ಇದು ಹಬ್ಬಗಳ ಸೀಸನ್‌, ಹಾಗೆಯೇ ಉಡುಗೊರೆಗಳ ಸೀಸನ್‌ ಕೂಡ. ಹಬ್ಬ ಹಾಗೂ ಉಡುಗೊರೆಗಳು ಯಾವಾಗಾಲೂ ಒಟ್ಟಿಗೇ ಇರುತ್ತವೆ. ಇನ್ನೊಬ್ಬರಿಗೆ ಉಡುಗೊರೆ ನೀಡುವುದು ಪ್ರತಿಯೊಬ್ಬರಿಗೂ ಖುಷಿಯ ವಿಚಾರವೇ ಆಗಿದೆ. ಹಾಗಿದ್ದು ನಾವು ಯಾರಿಗೆ ಉಡುಗೊರೆ ನೀಡುವೆವೋ ಅದು ಅವರಿಗೆ ಎಷ್ಟರಮಟ್ಟಿಗೆ ಒಪ್ಪಿಗೆಯಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಅದಕ್ಕಾಗಿಯೇ ಪೂರ್ವ ಯೋಜನೆಗಳನ್ನು ರೂಪಿಸಿಕೊಳ್ಳಬೇಕು.

ಉಡುಗೊರೆಯನ್ನು ಆಯ್ಕೆ ಮಾಡುವುದಕ್ಕೆ ಮುನ್ನ ನಾವು ನಮ್ಮೊಳಗೆ ಕೇಳಿಕೊಳ್ಳಬೇಕಾದ ಪ್ರಶ್ನೆ, ಉಡುಗೊರೆಯನ್ನು ಅಂಗಡಿ ಅಥವಾ ಮಾಲ್‌‌ಗೆ ಹೋಗಿ ತೆಗೆದುಕೊಳ್ಳಬೇಕೋ? ನಾವೇ ಕೈಯಾರೆ ತಯಾರು ಮಾಡಬೇಕೋ?

ಮಾರುಕಟ್ಟೆಯ ನೋಟ

ಮಾರುಕಟ್ಟೆಯಲ್ಲಿ ಸುಂದರವಾದ, ವೈಭಯುತವಾದ ಉಡುಗೊರೆಗಳು ಸಿಗುತ್ತವೆ. ಆದರೆ ಉಡುಗೊರೆ ನೀಡುವ ಮುನ್ನ ನೀವು ಯಾರಿಗಾಗಿ ಉಡುಗೊರೆ ಕೊಳ್ಳುತ್ತೀರೋ ಅವರ ವಯಸ್ಸು, ಆಸಕ್ತಿ ಹಾಗೂ ಅಗತ್ಯಗಳನ್ನು ಗಮನಿಸಿರಿ. ಮಹಿಳೆಯರು ಹೆಚ್ಚಾಗಿ ಆಭರಣಗಳು, ಬಟ್ಟೆಗಳು, ಸುಗಂಧದ್ರವ್ಯ, ಅಡುಗೆಮನೆಯ ಸಲಕರಣೆಗಳು, ಮನೆಯ ಅಗತ್ಯ ವಸ್ತುಗಳು ಇವುಗಳನ್ನು ಇಷ್ಟಪಡಬಹುದು. ಅದೇ ಪುರುಷರಿಗೆ ಸ್ಟೇಷನರಿ, ಬಟ್ಟೆಗಳು, ಸುಗಂಧದ್ರವ್ಯಗಳಂತಹ ಉಡುಗೊರೆಗಳು ಮೆಚ್ಚುಗೆಯಾಗುತ್ತವೆ. ಇದು ಕಾರ್ಪೊರೇಟ್‌ ಉಡುಗೊರೆಗಳ ಕಾಲ ಆಗಿದ್ದು, ಕಛೇರಿ ಸಲಕರಣೆಗಳು, ಸಿಹಿ ತಿನಿಸುಗಳು ಸಹ ಉಡುಗೊರೆಗಳಾಗಿ ತನ್ನನ್ನು ಹೊಂದಿದವರನ್ನು ಖುಷಿಪಡಿಸಬಲ್ಲವು.

ಆಭರಣಗಳು ಇನ್ನೊಂದು ಮಹತ್ವದ ಆಯ್ಕೆಯಾಗಿರುತ್ತವೆ. ಥಳಥಳಿಸುವ ಶೈನಿಂಗ್‌ನಿಂದ ಕೂಡಿದ ಆಭರಣಗಳಿಗೆ ಹೆಚ್ಚಿನ ಮಹತ್ವವಿದೆ. ಇಂದಿನ ದಿನದಲ್ಲಿ ಪುರುಷರು ಸಹ ಆಭರಣಗಳನ್ನು ಧರಿಸಲು ಇಷ್ಟಪಡುತ್ತಾರೆ. ಬ್ರೇಸ್‌ಲೆಟ್‌, ಪೆಂಡೆಂಟ್‌, ನೆಕ್ಲೇಸ್‌, ಇಯರ್‌ ರಿಂಗ್ಲ್, ಬ್ರೋಷರ್ಸ್, ಟೈಪಿನ್‌ಗಳೂ ಅತ್ಯುತ್ತಮ ಉಡುಗೊರೆಗಳೆನ್ನುವುದರಲ್ಲಿ ಎರಡು ಮಾತಿಲ್ಲ. ವಜ್ರಗಳು ಎಂದಿದ್ದರೂ ಅತ್ಯುತ್ತಮ ಉಡುಗೊರೆಗಳಾಗುತ್ತವೆ. ಆದರೆ ಅದು ನಿಮ್ಮ ಆದ್ಯತೆಗೆ ಹೆಚ್ಚಿನದು ಎನಿಸಿದಲ್ಲಿ ಚಿನ್ನವನ್ನು ಆಯ್ದುಕೊಳ್ಳಬಹುದು. ಬೆಳ್ಳಿಯ ಆಭರಣಗಳೂ ಸಹ ಇಂದಿನ ದಿನದಲ್ಲಿ ಒಳ್ಳೆಯ ಟ್ರೆಂಡ್‌ ಸೃಷ್ಟಿಸಿವೆ. ಮುತ್ತಿನ ಸರಗಳೂ, ಮುತ್ತುಗಳು ಸಹ ಅತ್ಯುತ್ತಮ ರೇಷ್ಮೆ ಸೀರೆಗಳೊಂದಿಗೆ ನೀಡಿದರೆ ಒಳ್ಳೆಯ ಉಡುಗೊರೆ ಆಗುತ್ತವೆ. ಜೊತೆ ಜೊತೆಗೇ ಇಂದಿನ ಜಮಾನಾದ ಟ್ರೆಂಡ್‌ ಆಗಿರುವ ವೈವಿಧ್ಯಮಯ ಬಣ್ಣಗಳ ಕೃತಕ ಆಭರಣಗಳೂ ಸಹ ಒಳ್ಳೆಯ ಮೌಲ್ಯಯುತ ಉಡುಗೊರೆಗಳಾಗುತ್ತವೆ.

ಸುಗಂಧ ದ್ರವ್ಯಗಳು ಪುರುಷ ಹಾಗೂ ಮಹಿಳೆಯರಿಬ್ಬರಿಗೂ ಪ್ರಿಯಾಗುತ್ತವೆ. ಕುಟುಂಬ ಸದಸ್ಯರು, ಸ್ನೇಹಿತರಿಗೂ, ಕಾರ್ಪೊರೇಟ್ ಉಡುಗೊರೆಗಳನ್ನಾಗಿಯೂ ಸುಗಂಧದ್ರವ್ಯಗಳನ್ನು ನೀಡಬಹುದು ಇವು ಆತ್ಮೀಯತೆಯ ಕುರುಹುಗಳೂ ಆಗಬಹುದು. ಅಂತೆಯೇ ಇದು ಬಹಳ ಒತ್ತಡದ ಇಲ್ಲವೇ ಆಗ್ರಹದ ಉಡುಗೊರೆಯಾಗಿರುವುದಿಲ್ಲ. ಹೂ, ಹಣ್ಣಿನ ಪರಿಮಳಕ್ಕಿಂತಲೂ ಹೆಚ್ಚು ಉಲ್ಲಾಸದಾಯಕ ಸುವಾಸನೆಯಿಂದ ಕೂಡಿದ ಕ್ಲಾಸಿಕ್‌ ಸುಗಂಧದ್ರವ್ಯಗಳು ಹೆಚ್ಚಿನ ಯೋಗ್ಯತೆಯ ಉಡುಗೊರೆಗಳಾಗಬಲ್ಲವು. ಪುರುಷರಿಗೆ ಈ ಬಗೆಯ ಸುಗಂಧ ದ್ರವ್ಯಗಳು, ಉಡುಗೆಗಳನ್ನು ನೀಡುವ ಸಮಯದಲ್ಲಿ ಈ ಮೇಲಿನ ಗುಣ ವಿಶೇಷಗಳು ಹೆಚ್ಚಿನ ಮಟ್ಟಿಗೆ ಒಪ್ಪಿತವಾಗುತ್ತವೆ. ಹಾಗೆಯೇ ಮಹಿಳೆಯರಿಗಾಗಿ ಮ್ಯಾಗ್ನೋಲಿಯಾ, ಗುಲಾಬಿ, ಮಲ್ಲಿಗೆ ಅಥವಾ ಸ್ವೀಟ್‌ ಹನಿ ಸುವಾಸನೆ ಹೊಂದಿರುವ ಸುಗಂಧ ದ್ರವ್ಯ ನೀಡಿದರೆ ಹೆಚ್ಚಿನ ಪ್ರಮಾಣದಲ್ಲಿ ಇಷ್ಟವಾಗುತ್ತದೆ. ಇನ್ನು ಹೆಚ್ಚು ಗಾಢವಾದ ಕಸ್ತೂರಿ, ಕಟ್‌ ಗ್ರಾಸ್‌, ಮಸ್ಕ್, ಯೂಡಿಕೋನ್‌, ಸೀಬೆ ಹಣ್ಣಿನ ಪರಿಮಳ ದ್ರವ್ಯ ಇಷ್ಟವಾಗಬಹುದು.

Season-Gifts-

ಕಾಸ್ಮೆಟಿಕ್ಸ್, ಲಿಪ್‌ಸ್ಟಿಕ್‌, ನೇಲ್ ‌ಪಾಲಿಶ್‌, ಸ್ಕಿನ್‌ ಕೇರ್‌ ಉತ್ಪನ್ನಗಳು, ಬಾತ್‌ ಆಯಿಲ್‌ ಎಲ್ಲವನ್ನೂ ಸೇರಿಸಿ ಅಲಂಕಾರಿಕವಾಗಿ ಜೋಡಿಸಿ ಕೇನ್‌ ಬಾಕ್ಸ್ ನಲ್ಲಿಡಿ. ಹಾಗೆ ಇಟ್ಟ ಉಡುಗೊರೆಗಳು ನೀಡುವುದೂ ಸಹ ಒಳ್ಳೆಯ ಉಪಯುಕ್ತ ಉಡುಗೊರೆ ಎನಿಸುತ್ತದೆ. ಇನ್ನು ಉಡುಗೊರೆ ನೀಡುವ ವಸ್ತುಗಳ ಬಣ್ಣಗಳ ಕುರಿತೂ ಗಮನವಿರಲಿ. ಕಂದು, ಪ್ಲಮ್ಸ್, ತಾಮ್ರವರ್ಣ, ಚಿನ್ನದ ಬಣ್ಣಗಳನ್ನು ಆಯ್ದುಕೊಳ್ಳಿರಿ. ಸ್ಕಿನ್‌ ಕೇರ್‌, ಆಫ್ಟರ್‌ ಶೇವ್ ಲೋಶನ್‌ಗಳಿಂದ ಪುರುಷರು ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ. ಹಾಗೇ ಅವರಿಗೆ ಇದು ಹೆಚ್ಚು ಅಚ್ಚುಮೆಚ್ಚಿನ ಉಡುಗೊರೆಯಾಗುತ್ತದೆ. ವೃದ್ಧರೂ ಸಹ ಇದಕ್ಕೆ ಹೊರತಲ್ಲ. ಇನ್ನು ಕೆಲವು ಪುರುಷರು ದುಬಾರಿಯಾದ ಹೆಚ್ಚು ನೊರೆ ಕೊಡುವ ಶೇವ್ ಲೋಷನ್‌ಗಳನ್ನು ಇಷ್ಟಪಡುತ್ತಾರೆ.

ಉಡುಪುಗಳು, ನೀವು ಅದನ್ನು ಯಾರಿಗೆ ನೀಡುವಿರೋ ಅವರ ಕುರಿತಾಗಿ ನಿಮಗೆ ತಿಳಿವಳಿಕೆ ಇದ್ದರೆ ಅವು ಅತ್ಯಂತ ಯೋಗ್ಯವಾದ ಉಡುಗೆಗಳಾಗುತ್ತವೆ. ಹಾಗಿಲ್ಲದಿದ್ದಲ್ಲಿ ಬಣ್ಣ, ಸ್ಟೈಲ್‌, ಫಿಟ್‌ನೆಸ್‌ಗಳು ಅವರುಗಳಿಗೆ ಸರಿಹೊಂದದೇ ಹೋಗಿರಬಹುದು. ಹಬ್ಬಗಳ ಸೀಸನ್‌ನಲ್ಲಿ ವಾರ್ಮ್ ಬ್ರೈಟ್‌, ಬರ್ಗಂಡಿ, ಪೀಚ್‌, ಬಣ್ಣಗಳಿಗೂ ಹೆಚ್ಚು ಚೆನ್ನಾಗಿ ಫಿಟ್‌ ಆಗಬಲ್ಲವು. ಉಡುಗೊರೆಗಳನ್ನು ಯಾರಿಗೆ ನೀಡುವಿರೋ ಅವರ ಅಭಿರುಚಿಗೆ ತಕ್ಕಂತೆ ಅದಿರಲಿ. ಉದಾಹರಣೆಗೆ ಕೈಮಗ್ಗದ ಬಟ್ಟೆ, ಕಾಟನ್‌, ರೇಷ್ಮೆ…. ಹೀಗೆ ಬಟ್ಟೆಗಳ ಆಯ್ಕೆ ಮಾಡಿದಾಗ ಅದು ಹೆಚ್ಚು ಉತ್ತಮವಾದ ಉಡುಗೊರೆಗಳಾಗುತ್ತವೆ. ಇವನ್ನು ನೀವು ಇಂದಿನ ಟ್ರೆಂಡ್‌ ಆದಂಥ ಚರ್ಮದ ಕೈಚೀಲ (ಹ್ಯಾಂಡ್‌ ಬ್ಯಾಗ್‌), ವ್ಯಾಲೆಟ್‌, ಬ್ರೀಫ್‌ಕೇಸ್‌ಗಳನ್ನು ಸಹ ಉಡುಗೊರೆಗಳನ್ನಾಗಿ ನೀಡಬಹುದು. ಕೆಲಸಕ್ಕೆ ಹೋಗುವ ಮಹಿಳೆಯರಿಗಾಗಿ ವಿಶೇಷ ಬಗೆಯ ಚರ್ಮದ ಅಥವಾ ಇತರೇ ನಮೂನೆಯ ಕುಶಲ ವಸ್ತುಗಳಿಂದ ಅಲಂಕರಿಸಿರುವ ಹ್ಯಾಂಡ್‌ ಬ್ಯಾಗ್‌ನ್ನು ನೀಡಬಹುದು.

ಉಡುಗೊರೆಗಳೆಲ್ಲ ವೈಯಕ್ತಿಕವಾಗಿರಬೇಕಿಲ್ಲ. ಶುದ್ಧ ಸ್ಛಟಿಕದಂತೆ ಹೊಳೆಯುವ ವಸ್ತುಗಳೂ, ಒಳ್ಳೆಯ ಉಡುಗೊರೆಗಳಾಗಬಲ್ಲವು. ಹಿತ್ತಾಳೆ ವಸ್ತುಗಳು ಇಂದು ಔಟ್‌ ಡೇಟೆಡ್‌ ಆಗಿವೆ. ಇಷ್ಟಾಗಿಯೂ ನೀವೇನಾದರೂ ದೇಶ, ವಿದೇಶಗಳ ಪ್ರವಾಸ ಮಾಡಿದಾಗ ಅಲ್ಲಿ ದೊರೆತ ಅತ್ಯಂತ ಪ್ರಾಚೀನ ಮತ್ತು ಸಂಗ್ರಹಯೋಗ್ಯ ಹಿತ್ತಾಳೆ ಅಥವಾ ಇತರೇ ಲೋಹದ ವಸ್ತುಗಳನ್ನು ತೆಗೆದುಕೊಂಡಲ್ಲಿ ಅವುಗಳನ್ನು ಉಡುಗೊರೆಯಾಗಿ ನೀಡುವ ಮುನ್ನ, ನೀವು ಉಡುಗೊರೆ ನೀಡುವ ವ್ಯಕ್ತಿ ಅಂತಹ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿರಿ.

ಪೇಂಟಿಂಗ್‌, ಸಣ್ಣಪುಟ್ಟ ಒಡವೆ, ಪಾರಂಪರಿಕ ವಸ್ತುಗಳೆಲ್ಲ ಸದಾ ನೆನಪದಲ್ಲಿ ಉಳಿಯುವ ಉಡುಗೊರೆಯ ವಸ್ತುಗಳಾಗುತ್ತವೆ. ಹಾಗೆಯೇ ವೈವಿಧ್ಯಮಯ ಕ್ಯಾಂಡಲ್‌ಗಳು, ಪರಿಮಳಯುಕ್ತ ಗಂಧದಕಡ್ಡಿಗಳೂ ಒಳ್ಳೆಯ ಉಡುಗೊರೆ ಎನಿಸುತ್ತವೆ. ಹಾಗೆಯೇ ಎಲೆಕ್ಟ್ರಾನಿಕ್‌ ವಸ್ತುಗಳಾದ ಗ್ಯಾಜೆಟ್‌ಗಳು, ಐಫೋನ್‌ಗಳು, ಎಂಪಿತ್ರಿ ಪ್ಲೇಯರ್‌, ಟೋಸ್ಟರ್‌, ರೈಸ್‌ ಕುಕ್ಕರ್‌ಗಳನ್ನೂ ಉಡುಗೊರೆಯಾಗಿ ಕೊಡುವುದಕ್ಕೆ ಪ್ರಯತ್ನಿಸಿ. ಕಿರಿಯರಿಗಾಗಿ ಪ್ಲೇ ಸ್ಟೇಷನ್‌ಗಳನ್ನು ನೀಡಬಹದು.

ಸಿಹಿತಿಂಡಿಗಳು, ಒಣಹಣ್ಣು (ಡ್ರೈಫ್ರೂಟ್ಸ್)ಗಳನ್ನು ನವೀನ ರೀತಿಯಲ್ಲಿ ಪ್ಯಾಕ್‌ ಮಾಡಿ ಉುಡುಗೊರೆಯನ್ನಾಗಿ ನೀಡಬಹುದು. ಇವನ್ನು ಶುಗರ್‌ ಪೀಡಿತರಿಗೆ ಫ್ರೂಟ್ಸ್  ವೈನ್‌, ಉಳಿದವರಿಗೆ ಚಾಕಲೇಟ್‌, ಮಿಠಾಯಿಗಳನ್ನು ನೀಡಬಹುದು. ಇದು ಖಂಡಿತಾ ಎಲ್ಲರಿಗೂ ಸಂತೋಷವನ್ನುಂಟು ಮಾಡುತ್ತದೆ. ಈ ಉಡುಗೊರೆಗಳನ್ನು ನೀಡುವಾಗ ವಿಶೇಷ ಬಣ್ಣದ ರಿಬ್ಬನ್‌, ಲೇಸ್‌ಗಳನ್ನು ಬಳಸಿ ಪ್ಯಾಕ್‌ ಮಾಡುವುದಕ್ಕೆ ಮರೆಯಬೇಡಿ.

ಸ್ಪಾ, ಬ್ಯೂಟಿ ಸೆಲೂನ್‌ ಅಥವಾ ಹೆಲ್ತ್ ರೆಸಾರ್ಟ್‌ ವೋಚರ್‌ಗಳನ್ನು ಸಹ ನಿಮ್ಮ ಆತ್ಮೀಯರಿಗೆ ಉಡುಗೊರೆ ರೂಪದಲ್ಲಿ ನೀಡಬಹುದು. ಇದರಿಂದ ವಾರಪೂರ್ತಿಯ ಒತ್ತಡದಿಂದ ಅವರಿಗೆ ಎಷ್ಟೋ ಆರಾಮ ದೊರೆಯುತ್ತದೆ.

ಮನೆಯಲ್ಲೇ ತಯಾರಿಸಿ

ಉಡುಗೊರೆ ಎಂದಾಕ್ಷಣ ಎಲ್ಲರೂ ಮಾರುಕಟ್ಟೆಗೆ ಹೋಗಿ ಅಲ್ಲಿ ತಯಾರಿರುವ ರೆಡಿಮೇಡ್‌ ಉಡುಗೊರೆಗಳನ್ನೇ ಚೆನ್ನಾಗಿ ಪ್ಯಾಕ್ ಮಾಡಿಸಿ ನಿಮ್ಮವರಿಗೆ ನೀಡುವುದಕ್ಕಿಂತಲೂ ನಿಮ್ಮ ಮಿತಿಯಲ್ಲಿ ನೀವೇ ತಯಾರಿಸಿ ನೀಡುವ ಉಡುಗೊರೆ, ಪಡೆದವರಲ್ಲಿ ನಿಮ್ಮ ಕುರಿತು ಹೆಚ್ಚು ಆತ್ಮೀಯ ಭಾವ, ಗೌರವಗಳನ್ನು ಮೂಡಿಸುತ್ತವೆ. ಅಲ್ಲದೆ ಆ ಉಡುಗೊರೆ ಅವರೊಡನೆ ಇರುವವರೆಗೂ ಅವರಿಗೆ ನಿಮ್ಮನ್ನು ನೆನಪಿಸುತ್ತಿರುತ್ತದೆ.

ಅಡುಗೆ ನಿಮ್ಮ ನೆಚ್ಚಿನ ಹವ್ಯಾಸವಾದರೆ, ಮತ್ತೇನೂ ಯೋಚಿಸಬೇಕಾಗಿಲ್ಲ. ರುಚಿ ರಚಿಯಾದ ತೆಂಗಿನ ಬರ್ಫಿ, ಕಾಜುಪಾಕ್‌, ಕಜ್ಜಾಯ ಕಡುಬು ಇತ್ಯಾದಿಗಳನ್ನು ತಯಾರಿಸಿ ಒಳ್ಳೆಯ ಪ್ಯಾಕೇಟ್‌ನಲ್ಲಿರಿಸಿ ಕೊಡಬಹುದು. ಇದರೊಂದಿಗೆ ಸಿಹಿ ತಿನಿಸುಗಳನ್ನು ಬಾಕ್ಸ್ ನಲ್ಲಿರಿಸಿ ನೀಡುವುದು ಅತ್ಯುತ್ತಮ ಉಡುಗೊರೆಗಳಾಗುತ್ತವೆ.

ಕ್ಯಾಂಡಲ್‌ಗಳನ್ನು ನೀವು ನಿಮ್ಮ ಮನೆಯಲ್ಲೇ ವಿವಿಧ ಬಣ್ಣ, ಪರಿಮಳ ಇರುವಂತೆ ತಯಾರಿಸಬಹುದು. ನೀವು ಯಾರಿಗೆ ಉಡುಗೊರೆಯಾಗಿ ನೀಡುವಿರೋ ಅವರ ರೋಡಿಯಾಕ್‌ ಸೈನ್‌ಗೆ ಹೊಂದುವಂತೆ ಕ್ಯಾಂಡಲ್ಸ್ ತಯಾರಿಸಿ, ಅದಿನ್ನು ವಿಶೇಷ ಉಡುಗೊರೆಯಾಗುತ್ತದೆ. ಹ್ಯಾಂಡ್‌ ಪೇಂಟೆಡ್‌ ಹಣತೆಗಳನ್ನೂ ದೀಪಾವಳಿಯ ಉಡುಗೊರೆಯಾಗಿ ನೀಡಬಹುದು.

ನೀವು ಕೈತೋಟ ಹೊಂದಿದ್ದರೆ ಅಲ್ಲಿ ಬೆಳೆದ ಗಿಡಗಳು, ಅಲಂಕಾರಿಕ ಪಾಟ್‌ಗಳು, ಚೆಂದದ ಅಲಂಕಾರಿಕ ಹೂಗಳು ಇತ್ಯಾದಿಗಳನ್ನು ನಿಮ್ಮ ಪ್ರಿಯರಿಗೆ ಉಡುಗೊರೆಯಾಗಿ ನೀಡಬಹುದಾಗಿದೆ. ನೀವು ಚಿತ್ರಕಲೆ (ಪೇಂಟಿಂಗ್‌)ಯಲ್ಲಿ ನಿಷ್ಣಾತರಾಗಿದ್ದರೆ, ಚೆನ್ನಾಗಿ ಚಿತ್ತಾರ ಮಾಡಿರುವ ಪಿಲ್ಲೋ ಕವರ್‌ಗಳನ್ನು ನಿಮ್ಮ ಆತ್ಮೀಯರಿಗೆ ಉಡುಗೊರೆಯಾಗಿ ನೀಡಿರಿ. ಚಿತ್ತಾರ ಹೊಂದಿದ ಗಾಜಿನ ಲೋಟಗಳು, ವಾಸ್‌ಗಳು ಕ್ಯಾಂಡಲ್ ಸ್ಟ್ಯಾಂಡ್‌ಗಳನ್ನು ಸಹ ಉಡುಗೊರೆಯಾಗಿ ನೀಡುವುದು ಉತ್ತಮ. ಕಸೂತಿ ಮಾಡಿದ ಬ್ಯಾಗ್‌ಗಳು, ಪ್ಲೇರ್‌ ಪೇಂಟ್‌ಗಳುಳ್ಳ ವಸ್ತುಗಳು, ಕವರ್‌ಗಳನ್ನು ಸಹ ಉಡುಗೊರೆ ನೀಡುವುದು ಸೂಕ್ತವಾಗಿರುತ್ತದೆ.

ಎಂಬ್ರಾಯಿಡರಿ ಕೆಲಸದಲ್ಲಿ ನಿಷ್ಣಾತರು ನೀವಾಗಿದ್ದಲ್ಲಿ, ಈ ಕಲೆಯ ಮೂಲಕ ಸಿದ್ಧಪಡಿಸಿದ ನ್ಯಾಪ್‌ಕಿನ್‌, ಕುಷನ್‌ ಕವರ್‌, ಫೋಟೋ ಫ್ರೇಮ್ ಗಳನ್ನು ಸಹ ನಿಮ್ಮ ಆತ್ಮೀಯರಿಗೆ ಉಡುಗೊರೆ ರೂಪದಲ್ಲಿ ಕೊಡಲು ಅಡ್ಡಿ ಇಲ್ಲ.

ಚೆನ್ನಾಗಿ ಗಿಫ್ಟ್ ಪ್ಯಾಕ್ ಮಾಡಿ

ಉಡುಗೊರೆಗಳನ್ನು ರಾಪ್‌ ಮಾಡಿಸುವುದೂ ಸಹ ಅಷ್ಟೇ ಮುಖ್ಯ. ಇಕೋ ಫ್ರೆಂಡ್ಲಿ, ಸಿಲ್ಕ್ ಪೇಪರ್‌ ಬಳಸಿ ಪ್ಯಾಕ್‌ ಮಾಡಿಸುವುದು ಉತ್ತಮ. ಪ್ಲೇನ್‌ ಬ್ರೌನ್‌ ಪೇಪರ್‌, ವಾರ್ತಾ ಪತ್ರಿಕೆಗಳನ್ನು ಬಳಸಿಯೂ ಉತ್ತಮವಾಗಿ, ಆಕರ್ಷಕವಾಗಿ ಗಿಫ್ಟ್ ರಾಪ್‌ ಮಾಡಿಸಬಹುದು. ಹಾಗೆಯೇ ಬಣ್ಣ ಬಣ್ಣದ ಲೇಸ್‌, ರಿಬ್ಬನ್‌ಗಳನ್ನು ಬಳಸುವುದರಿಂದ ಪ್ಯಾಕೆಟ್‌ ಹೆಚ್ಚು ಆಕರ್ಷಕವಾಗಿ ಉಡುಗೊರೆ ಪಡೆದವರನ್ನು ಸಹ ಹೆಚ್ಚಾಗಿ ಸೆಳೆಯುತ್ತವೆ. ಹಾಗೆಯೇ ಪ್ಯಾಕ್‌ ಮಾಡುವಾಗ ಸ್ಪಂಜಿನ ಪೀಸ್‌ಗಳನ್ನು ಬಳಸುವುದೂ ಸಹ ಸುರಕ್ಷಿತ ಮತ್ತು ಉತ್ತಮ ಪ್ಯಾಕೇಟ್‌ ಆಗುವುದಕ್ಕೆ ಸಹಕಾರಿಯಾಗಬಲ್ಲದು. ಒಟ್ಟಾರೆ ಪ್ಯಾಕೇಟ್‌ ಅಥವಾ ಗಿಫ್ಟ್ ರಾಪ್‌ ಹೆಚ್ಚು ಸುರಕ್ಷಿತ ಅಕರ್ಷಕ ಆಗಿರಬೇಕು.

ಸ್ಮಿತಾ ಕುಮಾರ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ