ಈಗಿನ ಕಾಲದಲ್ಲಿ ಫ್ಯಾಷನ್‌ನಲ್ಲಿ ಸತತವಾಗಿ ಬದಲಾವಣೆಯಾಗುತ್ತಿದೆ, ಅವು ಉಡುಪು ಅಥವಾ ಬ್ರೈಡಲ್ ಜ್ಯೂವೆಲರಿ ಆಗಿರಬಹುದು. ಬ್ರೈಡಲ್ ಜ್ಯೂವೆಲರಿ ಪ್ರತಿ ವರ್ಷ ಮಾರುಕಟ್ಟೆಯಲ್ಲಿ ಹೊಸ ರೂಪದಲ್ಲಿ ಕಂಡುಬರುತ್ತದೆ. ಇಂದು ಪ್ರತಿ ವಧು ಹೊಸ ವಿನ್ಯಾಸದ ಜ್ಯೂವೆಲರಿ ಖರೀದಿಸಲು ಇಚ್ಛಿಸುತ್ತಾಳೆ. ಅದು ಪಾರಂಪರಿಕ ಆಧುನಿಕ ಆಗಿರಬೇಕು. ಅವನ್ನು ವಿವಾಹದ ಸಂದರ್ಭದಲ್ಲಿ ಮಾತ್ರವಲ್ಲದೆ ನಂತರ ಉಪಯೋಗಿಸುವಂತಿರಬೇಕು. ಮದುವೆಯಲ್ಲಿ ಬೈತಲೆ ಬೊಟ್ಟು, ಸರ, ಬಳೆಗಳು, ಝುಮಕಿ, ನತ್ತು, ಡಾಬು, ಗೆಜ್ಜೆ ಇತ್ಯಾದಿಗಳನ್ನು ಎಲ್ಲ ವಧುಗಳೂ ಧರಿಸುತ್ತಾರೆ. ಆದರೆ ಅವುಗಳಲ್ಲಿ ಅವರು ಕಡಿಮೆ ಬಜೆಟ್‌ನಲ್ಲಿ ಹೆಚ್ಚು ಸುಂದರವಾಗಿರುವ ಒಡವೆಗಳನ್ನು ಹುಡುಕುತ್ತಾರೆ. ಈಗ ಪ್ಲಾಟಿನಂ ಒಡವೆಗಳನ್ನು ವಧುಗಳು ಹೆಚ್ಚು ಇಷ್ಟಪಡುತ್ತಿದ್ದಾರೆ. ಅವುಗಳಲ್ಲಿ ಸ್ವರೋಸ್ಕಿ ಡೈಮಂಡ್ ಪ್ರಮುಖವಾಗಿದೆ. ಅದಲ್ಲದೆ, ಕುಂದಣ ಹಾಗೂ ಸುಂದರ ಮೀನಾಕಾರಿ ವರ್ಕ್‌ನ ಜಡಾ ಸೆಟ್ ಹೆಚ್ಚು ಇಷ್ಟಪಡಲಾಗುತ್ತದೆ.
ಒಡವೆಗಳು ಇರೋದು ಅಲಮಾರಿಗಳಲ್ಲಿ ಅಥವಾ ಲಾಕರ್‌ಗಳಲ್ಲಿ ಇಡಲು ಅಲ್ಲ. ಎಲ್ಲ ಸಂದರ್ಭಗಳಲ್ಲಿ ಧರಿಸಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಜ್ಯೂವೆಲರಿ ಡಿಸೈನರ್ಸ್ ಒಡವೆಗಳನ್ನು ತಯಾರಿಸುತ್ತಿದ್ದಾರೆ. ಮುಂಬೈನ ಪೋಪ್ಲೆ ಎಟರ್ನ್‌ನ ಮಾಲೀಕ ಸೂರಜ್ ಹೀಗೆ ಹೇಳುತ್ತಾರೆ, ``ಬ್ರೈಡಲ್ ಜ್ಯೂವೆಲರಿ ಬೇಡಿಕೆ ಉಪಯುಕ್ತತೆಯನ್ನು ಅವಲಂಬಿಸುತ್ತದೆ. ವೆಸ್ಟರ್ನ್ ಡಿಸೈನ್‌ಗಳನ್ನು ಟ್ರೆಡಿಶನಲ್ ನಲ್ಲಿ ತಂದು ಹೊಸ ರೂಪ ಕೊಡಲಾಗುತ್ತದೆ.
``ಅವುಗಳಲ್ಲಿ ಸೆಮಿ ಪ್ರೆಶಸ್ ಸ್ಟೋನ್ ವಿಶೇಷವಾಗಿ ಎಮರಾಲ್ಡ್, ರೂಬಿ, ಡೈಮಂಡ್ ಇತ್ಯಾದಿ ಹೆಚ್ಚು ಇಷ್ಟಪಡಲಾಗುತ್ತದೆ. ಟೂ ಇನ್ ಒನ್ ಕಾನ್ಸೆಪ್ಟ್ ಈ ದಿಶೆಯಲ್ಲಿ ಅತ್ಯಂತ ಜನಪ್ರಿಯವಾಗಿದೆ. ಈ ಒಡವೆಗಳು ಮದುವೆಯ ದಿನವಲ್ಲದೆ ರಿಸೆಪ್ಶನ್‌ನಲ್ಲೂ ಧರಿಸಬಹುದು. ಬರೀ ಸರವಷ್ಟೇ ಅಲ್ಲ, ಕಿವಿಯ ಓಲೆಗಳನ್ನೂ ಸಂದರ್ಭಕ್ಕೆ ಅನುಸಾರವಾಗಿ ಭಾರಿ ಮತ್ತು ಹಗುರವಾದದ್ದನ್ನು ತಯಾರಿಸಲಾಗುತ್ತದೆ.''
ನಿಶ್ಚಿತಾರ್ಥದ ಒಡವೆಗಳು
ನಿಶ್ಚಿತಾರ್ಥದಲ್ಲಿ ಉಂಗುರ ಬಹಳ ವಿಶೇಷವಾಗಿರುತ್ತದೆ. ಕ್ಲಾಸಿಕ್ ಡೈಮಂಡ್ ಸಾಲಿಟೇರ್‌ನಿಂದ ಹಿಡಿದು ಕಾನ್‌ಟೆಂಪೊರರಿ ರಿಂಗ್ ಸ್ಟೈಲ್. ಅದರಲ್ಲಿ ಸ್ಟೋನ್, ಎಮರಾಲ್ಡ್, ರೂಬಿ ಇತ್ಯಾದಿ ಯಾವುದೇ ರೀತಿಯ ಒಡವೆ ವಧುವಿಗೆ ಯೋಗ್ಯವಾಗಿರುತ್ತದೆ. ಉಂಗುರ ಖರೀದಿಸುವಾಗ ಅದರ ಬ್ಯಾಂಡ್ ನಿಮ್ಮ ಬೆರಳಿನಲ್ಲಿ ಸರಿಯಾಗಿ ಕೂಡುತ್ತದೆಯೇ ಎಂದು ಗಮನಿಸಿ. ಇಂದು ಪ್ಲಾಟಿನಂ ಹೆಚ್ಚು ಪ್ರಚಲಿತವಾಗಿದೆ. ಅದಲ್ಲದೆ ಹಳದಿ ಗೋಲ್ಡ್, ಬಿಳಿ ಗೋಲ್ಡ್, ಗುಲಾಬಿ ಗೋಲ್ಡ್, ಗ್ರೀನ್ ಗೋಲ್ಡ್ ಇತ್ಯಾದಿ ರಿಂಗ್ಸ್ ಕೂಡ ಸಿಗುತ್ತವೆ.
ಮೆಹಂದಿ ಶಾಸ್ತ್ರದ ಒಡವೆಗಳು
ಸಂಗೀತ್ ಮತ್ತು ಮೆಹಂದಿ ಶಾಸ್ತ್ರದ ದಿನದಂದು ವಧುಗಳು ಹೆಚ್ಚಾಗಿ ಹಗುರವಾದ ಸಾಧಾರಣ ಒಡವೆಗಳನ್ನು ಧರಿಸುತ್ತಾರೆ. ಸಿಂಪಲ್ ಗೋಲ್ಡ್ ಚೇನ್‌ನಲ್ಲಿ ಸುಂದರವಾದ ಪೆಂಡೆಂಟ್, ಚಿನ್ನದ ಮತ್ತು ಡೈಮಂಡ್‌ನ ಉದ್ದವಾದ ಇಯರ್ ರಿಂಗ್ಸ್ ಸಾಕಷ್ಟು ಇಷ್ಟಪಡಲಾಗುತ್ತದೆ. ಹೂಗಳನ್ನು ಕೊರೆದಿರುವ ಒಡವೆಗಳನ್ನೂ ವಧುಗಳು ಇಷ್ಟಪಡುತ್ತಾರೆ.
ಮದುವೆಯ ಒಡವೆಗಳು
ಮದುವೆಯ ದಿನ ಅತ್ಯಂತ ಮಹತ್ವಪೂರ್ಣವಾಗಿರುತ್ತದೆ. ಅಂದು ವಧು ತಲೆಯಿಂದ ಕಾಲಿನವರೆಗೂ ಸಿಂಗರಿಸಿಕೊಳ್ಳುತ್ತಾಳೆ. ಹಿಂದೆ ಹೆಚ್ಚಿನ ಭಾರತೀಯ ಮದುವೆಗಳಲ್ಲಿ ವಧುಗಳು ಚಿನ್ನದ ಒಡವೆಗಳನ್ನೇ ಧರಿಸುತ್ತಿದ್ದರು. ಅದು ಅವರ ಬಜೆಟ್‌ಗೆ ತಕ್ಕಂತೆ ಇರುತ್ತಿತ್ತು. ಆದರೆ ಇಂದು ಡೈಮಂಡ್, ಬಿಳಿ ಚಿನ್ನ ಮತ್ತು ಪ್ಲಾಟಿನಂನ ಒಡವೆಗಳನ್ನೂ ವಧುಗಳು ಧರಿಸಲು ಇಚ್ಛಿಸುತ್ತಿದ್ದಾರೆ.