ಮನೆಯ ಸ್ವಚ್ಛತೆಯ ಬಗ್ಗೆ ಪ್ರತಿ ಗೃಹಿಣಿಯೂ ಜಾಗರೂಕರಾಗಿರುತ್ತಾಳೆ. ವಿಶೇಷ ಸಂದರ್ಭಗಳಲ್ಲಿ ಅವಳು ಮನೆಯನ್ನು ಇನ್ನಷ್ಟು ಹೊಳೆಯುವಂತೆ ಮಾಡಲು ಉದ್ಯುಕ್ತಳಾಗುತ್ತಾಳೆ. ನೀವು ಬಯಸಿದರೆ ಮನೆಯಲ್ಲಿರುವ ಕ್ಲೀನಿಂಗ್‌ ಐಟಂಗಳಿಂದಲೇ ಬಜೆಟ್‌ನ ಮಿತಿಯೊಳಗೆ ಸ್ಮಾರ್ಟ್‌ ಕ್ಲೀನಿಂಗ್‌ ಮಾಡಬಹುದು.

ಆಲೂಗಡ್ಡೆ

ಆಲೂಗಡ್ಡೆ ಮನೆಯ ಸ್ವಚ್ಛತೆಯಲ್ಲಿ ಬಹಳ ಸಹಾಯಕಾರಿ. ಇದರಲ್ಲಿ ಆಕ್ಸಾಲಿಕ್‌ ಆ್ಯಸಿಡ್‌ ಇರುವುದರಿಂದ ಇದನ್ನು ಕಬ್ಬಿಣದ ಪಾತ್ರೆಯಲ್ಲಿರುವ ತುಕ್ಕನ್ನು ತೆಗೆಯಲು ಉಪಯೋಗಿಸುತ್ತಾರೆ. ಇದು ಪಾತ್ರೆಯ ತುಕ್ಕನ್ನು ದೂರ ಮಾಡಿ ಚೆನ್ನಾಗಿ ಸ್ವಚ್ಛಗೊಳಿಸುತ್ತದೆ. ಯಾವುದೇ ಲೋಹದ ವಸ್ತುವಿನ ಮೇಲೆ ತುಕ್ಕಿನ ಗುರುತಿದ್ದರೆ ಆಲೂಗಡ್ಡೆಯ ಮೇಲೆ ಉಪ್ಪನ್ನು ಹಾಕಿ ಅದರ ಮೇಲೆ ಉಜ್ಜಿ. ಆದರೆ ಹಾಗೆ ಮಾಡುವ ಮೊದಲು ಲೋಹದ ಸಣ್ಣ ಗುರುತಿನ ಮೇಲೆ ಉಜ್ಜಿ ನೋಡಿ. ಒಂದು ವೇಳೆ ಲೋಹದ ಮೇಲೆ ಆಲೂಗಡ್ಡೆಯ ಗುರುತು ಬೀಳುತ್ತಿದ್ದರೆ ಈ ವಿಧಾನವನ್ನು ಅನುಸರಿಸಬೇಡಿ.

ಇದಲ್ಲದೆ ಗಾಜು ಹೊಳೆಯುವಂತೆ ಮಾಡಲೂ ಸಹ ಆಲೂಗಡ್ಡೆಯನ್ನು ಉಪಯೋಗಿಸಬಹುದು. ಮೊದಲು ಆಲೂಗಡ್ಡೆಯಿಂದ ಗಾಜಿನ ಮೇಲೆ ಉಜ್ಜಿ. ನಂತರ ಶುಭ್ರವಾದ ಬಟ್ಟೆ ಅಥವಾ ಕಾಗದದಿಂದ ಗಾಜನ್ನು ಒರೆಸಿ ಗಾಜು ಹೊಸದರಂತೆ ಹೊಳೆಯತೊಡಗುವುದು.

orange

ನಿಂಬೆ, ಕಿತ್ತಳೆ ಮತ್ತು ಮೂಸಂಬಿ

ನಿಂಬೆಯಲ್ಲಿರುವ ಸಿಟ್ರಿಕ್‌ ಆ್ಯಸಿಡ್‌ ಪ್ರಾಕೃತಿಕ ಬ್ಲೀಚ್‌ನಂತೆ ಕೆಲಸ ಮಾಡುತ್ತದೆ. ನೀವು ಮನೆಯಲ್ಲಿರುವ ವಸ್ತುಗಳನ್ನು ಸ್ವಚ್ಛಗೊಳಿಸಲು ಇಚ್ಛಿಸಿದರೆ ಅವನ್ನು ನಿಂಬೆರಸದಿಂದ ಸ್ವಚ್ಛಗೊಳಿಸಿ. ಸ್ಟವ್ ಅಥವಾ ಗ್ಯಾಸ್‌ ಉಪಯೋಗಿಸಿದಾಗ ತಾಮ್ರದ ಪಾತ್ರೆಯ ತಳದಲ್ಲಿ ಮಸಿಯಾಗಿದ್ದರೆ ನಿಂಬೆರಸಕ್ಕೆ ಉಪ್ಪು ಬೆರೆಸಿ ಉಜ್ಜಿ ತೆಗೆಯಿರಿ. ಪಾತ್ರೆಯ ತಳ ಹೊಸದಂತೆ ಹೊಳೆಯುತ್ತದೆ. ಇದಲ್ಲದೆ, ನಿಮ್ಮ ಮನೆಯಲ್ಲಿ ಹಿತ್ತಾಳೆಯ ಪಾತ್ರೆಗಳು ಹಾಗೂ ಮೂರ್ತಿಗಳನ್ನೂ ನಿಂಬೆಯಿಂದ ಹೊಳೆಯುವಂತೆ ಮಾಡಬಹುದು.

ಹೀಗೆಯೇ ಕಿಚನ್‌ನ ಸಿಂಕ್‌ನ್ನೂ ಸ್ವಚ್ಛಗೊಳಿಸಬಹುದು. ನಿಂಬೆರಸ ಮತ್ತು ಉಪ್ಪನ್ನು ಸೋಪಿಗೆ ಬೆರೆಸಿ. ಅದರಿಂದ ಸಿಂಕ್ ಸ್ವಚ್ಛಗೊಳಿಸಿ. ಒರಟಾದ ಪ್ಲ್ಯಾಸ್ಟಿಕ್‌ ವಸ್ತುಗಳನ್ನು ನಿಂಬೆಯಿಂದ ಸ್ವಚ್ಛಗೊಳಿಸಬಹುದು. ನಿಂಬೆ ಪ್ಲ್ಯಾಸ್ಟಿಕ್‌ಗೆ ಅಂಟಿಕೊಂಡಿರುವ ಎಣ್ಣೆಯ ಕಲೆಗಳನ್ನು ಕೂಡಲೇ ಸ್ವಚ್ಛಗೊಳಿಸುತ್ತದೆ. ಜೊತೆಗೆ ಪ್ಲ್ಯಾಸ್ಟಿಕ್‌ನಿಂದ ಬರುವ ವಾಸನೆಯನ್ನೂ ದೂರ ಮಾಡುತ್ತದೆ.

ಮನೆಯ ಪರದೆಗಳನ್ನು ಸ್ವಚ್ಛಗೊಳಿಸಲು ನಿಂಬೆ ಉಪಯೋಗಿಸಲಾಗುವುದು. ಇದು ಎಂತಹ ಕಲೆಯೇ ಆಗಿದ್ದರೂ ತೆಗೆದು ಬಟ್ಟೆಯಿಂದ ಬರುವ ವಾಸನೆ ನಿವಾರಿಸಿ ಅದನ್ನು ಹೊಳೆಯುವಂತೆ ಮಾಡುತ್ತದೆ.

ನಿಂಬೆಯಂತೆಯೇ ಕಿತ್ತಳೆ ಮತ್ತು ಮೂಸಂಬಿ ಕೂಡ ಮನೆಯ ಸ್ವಚ್ಛತೆಯಲ್ಲಿ ಉಪಯೋಗವಾಗುತ್ತದೆ. ಪ್ರೋಟೀನ್‌, ನ್ಯೂಟ್ರಿಯೆಂಟ್ಸ್ ಮತ್ತು ವಿಟಮಿನ್‌ಗಳಿಂದ ಸಮೃದ್ಧವಾದ ಈ ಹಣ್ಣುಗಳಿಂದಲೂ ನಿಂಬೆಯಂತೆ ಸಿಟ್ರಿಕ್‌ ಆ್ಯಸಿಡ್‌ ಸಿಗುತ್ತದೆ. ಅದು ಅತ್ಯುತ್ತಮ ಕ್ಲೀನಿಂಗ್‌ ಏಜೆಂಟ್‌ ಆಗಿದೆ. ಅದರಿಂದ ಮನೆಯ ಚಿಕ್ಕ, ದೊಡ್ಡ ವಸ್ತುಗಳನ್ನು ಸ್ವಚ್ಛಗೊಳಿಸಬಹುದು. ಈ ಹಣ್ಣುಗಳ ಸಿಪ್ಪೆಯಿದ್ದರೆ ಸಾಕು. ಒಣಗಿದ ಕಿತ್ತಳೆ ಸಿಪ್ಪೆಯಿಂದ ಮರದ ಹಾಗೂ ಗಾಜಿನ ಪದಾರ್ಥಗಳನ್ನು ಸ್ವಚ್ಛಗೊಳಿಸಿ. ಅದಕ್ಕೆ ನಿಂಬೆರಸ ಬೆರೆಸಿ ಪ್ಲ್ಯಾಸ್ಟಿಕ್‌ ವಸ್ತುಗಳನ್ನು ಸ್ವಚ್ಛಗೊಳಿಸಬಹುದು.

ಮೂಸಂಬಿ ರಸದ ಸೇವನೆಯಿಂದ ತ್ವಚೆ ಕಾಂತಿಯುತವಾಗುತ್ತದೆ. ಅದು ನಮಗೆ ಗೊತ್ತು. ಆದರೆ ಮೂಸಂಬಿ ನಿಮ್ಮ ಮನೆಯನ್ನೂ ಕಾಂತಿಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿದಾಗ ನಿಮಗೆ ಆಶ್ಚರ್ಯವಾಗುತ್ತದೆ. ನಿಮ್ಮ ಮನೆಗೆ ಮಾರ್ಬಲ್ ಹಾಕಿಸಿದ್ದರೆ ಮೂಸಂಬಿ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಕೊಳ್ಳಿ. ಅದಕ್ಕೆ ಕೊಂಚ ಉಪ್ಪು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಆ ಪೇಸ್ಟ್ ನಿಂದಲೇ ಮಾರ್ಬಲ್ ಜೊತೆ ಜೊತೆಗೆ ಕಬ್ಬಿಣ, ಸ್ಟೀಲ್ ‌ಮತ್ತು ಹಿತ್ತಾಳೆಯ ವಸ್ತುಗಳನ್ನು ಸ್ವಚ್ಛಗೊಳಿಸಬಹುದು.

salt-2

ಉಪ್ಪು

ಉಪ್ಪು ನಿಮ್ಮ ಆಹಾರದ ಸ್ವಾದ ಹೆಚ್ಚಿಸುವುದಲ್ಲದೆ ಮನೆಯನ್ನು ಹೊಳೆಯುವಂತೆ ಮಾಡುತ್ತದೆಂದು ನಿಮಗೆ ಗೊತ್ತೆ?

ನಿಮ್ಮ ಮನೆಯಲ್ಲಿ ಗಾಜಿನ ಕಿಟಕಿಗಳು, ಪಾತ್ರೆಗಳು ಇವೆಯಷ್ಟೆ. ಅವುಗಳಲ್ಲಿ ಕಲೆಯುಂಟಾದರೆ ಸ್ವಚ್ಛಗೊಳಿಸುವುದು ಬಹಳ ಕಷ್ಟ. ಆದರೆ ಉಪ್ಪು ಕೆಲವೇ ನಿಮಿಷಗಳಲ್ಲಿ ಅವನ್ನು ನಿವಾರಿಸುತ್ತದೆ. ಗಾಜಿನ ಮೇಲೆ ಬಿದ್ದಿರುವ ಕಲೆಗಳನ್ನು ಉಪ್ಪಿನ ನೀರಿನಿಂದ ಉಜ್ಜಿ ಶುಚಿಗೊಳಿಸಿ. ಆಗ ಅದು ಹೊಳೆಯ ತೊಡಗುತ್ತದೆ. ಇದು ಮಾತ್ರವಲ್ಲ, ಅಕಸ್ಮಾತ್‌ ಕೋಲ್ಡ್ ಡ್ರಿಂಕ್‌ ನಿಮ್ಮ ಡೋರ್‌ ಕರ್ಟನ್‌, ಕಾರ್ಪೆಟ್‌ ಮೇಲೆ ಚೆಲ್ಲಿ ಕಲೆಯಾದರೆ, ಗಾಬರಿಗೊಳ್ಳಬೇಡಿ. ಆ ಭಾಗವನ್ನು ಉಪ್ಪು ನೀರಿನಿಂದ ತಿಕ್ಕಿ ಶುಚಿಗೊಳಿಸಿ. ಕಲೆಗಳು ತೊಲಗುತ್ತವೆ.

ನಿಮ್ಮ ಓವನ್‌ನಲ್ಲಿ ಜಿಡ್ಡು ಜಮೆಗೊಂಡಿದ್ದರೆ 2 ಚಮಚ ಉಪ್ಪನ್ನು 1 ಕಪ್‌ ನೀರಲ್ಲಿ ಕದಡಿಕೊಂಡು, ಇದರಿಂದ ಓವನ್‌ ಶುಚಿಗೊಳಿಸಿ. ಜಿಡ್ಡಿನ ಸಮಸ್ಯೆ ತಾನಾಗಿ ದೂರವಾಗುತ್ತದೆ. ಇಷ್ಟು ಮಾತ್ರವಲ್ಲ, ಉಪ್ಪು ನೀರಿನಿಂದ ಬೆತ್ತದ, ವುಡನ್‌ ಫರ್ನೀಚರ್‌ ಸಹ ಶುಚಿಗೊಳಿಸಬಹುದು.

imli

ಹುಣಿಸೇ ರಸ

ಹುಣಿಸೇ ಕಿಚಿದ ರಸ ಮನೆಯ ವಿವಿಧ ವಸ್ತುಗಳನ್ನು ಶುಚಿಗೊಳಿಸಲು ಬಲು ಪೂರಕ. ಇದಕ್ಕೆ ತುಸು ಉಪ್ಪು ಸಹ ಸೇರಿಸಿಕೊಂಡರೆ, ಶುಚಿಗೊಳಿಸುವ ಇದರ ಸಾಮರ್ಥ್ಯ ಹೆಚ್ಚುತ್ತದೆ. ನಿಮ್ಮ ಮನೆಯ ತಾಮ್ರ, ಹಿತ್ತಾಳೆ, ಪಂಚಲೋಹ ಇತ್ಯಾದಿ ಯಾವುದೇ ಇರಲಿ, ಹುಣಿಸೇ ರಸ ಅದನ್ನು ಬೇಗ ಶುಚಿಗೊಳಿಸಿ ಹೊಳಪು ನೀಡಬಲ್ಲದು.

ಈ ರೀತಿ ಪಾತ್ರೆ ಪಡಗ ತೊಳೆಯುವುದರಿಂದ ಕಿಚನ್‌ ಸಿಂಕ್‌ ಬಹಳ ಗಲೀಜಾಗುತ್ತದೆ. ಅದರ ಅಂಟಂಟು ಗಲೀಜು ಹೋಗಲಾಡಿಸಲು ಉಪ್ಪು ಬೆರೆತ ಹುಣಿಸೇ ರಸದಿಂದ ಸಿಂಕ್‌ ತಿಕ್ಕಿ ತೊಳೆಯಿರಿ. ಇದೇ ತರಹ ನಿಮ್ಮ ಕಪ್ಪಾದ ಬೆಳ್ಳಿ ಪಾತ್ರೆಗಳನ್ನು ಮೊದಲು ವಿಭೂತಿಯಿಂದ ಡ್ರೈ ಆಗಿ ಉಜ್ಜಿ ನೋಡಿ. ಅನಂತರ ಅಗತ್ಯವೆನಿಸಿದರೆ ಉಪ್ಪಿನ ಹುಣಿಸೇ ರಸದಿಂದ ತಿಕ್ಕಿ ತೊಳೆಯಿರಿ. ಆಗದು ಫಳಫಳ ಹೊಳೆಯುತ್ತದೆ, ಮತ್ತೆ ಪಾಲಿಶ್‌ ಮಾಡಿಸುವ ಜಂಜಾಟವಿಲ್ಲ.

ಹಳೆ ಗಡಿಯಾರ, ಬಾಗಿಲ ಚಿಲಕಗಳನ್ನು ಶುಚಿಗೊಳಿಸುವುದಕ್ಕೂ ಇದೇ ಕ್ರಮ ಅನುಸರಿಸಿ. ತುಕ್ಕು ಹಿಡಿದ ವಸ್ತುಗಳು ಸಹ ಇದರಿಂದ ಸರಿಹೋಗುತ್ತದೆ. ಇದೇ ತರಹ ಕಿಚನ್‌ ಚಿಮಣಿಯನ್ನು ಸಹ ಸರಿಮಾಡಬಹುದು.

Baking-Soda

ಬೇಕಿಂಗ್ಸೋಡ ವಿನಿಗರ್

ನೀವು ಬೇಕಿಂಗ್‌ ಸೋಡ ವಿನಿಗರ್‌ ಬಳಸಿ ಸಹ ಅನೇಕ ಗೃಹೋಪಕರಣ ಕ್ಲೀನ್‌ ಮಾಡಬಹುದು. ಇದರಿಂದ ಕಿಚನ್‌ ಸಿಂಕ್‌, ಬಾತ್‌ರೂಂ, ಗಾಜಿನ ಕಿಟಕಿಗಳನ್ನು ಶುಚಿಗೊಳಿಸಬಹುದು. ನೀವು ಸಿಂಕ್‌, ಅದರ ಪೈಪಿನಲ್ಲಿ ಸಿಕ್ಕಿಕೊಂಡಿರುವ ಆಹಾರದ ಕಣಗಳ ದುರ್ವಾಸನೆಯಿಂದ ಚಿಂತಿತರಾಗಿದ್ದರೆ ಅದನ್ನು ದೂರಗೊಳಿಸಲು ಇವೆರಡರ ಮಿಶ್ರಣವನ್ನು ಸಿಂಕ್‌ನ ಎಲ್ಲಾ ಕಡೆ ಹರಡಿ, ಅರ್ಧ ಗಂಟೆ ನಂತರ ಸ್ಕ್ರಬರ್‌ನಿಂದ ಶುಚಿಗೊಳಿಸಿ. ಹಾಗೆಯೇ ಅದರ ಪೈಪಿಗೆ ರಾತ್ರಿ ಇದನ್ನು ಹಾಕಿಟ್ಟು, ಮಾರನೇ ಬೆಳಗ್ಗೆ  ಬಿಸಿ ನೀರು ಹಾಕಿ ಶುಚಿಗೊಳಿಸಿದರೆ, ಪೈಪ್‌ ಶುಭ್ರವಾಗುತ್ತದೆ.

ಇದೇ ತರಹ ಈ ಮಿಶ್ರಣವನ್ನು ಟೈಲ್ಸ್, ಟಾಯ್ಲೆಟ್‌ ಸೀಟ್‌ಗಳಿಗೂ ಬಳಸಬಹುದು. ಸ್ವಲ್ಪ ಹೊತ್ತು ಇದನ್ನು ಅದರ ಮೇಲೆ ಹರಡಿರಿ. ನಂತರ ಬ್ರಶ್ಶಿನಿಂದ ತಿಕ್ಕಿ ತೊಳೆದು ನೀರು ಸುರಿಯಿರಿ. ಬಾತ್‌ ರೂಮಿಗೆ ಒಳ್ಳೆಯ ಕಾಂತಿ ಬರುತ್ತದೆ. ಇದೇ ವಿಧಾನವನ್ನು ಶವರ್ ಹೆಡ್‌ಗೂ ಬಳಸಬಹುದು. ಎಷ್ಟೋ ಸಲ ಶವರ್‌ ಹೆಡ್‌ನ ರಂಧ್ರಗಳು ಕೊಳೆಯಿಂದ ಮುಚ್ಚಿಹೋಗುತ್ತವೆ. ಅದನ್ನು ಶುಚಿಗೊಳಿಸಲು ಈ ವಿಧಾನ ಅನುಸರಿಸಿ.

ಇಷ್ಟು ಮಾತ್ರವಲ್ಲ, ಈ ಮಿಶ್ರಣದಿಂದ ನೀವು ಸೀದುಹೋದ ಬಾಣಲೆ, ತವಾ, ಪ್ಯಾನ್‌ಗಳನ್ನೂ ಸಹ ಶುಚಿಗೊಳಿಸಬಹುದು. ಜೊತೆಗೆ ಕಿಚನ್‌ ಸ್ಲಾಬ್‌, ಟೈಲ್ಸ್, ಸ್ಟವ್ ಎದುರಿನ ಕಿಟಕಿ ಕಂಬಿಗಳು ಇತ್ಯಾದಿಗಳ ಮೇಲೆ ಮೊದಲು ಬಿಸಿ ನೀರು ಚಿಮುಕಿಸಿ, ನಂತರ ಈ ಮಿಶ್ರಣ ಸವರಬೇಕು. 10 ನಿಮಿಷಗಳ ನಂತರ ಸ್ಕ್ರಬರ್‌ನಿಂದ ಶುಚಿಗೊಳಿಸಿದರೆ ಅದು ಲಕಲಕ ಹೊಳೆಯುತ್ತದೆ. ಇದರಿಂದ ಫ್ರಿಜ್‌, ಏ.ಸಿ.ಗಳನ್ನೂ ಹೀಗೆ ಶುಚಿಗೊಳಿಸಬಹುದು.

toothpaste

ಟೂತ್ಪೇಸ್ಟ್

ಟೂತ್‌ ಪೇಸ್ಟ್ ನಿಂದ ಹಲ್ಲುಜ್ಜುವುದು ಗೊತ್ತೇ ಇದೆ, ಅದರಿಂದ ಮನೆಯ ಸಾಮಗ್ರಿ ಶುಚಿಗೊಳಿಸಬಹುದೆಂದು ಗೊತ್ತೇ? ನಿಮ್ಮ ಮನೆಯ ಲೆದರ್‌ ಸೋಫಾಗೆ ಕಲೆ ತಗುಲಿದ್ದರೆ, ಅದನ್ನು ಕ್ಲೀನ್‌ ಮಾಡಲು ದುಬಾರಿ ಕೆಮಿಕಲ್ಸ್ ಬೇಡ. ಬದಲಿಗೆ ಟೂತ್‌ ಪೇಸ್ಟ್ ನಿಂದ ಆ ಕಲೆ ಉಜ್ಜಿ ಶುಚಿಗೊಳಿಸಿ. ಆಮೇಲೆ ಒದ್ದೆ ಬಟ್ಟೆಯಿಂದ ಒರೆಸಿದರೆ ಅದು ನೀಟಾಗುತ್ತದೆ.

ಗೋಡೆಗಳ ಮೇಲೆ ಮಕ್ಕಳು ಕ್ರೆಯಾನ್ಸ್ ನಿಂದ ಬಣ್ಣ ಗೀಚಿದ್ದರೆ, ಟೂತ್‌ ಪೇಸ್ಟ್ ನಿಂದ ಉಜ್ಜಿ, ಒಣ ಬಟ್ಟೆಯಿಂದ ಒರೆಸಿಬಿಡಿ. ಇದೇ ತರಹ ಬೆಳ್ಳಿ ಪರಿಕರ, ದುಬಾರಿ ಪ್ಲಾಸ್ಟಿಕ್‌ ವಸ್ತುಗಳನ್ನೂ ಇದರಿಂದ ಅಚ್ಚುಕಟ್ಟಾಗಿ ಕ್ಲೀನ್‌ ಮಾಡಬಹುದು. ಇದು ಅಲ್ಲಲ್ಲಿ ಮೂಡಿರುವ ಸ್ಕ್ರಾಚ್‌ ಗುರುತುಗಳನ್ನು ನಿವಾರಿಸಬಲ್ಲದು.

ಅಗತ್ಯ ಸಲಹೆಗಳು

ಜಿರಲೆಯ ಸಮಸ್ಯೆ ನಿವಾರಿಸಲು 2-2 ಚಮಚ ಗೋಧಿಹಿಟ್ಟು ಹಾಗೂ ಬೋರಿಕ್‌ ಪೌಡರ್‌ ತುಸು ಹಾಲಿನ ಜೊತೆ ಬೆರೆಸಿಕೊಳ್ಳಿ. ಈ ಸಣ್ಣ ಉಂಡೆಗಳನ್ನು ಜಿರಲೆ ಓಡಾಡುವ ಜಾಗದಲ್ಲಿರಿಸಿಬಿಡಿ.

ಪುಸ್ತಕಗಳ ಶೆಲ್ಛಿನಲ್ಲಿ, ಕೆಲವು ಬೇವಿನೆಲೆ ಹರಡಿರಿ. ಇದರಿಂದ ಬುಕ್ಸ್ ಕ್ರಿಮಿಕೀಟಗಳಿಂದ ಸುರಕ್ಷಿತವಾಗುತ್ತದೆ. ಜೊತೆಗೆ ಗಂಧದ ಚಕ್ಕೆ ಸಹ ಬಳಸಬಹುದು.

ಕಪ್ಪು/ಕೆಂಪು ಇರುವೆಗಳನ್ನು ಓಡಿಸಲು ಆ ಜಾಗದಲ್ಲಿ ತುಸು ಗೋಧಿಹಿಟ್ಟು, ಸಕ್ಕರೆ, ಅರಿಶಿನ ಬೆರೆಸಿ ಉದುರಿಸಿ. ಇದಕ್ಕೂ ಜಗ್ಗಲಿಲ್ಲವೆಂದರೆ ತುಸು ಸೀಮೆಎಣ್ಣೆ ಸಿಂಪಡಿಸಿ. ಇರುವೆಗಳ ಕಾಟ ತಪ್ಪುತ್ತದೆ.

ಹೂಗುಚ್ಛ ಹೆಚ್ಚು ದಿನ ಬಾಳಿಕೆ ಬರಬೇಕೆಂದರೆ, ಹೂದಾನಿಗಳಲ್ಲಿ ಹಾಕಿಡುವ ನೀರಿಗೆ ತುಸು ಸೋಡ ವಾಟರ್‌ ಅಥವಾ ಸೆವೆನ್‌ ಅಪ್‌ ಬೆರೆಸಿಡಿ. ಅಸರಕ್ಕೆ ಸಿಗದಿದ್ದರೆ ಉಪ್ಪು ಸಕ್ಕರೆ ಕರಗಿಸಿ ಇದಕ್ಕೆ ಬೆರೆಸಿರಿ. ಈ ನೀರನ್ನು ಪ್ರತಿದಿನ ಬದಲಾಯಿಸುತ್ತಿರಿ. 1 ವಾರದವರೆಗೆ ಹೂಗಳು ನಳನಳಿಸುತ್ತಿರುತ್ತವೆ.

ಕಿತ್ತಳೆ ಹಣ್ಣಿನ ಸಿಪ್ಪೆ ಒಣಗಿಸಿ, ಪುಡಿ ಮಾಡಿಟ್ಟು, ಅದರಿಂದ ವಾರ್ಡ್‌ರೋಬ್‌ನಲ್ಲಿ ನಡುನಡುವೆ ಗೆರೆ ಎಳೆದು ಬಿಡಿ. ಬಟ್ಟೆಗಳಿಗೆ ಕ್ರಿಮಿ ಕೀಟಗಳ ಬಾಧೆ ಇರುವುದಿಲ್ಲ.

ಫರ್ನೀಚರ್‌ಗೆ ತಗುಲಿರುವ ಕಲೆ ತೊಲಗಿಸಲು, ನಿಂಬೆ ಸಿಪ್ಪೆಯಿಂದ ಅಥವಾ ಹಿಪ್ಪೆ ಎಣ್ಣೆಯಿಂದ ಉಜ್ಜಿರಿ.

ಹಳೆಯ ಕಬ್ಬಿಣದ ಬೀರು ಅಥವಾ ಸ್ಟೀಲ್ ‌ಫರ್ನೀಚರ್‌ಗಳನ್ನು ತೇವಾಂಶದಿಂದ ತಪ್ಪಿಸಲು, ಸೀಮೆಎಣ್ಣೆಯನ್ನು ಬಟ್ಟೆಯಲ್ಲಿ ಅದ್ದಿ ಲಘುವಾಗಿ ಒರೆಸಿರಿ. ಆಗ ಇವಕ್ಕೆ ಎಂದೂ ತುಕ್ಕು ಹಿಡಿಯದು.

ಬೀರು ತನ್ನ ಕಾಂತಿ ಕಳೆದುಕೊಂಡಿದ್ದರೆ ತುಸು ನೀರಿಗೆ ರೀಫೈಂಡ್‌ ಎಣ್ಣೆ ಬೆರೆಸಿ, ಅದರಿಂದ ಬೀರು ಒರೆಸಬೇಕು. ಆಗ ಹಿಂದಿನ ಹೊಳಪು ಮರಳುತ್ತದೆ.

ಟರ್ಪೆಂಟೈನ್‌ಗೆ ತುಸು ವಿನಿಗರ್‌ ಬೆರೆಸಿ ನಿಮ್ಮ ಫರ್ನೀಚರ್‌ ಒರೆಸಿಕೊಂಡರೆ, ಅದಕ್ಕೆ ಕ್ರಿಮಿಕೀಟಗಳ ಬಾಧೆ ಇರುವುದಿಲ್ಲ.

ಮನೆಯ ಮುಂದಿನ ಅಂಗಳದಲ್ಲಿ ಹುಲ್ಲು, ಪೊದೆ ಇತ್ಯಾದಿ ಬೆಳೆದು ಕಸದ ತರಹ ಆಗಿಹೋದಾಗ, ಅದನ್ನು ಕಿತ್ತು ಸುಟ್ಟರೂ ಮತ್ತೆ ಚಿಗುರುತ್ತದೆ. ಬದಲಿಗೆ ಅರ್ಧ ಮಗ್‌ ವಿನಿಗರ್‌ಗೆ ತುಸು ಉಪ್ಪು ಬೆರೆಸಿ ಚಿಮುಕಿಸಿದರೆ, ಅದು ಬುಡಸಮೇತ ನಾಶವಾಗುತ್ತದೆ ಮತ್ತು ಕ್ರಿಮಿಕೀಟಗಳ ಬಾಧೆಯೂ ಇರುವುದಿಲ್ಲ.

– ಜಿ. ಅನುರಾಧಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ