ಮಸಾಲಾ ಸೋಯಾ ಹಾಂಡಿ

ಸಾಮಗ್ರಿ : 2 ಕಪ್‌ ನೆನೆಹಾಕಿದ ಸೋಯಾ ಚಂಕ್ಸ್, 1 ಕಪ್‌ ಬ್ರೆಡ್‌ ಕ್ರಂಬ್ಸ್, 1 ತುಂಡು ಶುಂಠಿ, 1 ಚಮಚ ಹೆಚ್ಚಿದ ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್‌ ಮಸಾಲ, ಹಸಿಮೆಣಸಿನ ಪೇಸ್ಟ್, ಹುಣಿಸೇ ಪೇಲ್ಟ್, 2 ಚಮಚ ಕಾರ್ನ್‌ಫ್ಲೋರ್‌, ಕರಿಯಲು ಅಗತ್ಯವಿದ್ದಷ್ಟು ಎಣ್ಣೆ, 100 ಗ್ರಾಂ ಹುರಿದ ಮಸಾಲೆ, 1-1 ಸಣ್ಣ ಚಮಚ ಧನಿಯಾಪುಡಿ, ಜೀರಿಗೆಪುಡಿ, 3 ಚಮಚ ಬ್ರೌನ್‌ ಶುಗರ್‌.

ವಿಧಾನ : ಸೋಯಾ ಚಂಕ್ಸ್ ನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ನಂತರ ಇದಕ್ಕೆ ಬ್ರೆಡ್‌ ಕ್ರಂಬ್ಸ್, ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಅರ್ಧ ಭಾಗ ಖಾರದಪುಡಿ, ಚಾಟ್‌ ಮಸಾಲ, ಹಸಿಮೆಣಸಿನ ಪೇಸ್ಟ್, ಉಪ್ಪು, 2 ಚಮಚ ನೀರು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಒಂದು ಬಟ್ಟಲಿಗೆ ಹಾಕಿ ಕಾರ್ನ್‌ಫ್ಲೋರ್‌ ಸೇರಿಸಿ. ನಂತರ ಈ ಮಿಶ್ರಣವನ್ನು ಸಮಾನ ಆಕಾರದ ಉಂಡೆಗಳಾಗಿಸಿ, ಅದಕ್ಕೆ ಓವಲ್ ಶೇಪ್‌ ಕೊಡಿ. ಪ್ರತಿಯೊಂದಕ್ಕೂ 1-1 ಐಸ್‌ ಕ್ರೀಂ ಕಡ್ಡಿ ಸಿಗಿಸಿ, ಕಾದ ಎಣ್ಣೆಯಲ್ಲಿ ಕರಿಯಬೇಕು. ಟಿಶ್ಶು ಪೇಪರ್‌ ಮೇಲೆ ಹರಡಿ ಹೆಚ್ಚುವರಿ ಎಣ್ಣೆ ಹೋಗಲಾಡಿಸಿ. ಅದೇ ಬಾಣಲೆಯಲ್ಲಿ ತುಸು ಎಣ್ಣೆ ಉಳಿಸಿಕೊಂಡು ಉಳಿದೆಲ್ಲ ಮಸಾಲೆ ಹಾಕಿ ಕೆದಕಬೇಕು. ಕೊನೆಯಲ್ಲಿ ಬ್ರೌನ್‌ ಶುಗರ್‌, ಹುಣಿಸೇ ಪೇಸ್ಟ್ ಸೇರಿಸಿ 2-3 ನಿಮಿಷ ಮತ್ತೆ ಕೆದಕಬೇಕು. ಆಮೇಲೆ 1 ಕಪ್‌ ನೀರು ಬೆರೆಸಿ, ಉಪ್ಪು ಹಾಕಿ ಮಸಾಲೆ ಗಟ್ಟಿ ಆಗುವವರೆಗೂ ಕುದಿಸಬೇಕು. ಆಮೇಲೆ ಐಸ್‌ ಸ್ಟಿಕ್ಸ್ ನಿಂದ ಕರಿದ ಪದಾರ್ಥ ಬೇರೆ ಮಾಡಿ ಇದಕ್ಕೆ ಬೆರೆಸಿ, ಮತ್ತಷ್ಟು ಕುದಿಸಬೇಕು. ಕೆಳಗಿಳಿಸಿ ಚಿತ್ರದಲ್ಲಿರುವಂತೆ ಅಲಂಕರಿಸಿ, ಬಿಸಿಬಿಸಿಯಾಗಿ ಚಪಾತಿ ಜೊತೆ ಸವಿಯಲು ಕೊಡಿ.

ಮಲಾಯಿ ಕೋಫ್ತಾ

ಸಾಮಗ್ರಿ : 4 ಬೆಂದ ಆಲೂ, 250 ಗ್ರಾಂ ಪನೀರ್‌, 150 ಗ್ರಾಂ ಮೈದಾ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು ಪುದೀನಾ, 3 ಈರುಳ್ಳಿ, 2 ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್, 2-3 ಟೊಮೇಟೊಗಳ ಪೇಸ್ಟ್, ಅರ್ಧ ಕಪ್‌ ಕ್ರೀಂ ಅಥವಾ ಮಲಾಯಿ, ಗೋಡಂಬಿ, ದ್ರಾಕ್ಷಿ,  ಪಿಸ್ತಾ, ಬಾದಾಮಿ ಚೂರು (ಒಟ್ಟಾಗಿ ಅರ್ಧ ಕಪ್‌),  ರುಚಿಗೆ ತಕ್ಕಷ್ಟು ಉಪ್ಪು, ಖಾರ, ಕಿಚನ್‌ ಕಿಂಗ್‌ ಮಸಾಲ, ಸಕ್ಕರೆ, ಕಸೂರಿಮೇಥಿ, 2-3 ಚಿಟಕಿ ಅರಿಶಿನ ಕರಿಯಲು ಎಣ್ಣೆ.

ವಿಧಾನ : ಬೆಂದ ಆಲೂಗಡ್ಡೆಯನ್ನು 4-5 ತಾಸು ಫ್ರಿಜ್‌ನಲ್ಲಿರಿಸಿ ನಂತರ ಹೊರತೆಗೆದು ಚೆನ್ನಾಗಿ ಮಸೆಯಿರಿ. ಇದಕ್ಕೆ ಪನೀರ್‌ಮಸೆದು ಹಾಕಿ, ಮೈದಾ ಸೇರಿಸಿ. ಇದು ತುಂಬಾ ಗಟ್ಟಿ ಅಥವಾ ಮೃದು ಆಗಿರಬಾರದು, ಮೀಡಿಯಂ ಇರಲಿ. ನಂತರ ಇದಕ್ಕೆ ಉಪ್ಪು, ಕೊ.ಸೊಪ್ಪು, ಪುದೀನಾ ಸೇರಿಸಿ. ಆಮೇಲೆ ದ್ರಾಕ್ಷಿ, ಗೋಡಂಬಿ ಚೂರು, ಅರ್ಧ ಚಮಚ ಸಕ್ಕರೆ ಸೇರಿಸಿ. ಈಗ ಈ ಮಿಶ್ರಣದಿಂದ ಸಣ್ಣ ಉಂಡೆಗಳಾಗಿಸಿ, ಪ್ರತಿಯೊಂದಕ್ಕೂ ಡ್ರೈ ಫ್ರೂಟ್ಸ್ ಸಿಗಿಸಿಡಿ. ಮೈದಾ, ಚಿಟಕಿ ಉಪ್ಪು, ಖಾರ, ಓಮ ಹಾಕಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿ, ಅದರಲ್ಲಿ ಈ ಉಂಡೆಗಳನ್ನು ಅದ್ದಿ, ಕಾದ ಎಣ್ಣೆಯಲ್ಲಿ ಕೋಫ್ತಾ ಕರಿಯಿರಿ.

ಅದೇ ಬಾಣಲೆಯಲ್ಲಿ 1 ಸೌಟು ಎಣ್ಣೆ ಉಳಿಸಿಕೊಂಡು ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಶುಂಠಿ ಬೆಳ್ಳುಳ್ಳಿ ಪೇಸ್ಟ್,  ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ಉಳಿದ ದ್ರಾಕ್ಷಿ, ಗೋಡಂಬಿಗಳನ್ನು ಹಾಲಲ್ಲಿ ಅರೆದು ಪೇಸ್ಟ್ ಮಾಡಿಡಿ. ಕಸೂರಿಮೇಥಿ ಬಿಟ್ಟು  ಉಳಿದೆಲ್ಲ ಡ್ರೈ ಮಸಾಲೆ ಸೇರಿಸಿ ಪೇಸ್ಟ್ ಮಾಡಿ. ಇವೆಲ್ಲವನ್ನೂ ಬಾಣಲೆಗೆ ಸೇರಿಸಿ, ಮಂದ ಉರಿಯಲ್ಲಿ ಕೆದಕಬೇಕು. ಹೀಗೆ ಗ್ರೇವಿ ಕುದ್ದು ಗಟ್ಟಿಯಾದಾಗ, ಇದಕ್ಕೆ ಕ್ರೀಂ ಬೆರೆಸಿಡಿ. ಕೊನೆಯಲ್ಲಿ ಸಕ್ಕರೆ, ಕಸೂರಿಮೇಥಿ ಬೆರೆಸಬೇಕು. ಇದು ಚೆನ್ನಾಗಿ ಕುದಿ ಬಂದಾಗ, ಇದಕ್ಕೆ ಕರಿದ ಕೋಫ್ತಾ ಬೆರೆಸಿ ಮತ್ತಷ್ಟು ಕುದಿಸಿ ಕೆಳಗಿಳಿಸಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಬಿಸಿ ಬಿಸಿ ಚಪಾತಿ, ಪೂರಿ ಜೊತೆ ಸವಿಯಲು ಕೊಡಿ.

cookry-2

ಹಾಂಡಿ ವೆಜ್ಬಿರಿಯಾನಿ

ಸಾಮಗ್ರಿ : 2 ಕಪ್‌ ಬಾಸುಮತಿ ಅಕ್ಕಿ, ಅರ್ಧರ್ಧ ಕಪ್‌ ಹೂಕೋಸು, ಎಲೆಕೋಸು, ನವಿಲುಕೋಸಿನ ಹೋಳು, ಹಸಿ ಬಟಾಣಿ ಕಾಳು, ಹೆಚ್ಚಿದ ಬೀನ್ಸ್, 2-2 ಕ್ಯಾಪ್ಸಿಕಂ, ಬೆಂದ ಆಲೂ, ಟೊಮೇಟೊ, 4 ಈರುಳ್ಳಿ, 1 ಕಪ್‌ ಹುಳಿ ಮೊಸರು, ಚಕ್ಕೆ, ಲವಂಗ, ಏಲಕ್ಕಿ, ಮೊಗ್ಗು (ಒಟ್ಟಾಗಿ ಅರ್ಧ ಕಪ್‌), 2 ಲವಂಗದೆಲೆ, 4-5 ಕಾಳು ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ (ಒಟ್ಟಾಗಿ 1 ಕಪ್‌ ತಪ್ಪದಲ್ಲಿ ಹುರಿದದ್ದು), ಅರ್ಧ ಸೌಟು ತುಪ್ಪ, ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು.

ವಿಧಾನ : ಹೆಚ್ಚಿದ ಎಲ್ಲಾ ತರಕಾರಿಗೂ ತುಸು ಉಪ್ಪು ಹಾಕಿ ಲಘುವಾಗಿ ಬೇಯಿಸಿ ಪಕ್ಕಕ್ಕಿಡಿ. ಅಕ್ಕಿಯನ್ನು ಅರ್ಧ ಗಂಟೆ ನೆನೆಹಾಕಿಡಿ. ನಂತರ ನೀರು ಬಸಿದು, ಚಿಟಕಿ ಉಪ್ಪು ಉದುರಿಸಿ ಪ್ಲೇಟ್‌ನಲ್ಲಿ ಹರಡಿಕೊಳ್ಳಿ. ಒಂದು ಪ್ರೆಷರ್‌ ಪ್ಯಾನಿನಲ್ಲಿ ತುಪ್ಪ ಬಿಸಿ ಮಾಡಿ. ಇದಕ್ಕೆ ಉದ್ದಕ್ಕೆ ಹೆಚ್ಚಿದ ಅರ್ಧ ಭಾಗ ಈರುಳ್ಳಿ ಹಾಕಿ ಬಾಡಿಸಿ ತೆಗೆದು ಬೇರೆಯಾಗಿಡಿ. ಅದೇ ತುಪ್ಪದಲ್ಲಿ ದ್ರಾಕ್ಷಿ, ಗೋಡಂಬಿ ಹುರಿದು ತೆಗೆಯಿರಿ. ಹಾಗೆಯೇ ಹೆಚ್ಚಿದ ಹಳದಿ, ಕೆಂಪು, ಹಸಿರು ಕ್ಯಾಪ್ಸಿಕಂ ಸೇರಿಸಿ ಬಾಡಿಸಿ, ಬೇರೆಯಾಗಿಡಿ. ಆಮೇಲೆ ಇದಕ್ಕೆ ಒಗ್ಗರಣೆ ಕೊಡಿ. ಜೊತೆಗೆ ಕಾಳುಮೆಣಸು, ಲವಂಗ, ಏಲಕ್ಕಿ, ಮೊಗ್ಗು, ಲವಂಗದೆಲೆ ಹಾಕಿ ಚಟಪಟಾಯಿಸಿ. ಇದಕ್ಕೆ ಅಕ್ಕಿ ಹಾಕಿ ಹುರಿದು ನಂತರ 6 ಕಪ್‌ ನೀರು ಬೆರೆಸಿ ಒಂದು ಸೀಟಿ ಬರುವಂತೆ ಬೇಯಿಸಿ. ಪ್ಯಾನ್‌ ತಣಿದಾಗ ಅನ್ನವನ್ನು ದೊಡ್ಡ ತಟ್ಟೆಯಲ್ಲಿ ಹರಡಿಕೊಳ್ಳಿ.

ಮತ್ತೆ ಅದೇ ಪ್ಯಾನಿನಲ್ಲಿ ಅರ್ಧ ಸೌಟು ತುಪ್ಪ ಬಿಸಿ ಮಾಡಿ ಉಳಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ, ಅರಿಶಿನ, ಗರಂಮಸಾಲ ಇತ್ಯಾದಿ ಸೇರಿಸಿ ಕೆದಕಬೇಕು. ಆಮೇಲೆ ಮೊದಲು ಬಾಡಿಸಿ ತೆಗೆದ ಈರುಳ್ಳಿ, ಬೆಂದ ಆಲೂ ಬಿಟ್ಟು ಉಳಿದೆಲ್ಲ ತರಕಾರಿ ಹಾಕಿ ಬೇಗ ಬೇಗ ಕೈಯಾಡಿಸಿ. ಒಂದು ಹಾಂಡಿ (ಅಗಲದ ಬಾಯುಳ್ಳ ತಾಮ್ರದ ಪಾತ್ರೆ)ಯ ತಳಭಾಗಕ್ಕೆ ತುಪ್ಪ ಸವರಿ ಅದರ ಮೇಲೆ ಅನ್ನ ಹರಡಿರಿ. ಇದರ ಮೇಲೆ ಬಾಡಿಸಿದ ತರಕಾರಿ ಮಿಶ್ರಣ ಬರಲಿ. ಇದರ ಮೇಲೆ ಮಸೆದ ಆಲೂ, ಬಾಡಿಸಿದ ಈರುಳ್ಳಿ ಬರಲಿ. ಆಮೇಲೆ ನಿಂಬೆಹಣ್ಣು ಹಿಂಡಿಕೊಂಡು, ಕೊ.ಸೊಪ್ಪು, ಪುದೀನಾ ಉದುರಿಸಿ. ಎಲ್ಲವನ್ನೂ ಬೆರೆತುಕೊಳ್ಳುವಂತೆ ಕೆದಕಿ, ಈ ಹಾಂಡಿಗೆ ಸಿಲ್ವರ್‌ ಫಾಯಿಲ್ ‌ಕಟ್ಟಿಬಿಡಿ. ಇದನ್ನು 130 ಡಿಗ್ರಿ ಶಾಖದಲ್ಲಿ ಮೊದಲೇ ಬಿಸಿ ಮಾಡಿದ ಓವನ್ನಿಲ್ಲಿರಿಸಿ 15 ನಿಮಿಷ ಹಾಗೇ ಬಿಡಿ. ನಂತರ ಬಿಸಿಬಿಸಿಯಾಗಿ ಟೊಮೇಟೊ ರಾಯ್ತಾ ಜೊತೆ ಸವಿಯಲು ಕೊಡಿ.

ದಾಲ್ ಹಾಂಡಿ

ಮೂಲ ಸಾಮಗ್ರಿ : ಅರ್ಧರ್ಧ ಕಪ್‌ ತೊಗರಿಬೇಳೆ, ಹೆಸರುಬೇಳೆ, ಕಡಲೆಬೇಳೆ, ಅರ್ಧ ಸಣ್ಣ ಚಮಚ ಅರಿಶಿನ, 1-2 ಹುಳಿ ಟೊಮೇಟೊ, ಒಂದಿಷ್ಟು ತೆಂಗಿನ ತುರಿ.

ಒಗ್ಗರಣೆಗೆ ಸಾಮಗ್ರಿ : ಅರ್ಧ ಸೌಟು ತುಪ್ಪ, 1-1 ಸಣ್ಣ ಚಮಚ ಧನಿಯಾ, ಸಾಸುವೆ, ಸೋಂಪು, ತರಿತರಿಯಾದ ಜೀರಿಗೆ, ಶುಂಠಿ, ಬೆಳ್ಳುಳ್ಳಿ ಪೇಸ್ಟ್. ಗರಂಮಸಾಲ, ಧನಿಯಾಪುಡಿ, ರುಚಿಗೆ ತಕ್ಕಷ್ಟು ಉಪ್ಪು ಖಾರ, 1-2 ಹಸಿ ಹಾಗೂ 2-3 ಒಣ ಮೆಣಸಿನಕಾಯಿ, ತುಸು ಹೆಚ್ಚಿದ ಕೊ.ಸೊಪ್ಪು, ಕರಿಬೇವು.

ವಿಧಾನ : ಮೊದಲು ಹೆಸರುಬೇಳೆಯನ್ನು ತುಪ್ಪದಲ್ಲಿ ಲಘುವಾಗಿ ಹುರಿದು ಅದಕ್ಕೆ ಕಡಲೆಬೇಳೆ, ತೊಗರಿಬೇಳೆ, ಚಿಟಕಿ ಸೋಡ, ತುಸು ಉಪ್ಪು, 2 ಕಪ್‌ ನೀರು ಬೆರೆಸಿ ಕುಕ್ಕರ್‌ನಲ್ಲಿ ಹದವಾಗಿ ಬೇಯಿಸಿ. ಕೆಳಗಿಳಿಸಿ ಆರಿದ ನಂತರ ಮಂತಿನಿಂದ ಲಘುವಾಗಿ ಮಸೆಯಿರಿ.

ಆಮೇಲೆ ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಅದಕ್ಕೆ ಸಾಸುವೆ, ಸೋಂಪು, ಜೀರಿಗೆ, ಧನಿಯಾ ಹಾಕಿ ಚಟಪಟಾಯಿಸಿ. ಆಮೇಲೆ ಶುಂಠಿಬೆಳ್ಳುಳ್ಳಿ ಪೇಸ್ಟ್ ಬೆರೆಸಿ ಕೆದಕಬೇಕು. ನಂತರ ಮಂದ ಉರಿ ಮಾಡಿ ಹೆಚ್ಚಿದ ಹಸಿಮೆಣಸು, ಒಣಮೆಣಸು, ಧನಿಯಾಪುಡಿ, ಗರಂಮಸಾಲ, ತೆಂಗಿನ ತುರಿ ಹಾಕಿ ಕೈಯಾಡಿಸಿ. ಆಮೇಲೆ ಕೊ.ಸೊಪ್ಪು, ಕರಿಬೇವು ಹಾಕಬೇಕು. ಕೊನೆಯಲ್ಲಿ ಖಾರದಪುಡಿ ಸೇರಿಸಿ ಕೆದಕಿದ ಮೇಲೆ ಮಸೆದ ಬೇಳೆ ಮಿಶ್ರಣ ಹಾಕಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ 1-2 ಕುದಿ ಬರಿಸಿ. ಕೆಳಗಿಳಿಸಿದ ಮೇಲೆ ಬಿಸಿ ಬಿಸಿಯಾಗಿ ಅನ್ನ ಅಥವಾ ಚಪಾತಿ ಜೊತೆ ಸವಿಯಲು ಕೊಡಿ.

cookry-4

ದೀವಾನಿ ಹಾಂಡಿ

ಸಾಮಗ್ರಿ : 3 ಕಪ್‌ ಮಿಶ್ರ ತರಕಾರಿ ಹೋಳು, (ಆಲೂ, ಹೂಕೋಸು, ನವಿಲುಕೋಸು, ಕ್ಯಾರೆಟ್‌, ಬೇಬಿ ಕಾರ್ನ್‌, ಬೀನ್ಸ್, ಹಸಿಬಟಾಣಿ, ಕ್ಯಾಪ್ಸಿಕಂ ಇತ್ಯಾದಿ), 2-3 ಹೆಚ್ಚಿದ ಈರುಳ್ಳಿ, 3 ಲವಂಗದೆಲೆ, 4 ಚಮಚ ಕ್ರೀಂ, 2 ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಧನಿಯಾಪುಡಿ, ಹುಳಿಯಾದ ಟೊಮೇಟೊ ಪೇಸ್ಟ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ತುಸು ರೀಫೈಂಡ್‌ಎಣ್ಣೆ, ತುಪ್ಪ, 1 ಕಂತೆ ಪಾಲಕ್‌ ಸೊಪ್ಪು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಹಸಿಮೆಣಸು, ದ್ರಾಕ್ಷಿ, ಗೋಡಂಬಿ, ಬಾದಾಮಿ ಚೂರು (ಒಟ್ಟಾಗಿ ಅರ್ಧ ಕಪ್‌,) ಅರ್ಧ ಕಪ್‌ ಹಾಲು.

ವಿಧಾನ : ಪಾಲಕ್‌ ಸೊಪ್ಪು ಹೆಚ್ಚಿ, ಹಸಿಮೆಣಸಿನೊಂದಿಗೆ ಎಣ್ಣೆಯಲ್ಲಿ ತುಸು ಬಾಡಿಸಿ ಮಿಕ್ಸಿಯಲ್ಲಿ ನುಣ್ಣಗೆ ತಿರುವಿಕೊಳ್ಳಿ. ಎಲ್ಲಾ ತರಕಾರಿ ಹೆಚ್ಚಿ ಬಟಾಣಿ ಜೊತೆ ಲಘುವಾಗಿ ಬೇಯಿಸಿಡಿ. ಬೇಬಿ ಕಾರ್ನ್‌ನ್ನು ಗುಂಡಗೆ ಹೆಚ್ಚಿ, ಮಿಕ್ಸಿಯಲ್ಲಿ ತಿರುವಿಡಿ. ಗೋಡಂಬಿಯನ್ನು ಹಾಲಿನಲ್ಲಿ ಅರೆದಿಡಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ದ್ರಾಕ್ಷಿ ಹಾಕಿ ಹುರಿದು ಬೇರೆಯಾಗಿಡಿ. ಇದಕ್ಕೆ ತುಸು ಎಣ್ಣೆ ಬೆರೆಸಿ, ಲವಂಗದೆಲೆ ಹಾಕಿ ಚಟಪಟಾಯಿಸಿ. ಆಮೇಲೆ ಇದಕ್ಕೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಪೇಸ್ಟ್, ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ನಂತರ ಎಲ್ಲಾ ಡ್ರೈ ಮಸಾಲೆ, ಉಪ್ಪು ಹಾಕಿ ಕೆದಕಬೇಕು. ಆಮೇಲೆ ಕ್ಯಾಪ್ಸಿಕಂ ಹಾಕಿ ಬಾಡಿಸಿ. ನಂತರ ಉಳಿದ ತರಕಾರಿ, ರುಬ್ಬಿದ ಪಾಲಕ್‌, ಬೇಬಿ ಕಾರ್ನ್‌ ಪೇಸ್ಟ್, ಗೋಡಂಬಿ ಪೇಸ್ಟ್, 1 ಕಪ್‌ ನೀರು ಬೆರೆಸಿ ಗ್ರೇವಿ ಗಟ್ಟಿಯಾಗುವಂತೆ ಮಂದ ಉರಿಯಲ್ಲಿ ಕೆದಕುತ್ತಾ ಕುದಿಸಬೇಕು. ಕೆಳಗಿಳಿಸಿದ ಮೇಲೆ ಕ್ರೀಂ ಬೆರೆಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ತಂದೂರಿ ರೊಟ್ಟಿ ಅಥವಾ ನಾನ್‌ ಜೊತೆ ಸವಿಯಲು ಕೊಡಿ.

ದಮ್ ಆಲೂ

ಸಾಮಗ್ರಿ : 15-18 ಬೇಬಿ ಪೊಟೇಟೊ (ಬೇಯಿಸಿ ಸಿಪ್ಪೆ ಸುಲಿದದ್ದು), 2-3 ಈರುಳ್ಳಿ, 1 ಕಪ್‌ ಹುಳಿ-ಸಿಹಿ ಮೊಸರು, 1-2 ಲವಂಗದೆಲೆ, ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು, ಧನಿಯಾ, ತುಸು ಚಕ್ಕೆ, ಲವಂಗ, ಏಲಕ್ಕಿ, ಮೊಗ್ಗು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕಸೂರಿಮೇಥಿ, ಅರ್ಧ ಕಪ್‌ (ತುಪ್ಪದಲ್ಲಿ ಹುರಿದು) ಗೋಡಂಬಿ ಪೌಡರ್‌, 1 ಸೌಟು ರೀಫೈಂಡ್‌ ಎಣ್ಣೆ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಒಂದು ಬಟ್ಟಲಿಗೆ ಧನಿಯಾ, ಜೀರಿಗೆ, ಏಲಕ್ಕಿ, ಚಕ್ಕೆ, ಲವಂಗ, ಮೊಗ್ಗು, ಗೋಡಂಬಿ ಪುಡಿ ಬೆರೆಸಿ ಬೇರೆಯಾಗಿಡಿ. ಆಲೂಗಡ್ಡೆಯನ್ನು ಪೋರ್ಕ್‌ನಿಂದ ಅಲ್ಲಲ್ಲಿ ಚುಚ್ಚಿ ರಂಧ್ರ ಮಾಡಿ. ಬಾಣಿಯಲ್ಲಿ ಎಣ್ಣೆ ಬಿಸಿ ಮಾಡಿ, ಇವನ್ನು ಕರಿದು ತೆಗೆದು ಬೇರೆಯಾಗಿಡಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಅದಕ್ಕೆ ಲವಂಗದೆಲೆ ಹಾಕಿ ಚಟಪಟಾಯಿಸಿ, ಈರುಳ್ಳಿ ಸೇರಿಸಿ ಬಾಡಿಸಿ. ಆಮೇಲೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಬೇಕು. ನಂತರ ಮೊದಲೇ ಸಿದ್ಧಪಡಿಸಿದ್ದ ಡ್ರೈ ಮಸಾಲೆ ಹಾಕಿದ ಮೇಲೆ ಅರಿಶಿನ, ಮೊಸರು, ಉಪ್ಪು ಖಾರ ಎಲ್ಲಾ ಸೇರಿಸಿ ಕೈಯಾಡಿಸಿ. ಆಮೇಲೆ ಕರಿದ ಆಲೂ, ಕಸೂರಿಮೇಥಿ ಸೇರಿಸಿ ಮಂದ ಉರಿಯಲ್ಲಿ 2 ನಿಮಿಷ ಕೆದಕಬೇಕು. ನಂತರ 1 ಕಪ್‌ ನೀರು ಬೆರೆಸಿ ಕುದಿಯಲು ಬಿಡಿ. 5 ನಿಮಿಷ ಮಂದ ಉರಿಯಲ್ಲಿ ಹೀಗೆ ಇರಲಿ. ಕೆಳಗಿಳಿಸಿ ಚಿತ್ರದಲ್ಲಿರುವಂತೆ ಕೊ.ಸೊಪ್ಪು, ಟೊಮೇಟೊ ಹೋಳು, ಕ್ರೀಂನಿಂದ ಅಲಂಕರಿಸಿ ಬಿಸಿಯಾಗಿ ಸವಿಯಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ