ಪಾಸ್ತಾ ವಿತ್ ಪನೀರ್
ಸಾಮಗ್ರಿ : 100 ಗ್ರಾಂ ಪನೀರ್ ಕ್ಯೂಬ್ಸ್, 200 ಗ್ರಾಂ ಬೆಂದ ಪಾಸ್ತಾ, ಒಂದಿಷ್ಟು ಹೆಚ್ಚಿದ ಅನಾನಸ್ ತುಂಡು, ಪುದೀನಾ, ಕೊ.ಸೊಪ್ಪು, ಕೆಂಪು ಹಸಿರು ಕ್ಯಾಪ್ಸಿಕಂ, ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಇಟಾಲಿಯನ್ ಸಾಸ್ (ರೆಡಿಮೇಡ್ ಲಭ್ಯ), ಒಗ್ಗರಣೆಗೆ ತುಸು ರೀಫೈಂಡ್ ಎಣ್ಣೆ.
ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಒಂದೊಂದಾಗಿ ಹೆಚ್ಚಿದ ಪದಾರ್ಥ, ನಂತರ ಪಾಸ್ತಾ ಪನೀರ್ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಮೆಣಸು, ಸಾಸ್ ಬೆರೆಸಿ ಕೆದಕಬೇಕು. ಕೆಳಗಿಳಿಸಿ ಕೊ.ಸೊಪ್ಪು, ಪುದೀನಾ ಉದುರಿಸಿ, ಚೆನ್ನಾಗಿ ಆರಲು ಬಿಡಿ. ಇದನ್ನು ಹಾಗೇ ಸವಿಯಬಹುದು, ಅಗತ್ಯವೆನಿಸಿದರೆ ಫ್ರಿಜ್‌ನಲ್ಲಿರಿಸಿ ಕೂಲ್ ಮಾಡಿ ಸವಿಯಲು ಕೊಡಿ.
ಬೇಕ್ಡ್ ಪನೀರ್ ಕ್ಯೂಬ್ಸ್
ಸಾಮಗ್ರಿ : 300 ಗ್ರಾಂ ಪನೀರ್ ಕ್ಯೂಬ್ಸ್, ಒಂದಿಷ್ಟು ತುಂಡರಿಸಿದ ಈರುಳ್ಳಿ, ಕ್ಯಾಪ್ಸಿಕಂ, ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಓಮ, ಅರಿಶಿನ, ಚಾಟ್ ಮಸಾಲ, ತುಸು ಬೆಣ್ಣೆ.
ವಿಧಾನ : ಮೇಲಿನ ಎಲ್ಲಾ ಪದಾರ್ಥಗಳನ್ನು ಒಂದು ಬಟ್ಟಲಿಗೆ ಹಾಕಿ, ಉಪ್ಪು, ಮಸಾಲೆ ಜೊತೆ ಬೆಣ್ಣೆ ಸಹ ಬೆರೆತುಕೊಳ್ಳುವಂತೆ ಮಾಡಿ. ಅರ್ಧ ಗಂಟೆ ನಂತರ ಇದನ್ನು ಓವನ್ನಿನಲ್ಲಿರಿಸಿ 180 ಡಿಗ್ರಿ ಶಾಖದಲ್ಲಿ ಬೇಕ್ ಮಾಡಿ, ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.
ಚೀಸ್ ಸ್ಯಾಂಡ್ವಿಚ್
ಸಾಮಗ್ರಿ : 4 ಬ್ರೆಡ್ ಸ್ಲೈಸ್, 2 ಟೊಮೇಟೊ, 1 ಸಣ್ಣ ಸೌತೇಕಾಯಿ, 2 ಬೆಂದ ಆಲೂ ಬಿಲ್ಲೆಗಳು, 2 ತುಂಡರಿಸಿದ ಪನೀರ್ ಕ್ಯೂಬ್ಸ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಪುದೀನಾ ಚಟ್ನಿ, ಬೆಣ್ಣೆ.
ವಿಧಾನ : ಬ್ರೆಡ್ ಸ್ಲೈಸ್‌ಗೆ ಬೆಣ್ಣೆ ಸವರಿಡಿ. ನಂತರ ಇದರ ಮೇಲೆ ಕ್ರಮವಾಗಿ ಸೌತೆ, ಟೊಮೇಟೊ, ಆಲೂ, ಪನೀರ್ ಬಿಲ್ಲೆಗಳು ಬರಲಿ. ಇದರ ನಡುನಡುವೆ ಉಪ್ಪು ಮೆಣಸು ಉದುರಿಸಿ. ಮತ್ತೊಂದು ಸ್ಲೈಸ್‌ನಿಂದ ಮುಚ್ಚಿ, ಚಿತ್ರದಲ್ಲಿರುವಂತೆ ಕತ್ತರಿಸಿ, ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.
ಪನೀರ್ ವೆಜ್ ರೋಲ್ಸ್
ಸಾಮಗ್ರಿ : 2-3 ಈರುಳ್ಳಿ, ಹೆಚ್ಚಿದ ಬೀನ್ಸ್, ಕ್ಯಾರೆಟ್, ಎಲೆಕೋಸು (ತಲಾ 1-1 ಕಪ್), ತುಸು ತುರಿದ ಶುಂಠಿ, ತೆಂಗು, ಬೆಳ್ಳುಳ್ಳಿ, 250 ಗ್ರಾಂ ಮಸೆದ ಪನೀರ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಟೊಮೇಟೊ ಕೆಚಪ್, 5-6 ಬಿಸಿ ಬಿಸಿ (ತುಪ್ಪದಲ್ಲಿ ನಾದಿ, ಮಾಡಿದ) ಚಪಾತಿಗಳು, ಒಗ್ಗರಣೆಗೆ ಎಣ್ಣೆ ಇತ್ಯಾದಿ.
ವಿಧಾನ : ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ತುರಿದ ಬೆಳ್ಳುಳ್ಳಿ, ಶುಂಠಿ ಆಮೇಲೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಹೆಚ್ಚಿದ ತರಕಾರಿ ಸೇರಿಸಿ, ನೀರು ಚಿಮುಕಿಸುತ್ತಾ ಬಾಡಿಸಿ. ಮುಚ್ಚಳ ಮುಚ್ಚಿ ಬೇಯಲು ಬಿಡಿ. ಆಮೇಲೆ ಮಸೆದ ಪನೀರ್, ತೆಂಗಿನ ತುರಿ ಹಾಕಿ ಬಾಡಿಸಬೇಕು. ಕೊನೆಯಲ್ಲಿ ಉಪ್ಪು, ಮೆಣಸು, ಟೊಮೇಟೊ ಕೆಚಪ್ ಬೆರೆಸಿ ಚೆನ್ನಾಗಿ ಕೆದಕಿ ಕೆಳಗಿಳಿಸಿ. ಈ ಪನೀರ್ ಪಲ್ಯ ಆರುವ ಮೊದಲೇ ತುಪ್ಪ ಸವರಿದ ಚಪಾತಿಗಳಲ್ಲಿ ಹರಡಿ, ರೋಲ್ ಮಾಡಿಕೊಂಡು ಈರುಳ್ಳಿ ಬಿಲ್ಲೆ, ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.
ಪನೀರ್ ಸ್ಟಫ್ಡ್ ಪೊಟೇಟೊ
ಸಾಮಗ್ರಿ : 4-5 ಉದ್ದನೆ ಆಲೂ, 200 ಗ್ರಾಂ ಪನೀರ್, 2-3 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್ ಮಸಾಲ, ಗರಂಮಸಾಲ, ಅರಿಶಿನ, ನಿಂಬೆಹಣ್ಣು, ಕರಿಯಲು ಎಣ್ಣೆ, ತುಸು ಚೀಸ್, ಕೊ.ಸೊಪ್ಪು.
ವಿಧಾನ : ಆಲೂ ಉದ್ದಕ್ಕೆ ಹೆಚ್ಚಿಡಿ. ಒಳಗಿನ ಭಾಗವನ್ನು ಕೊರೆದು ತೆಗೆದು ಟೊಳ್ಳಾಗಿಸಿ, ಎಣ್ಣೆಯಲ್ಲಿ ಕರಿಯಿರಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಮಸೆದ ಪನೀರ್, ನಂತರ ಉಪ್ಪು, ಖಾರ, ಮಸಾಲೆ ಹಾಕಿ ಕೆದಕಬೇಕು. ಹೀಗೆ ಪನೀರ್ ಭುರ್ಜಿ ತಯಾರಿಸಿ, ಕರಿದ ಆಲೂ ಕಪ್ಸ್ ಗೆ ತುಂಬಿಸಿ. ಇದರ ಮೇಲೆ 1-1 ಬಿಲ್ಲೆ ಚೀಸ್ ಇರಿಸಿ ಓವನ್ನಿನಲ್ಲಿ 10 ನಿಮಿಷ 180 ಡಿಗ್ರಿ ಶಾಖದಲ್ಲಿ ಬೇಕ್ ಮಾಡಿ. ನಂತರ ಇವನ್ನು ಹೊರತೆಗೆದು ಲೆಟ್ಯೂಸ್‌ನಿಂದ ಅಲಂಕರಿಸಿದ ಟ್ರೇ ಮೇಲಿರಿಸಿ, ಚಿತ್ರದಲ್ಲಿರುವಂತೆ ಜೋಡಿಸಿ, ನಿಂಬೆಹಣ್ಣು ಹಿಂಡಿ ಸವಿಯಲು ಕೊಡಿ.
ಪನೀರ್ ಟಿಕ್ಕಿ
ಸಾಮಗ್ರಿ : 300 ಗ್ರಾಂ ಮಸೆದ ಪನೀರ್, 2 ಈರುಳ್ಳಿ, ಅರ್ಧ ಕಪ್ ಮೈದಾ, ಒಂದಿಷ್ಟು ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಬೆಳ್ಳುಳ್ಳಿ, ಶುಂಠಿ ಪೇಸ್ಟ್, ಅರ್ಧ ಸೌಟು ಎಣ್ಣೆ.
ವಿಧಾನ : ಮಸೆದ ಪನೀರ್‌ಗೆ ಹೆಚ್ಚಿದ ಈರುಳ್ಳಿ ಮತ್ತಿತರ ಎಲ್ಲಾ ಸಾಮಗ್ರಿ ಬೆರೆಸಿ. ಇದಕ್ಕೆ ಮೈದಾ, ತುಸು ನೀರು ಚಿಮುಕಿಸಿ ಪಕೋಡ ಹದಕ್ಕೆ ಕಲಸಿ, ಜಿಡ್ಡು ಸವರಿದ ಅಂಗೈನಲ್ಲಿ ಗುಂಡಗೆ ತಟ್ಟಿಕೊಂಡು, ಅಳ್ಳಕ ತವಾದಲ್ಲಿ ಶ್ಯಾಲೋ ಫ್ರೈ ಮಾಡಿ. ನಂತರ ಟ್ರೇನಲ್ಲಿ ಜೋಡಿಸಿ, ಕೊ.ಸೊಪ್ಪು ಉದುರಿಸಿ, ಹಸಿ ಈರುಳ್ಳಿ, ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.
ಚಿಲೀ ಪನೀರ್
ಸಾಮಗ್ರಿ : 300 ಗ್ರಾಂ ಪನೀರ್ ಕ್ಯೂಬ್ಸ್, ಅರ್ಧರ್ಧ ಕಪ್ ಮೈದಾ, ಕಾರ್ನ್‌ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೆಣಸು, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಟೊಮೇಟೊ ಕೆಚಪ್, ಸೋಯಾಸಾಸ್, ವಿನಿಗರ್, 2-2 ಈರುಳ್ಳಿ, ಕ್ಯಾಪ್ಸಿಕಂ, ಕರಿಯಲು ಎಣ್ಣೆ, ಒಗ್ಗರಣೆ ಸಾಮಗ್ರಿ.
ವಿಧಾನ : ಮೊದಲು ಮೈದಾಗೆ ಕಾರ್ನ್‌ಫ್ಲೋರ್, ತುಸು ಉಪ್ಪು, ಖಾರ ಹಾಕಿ ಬೋಂಡ ಹಿಟ್ಟಿನ ಹದಕ್ಕೆ ನೀರು ಬೆರೆಸಿ ಕಲಸಿಡಿ. ಇದರಲ್ಲಿ ಪನೀರ್ ಕ್ಯೂಬ್ಸ್ ಅದ್ದಿಕೊಂಡು ಕರಿಯಿರಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಕರಿಬೇವಿನ ಸಮೇತ ಒಗ್ಗರಣೆ ಕೊಡಿ. ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ, ಆಮೇಲೆ ಕ್ಯಾಪ್ಸಿಕಂ ಹಾಕಿ ಬಾಡಿಸಿ. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಉಪ್ಛು, ಮೆಣಸು, ಟೊಮೇಟೊ ಕೆಚಪ್, ಸೋಯಾಸಾಸ್, ವಿನಿಗರ್ ಎಲ್ಲಾ ಹಾಕಿ ಕೈಯಾಡಿಸಿ. ಕೊನೆಯಲ್ಲಿ ಇದಕ್ಕೆ ಕರಿದ ಪನೀರ್ ಕ್ಯೂಬ್ಸ್ ಹಾಕಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ. ಪಾರ್ಟಿಗಳಿಗೆ ಇದು ಒಳ್ಳೆಯ ಸ್ಟಾರ್ಟರ್.
ಬಟರ್ ಪನೀರ್
ಸಾಮಗ್ರಿ : 300 ಗ್ರಾಂ ಪನೀರ್ ಕ್ಯೂಬ್ಸ್, 200 ಗ್ರಾಂ ಬೆಣ್ಣೆ, 100 ಗ್ರಾಂ ಕ್ರೀಂ, 4-5 ಟೊಮೇಟೊಗಳ ಪೇಸ್ಟ್, 1 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಕಸೂರಿ ಮೇಥಿ, ಒಗ್ಗರಣೆಗೆ ತುಪ್ಪ, ಹೆಚ್ಚಿದ 2 ಹಸಿ ಮೆಣಸು, ತುಸು ಕೊ.ಸೊಪ್ಪು.
ವಿಧಾನ : ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಮೊದಲು ಅದರಲ್ಲಿ ಪನೀರ್ ಹುರಿದು ತೆಗೆಯಿರಿ. ಅದೇ ತುಪ್ಪಕ್ಕೆ ಒಗ್ಗರಣೆ ಕೊಟ್ಟು, ಈರುಳ್ಳಿ ಹಾಕಿ ಬಾಡಿಸಿ. ನಂತರ ಹಸಿ ಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಆಮೇಲೆ ಕಸೂರಿ ಮೇಥಿ, ಟೊಮೇಟೊ ಪೇಸ್ಟ್ ಹಾಕಿ ಕೆದಕಬೇಕು. ನಂತರ ಬೆಣ್ಣೆ, ಉಪ್ಪು, ಮೆಣಸು ಹಾಕಿ 1-2 ಕುದಿ ಬರಿಸಿ. ಆಮೇಲೆ ಕರಿದ ಪನೀರ್ ಹಾಕಿ ಕೈಯಾಡಿಸಿ. ಇಳಿಸುವ ಮುನ್ನ ಕ್ರೀಂ ತೇಲಿಬಿಡಿ. ಕೊ.ಸೊಪ್ಪು ಉದುರಿಸಿ ಬಿಸಿ ಬಿಸಿಯಾಗಿ ಚಪಾತಿ ಜೊತೆ ಸವಿಯಲು ಕೊಡಿ.
ಪನೀರ್ ಉಸುಲಿ
ಸಾಮಗ್ರಿ : 2 ಕಪ್ ಬೆಂದ ಕಾಬೂಲ್ ಕಡಲೆಕಾಳು, 200 ಗ್ರಾಂ ತುಪ್ಪದಲ್ಲಿ ಹುರಿದ ಪನೀರ್ ತುಂಡುಗಳು, 1-1 ಈರುಳ್ಳಿ, ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಚಾಟ್ ಮಸಾಲ, ನಿಂಬೆರಸ, ಕೊ.ಸೊಪ್ಪು.
ವಿಧಾನ : ಒಂದು ಬೇಸನ್‌ಗೆ ಕಡಲೆಕಾಳು ಹರಡಿಕೊಂಡು ಇದಕ್ಕೆ ಈರುಳ್ಳಿ, ಟೊಮೇಟೊ ಹೆಚ್ಚಿ ಹಾಕಿ. ಇದರ ಮೇಲೆ ಹುರಿದ ಪನೀರ್ ಹಾಗೂ ಉಳಿದೆಲ್ಲ ಸಾಮಗ್ರಿ ಸೇರಿಸಿ, ನಿಂಬೆಹಣ್ಣು ಹಿಂಡಿಕೊಂಡು ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಇದೀಗ ಪನೀರ್ ಉಸುಲಿ ಸವಿಯಲು ರೆಡಿ!