ಜಾಹೀರಾತನ್ನು ಹಾಕಲು ಯಾವುದೇ ಪತ್ರಿಕೆಗಳು ತಯಾರಿರಲಿಲ್ಲ. ಅವರ ಜಾಹೀರಾತು ಹಾಕಲು ನಿರಾಕರಿಸಿದ ಪತ್ರಿಕೆಗಳೇ ಮುಂದೆ ಅವರ ವಿಶೇಷ ಸಂದರ್ಶನವನ್ನು ಪ್ರಕಟ ಮಾಡಿದ. ಆಗ ಅನೇಕ ಜಾತಿ ಧರ್ಮದವರು ತಮ್ಮ ಸಮಸ್ಯೆಗಳನ್ನು ಹೊತ್ತು ಅವರ ಬಳಿ ಬರತೊಡಗಿದರು. ಒಂದು ವಾಸ್ತವ ಸಂಗತಿಯೆಂದರೆ, ಅವರು ಯಾವ ಜಾಣ್ಮೆಯಿಂದ ಹಲವು ಕೇಸ್‌ಗಳನ್ನು ಬಗೆಹರಿಸಿದ್ದರೊ ಅದೇ ನೈಪುಣ್ಯತೆಯೇ ಅವರ ಬಳಿ ಅನೇಕರು ಬಾಗಿಲು ತಟ್ಟುವಂತೆ ಮಾಡಿತ್ತು.

`ಮೂರ್ಸ್‌ ಅಂಡ್‌ ಶೇಖರ್ಸ್‌’ ಕಾರ್ಯಕ್ರಮದಲ್ಲಿ ಇವರ ಸಂದರ್ಶನ ಮೂಡಿಬಂದ ನಂತರವಂತೂ ಇವರ ಖ್ಯಾತಿ ಮತ್ತಷ್ಟು ಹೆಚ್ಚಿತು. ದುಬೈನ ಒಬ್ಬ ವ್ಯಕ್ತಿ ಇವರನ್ನು ಭೇಟಿಯಾಗಿ ತಮ್ಮ ಸಮಸ್ಯೆಯೊಂದನ್ನು ಬಗೆಹರಿಸಲು ಕೇಸ್‌ ಕೊಟ್ಟಿದ್ದರು. ರಜನಿಯವರು ಆ ಕೇಸನ್ನು ಲೀಲಾಜಾಲವಾಗಿ ಬಗೆಹರಿಸಿ ತಮ್ಮ ಜಾಣ್ಮೆಯ ಪ್ರದರ್ಶನ ಮಾಡಿದರು.

ಪತ್ತೇದಾರಿಣಿಯ ವಿಭಿನ್ನ ಕಾರ್ಯವೈಖರಿ

ಯಾವುದೇ ಒಂದು ಕೇಸನ್ನು ರಜನಿ ಕೈಗೆತ್ತಿಕೊಳ್ಳುತ್ತಿದ್ದಂತೆ ಅದನ್ನು ಯಾವುದೇ ಕಾರಣಕ್ಕೂ ಎಕ್ಸ್ಪೋಸ್‌ ಮಾಡಲು ಹೋಗುವುದಿಲ್ಲ. ಎಲ್ಲ ಪುರಾವೆಗಳನ್ನು ಒಗ್ಗೂಡಿಸಿದ ಬಳಿಕವೇ ಅವರು ಆ ಕೇಸ್‌ ಕೊಟ್ಟ ವ್ಯಕ್ತಿಗೆ ಒಪ್ಪಿಸಿ ತಟಸ್ಥರಾಗಿ ಅವರ ತಪ್ಪಿನ ಬಗ್ಗೆ ತಿಳಿವಳಿಕೆ ಕೊಡಲು ಪ್ರಯತ್ನಿಸುತ್ತಾರೆ. ಪ್ರೀತಿಸಿ ಮೋಸ ಹೋದ ಹುಡುಗ ಹುಡುಗಿಯರಿಗೂ ಅವರು ಕೌನ್ಸೆಲಿಂಗ್‌ಮಾಡುತ್ತಾರೆ. ಅವರು ಈಗಾಗಲೇ ಇಂತಹ 2,000ಕ್ಕೂ ಹೆಚ್ಚು ಪ್ರಕರಣಗಳನ್ನು ಬಿಡಿಸಿ, ಅವರಿಗೆ ಕೌನ್ಸೆಲಿಂಗ್‌ ಮಾಡಿದ್ದಾರೆ.

ಈಗ ರಜನಿ ಪ್ರಖ್ಯಾತ ಪತ್ತೇದಾರಿಣಿಯಾಗಿ ಚಿರಪರಿಚಿತರಾಗಿದ್ದಾರೆ. `ಯಾವುದೇ ಒಬ್ಬ ಅಪರಾಧಿ ನಿಮ್ಮನ್ನು ಪತ್ತೇದಾರಿಣಿಯ ರೂಪದಲ್ಲಿ ಗುರುತು ಹಿಡಿದರೆ ಆಗ ನಿಮ್ಮ ಪ್ರತಿಕ್ರಿಯ ಏನಾಗಿರುತ್ತದೆ?’ ಎಂಬ ಪ್ರಶ್ನೆಗೆ ಅವರು ನಗುತ್ತಲೇ ಹೀಗೆ ಉತ್ತರಿಸುತ್ತಾರೆ, “ಸಾಮಾನ್ಯವಾಗಿ ನನ್ನ ಸಹಚರರೇ ಫೀಲ್ಡಿಗೆ ಹೋಗುತ್ತಾರೆ. ಆದರೆ ಅದರ ಹಿಂದಿನ ಬ್ರೇನ್‌ ಪವರ್‌ ನನ್ನದೇ ಆಗಿರುತ್ತದೆ. ಕೆಲವು ಅಪರೂಪದ ಪ್ರಕರಣಗಳಲ್ಲಿ ನಾನು ಹೋಗುತ್ತೇನೆ. ನಾವೆಲ್ಲ ಒಟ್ಟಿಗೆ ಸೇರಿ ಹೇಗೆ ಕಾರ್ಯಾಚರಣೆ ನಡೆಸಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ.”

ಒಂದು ಸಲ ಒಂದು ಪ್ರಕರಣ ಬಗೆಹರಿಸುವ ನಿಟ್ಟಿನಲ್ಲಿ ಅವರು ಭಿಕ್ಷುಕಿಯ ವೇಷಧಾರಣೆ ಮಾಡಿದ್ದರು. ಹಲವು ದಿನ ಭಿಕ್ಷುಕರ ಗುಂಪಿನಲ್ಲಿಯೇ ಸಂಚರಿಸಿದ್ದರು.

ಇನ್ನೊಂದು ಪ್ರಕರಣದಲ್ಲಿ ಅಪರಾಧಿಯನ್ನು ಪತ್ತೆಹಚ್ಚಲು ಒಂದು ಮನೆಯಲ್ಲಿ 6 ತಿಂಗಳುಗಳ ಕಾಲ ಮನೆಕೆಲಸದವಳಾಗಿ ಇದ್ದರು. ಅದು ಅತ್ಯಂತ ಕ್ಲಿಷ್ಟಕರ ಕೊಲೆ ಪ್ರಕರಣ. ಒಬ್ಬ ಮಹಿಳೆ ತನ್ನ ಗೆಳೆಯನ ಸಹಾಯದಿಂದ ಗಂಡ ಹಾಗೂ ಮಗನನ್ನು ಕೊಲೆ ಮಾಡಿಸಿ ಆಸ್ತಿಯನ್ನೆಲ್ಲ ತನ್ನ ಹೆಸರಿಗೆ ಮಾಡಿಸಿಕೊಳ್ಳುನ ಪ್ರಯತ್ನದಲ್ಲಿದ್ದಳು. ಆಕೆಯ ಅತ್ತೆಯ ಮನೆಯನರು ಈ ಕೇಸನ್ನು ರಜನಿಯರಿಗೆ ವಹಿಸಿದ್ದರು. ಈ ಪ್ರಕರಣದಲ್ಲಿ ಆ ಮಹಿಳೆ ಯಾವುದೇ ಒಂದು ಪುರಾವೆಯನ್ನು ಕೂಡ ಬಿಟ್ಟಿರಲಿಲ್ಲ. ತನ್ನ ಗಂಡ ಮತ್ತು ಮಗನ ಸಾವು ನೈಸರ್ಗಿಕ ಎಂದು ನಗರ ಪಾಲಿಕೆಯಿಂದ ಈಕೆ ಸರ್ಟಿಫಿಕೇಟ್‌ ಕೂಡ ಮಾಡಿಸಿದ್ದಳು.

ಆ ಕೆಲಸಕ್ಕಾಗಿ ಕೆಲಸದವಳ ವೇಷದಲ್ಲಿ 6 ತಿಂಗಳು ಆ ಮನೆಯಲ್ಲಿದ್ದು ಮನೆ ಮಾಲೀಕರ ವಿಶ್ವಾಸ ಗಳಿಸಿದ್ದಳು. ಆ ಮನೆ ಮಾಲೀಕಳ ಗೆಳೆಯ ಬಂದಾಗ ಅವರು ಮಲಯಾಳಂ ಭಾಷೆಯಲ್ಲಿ ಸಂಭಾಷಣೆ ನಡೆಸುತ್ತಿದ್ದರು. ಅದಕ್ಕಾಗಿ ರಜನಿ ಒಂದು ಟೇಪ್ ರೆಕಾರ್ಡರ್‌ನ್ನು ತಮ್ಮ ಜೊತೆಯಲ್ಲಿ ಇಟ್ಟುಕೊಂಡಿರುತ್ತಿದ್ದರು. ಯಾವ ಯಾವ ದಿನ ಅವರು ಸಂಭಾಷಣೆ ನಡೆಸುತ್ತಿದ್ದರೊ ಆ ದಿನದ ಸಂಭಾಷಣೆಯನ್ನು ಧ್ವನಿ ಮುದ್ರಿಸಿಕೊಂಡು ಆಕೆಯ ಅತ್ತೆ ಮನೆಯವರಿಗೆ ಕೇಳಿಸಿ ವಿಷಯ ಏನೆಂದು ತಿಳಿದುಕೊಳ್ಳುತ್ತಿದ್ದರು. ಅದೊಂದು ದಿನ ಆ ಮಹಿಳೆ ತನ್ನ ಗೆಳೆಯನೊಂದಿಗೆ ಜಗಳ ಆಡುತ್ತಿದ್ದಳು. ಆ ದಿನದ ಸಂಭಾಷಣೆಯೇ ಅವರಿಬ್ಬರ ಸಂಚಿನ ಬಣ್ಣ ಬಯಲು ಮಾಡಿತು. ಅವರಿಬ್ಬರ ನಡುವೆ ಜಗಳ ಆಸ್ತಿ ಹಾಗೂ ಹಣದ ಹಂಚಿಕೆ ಕುರಿತಂತೆ ನಡೆದಿತ್ತು. ಅವರಿಬ್ಬರೇ ಸೇರಿ ತನ್ನ ಗಂಡ ಮತ್ತು ಮಗನನ್ನು ಕೊಲೆ ಮಾಡಿದ್ದರು ಎಂಬುದು ಕೂಡ ಅವರ ಮಾತಿನಿಂದ ಬಹಿರಂಗಗೊಂಡಿತು.

ಈಚೆಗೆ ದೇಶಾದ್ಯಂತ ಮಹಿಳೆಯರ ಮೇಲೆ ಅತ್ಯಾಚಾರದ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಘಟಿಸುತ್ತಿವೆ. ಅದಕ್ಕಾಗಿ ಅಂಗ ಪ್ರದರ್ಶನ ಮತ್ತು ರಾತ್ರಿ 8ರೊಳಗೆ ಮನೆ ಸೇರದೇ ಇರುವುದು ಕಾರಣವೇ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸುತ್ತಾರೆ, “ಯುವತಿಯರು ಇತ್ತೀಚಿನ ವರ್ಷಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಥ ಅತಿ ಮಹತ್ವಾಕಾಂಕ್ಷಿ ಹುಡುಗಿಯರು  ಬಹುದೂರ ಪ್ರಯಾಣ ಮಾಡುತ್ತಾರೆ.

“ಹೀಗಾಗಿ ರಾತ್ರಿ 8ರ ಮುಂಚೆ ಮನೆ ಸೇರುವುದು ಕಷ್ಟಕರ. ಆದರೂ ಯಾವುದೇ ಹುಡುಗಿ ಅಂಗಪ್ರದರ್ಶನ ಮಾಡುವಂತಹ ಬಟ್ಟೆಗಳನ್ನು ಧರಿಸುವುದನ್ನು ನಾನು ಇಷ್ಟಪಡುವುದಿಲ್ಲ. ಅಪರಿಚಿತರೊಬ್ಬರ ಕಣ್ಣು ನಮ್ಮ ಮೇಲೆ ನೆಡುವಂತೆ ನಾವೇಕೆ ಅವಕಾಶ ಕೊಡಬೇಕು?” ಎಂದು ಅವರು ಪ್ರಶ್ನಿಸುತ್ತಾರೆ.

ಪತ್ತೇದಾರಿಕೆಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಹುಡುಗಿಯರಿಗೆ ಅವರು ಹೀಗೆ ಸಲಹೆ ನೀಡುತ್ತಾರೆ, “ನಿಮಗೆ ಈ ಕ್ಷೇತ್ರದಲ್ಲಿ ಕೆರಿಯರ್‌ ರೂಪಿಸಿಕೊಳ್ಳಬೇಕಿದ್ದರೆ ಸಾಹಸ ಮನೋಭಾವ ಇರುವುದು ಅತ್ಯವಶ್ಯಕ. ಎಲ್ಲಕ್ಕೂ  ಮಹತ್ವದ ಸಂಗತಿಯೆಂದರೆ, ನಿಮ್ಮೆದುರು ಏನೇ ಘಟಿಸಿದರೂ ಅದನ್ನು ಎದುರಿಸುವ ದಿಟ್ಟತನ ನಿಮ್ಮಲ್ಲಿರಬೇಕು.”

– ನಮ್ರತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ