ಕೊರೋನಾ ಲಾಕ್‌ ಡೌನ್‌ ಸಮಯದಲ್ಲಿ ತಮ್ಮ ಬೈಕ್‌ ರೈಡಿಂಗ್‌ ಹವ್ಯಾಸವನ್ನು `ಕೋವಿಡ್‌ ಸಹಾಯವಾಣಿ’ಯ ಮೂಲಕ ರೋಗಿಗಳಿಗೆ, ತೊಂದರೆಯಲ್ಲಿರುವ ಬಡವರಿಗೆ, ಸಹಾಯ ಮಾಡುವ `ಕೊರೋನಾ ವಾರಿಯರ್‌’ ಆಗಿ ಬಳಸಿಕೊಳ್ಳಲು ನಿರ್ಧರಿಸಿ ದಶ್ಮಿ ಮೋಹನ್‌ ಇತರರಿಗೆ ಮಾದರಿಯಾಗಿದ್ದಾರೆ.

ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕಿ. ಬೈಕ್‌ ರೈಡಿಂಗ್‌ ಹವ್ಯಾಸ ಕೂಡ ಅವರಿಗಿದೆ. ಈ ಹಿಂದೆ ದೂರದೂರದ ಸ್ಥಳಗಳಿಗೆ ಏಕಾಂಗಿಯಾಗಿ ಸಂಚಾರ ಮಾಡಿ ಬಂದ ಸಾಹಸಿ ಎಂಬ ಪ್ರಖ್ಯಾತಿ ಕೂಡ ಅವರ ಹೆಸರಿನ ಜೊತೆ ಸೇರಿಕೊಂಡಿದೆ.

ಕೊರೋನಾ ಲಾಕ್‌ ಡೌನ್‌ ಸಮಯದಲ್ಲಿ ತಮ್ಮ ಬೈಕ್‌ ರೈಡಿಂಗ್‌ ಹವ್ಯಾಸವನ್ನು `ಕೋವಿಡ್‌ ಸಹಾಯವಾಣಿ’ಯ ಮೂಲಕ ರೋಗಿಗಳಿಗೆ, ತೊಂದರೆಯಲ್ಲಿರುವ ಬಡವರಿಗೆ, ಸಹಾಯ ಮಾಡುವ `ಕೊರೋನಾ ವಾರಿಯರ್‌’ ಆಗಿ ಬಳಸಿಕೊಳ್ಳಲು ನಿರ್ಧರಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಆ ಶಿಕ್ಷಕಿ ಕಮ್ ಬೈಕ್‌ ರೈಡರ್‌ ಹೆಸರು ದಶ್ಮಿ ಮೋಹನ್‌. ಅವರು ಬೆಂಗಳೂರಿನ ಬಂಟರ ಸಂಘದ ಆರ್‌.ಎನ್‌. ಶೆಟ್ಟಿ ವಿದ್ಯಾನಿಕೇತನ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೊರೋನಾ ವಾರಿಯರ್ಆದದ್ದು ಹೇಗೆ?

ಲಾಕ್‌ ಡೌನ್‌ ಆದ ಮೊದಲ ದಿನದಂದು ಅವರು ವಾಸಿಸುತ್ತಿದ್ದ ಪ್ರದೇಶದಲ್ಲಿ ರೋಗಿಗಳು, ಬಡವರು, ಔಷಧಿಗಳಿಗೆ, ಅವಶ್ಯಕ ವಸ್ತುಗಳಿಗೆ ಪರದಾಡುತ್ತಿರುವುದನ್ನು ಕಂಡಿದ್ದರು. ಆಗಲೇ ಅವರು, ಬೈಕ್‌ ರೈಡರ್‌ ಆಗಿರುವ ನಾನು ಇವರಿಗಾಗಿ ಏನಾದರೂ ಮಾಡಲೇಬೇಕು ಎಂದು ನಿರ್ಧರಿಸಿ ಕೋವಿಡ್‌ ಸಹಾಯವಾಣಿಯ ಜೊತೆ ತಮ್ಮನ್ನು ಗುರುತಿಸಿಕೊಂಡರು.

ಮೊದಲ ಬೈಕ್‌ ರೈಡ್‌ ತುಮಕೂರು ಜಿಲ್ಲೆಯ ತಿಪಟೂರು ಸಮೀಪದ ಹಳ್ಳಿಯ ಪುಟ್ಟಯ್ಯ ಎಂಬುವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ದಿನ ಮಾತ್ರೆ ಸೇವಿಸುತ್ತಾರೆ. ಅವರಿಗೆ ಬೇಕಾದ ಮಾತ್ರೆಗಳು ತಿಪಟೂರು ಹಾಗೂ ತುಮಕೂರಿನಲ್ಲಿ ಸಿಗದೇ ಇದ್ದಾಗ ಆತಂಕಗೊಂಡಿದ್ದರು. ಅವರ ಮಕ್ಕಳು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಮಲ್ಲೇಶ್ವರಂನಲ್ಲಿ ಅವರು ಮಾತ್ರೆಗಳ ಲಭ್ಯತೆಯನ್ನು ಕಂಡುಕೊಂಡರು. ಆದರೆ ತಿಪಟೂರಿಗೆ ತಲುಪಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದರು. ಆಗ ಅವರ ನೆರವಿಗೆ ಬಂದದ್ದು `ಕೋವಿಡ್‌ ಸಹಾಯವಾಣಿ.’ ಅದರ ಮುಖಾಂತರ ದಶ್ಮಿ ಮೋಹನ್‌ ತಾನು ತಿಪಟೂರಿಗೆ ಹೋಗಿ ಮಾತ್ರೆಗಳನ್ನು ತಲುಪಿಸಿ ಬರುವುದಾಗಿ ಹೇಳಿದರು.

ತಕ್ಷಣವೇ ದಶ್ಮಿ ತಮ್ಮ ರಾಯಲ್ ಎನ್‌ಫೀಲ್ಡ್ ಬೈಕ್‌ ಹತ್ತಿ ತಿಪಟೂರಿನತ್ತ ಪ್ರಯಾಣ ಬೆಳೆಸಿಯೇ ಬಿಟ್ಟರು. ಕೇವಲ 2 ಗಂಟೆ 18 ನಿಮಿಷಗಳಲ್ಲಿ ಅವರು ತಿಪಟೂರಿನ ಹತ್ತಿರದ ಹಳ್ಳಿಗೆ ತಲುಪಿ ಪುಟ್ಟಯ್ಯನವರನ್ನು ಭೇಟಿ ಮಾಡಿ ಮಾತ್ರೆ ತಲುಪಿಸಿ ಧನ್ಯತಾಭಾವ ಪಡೆದುಕೊಂಡರು.

ಎರಡೂ ಕಡೆಯ ಒಟ್ಟು ಪ್ರಯಾಣ 220 ಕಿ.ಮೀ. ಇದು ಅವರ ಲಾಕ್‌ಡೌನ್‌ಸಮರದ ಮೊದಲ ಬೈಕ್‌ ರೈಡ್‌ ಆಗಿತ್ತು.

ಆ ಬಳಿಕ ಅವರ ಬೈಕ್‌ ಪಯಣ ಹೀಗೆಯೇ ಮುಂದುವರಿಯಿತು. ಬೆಂಗಳೂರಿನಿಂದ 75 ಕಿ.ಮೀ. ದೂರದ ಹೊಸೂರು ಸಮೀಪದ ಬಾಗಲೂರಿನ ಒಂದು ಅಪಾರ್ಟ್‌ಮೆಂಟ್‌ಗೆ ಹೋಗಿ ಅಲ್ಲಿನ ಒಬ್ಬ ರೋಗಿಗೆ ತುರ್ತಾಗಿ ಔಷಧಿ ತಲುಪಿಸಿದರು. ಅಲ್ಲಿ ಒಂದು ಘಟನೆ ಅವರ ಗಮನ ಸೆಳೆಯಿತು. ಅಲ್ಲಿನ ಸೆಕ್ಯೂರಿಟಿ ಸಿಬ್ಬಂದಿ ನೆಲ ಒರೆಸಲು ಬಳಸುವ ದ್ರಾವಣವನ್ನೇ ಸ್ಯಾನಿಟೈಸರ್‌ ಆಗಿ ಬಳಸುತ್ತಿದ್ದರು. ಅವರಿಗೆ ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳುವ ಮಾಹಿತಿ ನೀಡಿದರಲ್ಲದೆ, ಸ್ಯಾನಿಟೈಸರ್‌ ಸಹ ಕೊಟ್ಟು ಬಂದರು.

ಅತ್ತಿಬೆಲೆಯ ಕ್ಯಾನ್ಸರ್‌ ರೋಗಿಯೊಬ್ಬರಿಗೆ ಬೇಕಾದ ಮಾತ್ರೆಗಳು ಸಿಕ್ಕಿರಲಿಲ್ಲ. ಅವರು `ಕೋವಿಡ್‌ ಸಹಾಯವಾಣಿ’ಗೆ ಕರೆ ಮಾಡಿದರು. ದಶ್ಮಿ ಮೋಹನ್‌, ಅವರ ಕರೆಗೆ ಸ್ಪಂದಿಸಿ ಬೈಕ್‌ ಏರಿ ಮಾತ್ರೆಗಳನ್ನು ತಲುಪಿಸಿ ಅವರ ಜೀವರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅದೇ ರೀತಿ ದಾವಣಗೆರೆಗೂ ಹೋಗುವ ಅವಕಾಶ ಸಿಕ್ಕಾಗ ಅಲ್ಲಿಗೂ ಹೋಗಿ ಕ್ಯಾನ್ಸರ್‌ ರೋಗಿಗೆ ಬೇಕಾದ ಔಷಧಿಗಳನ್ನು ತಲುಪಿಸಿ ಬಂದು ತಾವೊಬ್ಬ ಅಪ್ರತಿಮ ಸಾಹಸಿ ಎಂದು ತೋರಿಸಿಕೊಂಡಿದ್ದಾರೆ.

ಬೈಕ್‌ ಮೇಲೆ ಹೋಗುವ ಕೆಲಸ ಇಲ್ಲದೇ ಇದ್ದಾಗ ಅವರು ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರದ ಮೊಟ್ಟಣ ಸಿದ್ಧಪಡಿಸುವ ಕಾಯಕದಲ್ಲಿ ನಿರತರಾಗಿರುತ್ತಾರೆ.

“ಬೈಕ್‌ ರೈಡರ್‌ ಆಗಿದ್ದ ನನಗೆ ನನ್ನಷ್ಟಕ್ಕೆ ಖುಷಿಪಟ್ಟುಕೊಳ್ಳುವ ಬದಲು, ಸಮಾಜಕ್ಕೆ ಏನಾದರೂ ಅಳಿಲು ಸೇವೆ ಸಲ್ಲಿಸಬೇಕೆಂಬ ಬಯಕೆ ಇತ್ತು. ಆ ಅವಕಾಶ ಈ ರೀತಿಯಲ್ಲಿ ಒದಗಿ ಬಂದದ್ದು ಖುಷಿ ತಂದಿದೆ,” ಎಂದು ದಶ್ಮಿ ಹೇಳುತ್ತಾರೆ.

“ನನ್ನ ಬೈಕ್‌ ರೈಡಿಂಗ್‌ ಹವ್ಯಾಸ ಕೊರೋನಾ ಮಾರಿಯ ವಿರುದ್ಧ ಹೋರಾಡುವ ಬ್ರಹ್ಮಾಸ್ತ್ರವಾಗಿದೆ. ಇದು ಅಗತ್ಯವಿರುವ ಕೊರೋನಾ ಮಹಾಮಾರಿ ಪೀಡಿತರಿಗೆ ನೆರವಾಗಲು ಬಹಳ ಸಹಾಯಕವಾಗಿದೆ. ಇದು ನನಗೆ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿದೆ. ನನ್ನಿಂದಾಗಿ ಇಂಥ ಎಷ್ಟೋ ರೋಗಿಗಳಿಗೆ ಸಹಾಯವಾಗುತ್ತಿದೆ ಎಂಬ ಅಂಶ ಬಹಳ ತೃಪ್ತಿ ತಂದುಕೊಟ್ಟಿದೆ. ನಾವು ವಿದ್ಯಾವಂತರಾಗಿ ಸಮಾಜಕ್ಕೆ ಈ ರೀತಿ ನೆರವಾಗಲು ಸಾಧ್ಯವಾದಾಗ ಮಾತ್ರ ನಮ್ಮ ಜ್ಞಾನಾರ್ಜನೆ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯ. ತಮ್ಮ ಕೈಯಲ್ಲಿ ಎಷ್ಟು ಸಾಧ್ಯವಿದೆಯೋ ಅಷ್ಟು ಉಪಕಾರ ಮಾಡಬೇಕಾದುದೇ ನಿಜವಾದ ಮಾನವ ಧರ್ಮ!” ಎನ್ನುತ್ತಾರೆ ದಶ್ಮಿ.

ಅಶೋಕ ಚಿಕ್ಕಪರಪ್ಪಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ