ಬಹುಬೇಗ ವೈರಲ್ ಆದ ಕೆಲವು ನಗೆಹನಿಗಳ ಮೇಲೊಮ್ಮೆ ಗಮನಹರಿಸಿ :
ಸೋಮಶೇಖರ್ ಹುಡುಗಿ ನೋಡಲೆಂದು ಹೋದ. ಹುಡುಗಿ ಶ್ಯಾಮಲ ವರ್ಣದವಳು. ಹೀಗಾಗಿ ಅವನಿಗೆ ಇಷ್ಟವಾಗಲಿಲ್ಲ.
ಹುಡುಗಿಯ ತಂದೆ : ಸೋಮಶೇಖರ್, ನನ್ನ ಮಗಳನ್ನು ಮದುವೆಯಾದರೆ ನಿಮಗೆ ವರದಕ್ಷಿಣೆಯಲ್ಲಿ ಒಂದು ಕಾರು ಕೊಡ್ತೀನಿ.
ಸೋಮಶೇಖರ್ : ಕಾರು ಕೊಟ್ಟು ನೀವು ನಿಮ್ಮ ಬೆನ್ನ ಹಿಂದಿನ ಭಾರ ಇಳಿಸಿಕೊಳ್ಳುತ್ತೀರಿ. ಆದರೆ ಆ ನೇರಳೆ ಹಣ್ಣು ನಮ್ಮ ಕುಟುಂಬಕ್ಕೆ ಬಂದುಬಿಟ್ರೆ ನಮ್ಮ ಮುಂದಿನ ಪೀಳಿಗೆ ವಿಮಾನವನ್ನೇ ಕೊಡಬೇಕಾಗುತ್ತದೆ.
ಮ್ಯಾರೇಜ್ ಬ್ಯೂರೊದವರು (ಹುಡುಗಿಗೆ) : ಮೇಡಂ ಈ ಹುಡುಗ 5 ಅಡಿ 11 ಅಂಗುಲ ಇದ್ದಾನೆ. ಎಂ.ಬಿ.ಎ ಮಾಡಿದ್ದಾನೆ. ಸಾಕಷ್ಟು ಗಳಿಸುತ್ತಾನೆ. ಅವನ ಕುಟುಂಬದವರು ಒಳ್ಳೆಯವರು. ಆದರೆ ಹುಡುಗನ ಬಣ್ಣ ಸ್ವಲ್ಪ ಕಪ್ಪು.
ಹುಡುಗಿ : ಸರ್, ಇದೇ ಕ್ವಾಲಿಟಿಯಲ್ಲಿ ಬೇರೆ ಕಲರ್‌ದ್ದು ತೋರಿಸ್ತೀರಾ? ಐ ಮೀನ್ ಫೇರ್ ಕಲರ್.
ನಗೆಹನಿಗಳು ಸಮಾಜದ ಕನ್ನಡಿಯಂತಿರುತ್ತವೆ. ನಮ್ಮ ಸಮಾಜದಲ್ಲಿ ಶ್ಯಾಮಲ ಅಥವಾ ಕಪ್ಪು ವರ್ಣದವರ ಬಗ್ಗೆ ಇದೇ ಪ್ರಕಾರದ ಧೋರಣೆ ಇದೆ. ಯಾವುದೇ ಒಂದು ಮಗು ಹುಟ್ಟಿದಾಗ ಸಂಬಂಧಿಕರು ಹಾಗೂ ಅಕ್ಕಪಕ್ಕದವರು ಆ ಮಗುವನ್ನು ಅದರ ಅಕ್ಕ ಅಥವಾ ಅಣ್ಣನ ಜೊತೆ ಹೋಲಿಸಿ ನೋಡುತ್ತಾರೆ. ವರ್ಣಭೇದದ ಈ ಧೋರಣೆ ಮನೆಯಿಂದ ಶುರುವಾಗಿ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಆರಿಸಿಕೊಳ್ಳುತ್ತಾ ಹೋಗುತ್ತದೆ. ಈ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಲು ನಾವು ಹಿಂದೇಟು ಹಾಕಬಹುದು. ಆದರೆ ಇದನ್ನು ನಿರ್ಲಕ್ಷಿಸಲು ಆಗುವುದಿಲ್ಲ. ಮದುವೆ ಸಮಾರಂಭವೇ ಆಗಿರಬಹುದು ಅಥವಾ ಬೇರೆ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿರಬಹುದು, ಸ್ಟೇಜ್ ಪರ್ಫಾರ್ಮೆನ್ಸ್ ಮಾಡುವುದಾಗಿರಬಹುದು ಅಥವಾ ಯಾವುದಾದರೂ ಈವೆಂಟ್‌ನ್ನು ಲೀಡ್‌ಮಾಡುವುದಾಗಿರಬಹುದು. ಅಲ್ಲೆಲ್ಲ ಫೇರ್ ಸ್ಕಿನ್ ಅಂದರೆ ಶ್ವೇತ ವರ್ಣದವರಿಗೇ ಯಾವಾಗಲೂ ಪ್ರಾಮುಖ್ಯತೆ ಕೊಡಲಾಗುತ್ತದೆ. ಅವರನ್ನೇ ಮುಂಚೂಣಿಯಲ್ಲಿ ನಿಲ್ಲಿಸಲಾಗುತ್ತದೆ. ಅದೇ ಶ್ಯಾಮಲ ವರ್ಣದ ಹುಡುಗಿಯರು ಕಪ್ಪು ದ್ರಾಕ್ಷಿ, ನೀಲಿ ದ್ರಾಕ್ಷಿ ಎಂದೆಲ್ಲ ಶಬ್ದಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ.
25 ವರ್ಷದ ಪತ್ರಕರ್ತೆ ದಿವ್ಯಾ ಹೀಗೆ ಹೇಳುತ್ತಾರೆ, “ನಾನು ಹುಟ್ಟಿದಾಗ ನನ್ನ ಬಣ್ಣ ನೋಡಿ ಮನೆಯವರಿಗೆಲ್ಲ ಸ್ವಲ್ಪ ನಿರಾಶೆಯೇ ಆಗಿತ್ತು. ಆದರೂ ನನ್ನ ಅಮ್ಮ ನನ್ನನ್ನು ಪ್ರೀತಿಯಿಂದ ಸ್ವೀಕರಿಸಿದರು. ಅಪ್ಪನ ಪ್ರೀತಿಯಲ್ಲೂ ಏನೇನೂ ಕೊರತೆಯಿರಲಿಲ್ಲ. 1 ತಿಂಗಳ ಬಳಿಕ ಅಜ್ಜಿ ನನ್ನನ್ನು ನೋಡಲು ಬಂದಿದ್ದರು. ಆಗ ನನ್ನ ಆರೋಗ್ಯ ಸರಿ ಇರಲಿಲ್ಲ. ಅಮ್ಮನ ಪಕ್ಕ ಆಸ್ಪತ್ರೆಯಲ್ಲಿ ಮಲಗಿದ್ದೆ. ಅಜ್ಜಿ ನನ್ನನ್ನು ಕೈಗೆತ್ತಿಕೊಂಡು, ನನ್ನ ಅಕ್ಕನಿಗೆ ತೋರಿಸುತ್ತಾ, “ನೀನು ನೋಡು ಎಷ್ಟೊಂದು ಬೆಳಗಿದ್ದೀಯ, ಈ ಕಪ್ಪು ಹುಡುಗಿ ಎಲ್ಲಿಂದ ಬಂತು?” ಎಂದು ಪ್ರಶ್ನಿಸುತ್ತಾರೆ.
“ಅಜ್ಜಿಯ ಕೈಯಿಂದ ನನ್ನನ್ನು ಕಿತ್ತುಕೊಳ್ಳುತ್ತಾ ಅಮ್ಮ ಜೋರಾಗಿಯೇ ಚೀರುತ್ತ ಹೇಳಿದ್ದರು, “ಇಲ್ಲ ಅಮ್ಮ, ಇವಳು ನನ್ನ ಕರುಳ ಕುಡಿ. ಇವಳು ಹೇಗೇ ಇದ್ದರೂ ನನಗೆ ಪ್ರೀತಿಪಾತ್ರಳು,” ಎಂದು ಹೇಳುತ್ತ ನನ್ನನ್ನು ಅಪ್ಪಿಕೊಂಡಿದ್ದರು.
“ಅಪ್ಪ ಅಮ್ಮ ನನ್ನನ್ನು ಪ್ರೀತಿಯಿಂದ ಸಲಹಿದರು, ಚೆನ್ನಾಗಿ ಓದಿಸಿದರು. ನನಗಾಗಿ ತಮ್ಮ ಅಮೂಲ್ಯ ಸಮಯ ಕೊಟ್ಟರು. ನನ್ನನ್ನು ಸಮರ್ಥಳನ್ನಾಗಿ ಮಾಡಿದರು. ನಾನೀಗ ಸ್ಮಾರ್ಟ್ ಎನಿಸಿಕೊಂಡಿದ್ದೇನೆ. ಅಜ್ಜಿ ಅಂದು ಹಾಗೆ ವರ್ತಿಸಿದ್ದಕ್ಕೆ ಈಗಲೂ ಪಶ್ಚಾತ್ತಾಪಪಡುತ್ತಾರೆ.”
ಭೇದ ಭಾವದ ಹಳೆಯ ಗೆರೆಗಳು
ಭಾರತದಲ್ಲಿ ಪ್ರಾಚೀನ ಕಾಲದಿಂದಲೇ ಜಾತಿ ಪದ್ಧತಿ ಮುಂದುವರಿದುಕೊಂಡು ಬಂದಿದೆ. ಸಾಮಾಜಿಕ ಸ್ಥಿತಿ ಹಾಗೂ ಮಾಡುವ ಉದ್ಯೋಗದ ಆಧಾರದ ಮೇಲೆ ಸಾಮಾಜಿಕ ವರ್ಗೀಕರಣ ಮಾಡಲಾಯಿತು. ಅತ್ಯಂತ ಮೇಲೆ ಬ್ರಾಹ್ಮಣರನ್ನು ಇಡಲಾಯಿತು. ಯುದ್ಧಕ್ಕಾಗಿ ಹೋರಾಡುವ ಕ್ಷತ್ರಿಯರನ್ನು ಎರಡನೇ ಸ್ಥಾನದಲ್ಲಿ, ವ್ಯಾಪಾರ ಮಾಡುವ ವರ್ತಕರನ್ನು 3ನೇ ಹಾಗೂ ಕೆಳಹಂತದ ಕೆಲಸ ಮಾಡುವವರನ್ನು ಅತ್ಯಂತ ಕೊನೆಯ ಸ್ಥಾನದಲ್ಲಿ ಇರಿಸಲಾಯಿತು.
ಗಮನವಿಟ್ಟು ನೋಡಿದಾಗ ಈ ವಿಭಜನೆಯನ್ನು ಕೇವಲ ಉದ್ಯೋಗದ ಅನುಸಾರ ಮಾಡಲಾಗಿರಲಿಲ್ಲ. ವರ್ಣದ ಆಧಾರದ ಮೇಲೆ ಮಾಡಲಾಗಿತ್ತು. ನಿಮ್ಮ ತ್ವಚೆಯ ವರ್ಣ ಎಷ್ಟು ಗಾಢವಾಗಿರುತ್ತೆ? ನಿಮ್ಮ ಸಾಮಾಜಿಕ ಸ್ಥಾನಮಾನ ಕೂಡ ಅಷ್ಟೇ ಕೆಳಕ್ಕೆ ಹೋಗುತ್ತದೆ. ಇದೇ ಭೇದಭಾವದ ಕಾರಣದಿಂದ ಬಿಳಿಯ ಯೂರೋಪಿಯನ್ನರು ದೀರ್ಘಾವಧಿಯತನಕ ಕರಿಯರ ಮೇಲೆ ಆಳ್ವಿಕೆ ನಡೆಸಿದರು. ಅವರ ದೇಶಗಳನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡರು.
ಬೆಳ್ಳಗಿನ ತ್ವಚೆಗೆ ಹೆಚ್ಚು ಮಹತ್ವ
ದಿನಪತ್ರಿಕೆಗಳು ಹಾಗೂ ವೆಬ್‌ಸೈಟ್‌ಗಳ ವೈವಾಹಿಕ ಜಾಹೀರಾತುಗಳ ಮೇಲೆ ಗಮನಹರಿಸಿದಾಗ, ಸಂಗಾತಿಯ ಶೋಧಕ್ಕಾಗಿ ನೀಡುವ ಜಾಹೀರಾತಿನಲ್ಲಿ ನೀಡುವ ಮೊದಲ ಶಬ್ದೀ ಶ್ವೇತವರ್ಣ. ಆ ಬಳಿಕ ಜಾತಿ, ಶಿಕ್ಷಣ, ಧರ್ಮ, ಉದ್ಯೋಗ ಹಾಗೂ ಇತರೆ ದೈಹಿಕ ವಿಶೇಷತೆಗಳ ಕ್ರಮಾಂಕ ಬರುತ್ತದೆ. ಶ್ಯಾಮಲ ವರ್ಣದವರಿಗಿಂತ ಹೆಚ್ಚಾಗಿ ಶ್ವೇತ ವರ್ಣದ ಹುಡುಗಿಯರಿಗೇ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ.
ಅಷ್ಟೇ ಅಲ್ಲ, ಮದುವೆಗೂ ತಿಂಗಳು ಮುಂಚೆಯೇ ಹುಡುಗಿ ಇನ್ನಷ್ಟು ಬೆಳ್ಳಗೆ ಕಾಣಲು ತಯಾರಿ ಆರಂಭಿಸುತ್ತಾಳೆ. ಅದಕ್ಕಾಗಿ ಸಾಕಷ್ಟು ಖರ್ಚು ಮಾಡುತ್ತಾಳೆ. ಫೇರ್‌ನೆಸ್ ಟ್ರೀಟ್‌ಮೆಂಟ್ ವಿವಾಹದ ಪ್ರಮುಖ ಭಾಗ ಎಂದು ಭಾವಿಸಲಾಗುತ್ತದೆ. ಆದರೆ ಕಪ್ಪು ಬಣ್ಣನ್ನು ಬಿಳಿ ಬಣ್ಣವನ್ನಾಗಿ ಪರಿವರ್ತಿಸಲು ಆಗುವುದಿಲ್ಲ. ಹೀಗಾಗಿ ಸಾಧಾರಣ ವರ್ಣದವರನ್ನು ಸಾಕಷ್ಟು ವರದಕ್ಷಿಣೆ ಕೊಟ್ಟು ಮದುವೆ ಮಾಡಲಾಗುತ್ತದೆ.
ಹುಡುಗರ ಯೋಚನೆ
ಹುಡುಗ ಎಷ್ಟೇ ಕಪ್ಪಗಿರಬಹುದು, ದಪ್ಪಗಿರಬಹುದು, ಕುರೂಪಿ ಆಗಿರಬಹುದು. ಆದರೆ ಅವನಿಗೆ ಚೆಂದದ ಹುಡುಗಿಯೇ ಆಗಬೇಕು. ಪ್ರತಿಷ್ಠಿತರ, ಹಣವುಳ್ಳವರ ಮೊದಲ ಆಯ್ಕೆ ಶ್ವೇತವರ್ಣವಾಗಿರುತ್ತದೆ. ಕೆಲವು ಹುಡುಗರು ಗೋಧಿಬಣ್ಣದ ಹುಡುಗಿಯರ ಸ್ನೇಹ ಬೆಳೆಸುತ್ತಾರೆ. ಆದರೆ ಪ್ರೀತಿ, ಮದುವೆ ವಿಷಯ ಬಂದಾಗ ಅವರ ಆಯ್ಕೆ ಬಿಳಿ ಚರ್ಮದ ಹುಡುಗಿಯೇ ಆಗಬೇಕು. ಬೇರೆಯವರಿಗೆ ಅವಳನ್ನು ಪರಿಚಯಿಸಿ ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳುವುದಾಗಿರುತ್ತದೆ. ಅಂದರೆ ಅವಳು ಹುಡುಗಿಯಾಗಿರದೆ ಒಂದು ವಸ್ತುವಿನಂತಾಗಿ ಬಿಡುತ್ತಾಳೆ. ಅವಳ ಬೆಲೆ ಅವಳ ಬಣ್ಣದ ಆಧಾರದ ಮೇಲೆ ನಿರ್ಧಾರವಾಗುತ್ತದೆ.
ಕೀಳರಿಮೆಗೆ ತುತ್ತಾಗುತ್ತಾರೆ
ಶ್ಯಾಮಲ ವರ್ಣದ ಹುಡುಗಿಯರನ್ನು ಬಾಲ್ಯದಿಂದಲೇ ತಿರಸ್ಕಾರದಿಂದ ಕಾಣಲಾಗುತ್ತದೆ. ಶ್ವೇತ ವರ್ಣದ ಹುಡುಗಿಗೆ ದೊರಕುವ ಗಮನ ಅವಳಿಗೆ ದೊರಕುವುದಿಲ್ಲ. ನಮ್ಮ ದೇಶದ ಬಹಳಷ್ಟು ಮನೆಗಳಲ್ಲಿ ಹೆಣ್ಣು ಹುಟ್ಟಿತೆಂದರೆ, ದುಃಖ ಮಡುಗಟ್ಟುತ್ತದೆ. ಆಗಲೇ ತಂದೆತಾಯಿಯರಿಗೆ ಅವರ ಮದುವೆ ಬಗ್ಗೆ ಯೋಚನೆ ಶುರುವಾಗುತ್ತದೆ.
ಶ್ಯಾಮಲ ವರ್ಣದ ಹುಡುಗಿಯರ ಮನಸ್ಸಿನಲ್ಲಿ ಬಾಲ್ಯದಿಂದಲೇ ನಿನ್ನಲ್ಲೇನೊ ಕೊರತೆಯಿದೆ. ನೀನು ಮದುವೆ ರೇಸ್‌ನಲ್ಲಿ ಹಿಂದೆ ಉಳಿಯುತ್ತೀಯಾ ಎಂದು ಹಂಗಿಸಿ ಮಾತನಾಡಲಾಗುತ್ತದೆ. ಫೇರ್‌ನೆಸ್‌ನ ಅಪೇಕ್ಷೆ ಅವಳ ಮನಸ್ಸಿನಲ್ಲಿ ಬಾಲ್ಯದಿಂದಲೇ ಮೂಡಿಸಲಾಗುತ್ತದೆ. ಒಂದೊಳ್ಳೆ ನೌಕರಿ, ಒಳ್ಳೆಯ ಕೌಟುಂಬಿಕ ಜೀವನ, ಸುಂದರ ಮಕ್ಕಳು ಹುಟ್ಟುವುದು, ನಾವು ಹೆಚ್ಚು ಬೆಳ್ಳಗಿದ್ದಾಗ ಮಾತ್ರ ಎಂಬ ಭಾವನೆಯನ್ನು ಹುಟ್ಟುಹಾಕಲಾಗುತ್ತದೆ. ಈ ತೆರನಾದ ಯೋಚನೆಯನ್ನು ಬದಲಿಸುವ ಅಗತ್ಯವಿದೆ.
ಕಾಸ್ಮೆಟಿಕ್ಸ್ ಬ್ರಾಂಡ್ಗಳ ಮೋಹಕ ಜಾಲ
ಪರ್ಫೆಕ್ಟ್ ಸ್ಕಿನ್‌ನಿಂದ ಪರ್ಫೆಕ್ಟ್ ಲೈಫ್ ದೊರೆಯುತ್ತದೆ ಎಂಬುದು ಬಹಳಷ್ಟು ಜನರ ಯೋಚನೆಯಾಗಿರುತ್ತದೆ. ಅದೇ ಯೋಚನೆಯನ್ನು ಮಲ್ಟಿ ನ್ಯಾಷನಲ್ ಬ್ರಾಂಡ್‌ಗಳಿಗೆ ಆಕರ್ಷಕ ಮಾರ್ಕೆಟ್ ದೊರಕಿಸಿಕೊಟ್ಟಿದೆ.
ತ್ವಚೆಯ ಬಣ್ಣವನ್ನು ಸುಧಾರಿಸುವ ಹಲವು ವಿಧಾನಗಳನ್ನು ಹುಡುಕಲಾಯಿತು. ಉದಾ : ಸ್ಕಿನ್ ಬ್ಲೀಚಿಂಗ್, ಕೆಮಿಕಲ್ ಪೀಲ್, ಲೇಸರ್ ಟ್ರೀಟ್‌ಮೆಂಟ್, ಕಾಕ್‌ಟೇಲ್ ಲೈಟ್ನಿಂಗ್ ಪಿಲ್ಸ್, ಇಂಟ್ರಾವೀನಸ್ ಇಂಜೆಕ್ಷನ್ ಮುಂತಾದವು. ಇವೆಲ್ಲ ಆರೋಗ್ಯಕ್ಕೆ ಸಂಬಂಧಪಟ್ಟ ಬೇರೆ ಬೇರೆ ಅಪಾಯಗಳನ್ನು ಹುಟ್ಟು ಹಾಕುತ್ತವೆ. ಬಣ್ಣ ಬೆಳ್ಳಗಾಗಿಸುವುದನ್ನು ಕೇವಲ ಆಧುನಿಕ ಕಾಸ್ಮೆಟಿಕ್ ಇಂಡಸ್ಟ್ರಿಯಷ್ಟೇ ಮಾಡುತ್ತಿಲ್ಲ, ಅದರಲ್ಲೂ ಭಾರತದಲ್ಲಿ ಪ್ರಚಲಿತವಾಗಿರುವ ಆಯುರ್ವೇದಿಕ್ ವಿಧಾನ ಕೂಡ ಹಿಂದೆ ಬಿದ್ದಿಲ್ಲ.
ಆಯುರ್ವೇದದ ಪ್ರಕಾರ, ಗರ್ಭಿಣಿಯರು ತಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಬಣ್ಣವನ್ನು ಬೆಳಗಿಸಬಹುದು. ಕೇಸರಿಯುಕ್ತ ಹಾಲು, ಕಿತ್ತಳೆ, ಸೋಂಪು, ತೆಂಗಿನಕಾಯಿ ಇವುಗಳ ಬಳಕೆಯಿಂದ ಮಗುವಿನ ಬಣ್ಣ ಬೆಳ್ಳಗಾಗುತ್ತದೆ. ಈ ರೀತಿಯಾಗಿ ಹಲವು ಸೆಶನ್ಸ್ ನಡೆಸಲಾಗುತ್ತದೆ. ಅದರಲ್ಲಿ ಕಡಿಮೆ ಎತ್ತರದ, ಶ್ಯಾಮಲ ವರ್ಣದ ದಂಪತಿಗಳಿಗೆ ಬೆಳ್ಳಗಿರುವ, ಎತ್ತರ ಕಾಯದ ಮಗು ಹುಟ್ಟು ಕಿವಿಮಾತುಗಳನ್ನು ಹೇಳಿಕೊಡಲಾಗುತ್ತದೆ.
ಡಾರ್ಕ್ ಈಸ್ ಬ್ಯೂಟಿಫುಲ್
ಈ ಸಂದರ್ಭದಲ್ಲಿ `ಡಾರ್ಕ್ ಈಸ್ ಬ್ಯೂಟಿಫುಲ್’ ಅಭಿಯಾನದ ಬಗ್ಗೆ ಉಲ್ಲೇಖ ಮಾಡುವುದು ಅತ್ಯವಶ್ಯ. `ದಿ ವುಮನ್ ಆಫ್ ಅರ್ಥ್’ ಹೆಸರಿನ ಎನ್‌ಜಿಓದ ಫೌಂಡರ್ ಕವಿತಾ ಇಮ್ಯಾನ್ಯುಯೇಲ್ ರಲ್ಲಿ ಆರಂಭಿಸಿದ ಈ ಅಭಿಯಾನದಲ್ಲಿ, ಬೆಳ್ಳಗಾಗಿಸುವ ಪ್ರತಿಪಾದನೆ ಮಾಡುವ ಬ್ಯೂಟಿ ಪ್ರಾಡಕ್ಟ್ ಗಳ ಜಾಹೀರಾತಿನಲ್ಲಿ ದೊಡ್ಡ ದೊಡ್ಡ ಸ್ಟಾರ್‌ಗಳು ಕಾಣಿಸಿಕೊಳ್ಳುವುದನ್ನು ತಡೆಯುವುದಾಗಿತ್ತು. ಈ ಅಭಿಯಾನ ಜನರಿಗೆ ಒಂದು ವೇದಿಕೆ ಕಲ್ಪಿಸುತ್ತಿದ್ದು, ಅಲ್ಲಿ ಬರುವ ಜನರು ತಮ್ಮೊಂದಿಗಾದ ಭೇದಭಾವವನ್ನು ಶೇರ್ ಮಾಡುತ್ತಾರೆ.
ಹೆಸರಾಂತ ಕಲಾವಿದೆ ನಂದಿತಾ ದಾಸ್ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಾರೆ. ಬಾಲಿವುಡ್‌ನವರು ಶ್ಯಾಮಲ ವರ್ಣದ ಹುಡುಗಿಯರ ಬಗ್ಗೆ ಭೇದಭಾವ ಅನುಸರಿಸುತ್ತಾರೆ ಎಂಬುದನ್ನು ಒತ್ತಿ ಹೇಳುತ್ತಾರೆ. ನೀವು ಕಂದು ವರ್ಣದವರಾಗಿದ್ದರೆ, ನಿಮಗೆ ಕಡಿಮೆ ಓದಿದ ಅಥವಾ ಬಡ ಹುಡುಗಿಯ ಪಾತ್ರ ದೊರೆಯುತ್ತದೆ. ಶ್ವೇತವರ್ಣದ ಹುಡುಗಿಯರಿಗೆ ಸದಾ ಮಾಡರ್ನ್ ಹಾಗೂ ನಗರ ಪ್ರದೇಶದ ಹುಡುಗಿಯರ ರೂಪದಲ್ಲಿ ತೋರಿಸಲಾಗುತ್ತದೆ.
ನೇಪಾಳಿ ಮಾಡೆಲ್ ವರ್ಷಾ ಢಾಪಾರನ್ನು ನ್ಯೂಯಾರ್ಕ್ ಫ್ಯಾಷನ್ ವೀಕ್‌ನಿಂದ ರಿಜೆಕ್ಟ್ ಮಾಡಿ ಕಳುಹಿಸಲು ಕೊಟ್ಟ ಕಾರಣ ಆಕೆ ಡಾರ್ಕ್ ಸ್ಕಿನ್‌ನವಳು. ಸೌಂದರ್ಯ ಕೇವಲ ಬಣ್ಣದಲ್ಲಿದೆ ಎಂಬ ಯೋಚನೆಯನ್ನು ಬದಲಿಸುವ ಅಗತ್ಯವಿದೆ. ಹುಡುಗಿಯರನ್ನು ಅವರ ದೇಹ ಹಾಗೂ ಸೌಂದರ್ಯದ ಆಧಾರದ ಮೇಲೆ ಗುರುತಿಸದೆ ಅವರ ಗುಣ ಹಾಗೂ ಸಾಮರ್ಥ್ಯದ ಆಧಾರದ ಮೇಲೆ ಗುರುತಿಸಬೇಕು.
2013ರಲ್ಲಿ ಪಾಕಿಸ್ತಾನದ ಯುವತಿ ಫಾತಿಮಾ ಮೋದಿ ದೇಶದ ಮೊದಲ ಆ್ಯಂಟಿ ಕೊಲರಿಸಮ್ ಮೂವ್‌ಮೆಂಟ್ `ಡಾರ್ಕ್ ಈಸ್‌ಡಿಲೈಸ್’ನ್ನು ಶುರು ಮಾಡಿದರು. ತಮ್ಮ ಬಾಲ್ಯದಿಂದ ಅನುಭವಿಸಿದ ಕಹಿ ಅನುಭವಗಳನ್ನು ಜನರ ಪೂರ್ವಾಗ್ರಹ ಪೀಡಿತ ಯೋಚನೆಗಳನ್ನು ಹೊರಹಾಕಿದರು. ಶಾಲಾ ದಿನಗಳಲ್ಲಿ ಅವರಿಗೆ ನಾಟಕಗಳಲ್ಲಿ ದೇವತೆಯ ಪಾತ್ರಗಳನ್ನು ಕೊಡುತ್ತಿರಲಿಲ್ಲ. ಏಕೆಂದರೆ ದೇವತೆಯ ಬಣ್ಣ ಶುಭ್ರ ಬೆಳ್ಳಗೆ ಇರಬೇಕಿರುತ್ತಂತೆ. ಆಕೆಯ ಬಣ್ಣ ಶ್ಯಾಮಲವರ್ಣ ಆಗಿದ್ದರಿಂದ ಆಕೆ ಕೀಳರಿಮೆಗೆ ತುತ್ತಾಗಿದ್ದಳು.
ಶ್ಯಾಮಲ ವರ್ಣದವರು ಸುಂದರಾಗಿರುವುದಿಲ್ಲವೇ?
ತ್ವಚೆಯ ಬಣ್ಣ ನಾವು ಸುಂದರ ಆಗಿದ್ದೀವೆಯೇ ಇಲ್ಲವೇ ಎನ್ನುವುದನ್ನು ಹೇಳುವುದಿಲ್ಲ. ತ್ವಚೆಯ ಬಣ್ಣ ಕೇವಲ ಅಲ್ಲಿರುವ ಮೆಲನಿನ್ ಪ್ರಮಾಣವನ್ನು ತೋರಿಸುತ್ತದೆ. ಸೌಂದರ್ಯ ಎನ್ನುವುದು ಬೇರೆ ಕೆಲವು ಸಂಗತಿಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಕಣ್ಣುಗಳ ಅಂದ, ಮುಗುಳ್ನಗೆ, ಆತ್ಮವಿಶ್ವಾಸ, ದೈಹಿಕ ರಚನೆ, ಸಾಮರ್ಥ್ಯ, ಕೇರಿಂಗ್ ನೇಚರ್, ವರ್ತನೆ ಹಾಗೂ ಸ್ಮಾರ್ಟ್‌ನೆಸ್ ಮುಂತಾದವು.
ಒಬ್ಬ ಹುಡುಗಿಯಲ್ಲಿ ಬಣ್ಣದ ಹೊರತಾಗಿ ಬೇರೆ ಸಂಗತಿಗಳು ಇದ್ದರೆ ಅದನ್ನು ಸೌಂದರ್ಯ ಎಂದು ಹೇಳಲಾಗುವುದಿಲ್ಲ? ಅಂದಹಾಗೆ ಜಗತ್ತಿನಲ್ಲಿ ಯಾವೊಬ್ಬ ವ್ಯಕ್ತಿಗಳೂ ಪರಿಪೂರ್ಣ ಆಗಿರುವುದಿಲ್ಲ. ಒಬ್ಬ ವ್ಯಕ್ತಿಯಲ್ಲಿ ಎಲ್ಲ ವಿಶೇಷತೆಗಳೂ ನೋಡಲು ಸಿಗುವುದಿಲ್ಲ. ಕೇವಲ ಬಣ್ಣದ ಆಧಾರದ ಮೇಲೆ ಆ ವ್ಯಕ್ತಿಯನ್ನು ಸುಂದರ ಎಂದು ಹೇಳಲಾದೀತೇ? ಬಣ್ಣ ಹೊರತುಪಡಿಸಿ ಉಳಿದೆಲ್ಲ ವಿಶೇಷತೆಗಳಿದ್ದವರನ್ನು ಕುರೂಪಿ ಎನ್ನಬಹುದೆ?
ಎಂಬಿಎ ವಿದ್ಯಾರ್ಥಿ ರವಿ ಭೂಷಣ್ ಹೀಗೆ ಹೇಳುತ್ತಾರೆ, “ನಾನು ಬೆಳ್ಳನೆಯ, ಹ್ಯಾಂಡ್‌ಸಮ್ ಹುಡುಗ. ನನಗೊಬ್ಬ ಸುಂದರ, ಸ್ವೀಟ್ ಹಾರ್ಟ್, ಕೆರಿಯರ್ ಓರಿಯೆಂಟೆಡ್, ಕಾನ್ಛಿಡೆಂಟ್ ಮತ್ತು ಚಾಕ್ಲೆಟ್ ಕಲರ್‌ನ ಹುಡುಗಿಯ ಜೊತೆ ಪ್ರೀತಿ ಆಗಿದೆ. ಅವಳಿಗಿಂತ ಪರ್ಫೆಕ್ಟ್ ಜೀವನ ಸಂಗಾತಿ ನನಗೆ ಬೇರೆಲ್ಲೂ ಸಿಗುವುದಿಲ್ಲ ಅನಿಸುತ್ತೆ.”
28 ವರ್ಷದ ಪ್ರಿಯಾ ಹೇಳುತ್ತಾರೆ, “ನನ್ನ ತಂಗಿ ಕಂದು ಬಣ್ಣದವಳಾಗಿದ್ದಾಳೆ. ಅವಳ ಎತ್ತರ 5 ಅಡಿ 3 ಅಂಗುಲ. ಅವಳು ಲೇಖಕಿ, ಬ್ಲಾಗರ್ ಮತ್ತು ಗಿಟಾರ್ ವಾದನದಲ್ಲಿ ಮುಂದೆ ಇದ್ದಾಳೆ. ಈವರೆಗೆ ಅವಳು ಅನೇಕ ಪುಸ್ತಕ ಬರೆದಿದ್ದಾಳೆ. ಅನೇಕ ಬ್ಲಾಗ್ ಬರೆದಿದ್ದಾಳೆ. ಅವಳು ಯೂನಿವರ್ಸಿಟಿ ಟಾಪರ್ ಕೂಡ. ಅವಳು ಕಾನ್ಛಿಡೆಂಟ್, ಸ್ಮಾರ್ಟ್, ಇಂಟೆಲಿಜೆಂಟ್ ಅಂತಾ ಎಲ್ಲರಿಂದ ಕರೆಸಿಕೊಳ್ಳುತ್ತಾಳೆ. ನಾನು 5 ಅಡಿ 6 ಅಂಗುಲ ಎತ್ತರ, ಫೇರ್, ವರ್ಕಿಂಗ್ ಗರ್ಲ್. ನನ್ನ ತಂಗಿಯ ಶೇ.10 ವಿಶೇಷತೆ ಕೂಡ ನನ್ನಲ್ಲಿಲ್ಲ.”
ಚರ್ಮ ಬೆಳ್ಳಗಾಗಿಸುವ ಮೂರ್ಖ ಉಪಾಯಗಳನ್ನು ಬಿಟ್ಟು ನಿಮ್ಮಲ್ಲಿರುವ ವಿಶೇಷತೆಗಳಿಗೆ ಪ್ರಾಮುಖ್ಯತೆ ಕೊಡಲು ಆರಂಭಿಸಿ. ಆಗಲೇ ಜೀವನ ಅರ್ಥ ಪಡೆದುಕೊಳ್ಳುತ್ತದೆ.
ಅದೆಷ್ಟೋ ಶ್ಯಾಮಲವರ್ಣದ ಹುಡುಗಿಯರು ಕ್ರೀಡಾಪಟುಗಳಾಗಿದ್ದು, ಅವರು ತಮ್ಮ ಸಾಧನೆಯಿಂದ ಇಡೀ ದೇಶದ ಜನರ ಮನಸ್ಸನ್ನು ಗೆದ್ದಿದ್ದಾರೆ. ಅವರಿಗೆ ದೊಡ್ಡ ದೊಡ್ಡ ಟ್ರೋಫಿ ನಗದು ಬಹುಮಾನ ಕೊಟ್ಟು ಗೌರವಿಸಲಾಗುತ್ತದೆ. ಆದರೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಸಂಗ ಬಂದಾಗ ಜನರು ಬಣ್ಣದ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ.
ಅದೇ ರೀತಿ ಉನ್ನತ ಹುದ್ದೆಗೆ ಆಯ್ಕೆಯಾದ ಶ್ಯಾಮಲ ವರ್ಣದ ಅಧಿಕಾರಿಯ ಜೊತೆಗೆ ಕೆಲಸ ಮಾಡಲು ಜನರು ನಾವು ಮುಂದೆ ತಾವು ಮುಂದೆ ಎನ್ನುತ್ತಾರೆ. ಆದರೆ ಅದೇ ಜನರಿಗೆ ತಮ್ಮ ಮನೆಗೆ ಬರುವ ಹೆಂಡತಿ ಮಾತ್ರ ಕಪ್ಪಗಿರಬಾರದು.
ಹುಡುಗಿಯರು ತ್ವಚೆಯ ಬಣ್ಣದ ಬಗ್ಗೆ ಯಾವುದೇ ಕೀಳರಿಮೆಗೆ ತುತ್ತಾಗದಂತೆ ನೋಡಿಕೊಳ್ಳಬೇಕು. ತಮ್ಮ ವಿಶೇಷತೆ ಹಾಗೂ ನಿಸರ್ಗದತ್ತ ಸೌಂದರ್ಯಕ್ಕೆ ಹೊಳಪು ಕೊಡುವ ಪ್ರಯತ್ನ ಮಾಡಬೇಕೇ ಹೊರತು, ಅದನ್ನು ಬದಲಿಸುವ ಪ್ರಯತ್ನ ಮಾಡಬಾರದು. ಬಣ್ಣ ಯಾವುದಾದರೇನು? ಸಮಸ್ಯೆ ಏನಿದೆ? ಕಪ್ಪು ಬಣ್ಣದ ಪೋಷಾಕುಗಳು ಫ್ಯಾಷನ್ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿರುವಾಗ ತ್ವಚೆಯ ಬಣ್ಣ ಒಂದಿಷ್ಟು ಕಪ್ಪಗಿದ್ದರೇನು ಸಮಸ್ಯೆ?
ಓಪರಾವಿನ್ ಫ್ರೇ, ಮಿಶೆಲ್ ಒಬಾಮರಂತಹ ವ್ಯಕ್ತಿಗಳನ್ನು ನೋಡಿ ಅವರು ಬಣ್ಣದಿಂದಲ್ಲ, ತಮ್ಮ ವ್ಯಕ್ತಿತ್ವದಿಂದ, ಸಾಧನೆಯಿಂದ ಹೆಸರು ಗಳಿಸಿದರು. ಪ್ರಾವಿನ್ ಫ್ರೇ `ಸೆಸಿಲ್ ಡೆಮಿಲೆ’ ಪ್ರಶಸ್ತಿಗೆ ಪಾತ್ರರಾದ ಏಕೈಕ ಕಪ್ಪು ಮಹಿಳೆ.
ಸಮಾಜದಲ್ಲಿ ಕ್ರಮೇಣ ಬದಲಾವಣೆ ಬರುತ್ತಿದೆ. ಸೂಪರ್ ಮಾಡೆಲ್‌ಗಳಾದ ಮಧುಸಪ್ರೆ, ಗ್ರೇಸಿಯ್‌ಡಾಯಂಡ್ರಾ, ಸೋಸೆ, ಬಿಪಾಶಾ ಬಸು, ನಂದಿತಾ ದಾಸ್ ಮುಂತಾದವರು ಶ್ಯಾಮಲ ವರ್ಣೀಯರಾಗಿದ್ದರೂ ಕೂಡ ಅವರು ಅದನ್ನು ಬಚ್ಚಿಡಲು ಪ್ರಯತ್ನ ಮಾಡಲಿಲ್ಲ, ಕೀಳರಿಮೆಗೆ ತುತ್ತಾಗಲಿಲ್ಲ.
ಯೋಚನೆ ಬದಲಾಗಬೇಕು
ಕಪ್ಪು ಅಥವಾ ಕಂದು ಬಣ್ಣ ನಮಗೆ ಹಲವು ರೀತಿಯಲ್ಲಿ ಉಪಯುಕ್ತವಾಗಿದೆ. ಕಪ್ಪು ವರ್ಣದ ತ್ವಚೆ ಹೊಂದಿರುವವರಿಗೆ ಪಿಗ್ಮೆಂಟೇಶನ್ ಸಮಸ್ಯೆ ಆಗುವುದು ಕಡಿಮೆ. ದೇಹದಲ್ಲಿ ಸುಕ್ಕಾಗುವ ಸಮಸ್ಯೆ ಅವರಿಗೆ ಬಹಳ ತಡವಾಗಿ ಉಂಟಾಗುತ್ತದೆ.
2014ರಲ್ಲಿ ಹಾಲಿವುಡ್‌ನಲ್ಲಿ `ಕ್ಯಾಟ್ ವುಮನ್’ ಹೆಸರಿನ ಸಿನಿಮಾ ಬಂದಿತ್ತು. ಅದರಲ್ಲಿ ಹ್ಯಾಲಿ ಬೆರಿ ಮುಖ್ಯ ಪಾತ್ರ ವಹಿಸಿದ್ದರು. ಕಾಸ್ಮೆಟಿಕ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ಹುಡುಗಿಯೊಬ್ಬಳ ಕಥೆಯದು. ಆ ಕಂಪನಿ ಆ್ಯಂಟಿ ಏಜಿಂಗ್ ಕ್ರೀಮ್ ತಯಾರಿಸುತ್ತಿತ್ತು. ಆ ಕ್ರೀಮ್ ನಲ್ಲಿ ಅಪಾಯಕಾರಿ ಅಂಶಗಳಿವೆ ಎನ್ನುವುದು ಆಕೆಗೆ ಗೊತ್ತಾಗಿತ್ತು. ಅದನ್ನು ಅವಳು ವಿರೋಧಿಸುತ್ತಾಳೆ. ಆ ಬಳಿಕ ಅವಳ ಕೊಲೆಯಾಗುತ್ತದೆ. ನಂತರ `ಕ್ಯಾಟ್ ವುಮನ್’ ರೀತಿಯಲ್ಲಿ ಆಕೆ ವಾಪಸ್ ಬಂದು ಇಂತಹ ಅಪಾಯಕಾರಿ ಪ್ರಾಡಕ್ಟ್ ತಯಾರಿಸುವ ಕಂಪನಿಯ ಬಣ್ಣ ಬಯಲು ಮಾಡುತ್ತಾಳೆ.
ನಮ್ಮ ಸಮಾಜದಲ್ಲಿ ವ್ಯಾಪಿಸಿರುವ ತ್ವಚೆಯ ವರ್ಣದ ಆಕರ್ಷಣೆ ಹಾಗೂ ಜನರ ಕಣ್ಣುಗಳನ್ನು ತೆರೆಯಲು ಇಂತಹ ಕ್ಯಾಟ್ ವುಮನ್‌ಳ ಅಗತ್ಯ ಇದೆ. ತನ್ನ ಹರಿತವಾದ ಪಂಜಾಗಳಿಂದ ಜನರ ಸೋಗಿನ ಪದರ ಇಳಿಸಿ, ಎಲ್ಲರ ರಕ್ತದ ಬಣ್ಣ ಒಂದೇ ಆಗಿರುತ್ತದೆ ಎನ್ನುವುದನ್ನು ತೋರಿಸಬೇಕಾಗಿದೆ.
– ಪಂಕಜಾ